ಕುಂಭರಾಶಿ ಡೈರೆಕ್ಟರ್ ಚಂದ್ರಹಾಸ ಹೊಸ ಪ್ರಯತ್ನ, 'ಕೌಂತೇಯ' ರಹಸ್ಯ ಭೇದಿಸಲಿರುವ ಅಚ್ಯುತ್ ಕುಮಾರ್..!
ಒಂದು ಕಡೆ ಪ್ಯಾನ್ ಇಂಡಿಯಾ ಜ್ವರ ಚಿತ್ರರಂಗದಲ್ಲಿ ಅನೇಕರಿಗೆ ಬಂದಿದೆ. ನಾವೇನೆ ಮಾಡಿದರೂ ಅದು ಪ್ಯಾನ್ ಇಂಡಿಯಾ ಲೆವಲ್‌ನಲ್ಲಿಯೇ ಮಾಡುವುದು ಎಂದು ಕನ್ನಡ ಚಿತ್ರರಂಗದಲ್ಲಿ ಅನೇಕರು ಓಡಾಡುತ್ತಿದ್ದಾರೆ. ಮತ್ತೊಂದೆಡೆ ಪ್ರಯೋಗಕ್ಕೆ ಸಾವಿದೆ. ಪ್ರಯತ್ನಕ್ಕಲ್ಲ ಎಂಬ ಮಾತನ್ನು ಕೂಡ ಕೆಲವರು ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದ್ಧಾರೆ.
ಚಿತ್ರಮಂದಿರದಿಂದ ವಿಮುಖರಾದ ಪ್ರೇಕ್ಷಕರನ್ನು ಸೆಳೆಯಲು ಕುತೂಹಲಭರಿತ ಕಥೆಗಳನ್ನು ಹೆಣೆಯುತ್ತಿದ್ದಾರೆ. ಸಿನಿಮಾವನ್ನೇ ಉಸಿರಾಗಿಸಿಕೊಂಡ ಇವರಿಗೆ ಪ್ರಚಾರದ ಗೀಳು ಇರುವುದಿಲ್ಲ. ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಾ ಇವರು ಮುಂದುವರೆಯುತ್ತಾರೆ. ಆ ಪೈಕಿ ಬಿ ಕೆ ಚಂದ್ರಹಾಸ್ ಕೂಡ ಒಬ್ಬರು.

ಹೌದು, ಬಿ.ಕೆ ಚಂದ್ರಹಾಸ್.. ಒಂದು ದಶಕದ ಹಿಂದೆ ಚೇತನ್ ಚಂದ್ರ ಅಭಿನಯದಲ್ಲಿ ಬಂದಿದ್ದ ಕುಂಭರಾಶಿ ಚಿತ್ರದ ನಿರ್ದೇಶಕ. ಮೊದಲ ಚಿತ್ರದಲ್ಲಿಯೇ ಎಲ್ಲರ ಗಮನ ಸೆಳೆದು ಭರವಸೆಯನ್ನು ಮೂಡಿಸಿದ್ದ ಚಂದ್ರಹಾಸ ಆ ನಂತರ ನವರಸನಾಯಕ ಜಗ್ಗೇಶ್ ಅವರ ಮಗ ಗುರುರಾಜ್ ಜಗ್ಗೇಶ್ ಚಿತ್ರವನ್ನು ನಿರ್ದೇಶಿಸಿದ್ದರು. ಆರಂಭದಲ್ಲಿ 'ದಂಧೆ ಬಾಯ್ಸ್' ಎಂದು ಇಡಲಾಗಿದ್ದ ಈ ಚಿತ್ರದ ಹೆಸರನ್ನು ಆ ನಂತರ ಕಾಗೆ ಮೊಟ್ಟೆ ಎಂದು ಬದಲಿಸಲಾಗಿತ್ತು.
ಇಂಥಾ ಚಂದ್ರಹಾಸ್ ಇದೀಗ ಕೆಲ ದಿನಗಳ ಗ್ಯಾಪ್ ನಂತರ ಮತ್ತೆ ಮರಳಿ ಚಿತ್ರರಂಗಕ್ಕೆ ಬಂದಿದ್ದಾರೆ. ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಆ ಪ್ರಯೋಗದ ಹೆಸರು ಕೌಂತೇಯ. ಇನ್ನೇನು ಇದೇ ಸೋಮವಾರ { ಮೇ 1 } ದಿಂದ ಈ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು ತಮ್ಮ ಈ ಚಿತ್ರದ ಕುರಿತು ನಿರ್ದೇಶಕ ಬಿ.ಕೆ. ಚಂದ್ರಹಾಸ ನಿಮ್ಮ ಫಿಲ್ಮಿ ಬೀಟ್ ಕನ್ನಡ ವೆಬ್ ಸೈಟ್ ಜೊತೆ ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಚಂದ್ರಹಾಸ್ ತಮ್ಮ ಕೌಂತೇಯ ಚಿತ್ರದ ಕುರಿತು ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ನಿಮ್ಮ ಮುಂದಿನ ಚಿತ್ರದ ಕುರಿತು ಹೇಳುವುದಾದರೆ.
''ಸದ್ಯ ಕೆಲ ವರ್ಷಗಳ ಬ್ರೇಕ್‌ನ ನಂತರ ಕೌಂತೇಯ ಎನ್ನುವ ಚಿತ್ರದ ಮೂಲಕ ಮತ್ತೆ ಮರಳಿ ಬರುತ್ತಿದ್ದೇನೆ. ಕೌಂತೇಯ ಅಂದರೆ ಕುಂತಿ ಪುತ್ರ. ನನ್ನ ಹಿಂದಿನ ಎರಡು ಚಿತ್ರಗಳಿಗಿಂತ ಈ ಚಿತ್ರ ಸಂಪೂರ್ಣ ಭಿನ್ನವಾಗಿರಲಿದೆ. ತುಂಬಾನೇ ರಿಸರ್ಚ್ ಮಾಡಿ ಕಥೆಯನ್ನು ಈ ಬಾರಿ ಮಾಡಿಕೊಂಡಿದ್ದು ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾವನ್ನು ಈ ಬಾರಿ ಮಾಡ್ತಿದ್ದೇನೆ, ಪ್ರೇಕ್ಷಕರು ಸೀಟಿನ ಅಂಚಿಗೆ ಕುಳಿತುಕೊಳ್ಳುವಂತೆ ಮಾಡುವಲ್ಲಿ ನಾನು ಯಶಸ್ವಿಯಾಗುತ್ತೇನೆ ಎನ್ನುವ ನಂಬಿಕೆ ಇದೆ. ಈ ನಂಬಿಕೆಯೊಂದಿಗೆ ಈ ಜೂನ್ 1 ರಿಂದ ಚಿತ್ರಕ್ಕೆ ಚಾಲನೆಯನ್ನು ಕೊಡುತ್ತಿದ್ದೇವೆ'' ಎಂದು ಚಿತ್ರದ ನಿರ್ದೇಶಕ ಬಿ.ಕೆ.ಚಂದ್ರಹಾಸ್ ಹೇಳಿದ್ದಾರೆ.
ಚಿತ್ರದ ನಾಯಕ ಯಾರು ?
''ನಮ್ಮ ಚಿತ್ರದಲ್ಲಿ ಕಥೆಯೇ ಹೀರೋ. ಕಥೆಯನ್ನು ಹೊರತು ಪಡಿಸಿ ಹೇಳುವುದಾದರೆ ಅಚ್ಯುತ್ ಕುಮಾರ್ ಸರ್ ಈ ಚಿತ್ರದ ಕೇಂದ್ರ ಬಿಂದು. ಪೊಲೀಸ್ ಅಧಿಕಾರಿ ರಂಗನಾಥ್ ಪಾತ್ರವನ್ನು ಅಚ್ಯುತ್ ಸರ್ ಮಾಡ್ತಿದ್ಧಾರೆ. ಇನ್ನು ನಾಯಕಿ ವಿಚಾರಕ್ಕೆ ಬಂದರೆ ನಮ್ಮ ಚಿತ್ರದಲ್ಲಿ ನಾಯಕಿ ಇಲ್ಲ. ಬದಲಿಗೆ ಪ್ರಮುಖವಾದ ಕೆಲ ಮಹತ್ವದ ಪಾತ್ರಗಳಿವೆ'' ಎಂದು ಚಂದ್ರಹಾಸ ಹೇಳಿದ್ದಾರೆ.
ಬೇರೆ ಪಾತ್ರಗಳಲ್ಲಿ ಯಾರೆಲ್ಲ ಇದ್ದಾರೆ. ?
''ಅಚ್ಯುತ್ ಸರ್ ಮಗಳ ಪಾತ್ರದಲ್ಲಿ ಕೃಷ್ಣಂ ಪ್ರಣಯ ಸಖಿ ಖ್ಯಾತಿಯ ಶರಣ್ಯ ಶೆಟ್ಟಿ ಅಭಿನಯಿಸಲಿದ್ದಾರೆ. ಬಿಗ್ ಬಾಸ್ ನೀತು ಕೂಡ ನಮ್ಮ ಚಿತ್ರದಲ್ಲಿ ಪ್ರಮುಖ ಮತ್ತು ಮಹತ್ವವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವರನ್ನು ಹೊರತು ಪಡಿಸಿದರೆ ಬೇರೆ ಭಾಷೆಯ ಕೆಲ ಕಲಾವಿದರ ಜೊತೆ ಮಾತುಕತೆ ಇನ್ನು ನಡೆಯುತ್ತಿದೆ. ಯಾವುದು ಅಂತಿಮವಾಗಿಲ್ಲ. ಶೀಘ್ರದಲ್ಲಿಯೇ ಉಳಿದ ಪಾತ್ರವರ್ಗದ ಆಯ್ಕೆ ಆಗುತ್ತೆ'' ಎಂದು ಫಿಲ್ಮಿ ಬೀಟ್ ಕನ್ನಡಗೆ ಚಂದ್ರಹಾಸ್ ಮಾಹಿತಿಯನ್ನು ನೀಡಿದ್ದಾರೆ.
ತಾಂತ್ರಿಕ ವಿಭಾಗದ ಕುರಿತು ಮಾಹಿತಿ ; ನಿರ್ಮಾಪಕರು ಯಾರು ?
''ಸುರೇಶ್ ಕುಮಾರ್ ಅವರು ನಮ್ಮ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಕಥೆಯನ್ನು ಮತ್ತು ನಮ್ಮನ್ನು ನಂಬಿ, ಕನ್ನಡಿಗರು ಒಳ್ಳೆಯ ಚಿತ್ರಗಳನ್ನು ಕೈ ಬಿಡುವುದಿಲ್ಲ ಎಂಬ ವಿಶ್ವಾಸದೊಂದಿಗೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ.. ಹಾಫ್ ಮೆಂಟ್ಲು.. ಯೋಗಿ ದುನಿಯಾ ಸೇರಿ ಹಲವು ಚಿತ್ರಗಳಿಗೆ ಸಂಗೀತ ನೀಡಿರುವ ಬಿಜೆ ಭರತ್ ನಮ್ಮ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ''.
''ಪಿಎಲ್ ರವಿ ಚಿತ್ರದ ಛಾಯಾಗ್ರಾಹಕರಾದರೆ ಅನುರಂಜನ್ ಎಡಿಟಿಂಗ್ ಜವಾಬ್ಧಾರಿ ವಹಿಸಿಕೊಂಡಿದ್ಧಾರೆ. ಹೈಟ್ ಮಂಜು ನೃತ್ಯ ನಿರ್ದೇಶನ ಮತ್ತು ಮಾಸ್ ಮಾದಾ ಅವರ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ. ಯೋಗಿ ದುನಿಯಾ ಚಿತ್ರವನ್ನು ನಿರ್ದೇಶಿಸಿದ್ದ ಹರಿ ಮಹಾದೇವ್ ಮತ್ತು ನಾನು ಇಬ್ಬರು ಸೇರಿ ಕಥೆ ಮಾಡಿದ್ದು ಸಂಭಾಷಣೆಯನ್ನು ಹರಿ ಮಹಾದೇವ್ ಅವರೇ ಬರೆದಿದ್ದಾರೆ'' ಎಂದು ಬಿಕೆ ಚಂದ್ರಹಾಸ್ ಮಾಹಿತಿಯನ್ನು ಹಂಚಿಕೊಂಡಿದ್ಧಾರೆ.
ಎಲ್ಲೆಲ್ಲಿ ಚಿತ್ರೀಕರಣ, ಮುಹೂರ್ತ ಸಮಾರಂಭ ಎಲ್ಲಿ ?
ಇದೇ ಜೂನ್ 1ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಚಿತ್ರರಂಗದ ಹಲವು ಗಣ್ಯರು ಮುಹೂರ್ತ ಸಮಾರಂಭಕ್ಕೆ ಬರಲಿದ್ದಾರೆ. ಇನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದ್ದು, ನಾಲ್ಕು ಹಂತಗಳಲ್ಲಿ ಚಿತ್ರದ ಚಿತ್ರೀಕರಣವನ್ನು ಮಾಡುವ ಪ್ಲ್ಯಾನ್ ಮಾಡಿದ್ದೇವೆ ಎಂದು ಚಂದ್ರಹಾಸ್ ಹೇಳಿದ್ಧಾರೆ.


Click it and Unblock the Notifications











