ರಂಗಭೂಮಿ ಇಂತಹ ಪಾತ್ರ ಮಾಡಲು ಶಕ್ತಿ ತುಂಬುತ್ತದೆ.. ಅದು ಆವೇಶದಿಂದ ಮಾಡುವ ಸಂಭ್ರಮಾಚರಣೆ- ಉಮಾಶ್ರೀ
ಜಡೇಶ್ ಹಂಪಿ ನಿರ್ದೇಶನದ 'ಲ್ಯಾಂಡ್‌ಲಾರ್ಡ್' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ತಿದೆ. ದುನಿಯಾ ವಿಜಯ್ ಜೊತೆಗೆ ರಾಜ್ ಬಿ ಶೆಟ್ಟಿ, ರಚಿತಾ ರಾಮ್, ಉಮಾಶ್ರೀ ಸೇರಿ ಎಲ್ಲರೂ ಅದ್ಭುತವಾಗಿ ನಟಿಸಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಎರಡ್ಮೂರು ಸನ್ನಿವೇಶಗಳಲ್ಲಿ ಬಂದು ಹೋಗುವ ಹಿರಿಯ ನಟಿ ಉಮಾಶ್ರೀ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಡುತ್ತದೆ.
ನೂರಾರು ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ನಟಿಸಿ ಉಮಾಶ್ರೀ ಗೆದ್ದಿದ್ದಾರೆ. ರಂಗಭೂಮಿ ಹಿನ್ನೆಲೆ ಎಂಥದ್ದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸುವುದಕ್ಕೆ ಅವರಿಗೆ ಬಲ ತುಂಬುತ್ತದೆ. ಈ ಚಿತ್ರದಲ್ಲಿ ನಾಯಕ ರಾಚಯ್ಯ(ದುನಿಯಾ ವಿಜಯ್)ನ ತಾಯಿ ಪಾತ್ರದಲ್ಲಿ ಉಮಾಶ್ರೀ ಬಣ್ಣ ಹಚ್ಚಿದ್ದಾರೆ. ಹಳ್ಳಿಯ ಕೂಲಿಯಾಳುಗಳನ್ನು ವಿಜಯ್ ಪ್ರತಿನಿಧಿಸಿದ್ದು ಕೆಳವರ್ಗದ ಜನರ ಬದುಕು ಬವಣೆಯನ್ನು ತೋರಿಸಲಾಗಿದೆ.

ಶತಮಾನಗಳಿಂದ ಜಮೀನ್ದಾರಿ ವರ್ಗದ ಕ್ರೌರ್ಯ, ತುಂಡು ಭೂಮಿಗಾಗಿ, ಹೊಟ್ಟೆ-ಬಟ್ಟೆಗಾಗಿ ಹೋರಾಡುವ ಕೆಳವರ್ಗದ ಜನ. ಇಂತಹವರ ಮೇಲೆ ದೌರ್ಜನ್ಯ ಮಾಡಲು ಮೇಲ್ವರ್ಗದವರು ಹುಟ್ಟು ಹಾಕಿದ ಅನಿಷ್ಟ ದೇವದಾಸಿ ಪದ್ಧತಿ, ಜೀತ ಪದ್ಧತಿ ವಿರುದ್ಧ, ಜಾತಿ ತಾರತಮ್ಯ, ಮರ್ಯಾದೆ ಹತ್ಯೆ ಹೀಗೆ ಸಾಕಷ್ಟು ವಿಚಾರಗಳನ್ನು ಚಿತ್ರದಲ್ಲಿ ಚರ್ಚಿಸಲಾಗಿದೆ. ಇತಿಹಾಸ ಕಹಿ ಸತ್ಯಗಳನ್ನು 'ಲ್ಯಾಂಡ್‌ಲಾರ್ಡ್' ಅನಾವರಣ ಮಾಡಲಾಗಿದೆ.
ಹಿರಿಯ ನಟಿ ಉಮಾಶ್ರೀ ಅವರ ನಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಯ್ಯೋ ನಾನು ಮಾಡಿರುವುದೇ ಕೇವಲ ಎರಡ್ಮೂರು ದೃಶ್ಯ ಎನ್ನುತ್ತಲೇ ಫಿಲ್ಮಿಬೀಟ್ ಕನ್ನಡ ಜೊತೆ ಮಾತು ಆರಂಭಿಸಿದರು. "80ರ ದಶಕದ ಕಥೆ ಈ ಚಿತ್ರದಲ್ಲಿದೆ. ಆ ದಶಕದ ಸುತ್ತಾಮುತ್ತಾ ರಾಜ್ಯದ ಗಡಿಭಾಗಗಳಲ್ಲಿ ಅಥವಾ ಸಾಕಷ್ಟು ಪ್ರದೇಶಗಳಲ್ಲಿ ಊಳಿಗಮಾನ್ಯ ಪದ್ಧತಿ ಹಾಸುಹೊಕ್ಕಾಗಿತ್ತು. ಇವತ್ತಿಗೂ ಅಲ್ಲಲ್ಲಿ ಇದ್ದರೂ ಹೊರಗೆ ಕಾಣುತ್ತಿಲ್ಲ. ಮನುಷ್ಯನ ಮನಸ್ಥಿತಿ ಅದೇ ರೀತಿಯಿದೆ. ಅಂಬೇಡ್ಕರ್ ಸಂವಿಧಾನ, ಶಿಕ್ಷಣ, ಹೋರಾಟ ಎಲ್ಲಾ ನಡೆದು ಈಗ ಕೊಂಚ ಕಮ್ಮಿ ಆದಂತೆ ಕಾಣುತ್ತಿದೆ. ಆದರೆ ಇವತ್ತಿಗೂ ದೇವದಾಸಿ ಪದ್ಧತಿ, ಬಾಲ್ಯ ವಿವಾಹ ರೀತಿಯ ಪ್ರಕರಣಗಳು ಅಲ್ಲಲ್ಲಿ ವರದಿ ಆಗುತ್ತಿದೆ ಅಲ್ವಾ. ಇಂತಹ ವಿಚಾರಗಳನ್ನು ಜಡೇಶ್ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ" ಎಂದು ಉಮಾಶ್ರೀ ಪ್ರತಿಕ್ರಿಯಿಸಿದ್ದಾರೆ.

ದುನಿಯಾ ವಿಜಯ್ ಹಾಗೂ ರಾಜ್. ಬಿ ಶೆಟ್ಟಿ ನಟನೆ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಟಾರ್ ಇಮೇಜ್ ಬಿಟ್ಟು ವಿಜಯ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಬಗ್ಗೆ ಉಮಾಶ್ರೀ ಮಾತನಾಡಿ "ನಾಯಕ ನಟ ಎನ್ನುವ ಬ್ರ್ಯಾಂಡ್ ಬಿಟ್ಟು ವಿಜಯ್ ನಟಿಸಿರುವುದನ್ನು ನಾನು ಮೆಚ್ಚುತ್ತೇನೆ. ಬಹಳ ಕೆಳಮಟ್ಟಕ್ಕೆ ಇಳಿದು ಆ ಪಾತ್ರ ಮಾಡಿರುವುದು ವಿಶೇಷ. ಶಿವಣ್ಣ ಸೇರಿ ಕೆಲವರೆಲ್ಲಾ ಅಂತಹ ಪಾತ್ರಗಳನ್ನು ಮಾಡಿದ್ದಾರೆ. ವಿಜಯ್ ಸಿನಿಮಾ ಚೆನ್ನಾಗಿ ಬರಬೇಕು ಎಂದು ಬಹಳ ಶ್ರಮಿಸಿದ್ದಾರೆ. ರಂಗಭೂಮಿ ಹಿನ್ನೆಲೆ ನನಗೆ ಇಂತಹ ಪಾತ್ರಗಳನ್ನು ಮಾಡಲು ಶಕ್ತಿ ತುಂಬುತ್ತದೆ. ಆ ಡ್ಯಾನ್ಸ್ ಮಾಡುವ ದೃಶ್ಯ ಆಕ್ರೋಶದಿಂದ ಕೂಡಿರುವಂಥದ್ದು. ಬಡತನದ ಬೇಗೆಯಲ್ಲಿ ಬೆಂದು, ಶೋಷಣೆಗೆ ಒಳಗಾದ, ಕನಿಷ್ಠ ಸ್ಥಿತಿಯಲ್ಲಿ ಬದುಕನ್ನು ಕಂಡಂತ, ಬದುಕಲು ಅವಕಾಶವೇ ಇಲ್ಲದಂತೆ ಉಸಿರುಗಟ್ಟಿಸುವ ವಾತಾವರಣ ನೋಡಿದಾಗ ಒಳಗೆ ಬೆಂಕಿ ಉರಿಯುತ್ತಿರುತ್ತದೆ. ಅಂತಹವರಿಗೆ ಸಣ್ಣ ಗೆಲುವು ಸಿಕ್ಕಾಗ ಆ ರೀತಿ ಆವೇಶದಿಂದ ಆ ರೀತಿ ಸಂಭ್ರಮಾಚರಣೆ ಮಾಡುತ್ತಾರೆ" ಎಂದು ತಿಳಿಸಿದ್ದಾರೆ.
ಚಿತ್ರದ ಆರಂಭದಲ್ಲೇ ಜಮೀನ್ದಾರ ಭೂಮಿ ಕೊಡುವುದಾಗಿ ಹೇಳಿ ಮೋಸ ಮಾಡಿದಾಗ ಮಗನಿಗೆ ತಾಯಿ ಸವಾಲು ಹಾಕುತ್ತಾಳೆ. ನೀನು ನಿನ್ನದೇ ತುಂಡು ನೆಲದಲ್ಲಿ ಬೆಳೆ ಬೆಳೆದು ನನಗೆ ಕೈತುತ್ತು ತಿನ್ನಿಸಬೇಕು, ಅಲ್ಲಿಯವರೆಗೂ ನಿನ್ನ ಜೊತೆ ನಾನು ಮಾತನಾಡಲ್ಲ ಎಂದು ಶಪಥ ಮಾಡುತ್ತಾಳೆ. ಆ ದೃಶ್ಯದ ಬಗ್ಗೆ ಉಮಾಶ್ರೀ ಮಾತನಾಡಿದ್ದಾರೆ. "ಚಿತ್ರದಲ್ಲಿ ಮತ್ತೊಂದು ಸಣ್ಣ ದೃಶ್ಯ ಇತ್ತು. ಅದನ್ನು ತೆಗೆದುಬಿಟ್ಟಿದ್ದಾರೆ. ಅದು ಇರಬೇಕಿತ್ತು. ರಾಚಯ್ಯ ಮಾದೇಶ್ವರ ಬೆಟ್ಟಕ್ಕೆ ಹೋಗಿ ಪೂಜೆ ಮಾಡಿ ಬರುವುದಾಗಿ ಹೇಳ್ತಾನೆ. ಆತ ದೇವಸ್ಥಾನಕ್ಕೆ ಪಸಲು ತೆಗೆದುಕೊಂಡು ಹೋಗುವಾಗ ಕೂಡ ಅವ್ವ ಈಗಲಾದರೂ ಮಾತಾಡು ಅಂತ ಕೇಳ್ತಾನೆ. ಆಗ ಸೊಸೆಗೆ ಹೇಳ್ತೀನಿ, ದೇವಸ್ಥಾನಕ್ಕೆ ಹೋಗಿ ಬಂದು ಮಾತನಾಡೋಕೆ ಹೇಳು, ಎಲ್ಲಿ ಹೋಗ್ತೀನಿ ಅಂತ. ಆ ದೃಶ್ಯ ಚಿತ್ರೀಕರಣ ಮಾಡಿದ್ದೆವು. ಆದರೆ ಚಿತ್ರದಲ್ಲಿ ಇಲ್ಲ. ಅದು ಇದ್ದಿದ್ದರೆ ಇನ್ನು ಚೆನ್ನಾಗಿರುತ್ತಿತ್ತು. ಆದರೂ ಪರವಾಗಿಲ್ಲ" ಎಂದು ಉಮಾಶ್ರೀ ವಿವರಿಸಿದ್ದಾರೆ.


Click it and Unblock the Notifications











