'ಮಜಾ ಟಾಕೀಸ್' ಬೇಗ ಮುಗಿದಿದ್ದು ಯಾಕೆ? ಕಾಮಿಡಿ 'ಕ್ವಾಟ್ಲೆ' ಹೇಗಿರುತ್ತೆ?; ಕುರಿ ಪ್ರತಾಪ್ ಸಂದರ್ಶನ
ಸೃಜನ್ ಲೋಕೇಶ್ ನೇತೃತ್ವದ 'ಮಜಾ ಟಾಕೀಸ್' ಹೊಸ ಸೀಸನ್ ಇತ್ತೀಚೆಗೆ ಮುಕ್ತಾಯವಾಗಿತ್ತು. ಈ ಬಾರಿ ಹೊಸ ರೂಪದಲ್ಲಿ ಶೋ ವೀಕ್ಷಕರನ್ನು ರಂಜಿಸಿತ್ತು. ಸೃಜನ್ ಜೊತೆಗೆ ಯೋಗರಾಜ್ ಭಟ್ ಜೊತೆಯಾಗಿದ್ದರು. ಕುರಿ ಪ್ರತಾಪ್ ಕಾಮಿಡಿ ಕಿಕ್ ಈ ಸೀಸನ್‌ನಲ್ಲೂ ಹೈಲೆಟ್ ಆಗಿತ್ತು.
ಕನ್ನಡದ ಅದ್ಭುತ ಹಾಸ್ಯ ನಟ ಕುರಿ ಪ್ರತಾಪ್. ತಮ್ಮ ಕಾಮಿಡಿ ಟೈಮಿಂಗ್‌ನಿಂದ ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ಅವರು ನಗಿಸುತ್ತಾರೆ. 'ಮಜಾ ಟಾಕೀಸ್' ಶೋ ಮುಗಿಯುತ್ತಿದ್ದಂತೆ 'ಕ್ವಾಟ್ಲೆ ಕಿಚನ್' ಶೋ ಮೂಲಕ ಮತ್ತೆ ಪ್ರತಾಪ್ ವೀಕ್ಷಕರನ್ನು ರಂಜಿಸುವುದಕ್ಕೆ ಅಣಿಯಾಗಿದ್ದಾರೆ. ಈ ಬಾರಿ ನಿರೂಪಕಿ ಅನುಪಮಾ ಗೌಡ ಜೊತೆ ಸೇರಿ ನಗುವಿನ ಕಚಗುಳಿ ಇಡೋಕೆ ಬರ್ತಿದ್ದಾರೆ.

ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಪ್ರತಾಪ್ ಬಹಳ ಆಕ್ಟೀವ್ ಆಗಿದ್ದಾರೆ. ಸಿನಿಮಾಗಳ ಜೊತೆ ಜೊತೆಗೆ ಕಿರುತೆರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಜೀ ಕನ್ನಡ ವಾಹಿನಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ಬಳಿಕ ಕಲರ್ಸ್ ಕನ್ನಡ ವಾಹಿನಿಗೆ ಬಂದಿದ್ದರು. 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಪ್ರತಾಪ್ ತಮ್ಮ ಹೊಸ ಶೋ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. ಅವರ ಚಿಕ್ಕ ಸಂದರ್ಶನ ಇಲ್ಲಿದೆ.
1. 'ಕ್ವಾಟ್ಲೆ ಕಿಚನ್' ಶೋ ನಿರೂಪಣೆ ಬಗ್ಗೆ ಹೇಳಿ
ಮೊನ್ನೆಯಷ್ಟೆ 'ಮಜಾ ಟಾಕೀಸ್' ಮುಗೀತು. ಈಗ 'ಕ್ವಾಟ್ಲೆ ಕಿಚನ್' ಅನ್ನೋ ಮತ್ತೊಂದು ಹೊಸ ಕಾಮಿಡಿ ಶೋ ಮೂಲಕ ವೀಕ್ಷಕರ ಮುಂದೆ ಬರ್ತಿದ್ದೀನಿ. ನಾನು ಹಾಗೂ ಅನುಪಮಾ ಗೌಡ ಶೋ ನಿರೂಪಣೆ ಮಾಡ್ತಿದ್ದೀನಿ. ಅಡುಗೆ ಮಾಡೋಕೆ ಬರುವಂತಹ ಸ್ಪರ್ಧಿಗಳು ಇರಲ್ಲ. ಅಡುಗೆ ಮಾಡೋಕೆ ಬರದ ಸೆಲೆಬ್ರೆಟಿಗಳು ಇರ್ತಾರೆ. ಅಡುಗೆ ಮಾಡಲು ಬರದೇ ಹೇಗೆ ಪಜೀತಿ ಆಗುತ್ತೆ ಅನ್ನೋದು ಕಾನ್ಸೆಪ್ಟ್. ಈ ನಡುವೆ ಅವರ ಕಾಲೆಳೆಯುತ್ತಾ ನಗಿಸೋ ಶೋ ಇದು. ಮಜಾ ಇರುತ್ತೆ. ಹೆಸರಿಗೆ ತಕ್ಕಂತೆ ಕ್ವಾಟ್ಲೆ ಜಾಸ್ತಿ ಇರುತ್ತದೆ.
2. 'ಮಜಾ ಟಾಕೀಸ್' ಅನುಭವ ಹೇಗಿತ್ತು?
ಅದು ಸಂಪೂರ್ಣ ಟೀಂ ವರ್ಕ್. ನಾನು ಎಷ್ಟೇ ಕಾಮಿಡಿ ಮಾಡಿದರೂ ಅದರ ಹಿಂದೆ ತಂಡದ ಶ್ರಮ ಇರುತ್ತಿತ್ತು. ಸೃಜನ್ ಲೋಕೇಶ್ ಪ್ರೊಡಕ್ಷನ್‌ನಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡುತ್ತಾರೆ. ಈ ಬಾರಿ 'ಗಿಚ್ಚಿ ಗಿಲಿಗಿಲಿ' ಶೋ ಹುಡುಗರು ಜೊತೆಯಾಗಿದ್ದರು. ಹೊಸ ಅನುಭವ. ಅವರಿಂದ ನಾವು ಕಲಿತಂತೆ ಆಯ್ತು. ಹಿಂದಿನ ಸೀಸನ್‌ಗಳಲ್ಲಿ ಶ್ವೇತಾ ಚೆಂಗಪ್ಪ, ಅಪರ್ಣಾ, ಮಂಡ್ಯ ರಮೇಶ್, ಮನೋಹರ್, ಪವನ್, ವಿಶ್ವ ಇದ್ದರು. ಆಗ ಬೇರೆ ಮಜಾ. ಈಗ ಯೋಗರಾಜ್ ಭಟ್ ಸರ್ ಇದ್ದರು. ಜೊತೆಗೆ ಹೊಸ ಕಲಾವಿದರಿದ್ದರು. ಪ್ರತಿಬಾರಿ ಒಂದೇ ರೀತಿ ಬೇಡ ಎಂದು ವಾಹಿನಿಯವರು ಬದಲಿಸಿದ್ದರು.
3. ಈ ಬಾರಿ 'ಮಜಾ ಟಾಕೀಸ್' ಬೇಗ ಮುಗಿದಿದ್ದು ಯಾಕೆ?
ಬೇಗ ಎನ್ನುವುದಕ್ಕಿಂತ 30 ಎಪಿಸೋಡ್‌ಗಳು ಪ್ಲ್ಯಾನ್ ಮಾಡಿದ್ದರು. ಅದೇ ರೀತಿ ಆಯಿತು. ಈ ಹಿಂದೆ ಎಷ್ಟು ವಾರ ನಡೆಯುತ್ತೋ ಅಷ್ಟು ವಾರ ಮುಂದುವರೆಸುತ್ತಿದ್ದರು. ಈ ಬಾರಿ ಬದಲಾವಣೆ ಇರಲಿ ಎಂದು 30 ಎಪಿಸೋಡ್‌ಗಳಿಗೆ ಸೀಮಿತಗೊಳಿಸಿದ್ದರು. ಬಳಿಕ ಬೇರೆ ಶೋ ಮಾಡೋದು, ಆ ನಂತರ ಮತ್ತೆ ಬೇಕಿದ್ದರೆ 'ಮಜಾ ಟಾಕೀಸ್' ಹೊಸ ಸೀಸನ್ ಶುರು ಮಾಡೋದು ಹೀಗೆ ಲೆಕ್ಕಾಚಾರ.
4. ನಿಮ್ಮ ಹಾಸ್ಯಕ್ಕೆ ಹೆಚ್ಚು ಅಭಿಮಾನಿಗಳಿದ್ದಾರೆ, ಅದಕ್ಕೆ ತಯಾರಿ ಹೇಗಿರುತ್ತಿತ್ತು?
ತಯಾರಿ ಅಂತ ಏನು ಇಲ್ಲ. ಆಯಾ ಸನ್ನಿವೇಶಕ್ಕೆ ತಕ್ಕಂತೆ ಸ್ಕ್ರಿಪ್ಟ್ ಹಾಗೂ ಡೈಲಾಗ್‌ಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದೆ. ಸ್ಪಾಟ್‌ನಲ್ಲೇ ಇಂಪ್ರೂವ್ ಮಾಡ್ಕೊಂಡು ತಕ್ಷಣಕ್ಕೆ ಹೊಳೆದಿದ್ದನ್ನು ಹೇಳಿ ನಗಿಸುವುದು. ನನ್ನ ಆಪ್ತರಾಗಿರುವವರು ಶೋಗೆ ಬಂದರೆ ತಕ್ಷಣ ಅವರೊಟ್ಟಿಗೆ ಏನೋ ಮಾತಾಡಿ ಮಜಾ ಬರುವಂತೆ ಮಾಡುವುದು. ತರುಣ್ ಅವರು ಬಂದಾಗ ಮಾತನಾಡಿದ್ದು ಸ್ಕ್ರಿಪ್ಟ್ ಅಲ್ಲಿ ಇರಲಿಲ್ಲ. ಆ ಕ್ಷಣಕ್ಕೆ ಹೊಳೆದಿದ್ದನ್ನು ಹೇಳಿದ್ದು. ಅದು ಜನರಿಗೆ ಇಷ್ಟವಾಗಿತ್ತು.
5. ಮತ್ತೆ 'ಮಜಾ ಟಾಕೀಸ್' ಶೋ ನಿರೀಕ್ಷೆ ಮಾಡಬಹುದಾ?
ಕಂಡಿತ ಬರುತ್ತೆ. ಅದೇ ಕಾರಣಕ್ಕೆ 30 ಎಪಿಸೋಡ್‌ಗಳ ಬಳಿಕ ನಿಲ್ಲಿಸಿದ್ದು. ಈ ಹಿಂದಿನ ಸೀಸನ್‌ಗಳನ್ನು ತಿಂಗಳಾನುಗಟ್ಟಲೆ ಮುಂದುವರೆಸಿದ್ದೆವು. ಅದನ್ನು ಹೀಗೆ 30-40 ಎಪಿಸೋಡ್‌ಗಳಿಗೆ ನಿಲ್ಲಿಸಿದ್ದರೆ 18-20 ಸೀಸನ್ ಆಗಿಬಿಡುತ್ತಿತ್ತು ಅನ್ನಿಸುತ್ತೆ.
6. ಸದ್ಯ ಯಾವ ಸಿನಿಮಾಗಳಲ್ಲಿ ನಟಿಸುತ್ತಿದ್ದೀರಾ?
ಕಿರುತೆರೆ ಶೋಗಳ ಜೊತೆ ಜೊತೆಗೆ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚುತ್ತಿದ್ದೀನಿ. ಚಿಕ್ಕಣ್ಣ ನಟನೆಯ 'ಲಕ್ಷ್ಮಿಪುತ್ರ' ಚಿತ್ರದಲ್ಲಿ ನಟಿಸ್ತಿದ್ದೀನಿ. ಆದಿತ್ಯ ಅವರ 'ಕಿಲ್' ಚಿತ್ರದಲ್ಲೂ ಒಂದು ಪಾತ್ರ ಇದೆ. ಚಿಕ್ಕಣ್ಣನ 'ಜೋಡೆತ್ತು' ಚಿತ್ರದಲ್ಲೂ ಕೂಡ ಒಂದು ಮುಖ್ಯವಾದ ಪಾತ್ರ ಮಾಡ್ತಿದ್ದೀನಿ. 'ಮಜಾ ಟಾಕೀಸ್' ಕೊನೆ ಎಪಿಸೋಡ್‌ಗೆ ಚಿಕ್ಕಣ್ಣ ಬಂದಿದ್ದ. ನಮ್ಮದು 20 ವರ್ಷಗಳ ಸ್ನೇಹ. ಯಾವುದೇ ಸ್ಕ್ರಿಪ್ಟ್ ಇಲ್ಲದೇ ಸಣ್ಣದಾಗಿ ಸ್ಕಿಟ್ ರೀತಿ ಮಾಡಿದ್ವಿ. ಅದು ಚೆನ್ನಾಗಿ ಬಂತು. ದೊಡ್ಡಣ್ಣ ಅವ್ರು ಅದಕ್ಕೆ ಸಾಥ್ ಕೊಟ್ಟರು. ಆ ಕ್ಷಣಕ್ಕೆ ಹೊಳೆದಿದ್ದನ್ನು ಹೇಳುತ್ತಾ ಹೋದರೆ ಮಜಾ. ಬರೀ ಸ್ಕ್ರಿಪ್ಟ್‌ನಲ್ಲಿ ಇರುವುದನ್ನು ಹೇಳಿದರೆ ಮಜಾ ಇರಲ್ಲ.
7. ಹಾಸ್ಯ ಕಲಾವಿದನಾಗಿ ಕಾಮಿಡಿ ಜರ್ನಿ ಹೇಗಿದೆ?
ನಾನು ಹೆಚ್ಚು ಒತ್ತಡ ತೆಗೆದುಕೊಳ್ಳುವುದಿಲ್ಲ. ಹೆಚ್ಚು ಸಿನಿಮಾ, ಶೋಗಳನ್ನು ಒಪ್ಪಿಕೊಳ್ಳಲ್ಲ. ನಿಧಾನಕ್ಕೆ ಮಾಡುತ್ತಾ ಹೋಗುತ್ತೇನೆ. ಒಂದು ಶೋ ಜೊತೆಗೆ 3 ಸಿನಿಮಾಗಳನ್ನು ಒಪ್ಪಿಕೊಳ್ಳುತ್ತೇನೆ. ಅದು ಮುಗಿದ ಮೇಲೆ ಬೇರೆ ಸಿನಿಮಾಗಳು ಬಗ್ಗೆ ಯೋಚಿಸುತ್ತೇನೆ. ಸುಖಾ ಸುಮ್ಮನೆ ಒಪ್ಪಿಕೊಂಡು ಡೇಟ್ಸ್ ಕೊಡೋಕೆ ಆಗದೇ ಒದ್ದಾಡುವುದು ಬೇಡ. ಇದರಿಂದ ಸುಮ್ಮನೆ ಕೆಟ್ಟ ಹೆಸರು ಬರುತ್ತದೆ. ಆರಂಭದ ದಿನಗಳಲ್ಲಿ ಮಾಡುತ್ತಿದ್ದೆ. ಈಗ ಆ ರಿಸ್ಕ್ ತೆಗೆದುಕೊಳ್ಳಲ್ಲ. ಈವರೆಗೆ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೀನಿ. ಡೇಟ್ಸ್ ಕಾರಣಕ್ಕೆ ಕ್ಲ್ಯಾಶ್ ಮಾಡಿಕೊಂಡಿಲ್ಲ.
8. ಕಾಮಿಡಿ ಸ್ಕಿಟ್ ಮಾಡುವುದಕ್ಕೂ ನಿರೂಪಣೆ ಮಾಡುವುದಕ್ಕೂ ಏನು ವ್ಯತ್ಯಾಸ ಅನ್ನಿಸುತ್ತೆ?
'ಮಜಾ ಟಾಕೀಸ್' ಒಂದು ದಿನ ರಿಹರ್ಸಲ್ ಮಾಡಿ ಮತ್ತೊಂದು ದಿನ ಚಿತ್ರೀಕರಣ ನಡೆಯುತ್ತಿತ್ತು. 'ಕ್ವಾಟ್ಲೆ ಕಿಚನ್' ಶೋ ನಿರೂಪಣೆ ಮಾಡ್ತಿದ್ದೀನಿ. ಹಾಗಾಗಿ ರಿಹರ್ಸಲ್ ಇರಲ್ಲ. ಒಂದೇ ದಿನದಲ್ಲಿ ಎರಡು ಎಪಿಸೋಡ್‌ಗಳ ಚಿತ್ರೀಕರಣ ನಡೆಯುತ್ತದೆ. ನಿರೂಪಣೆ ಅಂದರೆ 10-12 ಗಂಟೆ ನಿಂತೇ ಇರಬೇಕು. ಕಾಮಿಡಿ ಸ್ಕಿಟ್ ಅಂದ್ರೆ 10 ನಿಮಿಷ ನಟಿಸಿ ಸ್ವಲ್ಪ ಹೊತ್ತು ಕೂರಬಹುದು. ಬೇರೆ ಶೋಗಳ ನಿರೂಪಣೆ ಅಂದರೂ ಸ್ಪರ್ಧಿಗಳು ಪರ್ಫಾರ್ಮ್ ಮಾಡುವಾಗ ನಾವು ಕೂರಬಹುದು. ಆದರೆ 'ಕ್ವಾಟ್ಲೆ ಕಿಚನ್' ಶೋನಲ್ಲಿ ಸ್ಪರ್ಧಿಗಳು ಪರ್ಫಾರ್ಮ್ ಮಾಡುವಾಗಲೂ ನಾವು ನಿಂತೇ ಇರಬೇಕು.
9. ಇವತ್ತಿಗೂ ಮೈಸೂರಿನಿಂದ ಬೆಂಗಳೂರಿಗೆ ಓಡಾಡುವುದು ಯಾಕೆ?
ಚಿತ್ರೀಕರಣ ಮುಗಿದ ಕೂಡಲೇ ನಾನು ಮೈಸೂರಿಗೆ ವಾಪಸ್ ಹೋಗಿಬಿಡ್ತೀನಿ. ಅದ್ಯಾಕೋ ಬೆಂಗಳೂರು ಟ್ರಾಫಿಕ್ ಅಂದರೆ ಕಿರಿಕಿರಿ. ಮೈಸೂರಿನಲ್ಲಿ ಇದ್ದು ಇದ್ದು ಇಲ್ಲಿನ ಟ್ರಾಫಿಕ್ ನೋಡಿದರೆ ಭಯವಾಗುತ್ತದೆ. ಮೈಸೂರಿನಲ್ಲಿ ಅಷ್ಟು ಟ್ರಾಫಿಕ್ ಇರಲ್ಲ. ನಾಗರಬಾವಿಯ ಅಕ್ಷಯ ಸ್ಟುಡಿಯೋದಲ್ಲಿ ಕಲರ್ಸ್ ಕನ್ನಡ ಶೋಗಳ ಚಿತ್ರೀಕರಣ ನಡೆಯುತ್ತದೆ. ಮುಗಿದ ಬಳಿಕ ಒಂದೂವರೆಯಿಂದ 2 ಗಂಟೆಯಲ್ಲಿ ಮೈಸೂರಿನ ಮನೆ ತಲುಪುತ್ತೇನೆ. ಎಷ್ಟೋ ಸಮಯ ನಮ್ಮ ಜೊತೆ ಕೆಲಸ ಮಾಡುವವರು ಅಕ್ಷಯ ಸ್ಟುಡಿಯೋದಿಂದ ಹೆಬ್ಬಾಳದ ಮನೆಗೆ ಹೋಗಿ ತಲುಪುವಷ್ಟರಲ್ಲಿ ನಾನು ಮೈಸೂರಿನ ಮನೆ ತಲುಪಿಬಿಡುತ್ತೇನೆ. ಹಾಗಾಗಿ ಇವತ್ತಿಗೂ ಮೈಸೂರಿನಿಂದಲೇ ಚಿತ್ರೀಕರಣದ ಸ್ಥಳಕ್ಕೆ ಓಡಾಡುತ್ತೇನೆ.


Click it and Unblock the Notifications











