ನನ್ನ ಮಗಳು ಸಮನ್ವಿ ಕಳೆದುಕೊಂಡು ನರಕ ಅನುಭವಿಸಿದೆ- ಅಮೃತಾ ನಾಯ್ಡು..!
ಅಮೃತಾ ನಾಯ್ಡು ಕನ್ನಡ ಕಿರುತೆರೆಯ ಪ್ರಖ್ಯಾತ ಹೆಸರು. ಇವರು ಕೇವಲ ನಟಿಯಷ್ಟೇ ಅಲ್ಲ ಹರಿಕಥೆಯನ್ನು ಕೂಡ ಅಮೃತಾ ಚೆನ್ನಾಗಿ ಹೇಳ್ತಾರೆ. ತಂದೆಯಿಂದ ಇವರಿಗೆ ಬಂದ ಬಳುವಳಿ ಇದು. ಹಲವು ವರ್ಷಗಳಿಂದ ಕಿರುತೆರೆ ಲೋಕದಲ್ಲಿ ಮಿಂಚುತ್ತಾ ಜನಮನ ಗೆದ್ದ ಅಮೃತಾ ಕುಸುಮಾಂಜಲಿ.. ಮನೆಯೊಂದು ಮೂರು ಬಾಗಿಲು.. ಪುಣ್ಯಕೋಟಿ.. ಅಮೃತ ವರ್ಷಿಣಿ.. ಗೀತಾ.. ನಾಗಿಣಿ.. ಹೀಗೆ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ತಮ್ಮ ಅಭಿನಯದಿಂದ ಕನ್ನಡಿಗರ ಹೃದಯ ಗೆಲ್ಲುವುದು ಅಲ್ಲದೇ ಪಕ್ಕದ ರಾಜ್ಯಗಳಲ್ಲಿ ಕೂಡ ಕಿರುತೆರೆಯಲ್ಲಿ ಮಿಂಚಿದ್ದಾರೆ. ಇಂಥಾ ಅಮೃತಾ ನಾಯ್ಡು ಅವರ ಬದುಕಿನಲ್ಲಿ ಕೆಲ ವರ್ಷಗಳ ಹಿಂದೆ ನಡೆಯಬಾರದ್ದ ಘಟನೆ ನಡೆದಿತ್ತು. ಅಪಘಾತದಲ್ಲಿ ಅಮೃತಾ ಅವರ ಮುದ್ದಿನ ಮಗಳಾಗಿದ್ದ ಸಮನ್ವಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಬಾಳಿ ಬದುಕಬೇಕಿದ್ದ ಸಮನ್ವಿ ಕಣ್ಣು ಮುಚ್ಚಿದಾಗ ಅಮೃತಾ 5 ತಿಂಗಳ ಗರ್ಭಿಣಿಯಾಗಿದ್ದರು. ಒಂದು ಕಡೆ ಮಗಳು ಇಲ್ಲವಲ್ಲ ಎನ್ನುವ ನೋವು. ಮತ್ತೊಂದು ಕಡೆ ಮತ್ತೊಮ್ಮೆ ತಾಯಿಯಾಗ್ತಿರುವ ಸಂಭ್ರಮ ಮತ್ತು ವೇದನೆ.
ಇದೆಲ್ಲವನ್ನು ಮನದಲ್ಲಿಯೇ ಅನುಭವಿಸಿ ಕಿರುತೆರೆಯಿಂದ ಅಮೃತಾ ಬಹುತೇಕ ಕಾಣೆ ಆಗಿದ್ದರು. ಮಗಳನ್ನು ನೆನೆದು ಹಲವಾರು ಬಾರಿ ಕಣ್ಣೀರು ಹಾಕಿದ್ದರು. ಇಂಥಾ ಅಮೃತಾ ಇದೀಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. ನಂದಗೋಕುಲ ಎಂಬ ಚೆಂದದ ಸೀರಿಯಲ್ ಮಾಡುತ್ತಿದ್ದಾರೆ.
ಇನ್ನೇನೂ ಈ ಜೂನ್ 4ರಿಂದ ಈ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಈ ಸಮಯದಲ್ಲಿ ಅಮೃತಾ ನಾಯ್ಡು ತಮ್ಮ ಮನದ ಮಾತುಗಳನ್ನು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಜೊತೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅಮೃತಾ ನಾಯ್ಡು 'ಫಿಲ್ಮಿ ಬೀಟ್ ಕನ್ನಡ' ಜೊತೆ ಮಾತನಾಡಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಮರಳಿ ಮತ್ತೆ ಕಿರುತೆರೆಗೆ ಬಂದಿದ್ದೀರಾ ಹೇಗೆ ಅನ್ಸುತ್ತೆ ?
''ಸಹಜವಾಗಿ ತುಂಬಾನೇ ಖುಷಿ ಇದೆ. 4-5 ವರ್ಷಗಳಿಂದ ನಾನು ಕಿರುತೆರೆಯಿಂದ ದೂರ ಇದ್ದೆ, ಈಗ 4-5 ವರ್ಷ ಆದ ನಂತರ ಮತ್ತೆ ಕಾಣಿಸಿಕೊಳ್ತಿದ್ದೀನಿ, ಇಷ್ಟು ದಿನ ಚಿತ್ರೀಕರಣದ ಸ್ಥಳವನ್ನು ಆ ಅನುಭವವನ್ನು ಮಿಸ್ ಮಾಡಿಕೊಳ್ತಿದ್ದೆ, ಆ ನೆನಪುಗಳನ್ನೆಲ್ಲ ಈಗ ನಂದಗೋಕುಲ ಧಾರಾವಾಹಿ ತಾಜಾ ಮಾಡಿದೆ, ಧಾರಾವಾಹಿಯ ಶೀರ್ಷಿಕೆಯಂತೆ ನಮ್ಮ ಈ ಧಾರಾವಾಹಿ ನಮ್ಮೆಲ್ಲರ ಪಾಲಿಗೆ ನಂದಗೋಕುಲದಂತೆಯೇ ಇದೆ.
ಸದ್ಯ ಖುಷಿ ಖುಷಿಯಾಗಿ ಎಲ್ಲರೂ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದೇವೆ, ಇದರ ಜೊತೆ ಜನ ನಮ್ಮೆಲ್ಲರ ಈ ಪ್ರಯತ್ನವನ್ನು ಹೇಗೆ ಸ್ವೀಕರಿಸಬಹುದು ಎನ್ನುವ ಭಯ ಕೂಡ ಇದೆ, ಆದರೆ ವ್ಯೆಯಕ್ತಿಕವಾಗಿ ಈ ಧಾರಾವಾಹಿ ಜನ ಮನ ಗೆಲ್ಲುತ್ತೆ ಎನ್ನುವ ನಂಬಿಕೆ ನನಗೆ ಇದೆ, ಯಾಕೆಂದರೆ ಇಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಘಟನೆಗಳಿಗೆ ಕೈಗನ್ನಡಿ ಹಿಡಿಯುವ ಪ್ರಯತ್ನವನ್ನು ಮಾಡಲಾಗಿದೆ, ಎಲ್ಲರಿಗೂ ಈ ಕಥೆ ಕನೆಕ್ಟ್ ಆಗುವ ವಿಶ್ವಾಸ ಇದೆ'' ಎಂದು ಅಮೃತಾ ನಾಯ್ಡು ಹೇಳಿದ್ದಾರೆ.
ಯಾವಾಗಲೂ ಸಾಫ್ಟ್ ಪಾತ್ರಗಳೇ ನಿಮ್ಮನ್ನು ಹುಡುಕಿಕೊಂಡು ಬರ್ತಾವೆ
''ಹೌದು, ನಂದಿನಿ ಎನ್ನುವ ಧಾರಾವಾಹಿಯಲ್ಲಿ ಮಾತ್ರ ನಾನು ಸ್ವಲ್ಪ ರೆಬೆಲ್ ಕ್ಯಾರೆಕ್ಟರ್ ಮಾಡಿದ್ದೇ, ಅದು ಹೊರತು ಪಡಿಸಿದರೆ ಬೇರೆ ಯಾವ ಪಾತ್ರ ಮಾಡಿದರೂ ಕೂಡ ನೀವು ಹೇಳಿದಂತೆ ಸಾಫ್ಟ್ ಪಾತ್ರಗಳಿರಲಿ ಅಥವಾ ಅಳುಮುಂಜಿ ಪಾತ್ರಗಳಿರಲಿ ಆ ಪಾತ್ರಗಳೇ ನನಗೆ ಹೆಚ್ಚು ಬಂದಿವೆ, ನನ್ನ ವ್ಯಕ್ತಿತ್ವ ಹಾಗೇ ಇರುವುದರಿಂದ ಬಹುಶ ನನಗೆ ಈ ತರಹದ ಪಾತ್ರಗಳೇ ಹುಡುಕಿಕೊಂಡು ಬರ್ತಿವೆ ಅಂತ ನನಗೆ ಅನ್ಸುತ್ತೆ'' ಎಂದಿದ್ದಾರೆ ಅಮೃತಾ ನಾಯ್ಡು.
ಆ ಕಹಿ ಘಟನೆಯಿಂದ ಹೊರ ಬರಲು ಎಷ್ಟು ಕಷ್ಟ ಆಯ್ತು
''ಆ ಘಟನೆಯಿಂದ ಹೊರ ಬರಲು ನಮಗೆ ತುಂಬಾನೇ ಕಷ್ಟ ಆಯ್ತು. ಅದರಲ್ಲಿಯೂ ಆರಂಭಿಕ ದಿನಗಳು ನಮಗೆ ಒಂದು ರೀತಿ ನರಕಸದೃಶ್ಯದಂತೆಯೇ ಇತ್ತು, ಆದರೂ ಕೂಡ ದೇವರಿದ್ದಾನೆ, ನಮ್ಮ ಹಿತೈಶಿಗಳಿದ್ದಾರೆ, ನಮ್ಮ ಸ್ನೇಹಿತರು, ಸಂಬಂಧಿಕರು, ಇವರೆಲ್ಲರ ಸಹಾಯದಿಂದ ಹಾವು ಪೊರೆ ಬಿಡುತ್ತಲ್ಲಾ ಹಾಗೇ ಹಳೆಯದನ್ನೆಲ್ಲ ಮರೆತು ಹೊಸ ಜನ್ಮವನ್ನೇ ನಾವು ಪಡೆದಿದ್ದೇವೆ, ಈ ಹೊಸ ಜೀವನದ ಅಧ್ಯಾಯದಲ್ಲಿ ಆ ಭಗವಂತನ ಕೃಪೆ, ಕನ್ನಡಿಗರೆಲ್ಲ ಪ್ರೀತಿ ವಿಶ್ವಾಸ ಆಶೀರ್ವಾದದಿಂದ ಎಲ್ಲವೂ ಸುಗಮವಾಗಿ ನಡೆಯುತ್ತಿದೆ, ಎಲ್ಲವೂ ಹೀಗೆ ನಡೆಯಲಿ ಎನ್ನುವುದೇ ನನ್ನ ಆಶಯ ಕೂಡ'' ಎಂದು ಅಮೃತಾ ಹೇಳಿದ್ದಾರೆ.
ಮಕ್ಕಳಿರುವ ಮನೆ ನಂದಗೋಕುಲ
''ಇತ್ತೀಚೆಗೆ ಮನೆಗಳಲ್ಲಿ ಸಂಬಂಧ ಕಳಚಿ ಬೀಳುತ್ತಿವೆ, ಭಾವನೆಗಳು ಕಣ್ಮರೆಯಾಗುತ್ತಿವೆ, ಕೊಂಡಿ ಕಳಚಿ ಹೋಗುತ್ತಿದೆ ಎನ್ನುವುದು ನನ್ನ ಅಭಿಪ್ರಾಯ. ಇಂತಹ ಸಮಯದಲ್ಲಿ ನನಗೆ 'ನಂದ ಗೋಕುಲ' ಬಂದಾಗ ಜನ ಜಾಸ್ತಿ ಇರ್ತಾರೆ, ನಮಗೆ ಜಾಸ್ತಿ ಜನ ಸಿಕ್ತಾರೆ ಎನ್ನುವ ಭಾವನೆ ನನಗೆ ಬಂತು, ಆಮೇಲೆ ನಮ್ಮ ಸುತ್ತ ಮುತ್ತ ಪ್ರೀತಿಸುವ ಜನ ಜಾಸ್ತಿ ಇರಬೇಕೆಂದು ನಾವೆಲ್ಲ ಈಗ ಬಯಸುತ್ತಿದ್ದೇವೆ, ಅದೃಷ್ಟವಶಾತ್ ನಮ್ಮ ಸೆಟ್‌ನಲ್ಲಿ ನನಗೆ ಹೀಗೆ ಒಳ್ಳೆಯ ಮನಸ್ಸುಗಳು ಸಿಕ್ಕಿವೆ.
ತುಂಬಾನೇ ಪಾಸಿಟಿವ್ ಆಗಿರುವ ವ್ಯಕ್ತಿಗಳು ನಮ್ಮ ಧಾರಾವಾಹಿಯಲ್ಲಿ ಕೆಲಸ ಮಾಡ್ತಿದ್ದಾರೆ, ಹೆಜ್ಜೆ ಇಟ್ಟರೆ ಸಾಕು ನಗುಮೊಗದೊಂದಿಗೆನೇ ಎಲ್ಲರು ಇಲ್ಲಿ ಕಾಣ್ತಾರೆ , ಇದಕ್ಕಿಂತ ಇನ್ನೇನು ಬೇಕು ಈ ಅವಕಾಶವನ್ನು ನೀಡಿದ ಆ ದೇವರಿಗೆ ನಾನು ಧನ್ಯವಾಗಳನ್ನು ಹೇಳುತ್ತೇನೆ'' ಎಂದು ಕೂಡ ಅಮೃತಾ ಅವರು ಹೇಳಿದ್ದಾರೆ.


Click it and Unblock the Notifications











