For Quick Alerts
  ALLOW NOTIFICATIONS  
  For Daily Alerts

  'ಬನಾರಸ್' ಚಿತ್ರದ ಕಥೆ ಹೇಳಿದ ನಿರ್ದೇಶಕ ಜಯತೀರ್ಥ ಜೊತೆ ಮಾತುಕತೆ

  |

  ಪ್ರತಿಯೊಬ್ಬ ಸಿನಿಮಾ ನಿರ್ದೇಶಕನಿಗೂ ತನ್ನದೇ ಆದ ಒಂದು ಕಲ್ಪನೆ, ಮೇಕಿಂಗ್ ವಿಧಾನದ ಜೊತೆಗೆ ಸಿನಿಮಾ ಅಭಿರುಚಿ ಅಂತ ಒಂದು ಇರುತ್ತದೆ. ಆದರೆ ಕೆಲವೇ ಕೆಲವು ನಿರ್ದೇಶಕರುಗಳಿಗೆ ಇದರ ಜೊತೆಗೆ ಸೂಕ್ಷ್ಮ ಸಂವೇದನಾಶೀಲ ಆಲೋಚನೆಗಳು ಸಹ ಇರುತ್ತವೆ. ಅಂತಹ ನಿರ್ದೇಶಕರುಗಳ ಪೈಕಿ ಒಬ್ಬರು ಜಯತೀರ್ಥ. ಜಯತೀರ್ಥ ತಮ್ಮ ಸಿನಿಮಾಗಳಿಗೆ ಬದುಕಿನ ಬಣ್ಣಗಳನ್ನು ತುಂಬುತ್ತಾರೆ, ಕನಸು ಮತ್ತು ಕಲ್ಪನೆಗಳನ್ನು ಜೊತೆಗೂಡಿಸುತ್ತಾರೆ.

  ಇವುಗಳ ಜೊತೆಗೆ ನವಿರಾಗಿ ಭಾವನೆಗಳನ್ನು ಬೆಸೆಯುತ್ತಾರೆ. ಅವರಿಗೆ ಕನಸು ಮತ್ತು ವಾಸ್ತವದ ಅರಿವಿದೆ, ಪ್ರೀತಿ ಮತ್ತು ಜೀವನ ಸಂಘರ್ಷದ ವಾಸ್ತವಿಕ ಸ್ಥಿತಿ ತಿಳಿದಿದೆ, ಹೀಗಾಗಿಯೇ ಅವರು ಕೃತಕ ಭಾವನೆಗಳಿಗಿಂತ ಹೆಚ್ಚಿಗೆ ವಾಸ್ತವಕ್ಕೆ ಹತ್ತಿರವೆನಿಸುವ ಕಥೆಗಳ ಮೇಲೆ ತಮ್ಮ ನಿರ್ದೇಶನದ ಸವಾರಿ ನಡೆಸಿಕೊಂಡು ಬಂದಿದ್ದಾರೆ. ಇದೇ ವಿಚಾರವಾಗಿ 'ಒಲವೇ ಮಂದಾರ' ದಿಂದ 'ಬನಾರಸ್' ವರೆಗೆ ಅವರ ಸಿನಿಯಾನದ ಒಂದು ಮುಕ್ತ ಮಾತುಕತೆ ಫಿಲ್ಮಿಬೀಟ್ ಕನ್ನಡ ಜೊತೆಗೆ ನಡೆಸಿದ್ದಾರೆ. ಜಯತೀರ್ಥ ಅವರ ಜೊತೆಗೆ ಫಿಲ್ಮಿಬೀಟ್ ಕನ್ನಡ ನಡೆಸಿದ ವಿಶೇಷ ಸಂದರ್ಶನದ ಪೂರ್ಣ ವಿವರಗಳು ಇಲ್ಲಿದೆ.

  ವಿಭಿನ್ನವಾದ ಕಥೆಗಳನ್ನೇ ಕೊಡಲು ಪ್ರಯತ್ನಿಸಿದ್ದೀನಿ

  ವಿಭಿನ್ನವಾದ ಕಥೆಗಳನ್ನೇ ಕೊಡಲು ಪ್ರಯತ್ನಿಸಿದ್ದೀನಿ

  ಫಿಲ್ಮಿಬೀಟ್ ಕನ್ನಡ: 'ಒಲವೇ ಮಂದಾರ'ದಿಂದ 'ಬನಾರಸ್' ವರೆಗೆ ನಿಮ್ಮ ಸಿನಿಮಾ ಪಯಣವನ್ನು ಹೇಗೆ ನೋಡುತ್ತೀರಿ?

  ಜಯತೀರ್ಥ: ಆರಂಭದಿಂದಲೂ ಸಿನಿಮಾದಿಂದ ಸಿನಿಮಾಗೆ ವಿಭಿನ್ನವಾದ ಕಥೆಗಳನ್ನೇ ಕೊಡಲು ಪ್ರಯತ್ನಿಸಿದ್ದೀನಿ. ನಿರಂತರ ಹೊಸ ಆಲೋಚನೆಗಳೊಂದಿಗೆ ಈ ನನ್ನ ಸಿನಿಮಾ ಪಯಣ ಮುಂದುವರೆದಿದೆ. 'ಒಲವೇ ಮಂದಾರ', 'ಟೋನಿ', 'ಬುಲೆಟ್ ಬಸ್ಯಾ', 'ಬ್ಯೂಟಿಫುಲ್ ಮನಸುಗಳು', 'ವೆನ್ನೆಲಾ', 'ಬೆಲ್ ಬಾಟಂ' ಮತ್ತು ಇದೀಗ 'ಬನಾರಸ್' ವರೆಗೆ ನಾನು ನಿರ್ದೇಶಿಸಿದ ಎಲ್ಲಾ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಆರ್ಟಿಸ್ಟಿಕ್, ಕಾಮಿಡಿ, ಥ್ರಿಲ್ಲರ್, ಸಸ್ಪೆನ್ಸ್, ಆಕ್ಷನ್ ಹೀಗೆ ಎಲ್ಲಾ ಜಾನರ್ ಗಳಲ್ಲಿ ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾ ಭಿನ್ನವಾದ ಹಾದಿಯಲ್ಲೇ ನನ್ನ ಸಿನಿಮಾ ನಿರ್ದೇಶನ ಸಾಗಿದೆ. ಒಟ್ಟಾರೆ ಇದುವರೆಗಿನ ಪಯಣದಲ್ಲಿ 60% ರಷ್ಟು ಸಂತೃಪ್ತಿಯನ್ನು ಮಾತ್ರ ಪಡೆದುಕೊಂಡಿದ್ದೇನೆ.

  ನಿತ್ಯ ಬದುಕಿನ ಹಲವು ವಿಷಯಗಳ ಹೊಸ ಆಯಾಮ

  ನಿತ್ಯ ಬದುಕಿನ ಹಲವು ವಿಷಯಗಳ ಹೊಸ ಆಯಾಮ

  ಫಿಲ್ಮಿಬೀಟ್ ಕನ್ನಡ: ಕಮರ್ಷಿಯಲ್ಲಾಗಿ ನಿಮ್ಮ ಚಿತ್ರಗಳ ಯಶಸ್ಸನ್ನು ಹೇಗೆ ನೋಡುತ್ತೀರಿ?

  ಜಯತೀರ್ಥ: ನಾನು ಕಲೆಯನ್ನು ಅಪಾರವಾಗಿ ಪ್ರೀತಿಸುತ್ತೇನೆ. ಸಿನಿಮಾ ಮೂಲಕ ನಿತ್ಯ ಬದುಕಿನ ಹಲವು ವಿಷಯಗಳನ್ನು ಹೊಸ ಆಯಾಮದೊಂದಿಗೆ ಜೋಡಿಸಿ ನೋಡುವ ಪ್ರಯತ್ನ ನನ್ನದಾಗಿದೆ. ಅದರ ಜೊತೆಗೆ ಪ್ರತಿ ಚಿತ್ರ ಕೂಡ ಕಮರ್ಷಿಯಲ್ಲಾಗಿ ಸಕ್ಸಸ್ ಆಗುವಂತೆ ನೋಡಿಕೊಂಡೆ ಬಂದಿದ್ದೇನೆ. 'ಬುಲೆಟ್ ಬಸ್ಯಾ' ಚಿತ್ರವನ್ನೇ ತೆಗೆದುಕೊಂಡರೆ ಅದರ ಮೊದಲ ವಾರದ ಕಲೆಕ್ಷನ್ 1.7 ಕೋಟಿ. ಚಿತ್ರ ಟೋಟಲ್ 7 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ಮೊದಲ ಚಿತ್ರ 'ಒಲವೇ ಮಂದಾರ' ವನ್ನು ತೆಗೆದುಕೊಂಡರು ಅದೊಂದು ಕಲಾತ್ಮಕ ಚಿತ್ರವಾಗಿ ಮೇಲ್ನೋಟಕ್ಕೆ ಕಂಡರು, ಜನಸಾಮಾನ್ಯರು ಪ್ರೀತಿಯಿಂದ ಸ್ವೀಕರಿಸಿದ, ಕಮರ್ಷಿಯಲ್ಲಾಗಿ ನೋಡಿದರು ಕೂಡ ಯಶಸ್ಸನ್ನು ಕಂಡಿರುವ ಚಿತ್ರವೇ ಆಗಿದೆ.

  'ಬೆಲ್ ಬಾಟಂ' ನನ್ನ ಇದುವರೆಗಿನ ಇತರ ಚಿತ್ರಗಳಿಗಿಂತ ಹೆಚ್ಚು ಕಮರ್ಷಿಯಲ್ ಸಕ್ಸಸ್ ಕಂಡಿರುವ ಚಿತ್ರ. ಉಳಿದ ಚಿತ್ರಗಳು ಕೂಡ ಸಮಾಧಾನಕರವಾದ ಫಲಿತಾಂಶವನ್ನೇ ತಂದಿವೆ.

  ಎಲ್ಲಾ ಬಗೆಯ ಸಿನಿಮಾ ನಾನು ಮಾಡಲು ಬಯಸುತ್ತೇನೆ

  ಎಲ್ಲಾ ಬಗೆಯ ಸಿನಿಮಾ ನಾನು ಮಾಡಲು ಬಯಸುತ್ತೇನೆ

  ಫಿಲ್ಮಿಬೀಟ್ ಕನ್ನಡ: ಜಯತೀರ್ಥ ಅವರು 'ಬ್ಯೂಟಿಫುಲ್ ಮನಸುಗಳು' ಅಂತ ಭಾವನಾತ್ಮಕತೆಯಿಂದ 'ಬೆಲ್ ಬಾಟಂ' ಅಂತ ಕ್ರೈಂ ಕಾಮಿಡಿ ಕಡೆಗೆ ಹೊರಟ್ಟಿದ್ದು ಹೇಗೆ?

  ಜಯತೀರ್ಥ: ನಾನು ಮೊದಲೇ ಹೇಳಿದಂತೆ ಎಲ್ಲಾ ಜಾನರ್ ಮೂವಿಗಳು ಲವ್, ಕಾಮಿಡಿ, ಎಮೋಷನ್, ಆಕ್ಷನ್ ಹೀಗೆ ಎಲ್ಲಾ ಬಗೆಯ ಸಿನಿಮಾಗಳನ್ನು ನಾನು ಮಾಡಲು ಬಯಸುತ್ತೇನೆ. ನಿಜ ಹೇಳಬೇಕು ಅಂದರೆ 'ಬೆಲ್ ಬಾಟಂ' ಸಿನಿಮಾ ಸಿಗಲಿಕ್ಕೆ ಕಾರಣವೇ 'ಬ್ಯೂಟಿಫುಲ್ ಮನಸುಗಳು'. ಬ್ಯೂಟಿಫುಲ್ ಮನಸುಗಳು ಪ್ರೀಮಿಯರ್ ಶೋ ನೋಡಲು ಬಂದಿದ್ದ, ಆದರೆ ಆ ಸಮಯದಲ್ಲಿ ನನಗೆ ಯಾವುದೇ ತರದಲ್ಲಿ ಪರಿಚಿತರಲ್ಲದ ಸಂತೋಷ್ ಕುಮಾರ್ ಅವರು ಚಿತ್ರ ನೋಡಿಯೇ ನನ್ನ ಜೊತೆ ಚಿತ್ರ ಮಾಡಲು ಮುಂದೆ ಬಂದರು. ನಾನು ಕೂಡ ಪತ್ತೇದಾರಿ ಹಿನ್ನೆಲೆಯ ಜಾನರ್ ನಲ್ಲಿ 'ಬೆಲ್ ಬಾಟಂ' ಮಾಡಿದೆ.

  ಫಿಲ್ಮಿಬೀಟ್ ಕನ್ನಡ: 'ಬೆಲ್ ಬಾಟಂ-2' ಅನೌನ್ಸ್ ಮಾಡಿದ್ದೀರಿ, ಅದರ ಚಿತ್ರೀಕರಣ ಯಾವಾಗ ಆರಂಭವಾಗಬಹುದು?

  ಫಿಲ್ಮಿಬೀಟ್ ಕನ್ನಡ: 'ಬೆಲ್ ಬಾಟಂ-2' ಅನೌನ್ಸ್ ಮಾಡಿದ್ದೀರಿ, ಅದರ ಚಿತ್ರೀಕರಣ ಯಾವಾಗ ಆರಂಭವಾಗಬಹುದು?

  ಜಯತೀರ್ಥ: 'ಬೆಲ್ ಬಾಟಂ-2' ಗೆ ಸಂಬಂಧಿಸಿದಂತೆ ಬಹುತೇಕ ಎಲ್ಲಾ ಪ್ರೀಪ್ರೊಡಕ್ಷನ್ ಕೆಲಸಗಳು ಮುಗಿದಿದೆ. ಸ್ಕ್ರಿಪ್ಟ್ ಲಾಕ್ ಆಗಿದೆ, ಲೊಕೇಶನ್ ಗಳು ಕೂಡ ಫೈನಲ್ ಆಗಿದೆ. 'ಬನಾರಸ್' ನಂತರ ನನ್ನ ಪೂರ್ತಿ ಫೋಕಸ್ 'ಬೆಲ್ ಬಾಟಂ-2' ಮೇಲೆ ಇರುತ್ತದೆ.

  ಇದೆಲ್ಲವೂ 'ಬನಾರಸ್' ನಲ್ಲಿ ಕಾಣಬಹುದಾಗಿದೆ

  ಇದೆಲ್ಲವೂ 'ಬನಾರಸ್' ನಲ್ಲಿ ಕಾಣಬಹುದಾಗಿದೆ

  ಫಿಲ್ಮಿಬೀಟ್ ಕನ್ನಡ: ನಿಮ್ಮ ಮುಂದಿನ ಚಿತ್ರ 'ಬನಾರಸ್'. ಪ್ರಪಂಚದ ಅತ್ಯಂತ ಹಳೆಯ ನಗರಿ ಕಾಶಿ (ಬನಾರಸ್) ಎಂದಾಗ ಕಾಶಿ ವಿಶ್ವನಾಥ ಮಂದಿರ, ಗಂಗಾರತಿ, ಬಿಸ್ಮಿಲ್ಲಾ ಖಾನ್ ಶಹನಾಯಿ, ಗಾಯತ್ರಿದೇವಿ ಗಾಯನ,ಅಲ್ಲಿನ ಘಾಟ್‌ಗಳು ಕಣ್ಣಿನ ಮುಂದೆ ಬರುತ್ತದೆ. ಮತ್ತೆ ಇದೆಲ್ಲವೂ ನಿಮ್ಮ ಚಿತ್ರ ಒಳಗೊಂಡಿದೆ?

  ಜಯತೀರ್ಥ: ನೀವು ಹೇಳಿದ ಅಷ್ಟು ಅಂಶಗಳು ಈ ಚಿತ್ರದ ಭಾಗವಾಗಿದೆ. ಹೆಮ್ಮೆಯಿಂದ ಹೇಳಬೇಕಾದ ಸಂಗತಿಯೆಂದರೆ ನೀವು ಹೇಳಿದ ಅಂಶಗಳಿಗಿಂತ ಹೆಚ್ಚಿನ ವಿಷಯಗಳು ಈ ಚಿತ್ರದಲ್ಲಿ ನಿಮಗೆ ನೋಡಲು ಕಾಣಸಿಗುತ್ತದೆ. ಬನಾರಸ್ ಅಂದಾಗ ಸ್ವೀಟ್, ಸೀರೆ, ಪಾನ್, ಪುರಾತನ ನಗರಿಯ ಸಾಮಾಜಿಕ, ಧಾರ್ಮಿಕ, ಜೀವನ ಪದ್ಧತಿ, ವಿಧಾನಗಳು, ಆಚಾರಗಳು ಇದೆಲ್ಲವೂ ನಮ್ಮ 'ಬನಾರಸ್' ನಲ್ಲಿ ನೀವು ಕಾಣಬಹುದಾಗಿದೆ. ಇದುವರೆಗೆ ಬನಾರಸ್ ಮೇಲೆ ಚಿತ್ರಿತವಾಗಿರುವ ಭಾರತೀಯ ಎಲ್ಲಾ ಸಿನಿಮಾಗಳಲ್ಲಿ ತೋರಿಸಲು ಸಾಧ್ಯವಾಗಿರುವುದು 20% ಕಾಶಿಯ ಹಿನ್ನೆಲೆಯನ್ನು ಮಾತ್ರ. ಆದರೆ 'ಬನಾರಸ್' ಚಿತ್ರ ಕಾಶಿಯ ಮೂಲಕ್ಕೆ ಇಳಿದು ಅದನ್ನು ಸಂಶೋಧಿಸುವ ಕೆಲಸ ಮಾಡಿದೆ. ಹೀಗಾಗಿ ಈ ಚಿತ್ರದಲ್ಲಿ ಜ್ಞಾನ ಮತ್ತು ವಿಜ್ಞಾನವು ಕೂಡ ಸೇರಿಕೊಂಡಿದೆ.

  ಇಲ್ಲಿ ಮತ್ತೊಂದು ವಿಷಯ ಉಲ್ಲೇಖಿಸಲೇಬೇಕು

  ಇಲ್ಲಿ ಮತ್ತೊಂದು ವಿಷಯ ಉಲ್ಲೇಖಿಸಲೇಬೇಕು

  ಇದುವರೆಗೆ ಯಾವ ಚಿತ್ರದಲ್ಲೂ ಕಾಣದ ಕಾಶಿಯ ಮೂಲ ಬೇರುಗಳ ಶೋಧನೆ 'ಬನಾರಸ್' ಚಿತ್ರದಲ್ಲಿ ನೋಡಲು ಸಿಗುತ್ತದೆ.

  ಇಲ್ಲಿ ಮತ್ತೊಂದು ವಿಷಯ ಉಲ್ಲೇಖಿಸಲೇಬೇಕು, ಒಂದು ಸಲ ಕಾಶಿಯನ್ನು ಸಂದರ್ಶಿಸಿದವರು ನೋಡಿರಲ್ಲಾರದಂತ ಅನೇಕ ಘಾಟ್‌ಗಳು ಇರುತ್ತವೆ. ಬರೋವ್ರು ಕೇವಲ ದಶೇಶ್ವರ ಘಾಟ್, ಹರಿಶ್ಚಂದ್ರ ಘಾಟ್, ಅಸಿಘಾಟ್ ಅಂತ ಕೆಲವೇ ಕೆಲವು ಘಾಟ್ ಗಳನ್ನು ಆಯ್ಕೆ ಮಾಡಿಕೊಂಡು ನೋಡಿಕೊಂಡು ಬರುತ್ತಾರೆ. ಆದರೆ ಇಲ್ಲಿ ಎಲ್ಲಾ 84 ಘಾಟ್ ಗಳನ್ನು ಒಟ್ಟಾರೆಯಾಗಿ ತೋರಿಸಿದ್ದೀವಿ. ಅದು ಅಲ್ಲದೆ ಕಾಶಿ ನಗರದೊಳಗಿನ ಅನೇಕ ವಿಶೇಷಗಳನ್ನು ಸೀನ್‌ಗಳಾಗಿ ಕನ್ವರ್ಟ್ ಮಾಡಿ ಅವುಗಳನ್ನು ತೋರಿಸಲು ಪ್ರಯತ್ನ ಮಾಡಿದ್ದೀವಿ.

  ಒಂದು ವಿಶಿಷ್ಟ ಪ್ರಯತ್ನವಾಗಿದೆ

  ಒಂದು ವಿಶಿಷ್ಟ ಪ್ರಯತ್ನವಾಗಿದೆ

  ಫಿಲ್ಮಿಬೀಟ್ ಕನ್ನಡ: 'ಬನಾರಸ್' ಚಿತ್ರ ಬನಾರಸಿನ ಯಾವ ಯಾವ ವಿಶೇಷತೆಗಳ ಮೇಲೆ ಬೆಳಕು ಚೆಲ್ಲುತ್ತದೆ?

  ಜಯತೀರ್ಥ: 'ಬನಾರಸ್' ಇಡಿಯಾಗಿ ಒಂದು ಚಿತ್ರಕ್ಕೆ ಸಿಗುವ ನಗರವಲ್ಲ. ಅದಕ್ಕಾಗಿ ನೂರಾರು 'ಬನಾರಸ್' ಗಳನ್ನೇ ಮಾಡಬೇಕಾಗುತ್ತದೆ. ಆದರೂ 'ಬನಾರಸ್' ಚಿತ್ರದಲ್ಲಿ ಇದುವರೆಗೆ ಭಾರತೀಯ ಸಿನಿಮಾರಂಗದ ಯಾವುದೇ ಚಿತ್ರಗಳು ಚಿತ್ರೀಕರಿಸಿಲ್ಲದ ಸ್ಥಳಗಳ ಮೇಲೆ ಬೆಳಕು ಚೆಲ್ಲುತ್ತಿದೆ. ಕಾಶಿಗೆ ಬಂದವರು ಇಲ್ಲಿ ವಿಶ್ವನಾಥನ, ಅನ್ನಪೂರ್ಣೆ, ಗಂಗಾ- ಗಂಗಾರತಿ, ಕೆಲವು ಘಾಟ್‌ಗಳ ಸಂದರ್ಶನದೊಂದಿಗೆ ಕಾಶಿಯಾತ್ರೆ ಮುಗಿಯಿತು ಅಂತ ಭಾವಿಸುತ್ತಾರೆ. ನಾನು ಮೊದಲೇ ಹೇಳಿದಂತೆ ಇಲ್ಲಿರುವ 84 ಘಾಟ್‌ಗಳನ್ನು ಯಾರು ಸಂದರ್ಶಿಸಿರುವುದಿಲ್ಲ.

  ಮಣಿಕರ್ಣಿಕಾ ಸೇರಿದಂತೆ ಘಾಟಗಳು, ಮುಕ್ತಿ ಭವನ, ಗಂಗಾರತಿ, ವೇದ ಭಾರತ ಮಂದಿರ ಸೇರಿದಂತೆ ಕಾಶಿಯ ಹತ್ತುಹಲವು ಇದುವರೆಗೆ ಯಾವುದೇ ಚಿತ್ರದಲ್ಲೂ ಕಾಣದಿರುವ ಪ್ರದೇಶಗಳಲ್ಲಿ ನಾವು ಚಿತ್ರೀಕರಣ ಮಾಡಿದ್ದೇವೆ. ಇದರಲ್ಲಿ ಒಂದು ವಿಶೇಷವಾಗಿ ಹೇಳಬೇಕಾದ ಸಂಗತಿಯೆಂದರೆ ಇಲ್ಲಿರುವ 'ವೇದಬ್ರಹ್ಮಶಾಲೆ'ಯ ಬ್ರಹ್ಮಚಾರಿ ವಟುಗಳು ಗಂಗಾ ಮತ್ತು ಸೂರ್ಯನನ್ನು ಅನುಸಂಧಾನವಾಗಿ ಹೇಳುವ ಮಂತ್ರ ಘೋಷವನ್ನು ಸುಮಾರು ಅದೇ ವೇದ ಶಾಲೆಯ 500 ವೇದ ವಿದ್ಯಾರ್ಥಿಗಳೊಂದಿಗೆ ಚಿತ್ರೀಕರಿಸಿದ್ದೇವೆ. ಒಟ್ಟಾರೆ 'ಬನಾರಸ್' ಚಿತ್ರ ಭಾರತೀಯ ಸಿನಿಮಾರಂಗದಲ್ಲಿ ಇದುವರೆಗೆ ಕಾಣದಿರುವ ಕಾಶಿಯನ್ನು ಸಂಪೂರ್ಣವಾಗಿ ತೋರಿಸುವ ಒಂದು ವಿಶಿಷ್ಟ ಪ್ರಯತ್ನವಾಗಿದೆ ಅಂತ ಹೇಳಬಹುದು.

  ಒಂದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ

  ಒಂದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ

  ಫಿಲ್ಮಿಬೀಟ್ ಕನ್ನಡ: ಇಂತಹ ಚಿತ್ರವನ್ನು ಮಾಡಬೇಕಾದ ಸಂದರ್ಭದಲ್ಲಿ ತಾಂತ್ರಿಕ ವರ್ಗದವರ ಸಹಕಾರ ತುಂಬಾ ದೊಡ್ಡದಾಗಿರುತ್ತದೆ, ಅವರ ಸಹಕಾರದ ಬಗ್ಗೆ ಒಂದೆರಡು ಮಾತು...

  ಜಯತೀರ್ಥ: ಈ ಚಿತ್ರದ ಆರಂಭದಿಂದಲೂ ನನ್ನ ಜೊತೆಯಲ್ಲಿ ನಮ್ಮ ಛಾಯಾಗ್ರಾಹಕರಾದ ಅದ್ವೈತ್ ಗುರುಮೂರ್ತಿಯವರು ಪಯಣಸಿದ್ದಾರೆ. ಚಿತ್ರೀಕರಣಕ್ಕೆ ಮೊದಲೇ ಅವರೊಂದಿಗೆ ನಾನು ಕಾಶಿಯಲ್ಲಿ ಸ್ಥಳಗಳನ್ನು ಸಂದರ್ಶಿಸಿದ್ದು ಅಲ್ಲದೆ ಫಿಲಂ ಸ್ಕ್ರಿಪ್ಟ್ ನ ಪ್ರತಿ ವಿಷಯವನ್ನು ಅಲ್ಲೇ ಚರ್ಚಿಸಿದ್ದೇನೆ. ಪ್ರತಿ ಸೀನ್ ಹೇಗೆ ತೆಗೆಯಬಹುದು ಅಂತ ಆ ಪ್ರದೇಶಗಳಲ್ಲಿ ಗಂಟೆಗಟ್ಟಲೆ ಕುಳಿತು ಯೋಚಿಸಿದ್ದೇವೆ. ಹೀಗಾಗಿ ಚಿತ್ರೀಕರಣ ಸುಲಭವಾಗಿ ನಡೆಯಲು ಸಾಧ್ಯವಾಯಿತು. ನಾನು ಅಲ್ಲಿ ನೋಡಿದ ಪ್ರತಿ ವಿಷಯ, ನನ್ನನ್ನು ಕಾಡಿದ ಪ್ರತಿ ಸಂಗತಿಯನ್ನು ಒಂದು ಸ್ಕ್ರಿಪ್ಟ್ ರೂಪದಲ್ಲಿ ತಯಾರಿಸಿ ಅಜನೀಶ್ ಅವರಿಗೆ ವಿವರಿಸಿದಾಗ ನನ್ನಲ್ಲಿ ಮೂಡಿಬಂದಿದ್ದ ಆ ಭಾವನೆಗಳಿಗೆ ತಕ್ಕಂತೆ ಒಂದು ಅದ್ಭುತವಾದ ಸಂಗೀತ ಸ್ಪರ್ಶವನ್ನು ಅವರು ನೀಡಿದ್ದು, ಅದಕ್ಕೆ ಅನುಗುಣವಾಗಿ ನಾಗೇಂದ್ರ ಪ್ರಸಾದ್ ಅವರು ರಚಿಸಿರುವ ಸಾಹಿತ್ಯ ನಾಳೆ ಕೇಳುವ ಪ್ರತಿಯೊಬ್ಬರಿಗೂ ಒಂದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ ಅಂತ ಖಂಡಿತ ಹೇಳಬಲ್ಲೆ.

  ಡ್ರಾಮಾಗಳಲ್ಲಿ ಅಭಿನಯಿಸಿ ನಟನೆಯಲ್ಲಿ ಪಕ್ವ

  ಡ್ರಾಮಾಗಳಲ್ಲಿ ಅಭಿನಯಿಸಿ ನಟನೆಯಲ್ಲಿ ಪಕ್ವ

  ಫಿಲ್ಮಿಬೀಟ್ ಕನ್ನಡ: ಚಿತ್ರದ ನಾಯಕ ನಟ ರಾಜಕಾರಣಿ ಜಮೀರ್ ಖಾನ್ ಅವರ ಮಗ ಝೈದ್ ಖಾನ್, ಆತನ ಭಾಷೆ, ನಟನೆಯ ಬಗ್ಗೆ ಏನು ಹೇಳುತ್ತೀರಿ?

  ಜಯತೀರ್ಥ: ಆ ಹುಡುಗನ ಸಿನಿಮಾ ಆಸಕ್ತಿಯ ಬಗ್ಗೆ ನಾನು ಮೊದಲು ಒಂದೆರಡು ಮಾತು ಹೇಳಬೇಕು. ನಟನೆಯನ್ನು ತುಂಬಾ ಸೀರಿಯಸ್ಸಾಗಿ ತೆಗೆದುಕೊಂಡಿರುವ ಝೈದ್ ಮೊದಲು ಮುಂಬೈನ ಅನುಪಮ್ ಖೇರ್ ಇನ್ಸ್ಟಿಟ್ಯೂಟ್‌ನಲ್ಲಿ ಒಂದು ವರ್ಷ ತರಬೇತಿ ಪಡೆದು, ಆನಂತರ ಆರು ತಿಂಗಳು ಸ್ಟ್ರೀಟ್ ಪ್ಲೇ, ಡ್ರಾಮಾಗಳಲ್ಲಿ ಅಭಿನಯಿಸಿ ನಟನೆಯನ್ನು ಪಕ್ವಗೊಳಿಸಿಕೊಂಡಿದ್ದಾನೆ. ಪ್ರತಿ ಭಾಷೆಗೂ ತನ್ನದೇ ಆದ ಒಂದು ಡಿಕ್ಷನ್ ಇರುತ್ತದೆ. ಆತನಿಗೆ ಕನ್ನಡ ಓದಲು, ಬರೆಯಲು ಸಹ ಬರುತ್ತದೆ. ಆದರೆ ಕನ್ನಡ ಭಾಷೆ ಮೇಲೆ ಹೆಚ್ಚು ಕಮಾಂಡ್ ಬೇಕು ಅಂತ ಅಭಿನಯತರಂಗದಲ್ಲಿ ಗೌರಿ ಮೇಡಂ ಅವರ ಹತ್ತಿರ ಮೂರು ತಿಂಗಳು ತರಬೇತಿ ಕೊಡಿಸಲಾಗಿದೆ. ಆನಂತರ ಮತ್ತೆ ಮೂರು ತಿಂಗಳು ಚಿತ್ರದ ಪಾತ್ರ 'ಸಿದ್ಧಾರ್ಥ್' ನಾಗಿ ಪಾತ್ರದೊಳಗೆ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಹೀಗಾಗಿ ನಾನು ಕೇವಲ 65 ದಿನಗಳಲ್ಲಿ ಈ ಚಿತ್ರವನ್ನು ಯಶಸ್ವಿಯಾಗಿ ಮಾಡಿ ಮುಗಿಸಲು ಸಾಧ್ಯವಾಯಿತು.

  ಕೇವಲ ಆರೇ ಆರು ಪ್ರಮುಖ ಪಾತ್ರಗಳು

  ಕೇವಲ ಆರೇ ಆರು ಪ್ರಮುಖ ಪಾತ್ರಗಳು

  ಫಿಲ್ಮಿಬೀಟ್ ಕನ್ನಡ: ಈ ಚಿತ್ರದ ಇತರ ಪ್ರಮುಖ ಪಾತ್ರಗಳ ಬಗ್ಗೆ ಏನು ಹೇಳುತ್ತೀರಿ?

  ಜಯತೀರ್ಥ: ಹಾಗೆ ನೋಡಿದರೆ ಇಡೀ ಚಿತ್ರದಲ್ಲಿ ಇರುವುದು ಕೇವಲ ಆರೇ ಆರು ಪ್ರಮುಖ ಪಾತ್ರಗಳು, ಇವುಗಳನ್ನು ಹೊರತಾಗಿ ಒಂದು ಪ್ರಮುಖ ಪಾತ್ರವಿದೆ, ಅದುವೇ ಕಾಶಿ. 'ಬನಾರಸ್' ಚಿತ್ರದ ಆತ್ಮವೇ ಬನಾರಸ್. ಇದರ ಜೊತೆಗೆ ಅಲ್ಲಿನ ಬಾಬಾಗಳು, ಸಾಧುಗಳು, ಮನೆಗಳು, ಗಂಗೆ, ಕಾಶಿಯ ಚರಿತ್ರೆ ಹೀಗೆ ಪ್ರತಿಯೊಂದು ಚಿತ್ರದ ಭಾಗವಾಗಿದೆ. ಇಲ್ಲಿ ಮತ್ತೊಂದು ವಿಶೇಷವಾದ ವಿಷಯ ಹೇಳಲೇಬೇಕು. ಹಿಂದೆ ರಾಜಕುಮಾರ್ ಅವರ 'ಸನಾದಿ ಅಪ್ಪಣ್ಣ' ಚಿತ್ರದಲ್ಲಿ ಬಿಸ್ಮಿಲ್ಲಾ ಖಾನ್ ಅವರ ಶಹನಾಯಿ ಕೇಳುವ ಭಾಗ್ಯ ನಮ್ಮದಾಗಿತ್ತು. ಈಗ ಮತ್ತೆ 'ಬನಾರಸ್' ಚಿತ್ರದಲ್ಲಿ ಬಿಸ್ಮಿಲ್ಲಾ ಖಾನ್ ಅವರ ಮೊಮ್ಮಗ ಫತೇ ಅಲಿ ಖಾನ್ ಶಹನಾಯಿ ನುಡಿಸಿದ್ದಾರೆ. ಅದು ತೆರೆಯ ಹಿಂದೆ ಮಾತ್ರವಲ್ಲದೆ, ತೆರೆಯ ಮೇಲೆ ಕೂಡ ಒಂದೆರಡು ಸಂದರ್ಭದಲ್ಲಿ ಕೂಡ ಅವರು ಕಾಣಿಸಿಕೊಳ್ಳುತ್ತಾರೆ.

  10 ದಿನ ಕರ್ನಾಟಕದಲ್ಲಿ ಚಿತ್ರೀಕರಿಸಲಾಗಿದೆ

  10 ದಿನ ಕರ್ನಾಟಕದಲ್ಲಿ ಚಿತ್ರೀಕರಿಸಲಾಗಿದೆ

  ಫಿಲ್ಮಿಬೀಟ್ ಕನ್ನಡ: ಬನಾರಸ್ ಚಿತ್ರ ಪೂರ್ತಿಯಾಗಿ ಕಾಶಿಯಲ್ಲೇ ಚಿತ್ರೀಕರಣಗೊಂಡಿರುವ ಚಿತ್ರವೇ?

  ಜಯತೀರ್ಥ: 'ಬನಾರಸ್' ಚಿತ್ರದ ಬಗ್ಗೆ ಒಂದೇ ಸಾಲಿನಲ್ಲಿ ಹೇಳಬೇಕು ಅಂದರೆ 'ಕಾವೇರಿಯಿಂದ ಗಂಗಾರತಿಯವರಿಗೆ...'. ಚಿತ್ರ ಆರಂಭವಾಗುವುದು ನಮ್ಮ ಕರ್ನಾಟಕದ ಕಾವೇರಿ ತೀರದಿಂದ, ಇಲ್ಲಿನ ವೀರ ಪರಂಪರೆ ವೀರಗಾಸೆಯೊಂದಿಗೆ. ಇದು ಮುಕ್ತಾಯವಾಗುವುದು ಜಗತ್ತಿನ ಅತ್ಯಂತ ಪುರಾತನವಾದ ನಗರಿ ಕಾಶಿಯ ಗಂಗಾರತಿಯೊಂದಿಗೆ. ಇದರಲ್ಲಿ ನಮ್ಮ ಕನ್ನಡನಾಡಿನ ಕಲೆ, ಜನಪದ, ಸಾಹಿತ್ಯದ ಸೊಗಡು ಬೆಸೆದುಕೊಂಡಿದೆ. ಒಟ್ಟು 65 ದಿನದ ಚಿತ್ರೀಕರಣದಲ್ಲಿ 55 ದಿನ ಕಾಶಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ ಉಳಿದ 10 ದಿನ ಕರ್ನಾಟಕದಲ್ಲಿ ಚಿತ್ರೀಕರಿಸಲಾಗಿದೆ.

  ಬಹುತೇಕ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗಬಹುದು

  ಬಹುತೇಕ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗಬಹುದು

  ಫಿಲ್ಮಿಬೀಟ್ ಕನ್ನಡ: ಬನಾರಸ್ ಎಷ್ಟು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ?

  ಜಯತೀರ್ಥ: 'ಬನಾರಸ್' ಚಿತ್ರವನ್ನು ಆರಂಭಿಸಿದಾಗ ಇದು ಕನ್ನಡದ ಚಿತ್ರವಾಗಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ನಿರ್ಮಾಪಕರು ಚಿತ್ರವನ್ನು ನೋಡಿ ಕಾಶಿಯ ಹಿನ್ನೆಲೆಯ ಕಥಾವಸ್ತುವಿದು, ಎಲ್ಲಾ ಭಾಷೆಯ ಜನರಿಗೂ ಕೂಡ ಅನ್ವಯಿಸುತ್ತದೆ ಮತ್ತು ತಲುಪಿಸಲು ಸರಿಯಾದ ಚಿತ್ರವೆಂದು ಭಾವಿಸಿ ಈಗ ಇದನ್ನು ಈಗ 5 ಭಾಷೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಬಹುತೇಕ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗಬಹುದು. ಈಗಾಗಲೇ ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ, T-ಸೀರಿಯಸ್ ದೊಡ್ಡ ಮೊತ್ತಕ್ಕೆ ಖರೀದಿಸಿವೆ. ಚಿತ್ರದ ಮೋಷನ್ ಪೋಸ್ಟರ್ ನವಂಬರ್ 1ರಂದು ಬಿಡುಗಡೆಗೊಳಿಸಲಾಗುತ್ತದೆ.

  ಮತ್ತೆ ಮರಳಿ ರಂಗಭೂಮಿಯ ಕಡೆಗೆ ಮುಖ ಮಾಡುವೆ

  ಮತ್ತೆ ಮರಳಿ ರಂಗಭೂಮಿಯ ಕಡೆಗೆ ಮುಖ ಮಾಡುವೆ

  ಫಿಲ್ಮಿಬೀಟ್ ಕನ್ನಡ: ಕೊನೆಯದಾಗಿ, ಜಯತೀರ್ಥ ಅವರು ಮೂಲತಃ ರಂಗಭೂಮಿ ಹಿನ್ನೆಲೆಯಿಂದ ಬಂದವರು, ನಾಟಕರಂಗದಿಂದ ಈಗ ಸಂಪೂರ್ಣವಾಗಿ ವಿಮುಖಗೊಂಡಿದ್ದಾರೆ?

  ಜಯತೀರ್ಥ: ಹಾಗೇನಿಲ್ಲ, ರಂಗಭೂಮಿ ಬಿಟ್ಟು ಅಥವಾ ಅದನ್ನು ಮರೆತು ಮುಂದಕ್ಕೆ ಸಾಗಲು ನನ್ನಿಂದ ಸಾಧ್ಯವೇ ಇಲ್ಲ. ಈಗಲೂ ನಾನು ಮತ್ತು ನನ್ನ ಸ್ನೇಹಿತ ಸ್ಥಾಪಿಸಿರುವ 'ಸಮಷ್ಟಿ' ಮೂಲಕ ಪ್ರೊಸೆನಿಯಮ್ ಥಿಯೇಟರ್ ನಾಟಕಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ನಾವು 'ಸದಾರಮೆ','ಪ್ರಮೀಳಾರ್ಜುನ ಯಂ' ನಾಟಕಗಳನ್ನು ರಂಗಶಂಕರದಲ್ಲಿ ಪ್ರದರ್ಶಿಸಿದ್ದೇವೆ. ಆದರೆ ಪ್ರಸ್ತುತ ನಾಟಕ ಬರೆಯುವ ಅಥವಾ ನಿರ್ದೇಶಿಸುವ ಕೆಲಸ ನಡೆದಿಲ್ಲ. ಒಂದಲ್ಲಾ ಒಂದು ದಿನ ನನಗೆ ಸಿನಿಮಾ ಸಾಕು ಅನಿಸಿದರೆ ಅಥವಾ ಸಿನೆಮಾರಂಗಕ್ಕೆ ನಾನು ಬೇಡ ಅನಿಸಿದರೆ ನಾನು ಮತ್ತೆ ಮರಳಿ ರಂಗಭೂಮಿಯ ಕಡೆಗೆ ಮುಖ ಮಾಡುವೆ. ಅದರಲ್ಲೂ ಮುಂದಿನ ಪೀಳಿಗೆಯಾದ ಹಳ್ಳಿಗಾಡಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ರಂಗ ಚಟುವಟಿಕೆಗಳ ಮೂಲಕ ಸಮಾಜಮುಖಿಯಾಗಿಸುವ ಕೆಲಸವನ್ನು ಮಾಡುತ್ತೇನೆ. ಮಾನವೀಯ ಮೌಲ್ಯಗಳುಳ್ಳ ಹೊಸಪೀಳಿಗೆ ಒಂದನ್ನು ಹುಟ್ಟುಹಾಕುವ ಕ್ರಿಯೆಯಲ್ಲಿ ನನ್ನ ರಂಗ ಚಟುವಟಿಕೆಗಳನ್ನು ಮುಂದುವರಿಸುವೆ.

  English summary
  Interview with Kannada Director and Writer Jayathirtha. He talks about Banaras movie and all his upcoming projects. Read on.
  Friday, October 29, 2021, 11:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X