twitter
    For Quick Alerts
    ALLOW NOTIFICATIONS  
    For Daily Alerts

    ಸಂದರ್ಶನ: ಹಾಸ್ಯದ ಜತೆಗೆ ಸಂದೇಶ; ಇದೇ ಶ್ರದ್ಧಾ ವಿಶೇಷ..!

    |

    ಶ್ರದ್ಧಾ ಎನ್ನುವ ಹೆಸರಿಗಿಂತ ಈ ಯುವತಿಯ ಮುಖವೇ ನಮಗೆಲ್ಲ ಆಪ್ತ! ಯಾಕೆಂದರೆ ಯಾವು ಯಾವುದೋ ಹೆಸರುಗಳ ಮೂಲಕ ವಿಡಿಯೋಗಳನ್ನು ಮಾಡಿ ವೈರಲ್ ಆಗಿರುವ ಪ್ರತಿಭೆ. ಇಂಜಿನಿಯರಿಂಗ್ ವೃತ್ತಿ ತೊರೆದು ಆಸಕ್ತಿಯ ಬೆನ್ನೇರಿ ಎಫ್.ಎಂ ವಾಹಿನಿಯಲ್ಲಿ ಆರ್.ಜೆಯಾದ ಶ್ರದ್ಧಾ ಪ್ರಸ್ತುತ ಕನ್ನಡ ವಾಹಿನಿಯೊಂದರಲ್ಲಿ ನಾನ್ ಫಿಕ್ಷನ್ ಹೆಡ್ ಆಗಿ ವೃತ್ತಿಯಲ್ಲಿದ್ದಾರೆ. ಆದರೆ ತೆರೆಯ ಹಿಂದಿನ ಆ ಕೆಲಸಕ್ಕಿಂತ ಶ್ರದ್ಧಾ ಜನತೆಯ ಗಮನ ಸೆಳೆದಿರುವುದು ತಮ್ಮ ಆಕರ್ಷಕ ವಿಡಿಯೋ ತುಣುಕುಗಳ ಮೂಲಕ.

    Recommended Video

    ರಶ್ಮಿಕಾ ಸೀಕ್ರೆಟ್ ರಿವೀಲ್ ಮಾಡಿದ ನಟ ನಿತಿನ್ | Rashmika Mandanna | Filmibeat Kannada

    ತಮ್ಮ ಇನ್ಸ್ಟಾಗ್ರಾಂ ಮೂಲಕ ಶ್ರದ್ಧಾ ಹರಿಯಬಿಡುವ ವಿಡಿಯೋಗಳಲ್ಲಿ ವಿವಿಧ ಪಾತ್ರಗಳಾಗಿ, ಕೆಲವೊಮ್ಮೆ ದ್ವಿಪಾತ್ರ ತ್ರಿಪಾತ್ರಗಳಲ್ಲಿಯೂ ಗೋಚರಿಸುತ್ತಾರೆ. ಲಾಕ್ಡೌನ್ ಸಂದರ್ಭದಲ್ಲಂತೂ ಶ್ರದ್ಧಾ ವಿಡಿಯೋಗಳಿಗೆ ದಾಖಲೆಯ ವ್ಯೂವ್ಸ್ ಬಿದ್ದಿವೆ. ಇವರ ಹಿನ್ನೆಲೆ ಏನು? ಮಾಧ್ಯಮ ಕ್ಷೇತ್ರದಲ್ಲಿ ಇವರ ಅನುಭವಗಳೇನು? ವೃತ್ತಿ ಬದುಕಿನಲ್ಲಿ ಎಂದಿಗೂ ಮರೆಯಲಾಗದಂಥ ಘಟನೆ ಏನು? ಮುಂದಿನ ಗುರಿಯೇನು? ಮಾತ್ರವಲ್ಲ ಹೊಸದಾಗಿ ಮಾಧ್ಯಮರಂಗ ಪ್ರವೇಶಿಸುವವರಿಗೆ ಈಕೆ ನೀಡುವ ಸಲಹೆಗಳೇನು.. ಎನ್ನುವ ಎಲ್ಲ ವಿಚಾರಗಳ ಬಗ್ಗೆ ಶ್ರದ್ಧಾ ಜತೆಗೆ ಫಿಲ್ಮೀಬೀಟ್ ನಡೆಸಿರುವ ವಿಶೇಷ ಮಾತುಕತೆ ಇದು.

    ನಿಮ್ಮ ಹಿನ್ನೆಲೆಯ ಬಗ್ಗೆ ತಿಳಿಸುವಿರಾ?

    ನಿಮ್ಮ ಹಿನ್ನೆಲೆಯ ಬಗ್ಗೆ ತಿಳಿಸುವಿರಾ?

    ನನ್ನ ಮೂಲತಃ ಕಾರ್ಕಳದ ಕುಟುಂಬ. ನಮ್ಮಮ್ಮ ಸುಶೀಲ ಕಾರ್ಕಳದ ನಿಟ್ಟೆಯವರಾಗಿದ್ದು, ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದರು. ತಂದೆ ವರ್ಧಮಾನ್ ಜೈನ್ ನೆಲ್ಲಿಕಾರ್‌ನವರು. ಎಸ್ ಕುಮಾರ್ ಸೂಟಿಂಗ್ ಆಂಡ್ ಶರ್ಟಿಂಗ್‌ನಲ್ಲಿ ಅಕೌಂಟ್ಸ್ ವಿಭಾಗದಲ್ಲಿ ವೃತ್ತಿಯಲ್ಲಿದ್ದು ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದಾರೆ. ನನಗೊಬ್ಬಳು ತಂಗಿಯಿದ್ದಾಳೆ. ಆಕೆಯ ಹೆಸರು ಅಪೇಕ್ಷಾ. ಖಾಸಗಿ ಸಂಸ್ಥೆಯಲ್ಲಿ ಎಚ್‌ಆರ್‌ ಆಗಿ ವೃತ್ತಿಯಲ್ಲಿದ್ದಾಳೆ. ನಾನು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ವೃತ್ತಿ ಕಂಡುಕೊಂಡಿದ್ದು ಬೆಂಗಳೂರಿನಲ್ಲಿ. ಹಾಗಾಗಿ ನನಗೆ ನಮ್ಮ ದೇಶದ ಐದಾರು ಭಾಷೆಗಳು ಚೆನ್ನಾಗಿ ಕರಗತವಾಗಿದೆ. ತುಳು, ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ ಇಷ್ಟು ಭಾಷೆಗಳಲ್ಲಿ ಹಿಡಿತವಿದೆ ಎಂದು ಧೈರ್ಯವಾಗಿ ಹೇಳಬಲ್ಲೆ.

    ನಿಮಗೆ ಬೆಂಗಳೂರಿನೊಂದಿಗಿನ ಸಂಬಂಧ ಬೆಳೆದ ಬಗೆ ಹೇಗೆ?

    ನಿಮಗೆ ಬೆಂಗಳೂರಿನೊಂದಿಗಿನ ಸಂಬಂಧ ಬೆಳೆದ ಬಗೆ ಹೇಗೆ?

    ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ ಕೆಲಸದಲ್ಲಿದ್ದೆ. ಎಸ್.ಎಸ್.ಎಲ್.ಸಿ ಯಲ್ಲಿದ್ದಾಗಲೇ ತುಂಬ ಎಫ್.ಎಮ್ ರೇಡಿಯೋ ಕೇಳುವ ಹವ್ಯಾಸವಿತ್ತು. ರೇಡಿಯೋದಲ್ಲಿ ಕೆಲಸ ಮಾಡಬೇಕು ಎನ್ನುವ ಆಸೆಯಿತ್ತು. ಆದರೆ ನನಗೆ ರೇಡಿಯೋ ಸಂಸ್ಥೆಯನ್ನು ಸಂಪರ್ಕಿಸುವುದು ಹೇಗೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಮೊದಲು ಕಲಿತು ಇಂಜಿನಿಯರಿಂಗ್ ಮಾಡಬೇಕು ಎನ್ನುವುದು ತಂದೆತಾಯಿಯ ಅನಿಸಿಕೆಯೂ ಆಗಿದ್ದ ಕಾರಣ, ಅದನ್ನು ಮುಗಿಸಿದೆ.

    ಇಂಜಿನಿಯರ್ ಆದ ಮೇಲೆ ನನ್ನ ಆಕಾಂಕ್ಷೆ ಈಡೇರಿಸಿಕೊಳ್ಳದಿರುವುದು ತಪ್ಪು ಅನಿಸಿತು. ಮೊದಲು ಆಲ್ ಇಂಡಿಯಾ ಫಿವರ್ 104 ಎಫ್.ಎಮ್ ರೇಡಿಯೋನಲ್ಲಿ ಕೆಲಸ ದೊರಕಿತು. ಅಲ್ಲಿನ ಪ್ರೋಗ್ರಾಮಿಂಗ್ ಹೆಡ್ ಆಗಿದ್ದಂಥ ಡರಾಯಸ್ ಸುನಾವಲಾ ನನಗೆ ತುಂಬ ಚೆನ್ನಾಗಿ ತರಬೇತಿ ನೀಡಿದರು. ಅವರನ್ನು ನನ್ನ ಮಾಧ್ಯಮಲೋಕದ ಗುರು ಎಂದೇ ಹೇಳಬಹುದು. ಜತೆಗೆ ಬೆಂಗಳೂರು ನನಗೆ ಮಾಧ್ಯಮ ಲೋಕದ ತವರು ಕೂಡ ಆಯಿತು.

    ರೇಡಿಯೋದಿಂದ ಟಿ.ವಿ ಕ್ಷೇತ್ರ ಪ್ರವೇಶ ಮತ್ತು ಅಲ್ಲಿನ ವಿಶೇಷಗಳೇನಿತ್ತು?

    ರೇಡಿಯೋದಿಂದ ಟಿ.ವಿ ಕ್ಷೇತ್ರ ಪ್ರವೇಶ ಮತ್ತು ಅಲ್ಲಿನ ವಿಶೇಷಗಳೇನಿತ್ತು?

    ಎಫ್. ಎಮ್ ನಲ್ಲಿ ಒಂದಷ್ಟು ವರ್ಷಗಳ ಕಾಲ ಕೆಲಸ ಮಾಡಿದ ಬಳಿಕ ನಾನು ಅವರೆಕಾಳು ಪರಿಷೆ ಬಗ್ಗೆ ಒಂದು ತಮಾಷೆಯ ವಿಡಿಯೋ ಮಾಡಿದ್ದೆ. ಅದು ತುಂಬ ವೈರಲ್ ಆಗಿತ್ತು. ವಾಹಿನಿಯೊಂದರ ಮುಖ್ಯಸ್ಥರ ಕಣ್ಣಿಗೆ ಬಿದ್ದು, ನನ್ನನ್ನು ಆಡಿಶನ್‌ಗೆ ಕರೆಸಿಕೊಂಡರು. ಹಾಗೆ `ಡಾನ್ಸಿಂಗ್ ಸ್ಟಾರ್' ಶೋನ ಒಂದನೇ ಸೀಸನ್‌ಗೆ ನಿರೂಪಕಿಯಾದೆ.

    ನನಗೆ ಟಿವಿ ಮಾಧ್ಯಮ ಹೊಸತಾಗಿದ್ದರೂ ರೇಡಿಯೋ ಪ್ರೋಗ್ರಾಮಿಂಗ್‌ ಬಗ್ಗೆ ಗೊತ್ತಿದ್ದ ಕಾರಣ, ಆಮೇಲೆ ಕಲರ್ಸ್ ಕನ್ನಡದ ಪ್ರೋಗ್ರಾಮಿಂಗ್ ವಿಭಾಗದಲ್ಲೇ ಕೆಲಸ ಸಿಕ್ಕಿತು. `ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಕ್ರಿಯೇಟಿವ್ ಡೈರೆಕ್ಟರ್ ನಾನೇ ಆಗಿದ್ದೆ. ಈಗ ಕಲರ್ಸ್‌ನ ನಾನ್ ಫಿಕ್ಷನ್ ಹೆಡ್ ಆಗಿ ವೃತ್ತಿಯಲ್ಲಿದ್ದೇನೆ. `ತಕಧಿಮಿತ', `ಸೂಪರ್ ಮಿನಿಟ್‌' ಶೋಗಳ ಬಳಿಕ ಪ್ರಸ್ತುತ `ಹಾಡು ಕರ್ನಾಟಕ' ಶೋನ ನಿರ್ದೇಶಕಿಯೂ ನಾನೇ ಆಗಿದ್ದೇನೆ. ಸಮಯ ಸಿಕ್ಕಾಗ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ವಿಡಿಯೋಸ್‌ಗಳನ್ನು ಮಾಡುತ್ತೇನೆ.ಅವುಗಳನ್ನು ಇನ್ಸ್ಟಾಗ್ರಾಂನಲ್ಲಿ aiyyoshraddhaದಲ್ಲಿ ನೋಡಬಹುದು. ಅದು ನನ್ನ ಹವ್ಯಾಸ.

    ನಿಮ್ಮ ವೃತ್ತಿ ಬದುಕಲ್ಲಿ ಅವಿಸ್ಮರಣೀಯವಾದ ಘಟನೆಗಳಿವೆಯೇ?

    ನಿಮ್ಮ ವೃತ್ತಿ ಬದುಕಲ್ಲಿ ಅವಿಸ್ಮರಣೀಯವಾದ ಘಟನೆಗಳಿವೆಯೇ?

    ತುಂಬಾನೇ ಇವೆ. ಆದರೆ ಅವುಗಳಲ್ಲಿ ಹೆಚ್ಚಿನವು ಎಫ್.ಎಂನಲ್ಲಿ ವೃತ್ತಿಯಲ್ಲಿದ್ದಾಗ ಘಟಿಸಿದಂಥವು. ಒಬ್ಬರು ಆಸ್ಪತ್ರೆಯಲ್ಲಿರುವ ಅವರ ತಂದೆಯ ಬಗ್ಗೆ ನನ್ನಲ್ಲಿ ಮಾತನಾಡಿದ್ದರು. ಅವರು ತಂದೆಗೆ ಮನೆಯಿಂದ ಆಹಾರ ತೆಗೆದುಕೊಂಡು ಹೋಗುವಾಗೆಲ್ಲ ವಾಹನದಲ್ಲಿ ಎಫ್ ಎಮ್ ಹಾಕಿಕೊಂಡು ನನ್ನ ಮಾತುಗಳನ್ನು ಕೇಳುತ್ತಾ ಹೋಗುತ್ತಿದ್ದರಂತೆ. ಬಳಿಕ ಅದರಲ್ಲಿದ್ದ ಹಾಸ್ಯವನ್ನೆಲ್ಲ ತಮ್ಮ ತಂದೆಯಲ್ಲಿ ಹಂಚಿಕೊಳ್ಳುತ್ತಿದ್ದರಂತೆ. "ನಿಜಕ್ಕೂ ಆ ನೋವಿನ ದಿನಗಳಲ್ಲಿ ನಿಮ್ಮಿಂದಾಗಿ ಸ್ವಲ್ಪ ರಿಲೀಫ್ ಪಡೆಯುವಂತಾಗಿತ್ತು" ಎಂದು ಅವರು ಹೇಳಿದ್ದು ಕೇಳಿದಾಗ ಮಾಡಿದ ವೃತ್ತಿಗೆ ಸಂತೃಪ್ತಿ ಸಿಕ್ಕಂತಾಗಿತ್ತು. ಹಾಗೆ ನನ್ನಿಂದಾಗಿ ಬೇಸರ ಮರೆತಿದ್ದಾಗಿ ಹೇಳಿಕೊಂಡವರ ಪಟ್ಟಿ ದೊಡ್ಡದಾಗಿದೆ. ಒಬ್ಬರಂತೂ ತಮಗೆ ಹುಟ್ಟಿದ ಮಗುವಿಗೆ `ಶ್ರದ್ಧಾ' ಎಂದು ನನ್ನ ಹೆಸರನ್ನೇ ಇಟ್ಟಿದ್ದಂತೂ ಮರೆಯಲಾಗದಂಥ ಸಂದರ್ಭವಾಗಿತ್ತು. ನನಗೆ ಮರೆವು ಎನ್ನುವುದು ತುಂಬ ದೂರ ಅದು ವೃತ್ತಿ ಬದುಕು ಮಾತ್ರವಲ್ಲ, ನಿತ್ಯದ ಘಟನೆಗಳನ್ನು ಕೂಡ ಮರೆಯುವುದಿಲ್ಲ.

    ಶಾಲಾ ಬೇಸಿಗೆ ರಜೆಯಲ್ಲಿ ಕಾರ್ಕಳದ ಅಜ್ಜಿಯ ಮನೆಗೆ ಹೋಗುವುದು ವಾಡಿಕೆಯಾಗಿತ್ತು. ಹಾಗೆ ಊರಿನ ಮಹಿಳೆಯರ ಸ್ವಭಾವಗಳನ್ನೆಲ್ಲ ನೋಡಿ ಅಭ್ಯಾಸ ಮಾಡಿಕೊಂಡಿದ್ದೇನೆ. ಅದೇ ರೀತಿ ಅಲ್ಲಿನ ಮದುವೆ, ಪೂಜೆ, ಕೋಲ, ರಥೋತ್ಸವ ಯಾವುದನ್ನು ಕೂಡ ಮಿಸ್ ಮಾಡುತ್ತಿರಲಿಲ್ಲ. ಊರಿನ ಊಟ, ತಿಂಡಿ, ಲೈಫ್ ಸ್ಟೈಲ್ ಇವುಗಳೇ ನನ್ನ ಇಂದಿನ ವಿಡಿಯೋ ಹಾಸ್ಯಗಳಲ್ಲಿ ಪ್ರತಿಬಿಂಬಿಸುತ್ತವೆ ಎನ್ನಬಹುದು.

    ಹೊಸದಾಗಿ ನಿರೂಪಕರಾಗಲು ಬಯಸುವವರಿಗೆ ನಿಮ್ಮ ಸಲಹೆಯೇನು?

    ಹೊಸದಾಗಿ ನಿರೂಪಕರಾಗಲು ಬಯಸುವವರಿಗೆ ನಿಮ್ಮ ಸಲಹೆಯೇನು?

    ನನ್ನ ಪ್ರಕಾರ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವುದಿದ್ದರೂ ತುಂಬ ಓದಬೇಕು. ಅದು ನಮಗೆ ಒಂದಲ್ಲ ಒಂದು ಸಂದರ್ಭದಲ್ಲಿ ಸಹಾಯವಾಗುತ್ತದೆ. ಕ್ರಿಯೇಟಿವ್ ಫೀಲ್ಡಲ್ಲಿ ಟೆಕ್ನಿಕಲ್ ಕೋರ್ಸ್ ಮಾಡಿ ಬರುವುದಕ್ಕಿಂತ ಯಾವೆಲ್ಲ ವಿಷಯಗಳ ಬಗ್ಗೆ ಎಷ್ಟು ತಿಳಿದುಕೊಂಡಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಅಂದರೆ ಬೇರೆಯವರು ಮಾಡಿಕೊಡುವ ಸ್ಕ್ರಿಪ್ಟ್, ಟಾಕ್ ಬ್ಯಾಕ್ ನಂಬಿ ನಿರೂಪಕರಾಗಬಹುದು ಎಂದು ನಂಬಿದವರಿಗೆ ಈ ಮಾತು ಹೇಳುತ್ತಿದ್ದೇನೆ. ಮಾಧ್ಯಮ ಕ್ಷೇತ್ರದಲ್ಲಿ ನಾನೇನೋ ಆಗಬೇಕು ಅಂದರೆ ಜನ ನಾನು ಹೇಳುವುದನ್ನು ಕೇಳಬೇಕು, ನೋಡಬೇಕು ಎಂದು ಅರ್ಥ. ಹಾಗೆ ಅವರು ಇಷ್ಟಪಡಬೇಕಾದರೆ ನಾವು ಮನರಂಜನೆಯೊಂದಿಗೆ ಸ್ವಲ್ಪ ಮಾಹಿತಿಯನ್ನುಕೂಡ ನೀಡಬಲ್ಲಷ್ಟು ಪ್ರತಿಭೆ ಹೊಂದಿರಬೇಕು.

    ಭಾಷೆ ಮತ್ತು ಅರಿವು ಚೆನ್ನಾಗಿರಬೇಕು. ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರಲೇಬೇಕು. ಜ್ಞಾನ ಇದ್ದಾಗಲೇ ನಮ್ಮೊಳಗೆ ಹೊಸ ಐಡಿಯಾಗಳು ಹುಟ್ಟಿಕೊಳ್ಳಲು ಸಾಧ್ಯ. ಇಲ್ಲಿ ನಾಲೆಜ್ ಇಲ್ಲ ಎಂದರೆ ಮೈಲೇಜ್ ಇರಲ್ಲ. ಈಗ ನಮ್ಮ ಆಸಕ್ತಿ, ಪ್ರತಿಭೆ ವ್ಯಕ್ತಪಡಿಸಲು ಮಾಧ್ಯಮಗಳಿಗೆ ಕೊರತೆಯಿಲ್ಲ. ಯೂಟ್ಯೂಬರ್ ಆಗಬಹುದು, ಸ್ಟಾಂಡಪ್ ಕಾಮಿಡಿಯನ್ ಆಗಬಹುದು ಅಥವಾ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಎಲ್ಲ ಕೆಲಸ ಮಾಡಬಹುದಾಗಿದೆ.ಅಲ್ಲದೆ ಈಗ ನಿಮ್ಮಲ್ಲಿ ಪ್ರತಿಭೆ ಇದ್ದರೆ ಕ್ಯಾಮೆರಾ ಫೋನ್ ಮತ್ತು ಇಂಟರ್ನೆಟ್ ಕನೆಕ್ಷನ್ ಇದ್ದರೆ ಆಯಿತು. ಅವಕಾಶಗಳಿಗಾಗಿ ಹುಡುಕಿಕೊಂಡು ಹೋಗಬೇಕಾದ ಅನಿವಾರ್ಯೆತಗಳಿಲ್ಲ.

    ನಿಮ್ಮ ಮುಂದಿನ ಕನಸುಗಳೇನು?

    ನಿಮ್ಮ ಮುಂದಿನ ಕನಸುಗಳೇನು?

    ವೃತ್ತಿಯೊಂದಿಗೆ ಜನರ ಮನೋರಂಜನೆಯಲ್ಲಿ ನನಗೆ ಮೊದಲಿಂದಲೂ ಆಸಕ್ತಿ. ಈಗಾಗಲೇ ಸುಮುಖಿ ಸುರೇಶ್ ಅವರ ಮೂಲಕ `ಪುಷ್ಪವಲ್ಲಿ' ಎನ್ನುವ ವೆಬ್ ಸೀರೀಸ್‌ನಲ್ಲಿ ನಟಿಸಿದ್ದೇನೆ. ಅದು ಕನ್ನಡ ಮತ್ತು ಇಂಗ್ಲಿಷ್ ಮಿಶ್ರಿತವಾಗಿರುವ ಭಾಷೆಯಲ್ಲಿದೆ. ಅದರಲ್ಲಿ ನಾನು ನಿರ್ವಹಿಸಿರುವ ಕನ್ನಡತಿ ಪಿಜಿ ಓನರ್ ಪಾತ್ರಕ್ಕೆ ತುಂಬ ಪಾಸಿಟಿವ್ ರೆಸ್ಪಾನ್ಸ್ ದೊರಕಿದೆ. ಅವಕಾಶಗಳು ಬಂದರೆ ಮುಂದೆಯೂ ನಟನೆ ಮಾಡುವ ಆಸಕ್ತಿ ಇದೆ. ಹಾಗಂತ ಸಿನಿಮಾ ನಾಯಕಿಯ ಕನಸೇನೂ ಇಲ್ಲ. ಆದರೆ ಒಳ್ಳೆಯ ಅವಕಾಶಗಳು ಬಂದರೆ ನನ್ನ ಸಮಯಕ್ಕೆ ಹೊಂದಿಕೊಂಡಂತೆ ಆಕರ್ಷಕ ಪಾತ್ರವಾಗಲು ಸಾಧ್ಯವಾದರೆ ಒಪ್ಪಿಕೊಳ್ಳುತ್ತೇನೆ.

    English summary
    Shraddha Famous talent in Instagram and small screen. Now She working in a TV Channel.
    Wednesday, April 22, 2020, 14:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X