ಧ್ರುವ ಜೊತೆ ಸಿನಿಮಾ.. 'ಚಾರ್ಲಿ'ಗೆ ರಾಜ್ಯಪ್ರಶಸ್ತಿ..'ಕಾಂತಾರ-1' ಸಕ್ಸಸ್ ಬಗ್ಗೆ ಕಿರಣ್ ರಾಜ್ ಮಾತು
'777 ಚಾರ್ಲಿ' ರೀತಿಯ ಅದ್ಭುತ ಸಿನಿಮಾ ಕಟ್ಟಿಕೊಟ್ಟ ನಿರ್ದೇಶಕ ಕಿರಣ್ ರಾಜ್ ಬಳಿಕ ಸೈಲೆಂಟ್ ಆಗಿಬಿಟ್ಟರು. ಅವರ ಮುಂದಿನ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ. ಇತ್ತೀಚೆಗೆ ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಕಿರಣ್ ರಾಜ್ ಶುಭ ಕೋರಿದ್ದರು. ಇದನ್ನು ನೋಡಿ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತದೆ ಎನ್ನುವ ಚರ್ಚೆ ಶುರುವಾಗಿದೆ.
ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಬಳಗದಲ್ಲಿ ಗುರ್ತಿಸಿಕೊಂಡಿರುವ ಕಿರಣ್ ರಾಜ್ '777 ಚಾರ್ಲಿ' ಚಿತ್ರ ನಿರ್ದೇಶಿಸಿ ಗಮನ ಸೆಳೆದರು. ಇತ್ತೀಚೆಗೆ 2022ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿ ಈ ಚಿತ್ರ ಅದ್ಭುತ ಸಾಧನೆ ಮಾಡಿದೆ. ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಂಕಲನ(ಪ್ರತೀಕ್ ಶೆಟ್ಟಿ), ಗೀತ ಸಾಹಿತ್ಯ(ನಾಗಾರ್ಜುನ ಶರ್ಮಾ) ಕೂಡ ಪ್ರಶಸ್ತಿ ಪಡೆದಿದ್ದಾರೆ. ಅಷ್ಟೇ ಅಲ್ಲ, 2ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಕೂಡ ಸಿಕ್ಕಿದೆ.

ಅನಯ ವಸುಧಾ ಅವರೊಟ್ಟಿಗೆ ಕಿರಣ್ ರಾಜ್ ಮದುವೆ ನಿಶ್ಚಯವಾಗಿ ಎಂಗೇಜ್‌ಮೆಂಟ್ ನಡೆದಿದೆ. ಇಬ್ಬರೂ ಪ್ರೀತಿಸಿ ಮದುವೆ ಆಗುತ್ತಿದ್ದಾರೆ. ಪ್ರೀ ವೆಡ್ಡಿಂಗ್ ಫೋಟೊಶೂಟ್ ಜೋರಾಗಿದೆ. ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಇದೆಲ್ಲದರ ನಡುವೆ ಒಂದು ಹಾರರ್ ಕಾಮಿಡಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಕಥೆ, ಚಿತ್ರಕಥೆ ತಿದ್ದಿ ತೀಡುವ ಕೆಲಸದಲ್ಲಿ ನಿರತರಾಗಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಕಿರಣ್ ರಾಜ್ ಮಾತನಾಡಿದ್ದಾರೆ.
ಧ್ರುವ ಸರ್ಜಾ ಜೊತೆ ಸಿನಿಮಾ ಮಾಡ್ತಿದ್ದೀರಾ?
ನಾನು ಧ್ರುವ ಸರ್ಜಾ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದೆ. ಇದನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿ ಆ ರೀತಿ ಚರ್ಚೆ ಆಗ್ತಿದೆ. ನಾವಿಬ್ಬರು ಭೇಟಿ ಆಗಿದ್ದು ನಿಜ. ಭವಿಷ್ಯದಲ್ಲಿ ಅವರೊಟ್ಟಿಗೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ಮಾಡ್ತೀನಿ. ಸದ್ಯಕ್ಕೆ ಅವ್ರು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾನು ನನ್ನ ಸಿನಿಮಾ ಕೆಲಸಗಳಲ್ಲಿ ನಿರತನಾಗಿದ್ದೀನಿ. ಇದೊಂದು ಹಾರರ್ ಕಾಮಿಡಿ ಸಿನಿಮಾ.

ಮುಂದಿನ ಸಿನಿಮಾ ಕೆಲಸಗಳು ಎಲ್ಲಿಗೆ ಬಂತು?
ಸ್ಕ್ರಿಪ್ಟ್ ಕೆಲಸಗಳೆಲ್ಲಾ ಮುಗಿದು ನಿರ್ಮಾಣ ಸಂಸ್ಥೆ ಜೊತೆ ಅಂತಿಮ ಹಂತದ ಮಾತುಕತೆ ನಡೀತಿದೆ. ಇನ್ನು ಎರಡ್ಮೂರು ತಿಂಗಳಲ್ಲಿ ಎಲ್ಲವೂ ಫೈನಲ್ ಆಗಲಿದೆ. ಈ ಚಿತ್ರದಲ್ಲಿ ಯಾರೆಲ್ಲಾ ನಟಿಸ್ತಾರೆ ಎನ್ನುವುದು ಈಗ ಹೇಳಲು ಸಾಧ್ಯವಿಲ್ಲ. ಪರಭಾಷಾ ಕಲಾವಿದರು ನಟಿಸುವ ಸಾಧ್ಯತೆಯಿದೆ.
'777 ಚಾರ್ಲಿ' ಬಳಿಕ ಬಹಳ ಗ್ಯಾಪ್ ಆಯ್ತು ಅಲ್ಲವೇ?
ನಿಜ ಹೇಳಬೇಕು ಅಂದ್ರೆ ಆ ಚಿತ್ರಕ್ಕೆ ನಾನು 5 ವರ್ಷ ವ್ಯಯಿಸಿದ್ದೆ. ಒಂದೂವರೆ ವರ್ಷ ಬರವಣಿಗೆಗೆ ವ್ಯಯಿಸಿದ್ದೆ. ಸಿನಿಮಾ ಶುರುವಾಗಿ 3 ವರ್ಷದ ಬಳಿಕ ತೆರೆಗೆ ಬಂದಿತ್ತು. ಈಗ ಮಾಡುತ್ತಿರುವ ಚಿತ್ರದ ಕಥೆ, ಚಿತ್ರಕಥೆ ಸಿದ್ಧಪಡಿಸಲು 2 ವರ್ಷ ಬೇಕಾಯಿತು. ಜೊತೆ ಜೊತೆಗೆ ಸಾಕಷ್ಟು ರೀಸರ್ಚ್ ಇತ್ತು. '777 ಚಾರ್ಲಿ' ಬಿಡುಗಡೆ ಬಳಿಕ ಒಂದು ವರ್ಷ ಬರೀ ಸುತ್ತಾಟ ಆಯಿತು. ವಿಎಫ್‌ಎಕ್ಸ್ ಕೋರ್ಸ್ ಮಾಡ್ತಿದ್ದೆ. ಮುಂದಿನ ಚಿತ್ರಕ್ಕೆ ಸಾಕಷ್ಟು ವಿಎಫ್‌ಎಕ್ಸ್ ಕೆಲಸ ಇತ್ತು. ಈ ನಡುವೆ ಎಂಗೇಜ್‌ಮೆಂಟ್, ಮದುವೆ ತಯಾರಿ ನಡೀತು. ಹಾಗಾಗಿ ತಡವಾಗ್ತಿದೆ.
ನಿಮ್ಮ ಚಿತ್ರಕ್ಕೆ ರಾಜ್ಯಪ್ರಶಸ್ತಿ ಸಿಕ್ಕಿದ್ದು ಎಷ್ಟು ಸಂತಸ ತಂದಿದೆ?
'777 ಚಾರ್ಲಿ' ಸಿನಿಮಾ ಬಂದು ಎರಡ್ಮೂರು ವರ್ಷ ಆಯ್ತು. ನಾವು ರಾಜ್ಯಪ್ರಶಸ್ತಿ ವಿಚಾರ ಮರೆತೇಬಿಟ್ಟಿದ್ದೆವು. ನಮ್ಮ ಚಿತ್ರಕ್ಕೆ ಪ್ರಶಸ್ತಿ ಅಂದಾಗ ಬಹಳ ಖುಷಿಯಾಯಿತು. ಮುಖ್ಯವಾಗಿ ರಕ್ಷಿತ್ ಸರ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದ್ದು ವಿಶೇಷ. ಅವರಿಗೆ ರಾಷ್ಟ್ರಪ್ರಶಸ್ತಿ ಬರಬಹುದಾ ಎಂದು ಊಹಿಸಿದ್ದೆ. ಕಾರಣ ಈ ಚಿತ್ರದಲ್ಲಿ ಅವರು ನಟಿಸುವುದು ಅಷ್ಟು ಸುಲಭ ಇರಲಿಲ್ಲ. ಒಂದು ನಾಯಿಯ ಜೊತೆಗೆ ನಟಿಸೋದು ಕಷ್ಟ. ಅದು ಸಾಕಷ್ಟು ಟೇಕ್ ತೆಗೆದುಕೊಳ್ಳುತ್ತದೆ, ಪ್ರತಿಬಾರಿ ರಕ್ಷಿತ್ ಸರ್ ಪರ್ಫೆಕ್ಟ್ ಆಗಿ ನಟಿಸಬೇಕಿತ್ತು. ಒಂದು ಜೊತೆ ಅದರೊಟ್ಟಿಗೆ ತರಬೇತಿ ಇತ್ತು. ಅದಕ್ಕೆ ಬಹಳ ಬದ್ಧತೆ, ಪರಿಶ್ರಮ ಬೇಕಿತ್ತು.
ಧ್ರುವ ಜೊತೆ ಸಿನಿಮಾ ಯಾವ ಜಾನರ್ ಆಗಿರಬಹುದು?
ಯಾವ ತರಹದ ಸಿನಿಮಾ ಎಂದು ಈಗಲೇ ಹೇಳುವುದು ಕಷ್ಟ. ಆದರೆ ಅದ್ಭುತ ಸಿನಿಮಾ ಮಾಡಬೇಕು. ಅವರೊಬ್ಬ ಅದ್ಭುತ ನಟ. ಆರಂಭದಿಂದ ಅವರ ಸಿನಿಮಾಗಳಲ್ಲಿ ನಟನೆ ನೋಡುತ್ತಾ ಬರ್ತಿದ್ದೀನಿ. '777 ಚಾರ್ಲಿ' ಸಿನಿಮಾ ನೋಡಿ ಇಷ್ಟಪಟ್ಟು ಫೋನ್ ಮಾಡಿ ಮಾತನಾಡಿದ್ರು. ನನ್ನ ಸಿನಿಮಾ ಶೈಲಿ ಬೇರೆ, ಅವರ ಸಿನಿಮಾ ಶೈಲಿ ಬೇರೆ. ಒಂದು ವೇಳೆ ಅಂತ ಅವಕಾಶ ಸಿಕ್ಕರೆ ಎಲ್ಲವನ್ನು ಸೇರಿಸಿ ಒಳ್ಳೆ ಸಿನಿಮಾ ಮಾಡ್ತೀವಿ.
'ಕಾಂತಾರ- 1' ಸಕ್ಸಸ್ ಎಷ್ಟು ಖುಷಿ ಕೊಟ್ಟಿದೆ?
'ಕೆಜಿಎಫ್' ರೀತಿ 'ಕಾಂತಾರ' ಕೂಡ ಕನ್ನಡದ ಹೆಮ್ಮೆ. ಕನ್ನಡ ಸಿನಿಮಾವೊಂದು ಬೇರೆ ಭಾಷೆಗಳಲ್ಲಿ ಗೆಲ್ಲಬಹುದು ಎನ್ನುವುದನ್ನು 'ಕೆಜಿಎಫ್' ಸಿನಿಮಾ ಸಾಬೀತುಮಾಡಿ ಬುನಾದಿ ಹಾಕಿತ್ತು. ಅದನ್ನು 'ಕಾಂತಾರ' ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಚಾಪ್ಟರ್- 1 ಮೇಕಿಂಗ್ ಕ್ವಾಲಿಟಿ ನೋಡಿದರೆ ಅದ್ಭುತ ಎನಿಸುತ್ತದೆ. ಭಾರತೀಯ ಚಿತ್ರರಂಗದಲ್ಲೇ ಇದು ಅಚ್ಚರಿ. 100+ ಕೋಟಿ ರೂ. ಬಜೆಟ್ ಸಿನಿಮಾ 700 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕನ್ನಡ ಫಿಲ್ಮ್ ಮೇಕರ್ಸ್ ದೊಡ್ಡದಾಗಿ ಕನಸು ಕಾರಣ ಇದು ಸ್ಫೂರ್ತಿ ಎಂದು ಹೇಳಬಹುದು.
ರಿಷಬ್ ಶೆಟ್ಟಿ ಪ್ರತಿಭೆ ಬಗ್ಗೆ ಹೇಳಿ
ನಾನು ಅವರೊಟ್ಟಿಗೆ ಎರಡು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೀನಿ. 'ಕಥಾಸಂಗಮ' ಚಿತ್ರದಲ್ಲಿ ಅವರನ್ನು ನಿರ್ದೇಶನ ಮಾಡಿದ್ದೀನಿ. ಅವರ ಜರ್ನಿ ನಿಜಕ್ಕೂ ಪ್ರೇರಣೆ. ಅವರು ಮೊದಲ ಚಿತ್ರದಿಂದ ಏನೆಲ್ಲಾ ಕಷ್ಟಪಟ್ಟಿದ್ದಾರೆ ಗೊತ್ತು. 'ಕಿರಿಕ್ ಪಾರ್ಟಿ' ಚಿತ್ರದ ಸಕ್ಸಸ್ ಬಳಿಕ ಎಲ್ಲಾ ಬದಲಾಗುತ್ತಾ ಹೋಯಿತು. ನಟ, ನಿರ್ದೇಶಕ ಎರಡೂ ಆಗಿ 'ಕಾಂತಾರ-1' ರೀತಿಯ ಸಿನಿಮಾ ಕಟ್ಟಿಕೊಡುವುದು ಸುಲಭ ಅಲ್ಲ. ಪ್ರೀಕ್ವೆಲ್ ನೋಡಿದರೆ ಬೇರೆ ಯಾರೂ ಆ ಪಾತ್ರ ಮಾಡೋಕೆ ಸಾಧ್ಯವಿಲ್ಲ ಅನಿಸುತ್ತದೆ. ಸಿನಿಮಾ ಬಗ್ಗೆ ಪ್ಯಾಷನ್ ಇದ್ದರೆ ಮಾತ್ರ ಇದೆಲ್ಲ ಸಾಧ್ಯ. ಅಂತಹ ಕ್ವಾಲಿಟಿ ಸಿನಿಮಾ ಮಾಡುವುದು, ಆ ದೃಶ್ಯಗಳನ್ನು ಕಲ್ಪಿಸಿಕೊಂಡು ತೆರೆಗೆ ತರುವುದು ನಿಜಕ್ಕೂ ದೊಡ್ಡ ಸವಾಲು. ಇಂತಹ ಸಕ್ಸಸ್ ಎಷ್ಟೋ ಫಿಲ್ಮ್ ಮೇಕರ್ಸ್‌ಗೆ ಧೈರ್ಯ ಕೊಡುತ್ತದೆ.


Click it and Unblock the Notifications











