ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ ಸಂಬಂಧಗಳ ಸುತ್ತ ಸುತ್ತುವ 'ಡಿಎನ್‌ಎ', ಪ್ರಕಾಶರಾಜ್ ಮೇಹು ಪ್ರತಿಕ್ರಿಯೆ

ಕೊರೊನಾದ ನಂತರ ಅನೇಕರು ಓಟಿಟಿಗೆ ಶರಣಾಗಿದ್ದಾರೆ. ಚಿತ್ರಮಂದಿರಗಳಿಂದ ಅಂತರವನ್ನು ಕಾಪಾಡಿಕೊಂಡು ಮನೆಯಲ್ಲಿಯೇ ಕುಳಿತುಕೊಂಡು ತಮ್ಮ ಇಷ್ಟದ ಚಿತ್ರವನ್ನು ಮನೆ ಮಂದಿ ಜೊತೆ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಇದನ್ನು ಅರಿತ ಕೆಲವರು ಕೇವಲ ಓಟಿಟಿಯನ್ನೇ ಗಮನದಲ್ಲಿಟ್ಕೊಂಡು ಚಿತ್ರವನ್ನು ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇಂತಹದ್ದೊಂದು ಬೆಳವಣಿಗೆ ಇನ್ನು ಶುರುವಾಗಿಲ್ಲವಾದರು ಕೂಡ ಚಿತ್ರಮಂದಿರದಲ್ಲಿ ಲಾಭ-ನಷ್ಟ ಏನೇ ಆಗಲಿ ಓಟಿಟಿಯಲ್ಲಿ ನಮ್ಮ ಚಿತ್ರ ಸೇಲಾಗಲಿ ಎಂದುಕೊಂಡೇ ಹಲವರು ಪ್ರಯತ್ನವನ್ನು ಮಾಡುತ್ತಾರೆ.

ಆದರೆ ಅದು ಸುಲಭ ಅಲ್ಲ. ಯಾಕೆಂದರೆ ಕನ್ನಡದ ಚಿತ್ರಗಳು ಅಂದರೆ ನೆಟ್‌ಪ್ಲಿಕ್ಸ್‌ ಸೇರಿ ಹಲವರಿಗೆ ಇನ್ನೂ ಅಸಡ್ಡೆ. ಇನ್ನು ಮೊದಲೆಲ್ಲ ಮುಗಿ ಬಿದ್ದು ಚಿತ್ರಗಳನ್ನು ಖರೀದಿ ಮಾಡುತ್ತಿದ್ದವರು ಈಗ ಚಿತ್ರಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೊಸತಂಡದ ಪ್ರಯತ್ನ, ಪ್ರಯೋಗ, ಅವರ ಶ್ರಮಗಳನ್ನೆಲ್ಲಾ ಕಡೆಗಣಿಸಿ ಸ್ಟಾರ್ ಚಿತ್ರಗಳಿಗೆ ಮಾತ್ರ‌ ಮಣೆ ಹಾಕುತ್ತಾರೆ. ಹೊಸಬರ ಚಿತ್ರಗಳನ್ನು.. ಹೊಸತನದ ಕಥೆಯನ್ನೊಂದಿರುವ ಚಿತ್ರಗಳನ್ನು.. ಅಪ್ಪಿ ತಪ್ಪಿ ತೆಗೆದುಕೊಂಡರು ಕೂಡ ಪ್ರೇಕ್ಷಕರಿಗೆ ''ಪೇ ಅಂಡ್ ವಾಚ್'' ಷರತ್ತು ಹಾಕುತ್ತಾರೆ.

from-theaters-to-trending-prakash-raj-mehus-dna-finds-new-life-on-youtube-gets-70k-views-in-6-d

ಓಟಿಟಿ ಅವರ ಈ ಧೋರಣೆಯಿಂದ ಆಮಿರ್ ಖಾನ್ ಅಂತಹ ಸ್ಟಾರ್‌ಗಳೇ ಬೇಸತ್ತು ತಮ್ಮ ಚಿತ್ರ "ಸಿತಾರೆ ಜಮೀನ್ ಪರ್" ಚಿತ್ರವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಆದರೆ.. ಅದಕ್ಕೆ ನೂರು ರೂಪಾಯಿಯ ಶುಲ್ಕವನ್ನು ವಿಧಿಸಿದ್ದಾರೆ. ವಿಶೇಷ ಅಂದರೆ ಆಮಿರ್ ಖಾನ್ ಅವರಂತೆಯೇ ಈ ಪ್ರಯತ್ನವನ್ನು ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ "ಹೊಂದಿಸಿ ಬರೆಯಿರಿ" ಚಿತ್ರದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಸೇರಿ ಹಲವರು ಮಾಡಿದ್ದಾರೆ. ಈ ಸಾಲಿಗೆ ಈಗ ಲೇಖಕ.. ನಿರ್ದೇಶಕ ಮತ್ತು ಅಣ್ಣಾವ್ರ ಅಭಿಮಾನಿ ಕೂಡ ಆದ ''ಪ್ರಕಾಶರಾಜ್ ಮೇಹು'' ಕೂಡ ಸೇರಿಕೊಂಡಿದ್ದು ತಮ್ಮ ''ಡಿಎನ್‌ಎ'' ಚಿತ್ರವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಯಾವುದೇ ಶುಲ್ಕ ಪಡೆಯದೇ ಉಚಿತವಾಗಿ ನೋಡುವ ಸೌಲಭ್ಯ ಕಲ್ಪಿಸಿದ್ದಾರೆ.

ಹೌದು ''ಡಿಎನ್ಎ'' ಕೊರೋನಾದ ದಿನಗಳಲ್ಲಿ ತೆರೆಗೆ ಬಂದಿದ್ದ ಚಿತ್ರ. ಪ್ರೇಕ್ಷಕರ ಮತ್ತು ವಿಮರ್ಶಕರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗಿದ್ದ ಈ ''ಡಿಎನ್‌ಎ'' ವೇಗಕ್ಕೆ ಕೊರೋನಾ ಅಡ್ಡಗಾಲು ಹಾಕಿತ್ತು. ಇದರಿಂದ ತಂಡಕ್ಕೆ ನಿರಾಸೆ ಕೂಡ ಆಗಿತ್ತು. ಆದರೆ.. ಈಗ ಈ ಚಿತ್ರಕ್ಕೆ ''ಯೂಟ್ಯೂಬ್‌''ನಲ್ಲಿ ಉತ್ತಮವಾದ ಪ್ರತಿಕ್ರಿಯೆ ಸಿಗುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಟೋಟಲ್ ಕನ್ನಡ ಮೀಡಿಯಾ''ಗೆ ಅಪ್ಲೋಡ್ ಆದ ಆರೇ ದಿನದಲ್ಲಿ 73,000 ಕ್ಕೂ ಅಧಿಕ ವೀಕ್ಷಣೆಯನ್ನು ಈ ಚಿತ್ರ ಕಂಡಿದೆ. ಒಂದು ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದು "ಹೃದಯಸ್ಪರ್ಶಿ", "ಭಾವನಾತ್ಮಕವಾದ ಚಿತ್ರ" ಎಂದು ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಇಡೀ ಕುಟುಂಬ ಕೂತು ನೋಡುವ ಸುಂದರ ಸಾಂಸಾರಿಕ ಚಿತ್ರ" ಎಂದು ಹೇಳಿದ್ದಾರೆ.

from-theaters-to-trending-prakash-raj-mehus-dna-finds-new-life-on-youtube-gets-70k-views-in-6-d

ಸಹಜವಾಗಿ ವ್ಯಕ್ತವಾಗುತ್ತಿರುವ ಈ ಅಭಿಪ್ರಾಯಗಳಿಂದ ಚಿತ್ರತಂಡ ಖುಷಿಯಾಗಿದ್ದು ತಮ್ಮ ಖುಷಿಯನ್ನು ನಿರ್ದೇಶಕ ''ಪ್ರಕಾಶರಾಜ್ ಮೇಹು'' ನಿಮ್ಮ ''ಫಿಲ್ಮಿ ಬೀಟ್ ಕನ್ನಡ'' ಜೊತೆ ಹಂಚಿಕೊಂಡಿದ್ಧಾರೆ. ಈ ಕುರಿತು ಮಾತನಾಡಿರುವ ''ಪ್ರಕಾಶರಾಜ್ ಮೇಹು'', ''ಕೊರೋನಾ ಮುನ್ನ ಬಿಡುಗಡೆಯಾಗಿದ್ದರೆ ಡಿಎನ್‌ಎ ಚಿತ್ರಮಂದಿರದಲ್ಲಿಯೇ ಸೂಪರ್ ಹಿಟ್ ಆಗುವಂತಹ ಚಿತ್ರ. ಆದರೆ ನಾವು ಬಿಡುಗಡೆ ಮಾಡಿದಾಗ ಕೊರೋನಾದಿಂದ ಜನ ಹೊರ ಬರುವ ಧೈರ್ಯವನ್ನೇ ಮಾಡಿರಲಿಲ್ಲ. ಆದರೂ ಕೂಡ ಒಳ್ಳೆಯ ಚಿತ್ರಕ್ಕೆ ಒಂದಿಲ್ಲೊಂದು ದಿನ ಸಿಗಬೇಕಾದ ಬೆಲೆ ಸಿಕ್ಕಿಯೇ ಸಿಗುತ್ತೆ ಅನ್ನುವುದಕ್ಕೆ ಸದ್ಯ ಯೂಟ್ಯೂಬ್‌ನಲ್ಲಿ ಸಿಗುತ್ತಿರುವ ಜನ ಬೆಂಬಲವೇ ಸಾಕ್ಷಿ'' ಎಂದು ಹೇಳಿದ್ದಾರೆ. ''ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಎಲ್ಲರು ಕೂಡ ಚಿತ್ರವನ್ನು ಮೆಚ್ಚಿ ಕೊಂಡಾಡಿದ್ದಾರೆ, ಎಲ್ಲರ ಹೃದಯಕ್ಕೆ ಚಿತ್ರ ತಟ್ಟಿದೆ ಇದಕ್ಕಿಂತ ಇನ್ನೇನು ಬೇಕು'' ಎಂದು ಹೇಳಿದ್ದಾರೆ.

ಇನ್ನು ''ಕೊರೋನಾ ನಂತರ ಚಿತ್ರರಂಗದ ವ್ಯಾಪಾರಿ ಧರ್ಮವೇ ಬದಲಾಗಿ ಹೋಯ್ತು, ಮೊದಲಿನ ಕಾಲದಲ್ಲಿ ಚಿತ್ರಕ್ಕೆ ಒಂದು ವಾರ ಪ್ರೇಕ್ಷಕರು ಬರದಿದ್ದರೂ ಕೂಡ ಎರಡನೇ ವಾರ ಬರಬಹುದು ಎನ್ನುವ ಭರವಸೆಯಲ್ಲಿ ಚಿತ್ರದ ಪ್ರದರ್ಶನವನ್ನು ಚಿತ್ರಮಂದಿರದವರು ಮುಂದುವರೆಸುತ್ತಿದ್ದರು. ಆದರೆ ಈಗ ಶುಕ್ರವಾರ ಜನ ಬರದಿದ್ದರೆ ಶನಿವಾರ ಚಿತ್ರವನ್ನು ಎತ್ತಂಗಡಿ ಮಾಡಿ ಬಿಡುತ್ತಾರೆ. ಹೀಗಾಗಿ ಒಳ್ಳೆಯ ಚಿತ್ರ ಬಂದರು ಪ್ರೇಕ್ಷಕರಿಗೆ ಅದು ತಲುಪುವುದಿಲ್ಲ. ನಮ್ಮ ಚಿತ್ರದ ವಿಚಾರದಲ್ಲಿ ಕೂಡ ಹಾಗೇ ಆಯ್ತು, ಆದರೆ ಜನ ಹೇಗೆ ಸ್ವೀಕರಿಸುತ್ತಾರೆ ಎಂದು ನಾನು ಅಂದುಕೊಂಡಿದ್ದೇ ಅದೇ ತರಹದ ಪ್ರೀತಿ ನನಗೆ ಈಗ ಸಿಕ್ಕಿದೆ. ಹೀಗಾಗಿ ವ್ಯಾಪಾರಿಕವಾಗಿ ನಾನು ಸೋತಿರಬಹುದು ಆದರೆ ನಿರ್ದೇಶಕನಾಗಿ ಗೆದ್ದಿರುವ ಖುಷಿ ಇದೆ'' ಎಂದು ಹೇಳಿದ್ದಾರೆ. ''ಇದೇ ಸಮಯದಲ್ಲಿ ಇದೇ ಪ್ರತಿಕ್ರಿಯೆ ಚಿತ್ರಮಂದಿರದಲ್ಲಿ ಕೂಡ ಸಿಕ್ಕಿದ್ದರೆ ನಮ್ಮ ಚಿತ್ರ ಅಮೆಜಾನ್ ಅಂತಹ ವೇದಿಕೆ ತಲುಪಿದ್ದರೆ ನಮ್ಮ ನಿರ್ಮಾಪಕರಿಗೆ ಸ್ವಲ್ಪ ದುಡ್ಡು ಹೆಚ್ಚು ಬರುತ್ತಿತ್ತು ಆದರೆ ಹಾಗಾಗಲಿಲ್ಲ ಎನ್ನುವ ಬೇಸರ ಕೂಡ ಇದೆ'' ಎಂದು ಹೇಳಿದ್ದಾರೆ.

ಇನ್ನು ''ಯೂಟ್ಯೂಬ್'' ಯಾಕೆ ''ಅಮೆಜಾನ್'' ಅಥವಾ ಬೇರೆ ಓಟಿಟಿಯಲ್ಲಿ ಯಾಕೆ ಬಿಡುಗಡೆ ಮಾಡಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ''ಪ್ರಕಾಶರಾಜ್ ಮೇಹು'' ಬಿಡುಗಡೆಯಾದ ಒಂದು ವಾರದ ನಂತರ ''ಅಮೆಜಾನ್‌''ನವರು ''ಪೇ ಪರ್ ವ್ಯೂ'' ಸಿಸ್ಟಮ್‌ನಡಿ ನಮ್ಮ ಚಿತ್ರ ತೆಗೆದುಕೊಳ್ಳಲು ಮುಂದೆ ಬಂದಿದ್ದರು ಆದರೆ ನಮ್ಮ ನಿರ್ಮಾಪಕರಿಗೆ ಬೇರೆ ಸಂಸ್ಥೆಯ ಆಮಿಷವನ್ನೊಡ್ಡಿ ಮುಂಬೈ ಮೂಲದ ವ್ಯಕ್ತಿಯೊಬ್ಬ ಮೋಸ ಮಾಡಿದ, ಮೋಸ ಹೋದ ವಿಚಾರ ಗೊತ್ತಾದ ನಂತರ ನಾವು ಮತ್ತೆ ''ಅಮೆಜಾನ್‌''ನವರ ಬಳಿ ಹೋದ್ವಿಯಾದರು ಆಗ ತಡವಾಗಿತ್ತು, ಆರು ತಿಂಗಳ ಹಳೆಯ ಚಿತ್ರವನ್ನು ಅವರು ತೆಗೆದುಕೊಳ್ಳಲ್ಲ ಎನ್ನುವುದು ನಮಗೆ ಗೊತ್ತಾಯ್ತು'' ಎಂದು ಹೇಳಿದ್ಧಾರೆ.

ಇನ್ನು ''ಯೂಟ್ಯೂಬ್‌''ನಲ್ಲಿ ಹಲವಾರು ಚಾನೆಲ್‌ಗಳಿವೆ. ಆದರೂ ಕೂಡ ''ಟೋಟಲ್ ಕನ್ನಡ''ಗೆ ತಮ್ಮ ಚಿತ್ರವನ್ನು ನೀಡಿದ್ದರ ಕುರಿತು ಕೂಡ ಮಾತನಾಡಿರುವ ''ಪ್ರಕಾಶರಾಜ್ ಮೇಹು'', ''ರಾಜ್ ಕುಮಾರ್ ಮತ್ತು ರಾಜ್ ಕುಮಾರ್ ಅವರ ಕಂಪನಿಯ ಚಿತ್ರಗಳಿಂದ ಪ್ರಭಾವಕ್ಕೊಳಗಾದವನು ನಾನು. ಯಾಕೆಂದರೆ ರಾಜ್ ಕುಮಾರ್ ಶೈಲಿಯ ಚಿತ್ರಗಳು ಅಂದು, ಇಂದು ಮತ್ತು ಎಂದೆಂದೂ ಕೂಡ ಪ್ರಸ್ತುತ. ಅವರ ಚಿತ್ರಗಳಲ್ಲಿ ಇದ್ದಂತಹ ಅಂಶಗಳನ್ನೇ ನಾನು ನನ್ನ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೆ. ಇನ್ನು ಟೋಟಲ್‌ ಕನ್ನಡ ಚಾನೆಲ್‌ನ ಡಾ.ರಾಜ್ ಕುಮಾರ್ ಅವರ ಅಭಿಮಾನಿಗಳು ಇಷ್ಟಪಡ್ತಾರೆ. ಅಲ್ಲಿನ ವಿಡಿಯೋಗಳನ್ನು ನೋಡ್ತಾರೆ. ಅವರಿಗಾಗಿಯೇ ಅಂದರೆ ಸದಭಿರುಚಿ ಪ್ರೇಕ್ಷಕರಿಗೇ ನಾನು ಸಿನಿಮಾ ಮಾಡಿದ್ದರಿಂದ ಅಲ್ಲಿ ಬಿಡುಗಡೆ ಮಾಡುವ ತೀರ್ಮಾನ ಮಾಡಿದೆ'' ಎಂದು ಹೇಳಿದ್ದಾರೆ.

ಸದ್ಯ ''ಡಿಎನ್‌ಎ'' ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಕನ್ನಡದ ಹಲವರು ''ಟೋಟಲ್ ಕನ್ನಡ''ಗೆ ತಮ್ಮ ಚಿತ್ರವನ್ನು ಹಾಕಿ ಎಂದು ದುಂಬಾಲು ಬಿದ್ದಿದ್ದಾರೆ, ನಾವು ಅಲ್ಲಿ ಬರುವ ಹಣದಲ್ಲಿ ಇಷ್ಟಿಷ್ಟು ಪರ್ಸಟೇಂಜ್ ಎಂದು ಮಾತನಾಡಿಕೊಂಡಿದ್ದೇವೆ'' ಎಂದು ಹೇಳಿದ್ದಾರೆ.

ಅಂದ್ಹಾಗೇ ''ಡಿಎನ್‌ಎ'' ಚಿತ್ರದಲ್ಲಿ ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ಯಮುನಾ, ಎಸ್ತರ್ ನೊರೊನ್ಹಾ, ಮಾಸ್ಟರ್ ಧ್ರುವ ಮೇಹು, ಮಾಸ್ಟರ್ ಕೃಷ್ಣ ಚೈತನ್ಯ, ಅನಿತಾ ಭಟ್, ಶ್ವೇತಾ ಶ್ರೀನಿವಾಸ್, ನಿಹಾರಿಕಾ, ಶೋಭಾ ಮೈಸೂರ್, ಪ್ರಕಾಶ್ ಶೆಣೈ, ಇದ್ದಾರೆ. ಮೈಲಾರಿ ಎಂ ಈ ಚಿತ್ರವನ್ನು ನಿರ್ಮಾಣ ಮಾಡಿದ್ಧಾರೆ. ಚೇತನ್ ಕೃಷ್ಣ ಸಂಗೀತ ಮತ್ತು ರವಿಕುಮಾರ್ ಸನಾ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಡಾ ಕೆ ವೈ ನಾರಾಯಣ ಸ್ವಾಮಿ ಮತ್ತು ನಿರ್ದೇಶಕ ಪ್ರಕಾಶರಾಜ್ ಮೇಹು ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಆಸಕ್ತರು ''ಟೋಟಲ್‌ ಕನ್ನಡ''ಯೂಟ್ಯೂಬ್‌ನಲ್ಲಿ ಚಿತ್ರವನ್ನು ನೋಡಬಹುದು.

More from Filmibeat

English summary
Director Prakash Raj Mehu shares his joy as his film 'DNA' overcomes its COVID-era struggles to become a sensation on YouTube. Discover the heartwarming story of how his film found its audience online.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X