twitter
    For Quick Alerts
    ALLOW NOTIFICATIONS  
    For Daily Alerts

    ಮೊದಲ ಸಿನಿಮಾಕ್ಕೆ ಇಷ್ಟೊಂದು ಪ್ರಶಂಸೆ ನಿರೀಕ್ಷಿಸಿರಲಿಲ್ಲ: 'ಇಕ್ಕಟ್' ಸಿನಿಮಾದ 'ಜಾನು'

    |

    ಕನ್ನಡದ 'ಇಕ್ಕಟ್' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದ್ದು, ಚಿತ್ರತಂಡದ ಹೊಸ ರೀತಿಯ ಪ್ರಯತ್ನವನ್ನು ಜನ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ಧನಾತ್ಮಕ ವಿಮರ್ಶೆ ಕೇಳಿ ಬರುತ್ತಿವೆ.

    ಸಿನಿಮಾವನ್ನು ಹೊಗಳುತ್ತಿರುವ ಪ್ರತಿಯೊಬ್ಬರು ಸಿನಿಮಾದ ನಾಯಕಿ ಜಾನವಿ ಉರ್ಫ್ ಜಾನು ಪಾತ್ರದಲ್ಲಿ ನಟಿಸಿರುವ ಭೂಮಿ ಶೆಟ್ಟಿಯ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿ ಆಕೆಯ ನಟನೆಗೆ ಫುಲ್‌ ಮಾರ್ಕ್ಸ್ ನೀಡುತ್ತಿದ್ದಾರೆ.

    ತಮ್ಮ ನಟನೆಗೆ ಸಿಗುತ್ತಿರುವ ಪ್ರಶಂಸೆ ಬಗ್ಗೆ, 'ಇಕ್ಕಟ್' ಸಿನಿಮಾದಲ್ಲಿ ಅವಕಾಶ ಸಿಕ್ಕ ಬಗ್ಗೆ, ಜಾನು ಪಾತ್ರದಲ್ಲಿ ನಟಿಸಲು ಮಾಡಿಕೊಂಡ ತಯಾರಿ, ಆ ಪಾತ್ರ ಏಕೆ ಜನರಿಗೆ ಇಷ್ಟವಾಗುತ್ತಿದೆ?, 'ಇಕ್ಕಟ್' ಸಿನಿಮಾದ ಚಿತ್ರೀಕರಣದ ಅನುಭವ, ಈವರೆಗಿನ ನಟನಾ ವೃತ್ತಿ, ಮುಂದಿನ ದಿನಗಳ ಬಗ್ಗೆ ನಿರೀಕ್ಷೆ ಹೀಗೆ ಹಲವಾರು ವಿಷಯಗಳ ಬಗ್ಗೆ ನಟಿ ಭೂಮಿ ಶೆಟ್ಟಿ 'ಫಿಲ್ಮೀಬೀಟ್ ಕನ್ನಡ'ದೊಂದಿಗೆ ಮಾತನಾಡಿದ್ದಾರೆ. 'ಫಿಲ್ಮೀಬೀಟ್ ಕನ್ನಡ' ಪ್ರಶ್ನೆಗಳಿಗೆ ಭೂಮಿ ಶೆಟ್ಟಿ ಕೊಟ್ಟ ಉತ್ತರಗಳು ಇಲ್ಲಿವೆ.

    ನಿಮ್ಮ ಪಾತ್ರ ಬಹಳ ಮೆಚ್ಚುಗೆಗೆ ಪಾತ್ರವಾಗುತ್ತಿದೆ ಅಲ್ಲವೆ?

    ನಿಮ್ಮ ಪಾತ್ರ ಬಹಳ ಮೆಚ್ಚುಗೆಗೆ ಪಾತ್ರವಾಗುತ್ತಿದೆ ಅಲ್ಲವೆ?

    ''ನನ್ನ ಮೊದಲ ಸಿನಿಮಾ ಅಮೆಜಾನ್ ಪ್ರೈಂ ಅಂಥಹಾ ಪ್ರತಿಷ್ಠಿತ ಒಟಿಟಿ ಮೂಲಕ 240 ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಿದೆ ಎಂಬುದೇ ಒಂದು ಬಹುದೊಡ್ಡ ಸಂಭ್ರಮದ ವಿಷಯ. ಸಿನಿಮಾ ನೋಡಿದವರು ನನ್ನ ನಟನೆ ಮೆಚ್ಚಿ ಪ್ರಶಂಸೆ ನೀಡುತ್ತಿರುವುದಂತೂ ಖುಷಿಗೆ ಪಾರವೇ ಇಲ್ಲದಂತೆ ಮಾಡಿದೆ. ನನ್ನ ಮೊದಲ ಸಿನಿಮಾಕ್ಕೆ ಈ ರೀತಿಯ ಅದ್ಭುತ ಪ್ರತಿಕ್ರಿಯೆ ಸಿಕ್ಕಿರುವುದು ನಿಜಕ್ಕೂ ನಂಬಲಾಗುತ್ತಿಲ್ಲ. ಸದ್ಯಕ್ಕೆ ಈ ಖುಷಿಯನ್ನು ಎಂಜಾಯ್ ಮಾಡುತ್ತಿದ್ದೇನೆ''.

    ಜಾನು ಪಾತ್ರದಲ್ಲಿ ನಟಿಸಲು ಹೇಗೆ ತಯಾರಿ ಮಾಡಿಕೊಂಡಿದ್ದಿರಿ?

    ಜಾನು ಪಾತ್ರದಲ್ಲಿ ನಟಿಸಲು ಹೇಗೆ ತಯಾರಿ ಮಾಡಿಕೊಂಡಿದ್ದಿರಿ?

    ''ಜಾನು ಪಾತ್ರ ಮಾಡಲು ಹೆಚ್ಚಿನ ತಯಾರಿಯನ್ನೇನೂ ಮಾಡಿಕೊಳ್ಳಲಿಲ್ಲ. ಆ ಪಾತ್ರಕ್ಕೆ ಹೆಚ್ಚಿನ ತಯಾರಿಯೂ ಬೇಕಿರಲಿಲ್ಲ ಏಕೆಂದರೆ ಲಾಕ್‌ಡೌನ್ ಸಮಯದಲ್ಲಿ ಬಹುತೇಕ ಮಧ್ಯಮ ವರ್ಗ ಕುಟುಂಬದ ಮಹಿಳೆಯರು ಅನುಭವಿಸಿದ ಒದ್ದಾಟಗಳೇ ಜಾನುವಿನ ಒದ್ದಾಟವೂ ಆಗಿತ್ತು. ಲಾಕ್‌ಡೌನ್ ಸಮಯದಲ್ಲಿ ನನ್ನ ಸ್ವ ಅನುಭವ ಹಾಗೂ ಕೇಳಿದ್ದ, ನೋಡಿದ್ದ ಇತರರ ಅನುಭವಗಳು ಜಾನು ಪಾತ್ರ ನಿರ್ವಹಿಸುವಾಗ ಸಹಾಯಕ್ಕೆ ಬಂದವು. ಲಾಕ್‌ಡೌನ್‌ನಲ್ಲಿ ಬಹುತೇಕರು ಅನುಭವಿಸಿದ ಕಷ್ಟಗಳನ್ನು, ಸಮಸ್ಯೆಗಳನ್ನು ಜಾನು ಸಹ ಅನುಭವಿಸುತ್ತಾಳೆ, ಎಲ್ಲರಲ್ಲೂ ಒಬ್ಬ ಜಾನು ಇದ್ದಾಳೆ ಹಾಗಾಗಿಯೇ ಆ ಪಾತ್ರ ಹೆಚ್ಚು ಜನರಿಗೆ ಇಷ್ಟವಾಗಿದೆ ಎನಿಸುತ್ತದೆ''.

    ಹೊಸ ನಿರ್ದೇಶಕರೊಟ್ಟಿಗೆ ಕೆಲಸ ಮಾಡಲು ಅಳುಕೆನಿಸಲಿಲ್ಲವೆ?

    ಹೊಸ ನಿರ್ದೇಶಕರೊಟ್ಟಿಗೆ ಕೆಲಸ ಮಾಡಲು ಅಳುಕೆನಿಸಲಿಲ್ಲವೆ?

    ''ಸಿನಿಮಾದ ನಿರ್ದೇಶಕರಾದ ಎಶಾಮ್ ಹಾಗೂ ಹಸೀನ್ ಖಾನ್ ಎಲ್ಲ ನಟರಿಗೂ ಮುಕ್ತವಾಗಿ ನಟಿಸಲು ಅವಕಾಶ ಕೊಟ್ಟಿದ್ದರು. 'ನಾವು ಪಾತ್ರಗಳನ್ನು ಸೃಷ್ಟಿಸಿದ್ದೇವೆ ಆದರೆ ಆ ಪಾತ್ರಗಳು ಹೇಗೆ ಬೆಳೆಯುತ್ತವೆ, ಹೇಗೆ ಬದಲಾಗುತ್ತವೆ, ತಮ್ಮನ್ನು ತಾವು ಹೇಗೆ ಪ್ರೆಸೆಂಟ್ ಮಾಡಿಕೊಳ್ಳುತ್ತವೆ ಎಂಬುದನ್ನು ನಿಮ್ಮೊಂದಿಗೆ (ನಟರೊಂದಿಗೆ) ನಾವು ಸಹ ಅನ್ವೇಷಣೆ ಮಾಡೋಣ' ಎನ್ನುತ್ತಿದ್ದರು. ಆ ಮೂಲಕ ಅವರು (ನಿರ್ದೇಶಕರು) ಸೃಷ್ಟಿಸಿದ ಪಾತ್ರಗಳನ್ನು ಪ್ರಯೋಗಾತ್ಮಕವಾಗಿ ನಟಿಸಲು ನಮಗೆ ಅವಕಾಶ ಕೊಡುತ್ತಿದ್ದರು. ಹಾಗಾಗಿಯೇ ನಾವು ಯಾವುದೇ ಒತ್ತಡದ ಅನುಭವವಿಲ್ಲದೆ ನಟಿಸಲು ಸಾಧ್ಯವಾಯಿತು. ಅಷ್ಟು ಮಾತ್ರವೇ ಅಲ್ಲದೆ ನಿರ್ದೇಶಕರಿಬ್ಬರೂ ಕತೆ, ಶಾಟ್ ಡಿವಿಷನ್ ಇನ್ನಿತರೆ ವಿಷಯಗಳಲ್ಲಿ ಬಹಳ ತಯಾರಿ ಮಾಡಿಕೊಂಡಿದ್ದರು. ಪೂರ್ಣ ತಯಾರಿಯೊಂದಿಗೆ ಸೆಟ್‌ಗೆ ಬರುತ್ತಿದ್ದರು ಹಾಗಾಗಿ ಗೊಂದಲಗಳಿಲ್ಲದೆ ಸುಸೂತ್ರವಾಗಿ, ಖುಷಿ-ಖುಷಿಯಾಗಿ ಚಿತ್ರೀಕರಣ ನಡೆಯುತ್ತಿತ್ತು. ಮುಂದೆ ಅವಕಾಶ ಸಿಕ್ಕರೆ ಅವರೊಟ್ಟಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ''

    ಅವಕಾಶ ಹೇಗೆ ಸಿಕ್ತು? ಚಿತ್ರೀಕರಣದ ಅನುಭವ ಹೇಗಿತ್ತು?

    ಅವಕಾಶ ಹೇಗೆ ಸಿಕ್ತು? ಚಿತ್ರೀಕರಣದ ಅನುಭವ ಹೇಗಿತ್ತು?

    ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿ ಕೂತಿದ್ದಾಗ ಸಿನಿಮಾ ಆಡಿಷನ್‌ಗೆ ಕರೆ ಬಂತು. ಆಡಿಷನ್ ವಿಡಿಯೋ ಕಳಿಸಲು ಹೇಳಿದರು. ಅಂತೆಯೇ ವಿಡಿಯೋ ಕಳಿಸಿದೆ. ಆ ನಂತರ ನೇರವಾಗಿಯೂ ಆಡಿಷನ್ ನೀಡಿ ಆಯ್ಕೆ ಆದೆ. ಮೊದಲ ಲಾಕ್‌ಡೌನ್ ತುಸು-ತುಸುವೇ ಅಂತ್ಯವಾಗುವ ವೇಳೆಗೆ ಅಂದರೆ ಕಳೆದ ವರ್ಷ ಆಗಸ್ಟ್‌ ತಿಂಳಲ್ಲಿ ನಾವು ಚಿತ್ರೀಕರಣ ಮಾಡಿದೆವು. ಆಗ ಕೊರೊನಾದ ಭಯ ಪೀಕ್‌ನಲ್ಲಿತ್ತು. ದಿನಕ್ಕೆ ಸಾವಿರಾರು ಕೇಸ್‌ಗಳು ಬರಲು ಪ್ರಾರಂಭವಾಗಿದ್ದ ದಿನಗಳವು. ಆ ಸಮಯದಲ್ಲಿ ಒಂದು ಅಪಾರ್ಟ್‌ಮೆಂಟ್‌ನ ಒಂದು ಮನೆಯಲ್ಲಿ ನಾವು ಚಿತ್ರೀಕರಣ ಮಾಡಿದೆವು. ಅಪಾರ್ಟ್‌ಮೆಂಟ್‌ನವರು ಭಯ ಪಟ್ಟಿದ್ದರು. ಆದರೆ ನಾವು ಅಲ್ಲಿನ ನಿವಾಸಿಗಳಿಗೆ ಧೈರ್ಯ ತುಂಬಿದೆವು. ಎರಡು ಬೆಡ್‌ ರೂಂನ ಫ್ಲ್ಯಾಟ್ ಪೂರ್ಣ ಚಿತ್ರೀಕರಣ ಮಾಡಿದ್ದೇವೆ. ಸಣ್ಣ ಮನೆಯಲ್ಲಿ ಇಕ್ಕಟ್ಟಿನಲ್ಲಿಯೇ 'ಇಕ್ಕಟ್' ಸಿನಿಮಾದ ಚಿತ್ರೀಕರಣ ನಡೆಯಿತು. ಹದಿನೇಳು ದಿನದಲ್ಲಿ ಚಿತ್ರೀಕರಣವನ್ನು ಮುಗಿಸಿದೆವು. ಸೆಟ್‌ನಲ್ಲಿ ಎಲ್ಲರೂ ಬಹಳ ತಮಾಷೆಯಾಗಿ, ಆದರೆ ಕೊರೊನಾ ನಿಯಮದಡಿ ಕೆಲಸ ಮಾಡಿದೆವು''.

    ನಿಮ್ಮ ಸಹ ನಟರ ಬಗ್ಗೆ ಹೇಳುವುದಾದರೆ...?

    ನಿಮ್ಮ ಸಹ ನಟರ ಬಗ್ಗೆ ಹೇಳುವುದಾದರೆ...?

    ''ಈ ಸಿನಿಮಾದಲ್ಲಿ ನಟಿಸುವ ಮುನ್ನಾ ನನಗೆ ಯಾರೊಬ್ಬರ ವೈಯಕ್ತಿಕ ಪರಿಚಯವೂ ಇರಲಿಲ್ಲ. ಸಿನಿಮಾದ ನಾಯಕ ನಾಗಭೂಷಣ್ ಅವರ ನಟನೆಯನ್ನು ಕೆಲವು ಸಿನಿಮಾಗಳಲ್ಲಿ ನೋಡಿದ್ದೆ. ಆದರೆ ಸೆಟ್‌ನಲ್ಲಿ ಎಲ್ಲರೂ ಗೆಳೆಯರಂತೆ ಇದ್ದೆವು. ಒಳ್ಳೆಯ ಬಾಂಡಿಂಗ್ ನಮ್ಮ ನಡುವೆ ಸೃಷ್ಟಿಯಾಯಿತು. ಡೂಡ್ ಮಗಾ ಪಾತ್ರಧಾರಿ ಆರ್‌ಜೆ ವಿಕ್ಕಿ ಹಾಗೂ ಇನ್ನೂ ಕೆಲವರು ಸೆಟ್‌ನಲ್ಲಿ ಬಹಳ ನಗಿಸೋರು. ನಿರ್ದೇಶಕರಾದ ಎಶಾಮ್ ಹಾಗೂ ಹಸೀನ್ ಖಾನ್ ಮಾನಿಟರ್ ಮುಂದೆ ಕುಳಿತು ನಮ್ಮ ನಟನೆ ಕಂಡು ಎಂಜಾಯ್ ಮಾಡುತ್ತಿದ್ದ ವಿಡಿಯೋಗಳನ್ನು ಮಾಡಿ ಅವರಿಗೇ ತೋರಿಸಿ ನಗುತ್ತಿದ್ದೆವು. ಹದಿನೇಳು ದಿನ ಮುಗಿಯುವ ವೇಳೆಗೆ ಎಲ್ಲರೂ ಆಪ್ತ ಗೆಳೆಯರಾಗಿ ಬಿಟ್ಟಿದ್ದೆವು. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಷ್ಟಪಟ್ಟು ಚಿತ್ರೀಕರಣ ಮಾಡಿದೆವು ಅದಕ್ಕೆ ಒಳ್ಳೆಯ ಪ್ರತಿಫಲವೇ ದೊರೆತಿದೆ''.

    ಈ ಸಿನಿಮಾದ ಬಳಿಕ ವೃತ್ತಿ ಬದುಕಿನಲ್ಲಿ ಬದಲಾವಣೆ ಆಗುವ ನಿರೀಕ್ಷೆ ಇದೆಯಾ?

    ಈ ಸಿನಿಮಾದ ಬಳಿಕ ವೃತ್ತಿ ಬದುಕಿನಲ್ಲಿ ಬದಲಾವಣೆ ಆಗುವ ನಿರೀಕ್ಷೆ ಇದೆಯಾ?

    ಹೌದು, ಖಂಡಿತ ಇದೆ. ಮೊದಲಿಗೆ ನಾನು 'ಕಿನ್ನರಿ' ಧಾರಾವಾಹಿ ಮೂಲಕ ನಟನೆ ಆರಂಭಿಸಿದೆ. ನಂತರ ತೆಲುಗಿನ 'ನಿನ್ನೆ ಪೆಲ್ಲಾಡುತಾ' ಧಾರಾವಾಹಿಯಲ್ಲಿ ನಟಿಸಿದೆ. ನಂತರ ಕನ್ನಡ ಬಿಗ್‌ಬಾಸ್ 7ನಲ್ಲಿ ಸ್ಪರ್ಧಿಯಾಗಿ ಅಲ್ಲಿ ಫೈನಲಿಸ್ಟ್ ಆದೆ. ನಂತರ ಮಜಾಭಾರತ ಕಾರ್ಯಕ್ರಮ ನಿರೂಪಣೆ ಮಾಡಿದೆ. ಮತ್ತೊಂದು ತೆಲುಗು ಧಾರಾವಾಹಿ 'ಅತ್ತಾರಿಂಟ್ಲೊ ಅಕ್ಕಾ ಚೆಲ್ಲುಲು' ಧಾರಾವಾಹಿಯಲ್ಲಿ ನಟಿಸುತ್ತಿದ್ದೆ ಅದೇ ವೇಳೆಗೆ ಲಾಕ್‌ಡೌನ್ ಆಯಿತು. ಅದೇ ಸಮಯದಲ್ಲಿ 'ಇಕ್ಕಟ್' ಸಿನಿಮಾ ಅವಕಾಶ ಸಿಕ್ಕು ಈಗ ಸಿನಿಮಾ ಬಿಡುಗಡೆ ಆಗಿ ಹಿಟ್ ಆಗಿದೆ. ನನ್ನ ನಟನೆಯಗೆ ಪ್ರಶಂಸೆ ಕೇಳಿ ಬರುತ್ತಿದೆ. ಹಾಗಾಗಿ ಇನ್ನು ಮುಂದೆ ಇನ್ನಷ್ಟು ಒಳ್ಳೆಯ ಅವಕಾಶಗಳು ಅರಸಿ ಬರಬಹುದು ಎಂಬ ನಿರೀಕ್ಷೆ ಇದೆ. ಹಾಗೂ ನಾನು ಆ ಪಾತ್ರಗಳಿಗೆ ನ್ಯಾಯ ಒದಗಿಸುತ್ತೇನೆ ಎಂಬ ವಿಶ್ವಾಸವೂ ಇದೆ''.

    English summary
    'Ikkat' Kannada movie heroine Bhoomi Shetty interview. She said not expected this much love for my first movie.
    Friday, July 23, 2021, 16:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X