EXCLUSIVE ; ಕರಾವಳಿ ವಿವಾದಕ್ಕೆ ರಾಜ್ ಬಿ ಶೆಟ್ಟಿ ಕಾರಣನಾ ? ಇಲ್ಲಿದೆ ಪ್ರಜ್ವಲ್ ದೇವರಾಜ್ ಖಂಡತುಂಡ ಉತ್ತರ

ಹಣ ಕೆಲ ಒಮ್ಮೆ ಸಂಬಂಧದಲ್ಲಿ ಹುಳಿ ಹಿಂಡುತ್ತೆ. ವರ್ಷಾನು ವರ್ಷದ ಪ್ರೀತಿ ಮತ್ತು ಸ್ನೇಹವನ್ನು ಕೂಡ ಮುರಿಯುವ ಶಕ್ತಿ ಈ ಹಣಕ್ಕಿದೆ. ಹಣ ಇದ್ದರೆ ವ್ಯಕ್ತಿಯ ವ್ಯಕ್ತಿತ್ವ ಹೇಗೆ ಇರಲಿ ಆ ವ್ಯಕ್ತಿಗೆ ಗೌರವ ಸಿಗುತ್ತೆ. ಇನ್ನು ಚಿತ್ರರಂಗದಲ್ಲಿ ಅನೇಕರ ಗುಣವಾಗುಣಗಳನ್ನು ನಿರ್ಧರಿಸುವುದು ಕೇವಲ ಹಣ ಮಾತ್ರ. ಇದಕ್ಕೆ ಕೈಗನ್ನಡಿ ಎಂಬಂತೆ ಹಣದ ಎದುರು ಸಂಬಂಧಗಳು ಕೊಚ್ಚಿ ಹೋಗಿವೆ. ಹಲವಾರು ವಿವಾದಗಳಾಗಿವೆ.ಉದಾಹರಣೆಗೆ ಪ್ರಜ್ವಲ್ ದೇವರಾಜ್ VS ಕರಾವಳಿ ವಿವಾದವನ್ನೇ ತೆಗೆದುಕೊಳ್ಳಿ.

ಹೌದು, ಈಗಾಗಲೇ ಎಲ್ಲರಿಗೆ ಗೊತ್ತಿರುವಂತೆ ಕರಾವಳಿ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಮತ್ತು ಪ್ರಜ್ವಲ್ ದೇವರಾಜ್ ನಡುವೆ ಇದ್ದ ಭಿನ್ನಾಭಿಪ್ರಾಯ ಜಗಜ್ಜಾಹೀರಾಗಿದೆ. ಪ್ರಜ್ವಲ್ ದೇವರಾಜ್ ಅವರ ಅನುಪಸ್ಥಿತಿಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ.

EXCLUSIVE The Karavali Row Prajwal Devaraj Breaks Silence on Dubbing Snub and Unpaid Dues

ವಿಪರ್ಯಾಸ ಅಂದರೆ ಪ್ರಜ್ವಲ್ ದೇವರಾಜ್ ಚಿತ್ರರಂಗಕ್ಕೆ ಹೊಸಬರಲ್ಲ. ಹತ್ತಿರ ಹತ್ತಿರ 40 ಚಿತ್ರ ಮಾಡಿದ್ದಾರೆ. ಆದರೂ ಅವರ ಪಾತ್ರಕ್ಕೆ ಅವರ ಧ್ವನಿಯನ್ನು ಉಪಯೋಗಿಸಿಲ್ಲ. ಈ ಹಿನ್ನೆಲೆ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿದೆ. ಪ್ರಜ್ವಲ್ ದೇವರಾಜ್ ವಿರುದ್ದ ಕೆಲವೊಂದು ವಿಚಾರಗಳನ್ನು ಕೂಡ ಹಂಚಿಕೊಳ್ಳಲಾಗಿದೆ. ಆರೋಪಗಳನ್ನು ಕೂಡ ಮಾಡಲಾಗಿದೆ.

ಆದರೆ ಪ್ರತಿಯೊಂದು ಕಥೆಗೂ ಎರಡು ಮುಖಗಳಿರುತ್ತವೆ. ಈ ಹಿನ್ನೆಲೆ ಪ್ರಜ್ವಲ್ ದೇವರಾಜ್ ಅವರ ಸೈಡ್ ಆಫ್ ಸ್ಟೋರಿ ಕೇಳಲು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಪ್ರಜ್ವಲ್ ದೇವರಾಜ್ ಅವರನ್ನು ಸಂಪರ್ಕ ಮಾಡಿತ್ತು. ವಿವಾದದ ಹಿನ್ನೆಲೆ, ರಾಜ್ ಬಿ ಶೆಟ್ಟಿ ಜೊತೆಗಿನ ಮನಸ್ತಾಪದ ವಿಚಾರ, ಎಲ್ಲವನ್ನೂ ತಿಳಿದುಕೊಳ್ಳುವ ಪ್ರಯತ್ನ ಮಾಡಿತು.

ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಪ್ರಶ್ನೆಗಳಿಗೆ ಪ್ರಜ್ವಲ್ ದೇವರಾಜ್ ಯಾವುದೇ ಮುಚ್ಚು ಮರೆಯಿಲ್ಲದೇ ಉತ್ತರ ಕೂಡ ನೀಡಿದ್ದಾರೆ.ಅಸಮಾಧಾನಗೊಂಡಿದ್ದೇಕೆ ಎನ್ನುವುದನ್ನು ಹೇಳಿದ್ದಾರೆ. ಹಾಗಿದ್ದರೆ, ''ಕರಾವಳಿ'' ವಿವಾದದ ಕುರಿತು ನಿಮ್ಮ ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಪ್ರಜ್ವಲ್ ದೇವರಾಜ್ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.

''ಕರಾವಳಿ'' ವಿವಾದ ಆಗಿದ್ದೇಕೆ ? ಸಂಭಾವನೆ ಎಷ್ಟು ಬಾಕಿ ಇದೆ ..?


''1 ಕೋಟಿ 25 ಲಕ್ಷ ಕೊಡಬೇಕಿತ್ತು. ಆದರೆ, 1 ಕೋಟಿ ಕೊಟ್ಟಿದ್ದಾರೆ. 25 ಲಕ್ಷ ಇನ್ನು ಬಾಕಿ ಇದೆ. ಇದು ಹೊರತು ಪಡಿಸಿದರೆ ಜಿಎಸ್‌ಟಿಯನ್ನು ಕೂಡ ಅವರೇ ಕೊಡಬೇಕು. ಅದನ್ನು ನಾನು ನನ್ನ ಕೈಯಿಂದ ಕಟ್ಟಿದೀನಿ. ಇನ್ನು ಡಬ್ಬಿಂಗ್ ವಿಚಾರಕ್ಕೆ ಬಂದರೆ ಬೇರೆಯವರಿಂದ ನಾವು ಮಾಡಿಸ್ತೀವಿ ಅಂತ ಅವರು ಮೊದಲೇ ಹೇಳಿದ್ದರು ಅಂತ ಹೇಳ್ತಿದ್ದಾರೆ. ಆದರೆ ಅದು ತಪ್ಪು. ಡಬ್ಬಿಂಗ್‌ಗೆ ಅವರು ನನ್ನ ಕರೆದಿದ್ದರು. ಆದರೆ ನಾನು ಹೋಗಲಿಲ್ಲ. ಅದಕ್ಕೆ ಕಾರಣ ಮತ್ತದೇ ಹಣ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಶ್ರಮ ಮತ್ತು ಸಮಯ''.

''ಕರಾವಳಿ ಚಿತ್ರಕ್ಕೆ ನಾನು ಕಳೆದ ಎರಡೂವರೆ ವರ್ಷದಿಂದ ತುಂಬಾ ಎಫರ್ಟ್‌ ಹಾಕಿದೀನಿ. ತುಂಬಾನೇ ಗಮನವಹಿಸಿ ಸಿನಿಮಾ ಮಾಡಿದೀನಿ. ಆ ಚಿತ್ರದಲ್ಲಿನ ಲುಕ್ ಮತ್ತು ಗೆಟಪ್ ನೋಡಿದರೆ ನಿಮಗೆ ಅರ್ಥ ಆಗುತ್ತೆ. ಆ ರೂಪದಲ್ಲಿ ನಾನು ಬೇರೆ ಯಾವ ಸಿನಿಮಾ ಮಾಡಲು ಸಾಧ್ಯ ಇರಲಿಲ್ಲ. ನಾನು ಮಾಡಿಯೂ ಇಲ್ಲ''.

''ಇನ್ನು ನಿರ್ಮಾಪಕರ ಕಷ್ಟ-ನಷ್ಟದ ಅರಿವು ನನಗೆ ಚೆನ್ನಾಗಿ ಗೊತ್ತು. ನೀವು ನಂಬಲ್ಲ. ಕಳೆದ ವರ್ಷ ಹೀಗೆ ಬೇರೆ ಬೇರೆ ಸಿನಿಮಾಗಳ ನಿರ್ಮಾಪಕರ ಕಷ್ಟ ಅರ್ಥ ಮಾಡಿಕೊಂಡು ಒಂದೂವರೆ ಕೋಟಿ ನಾನು ಕೈ ಬಿಟ್ಟಿದೀನಿ. ಸೋ, ಹೀಗಿರುವಾಗ, ಇದೀಗ ಇವರು ಕೂಡ ಬಿಲ್ಕುಲ್ ಕೊಡೋಕೆ ಆಗಲ್ಲ ಅಂದ್ರೆ ಹೇಗೆ..?'' ಎಂದು ಪ್ರಜ್ವಲ್ ದೇವರಾಜ್ ಪ್ರಶ್ನೆ ಮಾಡಿದ್ದಾರೆ.

EXCLUSIVE The Karavali Row Prajwal Devaraj Breaks Silence on Dubbing Snub and Unpaid Dues

ಡಬ್ಬಿಂಗ್ ಮಾಡಲ್ಲ ಅಂದ್ರಂತೆ ಹೌದಾ ?

''ಆಗಲೇ ಹೇಳಿದಂತೆ ಹೋದ ವರ್ಷ ತುಂಬಾ ಮಾಡಿದ್ದೀನಿ. ಅದು ಯಾವುದೇ ಬಂದಿಲ್ಲ ದುಡ್ಡು ನನಗೆ. ನಮಗೂ ಕಮಿಟ್‌ಮೆಂಟ್ಸ್ ಇರುತ್ತಲ್ವಾ? ಬದುಕೋಕಾದ್ರೂ ದುಡ್ಡು ಬೇಕಲ್ವಾ? ಈ ನನ್ನ ಪರಿಸ್ಥಿತಿಯಲ್ಲಿ ನನಗೆ ನೀವು ಸಹಾಯ ಮಾಡೋಕೆ ಆಗಲ್ವಾ..? ಬೇಸಿಕ್ ಖರ್ಚು, ಮನೆ ನಡೆಸೋಕೆ ಅಟ್ಲೀಸ್ಟ್ ದುಡ್ಡು ಬೇಕಲ್ವಾ?
ನಿಮಗೆ ಸಹಾಯ ಮಾಡೋಕೆ ಶಕ್ತಿ ಇದ್ರೆ ಮಾಡಬಹುದು, ನಿಮಗೇ ಸಹಾಯ ಬೇಕು ಇನ್ನೊಬ್ಬರಿಗೆ ಅಂದಾಗ ನೀವು ಹೆಂಗೆ ಸಹಾಯ ಮಾಡೋಕೆ ಆಗುತ್ತೆ? ನಾನು ಕೂಡ ಮನೆ ಸಾಗಿಸಬೇಕಲ್ಲ? ನಮಗೂ ಖರ್ಚಿರುತ್ತೆ. ನಮ್ ಕೆಳಗೆ ಒಂದಷ್ಟು ಜನ ಕೆಲಸ ಮಾಡ್ತಾರೆ. ಅವರಿಗೆ ನಾವು ಕೂಡ ಸಂಬಳಗಳು ಕೊಡಬೇಕು. ಅಲ್ವಾ? ಏನೇ ಇದ್ರೂನು ಜೀವನ ಮಾಡೋಕೆ ದುಡ್ಡು ಬೇಕೇ ಬೇಕಲ್ವಾ?''

ಅವರು ಏನೇ ಹೇಳಿದರು, ಎಷ್ಟೇ ಕೇಳಿದರು ಕೊಡೋಕೆ ಆಗಲ್ಲ ಅಂತ ಹೇಳಿದರು. ನಾನು ಕೊಟ್ರೆನೇ ಡಬ್ಬಿಂಗ್ ಮಾಡ್ತೀನಿ, ಇಲ್ಲ ಮಾಡಲ್ಲ ಅಂದೆ. ಈಗ ನೋಡಿದರೆ ಅವರ ಧ್ವನಿ ಪಾತ್ರಕ್ಕೆ ಹೊಂದುವುದಿಲ್ಲ. ಅದಕ್ಕೆ ಬೇರೆಯವರ ಹತ್ತಿರ ಮಾಡಿಸಿದೀವಿ ಅಂತ ಹೇಳ್ತಿದ್ದಾರೆ. ಎಷ್ಟು ಸಿನಿಮಾ ಡಬ್ಬಿಂಗ್ ಮಾಡಿಲ್ಲ ನಾನು? ಮುಂದಿನ ವರ್ಷಕ್ಕೆ ಬಂದರೆ ಚಿತ್ರರಂಗಕ್ಕೆ ನಾನು ಬಂದು 20 ವರ್ಷ ಆಗುತ್ತೆ. ಇಲ್ಲಿಯವರೆಗೆ ಒಂದೇ ಒಂದು ಕಪ್ಪುಚುಕ್ಕೆ ನನ್ನ ಮೇಲಿರಲಿಲ್ಲ'' ಎಂದು ಈ ವಿವಾದ ಆದ ಹಿನ್ನೆಲೆ ಬೇಸರ ವ್ಯಕ್ತಪಡಿಸಿದ್ದಾರೆ ಪ್ರಜ್ವಲ್ ದೇವರಾಜ್.

ಟ್ರೇಲರ್ ಲಾಂಚ್‌ಗೆ ನೀವ್ಯಾಕೇ ಹೋಗಲಿಲ್ಲ ? ಕರೆದಿದ್ದರಾ ?

''ಸಡನ್ ಆಗಿ ಟ್ರೇಲರ್ ಬರ್ತಿದೆ ಅಂತ ಅನೌನ್ಸ್ ಮಾಡಿದರು. ನಾನು ಗಾಬರಿ ಬಿದ್ದೆ. ಇನ್ನು ಸಿನಿಮಾದ ಡಬ್ಬಿಂಗ್ ಆಗಿಲ್ಲ. ಇವರು ನೋಡಿದರೆ ಆಗಲೇ ಟ್ರೇಲರ್ ರಿಲೀಸ್ ಅಂತ ಹೇಳ್ತಿದ್ದಾರೆ ಅಂದುಕೊಂಡು ನಾನು ನನ್ನ ಮ್ಯಾನೇಜರ್ ಗೆ ಫೋನ್ ಮಾಡಿ ಮಾತನಾಡುವಂತೆ ಹೇಳಿದೆ''.

''ನನ್ನ ಮ್ಯಾನೇಜರ್ ಆ ನಂತರ ಅವರಿಗೆ ಫೋನ್ ಮಾಡಿದ್ದರು. ಅದಕ್ಕೆ ಅವರು ಮೊದಲು ಬರೋಕೆ ಹೇಳಿ. ಆಮೇಲೆ ನೋಡೋಣ ಅಂದ್ರಂತೆ. ನಾನು ಕೂಡ ಸರಿ ನಮ್ಮ ಸಿನಿಮಾ. ಎಲ್ಲರಿಗಿಂತ ಸಿನಿಮಾ ದೊಡ್ಡದು. ಹೀಗಾಗಿ ರೆಡಿಯಾದೆ''.

ಇನ್ನು ಈಗ ಎಲ್ಲರಿಗೆ ಗೊತ್ತಿರುವಂತೆ ಈಗೀಗ ಟ್ರೇಲರ್ ಗಳಲ್ಲಿ ಮಾತು ಕಡಿಮೆ. ಮ್ಯೂಸಿಕ್ ಸದ್ದು ಹೆಚ್ಚಿರುತ್ತೆ. ಇವರು ಕೂಡ ಡೈಲಾಗ್‌ಗಳಿಲ್ಲದೆ ಕೇವಲ ಮ್ಯೂಸಿಕ್ ಮೇಲೆ ಟ್ರೇಲರ್ ಕಟ್ ಮಾಡಿರಬಹುದು ಎಂದುಕೊಂಡೆ. ಆದರೆ ಆ ನಂತರ ನೋಡಿದಾಗ ನಿಜಕ್ಕೂ ಬೇಸರ ಆಯ್ತು. ಸರಿ ಯಾಕೆ ಹೋಗೋದು ಬಿಡು ಅಂದ್ಬಿಟ್ಟು ನಾನು ಹೋಗಲಿಲ್ಲ''.

''ಮಧ್ಯರಾತ್ರಿಯಲ್ಲಿ ಟ್ರೇಲರ್ ನೋಡಿ ನನಗೆ ತುಂಬಾ ಬೇಜಾರಾಯ್ತು. ಈಗ ಅಲ್ಲಿ ಶೂಟಿಂಗ್‌ನಲ್ಲಿ ಡೈಲಾಗ್ ಹೇಳಿರೋದು ನಾನೇ ಅಲ್ವಾ? ಅಲ್ಲಿ ಹೇಳಿದ್ಮೇಲೆ ಇಲ್ಲಿ ಹೇಳೋಕೆ ಆಗಲ್ವಾ..? ಆಮೇಲೆ ನಾನೇನು ಈ ಹಿಂದೆ ಡಬ್ಬಿಂಗ್ ಮಾಡಿಯೇ ಇಲ್ವಾ..? ಅವರಿಗೆ ಹೇಗೇ ಬೇಕೋ ಹಾಗೇ ಧ್ವನಿ ಮೂಲಕ ನನ್ನ ಪಾತ್ರಕ್ಕೆ ಜೀವ ತುಂಬಲು ನಾನು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೆ''.

''ಆದರೆ ಅವರು ಸಂಭಾವನೆ ಕೊಡಲಿಲ್ಲ. ಬದಲಿಗೆ ಬೇರೆಯವರ ಹತ್ತಿರ ಡಬ್ಬಿಂಗ್ ಮಾಡಿಸಿ, ಅವರ ವಾಯ್ಸ್ ಈ ಪಾತ್ರಕ್ಕೆ ಸೂಟ್ ಆಗಲ್ಲ ಅಂತ ಹೇಳ್ತಿದ್ದಾರೆ. ಕಾರಣ ಎಲ್ಲರಿಗೆ ಗೊತ್ತು. ಅವರು ಪೇಮೆಂಟ್ ಕೊಟ್ಟಿಲ್ಲ. ನಾನು ಡಬ್ಬಿಂಗ್ ಮಾಡಿಲ್ಲ. ಫ್ಯಾಕ್ಟ್ ಅದು. ಕಾರಣಗಳು ಬೇರೆ ಕೊಡಬಹುದು ಬಟ್ ಎಲ್ಲರಿಗೂ ಗೊತ್ತಾಗುತ್ತೆ ಅಲ್ವಾ? ಎಂದು ಪ್ರಜ್ವಲ್ ದೇವರಾಜ್ ತಮ್ಮ ಮನದ ಮಾತುಗಳನ್ನು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಹಂಚಿಕೊಂಡಿದ್ದಾರೆ''.

ಅಭಿಮಾನಿಗಳ ಗಲಾಟೆಯ ಹಿಂದೆ ನಿಮ್ಮ ಕುಮ್ಮಕ್ಕು ಇದೆಯಂತೆ ಹೌದಾ ?

''ನಾನೇ ಮಾಡ್ಸಿದ್ದೀನಿ ಅಂತಾನಾ? ನಂಬ್ತೀರಾ ಈ ವಿಷಯ? ಖಂಡಿತ ಇಲ್ಲ. ನನ್ನದು ತುಂಬಾ ಸರಳ ಜೀವನ. ಸಿಂಪಲ್ ಜೀವನ ಮಾಡೋಕೆ ಇಷ್ಟ ಪಡೋನು ನಾನು. ನನಗೆ ಈ ಗಲಾಟೆ ಎಲ್ಲ ಬೇಡವೇ ಬೇಡ. ಅವಶ್ಯಕತೆಯೂ ಇಲ್ಲ. ನೆಮ್ಮದಿಯಾಗಿ ನಮ್ಮ ಕೆಲಸ ನಾವು ಮಾಡ್ಕೊಂಡು, ನಮ್ಮ ಜೀವನನೂ ಸಾಗಿಸಿಕೊಂಡು ಹೋದ್ರೆ ಸಾಕು. ಹೀಗಾಗಿ ಗಲಾಟೆಗಳಿಂದ ನಾನು ದೂರನೇ ಇರ್ತಿನಿ. ಗಲಾಟೆ ಮಾಡಿ ಏನಾದ್ರೂ ಉಪಯೋಗ ಆಗುತ್ತಾ? ನನಗೂ ಉಪಯೋಗ ಇಲ್ಲ, ಅವರಿಗೂ ಉಪಯೋಗ ಇಲ್ಲ, ಸಿನಿಮಾಗೂ ಉಪಯೋಗ ಇಲ್ಲ. ಹೀಗಿದ್ದಾಗ ಗಲಾಟೆ ಮಾಡಿಸಿ ಪ್ರಯೋಜನವೇನು''..? ಎನ್ನುವ ಪ್ರಶ್ನೆ ಪ್ರಜ್ವಲ್ ಅವರದ್ದು.

ರಾಜ್ ಬಿ ಶೆಟ್ಟಿ ಮೇಲೆ ನಿಮಗೆ ಕೋಪ ಅಂತೆ. ಅದಕ್ಕೆ ಹೋಗಿಲ್ಲ ಅಂತೆ


''ಅಯ್ಯಯ್ಯೋ! ಇಲ್ಲ ಇಲ್ಲ. ಯಪ್ಪಾ ಯಾರು ಇದು..? ಯಾಕೆ ಈ ತರಹದ ಮಾತುಗಳು. ಹಾಗಿದ್ದರೆ ಇಷ್ಟು ದಿವಸ ಯಾಕೆ ನಾನು ಪ್ರಚಾರ ಮಾಡ್ತಿದ್ದೆ..? ಆಲ್ಮೋಸ್ಟ್ ಒಂದು ಆರು ಏಳು ತಿಂಗಳು ಆಯ್ತು ಅನ್ಸುತ್ತೆ. ಈ ಸಿನಿಮಾಗೆ ನಾವು ಜೊತೆಗೆ ಕೆಲಸ ಮಾಡಿ. ಮತ್ತೆ ಇಷ್ಟು ದಿವಸ ಏನಕ್ಕೆ ಪ್ರಮೋಷನ್ ಮಾಡ್ತೀನಿ ನಾನು? ಅಲ್ವಾ? ಸಿಂಪಲ್ ಲಾಜಿಕ್''.


ನಿಮಗಿಂತ ಅವರಿಗೆ ಆದ್ಯತೆ ನೀಡಿದ್ದು ನಿಮಗೆ ಬೇಸರ ತಂದಿದೆಯಂತೆ ?


ಅಯ್ಯಯ್ಯೋ! ಏನಾದ್ರೂ ಮಾತನಾಡೋದಾ..? ಸಿನಿಮಾ ಮಾತಾಡುತ್ತೆ, ನಾವು ಮಾಡೋ ಕೆಲಸ ಮಾತಾಡುತ್ತೆ. ಯಾರು ಯಾರನ್ನೋ ಇಲ್ಲಿ ದಾಟಿಕೊಂಡು ಹೋಗಲು ಆಗಲ್ಲ. ನಾನು 19-20 ವರ್ಷಗಳ ವೃತ್ತಿ ಜೀವನದಲ್ಲಿ ಐದೈದು ಜನ ಹೀರೋಗಳ ಜೊತೆಗೆ ಕೆಲಸ ಮಾಡಿರೋನು ನಾನು. ಇವತ್ತಿಗೂ ಆರಾಮಾಗಿ ಇದ್ದೀವಿ. ಆ ತರ ಏನೂ ಇಲ್ಲ. ಆ ತರ ಇನ್ಸೆಕ್ಯೂರಿಟಿ ಲೈಫ್‌ನಲ್ಲಿ ನನಗೆ ಯಾವತ್ತೂ ಇಲ್ಲವೇ ಇಲ್ಲ ನನಗೆ''.

''ಅಂಡ್ ಪಾಪ ರಾಜ್ ಬಿ ಶೆಟ್ಟಿ ಅದ್ಭುತವಾದ ಮನುಷ್ಯ, ಅದ್ಭುತವಾದ ನಟ. ಆ ತರದೇನೂ ಭಾವನೆಗಳು ನನ್ನಲ್ಲಿ ಇಲ್ಲ. ನನಗೆ ಅವರಂತ ಅಲ್ಲ, ಯಾರ ಜೊತೆನೂ ಇಂಡಸ್ಟ್ರಿಯಲ್ಲಿ ಏನು ಇಶ್ಯೂಸ್ ಇಲ್ಲ. ಯಾರಾದರೂ ನನಗೆ ದ್ರೋಹ ಮಾಡಿದರೂ, ನೋವುಂಟು ಮಾಡಿದರೂ ಕೂಡ ಆಯ್ತು ಬಿಡಪ್ಪ ಅನ್ಕೊಂಡು ಮುಂದೆ ಹೋಗೋನು ನಾನು. ಆಗಲೇ ಹೇಳಿದಂತೆ ಹಣ ಮುಖ್ಯ ಕಾರಣ ಅಷ್ಟೇ. ಅದು ಬಿಟ್ಟರೆ ಬೇರೆನೂ ಇಲ್ಲ. ಇವೆಲ್ಲ ಸುಖಾಸುಮ್ಮನೆ ಹಬ್ಬಿಸಲಾಗುತ್ತಿರುವ ಸುದ್ದಿಗಳಷ್ಟೇ''.

ಅಂಬರೀಶ್ ಸರ್ ಜೊತೆ ಮಾಡಿದ್ದೀನಿ, ಸುದೀಪ್ ಸರ್ ಜೊತೆಗೆ ಕೆಲಸ ಮಾಡಿದ್ದೀನಿ, ಬಟ್ ಪ್ರಜ್ವಲ್ ತರ ನನಗೆ ಯಾರು ಮಾಡಿಲ್ಲ ಎಂಬ ನಿರ್ದೇಶಕರ ಹೇಳಿಕೆಯ ಬಗ್ಗೆ

''ಓ ಅದನ್ನು ಹೇಳಿದ್ದಾರಾ..? ಈಗ ಅವರದ್ದು ಎರಡನೇ ಸಿನಿಮಾ, ನನ್ನದು 40ನೇ ಸಿನಿಮಾ. ಅದೇ ನಾನು ಹೇಳಿದಂಗೆ ಬಂದು 20 ವರ್ಷ ಆಯ್ತು. ಇದುವರೆಗೂ ಒಂದು ಬ್ಲಾಕ್ ಮಾರ್ಕ್ ಇದೆಯಾ ನನ್ನ ಬಗ್ಗೆ? ಇಲ್ಲ, ಖಂಡಿತವಾಗಿಯೂ ಇಲ್ಲ. ಯಾರಾದರೂ ಒಬ್ಬರು ಕಂಪ್ಲೇಂಟ್ ಮಾಡಿದ್ದಾರಾ? ಅಲ್ಲೇ ನಿಮಗೆ ಉತ್ತರ ಸಿಕ್ತಲ್ಲ? ಅಂದ್ರೆ ಅವರ ವರ್ತನೆ ನನ್ನ ವರ್ತನೆ ಇಲ್ಲೇ ಅರ್ಥ ಆಯ್ತಲ್ಲ ನಿಮಗೆ? ನಾನು ಇವಾಗ ಅವರ ಬಗ್ಗೆ ಒಂದು ತಪ್ಪು ಮಾತಾಡಿದ್ನಾ? ಆದರೆ, ಅವರು ನನ್ನ ಬಗ್ಗೆ ಮಾತಾಡ್ತಿದ್ದಾರೆ. ಸೋ ಅವರ ಸ್ವಭಾವ ನನ್ನ ಸ್ವಭಾವ ಅಲ್ಲೇ ಗೊತ್ತಾಗುತ್ತೆ ಅಲ್ವಾ..? ಎಂದು ಪ್ರಜ್ವಲ್ ದೇವರಾಜ್ ''ಫಿಲ್ಮಿಬೀಟ್ ಕನ್ನಡ''ಗೆ ಪ್ರತಿಕ್ರಿಯಿಸಿದ್ದಾರೆ.

''ಕರಾವಳಿ''ಗೆ ನಿಮ್ಮ ಸಪೋರ್ಟ್‌ ಇರುತ್ತಾ, ಇಲ್ವಾ..? ಪ್ರಚಾರಕ್ಕೆ ಹೋಗ್ತೀರಾ ?

''ಸಪೋರ್ಟ್ ಮಾಡೇ ಮಾಡ್ತೀನಿ, ಸಿನಿಮಾ ಮುಖ್ಯ ಅಲ್ವಾ? ಎಲ್ಲರೂ ಅವರವರ ಕಮಿಟ್‌ಮೆಂಟ್ಸ್‌ನ ಅವರವರು ಕರೆಕ್ಟ್ ಆಗಿ ಮಾಡ್ಕೊಂಡು ಹೋದ್ರೆ ಯಾರಿಗೂ ಏನು ಸಮಸ್ಯೆ ಇರಲ್ಲ. ಒಂದು ವಿಷಯ ಒಪ್ಕೊಂಡ್ ಮೇಲೆ ಆ ವಿಷಯ ಮಾಡಬೇಕು, ಇಲ್ಲ ಒಪ್ಕೋಬಾರದು. ಇಲ್ಲ ಅಂದರೆ ಅದಕ್ಕೊಂದು ಪರಿಹಾರ ಹುಡುಕಬೇಕು. ಅವರ ಮಾತಿನ ಮೇಲೆ ಅವರು ನಿಂತಿಲ್ಲ ಅನ್ನೋದಷ್ಟೇ ಇಲ್ಲಿ ಸಮಸ್ಯೆ. ಬಗೆಹರಿಸಿಕೊಳ್ಳೋಕೆ ಏನೂ ಇಲ್ಲ, ಅವರವರ ಪೇಮೆಂಟ್ ಕ್ಲಿಯರ್ ಮಾಡಿದ್ರೆ ಹೋಗಿ ಡಬ್ಬಿಂಗ್ ಮಾಡ್ತೀನಿ ಅಷ್ಟೇ, ಬೇರೆ ಏನೂ ಇಲ್ಲ''.

ನಾನು ಈಗೋಯಿಸ್ಟಿಕ್ ವ್ಯಕ್ತಿ ಅಲ್ಲ. ಸಿಂಪಲ್, ಅವರು ಕೊಡಬೇಕಾದ ಪೇಮೆಂಟ್ ಕೊಟ್ರೆ ನಾನು ಹೋಗಿ ಕೆಲಸ ಮುಗಿಸಿಕೊಡ್ತೀನಿ. ಇನ್ನು ಪ್ರಚಾರದ ವಿಚಾರಕ್ಕೆ ಬಂದರೆ ನಾನು ಮಾಡೇ ಮಾಡ್ತೀನಿ, ಅದು ನನ್ನ ಕರ್ತವ್ಯ. ಡಬ್ಬಿಂಗ್ ಇಲ್ಲ? ಪ್ರಚಾರ ಹಂಡ್ರೆಡ್ ಪರ್ಸೆಂಟ್ ಮಾಡ್ತೀನಿ, ಆ ಸಿನಿಮಾ ಪ್ರಚಾರ ನಿಲ್ಲಿಸಲ್ಲ. ಬಟ್ ಕೆಲಸಕ್ಕೆ ಅವರೇನು ಒಪ್ಕೊಂಡಿದ್ದಾರೆ, ಅವರ ಅಮೌಂಟ್ ಕೊಟ್ರೆ ನಾನು ಕೆಲಸ ಮುಗಿಸಿಕೊಡ್ತೀನಿ'' ಎಂದು ಪ್ರಜ್ವಲ್ ದೇವರಾಜ್ ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

English summary
Prajwal Devaraj breaks his silence on the Karavali movie row! Read his shocking claims about unpaid dues, fan protests, and a secret voice replacement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X