ನಮಗೆ ಸಿಗೋದೇ 4 ರೂಪಾಯಿ ; ಓಟಿಟಿಯ ಕಹಿಸತ್ಯ - 'ತೀರ್ಥರೂಪ ತಂದೆಯವರಿಗೆ' ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಸಂದರ್ಶನ
ಭಾರತದಲ್ಲಿ ಡಿಜಿಟಲ್ ವೇದಿಕೆ ಜನ್ಮವೆತ್ತಿ ಹದಿನೈದು-ಹದಿನಾರು ವರ್ಷಗಳಾಗಿವೆ. 2008ರಲ್ಲಿ ಮೊದಲ ಬಾರಿ ರಿಲಯನ್ಸ್ ಬಿಗ್‌ಫ್ಲಿಕ್ಸ್ ಎಂಬ ಹೆಸರಿನಲ್ಲಿ ಓಟಿಟಿ ಲೋಕಕ್ಕೆ ಮುನ್ನುಡಿ ಬರೆಯಿತು. ಆ ನಂತರ ನೆಕ್ಸ್ ಜಿಟಿವಿ, 2013ರಲ್ಲಿ ಡಿಟ್ಟೋ, 2015ರಲ್ಲಿ ಹಾಟ್ ಸ್ಟಾರ್ ಆ ನಂತರ ಅಮೆಜಾನ್ ಹೀಗೆ ಕೆಲವೇ ವರ್ಷಗಳ ಅಂತರದಲ್ಲಿ ಎಣಿಕೆಗೆ ನಿಲುಕದ ಸಂಖ್ಯೆಯಲ್ಲಿ ಓಟಿಟಿ ವೇದಿಕೆಗಳು ಹುಟ್ಟಿಕೊಂಡವು. ಕೊರೊನಾ ಕಾಲಘಟ್ಟ ಡಿಜಿಟಲ್ ಲೋಕಕ್ಕೆ ಅವಕಾಶದ ದಿಡ್ಡಿ ಬಾಗಿಲಾಯಿತು.
ಮಿಲೇನಿಯಲ್ಸ್ ಅಂದರೆ 18 ರಿಂದ 35ರ ವಯೋಮಾನದವರನ್ನೇ ಗುರಿಯಾನ್ನಾಗಿಸಿಕೊಂಡು ದಿನಗಳೆದಂತೆ ವೇಗವಾಗಿ ಬೆಳೆದ ಈ ಓಟಿಟಿ ವೇದಿಕೆಯಲ್ಲಿ ಹಲವರು ತಮ್ಮ ವರಸೆಯನ್ನು ಈಗ ಬದಲಿಸಿದ್ದಾರೆ. ಮೊದಲೆಲ್ಲ ಮುಗಿ ಬಿದ್ದು ಚಿತ್ರಗಳನ್ನು ಖರೀದಿ ಮಾಡುತ್ತಿದ್ದವರು ಈಗ ಕ್ಯಾರೇ ಎನ್ನುತ್ತಿಲ್ಲ.

ಅದರಲ್ಲಿಯೂ ಹೊಸಬರ ಕಥೆ-ವ್ಯಥೆ ತುಂಬಾ ಶೋಚನಿಯವಾಗಿದೆ. ಸದಭಿರುಚಿ ಚಿತ್ರವನ್ನು ಮಾಡಿ ಪ್ರೇಕ್ಷಕರಿಂದ ಮತ್ತು ವಿಮರ್ಷಕರಿಂದ ಮೆಚ್ಚುಗೆ ಪಡೆದರೂ ಕೂಡ ಓಟಿಟಿಯವರು ಬೆಲೆ ಕೊಡುತ್ತಿಲ್ಲ. ಒಳ್ಳೆಯ ಮೊತ್ತ ನೀಡಿ ಚಿತ್ರವನ್ನು ಖರೀದಿ ಮಾಡುತ್ತಿಲ್ಲ. ಬದಲಿಗೆ ಪೇ ಪರ್ ವ್ಯೂವ್ ಕಾನ್ಸೆಪ್ಟ್‌ನಡಿ ಚಿತ್ರಗಳನ್ನು ತಮ್ಮ ವೇದಿಕೆಯಲ್ಲಿ ಈ ಓಟಿಟಿಯವರು ಪ್ರಸಾರ ಮಾಡುತ್ತಿದ್ದಾರೆ.
ಆದರೆ, ಈ ವ್ಯವಸ್ಥೆ ಅಡಿಯಲ್ಲಿಯೇ ಕೊನೆ ಪಕ್ಷ ಒಳ್ಳೆಯ ಹಣವನ್ನಾದರೂ ಕೊಡುತ್ತಾರಾ..? ಅಂದರೆ ಅದು ಇಲ್ಲ. ಅಮೆಜಾನ್ ಅಂತಹ ದೈತ್ಯ ಓಟಿಟಿ ಸಂಸ್ಥೆ ಕನ್ನಡ ಚಿತ್ರವನ್ನು ಪ್ರೇಕ್ಷಕ ಒಂದು ಗಂಟೆ ನಿರಂತರವಾಗಿ ನೋಡಿದರೆ ಆ ಚಿತ್ರದ ನಿರ್ಮಾಪಕರಿಗೆ ಕೇವಲ ನಾಲ್ಕು ರೂಪಾಯಿ ಮಾತ್ರ ಕೊಡುತ್ತಿದೆ. ಎರಡು ಗಂಟೆ ನೋಡಿದರೆ ಕೋಟ್ಯಂತರ ರೂಪಾಯಿ ಹಣ ಹೂಡಿ ಚಿತ್ರ ಮಾಡುವ ನಿರ್ಮಾಪಕರಿಗೆ 8 ರೂಪಾಯಿ ಸಿಗುತ್ತಿದೆ.
ದುರಂತ ಅಂದರೆ ಪ್ಯಾನ್ ಇಂಡಿಯಾ ಎಂಬ ಭ್ರಮೆಯಲ್ಲಿ ತೇಲುತ್ತಿರುವ ಕನ್ನಡ ಚಿತ್ರರಂಗದ ನಾಯಕತ್ವದ ಕೊರತೆಯಿಂದ ನರಳುತ್ತಿದೆ. ಹೀಗಾಗಿ ಚಿತ್ರರಂಗಕ್ಕೆ ಇದ್ಯಾವುದು ಸಮಸ್ಯೆ ಎಂದು ಮನವರಿಕೆಯಾಗುತ್ತಿಲ್ಲ. ಬದಲಿಗೆ ಹಲವರು ತಮ್ಮ ಪಾಡಿಗೆ ತಾವು ವರ್ಷಪೂರ್ತಿ ಕ್ರಿಕೆಟ್, ಬ್ಯಾಡ್ಮಿಂಟನ್ ಲೀಗ್, ಕಬ್ಬಡಿ ಲೀಗ್, ಎಂದು ಬ್ಯುಸಿಯಾಗಿದ್ದಾರೆ. ನೆಮ್ಮದಿಯಿಂದ ಇದ್ದಾರೆ. ಮತ್ತೂ ಕೆಲವರು ಜಡ್ಜ್ ಸ್ಥಾನವನ್ನು ಅಲಂಕರಿಸಿ ಕಿರುತೆರೆಯ ಖಾಯಂ ಸದಸ್ಯರಾಗಿದ್ದಾರೆ.
ಸದ್ಯ ಓಟಿಟಿ ಅವರ ಈ ನಾಲ್ಕು ರೂಪಾಯಿ ಧೋರಣೆಯ ಕುರಿತು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ''ತೀರ್ಥರೂಪ ತಂದೆಯವರಿಗೆ'' ಎಂಬ ಚೆಂದದ ಚಿತ್ರವನ್ನು ಮಾಡಿಯೂ, ಸದ್ಯ ಇದೇ ಅಮೆಜಾನ್‌ನಲ್ಲಿ ನಾಲ್ಕು ರೂಪಾಯಿ ಪಡೆಯುತ್ತಿರುವ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮಾತನಾಡಿದ್ದಾರೆ.
ಹೌದು, ಅಸಲಿಗೆ ಕೆಲ ದಿನಗಳ ಹಿಂದೆಯಷ್ಟೇ ರಾಮೇನಹಳ್ಳಿ ಜಗನ್ನಾಥ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದರು. ನೀವು ''ತೀರ್ಥರೂಪ ತಂದೆಯವರಿಗೆ'' ಚಿತ್ರ ನೋಡುತ್ತಿದ್ದರೆ ದಯಮಾಡಿ ಅಮೆಜಾನ್ ಪ್ರೈಮ್‌ನಲ್ಲಿಯೇ ನೋಡಿ ಎಂದು ಹೇಳಿದ್ದರು. ಒಂದು ಗಂಟೆ ವೀಕ್ಷಿಸಿದರೆ ತಂಡದವರಿಗೆ ಸಿಗೋದು ನಾಲ್ಕು ರೂಪಾಯಿ ಎಂದು ತಮ್ಮ ಮನದ ನೋವು ಹಂಚಿಕೊಂಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ''ಫಿಲ್ಮಿಬೀಟ್ ಕನ್ನಡ'' ರಾಮೇನಹಳ್ಳಿ ಜಗನ್ನಾಥ್ ಅವರನ್ನು ಸಂಪರ್ಕಿಸಿದಾಗ ಕೆಲ ವಿಚಾರಗಳನ್ನು ರಾಮೇನಹಳ್ಳಿ ಜಗನ್ನಾಥ್ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅವರು ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.
ಓಟಿಟಿಯಲ್ಲಿ ಕನ್ನಡ ಚಿತ್ರರಂಗದ ಬೆಲೆ ಕೇವಲ 4 ರೂಪಾಯಿನಾ..?
''ಕನ್ನಡ ಚಿತ್ರಕ್ಕೆ ಈಗಲ್ಲ ಕಳೆದ ಒಂದು ವರ್ಷದಿಂದ ಅಮೆಜಾನ್ ಪ್ರೈಮ್‌ನವರು ನಾಲ್ಕು ರೂಪಾಯಿ ಮಾತ್ರ ಕೊಡ್ತಿದ್ದಾರೆ. ಆದರೆ, ಹೊರ ಜಗತ್ತಿಗೆ ಈ ವಿಚಾರ ಗೊತ್ತಿಲ್ಲ. ಯಾಕೆಂದರೆ ತುಂಬಾ ಜನ ಈ ವಿಷಯವನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ ಅಷ್ಟೇ. ಹೀಗಾಗಿ ಓ ಪ್ರೈಮ್‌ನಲ್ಲಿ ಇದೆ ಅಂದರೆ ಒಳ್ಳೆ ದುಡ್ಡು ಸಿಕ್ಕಿರುತ್ತೆ ಎಂದು ಹಲವರು ಅಂದುಕೊಂಡಿರುತ್ತಾರೆ''.
''ಆದರೆ ವಾಸ್ತವದಲ್ಲಿ ಪರಿಸ್ಥಿತಿ ಬೇರೆಯದ್ದೇ ರೀತಿಯಲ್ಲಿದೆ. ಅಮೆಜಾನ್ ಮಾತ್ರವಲ್ಲ ಬೇರೆಯವರು ಕೂಡ ಕನ್ನಡ ಚಿತ್ರಗಳನ್ನು ಖರೀದಿ ಮಾಡುತ್ತಿಲ್ಲ. ಬದಲಿಗೆ ''ಪೇ ಪರ್ ವ್ಯೂವ್'' ಮಾಡೆಲ್ ಮೂಲಕವೇ ಎಲ್ಲರು
ಪ್ರಸಾರ ಮಾಡುತ್ತಿದ್ದಾರೆ. ಇನ್ನೂ ಹಿಂದೆ ನನ್ನದೇ ಚಿತ್ರ ''ಹೊಂದಿಸಿ ಬರೆಯಿರಿ'' ಚಿತ್ರ ಅಮೆಜಾನ್‌ನಲ್ಲಿ ಬಂದಾಗ ಪ್ರೇಕ್ಷಕರಿಂದ ನಮಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತ್ತು. 100 ಮಿಲಿಯನ್ ನಿಮಿಷ ವೀಕ್ಷಣೆ ಕಂಡಿತ್ತು. ಅದರ ಡೇಟಾ ಆಧಾರದ ಮೇಲೆ ಕೂಡ ವ್ಯಾಪಾರ ಮಾಡಲು ಇಲ್ಲಿ ಅವಕಾಶ ಇಲ್ಲ. ಅದು ಲೆಕ್ಕಕ್ಕೆ ಬರುವುದೂ ಇಲ್ಲ. ಚಿತ್ರಮಂದಿರದಲ್ಲಿ ಏನಾದರೂ ಗೆದ್ದಿದ್ದರೆ ಮಾತ್ರ ಇಲ್ಲಿ ಹಣಕಾಸಿನ ಮಾತು ಬರುತ್ತಷ್ಟೇ. ಇಲ್ಲದೇ ಇದ್ದರೆ ಹೇಗಿದ್ದರು ಬಂದೇ ಬರುತ್ತಾರೆ. ನಮ್ಮ ಷರತ್ತುಗಳನ್ನೆಲ್ಲ ಒಪ್ಪಿಕೊಂಡು ಕೊಡ್ತಾರೆ ಎನ್ನುವುದು ಅವರಿಗೆ ಚೆನ್ನಾಗಿಯೇ ಗೊತ್ತು'' ಎಂದು ರಾಮೇನಹಳ್ಳಿ ಜಗನ್ನಾಥ ಹೇಳಿದ್ದಾರೆ.
ಸ್ಯಾಟ್‌ಲೈಟ್ ಹಕ್ಕು ತಗೊಳ್ತಿದ್ದಾರಾ.?
''ಮೊದಲಾದರೆ ಕನ್ನಡದ ವಾಹಿನಿಗಳು ಕನ್ನಡ ಚಿತ್ರಗಳ ಪ್ರಸಾರದ ಹಕ್ಕುಗಳನ್ನು ಒಳ್ಳೆಯ ಮೊತ್ತಕ್ಕೆ ಖರೀದಿ ಮಾಡುತ್ತಿದ್ದರು. ಆದರೆ ಈಗ ಸ್ಯಾಟ್‌ಲೈಟ್ ಹಕ್ಕನ್ನು ಕೂಡ ಯಾರು ಕೇಳೋರು ಇಲ್ಲ. ಕನ್ನಡ ಕಿರುತೆರೆಯಲ್ಲಿ ಸದ್ಯ ಹೇಗಾಗಿದೆ ಅಂದರೆ ಅವರ ರಿಯಾಲಿಟಿ ಶೋಗಳಲ್ಲಿ ಯಾರು ಇರ್‍ತಾರೆ, ಅವರ ದೊಡ್ಡ ಚಿತ್ರಕ್ಕೆ ಮಾತ್ರ ಮಣೆ ಹಾಕಲಾಗ್ತಿದೆ''.

''ಅವರ ಚಿತ್ರ ಸೋಲಲಿ.. ಗೆಲ್ಲಲಿ.. ಅದು ಲೆಕ್ಕಕ್ಕೆ ಬರಲ್ಲ. ಬದಲಿಗೆ ಒಳ್ಳೆಯ ಮೊತ್ತಕ್ಕೆ ಅವರ ಚಿತ್ರಗಳನ್ನು ಮಾತ್ರ ಖರೀದಿ ಮಾಡ್ತಿದ್ಧಾರೆ. ಆದರೆ, ಚಿಕ್ಕ ಸಿನಿಮಾಗಳು ಅಥವಾ ಒಳ್ಳೆಯ ಕಥಾಹಂದರ ಹೊಂದಿರುವ ಚಿತ್ರಗಳಿಗೆ ಇಲ್ಲಿ ಬೆಂಬಲ ಸಿಕ್ತಿಲ್ಲ. ಹಾಗಂಥ ಅವರ ಬಳಿ ಬಜೆಟ್ ಇಲ್ಲ ಅಂತ ಇಲ್ಲ. ಬಜೆಟ್ ಇರುತ್ತೆ. ಆದರೆ ಆ ಬಜೆಟ್‌ನ ಅವರು ತಮಗೆ ಬೇಕಾದವರ ಮೇಲಷ್ಟೇ ಖರ್ಚು ಮಾಡುತ್ತಾರೆ. ಇದೊಂಥರ ಕೊಡು-ಕೊಳ್ಳುವಿಕೆಯಂತಾಗಿದೆ ಇದು ತಪ್ಪು ಎನ್ನುವುದೇ ನನ್ನ ಭಾವನೆ''.
''ವ್ಯಾಪಾರದ ದೃಷ್ಟಿಯಿಂದ ಅವರು ದೊಡ್ಡವರ ಚಿತ್ರಗಳನ್ನೇ ತೆಗೆದುಕೊಳ್ಳಲಿ. ಆದರೆ ಅದರ ನಡುವೆ ಗಮನ ಸೆಳೆದ, ಭರವಸೆ ಮೂಡಿಸಿದ ಹತ್ತು ಸಿನಿಮಾಗಳನ್ನಾದರೂ ವರ್ಷಕ್ಕೆ ಖರೀದಿ ಮಾಡಲಿ ಅನ್ನೋದು ನನ್ನ ಆಶಯ. ಇನ್ನು ಮೊದಲಾದರೆ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣದಿದ್ದರೂ ಆ ಚಿತ್ರ ಟಿವಿ ಮೂಲಕ ಪ್ರೇಕ್ಷಕರನ್ನು ತಲುಪುತ್ತಿತ್ತು. ಓಟಿಟಿ ಮೂಲಕ ಹೃದಯ ಗೆಲ್ಲುತ್ತಿತ್ತು. ಆದರೆ ಈಗ ಟಿವಿ ಬಾಗಿಲು ಸಂಪೂರ್ಣ ಮುಚ್ಚಿದೆ. ಓಟಿಟಿ ಬಾಗಿಲು ಮುಚ್ಚುವ ಹಂತಕ್ಕೆ ಬಂದಿದೆ. ಈಗ ನಮಗೆ ಕೇವಲ ಚಿತ್ರಮಂದಿರ ಮಾತ್ರ ಉಳಿದಿದೆ. ಚಿತ್ರಮಂದಿರದಲ್ಲಿ ಜನ ಬಂದು ನೋಡದಿದ್ದರೆ ಒಳ್ಳೆಯ ಕಥೆ ಇದ್ದರೂ ಕೂಡ ಜನರಿಗೆ ತಲುಪಲಾಗದಂತಹ ಸ್ಥಿತಿಯಲ್ಲಿಗ ನಾವಿದ್ದೇವೆ'' ಎಂದು ತಮ್ಮ ಬೇಸರವನ್ನು ರಾಮೇನಹಳ್ಳಿ ಜಗನ್ನಾಥ ಹೊರ ಹಾಕಿದ್ದಾರೆ.
''ತೀರ್ಥರೂಪ ತಂದೆಯವರಿಗೆ ಸ್ಯಾಟ್‌ಲೈಟ್ ರೈಟ್ಸ್ ಸೇಲ್ ಆಗಿದೆಯಾ?
''ನಿಜಾ ಹೇಳಬೇಕು ಅಂದರೆ ನನ್ನ ''ತೀರ್ಥರೂಪ ತಂದೆಯವರಿಗೆ'' ಚಿತ್ರದ ಸ್ಯಾಟ್‌ಲೈಟ್ ಹಕ್ಕು ಇನ್ನೂ ಮಾರಾಟವಾಗಿಲ್ಲ. ಅಮೆಜಾನ್‌ನಲ್ಲಿ ಪ್ರಸಾರವಾಗುತ್ತಿದ್ದರೂ, ಮೆಚ್ಚುಗೆಯ ಮಾತು ಕೇಳಿ ಬಂದರೂ ಕೂಡ ಯಾರು ನಮ್ಮನ್ನು ಕೇಳಿಲ್ಲ. ನಾವಾಗಿಯೇ ಕೇಳಲು ಹೋದರೆ ನಮ್ಮ ಬಳಿ ಬಜೆಟ್ ಇಲ್ಲ ಎಂದು ಕಾರಣ ಹೇಳ್ತಾರೆ. ಮುಂದೆ ನೋಡೋಣ ಎಂದು ಭರವಸೆ ನೀಡಿ ಕಳುಹಿಸುತ್ತಾರೆ. ಆದರೆ ಚಿತ್ರಮಂದಿರಕ್ಕೆ ಬಂದು ಹದಿನೈದೇ ದಿನಕ್ಕೆ ಬೇರೆ ದೊಡ್ಡ ದೊಡ್ಡ ಚಿತ್ರಗಳು ಟಿವಿಯಲ್ಲಿ ಪ್ರಸಾರವಾದ ಉದಾಹರಣೆಗಳು ಕಣ್ಮುಂದೆಯೇ ಇವೆ. ಒಟ್ನಲ್ಲಿ ಇಲ್ಲಿ ವ್ಯವಸ್ಥೆ ಎಲ್ಲ ಬೇರೆ ತರನೇ ಇದೆ'' ಎಂದಿದ್ದಾರೆ
ಟ್ವೀಟ್ ಮಾಡಿದ್ದೇಕೆ..?
''ನಮ್ಮ ''ಹೊಂದಿಸಿ ಬರೆಯಿರಿ'' ಚಿತ್ರವನ್ನು ಕೂಡ ಪೇ ಪರ್ ವ್ಯೂವ್ ಅಡಿಯಲ್ಲಿಯೇ ಪ್ರಸಾರ ಮಾಡಿದ್ದರೂ ಕೂಡ ಚಿತ್ರಮಂದಿರಕ್ಕಿಂತ ಹೆಚ್ಚಿನ ಜನ ಓಟಿಟಿಯಲ್ಲಿ ನೋಡಿದ್ದರು. ಓಟಿಟಿ ಮೂಲಕವೇ ನಮಗೆ ಹೆಚ್ಚಿನ ಹಣ ಕೂಡ ಬಂದಿತ್ತು. ಆದರೆ ''ತೀರ್ಥರೂಪ ತಂದೆಯವರಿಗೆ'' ಚಿತ್ರದ ಪೈರಸಿ ಕಾಪಿಯನ್ನು ಹಲವರು ನೋಡುತ್ತಿದ್ದಾರೆ. ಪೈರಸಿಯ ಹಲವು ಲಿಂಕ್‌ಗಳು ನನಗೆ ಬಂದ ಹಿನ್ನೆಲೆ ಹೇಗೂ ಜನ ನೋಡ್ತಿದ್ದಾರೆ, ಕೊನೆ ಪಕ್ಷ ಅಮೆಜಾನ್‌ನಲ್ಲಿ ನೋಡಿದರೆ ನಿರ್ಮಾಣ ಸಂಸ್ಥೆಗೆ ಸಹಾಯವಾಗುತ್ತೆ ಎನ್ನುವ ಉದ್ದೇಶದಿಂದ ನಾನು ಟ್ವೀಟ್ ಮಾಡಿದೆ'' ಎನ್ನುವುದು ರಾಮೇನಹಳ್ಳಿ ಜಗನ್ನಾಥ ಅವರ ಮನದ ಮಾತು.
ಬೇರೆ ಓಟಿಟಿಯಲ್ಲಿಯೂ ಇದೆಯಾ 4 ರೂಪಾಯಿ ಸ್ಕೀಮ್ ?
''ನನಗೆ ಗೊತ್ತಿರುವಂತೆ ಅಮೆಜಾನ್ ಮಾತ್ರ ಅಲ್ಲ ಬಹುತೇಕರು ಪೇ ಪರ್ ವ್ಯೂವ್ ಮಾಡೆಲ್‌ಗೆ ಬಂದಿದ್ದಾರೆ. ಉದಾಹರಣೆಗೆ ಜೀ5ನವರು ಕೂಡ ಇದೇ ಫಾರ್ಮುಲಾ ಅನುಸರಿಸುತ್ತಿದ್ದಾರೆ. ಅಲ್ಲಿ ಹೇಗಾಗುತ್ತೆ ಅಂದರೆ ಸ್ಯಾಟ್‌ಲೈಟ್ ಮತ್ತು ಓಟಿಟಿ ಎರಡು ಹಕ್ಕುಗಳನ್ನು ಒಮ್ಮೆಲೆ ಡೀಲ್ ಮಾಡಲಾಗುತ್ತೆ. ಆದರೆ ಹೊಸಬರಿಗೆ ಈ ಭಾಗ್ಯ ಇಲ್ಲ. ಯಾಕೆಂದರೆ ಇಲ್ಲಿಯೂ ಕೂಡ ದೊಡ್ಡ ಚಿತ್ರಕ್ಕೆ ಮೊದಲ ಮತ್ತು ಕೊನೆಯ ಆದ್ಯತೆ. ಉದಾಹರಣೆ ''45'' ಸಿನಿಮಾದ ಎರಡು ಹಕ್ಕುಗಳನ್ನು ಜೀನವರು ಖರೀದಿ ಮಾಡಿದ್ದಾರೆ. ಮಿಕ್ಕಂತೆ ಹೊಸಬರಿಗೆ ಪೇ ಪರ್ ವ್ಯೂವ್ ಇದ್ದೇ ಇದೆ. ಆದರೆ ಅಲ್ಲಿ ಎಷ್ಟು ರೂಪಾಯಿ ಕೊಡ್ತಾರೆ ಎನ್ನುವುದು ನನಗೆ ಗೊತ್ತಿಲ್ಲ'' ಎಂದು ರಾಮೇನಹಳ್ಳಿ ಜಗನ್ನಾಥ ಹೇಳಿದ್ದಾರೆ.
ಇದೆಲ್ಲದಕ್ಕೆ ಪರಿಹಾರವೇನು ?
''ಮುಂಬರುವ ದಿನಗಳಲ್ಲಿ ''ಪೇ ಪರ್ ವ್ಯೂವ್'' ನಿಯಮದಡಿ ನಾಲ್ಕು ರೂಪಾಯಿಂದ ಒಂದು ಅಥವಾ ಎರಡು ರೂಪಾಯಿಗೆ ಓಟಿಟಿಯವರು ಬರುವ ಸಾಧ್ಯತೆ ಇದೆ. ಇನ್ನು ಮೊದಲಾದರೆ ಜಾಹೀರಾತು ಇರಲಿಲ್ಲ. ಆದರೆ ಈಗ ಅಮೆಜಾನ್‌ನಲ್ಲಿ ಜಾಹೀರಾತು ಪ್ರಸಾರವಾಗ್ತಿದೆ. ಹೀಗೆ ಆ ಕಡೆ ದರ ಕುಸಿಯುವ ಭಯ ಇದೆ. ಇನ್ನೊಂದು ಕಡೆ ಸ್ಯಾಟ್‌ಲೈಟ್‌ನ ಬಾಗಿಲು ಮುಚ್ಚಿದೆ. ಈ ಹಿನ್ನೆಲೆ ಈಗ ಗೆದ್ದರೆ ಚಿತ್ರಮಂದಿರದಲ್ಲಿಯೇ ಗೆಲ್ಲಬೇಕು ಎನ್ನುವ ಸವಾಲು ಇದೆ. ಯೂಟ್ಯೂಬ್ ಕೂಡ ಸುಲಭ ಅಲ್ಲ''.
''ಇದಕ್ಕೆ ಪರಿಹಾರ ಅಂದರೆ ಅದಕ್ಕೆ ದೊಡ್ಡವರೇ ಯಾರಾದರೂ ಮುಂದೆ ಬರಬೇಕು, ಮಾತನಾಡಬೇಕು. ತಾವು ಮಾತ್ರ ಬೆಳೆಯುವುದಲ್ಲದೇ, ಚಿತ್ರರಂಗ ಬೆಳೆಯಬೇಕು ಎನ್ನುವ ಉದ್ದೇಶದಿಂದ ಆಲೋಚನೆ ಮಾಡಬೇಕು. ಉದಾಹರಣೆಗೆ ಒಂದು ಕನ್ನಡ ಸಿನಿಮಾ ಇರುತ್ತೆ. ಆ ಚಿತ್ರ ಬೇಕೆ ಬೇಕೆಂದು ಓಟಿಟಿಯವರೇ ಹಠ ಹಿಡಿದಿರುತ್ತಾರೆ''.
''ಆ ಸಮಯದಲ್ಲಿ ಇನ್ನೂ ಕೆಲ ಉತ್ತಮವಾದ ಚಿತ್ರಗಳು ಕನ್ನಡದಲ್ಲಿವೆ. ಈ ಸಿನಿಮಾಗಳನ್ನು ಕೂಡ ನಮ್ಮ ಸಿನಿಮಾ ಜೊತೆ ನೀವು ಖರೀದಿ ಮಾಡಿ ಎಂದು ಮನವಿಯನ್ನು ಮಾಡಬೇಕು, ನಮ್ಮದು ಅಂತ ಹೇಳ್ತಿಲ್ಲ. ಯಾವುದೇ ಸದಭಿರುಚಿ ಚಿತ್ರ ಇರಲಿ ಆ ಚಿತ್ರಕ್ಕೊಂದು ವೇದಿಕೆ ಸಿಗಬೇಕು. ಓಟಿಟಿಯವರ ಜೊತೆ ಮತ್ತು ಮನರಂಜನಾ ವಾಹಿನಿಗಳ ಜೊತೆ ನಿರಂತರವಾದ ಸಭೆಗಳನ್ನು ಮಾಡಬೇಕು, ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳ ಹಿಂದೆ ದೊಡ್ಡವರು ನಿಲ್ಲದಿದ್ದರೆ, ಬೆಂಬಲ ಕೊಡದಿದ್ದರೆ, ಮುಂಬರುವ ದಿನಗಳು ನಿಜಕ್ಕೂ ಇನ್ನೂ ಕಷ್ಟಕರವಾಗಿರಲಿವೆ'' ಎಂದು ತಮ್ಮ ಮನದ ಮಾತುಗಳನ್ನು ''ಫಿಲ್ಮಿಬೀಟ್ ಕನ್ನಡ'' ಜೊತೆ ರಾಮೇನಹಳ್ಳಿ ಜಗನ್ನಾಥ ಹಂಚಿಕೊಂಡಿದ್ದಾರೆ.


Click it and Unblock the Notifications











