CCL 2026 Champions ; ಬೆಂಗಾಲ್ ವಿರುದ್ಧ ಹೇಗಿತ್ತು ರಣತಂತ್ರ? ಚೆನ್ನೈ ವಿರುದ್ಧ ಗೆದ್ದಿದ್ಹೇಗೆ ? ಸುನಿಲ್ ರಾವ್ ಮಾತು

ಉಂಡು, ಆಡಿ, ಒದ್ದು ಮಲಗುವ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ಮಿಂಚಿದವರು ಸುನಿಲ್ ರಾವ್. ಶಂಕರ್ ನಾಗ್ ಅವರ ''ಮಾಲ್ಗುಡಿ ಡೇಸ್''.. ''ಏಳು ಸುತ್ತಿನ ಕೋಟೆ''.. ''ಕೆಂಡದ ಮಳೆ''.. ''ರೆಡಿಮೇಡ್ ಗಂಡ''.. ''ಶಾಂತಿ ಕ್ರಾಂತಿ''.. ''ಮೈಸೂರ್ ಜಾಣ'' ಮುಂತಾದ ಚಿತ್ರಗಳ ಮೂಲಕ ಕರುನಾಡಿನ ಹೃದಯವನ್ನು ಎಳವೆಯಲ್ಲಿಯೇ ಗೆದ್ದ ಸುನಿಲ್ ರಾವ್ ತಮ್ಮ ಅಸಾಧಾರಣ ಪ್ರತಿಭೆ ಮತ್ತು ಚುರುಕುತನದಿಂದಲೇ ಚಿತ್ರರಂಗದಲ್ಲಿ ಕೂಡ ಮನೆ ಮಾತಾಗಿದ್ದರು.

ಆ ನಂತರ ಚಿತ್ರ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿ ಬಂದ ಸುನಿಲ್ ರಾವ್ ಎಕ್ಸ್‌ಕ್ಯೂಸ್ ಮೀ ಚಿತ್ರದ ಮೂಲಕ ನಾಯಕನಾಗಿ ಹೊರ ಹೊಮ್ಮಿದರು. ಮೊದಲ ಚಿತ್ರದಲ್ಲಿಯೇ ಪ್ರಚಂಡ ಯಶಸ್ಸನ್ನು ಕೂಡ ಗಳಿಸಿದರು. ಇನ್ನೂ ಸುನಿಲ್ ರಾವ್ ಕೇವಲ ಅತ್ಯುತ್ತಮ ಕಲಾವಿದ ಮಾತ್ರ ಅಲ್ಲ. ಅತ್ಯುತ್ತಮ ಕ್ರಿಕಟ್ ಪ್ಲೇಯರ್ ಕೂಡ ಹೌದು.

exclusive-sunil-rao-on-karnataka-bulldozers-ccl-2026-title-glory-and-the-chennai-thriller

ಪ್ರತಿ ವರ್ಷ ಸಿಸಿಎಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪರವಾಗಿ ಕಣಕ್ಕಿಳಿಯುವ ಸುನಿಲ್ ಪಂದ್ಯಕ್ಕೆ ತಮ್ಮ ಅನುಮನ ಅರ್ಪಿಸುತ್ತಾರೆ. ತಮ್ಮ ಕೈಚಳಕದ ಮೂಲಕ ಎದುರಾಳಿಗಳ ವಿಕೆಟ್ ಕೂಡ ಕಿತ್ತೆಸೆಯುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಈ ವರ್ಷದ ಸಿಸಿಎಲ್‌ನಲ್ಲಿ 5 ಪಂದ್ಯಗಳಲ್ಲಿ 6 ವಿಕೆಟ್ ಕಬಳಿಸಿದ್ದಾರೆ. ತಂಡದ ಗೆಲುವಿನಲ್ಲಿ ಎಂದಿನಂತೆ ಈ ಬಾರಿ ಕೂಡ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ದಾರೆ.

ಹಾಗಿದ್ದರೆ ಸುನಿಲ್ ಕಂಡಂತೆ ಹೇಗಿತ್ತು ಈ ಬಾರಿಯ ಸಿಸಿಎಲ್..? ಚೆನ್ನೈ ವಿರುದ್ಧ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಸೋಲುವ ಭಯ ತಂಡಕ್ಕಿತ್ತಾ..? ಇಡೀ ಪಂದ್ಯಾವಳಿ ಉದ್ದಕ್ಕೂ ಸುದೀಪ್ ತಮ್ಮ ಹುಡುಗರನ್ನು ಹುರಿದುಂಬಿಸಿದ್ಹೇಗೆ..? ಬೆಂಗಾಲ್ ವಿರುದ್ಧ ರಣತಂತ್ರ ಹೇಗಿತ್ತು..? ಫೈನಲ್ ಪಂದ್ಯಕ್ಕೂ ಮುನ್ನ ಸುನಿಲ್ ರಾವ್ ಅವರಿಗೆ ಸುದೀಪ್‌ ಹೇಳಿದ್ದೇನು ..? ಎಂದು ತಿಳಿಯಲು ಮುಂದೆ ಓದಿ.

ಈ ಬಾರಿಯ ಸಿಸಿಎಲ್ ಪ್ರಯಾಣ ಹೇಗಿತ್ತು..?

''ಈ ಹಿಂದಿನ ಎಲ್ಲ ಸೀಸನ್‌ಗಳಿಗೆ ಹೋಲಿಸಿದರೆ, ಕಡಿಮೆ ತಯಾರಿ ಮಾಡಿಕೊಂಡು ಕಣಕ್ಕಿಳಿದಿದ್ದು ಇದೇ ಮೊದಲ ಬಾರಿ. ಎಲ್ಲರಿಗೂ ಕೆಲಸದ ಒತ್ತಡ ಇತ್ತು. ಡೇಟ್ಸ್‌ಗಳ ಸಮಸ್ಯೆ ಇತ್ತು. ಸಾಮಾನ್ಯವಾಗಿ ಪ್ರತಿ ಬಾರಿ ಒಂದು ತಿಂಗಳು ನಮ್ಮ ಪ್ರಾಕ್ಟೀಸ್ ಸೆಷನ್ ಇರುತ್ತಿತ್ತು. ಕೊನೆ ಪಕ್ಷ 15-20 ದಿನ ಆದರೂ ನಾವು ಪಂದ್ಯಾವಳಿ ಆರಂಭಕ್ಕೂ ಮುನ್ನ ಗ್ರೌಂಡ್‌ನಲ್ಲಿ ಇರ್ತಿದ್ವಿ, ಆದರೆ ಈ ಬಾರಿ 9-10 ಮಾತ್ರ ಪ್ರಾಕ್ಟಿಸ್ ಮಾಡಿದೀವಿ, ಎರಡು ಮ್ಯಾಚ್‌ಗಳನ್ನು ಆಡಿದ್ವಿ ಅಷ್ಟೇ. ಹೀಗಾಗಿ ಕಡಿಮೆ ತಯಾರಿ ಮಾಡಿಕೊಂಡು ಕಪ್ ಗೆದ್ದಿದ್ದು ತುಂಬಾನೇ ವಿಶೇಷ ಅನ್ಸುತ್ತೆ. ಇನ್ನೂ ಈ ಬಾರಿ ಪ್ರದೀಪ್ ವಾಪಸ್ ಬಂದಿದ್ದನ್ನೂ ಕೂಡ ಇಲ್ಲಿ ಪರಿಗಣಿಸಿದರೆ ಈ ಬಾರಿ ನಮ್ಮ ತಂಡ ತುಂಬಾನೇ ಬಲಶಾಲಿಯಾಗಿತ್ತು. ಸತತವಾಗಿ ನಾವು ಚೆನ್ನಾಗಿ ಆಡಿಕೊಂಡು ಬಂದ್ವಿ, ಆದರೆ ಈ ವರ್ಷ ಬಲಿಷ್ಠವಾದ ತಂಡ ನಮ್ಮದು ಎನ್ನುವುದು ನನ್ನ ಅಭಿಪ್ರಾಯ'' ಎಂದಿದ್ದಾರೆ ಸುನಿಲ್ ರಾವ್.

ಸೆಮಿಫೈನಲ್‌ನ ರೋಚಕ ಪಂದ್ಯದ ಬಗ್ಗೆ ?

''ಚೆನ್ನೈ ಮೇಲಿನ ಸೆಮಿಫೈನಲ್ ಪಂದ್ಯ ಮರೆಯಲು ಸಾಧ್ಯ ಇಲ್ಲ. ಅಷ್ಟೇ ಅಲ್ಲ ಈ ಬಾರಿಯ ಪಂಜಾಬ್ ಮೇಲಿನ ನಮ್ಮ ಮೊಲದ ಪಂದ್ಯ ಕೂಡ ತೀವೃ ಕುತೂಹಲದಿಂದ ಕೂಡಿತ್ತು. ಯಾಕೆಂದರೆ 32 ಕ್ಕೆ 4 ವಿಕೆಟ್ ನಾವು ಕಳೆದುಕೊಂಡಿದ್ವಿ, 45 ರನ್‌ಗಳಿಗೆ 5 ವಿಕೆಟ್ ಉರುಳಿದ್ದವು. ಆ ಸಮಯದಲ್ಲಿ ಕರ್ಣ ತುಂಬಾನೇ ಚೆನ್ನಾಗಿ ಆಡಿದಾ, 170ರವರೆಗೆ ಸ್ಕೋರ್ ತಗೆದುಕೊಂಡ ಹೋದ, ಆ ನಂತರ ನಾವು ಆ ಸ್ಕೋರ್ ಡಿಫೆಂಡ್ ಮಾಡಿಕೊಂಡ್ವಿ, 140 ರನ್‌ ಒಳಗೆಯೇ ಕಟ್ಟಿ ಹಾಕಿದ್ವಿ. ತುಂಬಾನೇ ಮಹತ್ವದ ಪಂದ್ಯ ಆಗಿತ್ತು ಅದು. ಇನ್ನು ಸೆಮಿಫೈನಲ್ ಬಗ್ಗೆ ಮಾತನಾಡುವುದಾದರೆ ಬಹುತೇಕ ಸೋಲಿನ ಅಂಚಿನಲ್ಲಿ ನಾವೆಲ್ಲಾ ಇದ್ವಿ, ಆ ಸಮಯದಲ್ಲಿ ಜೆಕೆ ಎಲ್ಲಿಯೂ ತಾಳ್ಮೆ ಕಳೆದುಕೊಳ್ಳದೇ ಅದ್ಭುತವಾಗಿ ಆಡಿದರು. ಅವರ ಅನುಭವ, ಅವರ ಕೌಶಲ್ಯ, ಎಲ್ಲವನ್ನೂ ಆ ಪಂದ್ಯದಲ್ಲಿ ತೋರಿಸಿದರು'' ಎಂದು ಎರಡು ಪಂದ್ಯಗಳ ಅನುಭವವನ್ನು ''ಫಿಲ್ಮಿಬೀಟ್ ಕನ್ನಡ'' ಜೊತೆ ಹಂಚಿಕೊಂಡಿದ್ದಾರೆ.

exclusive-sunil-rao-on-karnataka-bulldozers-ccl-2026-title-glory-and-the-chennai-thriller

ಸುದೀಪ್ ಭರವಸೆಯ ಮಂತ್ರ

''ನಿಜಾ ಹೇಳಬೇಕು ಅಂದರೆ ನಾನು ಈ ಬಾರಿ ಸಂಪೂರ್ಣವಾಗಿ ಆಡಲು ಫಿಟ್ ಇರಲಿಲ್ಲ, ಕೆಲವೊಂದಿಷ್ಟು ಗಾಯಗಳಾಗಿದ್ದವು. ಆದರೂ ಕೂಡ ಆಡಲೇಬೇಕೆನ್ನುವ ಕಿಚ್ಚಿತ್ತು. ಹೀಗಾಗಿ ಆಡಿದೆ. ಆದರೆ, ಸೆಮಿಫೈನಲ್‌ನಲ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ನಮ್ಮ ಬೌಲಿಂಗ್ ಆದ ತಕ್ಷಣ ನನಗೆ ವಿಪರೀತ ಕಷ್ಟವಾಗಲು ಶುರುವಾಗಿತ್ತು. ಹೀಗಾಗಿ ನಾನು ಕೆಳಗಡೆ ಕುಳಿತುಕೊಂಡಿದ್ದೆ, ತಂಡವನ್ನು ಹುರಿದುಂಬಿಸಲು ಕೂಡ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಆದರೆ ತಂಡದ ಆತ್ಮಸೈರ್ಯ ಹೆಚ್ಚಿಸಲು ಸುದೀಪ್ ಅವರು ಯಾವಾಗಲೂ ಮುಂದೆ ಇರುತ್ತಾರೆ. ಪರಿಸ್ಥಿತಿ ಎಂತಹದ್ದೇ ಇರಲಿ ಅವರು ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಹೋರಾಡುವ ಮನೋಭಾವ ಅವರದ್ದು. ಅವತ್ತು ಕೂಡ ಹಾಗೇ ಆಯ್ತು. ಸೋಲಿನ ಅಂಚಿನಲ್ಲಿದ್ದಾಗ ಕೂಡ ಅವರು ನಂಬಿಕೆ ಕಳೆದುಕೊಂಡಿರಲಿಲ್ಲ. ಭರವಸೆ ಕಳೆದುಕೊಳ್ಳಬೇಡಿ ಎಂದು ಎಲ್ಲರನ್ನೂ ಅಲ್ಲಿ ಹುರಿದುಂಬಿಸುತ್ತಿದ್ದರು'' ಎಂದು ಕಿಚ್ಚನ ನಾಯಕತ್ವವನ್ನು ಕೊಂಡಾಡಿದ್ದಾರೆ ಸುನಿಲ್ ರಾವ್.

ಗಾಯದ ನಡುವೆಯೂ 6 ವಿಕೆಟ್, ನಿಮ್ಮ ಪ್ರದರ್ಶನದ ಬಗ್ಗೆ ತೃಪ್ತಿ ಇದೆಯಾ ?

''ನನಗೆ ವ್ಯೆಯಕ್ತಿಕವಾಗಿ ಈ ಬಾರಿ ನನ್ನ ಪರ್ಫಾಮೆನ್ಸ್ ನನಗೆ ಅಷ್ಟೊಂದು ತೃಪ್ತಿ ನೀಡಿಲ್ಲ. ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ ಈ ಬಾರಿ ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ನಾನು ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ತಂಡದ ಮತ್ತು ನನ್ನ ನಿರೀಕ್ಷೆಯ ಮಟ್ಟವನ್ನು ತಲುಪಲು ಸಾಧ್ಯವಾಗಲಿಲ್ಲ. ಮೂರು ಮ್ಯಾಚ್‌ನಲ್ಲಿ ಪ್ರದರ್ಶನ ಚೆನ್ನಾಗಿತ್ತು. ಫೈನಲ್‌ ಪಂದ್ಯದಲ್ಲಿ ಬೌಲಿಂಗ್ ಚೆನ್ನಾಗಿ ಮಾಡಿದೆ, ಆದರೆ ಸೆಮಿಫೈನಲ್‌ನಲ್ಲಿ ಚೆನ್ನೈ ವಿರುದ್ದ ತುಂಬಾ ರನ್‌ಗಳನ್ನು ಲೀಕ್ ಮಾಡಿದೆ'' ಎಂದು ಸುನಿಲ್ ರಾವ್ ಹೇಳಿದ್ದಾರೆ. ''5 ಪಂದ್ಯಗಳಲ್ಲಿ 3 ಪಂದ್ಯ ಚೆನ್ನಾಗಿ ಆಯ್ತು, ಎರಡು ಪಂದ್ಯದಲ್ಲಿ ಎಡವಿದೆ, ಆದರೂ ಕೂಡ ನನಗೆ ವ್ಯೆಯಕ್ತಿಕವಾಗಿ ಸಮಾಧಾನ ಇಲ್ಲ'' ಎಂದಿದ್ದಾರೆ.

ಆಟ ಅಂದರೆ ಅದೇ ಅಲ್ವಾ..?

ಗೇಮ್ ಅಂದರೇನೇ ಹಾಗೇ. ಒಂದೊಂದು ಸಲ ತುಂಬಾ ಚೆನ್ನಾಗಿ ಬಾಲ್ ಬೀಳುತ್ತೆ, ಇನ್ನೂ ಒಮ್ಮೊಮ್ಮೆ ಈ ವಿಕ್ರಾಂತ್ ರೀತಿ ಬ್ಯಾಟ್ಸಮನ್‌ಗಳು ಸಿಕ್ಕಿ ಬಿಡ್ತಾರೆ. ಅಂತಹವರು ಅವರದ್ದೇ ರಿಧಂನಲ್ಲಿದ್ದಾಗ, ಫಾರ್ಮನಲ್ಲಿದ್ದಾಗ, ಯಾರಾದರೂ ಅವರ ಕೈಗೆ ಸಿಕ್ಕರೆ ಅವತ್ತು ಏನಾದರೂ ಕಾದಿರುತ್ತೆ ಅಂತನೇ ಅರ್ಥ. ದುರಾದೃಷ್ಟ ಸೆಮಿಫೈನಲ್‌ನಲ್ಲಿ ನನಗೆ ಕಾದಿತ್ತು. ಆ ಪಂದ್ಯದಲ್ಲಿ ನಾನು ನಿಜಕ್ಕೂ ಚೆನ್ನಾಗಿ ಬೌಲಿಂಗ್ ಮಾಡಲಿಲ್ಲ. ಇನ್ನು ತೆಲುಗು ವಿರುದ್ಧದ ಪಂದ್ಯದಲ್ಲಿ ಕೂಡ ನಾನು ಚೆನ್ನಾಗಿ ಬೌಲಿಂಗ್ ಮಾಡಲಿಲ್ಲ. ಆದರೆ, ಪಂಜಾಬ್, ಭೋಜ್‌ಪುರಿ ಮತ್ತು ಬೆಂಗಾಲ್ ವಿರುದ್ಧ ಒಳ್ಳೆಯ ಲಯ ಸಿಕ್ಕಿತ್ತು. ಇನ್ನೂ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಪ್ರದೀಪ್ ಬೇರೆ ಇರಲಿಲ್ಲ. ಹೀಗಾಗಿ ನಮ್ಮ ಮೇಲೆ ಒತ್ತಡ ಹೆಚ್ಚಿತ್ತು. ಅದೃಷ್ಟವಶಾತ್ ಬೆಂಗಾಲ್ ವಿರುದ್ದ ಪಂದ್ಯದಲ್ಲಿ ನಾನು ಮತ್ತು ಜೆಕೆ ಅವರಿಗೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾದೆವು. ಅದೊಂದು ತೃಪ್ತಿ ಇದೆ '' ಎಂದು ಹೇಳಿದ್ದಾರೆ ಸುನಿಲ್ ರಾವ್.

ಕಳಪೆ ಪ್ರದರ್ಶನದ ನಂತರ ಸುದೀಪ್ ಹೇಳಿದ್ದೇನು..?

''ಕಳಪೆ ಪ್ರದರ್ಶನ ನೀಡಿದಾಗ, ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗದಿದ್ದಾಗ, ನಮ್ಮ ಮೇಲೆ ನಮಗೆ ಮೊದಲು ಬೇಸರವಾಗುತ್ತೆ. ಆತ್ಮಸ್ತೈರ್ಯ ಕುಗ್ಗಿ ಹೋಗುತ್ತೆ. ಆದರೆ ಇಂತಹ ಸಂದರ್ಭಗಳಲ್ಲಿ ತಂಡ ಮತ್ತು ವಿಶೇಷವಾಗಿ ತಂಡದ ಕ್ಯಾಪ್ಟನ್‌ ತುಂಬಾನೇ ಮುಖ್ಯವಾಗ್ತಾರೆ. ನಮ್ಮ ಬಗ್ಗೆ ಅವರು ಆಡುವ ವಿಶ್ವಾಸದ ಮಾತುಗಳು ನಮ್ಮಲ್ಲಿ ಮತ್ತೆ ಭರವಸೆ ಮೂಡಿಸುತ್ತಾವೆ, ನಂಬಿಕೆ ಹೆಚ್ಚಿಸುತ್ತಾವೆ. ಅವರಾಡುವ ಮಾತುಗಳ ಮೇಲೆ ಒಂದೊಂದು ಸಲ ನಮ್ಮ ಕಂಬ್ಯಾಕ್ ನಿಂತಿರುತ್ತೆ. ಈ ವಿಚಾರದಲ್ಲಿ ಸುದೀಪ್ ಅವರನ್ನು ನಾವು ಮೆಚ್ಚಬೇಕು. ಯಾಕೆಂದರೆ ನಾನು ಅಂತಲ್ಲ, ತಂಡದಲ್ಲಿ ಯಾರೇ ಫೇಲ್ ಆದಾಗ ಕೂಡ ಅವರು ಹುರಿದುಂಬಿಸುತ್ತಿದ್ದರು. ಉದಾಹರಣೆಗೆ ಸೆಮಿಫೈನಲ್‌ ಪಂದ್ಯದಲ್ಲಿ ನಾನು ಚೆನ್ನಾಗಿ ಬೌಲಿಂಗ್ ಮಾಡಲಿಲ್ಲ. ಆಗ ಅವರೇ ಬಂದು ನೀನು ನಮ್ಮ ತಂಡದ ಮ್ಯಾಚ್ ವಿನ್ನರ್, ಎಷ್ಟು ಮ್ಯಾಚ್‌ಗಳನ್ನು ನೀನು ಗೆಲ್ಲಿಸಿದ್ದೀಯಾ, ಆಗಿದ್ದನ್ನು ಮರೆತುಬಿಡು, ನೀನೊಬ್ಬ ಚಾಂಪಿಯನ್ ಪ್ಲೇಯರ್, ಚಾಂಪಿಯನ್ ಪ್ಲೇಯರ್ ಆಗಿರ್ತಿಯಾ ಎಂದು ನನ್ನ ಬೆನ್ನು ತಟ್ಟಿದರು. ಹೀಗಾದಾಗ ನಮ್ಮಲ್ಲಿ ಮತ್ತೆ ಆತ್ಮವಿಶ್ವಾಸ ಚಿಗುರೊಡೆಯುತ್ತೆ'' ಎನ್ನುವುದು ಸುನಿಲ್ ಅವರ ಮನದ ಮಾತು.

ಬೆಂಗಾಲ್ ವಿರುದ್ಧ ಫೈನಲ್ ಪಂದ್ಯದಲ್ಲಿ ರಣತಂತ್ರ ಹೇಗಿತ್ತು..?

''ಫೈನಲ್ ಪಂದ್ಯದಲ್ಲಿ ನಮಗೆ ಪ್ಲಸ್ ಆಗಿದ್ದು ನಮ್ಮ ಹಿಂದಿನ ಸೆಮಿಫೈನಲ್ ಪಂದ್ಯ. ಸೆಮಿಫೈನಲ್ ಪಂದ್ಯವನ್ನು ನಾವು ಫೈನಲ್ ರೀತಿಯಲ್ಲಿ ಆಡಿದ್ವಿ. ಇನ್ನೂ ಆ ಪಂದ್ಯ ಗೆದ್ದ ನಂತರ ನಮ್ಮೆಲ್ಲರಲ್ಲಿ ಆತ್ಮವಿಶ್ವಾಸ ಇನ್ನೂ ಹೆಚ್ಚಾಗಿತ್ತು. ಹಾಗಂಥ ನಾವು ಬೆಂಗಾಲ್ ತಂಡವನ್ನೇನು ಕಡೆಗಣಿಸಿರಲಿಲ್ಲ. ಯಾಕೆಂದರೆ ಅವರಲ್ಲಿ ಜ್ಯಾಮಿ ಮತ್ತು ರಾಹುಲ್ ತುಂಬಾ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ, ಸೀರಿಸ್‌ನಲ್ಲಿ ಚೆನ್ನಾಗಿ ಆಡಿದ್ದಾರೆ ಎನ್ನುವುದು ಚೆನ್ನಾಗಿ ಗೊತ್ತಿತ್ತು.ಆದರೆ ನಮ್ಮ ಸಾಮರ್ಥ್ಯದ ಮೇಲೆ ಕೂಡ ನಮಗೆ ನಂಬಿಕೆ ಇತ್ತು. ನಮ್ಮ ನಾಯಕ ಸುದೀಪ್ ಅವರು ಕೂಡ ಈ ಮಾತನ್ನೇ ಹೇಳಿದ್ದರು. ಅವರ ವಿಕ್ನೆಸ್ ಹುಡುಕುತ್ತಾ ಆಡೋದು ಬೇಡ, ನಮ್ಮ ಸ್ಟ್ರೆಂಥ್‌ ಏನಿದೆ ಅದರ ಮೇಲೆ ನಾವು ಆಡೋಣ. ನಮ್ಮ ತಂಡದಲ್ಲಿರುವಂತೆ ಅವರ ತಂಡದಲ್ಲಿ ಹತ್ತಕ್ಕೆ ಹತ್ತು ಜನ ಒಳ್ಳೆಯ ಪ್ಲೇಯರ್‍ಸ್ ಇಲ್ಲ, ಕೆಲವರ ಮೇಲೆ ಅವರು ಅವಲಂಬಿತರಾಗಿದ್ದಾರೆ, ಅವರು ಇಬ್ಬರು ಔಟಾದರೆ, ಅವರ ತಂಡ ಕುಸಿದು ಬೀಳುತ್ತೆ. ಒಂದು ವೇಳೆ ಅವರಿಬ್ಬರು ಚೆನ್ನಾಗಿ ಆಡಲು ಶುರು ಮಾಡಿದರೆ ಆಗ ಅವರನ್ನು ಟಾರ್ಗೆಟ್ ಮಾಡುವ ಬದಲು ಮತ್ತೊಂದು ಬದಿಯಲ್ಲಿನ ಆಟಗಾರನ ವಿಕೆಟ್ ಪಡೆಯೋಣ, ಆಗ ಅವರೇ ಒತ್ತಡಕ್ಕೆ ಬಿದ್ದು ವಿಕೆಟ್ ಒಪ್ಪಿಸುತ್ತಾರೆ'' ಎಂದು ಸುದೀಪ್ ಅವರು ಹೇಳಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ ಸುನಿಲ್ ರಾವ್.

ಕ್ಯಾಪ್ಟನ್ ಹೇಳಿದಂತೆಯೇ ಆಯ್ತು ಅಲ್ವಾ ?

''ಹೌದು, ಅವತ್ತು ಸುದೀಪ್ ಅವರು ಹೇಳಿದಂತೆ ಆಯ್ತು. ಫೈನಲ್ ಪಂದ್ಯದ ಮೊದಲ ಓವರ್ ನಲ್ಲೇ ನಾನು ವಿಕೆಟ್ ಪಡೆದೆ, ರನ್‌ಗಳು ಬಾರದ ಕಾರಣ ಒತ್ತಡಕ್ಕೊಳಗಾದ ಜ್ಯಾಮಿ ಸಿಕ್ಸ್‌ ಹೊಡೆಯುವ ಭರದಲ್ಲಿ ಜೆಕೆ ಬೀಸಿದ ಎಲ್‌ಬಿಡಬ್ಲೂ ಬಲೆಗೆ ಬಿದ್ದರು. ಆರಂಭದಲ್ಲಿ ಒಬ್ಬರಾದ ಮೇಲೆ ಒಬ್ಬರು ಔಟಾದ ನಂತರ ಅಲ್ಲಿಯವರೆಗೆ ಇಡೀ ಪಂದ್ಯಾವಳಿಯಲ್ಲಿ ಚೆನ್ನಾಗಿ ಆಡಿಕೊಂಡು ಬಂದಿದ್ದ ರಾಹುಲ್ ಮೇಲೆ ಒತ್ತಡ ಇನ್ನೂ ಹೆಚ್ಚಾಯ್ತು. ಬೇಡದೇ ಇರುವ ಹೊಡೆತ ಹೊಡೆಯಲು ಹೋಗಿ ಅವರು ವಿಕೆಟ್ ಒಪ್ಪಿಸಿದರು. ಹೀಗೆ ಸುದೀಪ್ ಅವರು ಮಾಡಿದ್ದ ಈ ರಣತಂತ್ರ ಅವತ್ತು ತುಂಬಾ ಚೆನ್ನಾಗಿ ವರ್ಕ್ ಆಯ್ತು. ಅವತ್ತು ಅವರು ಹೇಳಿದಂತೆ ನಾವೆಲ್ಲ ನಮ್ಮ ಸ್ಟ್ರೆಂಥ್‌ಗೆ ತಕ್ಕಂತೆಯೇ ಪ್ರದರ್ಶನ ನೀಡಿದ್ವಿ, ಲಯಬದ್ದವಾಗಿ ಬೌಲಿಂಗ್ ಮಾಡಿದ್ವಿ, ಇನ್ನೂ ಫೈನಲ್‌ನಲ್ಲಿ 130 ರನ್‌ಗಳಿಗೆ ಕಟ್ಟಿ ಹಾಕುವುದು ಸುಲಭ ಅಲ್ಲ. ಜೆಕೆ, ನಾನು, ಪ್ರತಾಪ್, ಕರ್ಣ, ಚಂದನ್, ಹೀಗೆ ಎಲ್ಲರೂ ನಾವು ಚೆನ್ನಾಘಿ ಬೌಲಿಂಗ್ ಮಾಡಿದ್ವಿ, ಅದು ಖುಷಿ ಇದೆ, ಎಲ್ಲರ ಪರವಾಗಿ ನಾನು ಈ ಮಾತು ಹೇಳುತ್ತಿದ್ದೇನೆ ಎಂದು ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ ಎಕ್ಸ್‌ ಕ್ಲೂಸಿವ್ ಸಂದರ್ಶನದಲ್ಲಿ ನಿಮ್ಮ ನೆಚ್ಚಿನ ಸುನಿಲ್ ರಾವ್ ಹೇಳಿದ್ದಾರೆ. ತಮ್ಮ ಈ ವರ್ಷದ ಸಿಸಿಎಲ್ ಪ್ರಯಾಣವನ್ನು ಈ ಮೂಲಕ ಹಿಂದೆ ತಿರುಗಿ ನೋಡಿದ್ದಾರೆ.

More from Filmibeat

English summary
When it clicks, it’s magic!" Karnataka Bulldozers' Sunil Rao opens up about the high-stakes battle vs Chennai and the emotional memories of the CCL 2026 Championship win
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X