For Quick Alerts
  ALLOW NOTIFICATIONS  
  For Daily Alerts

  ನಿಮ್ಮ ಟಿಕೆಟ್ ಶುಲ್ಕಕ್ಕೆ ತಕ್ಕ ಸಂತೃಪ್ತಿದಾಯಕ ಚಿತ್ರ ಜಿಲ್ಕ’ ಎನ್ನುತ್ತಾರೆ ಕವೀಶ್ ಶೆಟ್ಟಿ

  |

  ಜಿಲ್ಕ ಎನ್ನುವುದು ಹೊಸ ಕನ್ನಡ ಚಿತ್ರದ ಹೆಸರು. ಸದ್ಯದಲ್ಲೇ ತೆರೆ ಕಾಣಲಿರುವ ಈ ಚಿತ್ರವನ್ನು ನಿರ್ದೇಶಿಸಿ ನಾಯಕರಾಗಿರುವವರು ನವ ಪ್ರತಿಭೆ ಕವೀಶ್ ಶೆಟ್ಟಿ. ಚಿತ್ರದ ಬಗ್ಗೆ ಅವರು ಹೆಚ್ಚಿನ ಮಾಹಿತಿ ನೀಡುವುದಿಲ್ಲವಾದರೂ, ಟಿಕೆಟ್ ತೆಗೆದು ಚಿತ್ರ ನೋಡುವವರಿಗೆ ಪೈಸಾ ವಸೂಲಿಯಾಗುವ ತೃಪ್ತಿ ನೀಡುವ ಭರವಸೆ ಕೊಡುತ್ತಾರೆ. ಸಾಮಾನ್ಯವಾಗಿ ಕರಾವಳಿಯಿಂದ ಮುಂಬೈ ಸೇರಿದ ಹುಡುಗರು ಹೋಟೆಲ್ ಉದ್ಯಮದಲ್ಲಿ ಬೆಳೆಯುವುದು ಮಾಮೂಲು.

  ಆದರೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಲೇ ರಾತ್ರಿ ಶಾಲೆಯ ಮೂಲಕ ಕಲಿತು ಎಂಬಿಎ ಮಾಡಿದವರು ಕವೀಶ್ ಶೆಟ್ಟಿ. ಸಿನಿಮಾರಂಗ ಪ್ರವೇಶಿಸುವ ಉದ್ದೇಶ ಇರಿಸಿದ್ದರೂ ಎಂಬಿಎ ಮಾಡಿದ್ದೇಕೆ? ಆನಂತರ ಸಿನಿಮಾರಂಗದ ಕನಸು ಮುಂದುವರಿದಿದ್ದು ಹೇಗೆ? ನಿರ್ದೇಶಕನಾಗಲೆಂದು ಬಂದು ನಾಯಕನಾಗಿದ್ದು ಹೇಗೆ? ಪ್ರಸ್ತುತ ತಮ್ಮ ಸಾರಥ್ಯದ ಮೂಲಕ ತೆರೆಗೆ ಸಿದ್ಧವಾಗಿರುವ ಜಿಲ್ಕ ಚಿತ್ರದ ವಿಶೇಷತೆಗಳೇನು? ಚಿತ್ರವನ್ನು ಮೂರು ಭಾಷೆಗಳಲ್ಲಿ ಹೊರತರುತ್ತಿರುವುದೇಕೆ? ಎನ್ನುವ ಎಲ್ಲ ಪ್ರಶ್ನೆಗಳಿಗೆ ವಿವರವಾದ ಉತ್ತರವನ್ನು ಫಿಲ್ಮೀಬೀಟ್ ಜತೆಗೆ ಇಲ್ಲಿ ಹಂಚಿಕೊಂಡಿದ್ದಾರೆ.

   ನಿಮ್ಮ ಚಿತ್ರಕ್ಕೆ 'ಜಿಲ್ಕ' ಎನ್ನುವ ಹೆಸರು ಯಾಕೆ?

  ನಿಮ್ಮ ಚಿತ್ರಕ್ಕೆ 'ಜಿಲ್ಕ' ಎನ್ನುವ ಹೆಸರು ಯಾಕೆ?

  ಚಿತ್ರದಲ್ಲಿ ಎರಡು ತಲೆಮಾರುಗಳ ನಡುವಿನ ಸಂಬಂಧಗಳು ಹೇಗೆ ವಿಭಿನ್ನವಾಗಿರುತ್ತವೆ, ಎನ್ನುವುದನ್ನು ಹೇಳಿದ್ದೇನೆ. ಆದರೆ ಚಿತ್ರಕ್ಕೆ ತಲೆಮಾರು, ಪೀಳಿಗೆ ಎನ್ನುವ ಹೆಸರು ಸೂಕ್ತವಾಗಿಲ್ಲದ ಕಾರಣ, ಕ್ಯಾಚಿಯಾಗಿರಲಿ ಎನ್ನುವ ಕಾರಣಕ್ಕೆ ಜಿಲ್ಕ ಎಂದು ಹೆಸರಿಟ್ಟಿದ್ದೇನೆ. ಅಲ್ಲದೆ ಸೊಮಾಲಿಯಾ ಭಾಷೆಯಲ್ಲಿ ಜಿಲ್ಕ ಎಂದರೆ ಜನರೇಶನ್ ಎಂದು ಅರ್ಥ.

   ಮುಂಬೈನಲ್ಲಿ ಸಿನಿಮಾ ಕನಸು ಚಿಗುರಿದ್ದು ಹೇಗೆ?

  ಮುಂಬೈನಲ್ಲಿ ಸಿನಿಮಾ ಕನಸು ಚಿಗುರಿದ್ದು ಹೇಗೆ?

  ನನಗೆ ಸಿನಿಮಾ ಕನಸು ಬಾಲ್ಯದಿಂದಲೇ ಇತ್ತು. ಡಾ.ರಾಜ್ ಕುಮಾರ್ ಸಿನಿಮಾಗಳ ಅಭಿಮಾನಿ ನಾನು. ಆದರೆ ಮನೆಯಿಂದ ಚಿತ್ರರಂಗ ಸೇರಲು ಪ್ರೋತ್ಸಾಹಿಸಲಾರರು ಎಂದು ಗೊತ್ತಿದ್ದ ಕಾರಣ ಎಸ್ ಎಸ್ ಎಲ್ ಸಿ ಬಳಿಕ ಮಾವನ ಸಹಾಯದಿಂದ ಮುಂಬೈಗೆ ಹೋದೆ. ಅಲ್ಲಿ ಹೋಟೆಲ್ ಕೆಲಸ ಮಾಡುತ್ತಾ ಮನೆಯವರ ಆಸೆಯಂತೆ ಎಂಬಿಎ ಪೂರೈಸಿದೆ. ಅದರ ಬಳಿಕ ರಾತ್ರಿ ಶಾಲೆಯಲ್ಲೇ ಎಂ.ಕಾಮ್ ಕೂಡ ಮುಗಿಸಿದೆ. ಬಳಿಕ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡಬೇಕಾದರೆ ಅಮೀರ್ ಖಾನ್ ಪ್ರೊಡಕ್ಷನ್ಸ್ ಕಡೆಯಿಂದ ಸ್ಕಾಲರ್ ಶಿಪ್ ದೊರಕಿತ್ತು.

   `ಮುಂಗಾರು ಮಳೆ 2’ರಲ್ಲಿ ಕೆಲಸ ಮಾಡಿದ ಅನುಭವ ಹೇಗಿತ್ತು?

  `ಮುಂಗಾರು ಮಳೆ 2’ರಲ್ಲಿ ಕೆಲಸ ಮಾಡಿದ ಅನುಭವ ಹೇಗಿತ್ತು?

  ನನಗೆ ನಿರ್ದೇಶಕನಾಗುವ ಮುನ್ನ ಪ್ರ್ಯಾಕ್ಟಿಕಲ್ ಅನುಭವ ಬೇಕಾಗಿತ್ತು. ಆ ಕನಸಿನ ಈಡೇರಿಕೆಗಾಗಿ ಒಬ್ಬರು ನಿರ್ದೇಶಕರಿಗೆ ಅಸಿಸ್ಟೆಂಟ್ ಆಗಬೇಕಾಗಿತ್ತು. ಹಾಗೆ ಶಶಾಂಕ್ ಸರ್ ಅವರಿಗೆ `ಮುಂಗಾರು ಮಳೆ2' ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗುವ ಅವಕಾಶ ದೊರಕಿತು. ಆ ಅನುಭವವೇನೋ ಚೆನ್ನಾಗಿತ್ತು. ಆದರೆ ಅದೇ ಸಮಯದಲ್ಲಿ ಸ್ಲಿಪ್ ಡಿಸ್ಕ್ ಆದ ಕಾರಣ `ಇನ್ನು ಮೇಲೆ ಕ್ರಿಕೆಟ್ ಮತ್ತು ಜಿಮ್ ಎರಡನ್ನೂ ಬಿಡುವಂತೆ' ಹೇಳಿದ್ದರು ಡಾಕ್ಟರ್. ಓದಿನ ಖರ್ಚಿಗಾಗಿ ಕ್ರಿಕೆಟ್ ಆಡಲು ಶುರು ಮಾಡಿದ್ದ ನಾನು ಓಪನಿಂಗ್ ಬೌಲರ್, ಓಪನಿಂಗ್ ಬಾಟ್ಸ್ಮನ್ ಆಗಿದ್ದೆ. ಆ ಎರಡು ಹವ್ಯಾಸಗಳಿಂದ ದೂರವಾಗಲು ಹೇಳಿದ್ದು ಆಘಾತ ಮೂಡಿಸಿತ್ತು.

   ಆದರೆ ಜಿಮ್ ಇಲ್ಲದೆ ಚಿತ್ರದಲ್ಲಿ ಮೂರು ಗೆಟಪ್ ನಲ್ಲಿ ಕಾಣಿಸಿಕೊಳ್ಳಲು ನಿಮಗೆ ಸಾಧ್ಯವಾಗಿದ್ದು ಹೇಗೆ?

  ಆದರೆ ಜಿಮ್ ಇಲ್ಲದೆ ಚಿತ್ರದಲ್ಲಿ ಮೂರು ಗೆಟಪ್ ನಲ್ಲಿ ಕಾಣಿಸಿಕೊಳ್ಳಲು ನಿಮಗೆ ಸಾಧ್ಯವಾಗಿದ್ದು ಹೇಗೆ?

  ಮುಂಗಾರುಮಳೆಯ ಬಳಿಕ ಒಂದುವರ್ಷ ಮನೆಯಲ್ಲೇ ಇದ್ದೆ. ಈ ಸಂದರ್ಭದಲ್ಲಿ ಸ್ನೇಹಿತರೊಬ್ಬರ ಸಲಹೆಯಂತೆ ನಿಧಾನಕ್ಕೆ ಜಿಮ್ ಮಾಡತೊಡಗಿದೆ. ಡಿಸ್ಕ್ ನೋವು ಮಾಯವಾಯಿತು. ಹಾಗೆ ಅದನ್ನೇ ಮುಂದುವರಿಸಿದೆ. ಆದರೆ ಸ್ವತಃ ನಿರ್ದೇಶನದ ವಿಚಾರಕ್ಕೆ ಬಂದರೆ ನನಗೆ ನಿರ್ಮಾಪಕರೇ ಸಿಕ್ಕಿರಲಿಲ್ಲ. ಹಾಗೆ ಬಜೆಟ್ ಸಣ್ಣದಾದಾಗ ಸ್ಟಾರ್ ಕಲಾವಿದರನ್ನು ಬಳಸುವಂತಿರಲಿಲ್ಲ. ಮಾತ್ರವಲ್ಲ, ನನ್ನ ಚಿತ್ರದ ನಾಯಕ ಮೂರು ಕಾಲಘಟ್ಟಗಳಲ್ಲಿ ಕಾಣಿಸಿಕೊಳ್ಳಬೇಕಿತ್ತು. ಹಾಗಾಗಿ ನಿರ್ದೇಶಕನಾಗಬೇಕಿದ್ದ ನಾನೇ ಹೈಸ್ಕೂಲ್ ಡೇಸ್ ಗೆ 51ಕೆ.ಜಿ, ಕಾಲೇಜ್ ಡೇಸ್ ಗೆ 68ಕೆ.ಜಿ ಮತ್ತು ಕಾಲೇಜ್ ಬಳಿಕದ ದೃಶ್ಯಗಳಲ್ಲಿ 78 ಕೆಜಿ ಮೈತೂಕದಲ್ಲಿ ಕಾಣಿಸಿದ್ದೇನೆ. ಅದಕ್ಕಾಗಿ ದಿನಕ್ಕೆ 15 ಮೊಟ್ಟೆ ಮತ್ತು ಅರ್ಧ ಕೆಜಿ ಚಿಕನ್, ಡ್ರೈ ಫ್ರುಟ್ಸ್ ತಿಂದು ಹತ್ತು ಕೆಜಿ ತೂಕ ಹೆಚ್ಚಿಸಿಕೊಂಡೆ. ಆದರೆ ಇದರ ನಡುವೆ ಎರಡು ಬಾರಿ ಜಾಂಡೀಸ್ ಬಂದು 62ಕೆ.ಜಿಗೆ ಇಳಯುವಂತಾಗಿತ್ತು.

   ಮಲಯಾಳಂನ `ಪ್ರೇಮಂ’ ಅಥವಾ ಕನ್ನಡದ `ಚಾರ್ಮಿನಾರ್’ ಚಿತ್ರಕ್ಕಿಂತ ಇದು ಹೇಗೆ ಭಿನ್ನ?

  ಮಲಯಾಳಂನ `ಪ್ರೇಮಂ’ ಅಥವಾ ಕನ್ನಡದ `ಚಾರ್ಮಿನಾರ್’ ಚಿತ್ರಕ್ಕಿಂತ ಇದು ಹೇಗೆ ಭಿನ್ನ?

  ನಾಯಕನಿಗೆ ಮೂರು ಕಾಲದ ಲುಕ್ ಇದೆ ಎನ್ನುವುದರ ಹೊರತು ಬೇರೆ ವಿಚಾರಗಳಲ್ಲಿ ಆ ಚಿತ್ರಗಳೊಂದಿಗೆ ಯಾವ ಹೋಲಿಕೆಯೂ ಇಲ್ಲ. ಕತೆಯ ವಿಚಾರಕ್ಕೆ ಬಂದರೆ ಇದು ಬೇರೆಯೇ ಸಬ್ಜೆಕ್ಟ್. ಇಲ್ಲಿ ಎರಡು ಜನರೇಶನ್ ಮಂದಿ ಲವ್ ಮತ್ತು ರಿಲೇಶನ್ ಶಿಪ್ ಗಳನ್ನು ನೋಡುವ ರೀತಿ ಹೇಗೆ ವಿಭಿನ್ನವಾಗಿದೆ ಎಂದು ತೋರಿಸಲಾಗಿದೆ. ಚಿತ್ರವನ್ನು ಕನ್ನಡದೊಂದಿಗೆ ಮರಾಠಿ ಮತ್ತು ಹಿಂದಿ ಹೀಗೆ ಮೂರು ಭಾಷೆಗಳಲ್ಲಿ ತೆರೆಕಾಣುತ್ತಿರುವ ಚಿತ್ರ. ರಂಗಭೂಮಿಯ ಪ್ರತಿಭೆ ಪೃಥ್ವೀರಾಜ ಕವತ್ತಾರು ಪ್ರಧಾನ ಪಾತ್ರವೊಂದನ್ನು ನಿರ್ವಹಿಸುತ್ತಿದ್ದು, ಪ್ರಿಯಾ ಹೆಗ್ಡೆ ಮತ್ತು ಲಕ್ಷ್ಯಾ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. ಪ್ರೇಮಕತೆ ಕೂಡ ಇರುವುದರಿಂದ ಪ್ರೇಮಿಗಳ ದಿನಾಚರಣೆಯಂದು ಚಿತ್ರ ತೆರೆಗೆ ತರುವ ಯೋಜನೆ ಇದೆ. ಮರಾಠಿಯಲ್ಲಿ ಜೀ ಸ್ಟುಡಿಯೋ ಮತ್ತು ಹಿಂದಿಯಲ್ಲಿ ಎರೊಸ್ ಇಂಟರ್ನ್ಯಾಶನಲ್ ಜತೆಗೆ ಮಾತುಕತೆ ನಡೆದಿದೆ.

   ನಿಮ್ಮ ಕುಟುಂಬದ ಬಗ್ಗೆ ಅವರ ಪ್ರೋತ್ಸಾಹದ ಬಗ್ಗೆ ಹೇಳಿ

  ನಿಮ್ಮ ಕುಟುಂಬದ ಬಗ್ಗೆ ಅವರ ಪ್ರೋತ್ಸಾಹದ ಬಗ್ಗೆ ಹೇಳಿ

  ನನ್ನ ಊರು ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿರುವ ಬೆಳಂಜೆ. ಪ್ರೇಮ ಮತ್ತು ಸುಧಾಕರ್ ಶೆಟ್ಟಿ ಕೃಷಿಕ ದಂಪತಿಯ ಇಬ್ಬರು ಪುತ್ರರಲ್ಲಿ ನಾನೇ ಕಿರಿಯವನು. ಅಣ್ಣ ಶ್ರೀಶ ಶೆಟ್ಟಿ ಕ್ರಿಕೆಟ್ ಆಟಗಾರ. ಮುಂಬೈ ಎ ಡಿವಿಶನ್ ನಲ್ಲಿ ಆಟಗಾರ. ತಾಯಿಗೆ ಈಗಾಗಲೇ ನನ್ನ ಸಿನಿಮಾದ ಒಂದಷ್ಟು ದೃಶ್ಯಗಳನ್ನು ತೋರಿಸಿದ್ದೇನೆ. ಅವರಿಗಾಗಿಯೇ ಕನ್ನಡದಲ್ಲಿ ಚಿತ್ರ ಮಾಡಲೇಬೇಕು ಎನ್ನುವ ಆಕಾಂಕ್ಷೆ ಇತ್ತು. ಅವರಿಗೆ ನನ್ನನ್ನು ಮಜಾಟಾಕೀಸ್ ನಲ್ಲಿ ನೋಡುವ ಆಸೆ ಇದೆ. ನಾನು ಅವರಿಗೆ ಸಿನಿಮಾ ತೋರಿಸುವ ಹಂಬಲದಲ್ಲಿದ್ದೇನೆ. ಒಟ್ಟು ಪ್ರೋತ್ಸಾಹದ ವಿಚಾರಕ್ಕೆ ಬಂದರೆ ನನ್ನ ಸಹಾಯಕ ನಿರ್ದೇಶಕರಿಂದ ಹಿಡಿದು ಚಿತ್ರತಂಡದ ಪ್ರತಿಯೊಬ್ಬರೂ ಬೆಂಬಲವಾಗಿ ನಿಂತಿದ್ದಾರೆ.

  English summary
  New Comer Director com Actor Kaveesh Shetty is from Udupi. He Directed One movie in Three languages. Film’s name is Jilka. He also acted as hero in this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X