twitter
    For Quick Alerts
    ALLOW NOTIFICATIONS  
    For Daily Alerts

    ಸ್ಪರ್ಶಾ ಆರ್.ಕೆ: ಸಿನಿ ಸಂಗೀತದಲ್ಲೊಂದು ಮಾಧುರ್ಯದ ಉಗಮ

    |

    ಸ್ಪರ್ಶಾ ಎಂದೊಡನೆ ಸುದೀಪ್ ನಟನೆಯ ಮೊದಲ ಚಿತ್ರದ ನೆನಪಾಗುತ್ತದೆ. ಆದರೆ ಪ್ರಸ್ತುತ ಸಿನಿಸಂಗೀತ ಲೋಕದಲ್ಲಿ ಅಂಥದೇ ಒಂದು ಮಾಧುರ್ಯ ಸ್ಪರ್ಶವನ್ನು ಯುವ ಗಾಯಕಿ ಸ್ಪರ್ಶಾ ಆರ್.ಕೆ ನೀಡುತ್ತಿದ್ದಾರೆ. ವೇದಿಕೆಯನೇರಿದರೆ ನಟನೆ, ನೃತ್ಯ, ಸಂಗೀತಕ್ಕೆ ಜೀವ ತುಂಬಬಲ್ಲ ಬಹುಮುಖ ಪ್ರತಿಭೆ. ಅರಳು ಕಂಗಳ ನೋಟ, ಹೊರಳು ಪದಗಳ ಆಟ, ಮಧುರ ಕಂಠದ ಗೀತದ ಮೂಲಕ ಗಾಯಕಿಯರಿಗೆಲ್ಲ ಪಾಠವಾಗುವಂತೆ ಹಾಡುತ್ತಾರೆ.

    ಗೀತರಚನೆಕಾರ ಹೃದಯ ಶಿವ ಅವರ ನಿರ್ದೇಶನದ ಜಯಮಹಲ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಯಾಗಿಯೂ ಗುರುತಿಸಿಕೊಂಡಿರುವ ಸ್ಪರ್ಶಾ ಪ್ರಸ್ತುತ ಲಾಕ್ಡೌನ್ ಸಂದರ್ಭದಲ್ಲಿ ಹಳೆಗನ್ನಡ ಕಾವ್ಯಗಳ ಬಗ್ಗೆ ಫೇಸ್ಬುಕ್ ಕಾರ್ಯಕ್ರಮ ಕೂಡ ನೀಡಿ ಗಮನ ಸೆಳೆದಿದ್ದಾರೆ. ಒಂದು ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲು ಮಾತ್ರ ಸಂಗೀತದ ಸಾಂಗತ್ಯದ ಬಯಸುವವರು ಸ್ಪರ್ಶಾ ಅವರಿಂದ ಕಲಿತುಕೊಳ್ಳಬೇಕಿರುವುದು ತುಂಬ ಇವೆ.

    ಸ್ಪರ್ಧೆ ವೇದಿಕೆಯಲ್ಲಿ ಮಾತ್ರವಲ್ಲ, ಅಭ್ಯಾಸ ನಿರಂತರವಾಗಿದ್ದಾಗಲೇ ಕಲೆಯ ಉಳಿವು ಸಾಧ್ಯ ಎನ್ನುವ ಸತ್ಯವನ್ನು ಅರಿತವರು. ಹಾಗಾಗಿಯೇ ಕಲೆಯನ್ನು ಹವ್ಯಾಸವಾಗಿಸದೇ ಅಭ್ಯಾಸವಾಗಿಸಿದವರು. ಸಿಕ್ಕ ಅವಕಾಶಗಳಲ್ಲಿ ಅದ್ಭುತ ಆಕಾಶ ತೋರಿಸಿದವರು. ಇವರು ಹಾಡಿರುವ ಡಾನ್ಸ್ ಮ್ಯೂಸಿಕಲ್ ಆಲ್ಬಮ್ 'ನೀನೇ' ದೊಡ್ಡ ಹೆಸರು ಮಾಡಿತ್ತು. ಇವರ ಕಂಠದ ಗೀತೆಗಳಿರುವ 'ಬಾಬು ಮಾರ್ಲೆ', 'ವಾರುಣಿ', 'ಗೆಳೆಯ ಗೆಳತಿ' ಮೊದಲಾದ ಸಿನಿಮಾಗಳು ಬಿಡುಗಡೆಯಾಗಲಿವೆ. ಸ್ಪರ್ಶಾ ಜತೆಗೆ ಫಿಲ್ಮೀಬೀಟ್ ನಡೆಸಿರುವ ವಿಶೇಷ ಮಾತುಕತೆ ಇದು.

    ಲಾಕ್ಡೌನ್ ಸಂದರ್ಭದಲ್ಲಿ ಹಳೆಗನ್ನಡದ ಒಲವು ಹೇಗಾಯಿತು?

    ಲಾಕ್ಡೌನ್ ಸಂದರ್ಭದಲ್ಲಿ ಹಳೆಗನ್ನಡದ ಒಲವು ಹೇಗಾಯಿತು?

    ಲಾಕ್ಡೌನ್ ಸಂದರ್ಭ ಅಂತ ಅಲ್ಲ. ಮೊದಲಿಂದಲೂ ನಮಗೆ ಹಳೆಗನ್ನಡ ಸಾಹಿತ್ಯದ ಬಗ್ಗೆ ಒಲವು ಇತ್ತು. ಅದಕ್ಕೆ ವೃತ್ತಿಯಲ್ಲಿ ಕನ್ನಡದ ಉಪನ್ಯಾಸಕಿ ಆಗಿದ್ದಂಥ ನಮ್ಮ ತಾಯಿಯವರೇ ಕಾರಣ. ಹಾಗಾಗಿ ಇದೀಗ ಫೇಸ್ಬುಕ್ ನಲ್ಲಿ ಅಣ್ಣನೊಂದಿಗೆ ಸೇರಿ ಎರಡು ದಿನಕ್ಕೊಮ್ಮೆ ಹಳೆಗನ್ನಡದ ಕಾವ್ಯಗಳಿಗೆ ಅರ್ಥವಿವರಣೆಯನ್ನು ನೀಡುತ್ತೇನೆ. ನಾವು ತಾಯಿಯಿಂದಲೇ ಕಾವ್ಯಗಳನ್ನು ಕೇಳಿ ಬೆಳೆದದವರು. ನಮಗೂ ಆಸಕ್ತಿ ಇತ್ತು.

    ಹಂಚಿಕೊಳ್ಳು ಸರಿಯಾದ ಸಮಯ ಕೂಡಿ ಬಂದಿರಲಿಲ್ಲ. ನಾವು ಪೂರ್ತಿ ಒಂದೇ ಕಾವ್ಯವನ್ನು ಆರಿಸಿಕೊಂಡಿಲ್ಲ. ಬೇರೆ ಬೇರೆ ಗ್ರಂಥಗಳಿಂದ ಆಸಕ್ತಿಕರವೆನಿಸುವ ಒಂದೊಂದು ಭಾಗವನ್ನು ಆಯ್ದು ವಿವರಿಸುತ್ತೇವೆ. ಏನೇ ಗೊತ್ತಿದ್ದರೂ ಬೆಳಿಗ್ಗೆ ಮತ್ತೊಮ್ಮೆ ಚೆನ್ನಾಗಿ ಕಲಿತುಕೊಂಡು ಸಂಜೆ ಅದನ್ನು ವಿವರಿಸುತ್ತೇವೆ. ನನ್ನ ಸ್ನೇಹಿತರಿಗೂ ಹಳೆಗನ್ನಡ ಕಲಿಯುವ ಆಸಕ್ತಿ ಇದೆ. ಹಾಗಾಗಿ ಲಾಕ್ಡೌನ್ ಮುಗಿದ ಬಳಿಕವೂ ಸ್ನೇಹಿತರ ಜತೆ ಸೇರಿಕೊಂಡು ಕಾರ್ಯಕ್ರಮ ಮುಂದುವರಿಸೋಣ ಎಂದು ಅಮ್ಮಂಗೆ ಸತಾಯಿಸುತ್ತಿದ್ದೀವಿ.

    ಸಂಗೀತದ ಆಸಕ್ತಿ ನಿಮಗೆ ಬಾಲ್ಯದಿಂದಲೂ ಇತ್ತೇ?

    ಸಂಗೀತದ ಆಸಕ್ತಿ ನಿಮಗೆ ಬಾಲ್ಯದಿಂದಲೂ ಇತ್ತೇ?

    ಚಿಕ್ಕವಯಸ್ಸಲ್ಲಿ ನಾನು ತುಂಬ ತಲೆಹರಟೆ ಮಾಡುತ್ತಿದ್ದೆನಂತೆ. ಅದಕ್ಕಾಗಿ ಹುಡುಗಿ ಸ್ವಲ್ಪ ಕಲ್ಚರಲ್ ಆಗಿ ಎಂಗೇಜ್ ಆಗಿರಲಿ ಐದನೇ ವರ್ಷಕ್ಕೇನೇ ಡಾನ್ಸ್‌, ಮ್ಯೂಸಿಕ್‌, ಡ್ರಾಯಿಂಗ್ ಹಿಗೆ ಎಲ್ಲದಕ್ಕೂ ಸೇರಿಸಿದ್ದರಂತೆ! ಹಾಗಾಗಿ ಐದನೇ ವರ್ಷದಿಂದಲೇ ನಾನು ಸಂಗೀತ ಕಲಿಯಲು ಆರಂಭಿಸಿದೆ. ಮೊದಲು ಕರ್ನಾಟಿಕ್ ಶಾಸ್ತ್ರೀಯ ಸಂಗೀತ ಕಲಿತೆ. ಬಳಿಕ ಹಿಂದೂಸ್ಥಾನಿ ಇಷ್ಟ ಎಂದು ಅದನ್ನೇ ಕಲಿತೆ. ಆದರೆ ಯಾವತ್ತೂ ನಾನು ಗಾಯಕಿಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಭರತನಾಟ್ಯ ಕೂಡ ಚೆನ್ನಾಗಿ ಮಾಡುತ್ತಿದ್ದೆ. ಸ್ಕೂಲಲ್ಲಿ ಚೆನ್ನಾಗಿ ಓದುತ್ತಿದ್ದೆ. ಸ್ಪೋರ್ಟ್ಸ್‌ನಲ್ಲಿಯೂ ಇದ್ದೆ. ರಾಷ್ಟ್ರಮಟ್ಟದಲ್ಲಿ ವಾಲಿಬಾಲ್ ಆಡಿದ್ದೆ. ಪಿಯುಸಿ ಸೇರಿಕೊಂಡಮೇಲೆ ರತ್ನಮಾಲ ಪ್ರಕಾಶ್ ಅವರಲ್ಲಿ ಭಾವಗೀತೆ ಕಲಿಯಲು ಆರಂಭಿಸಿದೆ.

    ಕೆ.ಎನ್ ಕುಸುಮಾ ಅವರ ಬಳಿ ಚಿತ್ರಗೀತೆ ಕಲಿಯುತ್ತಿದ್ದೆ. ಸರಿಗಮಪಗೆ ನಾನು ಹೋಗಿದ್ದು 2008ರಲ್ಲಿ. ಅಲ್ಲಿ ಹೋದಾಗ ಹಂಸಲೇಖ, ರಾಜೇಶ್‌ ಕೃಷ್ಣನ್, ಹೇಮಂತ್, ನಂದಿತಾ ಮೊದಲಾದವರೆಲ್ಲ ತೀರ್ಪುಗಾರರಾಗಿದ್ದರು. ಹಂಸಲೇಖಾ ಅವರು "ನಿನ್ನ ಧ್ವನಿ ಕೆ.ಎಸ್ ಚಿತ್ರಾ ಅವರ ಧ್ವನಿಯನ್ನೇ ಹೋಲುತ್ತದೆ; ಅವರಂತೆ ನೀನು ದೊಡ್ಡ ಸಿಂಗರ್ ಆಗಬೇಕು" ಎಂದಿದ್ದರು. ನನ್ನ ವಾಯ್ಸ್ ಚೆನ್ನಾಗಿದೆ, ನಾನು ಚೆನ್ನಾಗಿ ಹಾಡಬಲ್ಲೆ ಎನ್ನುವುದು ನನಗೆ ಗೊತ್ತಾಗಿದ್ದು ಆಗಲೇ! ಆನಂತರ ಈ ಟಿವಿಯ `ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಕೂಡ ಪಾಲ್ಗೊಂಡೆ. ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಂಥ ಲೆಜೆಂಡ್ ಮುಂದೆ ಹಾಡುವುದು ಎಲ್ಲ ಗಾಯಕರ ಕನಸು. ಅಲ್ಲಿ ಹಾಡಿದಾಗ ಎಸ್‌.ಪಿ ಸರ್ ಕೂಡ ಹಂಸಲೇಖಾ ಅವರ ಮಾತನ್ನೇ ಹೇಳಿದ್ದರು. ನಿಜವಾದ ಆಸಕ್ತಿ ಅಲ್ಲಿಂದ ಶುರುವಾಯಿತು.

    ನೀವು ಹಿನ್ನೆಲೆಗಾಯಕಿಯಾಗಲು ಮಾಡಿದ ತಯಾರಿಗಳೇನು?

    ನೀವು ಹಿನ್ನೆಲೆಗಾಯಕಿಯಾಗಲು ಮಾಡಿದ ತಯಾರಿಗಳೇನು?

    ನನ್ನ ಧ್ವನಿ ಹಿನ್ನೆಲೆಗಾಯನಕ್ಕೆ ಹೇಳಿ ಮಾಡಿಸಿದಂತಿದೆ ಎಂದು ಎಸ್‌.ಪಿ.ಬಿ ಸರ್ ಹೇಳಿಯಾಗಿತ್ತು. ಅದು ನನಗೆ ಗಾಯಕಿಯಾಗಿ ಸಿಕ್ಕ ಸರ್ಟಿಫಿಕೆಟ್‌ ಎಂದು ಅಂದುಕೊಂಡಿದ್ದೇನೆ. ನಾನು ಸಂಗೀತಾಭ್ಯಾಸವನ್ನಷ್ಟೇ ಮುಂದುವರಿಸಿದೆ. ಆದರೆ ಅವಕಾಶಗಳೆಲ್ಲ ತಾನಾಗಿಯೇ ಹುಡುಕಿಕೊಂಡು ಬಂದಂಥವು. 2012ರಲ್ಲಿ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನ ಮತ್ತು ವಿ ಮನೋಹರ್ ಅವರ ಸಂಗೀತದ 'ಅಂಗುಲಿಮಾಲ' ಚಿತ್ರಕ್ಕೆ ಹಾಡಿದೆ. ಆದರೆ ಅದು ಸಾರ್ವಜನಿಕವಾಗಿ ತೆರೆಕಾಣಲಿಲ್ಲ. 'ಜೀತು' ನನ್ನ ಮೊದಲ ಚಿತ್ರ. ಅದಕ್ಕಾಗಿ ವಿಕಾಸ್ ವಸಿಷ್ಟ ಅವರ ಸಂಗೀತದಲ್ಲಿ ಹಾಡಿದೆ.

    ಬಳಿಕ 'ಲೂಸಿಯಾ', 'ಬಹುಪರಾಕ್', 'ಚಮಕ್', 'ಗೋಧಿಬಣ್ಣ ಸಾಧಾರಣ ಮೈಕಟ್ಟು', 'ಕೆಂಪಿರ್ವೆ' ಹೀಗೆ ಒಂದೊಂದೇ ಅವಕಾಶಗಳು ಸಿಗುತ್ತಾ ಹೋಯಿತು. 'ಬಹುಪರಾಕ್' ಚಿತ್ರದ 'ಬಜಾರು ಭಾರಿ ಜೋರೈತಿ' ಹಾಡಿಗೆ 'ಬೆಸ್ಟ್ ಪ್ರಾಮಿಸಿಂಗ್ ವಾಯ್ಸ್ ಆಫ್‌ ದಿ ಈಯರ್' ಹೆಸರಲ್ಲಿ 'ರೇಡಿಯೋ ಮಿರ್ಚಿ' ಮತ್ತು 'ಚಿತ್ರಸಂತೆ' ಅವಾರ್ಡ್ ದೊರಕಿದವು. ನಾನು ಸಾಕಷ್ಟು ನಾಟಕಗಳಿಗೆ ಹಾಡಿದ್ದೇನೆ. 'ಮಳೆ ಮಾಂತ್ರಿಕ' ಎನ್ನುವ ನಾಟಕಕ್ಕೆ ಹಾಡಿದ ಗೀತೆಗೆ 'ಕೀಮ ಅವಾರ್ಡ್' ಲಭಿಸಿದೆ. 'ಕೆಂಪಿರ್ವೆ' ಚಿತ್ರದ ಹಾಡು ಫಿಲ್ಮ್‌ಫೇರ್‌ಗೆ ನಾಮಿನೇಟ್‌ ಕೂಡ ಆಗಿತ್ತು. ಸಂಗೀತವನ್ನು ಪ್ರೀತಿಸಿ ನಮ್ಮನ್ನು ಸಮರ್ಪಿಸಿಕೊಂಡರೆ ಅವುಗಳೇ ನಮ್ಮನ್ನು ಗಾಯಕಿಯಾಗಿಸುವ ಗುರಿಯೆಡೆಗೆ ಕರೆದೊಯ್ಯುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ!

    ನಿಮ್ಮ ಸಂಗೀತದ ಗುರುಗಳು ಮತ್ತು ಕುಟುಂಬದ ಬಗ್ಗೆ ಹೇಳಿ

    ನಿಮ್ಮ ಸಂಗೀತದ ಗುರುಗಳು ಮತ್ತು ಕುಟುಂಬದ ಬಗ್ಗೆ ಹೇಳಿ

    ನನ್ನ ಭಾವಗೀತೆ, ಚಿತ್ರಗೀತೆಗಳನ್ನು ಹಾಡಲು ಕಲಿಸಿದ ಗುರುಗಳ ಬಗ್ಗೆ ಈಗಾಗಲೇ ಹೇಳಿದ್ದೇನೆ. ಕರ್ನಾಟಿಕ್ ಶಾಸ್ತ್ರೀಯ ಸಂಗೀತವನ್ನು ನಾಗೇಶ್ ರಾವ್, ಲಕ್ಷ್ಮಯ್ಯ ಮತ್ತು ಎಂ ಎ ಮೈಥಿಲಿಯವರ ಬಳಿಯಿಂದ ಕಲಿತಿದ್ದೇನೆ. ಕರ್ನಾಟಿಕ್ ಸಂಗೀತದಲ್ಲಿ ಸೀನಿಯರ್ ಆಗಿದೆ. ಪ್ರಸ್ತುತ ಹಿಂದೂಸ್ಥಾನಿ ಸಂಗೀತವನ್ನು ಕಲಿಯುತ್ತಿದ್ದೇನೆ. ಪಂಡಿತ್ ದತ್ತಾತ್ರೇಯ ವೇಲಣ್ಕರ್ ಅವರು ನನ್ನ ಹಿಂದೂಸ್ಥಾನಿ ಸಂಗೀತದ ಗುರುಗಳು. ನಮ್ಮಪ್ಪನ ಹೆಸರು ರಮೇಶ್. ಅವರು ವಕೀಲರು.

    ಅಮ್ಮ ಎಂ.ಆರ್ ಕಮಲಾ ನಿವೃತ್ತ ಪ್ರಾಂಶುಪಾಲೆ ಮಾತ್ರವಲ್ಲ, ಕನ್ನಡದ ಕವತ್ರಿಯೂ ಹೌದು. ಒಂದು ರೀತಿ ಸಂಗೀತ ಎನ್ನುವುದಕ್ಕಿಂತ ಸಾಹಿತ್ಯದ ಕುಟುಂಬ ನಮ್ಮದು. ಸಾಹಿತ್ಯದ ಒಲವೇ ನನ್ನನ್ನು ಸಂಗೀತದತ್ತ ಸೆಳೆದಿರಬಹುದು. ಯಾಕೆಂದರೆ ಚಿಕ್ಕಂದಿನಿಂದಲೇ ಭಾವಗೀತೆಗಳನ್ನು ಕೇಳಿ ಬೆಳೆದೆ. ನಾನು ಎಂ ಎಸ್‌ಸಿ ಮೈಕ್ರೊಬಯಾಲಜಿ ವಿದ್ಯಾರ್ಥಿನಿಯಾದರೂ, ಆಯ್ಕೆ ಮಾಡಿಕೊಂಡ ವೃತ್ತಿ ಗಾಯಕಿಯದ್ದು. ನನ್ನೆಲ್ಲ ಆಕಾಂಕ್ಷೆಗಳಿಗೆ ಅಮ್ಮನಿಂದ ತುಂಬ ಪ್ರೋತ್ಸಾಹವಿತ್ತು. ನಾನು ಮದುವೆಯಾಗಿದ್ದು ಕೂಡ ಸಂಗೀತ ವಿಕಾಸ್ ವಸಿಷ್ಠ ಎನ್ನುವ ಸಂಗೀತ ನಿರ್ದೇಶಕರನ್ನೇ ಆಗಿರುವ ಕಾರಣ, ಪತಿಯ ಕಡೆಯಿಂದಲೂ ತುಂಬು ಪ್ರೋತ್ಸಾಹವಿದೆ.

    ಸಂಗೀತ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುವಾಗ ನೀವು ಬಳಸುವ ಮಾನದಂಡವೇನು?

    ಸಂಗೀತ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುವಾಗ ನೀವು ಬಳಸುವ ಮಾನದಂಡವೇನು?

    ಹಾಗೇನೂ ಇಲ್ಲ. ಕಲಾವಿದರಿಗೆ ಗೌರವ ಸಿಗುವಂಥ ಜಾಗಗಳಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದುವರೆಗೆ ಆರುನೂರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದೇನೆ. ರಾಜ್ಯದಲ್ಲಷ್ಟೇ ಅಲ್ಲದೆ, ಹಾಂಕಾಂಗ್ ನಲ್ಲಿ ಸಿಂಗಪೂರ್, ಮಲೇಷ್ಯಾಗಳಲ್ಲಿ ಕೂಡ ಕಾರ್ಯಕ್ರಮ ನೀಡಿದ್ದೇನೆ. ನನ್ನ ಹಾಡುವ ರೀತಿಯೂ ಅಷ್ಟೇ, ಸಭಿಕರು ಹಾಡಿನ ಜತೆಗೆ ಸಣ್ಣದಾಗಿ ಪರ್ಫಾರ್ಮನ್ಸ್ ಕೂಡ ಬಯಸುವುದಾದರೆ ಅದಕ್ಕೂ ಸಿದ್ಧವಾಗಿರುತ್ತೇನೆ. ಅಥವಾ ನನ್ನ ಮೆಚ್ಚಿನ ಗಾಯಕಿ ಕೆಎಸ್ ಚಿತ್ರಾ ಅವರಂತೆ ನಿಂತಲ್ಲೇ ಮಾಧುರ್ಯ ಚೆಲ್ಲುವ ಹಾಡುಗಳನ್ನು ಆಲಾಪಿಸುವುದರಲ್ಲಿ ಕೂಡ ತೃಪ್ತಿ ಕಾಣುತ್ತೇನೆ. ಕಾರ್ಯಕ್ರಮಕ್ಕೆ ತಕ್ಕಹಾಗೆ ನನ್ನಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇವೆ. ಸದ್ಯಕ್ಕೆ ಲಾಕ್ಡೌನ್ ಇರುವ ಕಾರಣ ಹೊಸ ಕಂಪೋಸಿಷನ್ ಮಾಡಿ `ಸ್ಪರ್ಶಾ ಆರ್ ಕೆ' ಯೂ ಟ್ಯೂಬ್ ವಾಹಿನಿಯಲ್ಲಿ ಹಾಕುವುದಷ್ಟೇ ಸಾಧ್ಯ.

    English summary
    Singer Sparsha RK talks about the lockdown period and Also about her singing career with Kannada filmbeat.
    Sunday, May 10, 2020, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X