BBK12: ಗಿಲ್ಲಿ ಹೇಗ್ ಆಡ್ತಿದ್ದಾನೆ ಅಂದ್ರೆ? ನನ್ನ ಪ್ರಕಾರ ಸೀಸನ್-12 ವಿನ್ನರ್?- ಕುರಿ ಪ್ರತಾಪ್
ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಯಾರು ಗೆಲ್ತಾರೆ ಎನ್ನುವ ಚರ್ಚೆ ಮೊದಲ ದಿನದಿಂದ ನಡೀತಿದೆ. ಆದರೆ ವೀಕ್ಷಕರು ಅಂದುಕೊಂಡಂತೆ ಏನು ನಡೆಯುವುದಿಲ್ಲ. ಅಚ್ಚರಿಯ ಫಲಿತಾಂಶಗಳು ಈ ಹಿಂದೆ ಬಂದಿದೆ. ಬಿಗ್‌ಬಾಸ್ ಸೀಸನ್ 7ರಲ್ಲಿ ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದರು. ಸೀಸನ್ 12ರ ಬಗ್ಗೆ ಪ್ರತಾಪ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.
ಗಿಲ್ಲಿ ರೀತಿ ಬಿಗ್‌ಬಾಸ್ ಮನೆಯಲ್ಲಿ ತಮ್ಮ ಕಾಮಿಡಿ ಮೋಡಿ ಕುರಿ ಪ್ರತಾಪ್ ಮೋಡಿ ಮಾಡಿದ್ದರು. ಸೀಸನ್ 7ರಲ್ಲಿ ವಾಸುಕಿ ವೈಭವ್, ಭೂಮಿ ಶೆಟ್ಟಿ, ಪ್ರಿಯಾಂಕ, ದೀಪಿಕಾ ದಾಸ್ ಸೇರಿ ಹಲವರು ಸ್ಪರ್ಧಿಗಳಾಗಿ ಹೋಗಿದ್ದರು. ಅಂತಿಮವಾಗಿ ಶೈನ್ ಶೆಟ್ಟಿ ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದರು.

ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ನಟ ಕುರಿ ಪ್ರತಾಪ್ ಬಿಗ್‌ಬಾಸ್-12 ಶೋ ವೀಕ್ಷಿಸುತ್ತಿದ್ದಾರಂತೆ. ಎಲ್ಲಾ ಎಪಿಸೋಡ್ ನೋಡಲು ಸಾಧ್ಯವಾಗದೇ ಇದ್ದರೂ ಮುಖ್ಯವಾದ ಎಪಿಸೋಡ್ ನೋಡ್ತೀನಿ, ವೀಕೆಂಡ್ ಎಪಿಸೋಡ್ ಮಿಸ್ ಮಾಡಲ್ಲ ಎಂದು ಅವರು ಹೇಳಿದ್ದಾರೆ. ಈ ಬಾರಿ ಯಾರು ಚೆನ್ನಾಗಿ ಆಡ್ತಿದ್ದಾರೆ? ಯಾರು ಗೆಲ್ಲಬಹುದು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನೀವು ಕಂಡಂತೆ ಬಿಗ್‌ಬಾಸ್ ಸೀಸನ್-12
ಮಜವಾಗಿದೆ. ಎಲ್ಲರೂ ಬೇರೆ ಬೇರೆ ವ್ಯಕ್ತಿತ್ವದವರು. ಗಿಲ್ಲಿ ಬಹಳ ಚಿಂದಿ ಆಗಿ ಆಡುತ್ತಿದ್ದಾನೆ. ಹೊರಗಡೆ ಜನ ಏನು ಅಂದುಕೊಳ್ಳುತ್ತಾರೋ? ಸಹ ಸ್ಪರ್ಧಿಗಳು ಏನು ಅಂತಾರೋ ಎಂದು ಕೆಲವರು ಎಲ್ಲರೂ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಗಿಲ್ಲಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಆಡುತ್ತಿದ್ದಾನೆ. ನಾನು ಅವನೊಟ್ಟಿಗೆ ಕೆಲಸ ಮಾಡಿದ್ದಾರೆ. ಯಾರು ಏನು ಅಂದ್ರು ಕ್ಯಾರೆ ಅನ್ನದೇ ಕಂಟೆಂಟ್ ಕೊಡಬೇಕು ಅನ್ನುವುದು ಗಿಲ್ಲಿ ಲೆಕ್ಕಾಚಾರ. ಆ ರೀತಿ ಅವನ ಆಟ ಇದೆ.
ಗಿಲ್ಲಿಗೆ ವೀಕ್ಷಕರ ಬೆಂಬಲ ಚೆನ್ನಾಗಿದೆ ಅಲ್ವಾ?
ಕಂಡಿತ. ನಾನು ಇತ್ತೀಚೆಗೆ ಮಂಗಳೂರು, ಮಲ್ಪೆ ಕಡೆ ಹೋಗಿದ್ದೆ. ಅಲ್ಲಿ ಕೂಡ ಜನ ಗಿಲ್ಲಿ ಗಿಲ್ಲಿ ಅಂತಾರೆ. ಅಷ್ಟರಮಟ್ಟಿಗೆ ಅವನ ಜನಪ್ರಿಯತೆ ಇದೆ. ನಮ್ಮ ಏರಿಯಾಗಳಲ್ಲಿ ಮುಸ್ಲಿಂ ಸಮುದಾಯದವರು ತುಂಬಾ ಜನ ಇದ್ದಾರೆ. ಅವರು ಕನ್ನಡ ಕಾರ್ಯಕ್ರಮಗಳನ್ನು ನೋಡುವುದು ಕಮ್ಮಿ. ಆದರೂ ಗಿಲ್ಲಿ ಬಗ್ಗೆ ಅವರೆಲ್ಲಾ ಮಾತನಾಡುತ್ತಿರುವುದು ನೋಡಿ ಅಚ್ಚರಿಯಾಯಿತು. ರಘು ಕೂಡ ಚೆನ್ನಾಗಿ ಅಡುತ್ತಿದ್ದಾರೆ. ಇಬ್ಬರೂ ಟಾಮ್ ಅಂಡ್ ಜೆರ್ರಿ ತರ ಆಡ್ತಿದ್ದಾರೆ. ಅಶ್ವಿನಿ ಗೌಡ ಇತ್ತೀಚೆಗೆ ಡಲ್ ಆಗಿದ್ದಾರೆ.
ಹೊರಗಿನಿಂದ ನೋಡುವುದಕ್ಕೂ ಮನೆ ಒಳಗಡೆ ಇರುವುದಕ್ಕೂ ಏನು ವ್ಯತ್ಯಾಸ?
ನಾನು ಹೊರಗಡೆ ಹೇಳುವುದು ಸುಲಭ. ಒಳಗಡೆ ಆ ರೀತಿ ಇರಲ್ಲ. ನಾನು ಇದ್ದಾಗಲೂ ಮಾತನಾಡಿದ್ದು ಕಮ್ಮಿ. ವೀಕೆಂಡ್‌ನಲ್ಲಿ ಸುದೀಪ್ ಸರ್ ಬಂದು ನೀವು ಮಾಡುತ್ತಿರುವುದೆಲ್ಲಾ ನೋಡ್ತಿದ್ದೀನಿ ಅಂದ್ರೆ ಸಾಕು ಹೆದರಿಕೆ ಶುರುವಾಗುತ್ತದೆ. ಅದನ್ನು ಮಜವಾಗಿ ತಗೊಂಡೆ ಓಕೆ. ಸುದೀಪ್ ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸಿದ್ರೆ ಆಡೋಕೆ ಆಗಲ್ಲ, ಗಿಲ್ಲಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಆಡುತ್ತಿದ್ದಾನೆ. ಅದೇ ಸರಿ.
ಗಿಲ್ಲಿ ಹಾಗೂ ರಿಷಾ ಕಿರಿಕ್ ಚರ್ಚೆ ಹುಟ್ಟಾಕ್ಕಿತ್ತಲ್ಲ?
ಬಟ್ಟೆ ಬಾತ್ ರೂಮ್ ಏರಿಯಾದಲ್ಲಿ ಹಾಡಿದ್ದಕ್ಕೆ ರಿಷಾ ಕೋಪದಲ್ಲಿ ಗಿಲ್ಲಿಗೆ ಹೊಡೆದಿದ್ದು ಅಷ್ಟೇ. ಅದು ಇಬ್ಬರಿಗೂ ಗೊತ್ತಾಯಿತು. ವೀಕ್ಷಕರಿಗೂ ಗೊತ್ತಾಗಿತ್ತು. ಅದು ಹಲ್ಲೆ ಮಾಡಿದ್ದಲ್ಲ. ಕೆಲವೊಮ್ಮೆ ಫ್ಲೋನಲ್ಲಿ ಆ ರೀತಿ ಆಗುತ್ತದೆ. ನಮ್ಮ ಸೀಸನ್‌ನಲ್ಲಿ ದೀಪಿಕಾ ವಿಚಾರಕ್ಕೆ ಇದೇ ರೀತಿ ಸಣ್ಣ ಕಿರಿಕ್ ಆಗಿತ್ತು. ಅದು ದೊಡ್ಡ ತಪ್ಪಾಗುತ್ತದೆ ಎಂದು ನಾನು ಭಾವಿಸಿದ್ದೆ. ಸುದೀಪ್ ಸರ್ ಏನು ಹೇಳ್ತಾರೋ ಅಂದುಕೊಂಡಿದ್ದೆ. ಆದರೆ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ.
ಸ್ಪರ್ಧಿಗಳ ಪದ ಬಳಕೆ ಕೆಲವೊಮ್ಮೆ ವಿವಾದಕ್ಕೀಡಾಗುತ್ತಲ್ಲಾ?
ಬೇರೆ ಕಾರ್ಯಕ್ರಮಗಳಲ್ಲಿ ಮಾತನಾಡುವುದು ಬೇರೆ. ಬಿಗ್‌ಬಾಸ್ ಮನೆಯಲ್ಲಿ ಆಡುವ ಮಾತುಗಳು ಕೆಲವೊಮ್ಮೆ ಸುದ್ದಿ ಆಗುತ್ತದೆ. ಹೊರಗೆ ಸಹಜವಾಗಿ ಎಲ್ಲರ ಜೊತೆ ಮಾತನಾಡಿದಂತೆ ಒಳಗೆ ಮಾತನಾಡಿಬಿಡುತ್ತಾರೆ. ಕೆಲವೊಮ್ಮೆ ಗೊತ್ತಾಗಲ್ಲ. ಅರ್ಧ ಗಂಟೆ ಒಂದು ಗಂಟೆ ಶೋನಲ್ಲಿ ಆ ಬಗ್ಗೆ ಎಚ್ಚರಿಕೆ ವಹಿಸಬಹುದು. ಬಿಗ್‌ಬಾಸ್ ಮನೆಯಲ್ಲಿ 24 ಗಂಟೆ ನಡೆಯುವುದು ಎಲ್ಲವೂ ಕ್ಯಾಮರಾದಲ್ಲಿ ಸೆರೆಯಾಗುತ್ತಿರುತ್ತದೆ. ಸ್ಪರ್ಧಿಗಳಿಗೆ ಅದು ನಮ್ಮ ಮನೆ ಎನ್ನುವಂತೆ ಆಗಿಬಿಟ್ಟಿರುತ್ತದೆ. ಸಹಜವಾಗಿ ಮಾತನಾಡಿಬಿಡುತ್ತಾರೆ. ಹಾಗಾಗಿ ಕೆಲವೊಮ್ಮೆ ಆಡುವ ಮಾತುಗಳು ಹೀಗೆ ವಿವಾದ ಹುಟ್ಟಾಕಿ ಬಿಡುತ್ತದೆ. ಆದರೂ ವೇದಿಕೆಗಳಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕು.
ನಿಮ್ಮ ಪ್ರಕಾರ ಟಾಪ್ 5 ಹಂತದವರೆಗೆ ಯಾರ್ಯಾರು ಹೋಗಬಹುದು?
ನನ್ನ ಪ್ರಕಾರ ಗಿಲ್ಲಿ ಫಿನಾಲೆಗೆ ಹೋಗ್ತಾನೆ. ರಘು ಹೋಗಬಹುದು. ಅಶ್ವಿನಿ ಗೌಡ, ಜಾಹ್ನವಿ ಹೋಗುವ ಸಾಧ್ಯತೆಯಿದೆ. ಕಾವ್ಯ, ದೃವಂತ್ ಎಲ್ಲಾ ಅಂತಿಮ ಹಂತದವರೆಗೆ ಹೋಗುವ ಕಷ್ಟ ಇದೆ. ಕಾದು ನೋಡಬೇಕು.
ನಿಮ್ಮ ಪ್ರಕಾರ ಗಿಲ್ಲಿ ಟ್ರೋಫಿ ಗೆಲ್ತಾರಾ?
ಬಿಗ್‌ಬಾಸ್ ಶೋನಲ್ಲಿ ನಾನು ಅಂದುಕೊಂಡಂತೆ ಯಾವುದು ನಡೆಯಲ್ಲ. ವೋಟಿಂಗ್ ಲೆಕ್ಕಾಚಾರ ತೆಗೆದುಕೊಂಡರೆ ಈಗ ಇರುವ ಜನಪ್ರಿಯತೆಗೆ ಗಿಲ್ಲಿ ಸುಲಭವಾಗಿ ಗೆಲ್ತಾನೆ. ಆತನ ಎಂಟರ್‌ಟೈನ್‌ಮೆಂಟ್ ಕೂಡ ಚೆನ್ನಾಗಿದೆ. ರಘು ಕೂಡ ಪ್ರಬಲ ಸ್ಪರ್ಧಿ. ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದರೂ ಕಳೆದ ಬಾರಿ ಹನುಮಂತ ಗೆದ್ದಿದ್ದ. ಆತ ಕೂಡ ವೈಲ್ಡ್ ಕಾರ್ಡ್ ಎಂಟ್ರಿನೇ ಅಲ್ವಾ? ಹಾಗಾಗಿ ಕಾದು ನೋಡಬೇಕು.


Click it and Unblock the Notifications











