ನಟಿ ಶ್ರುತಿ ಹರಿಹರನ್ ಸಿನಿಮಾ ಬಿಟ್ಟು ರೇಡಿಯೋ ಜಾಕಿ ಆಗ್ಬಿಟ್ರೆ.?
Recommended Video

ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಾಲ್ಕು ವರ್ಷಗಳಲ್ಲಿ ಯಶಸ್ಸಿನ ಏಣಿ ಹತ್ತಿ ಸದ್ಯ ಬಹು ಬೇಡಿಕೆಯ ಹೀರೋಯಿನ್ ಆಗಿರುವ ನಟಿ ಶ್ರುತಿ ಹರಿಹರನ್. 'ತಾರಕ್', 'ಉಪೇಂದ್ರ ಮತ್ತೆ ಬಾ', 'ದಿ ವಿಲನ್' ಸೇರಿದಂತೆ ಕೈ ತುಂಬಾ ಸಿನಿಮಾಗಳಲ್ಲಿ ಬಿಜಿಯಾಗಿರುವ ನಟಿ ಶ್ರುತಿ ಹರಿಹರನ್ ರೇಡಿಯೋ ಜಾಕಿ ಆಗಲು ಮನಸ್ಸು ಮಾಡಿದ್ದಾರಾ.?
ಹೀಗೊಂದು ಅನುಮಾನ ನಿನ್ನೆ ಬೆಂಗಳೂರಿನ ಮಂತ್ರಿ ಸ್ಕ್ವೇರ್ ನಲ್ಲಿ ನೆರೆದಿದ್ದವರಿಗೆ ಮೂಡಿತು.
'ಸಿಟಿ ಸಿನಿ ಅವಾರ್ಡ್ಸ್-2017' ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುನ್ನುಡಿಯಂತೆ ನಿನ್ನೆ (ಸೆಪ್ಟೆಂಬರ್ 25) ಮಂತ್ರಿ ಸ್ಕ್ವೇರ್ ಮಾಲ್ ನಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು. ಅದಕ್ಕೆ ಅತಿಥಿಯಾಗಿ ಭಾಗವಹಿಸಿದ ನಟಿ ಶ್ರುತಿ ಹರಿಹರನ್, ತಮ್ಮ ಮಾತಿನ ಮಧ್ಯೆ 'ರೇಡಿಯೋ ಜಾಕಿ' ಕೆಲಸಕ್ಕೆ ಸೇರುತ್ತೇನೆ ಎಂದರು.
ಅಷ್ಟರಲ್ಲಿ ಪಕ್ಕದಲ್ಲೇ ಇದ್ದ ಆರ್.ಜೆ ಪ್ರದೀಪ, ''ನೀವು ರೇಡಿಯೋ ಜಾಕಿ ಆದರೆ, ನಮ್ಮ ಕೆಲಸದ ಗತಿ ಏನು.?'' ಎಂದು ನಗೆ ಚಟಾಕಿ ಹಾರಿಸಿದರು. ಅಷ್ಟಕ್ಕೂ, ಇದೆಲ್ಲ ತಮಾಷೆಯೋ ಅಥವಾ ಸೀರಿಯಸ್ಸೋ ಎಂಬ ಕನ್ ಫ್ಯೂಶನ್ ಅಲ್ಲಿದ್ದವರಿಗೆ ಕಾಡಿದ್ದು ಸುಳ್ಳಲ್ಲ. ಸುಮ್ನೆ ಡೌಟ್ ಯಾಕೆ, ಕ್ಲಿಯರ್ ಮಾಡಿಕೊಳ್ಳೋಣ ಅಂತ ನಾವು ನೇರವಾಗಿ ನಟಿ ಶ್ರುತಿ ಹರಿಹರನ್ ಬಳಿ ಪ್ರಶ್ನೆ ಮಾಡಿದ್ವಿ.
ಕಾರ್ಯಕ್ರಮ ಮುಗಿದ ಬಳಿಕ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಪ್ರತಿನಿಧಿ ಜೊತೆ ನಟಿ ಶ್ರುತಿ ಹರಿಹರನ್ ಕೆಲ ಕಾಲ ಹರಟಿದರು. ಅದರ ಆಯ್ದ ಭಾಗ ಇಲ್ಲಿದೆ ಓದಿರಿ....
ಸಂದರ್ಶನ: ಹರ್ಷಿತಾ ರಾಕೇಶ್

ಸಿನಿಮಾ ಬಿಟ್ಟು ರೇಡಿಯೋ ಜಾಕಿ ಆಗಲು ತಯಾರಿ ನಡೆಸಿದ್ದೀರಂತೆ.?
- ಇಲ್ಲ ಇಲ್ಲ. ನಾನು ನಟಿ ಆದ್ಮೇಲಿಂದ ರೇಡಿಯೋ ಸಿಟಿ ಯಾವಾಗಲೂ ನನಗೆ ಸಪೋರ್ಟ್ ಮಾಡುತ್ತಲೇ ಬಂದಿದೆ. ಹೀಗಾಗಿ ಕಾರ್ಯಕ್ರಮದಲ್ಲಿ ಹಾಗೆ ಜೋಕ್ ಮಾಡಿದ್ದು ಅಷ್ಟೆ.

'ರೇಡಿಯೋ ಸಿಟಿ ಸಿನಿ ಅವಾರ್ಡ್ಸ್' ಉದ್ಘಾಟನೆ ಆಯ್ತು. ಟ್ರೋಫಿ ಅನಾವರಣ ಮಾಡಿದ್ರಿ. ಈ ತರಹದ ಪ್ರಶಸ್ತಿ ಪ್ರದಾನ ಸಮಾರಂಭದ ಬಗ್ಗೆ ನಿಮ್ಮ ಅನಿಸಿಕೆ...
- 'ರೇಡಿಯೋ ಸಿಟಿ ಸಿನಿ ಅವಾರ್ಡ್ಸ್' ಹೇಗೆ ನಡೆಯುತ್ತೆ ಅನ್ನೋದರ ಬಗ್ಗೆ ನಾನು ತುಂಬಾ ಕ್ಯೂರಿಯಸ್ ಆಗಿದ್ದೇನೆ. ಆಡಿಯನ್ಸ್ ಗೆ ಪವರ್ ಕೊಟ್ಟಾಗ ಫಲಿತಾಂಶ ಬೇರೆ ಆಗಿರುತ್ತೆ. ಅದೇ ನಿಜವಾದ ಫಲಿತಾಂಶ ಅಂತಲೂ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಯಾಕಂದ್ರೆ, ನಾವು ಸಿನಿಮಾ ಮಾಡುವುದೇ ಜನರಿಗಾಗಿ. ಅವರ ಇಚ್ಛೆ ಏನು ಎಂದು ಈ ಮೂಲಕ ಗೊತ್ತಾಗುತ್ತದೆ.

ಕಲಾವಿದರಿಗೆ ಯಶಸ್ಸು ಮುಖ್ಯವೋ... ಅಥವಾ ಪ್ರಶಸ್ತಿಗಳು ಮುಖ್ಯವೋ...?
- ಪ್ರಶಸ್ತಿಗಳು ಕಲಾವಿದರಿಗೆ ಒಳ್ಳೆಯ ಪ್ರೋತ್ಸಾಹ ಸಿಕ್ಕ ಹಾಗೆ. ಒಂದು ಅವಾರ್ಡ್ ಗೆಲ್ಲುವುದು ಅಂದ್ರೆ ನಿಮ್ಮ ಹಿರಿಮೆಗೆ ಒಂದು ಗರಿ ಸಿಕ್ಕಂತೆ.

ನೀವು ಅಭಿನಯದ 'ತಾರಕ್' ಇದೇ ವಾರ ರಿಲೀಸ್ ಆಗುತ್ತಿದೆ...
- ನಾನು ಕೂಡ ಚಿತ್ರವನ್ನ ತೆರೆಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದೇನೆ. 'ತಾರಕ್' ನಂತರ 'ಉಪೇಂದ್ರ ಮತ್ತೆ ಬಾ' ಬಿಡುಗಡೆ ಆಗಲಿದೆ.


Click it and Unblock the Notifications











