'ಧುರಂಧರ್ 2'ಗೆ 'ಲವ್ ಮಾಕ್ಟೇಲ್ 3' ಠಕ್ಕರ್ ; 'ಕ್ರಿಸ್ಮಿ' ಜೋಡಿಯ ಗೇಮ್ ಪ್ಲಾನ್ ಏನು ? ಡಾರ್ಲಿಂಗ್ ಕೃಷ್ಣ ಸಂದರ್ಶನ
ಹಬ್ಬ ಹರಿದಿನ ಬಂದರೆ ಸಾಕು, ಬಣ್ಣದ ಪ್ರಪಂಚದಲ್ಲಿ ನಾ ಮುಂದು ತಾ ಮುಂದು ಎನ್ನುವವರೇ ಹೆಚ್ಚು.ರಜೆಯಲ್ಲಿ ಮಜಾ ಮಾಡಲು ಜನ ಸಾಮಾನ್ಯರು ಅಣಿಯಾಗುವ ಸಮಯದಲ್ಲಿ, ಚಿತ್ರರಂಗದಲ್ಲಿ ಅತಿವೃಷ್ಟಿಯಾಗುತ್ತೆ. ಇದು ಕಾಲ .. ಕಾಲಕ್ಕೆ .. ಸಾಬೀತು ಆಗ್ತಾನೇ ಬಂದಿದೆ. ವ್ಯಾಪಾರ-ವ್ಯವಹಾರ ಹಂಚಿ ಹೋಗುತ್ತೆ ಎನ್ನುವ ಸತ್ಯ ಗೊತ್ತಿದ್ದರೂ ಇಲ್ಲಿ ತಮ್ಮ ರೂಪರೇಶೆಯಲ್ಲಿ ಬದಲಾವಣೆ ಮಾಡಿಕೊಳ್ಳುವರ ಸಂಖ್ಯೆ ತೀರಾ ಕಡಿಮೆ.
ಆದರೆ ಯಶ್ ಇದಕ್ಕೆ ತದ್ವಿರುದ್ಧ. ''ಹಾಲಿವುಡ್''ನ ಹೊಡೆದುರಳಿಸುವ ಶಪಥ ಮಾಡಿರುವ ಯಶ್, ಅದ್ಯಾಕೋ ಏನೋ ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದರು.ಯಶ್ ಅವರ ಈ ನಿರ್ಧಾರದ ಹಿಂದಿನ ಅಸಲಿ ಕಾರಣವೇನು..? ಎನ್ನುವುದು ಅವರಿಗೆ ಗೊತ್ತಾದರೂ ಯಶ್ ಅವರ ಈ ನಿರ್ಧಾರ ಹಲವರಿಗೆ ಆಘಾತವನ್ನುಂಟು ಮಾಡಿದ್ದು ಸುಳ್ಳಲ್ಲ. ಅದರಲ್ಲಿಯೂ ಕಳೆದ 4 ವರ್ಷಗಳಿಂದ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯುತ್ತಿದ್ದ ಇವರ ಅಭಿಮಾನಿಗಳಲ್ಲಿಯೇ ಕೆಲವರ ಕಣ್ಣು ಯಶ್ ಅವರ ಈ ನಿರ್ಧಾರದಿಂದ ಕೆಂಪಾಗಿತ್ತು.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಕಾಲ ಈಗ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅನ್ಯ ಭಾಷೆಯವರು ಕನ್ನಡದ ಚಿತ್ರಕ್ಕೆ ಹೆದರುತ್ತಿದ್ದಾರೆ. ತಮ್ಮ ಚಿತ್ರವನ್ನು ಕನ್ನಡದ ನಿರೀಕ್ಷಿತ ಚಿತ್ರದ ಎದುರು ಬಿಡುಗಡೆ ಮಾಡಲು ಯೋಚನೆ ಮಾಡುತ್ತಿದ್ದಾರೆ.
ಹೀಗಿರುವಾಗ ಯಶ್ ಹಿಂದೆ ಸರಿದಿದ್ದು ಸರಿ ಅಲ್ಲ ಎನ್ನುವ ವಾದವನ್ನು ಕೂಡ ಮಾಡಿದ್ದ ಹಲವರು ಯುಗಾದಿಯಂದು ''ಧುರಂಧರ್'' ವೇಗಕ್ಕೆ ತಡೆಗೋಡೆಯಾಗುವಂತಹ ಒಂದು ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು. ಹಲವರ ಈ ಅಸೆಯನ್ನು ಸದ್ಯ ನಿಮ್ಮೆಲ್ಲರ ನೆಚ್ಚಿನ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಪೂರೈಸಲು ಮುಂದಾಗಿದ್ದು ಮಾರ್ಚ್ 19ರಂದು ತಮ್ಮ ಕನಸಿನ ಮೂರನೇ ಕೂಸು ''ಲವ್ ಮಾಕ್ಟೇಲ್ 3'' ಚಿತ್ರವನ್ನು ನಿಮ್ಮ ಮಡಿಲಿಗೆ ಹಾಕಲು ಅಣಿಯಾಗಿದ್ದಾರೆ.
ನಿಜಾ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಈ ನಿರ್ಧಾರದಿಂದ ಕೆಲವರಲ್ಲಿ ಆತಂಕ ಇದೆ. ಆದರೆ, ಭಯ ಅನ್ನೋದು ಗೆಲ್ಲುವವನನ್ನೂ ಸೋಲಿನ ಸುಳಿಗೆ ತಳ್ಳುತ್ತದೆ. ಅದೇ ಆತ್ಮ ವಿಶ್ವಾಸ ಸೋಲಿನ ದವಡೆಯಿಂದ ಪಾರು ಮಾಡುತ್ತೆ. ಇದಕ್ಕೆ ಕೈಗನ್ನಡಿಯೇ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿರುವ ಮನದ ಮಾತು.
ಹೌದು, ''ಧುರಂಧರ್ 2'' ಚಿತ್ರದ ಎದುರು ''ಲವ್ ಮಾಕ್ಟೇಲ್ 3'' ಬಿಡುಗಡೆಯಾಗುತ್ತಿದೆ ಎನ್ನುವ ವಿಚಾರ ಅಂತೆ-ಕಂತೆಯ ಸಂತೆಯಲ್ಲಿ ಹರಿದಾಡಲು ಶುರುವಾದಾಗಲೇ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಡಾರ್ಲಿಂಗ್ ಕೃಷ್ಣ ಅವರನ್ನು ಸಂಪರ್ಕ ಮಾಡಿತ್ತು. ಏಪ್ರಿಲ್ ಹತ್ತಕ್ಕೆ ಬಿಡುಗಡೆಯಾಗಬೇಕಿದ್ದ ''ಲವ್ ಮಾಕ್ಟೇಲ್ 3'' ಚಿತ್ರವನ್ನು ಮಾರ್ಚ್ 19ಕ್ಕೆ ಬಿಡುಗಡೆ ಮಾಡುತ್ತಿರುವ ಹಿಂದಿನ ಉದ್ದೇಶವನ್ನು ತಿಳಿಯುವ ಪ್ರಯತ್ನವನ್ನು ಮಾಡಿತ್ತು.

ನಮ್ಮ ಈ ಪ್ರಯತ್ನಕ್ಕೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಸಕಾರಾತ್ಮಕವಾಗಿ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದರು. ಹಾಗಿದ್ದರೆ ''ಧುರಂಧರ್ 2'' VS ''ಲವ್ ಮಾಕ್ಟೇಲ್ 3'' ಚಿತ್ರದ ಕ್ಲ್ಯಾಶ್ ಬಗ್ಗೆ ಡಾರ್ಲಿಂಗ್ ಕೃಷ್ಣ ಹೇಳಿದ್ದೇನು..? ಬಿಡುಗಡೆಯ ದಿನಾಂಕವನ್ನು ದಿಢೀರ್ ಆಗಿ ಕೃಷ್ಣ ಮತ್ತು ಮಿಲನಾ ನಾಗರಾಜ್ ಬದಲಿಸಿದ್ದೇಕೆ..? 'ಕ್ರಿಸ್ಮಿ' ಜೋಡಿಯ ಗೇಮ್ ಪ್ಲಾನ್ ಏನು ಎಂದು ತಿಳಿಯಲು ಮುಂದೆ ಓದಿ.
ಏಪ್ರಿಲ್ 10ರಿಂದ ಮಾರ್ಚ್ 19 ; ಪ್ರಚಾರಕ್ಕೆ ಕೊರತೆಯಾಗಲ್ವಾ ?
''ಖಂಡಿತ ಇಲ್ಲ ಅನ್ನೋದು ನನ್ನ ಭಾವನೆ. ಯಾಕೆಂದರೆ ನಾವು ನಮ್ಮ ಚಿತ್ರದ ಪ್ರಚಾರವನ್ನು ಶುರು ಮಾಡಿ ತುಂಬಾ ದಿನಗಳಾಯ್ತು. ಪ್ರತಿ ತಿಂಗಳಿಗೊಂದು ಹಾಡನ್ನು ನಾವು ಬಿಡುಗಡೆ ಮಾಡಿದ್ದೇವೆ. ನಮ್ಮ ಹಾಡುಗಳು ಕನ್ನಡಿಗರಿಗೆ ಇಷ್ಟ ಆಗಿದಾವೆ ಕೂಡ. ಇಂದು (ಮಾರ್ಚ್ 7) ಟ್ರೇಲರ್ ಕೂಡ ರಿಲೀಸ್ ಮಾಡಿದ್ದೇವೆ. ನಾವು ನಿರೀಕ್ಷಿಸಿದ್ದಕ್ಕಿಂತ ಒಳ್ಳೆಯ ಪ್ರತಿಕ್ರಿಯೆ ಸಿಕ್ತಿದೆ. ಹೀಗಾಗಿ ಪ್ರಚಾರಕ್ಕೆ ಎಲ್ಲಿಯೂ ಕೊರತೆ ಆಗಿಲ್ಲ ಎನ್ನುವುದು ನಮ್ಮ ಅಭಿಪ್ರಾಯ'' ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.
ಮಾರ್ಚ್ 19 ಯಾಕೆ..?
''ಸಾಮಾನ್ಯವಾಗಿ ಹಬ್ಬ ಹರಿದಿನಗಳ ಸ್ಲಾಟ್ ಸುಲಭಕ್ಕೆ ಸಿಗುವುದಿಲ್ಲ. ಮಾರ್ಚ್ 19 ತುಂಬಾ ಒಳ್ಳೆಯ ದಿನ. 4 ದಿನ ರಜೆ ಇದೆ. ''ಟಾಕ್ಸಿಕ್'' ಚಿತ್ರವನ್ನು ಏಕಾಏಕಿ ಮುಂದೂಡಿದ ಹಿನ್ನೆಲೆ ನಮಗೆ ಅವಕಾಶ ಸಿಕ್ಕಿದೆ.ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ. ಎಲ್ಲಕ್ಕಿಂತ ಮುಖ್ಯವಾಗಿ ಏಪ್ರಿಲ್‌ನಲ್ಲಿ ಮತ್ತೆ ಐಪಿಎಲ್ ಶುರುವಾಗುತ್ತೆ.ಹೀಗಾಗಿ ಎಲ್ಲ ಲೆಕ್ಕಾಚಾರ ಹಾಕಿ, ಅಳೆದು ತೂಗಿ ಮಾಚ್ 19ರಂದೇ ಬಿಡುಗಡೆ ಮಾಡಲು ನಾವು ಮುಂದಾದ್ವಿ'' ಎಂದು ಡಾರ್ಲಿಂಗ್ ಕೃಷ್ಣ ಪ್ರತಿಕ್ರಿಯಿಸಿದ್ದಾರೆ.
ಧುರಂಧರ್ ಭಯ..?
''ನಮ್ಮ ''ಲವ್ ಮಾಕ್ಟೇಲ್ 3'' ಬೇರೆ ಜಾನರ್ ನ ಸಿನಿಮಾ. ''ಧುರಂಧರ್ 2'' ಬೇರೆ ಜಾನರ್ ನ ಸಿನಿಮಾ. ಇನ್ನೂ ''ಧುರಂಧರ್ 2'' ಚಿತ್ರವನ್ನು ನೀವು ಮಕ್ಕಳ ಜೊತೆ ನೋಡಲು ಸಾಧ್ಯ ಇಲ್ಲ. ಯಾಕೆಂದರೆ ಅದು ಎ ಸರ್ಟಿಫಿಕೆಟ್ ಹೊಂದಿರುವ ಸಿನಿಮಾ. ನಮ್ಮದು ಯು ಸರ್ಟಿಫಿಕೆಟ್ ಇರುವ ಸಿನಿಮಾ. ಕೌಟುಂಬಿಕ ಸಿನಿಮಾ. ಮಕ್ಕಳ ಸಮೇತ ನೋಡುವಂತಹ ಸಿನಿಮಾ. ಹೀಗಾಗಿ ಫ್ಯಾಮಿಲಿ ಆಡಿಯನ್ಸ್ ನಮ್ಮತ್ತ ಒಲವು ತೋರಿಸುತ್ತಾರೆ ಎನ್ನುವ ನಂಬಿಕೆ ನನಗೆ ಇದೆ'' ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.

ಹಬ್ಬಕ್ಕೆ ಕನ್ನಡ ಸಿನಿಮಾ ಬೇಕಲ್ಲಾ..?
''ನೀವು ಹೇಳಿದಂತೆ ''ಧುರಂಧರ್ 2'' ಅಲೆ ಇದೆ. ಆದರೆ ಅಪ್ಪಟ ಕನ್ನಡಿಗರಿಗೆ ಹಬ್ಬದ ಪ್ರಯುಕ್ತ ಒಂದು ಒಳ್ಳೆಯ ಕನ್ನಡದ ಸದಭಿರುಚಿಯ ಸಿನಿಮಾ ನೋಡಲು ಬೇಕಲ್ಲ..? ಈ ಹಿಂದೆ ಕನ್ನಡಿಗರೆಲ್ಲರೂ ''ಟಾಕ್ಸಿಕ್'' ಮಾರ್ಚ್ 19ರಂದು ಬಿಡುಗಡೆಯಾಗುತ್ತೆ, ನೋಡಬೇಕೆಂದು ಕಾಯುತ್ತಿದ್ದರು. ಆದರೆ, ಅವರು ಅನಿವಾರ್ಯ ಕಾರಣಗಳಿಂದ ಮುಂದೆ ಹೋದರು. ಹೀಗಾಗಿ ಕನ್ನಡ ಸಿನಿಮಾ ನೋಡಬೇಕೆನ್ನುವ ಆಸೆ ಕನ್ನಡಿಗರಲ್ಲಿರುತ್ತೆ. ಆ ಆಸೆಯನ್ನು ನಾವು ಈಗ ನಮ್ಮ ಚಿತ್ರದ ಮೂಲಕ ಪೂರೈಸಲು ಮುಂದಾಗಿದ್ದೇವೆ ಅಷ್ಟೇ'' ಎನ್ನುವುದು ಡಾರ್ಲಿಂಗ್ ಕೃಷ್ಣ ಅವರ ಮನದ ಮಾತು.
ಧುರಂಧರ್ 2 ಎದುರು ಗೆಲ್ಲುವ ವಿಶ್ವಾಸ ಇದೆಯಾ ?
''ಖಂಡಿತ ಇದೆ. ನೂರಕ್ಕೆ ನೂರು ಗೆಲ್ಲುವ ವಿಶ್ವಾಸ ಇದೆ. ಯಾಕೆಂದರೆ ಈಗಾಗಲೇ ಎರಡು ಭಾಗಗಳನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ನಮ್ಮನ್ನು ನಮ್ಮ ಚಿತ್ರವನ್ನು ಹೊತ್ತು ಮೆರೆಸಿದ್ದಾರೆ. ನಮ್ಮ ಫ್ರಾಂಚೈಸಿಯನ್ನು ಹಲವರು ಇಷ್ಟ ಪಟ್ಟಿದ್ದಾರೆ. ನಮ್ಮನ್ನು ಆಶೀರ್ವಾದಿಸಿದ ಕನ್ನಡಿಗರಿಗೆ ನಾವು ನಿರಾಸೆ ಮಾಡುವುದಿಲ್ಲ. ''ಲವ್ ಮಾಕ್ಟೇಲ್ 3'' ಖಂಡಿತ ಮನರಂಜನೆಯ ರಸದೌತಣವನ್ನು ನಿಮಗೆ ನೀಡುತ್ತೆ. ಒಳ್ಳೆಯ ಸಿನಿಮಾ ಮಾಡುವ ಪ್ರಯತ್ನವನ್ನು ನಾವು ಪ್ರಾಮಾಣಿಕವಾಗಿ ಮಾಡಿದ್ದೇವೆ, ಹಿಂದಿನ ಎರಡು ಚಿತ್ರಗಳಿಗಿಂತ ಈ ಚಿತ್ರವನ್ನು ಜನ ತುಂಬಾ ಇಷ್ಟ ಪಡ್ತಾರೆ ಎನ್ನುವುದು ನನಗೆ ತುಂಬಾ ನಂಬಿಕೆ ಇದೆ'' ಎಂದು ನಿಮ್ಮ ಡಾರ್ಲಿಂಗ್ ಕೃಷ್ಣ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಮೂಲಕ ಹೇಳಿದ್ದಾರೆ.
–––
ಮಾರ್ಚ್ 19ಕ್ಕೆ ಬಿಡುಗಡೆ ಮಾಡುವಂತೆ ಕೆವಿಎನ್ ಸಂಸ್ಥೆಯಿಂದ ಒತ್ತಡ ಇದೆಯಾ ?
''ಇಲ್ಲ, ಇಲ್ಲ, ಖಂಡಿತ ಇಲ್ಲ. ಟಾಕ್ಸಿಕ್ ನಿರ್ಮಾಣ ಸಂಸ್ಥೆ ಅವರದ್ದೇ ಆದ ಹಿನ್ನೆಲೆ, ನಮ್ಮ ಚಿತ್ರವನ್ನು ಕೂಡ ಅವರೇ ಬಿಡುಗಡೆ ಮಾಡ್ತಿರುವ ಹಿನ್ನೆಲೆ, ಈ ತರಹದ ಅಭಿಪ್ರಾಯಗಳು, ಅನುಮಾನಗಳು ಸಹಜ. ಆದರೆ. ಸಿನಿಮಾ ಯಾರದ್ದೋ ಒಬ್ಬರ ಪಾಲ್ಗೊಳ್ಳುವಿಕೆಯಿಂದ ಆಗಲ್ಲ. ಒಬ್ಬರೇ ನಿರ್ಧಾರ ಮಾಡಲು ಕೂಡ ಸಾಧ್ಯ ಇಲ್ಲ. ಅದೊಂದು ಟೀಮ್ ವರ್ಕ್. ಎಲ್ಲರೂ ಕುಳಿತು ಚರ್ಚೆ ಮಾಡಿ ತೆಗೆದುಕೊಂಡ ನಿರ್ಧಾರ ಇದು. ಇನ್ನೂ ಆಗಲೇ ಹೇಳಿದಂತೆ ರಜಾ ದಿನಗಳಲ್ಲಿ ಬಿಡುಗಡೆಯ ಭಾಗ್ಯ ಎಲ್ಲರಿಗೆ ಸಿಗಲ್ಲ. ಹಬ್ಬದ ಮೂಡಿನಲ್ಲಿ ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಇವೆಲ್ಲ ಲೆಕ್ಕಾಚಾರದಿಂದಲೇ ನಾವು ಮಾರ್ಚ್ 19ನೇ ತಾರೀಖು ಫಿಕ್ಸ್ ಮಾಡಿದ್ದು'' ಎಂದು ಡಾರ್ಲಿಂಗ್ ಕೃಷ್ಣ ತಮ್ಮ ಮನದ ಮಾತನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ.


Click it and Unblock the Notifications











