ಹೆಬ್ಬೆರಳು ನಮ್ ಸಮಕ್ಕೆ ಬರಲು ನೋಡುತ್ತೆ ಅಂದರೆ..; ಲ್ಯಾಂಡ್ ಲಾರ್ಡ್ ಅಬ್ಬರ- ಡೈಲಾಗ್ ರಾಜಾ ಮಾಸ್ತಿ ಪವರ್ ಫುಲ್ ಮಾತು

ಒಂದು ಚಿತ್ರದಲ್ಲಿ ನಾಯಕನ ಅಬ್ಬರಕ್ಕೆ ಪ್ರೇಕ್ಷಕರು ಶಿಳ್ಳೆ.. ಚಪ್ಪಾಳೆ.. ಹೊಡೆಯಬಹುದು. ತಮ್ಮ ನೆಚ್ಚಿನ ನಾಯಕನ ಸಾಹಸಗಾಥೆ ಮತ್ತು ಚಾಕ್ಯಚಕ್ಯತೆಯನ್ನು ಕಂಡು ಸಂಭ್ರಮ ಪಡಬಹುದು. ಆದರೆ.. ಆ ನಾಯಕನ ಆ ಪಾತ್ರಕ್ಕೆ ಜೀವ ತುಂಬುವುದು ಆ ನಾಯಕನಾಡುವ ಮಾತುಗಳು ಅನ್ನುವುದು ಯಾರು ಅಲ್ಲಗೆಳೆಯಲು ಸಾಧ್ಯ ಇಲ್ಲ. ಸಂಭಾಷಣೆ ಕೇವಲ ಪದಗಳ ಗುಚ್ಛವಲ್ಲ. ಅದು ಆ ಕಾಲಘಟ್ಟದ ಸಂಸ್ಕ್ರತಿ...

ಮಣ್ಣಿನ ಸೊಗಡು ಮತ್ತು ಜನರ ಸುಖ ದುಃಖದ ಪ್ರತಿಬಿಂಬ. ಒಂದು ಕಾಲ್ಪನಿಕ ಕಥೆಯನ್ನಾಗಲಿ ಅಥವಾ ಒಂದು ಸುದೀರ್ಘ ಹೋರಾಟವನ್ನಾಗಲಿ.. ಪದಗಳಲ್ಲಿ ಹಿಡಿದಿಡುವುದು ಸುಲಭದ ಮಾತಲ್ಲ. ಬೆಳ್ಳಿತೆರೆಯ ಮೇಲೆ ಮೌನವನ್ನೂ ಮಾತಾಗಿಸುವ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಸಮಾಜದ ನಾಡಿ ಮಿಡಿತ ಅರಿತ ಬರಹಗಾರನಿಂದ ಮಾತ್ರ ಇಂತಹದ್ದೊಂದು ಪವಾಡ ಮಾಡಲು ಸಾಧ್ಯ. ಆ ಪೈಕಿ ಒಬ್ಬರು ಮಾಸ್ತಿ ಉಪ್ಪಾರಹಳ್ಳಿ.

filmibeat-exclusive-your-thumb-doesnt-make-us-equal-masthi-on-the-fiery-dialogues-of-landlord

ಹೌದು, ಕನ್ನಡ ಚಿತ್ರರಂಗದಲ್ಲಿ ಬರಹಹಾರರ ಕೊರತೆ ಎದುರಾದಾಗ, ಕೇವಲ ಶಬ್ದಗಳಿಂದಲೇ ಸಂಚಲನ ಮೂಡಿಸಿದವರು ಮಾಸ್ತಿ.''ಕಡ್ಡಿಪುಡಿ.. ''ಟಗರು''..''ಸಲಗ''.. ''ಭೀಮ''.. ಅಂತಹ ಮಾಸ್ ಚಿತ್ರಗಳಿರಲಿ ''ಗುರು ಶಿಷ್ಯರು''.. ''ಜೆಂಟಲ್‌ಮ್ಯಾನ್'' ಅಂತಹ ಕ್ಲಾಸ್ ಚಿತ್ರಗಳಿರಲಿ.. ಮಾಸ್ತಿ ಅವರ ಲೇಖನಿ ಇಂದು ಸ್ಯಾಂಡಲ್‌ವುಡ್‌ನ ಅತಿ ದೊಡ್ಡ ಬ್ರ್ಯಾಂಡ್ ಆಗಿ ಹೊರ ಹೊಮ್ಮಿದೆ.

ಇನ್ನು ಮೊದಲಾದರೆ ಚಿತ್ರದಲ್ಲಿ ಸ್ಟಾರ್‌ಗಳು ಯಾರಿದ್ದಾರೆ, ನಿರ್ದೇಶಕರು ಯಾರು ಎಂದು ನೋಡಿ ಚಿತ್ರಮಂದಿರಕ್ಕೆ ಹಲವರು ಹೋಗುತ್ತಿದ್ದರು. ಆದರೆ ಈಗ ಪೋಸ್ಟರ್ ಮೇಲೆ ಮಾಸ್ತಿ ಹೆಸರಿದ್ದರೆ ಸಾಕು. ಆ ಚಿತ್ರದಲ್ಲಿ ಸಂಭಾಷಣೆಗಳ ಅಬ್ಬರ ಖಂಡಿತ ಇದ್ದೇ ಇರುತ್ತೆ ಎನ್ನುವ ಬಲವಾದ ನಂಬಿಕೆ ಪ್ರೇಕ್ಷಕರಲ್ಲಿ ಮೂಡಿದೆ.

ಇಂಥಾ ''ಡೈಲಾಗ್ ಕಿಂಗ್'' ಮಾಸ್ತಿ ಇದೀಗ ''ಲ್ಯಾಂಡ್‌ಲಾರ್ಡ್‌''ಗೆ ತಮ್ಮ ಬುದ್ದಿ ಖರ್ಚು ಮಾಡಿದ್ದಾರೆ. ಸಂಭಾಷಣೆ ಬರೆದಿದ್ದಾರೆ. ಸ್ವಾಭಿಮಾನ-ಹಕ್ಕು ಮತ್ತು ದೌರ್ಜನ್ಯದ ನಡುವಿನ ಈ ಸಂಘರ್ಷದ ಕಥೆಯನ್ನು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಮೂಲಕ ಹಂಚಿಕೊಂಡಿದ್ದಾರೆ. ಹಾಗಿದ್ದರೆ ''ಲ್ಯಾಂಡ್‌ಲಾರ್ಡ್'' ಕಥೆ ಏನು..? ಬರವಣಿಗೆಯ ಸಮಯದಲ್ಲಿ ಮಾಸ್ತಿಗೆ ಎದುರಾದ ಸವಾಲುಗಳೇನು..? ದುನಿಯಾ ವಿಜಯ್.. ರಿತನ್ಯ.. ರಚಿತಾ ರಾಮ್.. ರಾಜ್ ಬಿ ಶೆಟ್ಟಿ ಅವರ ಬಗ್ಗೆ ಮಾಸ್ತಿ ಹೇಳಿದ್ದೇನು..? ಮತ್ತು ಚಿತ್ರದಲ್ಲಿರುವ ಕೆಲ ಡೈಲಾಗ್‌ಗಳನ್ನು ತಿಳಿಯಲು ಮುಂದೆ ಓದಿ.

ನಿಮ್ಮ ''ಲ್ಯಾಂಡ್‌ಲಾರ್ಡ್'' ಪ್ರಯಾಣದ ಬಗ್ಗೆ..?

''ನಿರ್ದೇಶಕ ಜಡೇಶ್ ಅವರ ಜೊತೆ ಇದು ನನ್ನ ನಾಲ್ಕನೇ ಚಿತ್ರ. ''ಜೆಂಟಲ್‌ಮ್ಯಾನ್'' ಚಿತ್ರದಿಂದ ನನ್ನ ಮತ್ತು ಅವರ ಅನುಬಂಧ ಶುರುವಾಯ್ತು. ವಿಭಿನ್ನಾದ ಕಥೆ ಅದು. ಒಬ್ಬ ನಾಯಕ 18 ಗಂಟೆ ನಿದ್ದೆ ಮಾಡ್ತಾನೆ ಆ ನಂತರದ 6 ಗಂಟೆ ಏನ್ಮಾಡ್ತಾನೆ ಎನ್ನುವ ಕಥಾಹಂದರ ಹೊಂದಿದ್ದ ಚಿತ್ರ ಅದು. ಆ ನಂತರ ''ಗುರು ಶಿಷ್ಯರು'' ಚಿತ್ರ ಆಯ್ತು. ಆ ಚಿತ್ರದಲ್ಲಿ ನಮ್ಮ ಮಣ್ಣಿನ ಕ್ರೀಡೆ ಖೋ ಖೋ ಸುತ್ತ ಹೆಣೆಯಲಾಗಿತ್ತು. ಹೀಗಾಗಿ ಅದೊಂದು ಸವಾಲು ಇತ್ತು. ಆದರೆ ಜನರು ನಮ್ಮ ಕೈ ಬಿಡಲಿಲ್ಲ. ಆ ನಂತರ ಬಂದಿದ್ದು ''ಕಾಟೇರ''. ತರುಣ್ ಸುಧೀರ್ ಅವರ ನಿರ್ದೇಶನದ ಆ ಚಿತ್ರಕ್ಕೆ ಕಥೆಗಾರನಾಗಿ ಜಡೇಶ್ ನನ್ನನ್ನು ಕರೆದೊಯ್ದರು. ಆ ಚಿತ್ರ ಮೈಲಿಗಲ್ಲಾಯ್ತು. ಈಗ ''ಲ್ಯಾಂಡ್‌ ಲಾರ್ಡ್'' ಸರದಿ. ಅದೇ ಕಥೆಗಾರ ಮತ್ತೆ ಈ ನೆಲದ ಕಥೆಯನ್ನೇ ಹೆಣೆದಿದ್ದಾರೆ. ತುಂಬಾನೇ ಬಲವಾದ ಕಥಾವಸ್ತು ಹೊಂದಿರುವ ಚಿತ್ರ ಇದು. 70-80ರ ದಶಕದಲ್ಲಿ ಹಳ್ಳಿಗಳಲ್ಲಿ ಅಕ್ಷರ ಎಷ್ಟು ಮುಖ್ಯವಾಗಿತ್ತು..? ಕಾನೂನು ಸಮರ ಹೇಗಿತ್ತು..? ಹಕ್ಕುಗಳಿಗಾಗಿ ಆಗ ಕುರಿಗಳಂತೆ ಬದುಕುತ್ತಿದ್ದ ಜನ ಹಕ್ಕುಗಳಿಗಾಗಿ ಹೇಗೆ ಸಿಡಿದೆದ್ದರು..? ಎನ್ನುವ ಹಿನ್ನೆಲೆಯಲ್ಲಿ ಸಾಗುವ ಚಿತ್ರ ಇದು'' ಎನ್ನುತ್ತಾರೆ ಮಾಸ್ತಿ.

filmibeat-exclusive-your-thumb-doesnt-make-us-equal-masthi-on-the-fiery-dialogues-of-landlord

ತಂತ್ರಜ್ಞರ ಬಗ್ಗೆ ಮತ್ತು ಕಲಾವಿದರ ಬಗ್ಗೆ

''ಕಲಾ ವಿಭಾಗ ಇರಬಹುದು, ದೇಶ ತಿರುಗಿ ನೋಡುವಂತೆ ಮಾಡಿದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತ ಇರಬಹುದು, ಸಂಭಾಷಣೆ ನಾನು ಬರೆದಿದೀನಿ. ತುಂಬಾ ಚೆನ್ನಾಗಿದೆ. ಇನ್ನೂ ಕಲಾವಿದರ ವಿಚಾರಕ್ಕೆ ಬಂದರೆ ಎಲ್ಲರೂ ಜಿದ್ದಿಗೆ ಬಿದ್ದಂತೆ ಅಭಿನಯಿಸಿದ್ದಾರೆ. ರಚಿತಾ ರಾಮ್ ಅವರದ್ದು ಸಂಪೂರ್ಣ ಡಿಗ್ಲ್ಯಾಮರಸ್ ಪಾತ್ರ. ರಾಜ್ ಬಿ ಶೆಟ್ಟಿ ಅವರದ್ದು ಖಳನಾಯಕನ ಪಾತ್ರ. ವಿಜಿ ಮತ್ತು ಅವರ ಮಗಳು ರಿತನ್ಯ ಚಿತ್ರದಲ್ಲಿ ತಂದೆ ಮಗಳಾಗಿಯೇ ಅಭಿನಯಿಸಿದ್ದಾರೆ. ಇವರ ಜೊತೆ ಹೊಸ ಕಲಾವಿದರ ದೊಡ್ಡ ದಂಡೇ ಇದೆ. ರಾಕೇಶ್ ಅಡಿಗ, ಡೇರ್ ಡೆವಿಲ್ ಮುಸ್ತಫಾದ ಶಿಶಿರ್ ಬೈಕಾಡಿ, ಅಭಿ, ಹೀಗೆ ತುಂಬಾ ಒಳ್ಳೊಳ್ಳೆ ಕಲಾವಿದರು ಚಿತ್ರದಲ್ಲಿದ್ದಾರೆ. ಜಡೇಶ್ ಅವರು ಇಲ್ಲಿ ರಂಗಭೂಮಿ ಪ್ರತಿಭೆಗಳನ್ನು ಕೂಡ ಸೇರಿಸಿದ್ದಾರೆ. ಇವರೆಲ್ಲ ಈ ಪಾತ್ರ ನನ್ನದು ಈ ಪಾತ್ರ ನಿನ್ನದು ಅಂತ ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ್ದಾರೆ'' ಎಂದು ಮಾಸ್ತಿ ಹೇಳಿದ್ದಾರೆ.

''ಲ್ಯಾಂಡ್‌ ಲಾರ್ಡ್‌''ನಲ್ಲಿ ನಿಮಗೆ ಎದುರಾದ ಸವಾಲು..?

''ಲ್ಯಾಂಡ್‌ ಲಾರ್ಡ್'' ಈ ನೆಲದ ಕಥೆ. ಈ ತರಹದ ಚಿತ್ರಗಳು ಈ ಕಾಲಘಟ್ಟಕ್ಕೆ ಬೇಕು. ಇನ್ನು ''ಭೀಮ''.. ''ಸಲಗ''.. ''ಟಗರು''.. ಇವೆಲ್ಲ ಬರೆದಾಗ ನಮ್ಮ ನಡುವೆ ನಡೆಯುವ ಘಟನೆಗಳಿಗೆ ನಾನು ಸಂಭಾಷಣೆ ಬರೆದಿದ್ದೆ, ಆದರೆ ಈ ಹೋರಾಟ ಮತ್ತು ಇಲ್ಲಿರುವ ದಮನಿರತರ - ಅಧಿಕಾರ ಹಾಗೂ ಹಣವಂತರ ಸಂಘರ್ವವನ್ನು ನಾವು ನೋಡಿಲ್ಲ. ಇದನ್ನು ಓದಿ, ಕೇಳಿ ಅನುಭವಸ್ಥರ ಮಾತುಗಳನ್ನೇ ಇಲ್ಲಿ ಡೈಲಾಗ್ ರೂಪದಲ್ಲಿ ಬರೆಯುವುದು ತುಂಬಾನೇ ಸವಾಲು. ಹೀಗಾಗಿ ಬರವಣಿಗೆಯಲ್ಲಿ ಹೆಚ್ಚಿನ ಸಮಯ ಹಿಡಿಯಿತು. ಬರೋಬ್ಬರಿ 3 ತಿಂಗಳಾಯ್ತು ಚಿತ್ರದ ಸಂಭಾಷಣೆಗೆ. ಯಾಕೆಂದರೆ ಆ ಮಾತುಗಳು ಎಲ್ಲ ಸುಲಭ ಇರಲಿಲ್ಲ. ಅದಕ್ಕೆ ಅದ್ರದ್ದೇ ಆದ ಅಧ್ಯಯನ ಮಾಡಬೇಕಿತ್ತು. ಆಗಿನ ಪ್ರತಿಯೊಂದು ಚಟುವಟಿಕೆಗಳು ಹೇಗಿದ್ದವು. ಅವರ ಪದ್ದತಿಗಳು ಹೇಗಿದ್ದವು. ಆಚರಣೆಗಳು ಹೇಗಿದ್ದವು. ನಡುವಳಿಕೆ ಹೇಗಿದ್ದವು. ಇವೆಲ್ಲವನ್ನೂ ಹೆಕ್ಕಿ ತೆಗೆದು ಸಂಭಾಷಣೆ ಬರೆಯಬೇಕಿತ್ತು. ನಿರ್ದೇಶಕರ ಜೊತೆ ತಿಂಗಳಾನುಗಟ್ಟಲೆ ಕುಂತು ಈ ಚಿತ್ರಕ್ಕೆ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ'' ಎನ್ನುವುದು ಮಾಸ್ತಿ ಅವರ ಮನದ ಮಾತು.

ದುನಿಯಾ ವಿಜಿ ಬಾಯಲ್ಲಿ ಬಂದ ನಿಮ್ಮ ಡೈಲಾಗ್‌ಗೆ ಬ್ಲಾಕ್‌ಬಸ್ಟರ್ ಫಲಿತಾಂಶ ಸಿಕ್ಕಿದೆ.

''ಭೀಮ''.. ''ಸಲಗ'' ನಂತರ ದುನಿಯಾ ವಿಜಿ ಅವರ ಜೊತೆ ನಾನು ಮಾಡಿರುವ ಮೂರನೇ ಸಿನಿಮಾ ಇದು. ಒಬ್ಬ ಬರಹಗಾರನಿಗೆ ಪ್ರತಿಭೆ ಇದ್ದವರು ಈ ಪಾತ್ರಗಳನ್ನು ನಿರ್ವಹಿಸುತ್ತಾರೆ ಎಂದಾಗ ಆ ಪೆನ್ನಿನ ತುದಿ ಇನ್ನೂ ಸ್ವಲ್ಪ ಮೊನಚಾಗುತ್ತೆ. ಹೊಸಬರು ಬಂದಾಗ ಅಥವಾ ಹೊಸ ಕಲಾವಿದರಿದ್ದಾಗ ಈ ಡೈಲಾಗ್‌ನ ಇವರು ನಮಗೆ ಬೇಕಾದಂತೆ ಹೇಳ್ತಾರಾ..? ಅನ್ನುವ ಅನುಮಾನ ಇರುತ್ತೆ. ಆದರೆ ದುನಿಯಾ ವಿಜಿ ಅವರ ತರಹದ ವ್ಯಕ್ತಿಗಳು ಈ ರೀತಿಯ ಪಾತ್ರ ಮಾಡ್ತಿದ್ದಾರೆ ಎಂದಾಗ ಏನು ಬೇಕಾದರೂ ನಾವು ಬರೆಯಬಹುದು. ಚೌಕಟ್ಟಿನಲ್ಲಿ ಬರೆದರೂ ಕೂಡ ಅವರು ಅದನ್ನು ಪಾಲಿಶ್ ಮಾಡ್ತಾರೆ, ಪಾತ್ರಕ್ಕೆ ಜೀವ ತುಂಬುವರು ಸಂಭಾಷಣೆಗೆ ಜೀವ ತುಂಬಲ್ವಾ ? ಹೀಗಾಗಿ ನಮಗೆ ಖಾತ್ರಿ ಇರುತ್ತೆ. ಈ ಬಾರಿಯೂ ಕೂಡ ವಿಜಿ ತಮ್ಮ ಶ್ರಮ ಮತ್ತು ಅನುಭವ ಧಾರೆಯೆರೆದಿದ್ದಾರೆ. ಈ ಸಲ ಕೂಡ ಗೆಲ್ಲುವ ವಿಶ್ವಾಸ ಇದೆ'' ಎನ್ನುವುದು ಮಾಸ್ತಿ ಅವರ ಅಂಬೋಣ.

''ಲ್ಯಾಂಡ್‌ ಲಾರ್ಡ್‌'' ಮತ್ತೊಂದು ''ಕಾಟೇರ'' ಆಗುತ್ತಾ..?

''ಎರಡು ಚಿತ್ರಕ್ಕೂ ಹೋಲಿಕೆ ಮಾಡಲು ಸಾಧ್ಯ ಇಲ್ಲ. ಯಾಕೆಂದರೆ ''ಕಾಟೇರ''ದಲ್ಲಿ ನಾವು ಹೇಳಿದ್ದನ್ನು ಹೊರತು ಪಡಿಸಿ ಇಲ್ಲಿ ಬೇರೆಯದ್ದೇ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ಆ ನೆಲಗಟ್ಟು, ಆ ಕಾಲಘಟ್ಟ, ಆ ಹಳ್ಳಿಯ ವಾತಾವರಣ, ಇವೆಲ್ಲವೂ ನೋಡಿ ''ಕಾಟೇರ''ದಂತೆಯೇ ಅನಿಸಿದರೂ ಕೂಡ ಇಲ್ಲಿ ಕಥೆ ಬೇರೆಯೇ ಇದೆ. ಕಥೆಗೆ ತಕ್ಕಂತೆ ದುನಿಯಾ ವಿಜಯ್ ಮತ್ತು ರಾಜ್ ಬಿ ಶೆಟ್ಟಿ ಅವರು ತಮ್ಮ ತನುಮನ ಅರ್ಪಿಸಿದ್ದಾರೆ. ಜೀವ ತುಂಬಿದ್ದಾರೆ. ನ್ಯಾಯ ಒದಗಿಸಿದ್ದಾರೆ'' ಎನ್ನುತ್ತಾರೆ ಮಾಸ್ತಿ.

filmibeat-exclusive-your-thumb-doesnt-make-us-equal-masthi-on-the-fiery-dialogues-of-landlord

ರಿತನ್ಯ ಈ ಚಿತ್ರಕ್ಕೆ ಆಯ್ಕೆಯಾಗಿದ್ಹೇಗೆ ? ಅವರ ಬಗ್ಗೆ ?

''ಈ ಚಿತ್ರದ ನಾಯಕ ಯಾರು ಅಂದರೆ ಅದು ರಿತನ್ಯ. ಯಾಕೆಂದರೆ ರಿತನ್ಯ ಅವರದ್ದೇ ಇಲ್ಲಿ ಪ್ರಮುಖ ಪಾತ್ರ. ಅವರ ಅದೃಷ್ಟ ಏನಂದರೆ ಅವರ ಮೊದಲ ಚಿತ್ರದಲ್ಲಿಯೇ ಅವರು ಇಲ್ಲಿ ಕೇಂದ್ರ ಬಿಂದು. ಇಡೀ ಚಿತ್ರದ ಕಥೆ ಇವರ ಪಾತ್ರದ ಸುತ್ತವೇ ಸುತ್ತುತ್ತೆ. ಕಥೆ ಹೇಳುವಾಗಲೇ ದುನಿಯಾ ವಿಜಯ್ ಅವರಿಗೆ ಜಡೇಶ್ ಅವರು ಈ ಪಾತ್ರ ತುಂಬಾ ಮುಖ್ಯ ಅಂತ ಹೇಳಿದ್ದರು. ಅದೇ ಸಮಯಕ್ಕೆ ವಿಜಿ ಅವರು ಕೂಡ ತಮ್ಮ ಮಗಳನ್ನು ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯಿಸಬೇಕು ಎಂದುಕೊಂಡಿದ್ದರು. ಆ ಸಮಯದಲ್ಲಿ ಜಡೇಶ್ ಕಥೆ ಹೇಳಿದಾಗ ನಿಮ್ಮ ಪಾತ್ರಕ್ಕೆ ನನ್ನ ಮಗಳು ಸರಿ ಹೊಂದುತ್ತಾಳಾ ಎಂದು ಕೇಳಿದರು. ಜಡೇಶ್ ನೂರಕ್ಕೆ ನೂರು ಒಪ್ಪುತ್ತಾರೆ ಎಂದು ಹೇಳಿದರು. ಹೀಗೆ ರಿತನ್ಯ ಬಂದರು. ಇನ್ನೂ ರಿತನ್ಯ ಕೂಡ ತುಂಬಾನೇ ರಿಹರ್ಸಲ್ ಮಾಡಿದ್ದಾರೆ. ಪಾತ್ರದಲ್ಲಿ ತಲ್ಲೀನರಾಗಿ ಅಭಿನಯಿಸಿದ್ದಾರೆ'' ಎಂದು ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಮಾಸ್ತಿ ಹೇಳಿದ್ದಾರೆ.

ಚಿತ್ರದಲ್ಲಿನ ಕೆಲ ಡೈಲಾಗ್ಸ್‌ಗಳನ್ನು ಹೇಳುವುದಾದರೆ ..?

* ನಾವೆಲ್ಲರೂ ಸಮಾನರು ಅಂತ ತೋರಿಸಿಕೊಳ್ಳೋಕೆ ಹೋದ ಕೈಬೆರಳುಗಳೇ ಒಂದು ಸಮ ಇರಲ್ಲ. ಅಂತಹದ್ದರಲ್ಲಿ ನಿನ್ನ ಹೆಬ್ಬೆರಳು ನಮ್ಮ ಸಮ ಬರಲು ನೋಡುತ್ತೆ ಅಂದರೆ ಆ ಹೆಬ್ಬರಳು ನನಗೆ ಬೇಕು''

* ಸ್ವಾಭಿಮಾನಕ್ಕೆ ತಲೆ ಬಗ್ಗುವುದು ನನ್ನ ರಕ್ತದಲ್ಲೇ ಇದೆ. ಆದರೆ ನಿಮ್ಮ ದುರಂಹಕಾರ ತಲೆ ಬಾಗುವುದು ನನ್ನ ಬೆವರಿನ ಹನಿಯಲ್ಲೂ ಇಲ್ಲ''

* ಕಾಪಾಡುವ ಆ ದ್ಯಾವ್ರೇ ಆಯುಧ ಹಿಡ್ಕೊಂಡು ನಿಂತಾವ್ನೇ, ಇನ್ನೂ ಹೋರಾಡುವಾಗ ನಾವು ಹಿಡಿಯದೇ ಇದ್ದರೆ ಹೇಗೆ ?

*ವ್ಯವಸಾಯ ಮಳೆ ಬೆಳೆ ಪ್ರಕಾರ ನಡಿತಿದೆ, ಪಾಪ ಪುಣ್ಯ ಹಣೆಬರಹದ ಪ್ರಕಾರ ನಡಿತಿದೆ, ಎಲ್ಲ ಅದರ ಪ್ರಕಾರ ನಡೆಯುವಾಗ ನಿಂದ್ಯಾವುದೋ ಇದು ಕಾನೂನು ಪ್ರಕಾರ

* ಬದಲಾಗಿ ಇಲ್ಲಾ ಬದಲಾಯಿಸ್ತಾನೆ

''ಹೀಗೆ ಈ ರೀತಿಯ ಚುಟುಕಾದ ಮೊನಚಾದ ಸಂಭಾಷಣೆಗಳು ಚಿತ್ರದಲ್ಲಿವೆ. ಕಥೆಗೆ ಪೂರಕವಾಗಿ ಬರೆಯಲಾಗಿದೆ. ಯಾವುದೇ ಪಾತ್ರ ತಗೊಂಡರು ಮಾತು ಕಥೆಯ ಆಚೆ ಹೋಗಿಲ್ಲ. ಬದಲಿಗೆ ಕಥೆಯ ಒಳಗಡೆ ಇದೆ. ಚಿತ್ರದಲ್ಲಿ ಒಂದು ಹೋರಾಟ ಇದೆ ಒಂದು ಕೂಗು ಇದೆ. ಮತ್ತೆ ಇವೆಲ್ಲವನ್ನೂ ಮನರಂಜನಾತ್ಮಕವಾಗಿ ಹೇಳಿರುವ ಚಿತ್ರ ಇದು. ಪ್ರತಿಯೊಂದು ದೃಶ್ಯವನ್ನು ಮನರಂಜನೆಯನ್ನು ಗಮನದಲ್ಲಿಟ್ಕೊಂಡೆ ಮಾಡಿದೀವಿ, ತುಂಬಾ ಚೆನ್ನಾಗಿ ಬಂದಿದೆ ಸಿನಿಮಾ. ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎನ್ನುವ ನಂಬಿಕೆ ಇದೆ'' ಎಂದು ಮಾಸ್ತಿ ಹೇಳಿದ್ದಾರೆ.

Take a Poll

ಲ್ಯಾಂಡ್‌ಲಾರ್ಡ್‌ ಬಗ್ಗೆ ನಿಮ್ಮ ನಿರೀಕ್ಷೆಗಳು ?

''ನಾವು ಈ ಹಿಂದೆ ರೂಲರ್ ಎನ್ನುವ ಟೀಸರ್ ಬಿಡುಗಡೆ ಮಾಡಿದ್ವಿ. ಆ ನಂತರ ಸರ್‌ವೈವರ್ ಎನ್ನುವ ಟೀಸರ್ ಬಿಡುಗಡೆ ಮಾಡಿದ್ವಿ. ಎರಡಕ್ಕೂ ಒಳ್ಳೆಯ ಪ್ರಶಂಸೆ ಸಿಕ್ಕಿತ್ತು. ಮೊನ್ನೆ ಮೊನ್ನೆ ಟ್ರೇಲರ್ ಬಿಡುಗಡೆ ಮಾಡಿದ ನಂತರ ಈ ಪ್ರಶಂಸೆ ದುಪ್ಪಟ್ಟಾಯ್ತು. ಈ ಚಿತ್ರ ಬೇರೆಯದ್ದೇ ಕಥೆ ಹೇಳುತ್ತಿದೆ ಎನ್ನುವ ಭಾವನೆ ಜನರಲ್ಲಿ ಬಂತು. ನಮಗೂ ಕೂಡ ಜನರಿಂದ ಅದೇ ರೀತಿಯ ಪ್ರತಿಕ್ರಿಯೆ ಸಿಕ್ತು. ಖಂಡಿತ ನಿರೀಕ್ಷೆಯಂತೂ ತುಂಬಾ ಹೆಚ್ಚಿದೆ. ಕನ್ನಡಿಗರು ಈ ನೆಲದ ಕಥೆಯನ್ನು ನೋಡಿ ಹರಸಿ ಹಾರೈಸುತ್ತಾರೆ ಎನ್ನುವ ವಿಶ್ವಾಸ ಇದೆ'' ಎನ್ನುವುದು ಮಾಸ್ತಿ ಅವರ ಮನದ ಮಾತು.

More from Filmibeat

English summary
After the massive success of Katera, writer Masthi returns with another gritty land epic. In this Filmibeat Exclusive, Masthi decodes the sharp dialogues of Duniya Vijay’s 'Landlord', Rithanya’s debut, and the intense battle for self-respect in rural Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X