ಸಂದರ್ಶನ : 'ಯಾವತ್ತೂ ಹೀರೋ ಆಗಬಾರದು' ಎಂದಿದ್ದ ಯಶ್ ಶೆಟ್ಟಿ ನಿಯಮ ಮುರಿದರು
''ನಾನು ಇಂಡಸ್ಟ್ರಿಗೆ ಬಂದು ಮೂರುವರೆ ವರ್ಷ ಆಯ್ತು. ಈಗ ನನಗೆ ಪ್ರತಿಫಲ ಸಿಗುತ್ತಿದೆ. ಇಲ್ಲಿ ನಾವೇನು ಅಂತ ಪ್ರೂವ್ ಮಾಡಿಕೊಳ್ಳುವ ಸಮಯ ಇದು.'' ಎಂದರು ನಟ ಯಶ್ ವಂತ್ ಶೆಟ್ಟಿ.
''ನಾನು ವಿಲನ್ ಬಿಟ್ಟು, ಹೀರೋ ಆಗೋದೆ ಇಲ್ಲ'' ಎಂದು ನಿರ್ಧಾರ ಮಾಡಿಕೊಂಡು ಇಂಡಸ್ಟ್ರಿಗೆ ಮೂರುವರೆ ವರ್ಷಗಳ ಹಿಂದೆ ಬಂದ ಯಶ್ ಶೆಟ್ಟಿ ಈಗ ತನ್ನ ನಿಯಮವನ್ನು ತಾವೇ ಮುರಿದಿದ್ದಾರೆ. ಅದಕ್ಕೆ ಕಾರಣ 'ಸೂಜಿದಾರ' ಸಿನಿಮಾದ ಕಥೆ.
ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಕಲಿತು, ರಂಗಭೂಮಿಯಲ್ಲಿ ಹೆಸರು ಮಾಡಿರುವ ಯಶ್ ಶೆಟ್ಟಿ ಈಗ ಸಿನಿಮಾ ನಟ ಆಗಿದ್ದಾರೆ. ಅವರ ನಟನೆಯ 'ಸೂಜಿದಾರ' ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ, ವಿಲನ್ ಆಗಿ ಸಾಕಷ್ಟು ಸಿನಿಮಾ ಮಾಡಿರುವ ಅವರು ಮೊದಲ ಬಾರಿಗೆ ಹೀರೋ ಆಗಿದ್ದಾರೆ.
ತಮ್ಮ 'ಸೂಜಿದಾರ' ಸಿನಿಮಾದ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ. ಮುಂದೆ ಓದಿ..
ಸಂದರ್ಶನ : ನವಿ ಕನಸು (ನವೀನ್ ಎಮ್ ಎಮ್)

2 ದಿನಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ, ತಯಾರಿ ಹೇಗೆ ನಡೆಯುತ್ತಿದೆ?
''ತುಂಬ ಚೆನ್ನಾಗಿ ಪ್ರಮೋಷನ್ ಮಾಡುತ್ತಿದ್ದೇವೆ. ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಚಿತ್ರಗಳಿಗೆ ಪ್ರೋತ್ಸಾಹ ಸಿಗುತ್ತಿದೆ. ಸಿನಿಮಾದ ಬಗ್ಗೆ ನಂಬಿಕೆ ಇದೆ. ಆ ಧೈರ್ಯದಿಂದ ಎಲ್ಲ ಕಡೆ ಸಿನಿಮಾದ ಬಗ್ಗೆ ಪ್ರಚಾರ ಮಾಡುತ್ತಿದ್ದೇವೆ. 80ಕ್ಕೂ ಹೆಚ್ಚು ಚಿತ್ರಮಂದಿರಗಳು ಸಿಗುವ ಸಾಧ್ಯತೆ ಇದೆ. ಇಂದು ಥಿಯೇಟರ್ ಲಿಸ್ಟ್ ಫೈನಲ್ ಆಗುತ್ತೆ.''

'ಸೂಜಿದಾರ' ಸಿನಿಮಾ ನಿಮಗೆ ಹೇಗೆ ವಿಶೇಷವಾಗಿದೆ?
''ಇಂಡಸ್ಟ್ರಿಗೆ ಬಂದಾಗ ನಾನು ಯಾವತ್ತೂ ಹೀರೋ ಆಗಬಾರದು. ವಿಲನ್ ಆಗಿಯೇ ಇರಬೇಕು ಎಂದು ನಿರ್ಧಾರ ಮಾಡಿದ್ದೆ. 'ಸೂಜಿದಾರ' ಸಿನಿಮಾಗೆ ಮುಂಚೆ ಎಂಟು ಆಫರ್ ಗಳು ಹೀರೋ ಆಗಲು ಬಂದಿತ್ತು. ಆದರೆ, ಯಾವ ಸ್ಟೋರಿಗಳು ಇಷ್ಟ ಆಗದ ಕಾರಣ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಆದರೆ, 'ಸೂಜಿದಾರ' ಕಥೆ ಕೇಳಿದಾಗ ಒಂದು ಒಳ್ಳೆಯ ಕಥೆಯನ್ನು ಮಿಸ್ ಮಾಡಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಒಪ್ಪಿಕೊಂಡೆ. ಹೀರೋ ಆಗಬಾರದು ಎನ್ನುವ ನನ್ನ ನಿಯಮವನ್ನು ನಾನೇ ಮುರಿದೆ.''

ಚಿತ್ರಕ್ಕೆ ಹರಿಪ್ರಿಯಾ ನಾಯಕಿಯಾಗಿದ್ದು ಹೇಗೆ?
''ಸಂಹಾರ' ಸಿನಿಮಾದಲ್ಲಿ ನಾನು ಹರಿಪ್ರಿಯಾ ಇಬ್ಬರು ಒಟ್ಟಿಗೆ ನಟಿಸಿದ್ವಿ. ಆ ಸಮಯದಲ್ಲಿಯೇ 'ಸೂಜಿದಾರ' ಮಾತುಕತೆ ನಡೆದಿತ್ತು. ಮೇಡಮ್ ಈ ಸ್ಟೋರಿ ಕೇಳಿದ ತಕ್ಷಣ ಒಪ್ಪಿಕೊಂಡರು. ಯಾಕೆಂದರೆ, ಅವರ ಪಾತ್ರ ಅಷ್ಟು ಪ್ರಾಮುಖ್ಯತೆ ಹೊಂದಿತ್ತು. ಇಲ್ಲಿ ನಮ್ಮಿಬ್ಬರ ಪಾತ್ರದಲ್ಲಿ ಜುಗಲ್ ಬಂದಿ ಇದೆ. ಈ ಎರಡು ಪಾತ್ರಗಳಿಗೆ ತುಂಬ ಸೀಕ್ರೆಟ್ ಗಳಿದೆ. ನಾನು ಇಂತಹ ಸಿನಿಮಾ ಮಾಡಿದ್ದೆ ಲಕ್ಕಿ.''

ಇದು ನಿಮ್ಮ ಎಷ್ಟನೇ ಸಿನಿಮಾ?
''ಇದು ನನ್ನ ಇಪ್ಪತೈದನೇ ಸಿನಿಮಾ ಇರಬಹುದು. ಆದರೆ, ಬಿಡುಗಡೆಯಾಗುತ್ತಿರುವ ಹತ್ತನೇ ಸಿನಿಮಾ. ಈಗಾಗಲೇ ಉಪೇಂದ್ರ ಅವರ ಜೊತೆಗೆ 'ರವಿಚಂದ್ರ', ಶಿವಣ್ಣನ ಜೊತೆಗೆ 'ಆನಂದ್', 'ಆ ದೃಶ್ಯ' ಚಿತ್ರದಲ್ಲಿ ರವಿಚಂದ್ರನ್ ಅವರ ಜೊತೆಗೆ, ಹೀಗೆ ಅನೇಕ ಚಿತ್ರಗಳನ್ನು ಮಾಡಿದ್ದೇನೆ. 'ಸಲಗ' ಚಿತ್ರಕ್ಕೂ ಆಯ್ಕೆ ಆಗಿದ್ದೇನೆ. ನಾನು ಹೀರೋ ಆಗಿದ್ದರೂ ನೆಗೆಟಿವ್ ಪಾತ್ರ ಮಾತ್ರ ಬಿಡಲ್ಲ.''

ನಿಮ್ಮ ಪ್ರಕಾರ ಈ ಸಿನಿಮಾದ ಮೂರು ವಿಶೇಷ ಅಂಶಗಳು ಏನು?
''ಮೊದಲನೇಯದು, ಕ್ರೈಮ್ಯಾಕ್ ತುಂಬ ಚೆನ್ನಾಗಿದೆ. ಕನ್ನಡಕ್ಕೆ ಇದು ಹೊಸ ರೀತಿಯ ಕ್ರೈಮ್ಯಾಕ್. ನಮಗೆ ಕೂಡ ಅದು ತುಂಬ ಇಷ್ಟ ಆಗಿದೆ. ಎರಡನೇಯದು, ಹರಿಪ್ರಿಯಾ ಮೇಡಮ್ ನಟನೆ, ಮೂರನೇಯದು, ನಾನು ಮೊದಲ ಬಾರಿಗೆ ಹೀರೋ ಆಗಿದ್ದೇನೆ. ನನ್ನನ್ನು ಈವರೆಗೆ ರಗಡ್ ಲುಕ್ ನಲ್ಲಿ ನೋಡಿದ್ದ ಜನ ಈಗ ಸಾಫ್ಟ್ ಹುಡುಗನ ಪಾತ್ರದಲ್ಲಿ ನೋಡಬಹುದು.''

'ಸೂಜಿದಾರ'ದ ಪಾತ್ರಗಳು ಅದರ ತಯಾರಿಗಳು ಹೇಗಿತ್ತು ?
''ನಿರ್ದೇಶಕರು ಈ ಸಿನಿಮಾದಲ್ಲಿ ನೈಜತೆಗೆ ತುಂಬ ಒತ್ತು ನೀಡಿದ್ದಾರೆ. ನಾನು ಕಥೆ ಕೇಳಿದಾಗಲೇ ಶಂಕರ ಪಾತ್ರಕ್ಕೆ ಫ್ಯಾನ್ ಆದೆ. ನಾಲ್ಕು ತಿಂಗಳು ಆ ಪಾತ್ರಕ್ಕಾಗಿ ತಯಾರಿ ಮಾಡಿಕೊಂಡೆ. ಹರಿಪ್ರಿಯಾ ಮೇಡಮ್ ಕೂಡ ವಾರಗಳ ಕಾಲ ರಿಹರ್ಸಲ್ ನಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣ ಸಮಯದಲ್ಲಿ ಎಮೋಷನ್ಸ್ ಗಳು ಚೆನ್ನಾಗಿ ಬರಲು ಈ ರೀತಿ ಮಾಡಿದ್ದೆವು.''

ನಿಮ್ಮ ರಂಗಭೂಮಿ ಪಯಣ, ಅದರ ಅನುಭವ ಹೇಗಿತ್ತು?
''ನನಗೆ ರಂಗಭೂಮಿಯೇ ಆಧಾರ ಸ್ತಂಭ. ಮೊದಲು ಕಮರ್ಷಿಯಲ್ ಥಿಯೇಟರ್ ನಲ್ಲಿ ಕೆಲಸ ಮಾಡಿ ನಂತರ ನೀನಾಸಂಗೆ ಆಯ್ಕೆ ಆದೆ. ಅಲ್ಲಿಂದ ನ್ಯಾಷಿನಲ್ ಸ್ಕೂಲ್ ಆಫ್ ಡ್ರಾಮಾಗೆ ಹೋದೆ. ಅದು ನನ್ನ ಜೀವನದ ದೊಡ್ಡ ತಿರುವು. ಮುಂಬೈನಲ್ಲಿ ಆಕ್ಟಿಂಗ್ ಕ್ಲಾಸ್ ಹೇಳಿಕೊಡುತ್ತಿದ್ದೆ. ಆಮೇಲೆ 'ಜ್ವಲತಂ' ಸಿನಿಮಾ ಮಾಡಿದೆ. ಅಲ್ಲಿಂದ ಇಲ್ಲಿಯವರೆಗೆ ನನ್ನ ಪಯಣ ಮುಂದುವರೆದಿದೆ.


Click it and Unblock the Notifications











