'ಅಗ್ನಿಸಾಕ್ಷಿ' ವಿಲನ್ ಈಗ 'ವಸುದೇವ ಕುಟುಂಬ'ದ ಹೀರೋ; ಕಿರುತೆರೆ ತಾರೆ ಭಗತ್ ಹಿನ್ನೆಲೆಯೇನು?

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಗರಿಬೊಮ್ಮನಹಳ್ಳಿಯ ಯುವ ಪ್ರತಿಭೆ ಭಗತ್, ಇಂದು ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ಜನಪ್ರಿಯ ನಟ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿ, ಒಂದು ವರ್ಷ ವೃತ್ತಿಜೀವನದಲ್ಲಿ ತೊಡಗಿಸಿಕೊಂಡಿದ್ದರೂ, ಅವರ ಮನಸ್ಸು ಮಾತ್ರ ಸದಾ ನಟನೆಯತ್ತ ತುಡಿಯುತ್ತಿತ್ತು. ಶಾಲಾ-ಕಾಲೇಜು ದಿನಗಳಿಂದಲೇ ರಂಗಭೂಮಿಯ ಸೆಳೆತಕ್ಕೆ ಒಳಗಾಗಿದ್ದ ಇವರು, ಕನಸನ್ನು ಬೆನ್ನಟ್ಟಿ ಬೆಂಗಳೂರಿಗೆ ಬಂದು ಇಂದು ಮನೆಮಾತಾಗಿದ್ದಾರೆ.

ಪ್ರಸ್ತುತ ಸ್ಟಾರ್ ಸುವರ್ಣದ ಜನಪ್ರಿಯ ಧಾರಾವಾಹಿ 'ವಸುದೇವ ಕುಟುಂಬ'ದಲ್ಲಿ 'ನಿತಿನ್' ಎಂಬ ಗಂಭೀರ ಹಾಗೂ ಜವಾಬ್ದಾರಿಯುತ ಪಾತ್ರದ ಮೂಲಕ ಭಗತ್ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ತೆಲುಗಿನ 'ಅಗ್ನಿಸಾಕ್ಷಿ' ವೆಬ್ ಸೀರೀಸ್‌ನಲ್ಲಿ ಖಳನಾಯಕನಾಗಿ ಅಬ್ಬರಿಸಿರುವ ಇವರು, 'ಸರಸು', 'ಶ್ರೀ ಸಿದ್ದಲಿಂಗೇಶ್ವರ' ಹಾಗೂ 'ದೊರೆಸಾನಿ'ಯಂತಹ ಸೀರಿಯಲ್‌ಗಳ ಮೂಲಕ ತಮ್ಮ ನಟನಾ ಚಾತುರ್ಯವನ್ನು ಸಾಬೀತುಪಡಿಸಿದ್ದಾರೆ. ಒಬ್ಬ ಮಧ್ಯಮ ವರ್ಗದ ಹುಡುಗ ಸಿನಿರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ತನ್ನ ಆಸಕ್ತಿದಾಯಕ ಕಥೆಯನ್ನು ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.

From engineering to entertainment The inspiring journey of Vasudeva Kutumba fame Bhagat

ನೀವು ಮೂಲತಃ ಎಲ್ಲಿಯವರು? ಚಿತ್ರರಂಗಕ್ಕೆ ಅಥವಾ ಕಿರುತೆರೆಗೆ ನಿಮ್ಮ ಎಂಟ್ರಿ ಹೇಗಾಯಿತು?

ಭಗತ್: ನಾನು ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಗರಿಬೊಮ್ಮನಹಳ್ಳಿಯವನು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿ ಒಂದು ವರ್ಷ ಕೆಲಸ ಕೂಡ ಮಾಡಿದ್ದೆ. ಆದರೆ ಶಾಲಾ-ಕಾಲೇಜು ದಿನಗಳಿಂದಲೂ ನನಗೆ ನಾಟಕ ಮತ್ತು ರಂಗಭೂಮಿಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಬೆಂಗಳೂರಿಗೆ ಬಂದು ಆಡಿಷನ್ ಕೊಡುತ್ತಾ ಕಿರುತೆರೆಗೆ ಪ್ರವೇಶ ಮಾಡಿದೆ.

ನೀವು ತೆಲುಗು ಸೀರಿಯಲ್‌ಗಳಲ್ಲೂ ಲೀಡ್ ಆಗಿ ನಟಿಸಿದ್ದೀರಿ, ಎರಡೂ ಕಡೆ ಕಾಣುವ ವ್ಯತ್ಯಾಸವೇನು?

ಭಗತ್: ಕೆಲಸದ ವಿಚಾರದಲ್ಲಿ ಎರಡೂ ಕಡೆ ಯಾವುದೇ ವ್ಯತ್ಯಾಸವಿಲ್ಲ. ಆದರೆ ತಾಂತ್ರಿಕವಾಗಿ ಒಂದು ವ್ಯತ್ಯಾಸವಿದೆ. ತೆಲುಗಿನಲ್ಲಿ 'ಪ್ರಾಪ್ಟಿಂಗ್' ಇರುತ್ತದೆ, ಅಲ್ಲಿ ನಾವು ಮೊದಲೇ ಸ್ಕ್ರಿಪ್ಟ್ ತಯಾರು ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ. ಆದರೆ ಕನ್ನಡದಲ್ಲಿ ಲೈವ್ ರೆಕಾರ್ಡಿಂಗ್ ಇರುವುದರಿಂದ ನಾವೇ ಡೈಲಾಗ್ ಕಲಿತು, ಆ ಭಾವನೆಗಳನ್ನು ಅರ್ಥ ಮಾಡಿಕೊಂಡು ನಟಿಸಬೇಕಾಗುತ್ತದೆ. ಈ ಪ್ರಿಪರೇಶನ್ ಅನ್ನು ನಾನು ತೆಲುಗು ಸೀರಿಯಲ್‌ಗಳಲ್ಲಿ ಮಿಸ್ ಮಾಡಿಕೊಳ್ಳುತ್ತೇನೆ.

From engineering to entertainment The inspiring journey of Vasudeva Kutumba fame Bhagat

ಸೀರಿಯಲ್‌ನಿಂದ ಸಿನಿಮಾಗೆ ಹೋದ ಆ ಅನುಭವ ಹೇಗಿತ್ತು?

ಭಗತ್: ಅದು ತುಂಬಾ ಇಂಟರೆಸ್ಟಿಂಗ್ ಆಗಿತ್ತು. ಆ ಸಮಯದಲ್ಲಿ ನಾನು ಈಗಾಗಲೇ ಮೂರು ಸೀರಿಯಲ್‌ಗಳಲ್ಲಿ ಬ್ಯುಸಿ ಇದ್ದೆ. ಈ ಪಾತ್ರಕ್ಕಾಗಿ ನೂರಾರು ಜನರನ್ನು ಆಡಿಷನ್ ಮಾಡಿದ್ದರೂ ಕೊನೆಗೆ ನನ್ನ ಒಂದು ಸಣ್ಣ ವೀಡಿಯೋ ನೋಡಿ ಆಯ್ಕೆ ಮಾಡಿದರು. ಸಾಯಿ ಸರ್ ಈ ಪಾತ್ರವನ್ನು ವಿಭಿನ್ನವಾಗಿ ಡಿಸೈನ್ ಮಾಡಿದ್ದರು. ವಿಲನ್ ಅಂದ ತಕ್ಷಣ ಕಿರುಚಾಡುವುದಲ್ಲ, ಸೈಲೆಂಟ್ ಆಗಿ ಕಣ್ಣಿನಲ್ಲೇ ಭಯ ಹುಟ್ಟಿಸುವುದು ಹೇಗೆ ಎಂದು ಅವರು ನನಗೆ ಹೇಳಿಕೊಟ್ಟರು.

ನೀವು ನಟಿಸಿದ ಪಾತ್ರಗಳಲ್ಲಿ ನಿಮಗೆ ಹೆಚ್ಚು ಸವಾಲು ಎನಿಸಿದ್ದು ಯಾವುದು?

ಭಗತ್: ನನಗೆ 'ಸರಸು', 'ಶ್ರೀ ಸಿದ್ದಲಿಂಗೇಶ್ವರ' ಹಾಗೂ 'ಸರ್ವಮಂಗಳ ಮಾಂಗಲ್ಯೇ' ಅಂತಹ ಸೀರಿಯಲ್‌ಗಳಲ್ಲಿ ನಟಿಸಿದಾಗ, ಎಲ್ಲಕ್ಕಿಂತ ಹೆಚ್ಚು ಸವಾಲು ಎನಿಸಿದ್ದು ಮೈಥಾಲಜಿ (ಪೌರಾಣಿಕ) ಪಾತ್ರಗಳು. ಯಾಕಂದ್ರೆ ಸಾಧಾರಣ ಸೀರಿಯಲ್‌ಗಳಿಗಿಂತ ಪೌರಾಣಿಕ ಪಾತ್ರಗಳಿಗೆ ವಿಭಿನ್ನವಾದ ದೇಹಭಾಷೆ ಮತ್ತು ಹೆಚ್ಚಿನ ಇನ್ವಾಲ್ವ್ಮೆಂಟ್ ಬೇಕಾಗುತ್ತದೆ.

'ವಸುದೇವ ಕುಟುಂಬ'ದಲ್ಲಿ 'ನಿತಿನ್'ಪಾತ್ರಕ್ಕೆ ಪ್ರತಿಕ್ರಿಯೆ ಹೇಗಿದೆ?

ಭಗತ್: ಜನರಿಂದ ತುಂಬಾ ಅದ್ಭುತವಾದ ಪ್ರತಿಕ್ರಿಯೆ ಸಿಗುತ್ತಿದೆ. ಎಲ್ಲಿಗೆ ಹೋದರೂ 'ನಿತಿನ್' ಅಂತಾನೇ ಗುರುತಿಸುತ್ತಿದ್ದಾರೆ. ಪಾತ್ರದ ಗಾಂಭೀರ್ಯತೆ ಮತ್ತು ಕುಟುಂಬದ ಮೇಲಿರುವ ಜವಾಬ್ದಾರಿಯನ್ನು ಜನರು ಇಷ್ಟಪಡುತ್ತಿದ್ದಾರೆ.

From engineering to entertainment The inspiring journey of Vasudeva Kutumba fame Bhagat

'ವಸುದೇವ ಕುಟುಂಬ' ಶೂಟಿಂಗ್ ಸೆಟ್‌ನಲ್ಲಿ ವಾತಾವರಣ ಹೇಗಿರುತ್ತೆ?

ಭಗತ್: ಶೂಟಿಂಗ್ ಸೆಟ್ ಒಂದು ಎರಡನೇ ಮನೆಯಂತಿದೆ. ಸೀರಿಯಲ್ ಹೆಸರು 'ವಸುದೇವ ಕುಟುಂಬ' ಅಂತಿರುವಂತೆಯೇ, ನಾವೆಲ್ಲರೂ ಒಂದು ಕುಟುಂಬದ ತರಹ ಇರುತ್ತೇವೆ. ಕೆಲಸದ ಒತ್ತಡದ ನಡುವೆಯೂ ತುಂಬಾ ತಮಾಷೆ, ಹರಟೆ ನಡೆಯುತ್ತಿರುತ್ತದೆ.

ನಿಮ್ಮ 'ದೊರೆಸಾನಿ'ಯ ಪಾತ್ರಕ್ಕೂ ಮತ್ತು ಈಗಿನ ನಿತಿನ್ ಪಾತ್ರಕ್ಕೂ ನೀವು ಕಾಣುವ ವ್ಯತ್ಯಾಸವೇನು?

ಭಗತ್: 'ದೊರೆಸಾನಿ' ಪಾತ್ರಕ್ಕೂ ಮತ್ತು ಈಗಿನ 'ನಿತಿನ್' ಪಾತ್ರಕ್ಕೂ ತುಂಬಾ ವ್ಯತ್ಯಾಸವಿದೆ. ನಿತಿನ್ ಪಾತ್ರ ತುಂಬಾ ಮೆಚ್ಯೂರ್ಡ್ ಆಗಿದೆ. ಇಲ್ಲಿ ಸಂಯಮ ಮತ್ತು ಜವಾಬ್ದಾರಿ ಜಾಸ್ತಿ ಇರುತ್ತದೆ.

ನಿಮ್ಮ ಈ ಜರ್ನಿಗೆ ಮನೆಯವರಿಂದ ಸಿಗುತ್ತಿರುವ ಪ್ರೋತ್ಸಾಹ ಹೇಗಿದೆ?

ಭಗತ್: ನನ್ನ ಕುಟುಂಬದ ಪ್ರೋತ್ಸಾಹ ಇಲ್ಲದೆ ನಾನು ಇಲ್ಲಿಗೆ ಬರಲು ಸಾಧ್ಯವಿರಲಿಲ್ಲ. ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದರೂ, ನನ್ನ ಆಸಕ್ತಿಗೆ ಅವರು ಎಂದೂ ಅಡ್ಡಿಪಡಿಸಲಿಲ್ಲ. ಇಂದು ನಾನು ಈ ಮಟ್ಟಕ್ಕೆ ಬಂದಿರುವುದು ಅವರಿಗೆ ತುಂಬಾ ಹೆಮ್ಮೆ ತಂದಿದೆ.

ಸದ್ಯ ಕಿರುತೆರೆಯಲ್ಲಿ ಬ್ಯುಸಿ ಇದ್ದೀರಿ, ಮುಂದೆ ಸಿನಿಮಾಗಳನ್ನು ಮಾಡುವ ಪ್ಲಾನ್ ಇದೆಯಾ?

ಭಗತ್: ಖಂಡಿತವಾಗಿಯೂ ಇದೆ. ಒಬ್ಬ ನಟನಾದ ಮೇಲೆ ಬೆಳ್ಳಿತೆರೆಯಲ್ಲಿ ಮಿಂಚಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಕೆಲವು ಕಥೆಗಳನ್ನು ಕೇಳುತ್ತಿದ್ದೇನೆ, ಒಳ್ಳೆಯ ಸಮಯ ಬಂದಾಗ ಖಂಡಿತ ತಿಳಿಸುತ್ತೇನೆ.

ಕೊನೆಯದಾಗಿ ನಿಮ್ಮನ್ನು ಇಷ್ಟಪಡುವ ಅಭಿಮಾನಿಗಳಿಗೆ ಮತ್ತು 'ವಸುದೇವ ಕುಟುಂಬ'ದ ವೀಕ್ಷಕರಿಗೆ ಏನು ಹೇಳ್ತೀರಾ?

ಭಗತ್: ನಿಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆಯೇ ಇರಲಿ. ನೀವು ನೀಡುವ ಪ್ರತಿಕ್ರಿಯೆ ನಮಗೆ ಇನ್ನು ಹೆಚ್ಚು ಕೆಲಸ ಮಾಡಲು ಸ್ಪೂರ್ತಿ ನೀಡುತ್ತದೆ. 'ವಸುದೇವ ಕುಟುಂಬ' ನೋಡುವುದನ್ನು ಮುಂದುವರಿಸಿ, ನಮಗೆ ಸಪೋರ್ಟ್ ಮಾಡಿ.

More from Filmibeat

English summary
From engineering to entertainment: The inspiring journey of 'Vasudeva Kutumba' fame Bhagat.
Read more about: serial actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X