ಇರಾನ್-ಇಸ್ರೇಲ್ ಯುದ್ಧ ; ಯುದ್ದ ಅಂದರೆ ತಂತ್ರಗಾರಿಕೆ ಅಲ್ಲ ತಂತ್ರಜ್ಞಾನ - ಜೇಮ್ಸ್ ಚೇತನ್ ಕುಮಾರ್ !
ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಕಡಿಮೆಯಾಗುವ ಲಕ್ಷಣ ಕಂಡು ಬರುತ್ತಿಲ್ಲ. ಬದಲಿಗೆ ಮೊದಲಿಂದ ಪ್ರಕ್ಷುಬದ್ದತೆಯಿಂದಲೇ ಕೂಡಿರುವ ಮಧ್ಯ ಪ್ರಾಚ್ಯದಲ್ಲಿ ಈಗ ಪರಿಸ್ಥಿತಿ ಇನ್ನೂ ಉಲ್ಬಣಿಸಿದೆ. ಇರಾನ್‌ನ ಸೇನಾ ಮತ್ತು ಅಣ್ವಸ್ತ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ನಡೆಸಿದೆ. ಇರಾನ್ ಕೂಡ ಪ್ರತಿದಾಳಿಯನ್ನು ನಡೆಸುತ್ತಿದೆ. ಇನ್ನು ಎಲ್ಲರಿಗೆ ಗೊತ್ತಿರುವಂತೆ ಯುದ್ಧದಿಂದಾಗು ಅನಾಹುತಗಳು ಅಪಾರ.
ಈ ದೈಹಿಕ ಯುದ್ದ ಕೇವಲ ಯುದ್ದಭೂಮಿಗಷ್ಟೇ ಸೀಮಿತವಾಗುವುದಿಲ್ಲ. ಆರ್ಥಿಕ, ಸಾಮಾಜಿಕ ಮತ್ತು ಮಾನಸಿಕವಾಗಿ ಕೂಡ ಈ ಯುದ್ಧ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ಯುದ್ದಕ್ಕಿಂತ ಶಾಂತಿ ಶ್ರೇಷ್ಠ ಎನ್ನುವ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸುತ್ತಾರೆ. ಯುದ್ಧದಲ್ಲಿ ಸಾವು-ನೋವು ಖಚಿತ ಮಾತುಕಥೆಯೊಂದೇ ಪರಿಹಾರ ಎನ್ನುವ ಮಾತುಗಳನ್ನಾಡುತ್ತಾರೆ.

ಈ ಕಾರಣಕ್ಕಾಗಿಯೇ ಮಹಾತ್ಮಾ ಗಾಂಧಿಯವರ ಶಾಂತಿ ಮಂತ್ರವನ್ನು ಕೂಡ ಅನೇಕರು ಮೆಚ್ಚಿಕೊಳ್ಳುತ್ತಾರೆ. ಯುದ್ಧದ ಈ ಭೀಕರತೆಯ ಕುರಿತು ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಚೇತನ್ ಕುಮಾರ್ ತಮ್ಮ ಅಭಿಪ್ರಾಯವನ್ನು ನಿಮ್ಮ ಫಿಲ್ಮಿಬೀಟ್ ಕನ್ನಡ ವೆಬ್ ಸೈಟ್ ಜೊತೆ ಹಂಚಿಕೊಂಡಿದ್ದಾರೆ. ಅವರ ಜೊತೆಗಿನ ಮಾತುಕಥೆಯ ವಿವರ ಇಲ್ಲಿದೆ.
ಯುದ್ದದಿಂದ ಕೇವಲ ನಷ್ಟವಾಗುತ್ತೆ
ಯುದ್ಧ ಎನ್ನುವುದೇ ನಷ್ಟ. ಹೀಗಾಗಿಯೇ ನಮ್ಮ ದೇಶ ಯುದ್ಧದ ವಿಚಾರ ಬಂದಾಗ ತುಂಬಾನೇ ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳುತ್ತೆ. ಇನ್ನು ಐತಿಹಾಸಿಕ, ಪೌರಾಣಿಕ ಕಾಲದಿಂದ ನಾವು ಗಮನಿಸುತ್ತಾ ಬಂದರೆ ಯುದ್ಧದಿಂದ ಅನೇಕ ಹಾನಿಗಳಾಗಿವೆ. ಯಾವಾಗಲೂ ಯುದ್ಧ ನೋವನ್ನೇ ಕೊಡುತ್ತೆ ಎನ್ನುತ್ತಾರೆ ಚೇತನ್ ಕುಮಾರ್.
ತಂತ್ರಗಾರಿಕೆ ಬದಲು ತಂತ್ರಜ್ಞಾನ
ಭಾರತ ಮತ್ತು ಪಾಕಿಸ್ತಾನದ ನಡುವೆ ಇತ್ತೀಚೆಗೆ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾದಾಗ ನಾವು ನೀಡಿದ ಪ್ರತಿಕ್ರಿಯೆ ಧೈರ್ಯದಿಂದ ಕೂಡಿತ್ತು. ಆದರೆ ಈಗ ಚಿತ್ರದ ವಿಚಾರಕ್ಕೆ ಬಂದರೆ.. ಯುದ್ಧದ ಸನ್ನಿವೇಶಗಳು
ಅಂದಾಗ ತುಂಬಾನೇ ಹೋಮ್ ವರ್ಕ್ ಮಾಡಬೇಕಾಗುತ್ತೆ. ಯಾಕೆಂದರೆ.. ಯುದ್ಧದಲ್ಲಿ ಕೂಡ ಹಲವು ತಂತ್ರಗಳಿವೆ. ಈಗಲ್ಲ ಮಹಾಭಾರತದ ಕಾಲದಿಂದ ಕೂಡ ಚಕ್ರವ್ಯೂಹ ಇರಬಹುದು, ಗರುಡ ರೇಖಾ ಇರಬಹುದು, ಹೀಗೆ ಹಲವು ತಂತ್ರಗಳಿಂದ ಯುದ್ದ ಕೂಡಿರುತ್ತೆ ಎನ್ನುವುದು ಚೇತನ್ ಕುಮಾರ್ ಅವರ ಮಾತು
ತಂತ್ರಗಾರಿಕೆ ಬದಲು ತಂತ್ರಜ್ಞಾನ ಬೆಳೆದಿದೆ
ಇನ್ನು ಇದೆಲ್ಲ ಅವತ್ತಾದರೆ ಇವತ್ತಿನ ಕಾಲದಲ್ಲಿ ತಂತ್ರಜ್ಞಾನ ಇನ್ನು ಬೆಳೆದಿದೆ. ಭೂ ಸೇನೆ ಇರಬಹುದು, ವಾಯುಸೇನೆ ಇರಬಹುದು.. ಈಗೀಗ ಮಿಸೈಲ್ ವಾರ್‌ಗಳೇ ಹೆಚ್ಚಾಗಿವೆ. ಡ್ರೋನ್ ಮೂಲಕ ದಾಳಿಗಳನ್ನು ಮಾಡಲಾಗುತ್ತಿದೆ. ಹೀಗೆ ಕಾಲ ಬದಲಾದಂತೆ ಯುದ್ದದ ಶೈಲಿ ಬದಲಾಗುತ್ತಿದೆ. ಇನ್ನು ಒಂದೊಂದು ದೇಶಕ್ಕೂ ಅದರದ್ದೇ ಆದ ಯುದ್ಧದ ನೀತಿ-ನಿಯಮಗಳಿವೆ. ರೂಪರೇಶೆಗಳಿವೆ. ಉದಾಹರಣೆಗೆ ಆ ಕಾಲದಲ್ಲಿ ಕಾರ್ಗಿಲ್ ಯುದ್ಧ ನಡೆದಾಗ ದೈಹಿಕ ಸಂಘರ್ಷ ಹೆಚ್ಚಾಗಿತ್ತು. ಯೋಧರ ಮುಖಾಮುಖಿಯಾಗಿತ್ತು. ಆದರೆ ಈಗ ತಂತ್ರಜ್ಞಾನ ಬದಲಾಗಿದೆ. ವಾರ್ ಸ್ಟ್ಟಾಟೆಸ್ಟಿಕ್ ಬದಲಾಗಿದೆ. ಸ್ಯಾಟ್‌ಲೈಟ್ ಮುಖಾಂತರ ಈಗ ಚಲನ ವಲನ ಗೊತ್ತಾಗುತ್ತೆ ಎಂದು ಹೇಳಿದ್ದಾರೆ ಚೇತನ್ ಕುಮಾರ್.

ಪರಮಾಣು ಭಯ
ಇನ್ನು ನ್ಯೂಕ್ಲಿಯರ್ ವಾರ್ ತುಂಬಾನೇ ಆತಂಕ ಮತ್ತು ಆಘಾತಕಾರಿಯಾದದ್ದು. ಒಂದು ಇಡೀ ದೇಶವನ್ನೇ ಸರ್ವನಾಶ ಮಾಡುವ ಶಕ್ತಿ ಪರಮಾಣುಗೆ ಇರುತ್ತೆ. ಆ ದೇಶ ಈ ದೇಶ ಅಂತಲ್ಲ. ಈ ತರಹದ ಯುದ್ಧಗಳೆಲ್ಲ ತುಂಬಾನೇ ಅಪಾಯಕಾರಿ. ಇನ್ನು ಯುದ್ಧ ಕೇವಲ ಯುದ್ದ ಅಲ್ಲ. ಅದರಿಂದಾಗುವ ಮಾನಸಿಕ- ಆರ್ಥಿಕ ವೇದನೆಗಳು ಅಪಾರವಾದವು. ಇಸ್ರೇಲ್ ಮತ್ತು ಇರಾನ್ ವಿಚಾರಕ್ಕೆ ಬಂದರೆ ಅವರ ನಡುವೆ ಮೊದಲಿಂದ ಸಂಘರ್ಷ ಇದ್ದೇ ಇತ್ತು. ಆದರೆ ಈಗ ಅದು ವಿಕೋಪಕ್ಕೆ ತಿರುಗಿದೆ. ಎರಡು ರಾಷ್ಟ್ರಗಳ ನಡುವೆ ಶೀತಲ ಸಮರ ನಡೆದು ಈ ಹಂತಕ್ಕೆ ಬಂದಿದೆ ಎಂದು ಫಿಲ್ಮಿಬೀಟ್ ಕನ್ನಡಗೆ ಚೇತನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಯುದ್ದ ವ್ಯಾಪಾರ ಆಗಿದೆ
ಇನ್ನು ದುರಾದೃಷ್ಟ ಅಂದರೆ ಇಂತಹ ಸಂದರ್ಭಗಳಲ್ಲಿ ಕೂಡ ಕೆಲವರು ತಮ್ಮ ಸ್ವಾರ್ಥಕ್ಕೆ ಈ ಯುದ್ದವನ್ನು ಉಪಯೋಗಿಸಿಕೊಳ್ಳುತ್ತಾರೆ. ಬೇರೆಯವರ ಸಮಾಧಿ ಮೇಲೆ ವ್ಯಾಪಾರ ಮಾಡುತ್ತಾರೆ ಎಂದು ಕೂಡ ಚೇತನ್ ಕುಮಾರ್ ಹೇಳಿದ್ದಾರೆ.


Click it and Unblock the Notifications











