For Quick Alerts
ALLOW NOTIFICATIONS  
For Daily Alerts

ನಿರಂಜನ್ - ಪಾಂಡು ಇಬ್ಬರು ಒಂದೇ ತರ ಇದ್ದಾರಲ್ಲ!

By ಶಶಿಕರ ಪಾತೂರು
|

ಜಗತ್ತಿನಲ್ಲಿ ಒಬ್ಬರಂತೆ ಏಳು ಮಂದಿ ಇರುತ್ತಾರಂತೆ. ಆದರೆ ಕನ್ನಡ ಕಿರುತೆರೆಯಲ್ಲಿ ಇಬ್ಬರಂತೂ ಪತ್ತೆಯಾಗಿದ್ದಾರೆ. ಅವರು ಬೇರೆ ಯಾರೂ ಅಲ್ಲ; 'ಮಗಳು ಜಾನಕಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿರುವ ರಾಕೇಶ್ ಮಯ್ಯ ಮತ್ತು ಈ ಹಿಂದೆ ನಿರ್ದೇಶಕ ಟಿಎನ್ ಸೀತಾರಾಮ್ ಅವರದೇ ತಂಡದಲ್ಲಿದ್ದಂಥ ಯಶವಂತ ಈ ಹೋಲಿಕೆಗೆ ಪಾತ್ರರಾದವರು.

ವಿಶೇಷ ಏನು ಎಂದರೆ, ಇವರಿಬ್ಬರ ಹೋಲಿಕೆ ನೋಟಕ್ಕೆ ಮಾತ್ರ ಸೀಮಿತವಲ್ಲ. ಇವರಿಬ್ಬರ ಹುಟ್ಟೂರು ಕೂಡ ಕರಾವಳಿಯೇ. ನೋಡಲು ಒಂದೇ ತರ ಇರುವ ಈ ಇಬ್ಬರೂ ಕಲಾವಿದರು ಕರಾವಳಿಯ ಪ್ರತಿಭೆಗಳು. ರಾಕೇಶ್ ಮಯ್ಯ ಕರ್ನಾಟಕದ ಕರಾವಳಿ ಪುತ್ತೂರು ಎಂಬಲ್ಲಿಯವರಾದರೆ, ಯಶವಂತ ಕಾಸರಗೋಡು ಕರಾವಳಿಯ ಪಾತೂರು ನಿವಾಸಿ.

ಯಾರೀ 'ಮಗಳು ಜಾನಕಿ': ಧಾರಾವಾಹಿಗೆ ಗಾನವಿ ಆಯ್ಕೆ ಆಗಿದ್ದು ಹೇಗೆ.?

ಅಂದಹಾಗೆ, ಈ ಇಬ್ಬರು ನಟರ ಕೆಲವು ಕುತೂಹಲಕಾರಿ ವಿಷಯಗಳು ಮುಂದಿವೆ ಓದಿ...

ಸೀತಾರಾಮ್ ಬ್ಯಾನರ್ ಮೂಲಕ ಯಶವಂತ್ ಉದಯ

ಯಶವಂತ ಶಾಲಾ ದಿನಗಳಿಂದಲೇ ಯಕ್ಷಗಾನ, ನಾಟಕಗಳ ಮೂಲಕ ಗುರುತಿಸಿಕೊಂಡ ಹುಡುಗ. ಆದರೆ, ಬೆಂಗಳೂರು ಸೇರಿದ ಬಳಿಕ ಕಿರುಪರದೆಯ ಮೇಲೆ ಪ್ರಥಮ ಬಾರಿ ಅವಕಾಶ ಮಾಡಿಕೊಟ್ಟಿದ್ದು ಟಿ.ಎನ್ ಸೀತಾರಾಮ್ ಅವರ ಮುಕ್ತ ಮುಕ್ತ ಧಾರಾವಾಹಿ. "ನಿಜ ಹೇಳಬೇಕೆಂದರೆ ನನ್ನ ವೃತ್ತಿ ಬದುಕು ಆರಂಭಗೊಂಡಿದ್ದೇ ಸೀತಾರಾಮ್ ಅವರ ಬ್ಯಾನರ್ ಮೂಲಕ" ಎನ್ನುವ ಯಶವಂತ, ಮುಂಜಾವು, ಚಿತ್ರಲೇಖ ಧಾರಾವಾಹಿಗಳಿಗೆ ಅಸಿಸ್ಟೆಂಟ್, ಅಸೋಸಿಯೇಟ್ ನಿರ್ದೇಶಕರಾಗಿ ಕೆಲಸ ಶುರು ಮಾಡಿದವರು. ಅದರ ಬಳಿಕ 'ಮುಕ್ತ ಮುಕ್ತ'ದಲ್ಲಿ ನಟನಾಗಿ ಕಾಣಿಸಿಕೊಳ್ಳುವ ಅವಕಾಶ ಕೂಡ ಸೀತಾರಾಮ್ ಅವರೇ ನೀಡಿದ್ದರು. 'ಮಹಾಪರ್ವ' ಧಾರಾವಾಹಿಯಲ್ಲಿ ನಟಿಸುವ ಜೊತೆಗೆ ಸಂಚಿಕೆ ನಿರ್ದೇಶಕರಾಗಿಯೂ ಕೆಲಸ ಮಾಡಿದ ಕೀರ್ತಿ ಯಶವಂತನದ್ದಾಗಿತ್ತು.

ಪತ್ರಿಕಾ ಛಾಯಾಗ್ರಾಹಕರಾಗಿದ್ದ ರಾಕೇಶ್

'ಮುಕ್ತ ಮುಕ್ತ' ಹಾಗೂ 'ಮಹಾಪರ್ವ' ಈ ಎರಡೂ ಧಾರಾವಾಹಿಗಳಲ್ಲಿ ಕೂಡ ಸಿ ಎಸ್ ಪಿ ಎನ್ನುವ ಸರಾಮ್ ಅವರ ವಕೀಲ ಪಾತ್ರಧಾರಿಯ ಸಹಾಯಕ ಪಾಂಡು ಎನ್ನುವ ಪಾತ್ರದ ಮೂಲಕ ಗುರುತಿಸಿಕೊಂಡಿದ್ದರು ಯಶವಂತ್. ಆದರೆ, ರಾಕೇಶ್ ಮಯ್ಯ ಪತ್ರಿಕಾ ಛಾಯಾಗ್ರಾಹಕರಾಗಿದ್ದವರು ವಿನು ಬಳಂಜ ಅವರ 'ಲವಲವಿಕೆ' ಧಾರಾವಾಹಿಯ ಚಿಕ್ಕದೊಂದು ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು. 'ಅವಳು' ಧಾರಾವಾಹಿಯಲ್ಲಿ ನಾಯಕರಾಗಿಯೂ ನಟಿಸಿದ್ದ ಅವರು ಹಲವಾರು ಕಿರುಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದರು. ಇದೀಗ 'ಮಗಳು ಜಾನಕಿ'ಯ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ.

'ಮಗಳು ಜಾನಕಿ' ಧಾರಾವಾಹಿಯ ನಿರಂಜನ್ ಯಾರು? ಅವರ ಹಿನ್ನೆಲೆ ಏನು?

ನಾನು ಹೋಲಿಸಲ್ಪಡುತ್ತಿರುವುದು ಹೊಸತೇನಲ್ಲ!

ವಿಚಿತ್ರ ಏನೆಂದರೆ, ಯಶವಂತ ಅವರನ್ನು ಅವರಿವರಿಗೆ ಹೋಲಿಸುತ್ತಿರುವುದು ಇದೇ ಮೊದಲ ಬಾರಿಯಂತೂ ಅಲ್ಲವಂತೆ. ಮಂಗಳೂರು ಯೂನಿವರ್ಸಿಟಿ ಕಾಲೇಜ್ ನಲ್ಲಿ ಡಿಗ್ರಿ ಮಾಡುತ್ತಿದ್ದ ದಿನಗಳಲ್ಲೇ ನಾಟಕಗಳಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರು ಯಶವಂತ್. ಸತತ ಎರಡು ಬಾರಿ ಶ್ರೇಷ್ಠ ನಟ ಪ್ರಶಸ್ತಿಯನ್ನು ಕೂಡ ಪಡೆದುಕೊಂಡರು. ಆಗ ಅವರ ನಟನೆಯನ್ನು ನೋಡಿದ ಸಹಪಾಠಿಗಳು "ನೀನು ಸುದೀಪ್ ಹಾಗೆ ಕಾಣಿಸುತ್ತೀಯ, ಅವರ ಸ್ಟೈಲಲ್ಲೇ ನಟಿಸುತ್ತೀಯ" ಎನ್ನುತ್ತಿದ್ದರು!

ಸುದೀಪ್, ಸಿದ್ಧಾರ್ಥ್, ಕಾಶೀನಾಥ್ ರಿಗೆ ಹೋಲಿಕೆ

ಎತ್ತರದ ವಿಚಾರಕ್ಕೆ ಬಂದರೆ ಯಶವಂತ ಆಗಲೇ ಕಿಚ್ಚ ಸುದೀಪ್ ಹಾಗೆ ಆರು ಅಡಿ ಒಂದಿಂಚು ಇದ್ದಿದ್ದಂತೂ ನಿಜ. ಆದರೆ ಇನ್ನೂ ಥಿಯೇಟರಲ್ಲಿ ಸಿನಿಮಾ ನೋಡುವ ಹವ್ಯಾಸ ಬೆಳೆಸಿರದ ಯಶವಂತ ನನ್ನ ಹಾಗೆಯೇ ಇದ್ದಾರ ಸುದೀಪ ಎಂದು ಕುತೂಹಲದಿಂದ ಚಿತ್ರ ನೋಡಲು ಹೋಗುತ್ತಿದ್ದರಂತೆ. ಹೇರ್ ಸ್ಟೈಲ್ ಕೂಡ ಮ್ಯಾಚ್ ಆಗುತ್ತಿದೆ ಅನಿಸಿತು. ಬೆಂಗಳೂರಲ್ಲಿ ನಾಟಕ ಶುರು ಮಾಡಿದಾಗ ಪ್ರೇಕ್ಷಕರಾಗಿ ಬಂದವರೊಬ್ಬರು ನೀವು ತೆಲುಗು ನಟ ಸಿದ್ಧಾರ್ಥ್ ತರಹ ಇದ್ದೀರ ಎಂದಿದ್ದರು. ಅದರ ಜೊತೆಗೆ ಕಾಶೀನಾಥ್ ಹಾಗೆ ಇದ್ದೀರಿ ಎಂದವರೂ! ಮತ್ತೊಮ್ಮೆ ಮದುವೆಯೊಂದಕ್ಕೆ ಹೋಗಿದ್ದಾಗ 'ನೀವು ಕಾಶೀನಾಥ್ ಅವರ ಮಗ ಅಲ್ವಾ? ಎಂದು ಮಾತನಾಡಿಸಲು ಬಂದಿದ್ದೂ ಇದೆ. ಆದರೆ ಅದು ಯಾವುದು ಕೂಡ ಇಷ್ಟೊಂದು ಗೊಂದಲಗಳನ್ನು ಸೃಷ್ಟಿಸಿರಲಿಲ್ಲ ಎನ್ನುವುದು ಅವರ ಅಭಿಪ್ರಾಯ.

ಸಂಬಂಧಿಕರು ಕೂಡ ತಬ್ಬಿಬ್ಬಾಗಿದ್ದಾರೆ!

"ಫೇಸ್ ಬುಕ್ ನಲ್ಲಿ ಸ್ನೇಹಿತರಾದವರು ನೇರವಾಗಿ ಸಿಕ್ಕಾಗ ಕೂಡ ಗುರುತು ಹಿಡಿಯದಿರುವುದು ವಿಶೇಷವಲ್ಲ. ಯಾಕೆಂದರೆ, ಫೊಟೋಗೂ, ಜೀವಂತವಾಗಿ ಎದುರು ಬರುವುದಕ್ಕೂ ವ್ಯತ್ಯಾಸ ಇರುತ್ತದೆ ತಾನೇ? ಆದರೆ, ನೇರವಾಗಿ ಪರಿಚಯವಿರುವ ಸ್ನೇಹಿತರು ಮಾತ್ರವಲ್ಲ.. ನನ್ನ ಸಂಬಂಧಿಕರು ಕೂಡ ಭೇಟಿಯಾದಾಗಲೆಲ್ಲ ಮಗಳು ಜಾನಕಿ ಧಾರಾವಾಹಿಯಲ್ಲಿ ಫಸ್ಟ್ ಕ್ಲಾಸ್ ಅಭಿನಯ ಮಾಡುತ್ತಿದ್ದೀಯ ಎಂದು ಪ್ರಶಂಸೆ ಮಾಡಲು ಶುರು ಮಾಡಿದ್ದು ಆ ಧಾರಾವಾಹಿ ಆರಂಭಗೊಂಡಾಗ! ಇತ್ತೀಚೆಗೆ ಮಂಗಳೂರಿನ ಭೂತಕೋಲವೊಂದರಲ್ಲಿ ಭಾಗಿಯಾಗಿದ್ದಾಗ ಒಂದಷ್ಟು ಮಂದಿ ದೂರದಿಂದಲೇ ಮಗಳು ಜಾನಕಿ ಎಂದು ದೂರದಿಂದಲೇ ಕೈ ಬೀಸಿ ಹೋದರು! ಹತ್ತಿರ ಬಂದವರಿಗೆ ವಿವರಿಸಬಹುದು. ದೂರದಿಂದಲೇ ಅವರೇ ನಿರ್ಧರಿಸಿಕೊಂಡು ಹೋದರೆ ಏನು ಹೇಳೋಣ?" ಎಂದು ನಗುತ್ತಾರೆ ಯಶವಂತ.

ರಾಕೇಶ್ ಮಯ್ಯಗೂ ಈ ರೀತಿ ಆಗಿದೆ

ಅಂದಹಾಗೆ, ಈ ಹೋಲಿಕೆಯ ಪ್ರಸ್ತಾಪ ಯಶವಂತ್ ಅವರಷ್ಟೇ ರಾಕೇಶ್ ಮಯ್ಯ ಅವರನ್ನು ಕಾಡಿರುವುದು ಮಾತ್ರ ಸುಳ್ಳಲ್ಲ. ಆರಂಭದಲ್ಲಿ ತಮ್ಮನ್ನು ಭೇಟಿಯಾಗುತ್ತಿದ್ದ ಅಭಿಮಾನಿಗಳೆಲ್ಲ "ಮೊದಲು ಪಾಂಡುವಾಗಿ ಹಾಸ್ಯ ಮಾಡುತ್ತಿದ್ದೀರಿ, ಈಗ ತುಂಬ ಚೆನ್ನಾಗೆ ಸೆಂಟಿಮೆಂಟ್ ಮಾಡ್ತಾ ಇದ್ದೀರ.. ಇನ್ನು ಕಾಮಿಡಿ ಮಾಡಲ್ವ?" ಎಂದು ಕೇಳುತ್ತಿದ್ದರಂತೆ. ಆಗ ಯಶವಂತ್ ಬಗ್ಗೆ ಕುತೂಹಲ ಮೂಡಿಸಿಕೊಂಡಿದ್ದ ತಮಗೆ ಹೀಗೆ ತಾವಿಬ್ಬರೂ ಭೇಟಿಯಾಗುವ ಸಂದರ್ಭ ಬರಬಹುದೆಂದು ಕಲ್ಪನೆ ಇರಲಿಲ್ಲ ಎಂದರು ಮಯ್ಯ.

ಮೊದಲ ಭೇಟಿ ಹೇಗಿತ್ತು ಗೊತ್ತಾ..?

ವಾರಪತ್ರಿಕೆಯೊಂದರ ಫೊಟೋಶೂಟ್ ಗಾಗಿ ಪರಸ್ಪರ ಭೇಟಿಯಾದಾಗ ಒಂದು ಕ್ಷಣ ಇಬ್ಬರೂ ಕಣ್ತುಂಬಿ ನಿಂತರು. ಬಳಿಕದ ಅವರ ಹಾವಭಾವಗಳನ್ನು ಛಾಯಾಗ್ರಾಹಕ ಜೀವನ್ ಕುಮಾರ್ ಸೆರೆ ಹಿಡಿದಿರುವುದನ್ನು ಇಲ್ಲಿ ಕಾಣಬಹುದು. ಆದರೆ ಪರಸ್ಪರ ಪ್ರಶಂಸೆ ಮಾತುಗಳನ್ನಾಡಿದ ಈ ಯುವ ಕಲಾವಿದರನ್ನು ಮೆಚ್ಚಲೇಬೇಕು. ''ಪ್ರಥಮ ಬಾರಿ ಭೇಟಿಯಾದಾಗಲೂ ಸಹ ಅವರೊಂದಿಗಿನ ಮಾತುಕತೆಗಳು ತುಂಬ ಆತ್ಮೀಯವಾಗಿಯೇ ಇತ್ತು. ಅವರಿಗೆ ನನ್ನ ಶುಭಾಶಯಗಳು" ಎಂದು ಮನದುಂಬಿ ಹಾರೈಸುತ್ತಾರೆ ಯಶವಂತ. ಅದೇ ವೇಳೆ ರಾಕೇಶ್ ಮಯ್ಯ ಕೂಡ "ಯಶವಂತ್ ಅವರು ನನಗಿಂತ ಹೈಟ್ ಇದ್ದಾರೆ. ಚೆನ್ನಾಗಿ ನಿರ್ದೇಶನವೂ ಮಾಡುತ್ತಾರೆ, ಸಿನಿಮಾಗಳಲ್ಲಿಯೂ ನಟಿಸುತ್ತಾರೆ. ಅವರೊಂದಿಗೆ ಪರಿಚಯವಾಗಿದ್ದು ಖುಷಿ ತಂದಿದೆ. ಮುಂದೊಮ್ಮೆ ಜೊತೆಯಾಗಿ ಕಾರ್ಯನಿರ್ವಹಿಸುವ ಸಂದರ್ಭವೂ ಬರಬಹುದು" ಎನ್ನುತ್ತಾರೆ.

ಸೀತಾರಾಮ್ ಏನು ಹೇಳುತ್ತಾರೆ?

ಅಂದಹಾಗೆ, ಈ ಹೋಲಿಕೆಯನ್ನು ಖುದ್ದು ನಿರ್ದೇಶಕ ಟಿಎನ್ ಸೀತಾರಾಮ್ ಕೂಡ ಒಪ್ಪುತ್ತಾರೆ. ಹಾಗಾಗಿ ಗುರುಗಳು ನನ್ನನ್ನು ರಾಕೇಶ್ ಮಯ್ಯ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನುವ ಫೀಲ್ ಯಶವಂತ್ ರಲ್ಲಿದೆ! ಯಾಕೆಂದರೆ 'ಮಹಾಪರ್ವ'ದ ಬಳಿಕ ಗುರುಗಳ ಜೊತೆಗೆ ಕೆಲಸ ಮಾಡಲು ಸಂದರ್ಭ ಕೂಡಿ ಬರಲಿಲ್ಲ ಎನ್ನುವ ಬೇಸರ ಕೂಡ ಇವರಲ್ಲಿದೆ. ಅದಕ್ಕೂ ಸರಿಯಾದ ಕಾರಣವಿತ್ತು. 'ಮಹಾಪರ್ವ' ಮುಗಿದೊಡನೆ ಸೀತಾರಾಮ್ ಅವರು ಧಾರಾವಾಹಿ ವಿಚಾರದಲ್ಲಿ ಒಂದಷ್ಟು ವಿರಾಮಕ್ಕೆ ಜಾರಿದ್ದರು. ಆಗ ಟಿ ಎನ್ ಸೀ ಅವರ ಮಗನ ಬ್ಯಾನರ್ ನಲ್ಲಿ ಬರುತ್ತಿದ್ದ 'ದೇವತೆ' ಎನ್ನುವ ಧಾರಾವಾಹಿಯ ಒಂದು ಟ್ರ್ಯಾಕ್ ಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದರು ಯಶವಂತ್.

ಶುಭ ಹಾರೈಸಿದ ಟಿ ಎನ್ ಸೀ

ಆದರೆ ಸೀತಾರಾಮ್ ಅವರು ತಮ್ಮ 'ಕಾಫಿತೋಟ' ಚಿತ್ರದ ಕೆಲಸಕ್ಕಾಗಿ ಅವರೇ ಆಹ್ವಾನಿಸುವ ಹೊತ್ತಿನಲ್ಲಿ ಯಶವಂತ 'ಗಂಗಾ' ಧಾರಾವಾಹಿಯ ಸಂಚಿಕೆ ನಿರ್ದೇಶನದಲ್ಲಿ ಕಮಿಟ್ ಆಗಿದ್ದರು. ಆಮೇಲೆ 'ಮಗಳು ಜಾನಕಿ' ಶುರು ಮಾಡುವಾಗಲೂ ಆಹ್ವಾನಿಸಿದ್ದರು. ಆದರೆ ಅದಕ್ಕೆ ಹದಿನೈದೇ ದಿನಗಳ ಹಿಂದೆ 'ಮಾಂಗಲ್ಯಂ ತಂತುನಾನೇನ' ಎನ್ನುವ ಧಾರಾವಾಹಿಗೆ ಸಂಚಿಕೆ ನಿರ್ದೇಶಕರಾಗಿ ಕೆಲಸ ಶುರು ಮಾಡಿಯಾಗಿತ್ತು! ಒಟ್ಟಿನಲ್ಲಿ ನಿರಂಜನನ ಪಾತ್ರ ನನ್ನನ್ನು ನೆನಪಿಸಬಹುದು ಆದರೆ ನನಗೆ ಟಿಎನ್ ಸೀ ಸರ್ ಮತ್ತು ವಿನೋದ್ ದೊಂಡಾಳೆಯವರೇ ಗುರುಗಳ ಸ್ಥಾನದಲ್ಲಿ ಸದಾ ಸ್ಮರಣಾರ್ಹರಾಗಿರುತ್ತಾರೆ ಎನ್ನುತ್ತಾರೆ ಯಶವಂತ. ಅಂದಹಾಗೆ ಇವರಿಬ್ಬರನ್ನು ಒಂದು ಮಾಡಿ ಫೊಟೋಶೂಟ್ ನಡೆಸುವ ವಿಚಾರ ಕೇಳಿ ಸಸೂಪರ್ ಒಳ್ಳೇದಾಯ್ತು ಕಣ್ರೀ ಎಂದು ನಕ್ಕು ಶುಭಕೋರಿದ್ದಾರೆ ಸೀತಾರಾಮ್.

English summary
Kannada tv actors Rakesh Maiya and Yashavath interview.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more