RCB ಅಂದರೆ ಕನ್ನಡಿಗರಿಗೆ ಯಾಕೆ ಅಷ್ಟೊಂದು ಅಭಿಮಾನ ? ಕವಿರಾಜ್ ಪ್ರತಿಕ್ರಿಯೆ..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡಿಗರ ಪಾಲಿಗೆ ಕೇವಲ ತಂಡ ಮಾತ್ರವಲ್ಲ. ಈ ತಂಡದ ಜೊತೆ ಕನ್ನಡಿಗರಿಗೆ ಭಾವನಾತ್ಮಕವಾದ ಸಂಬಂಧ ಇದೆ. ಇದು ನಮ್ಮ ನಾಡಿನ ತಂಡ .. ನಮ್ಮೂರಿನ ತಂಡ .. ನಮ್ಮದೇ ತಂಡ ಎಂಬ ಭಾವನೆ ಜನರಲ್ಲಿ ಗಾಢವಾಗಿ ಬೇರೂರಿದೆ. ಸೋಲಲಿ .. ಗೆಲ್ಲಲಿ .. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲಿನ ಅಭಿಮಾನ ಕನ್ನಡಿಗರಲ್ಲಿ ಯಾವತ್ತು ಕಡಿಮೆಯಾಗಲಿಲ್ಲ.
ಬದಲಿಗೆ ಈ ಸೋಲುಗಳಿಂದ ತಂಡದ ಜೊತೆಗಿನ ಬಾಂಧವ್ಯ ಇನ್ನೂ ಗಟ್ಟಿಯಾಯ್ತು. ಜನರಿಗೆ ತಮ್ಮ ಮೇಲಿರುವ ಅಭಿಮಾನ ಕಂಡು ಹೇಗಾದರೂ ಮಾಡಿ ಕಪ್ ಗೆಲ್ಲಲೇಬೇಕೆಂಬ ಕಿಚ್ಚು ನಮ್ಮ ಆರ್‌ಸಿಬಿ ತಂಡದ ಆಟಗಾರರಲ್ಲಿ ಹೆಚ್ಚಾಯ್ತು. ಇನ್ನು ಈ 18 ವರ್ಷಗಳಲ್ಲಿ ಈ ಸಲ ಕಪ್ ನಮ್ದೇ ಎಂಬ ಕನ್ನಡಿಗರ ಘೋಷವಾಕ್ಯ ಕೇಳಿ ಕುಹುಕವಾಡಿದವರು ಅದೆಷ್ಟೋ.

ಅವರ ಬಾಯಿಗಳಿಗೆಲ್ಲ ನಿನ್ನೆ ಆರ್‌ಸಿಬಿ ತಂಡ ಕಪ್ ಮುಡಿಗೇರಿಸಿಕೊಳ್ಳುವ ಮೂಲಕ ಬೀಗ ಜಡಿದಿದೆ. 18 ವರ್ಷಗಳ ನಂತರ ಐಪಿಎಲ್‌ನಲ್ಲಿ ಹೊಸ ಚರಿತ್ರೆಯನ್ನು ಬರೆದಿದೆ. ಆರ್‌ಸಿಬಿ ತಂಡದ ಈ ಹೊಸ ಅಧ್ಯಾಯದ ಕುರಿತು ಚಿತ್ರ ಸಾಹಿತಿ, ನಿರ್ದೇಶಕ ಮತ್ತು ಹೆಮ್ಮೆಯ ಕನ್ನಡಿಗ, ಆರ್‌ಸಿಬಿಯ ಅಪ್ಪಟ ಅಭಿಮಾನಿ ಕವಿರಾಜ್ ನಿಮ್ಮ ಫಿಲ್ಮಿ ಬೀಟ್ ಕನ್ನಡದ ಜೊತೆ ಮಾತನಾಡಿದ್ದಾರೆ. ಹಾಗಿದ್ದರೆ ಕವಿರಾಜ್ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಶಾಲೆ ಮತ್ತು ಕ್ರಿಕೆಟ್ ನಮ್ಮ ಬಾಲ್ಯ
''ಒಂದು ರೀತಿಯ ಧನ್ಯತಾಭಾವ ಇದೆ. ಕ್ರಿಕೆಟ್ ನಮ್ಮ ಜೀವನದ ಬಹುಮುಖ್ಯವಾದ ಭಾಗ. ನಾವು ದೊಡ್ಡ ಪ್ಲೇಯರ್ ಆಗದೇ ಇರಬಹುದು. ಆದರೂ ಕ್ರಿಕೆಟ್ ಜೊತೆಯಲ್ಲಿಯೇ ನಾವು ಬೆಳೆದು ಬಂದವರು. ಶಾಲೆ ಮತ್ತು ಕ್ರಿಕೆಟ್ ಇವೆರಡೇ ನಮ್ಮ ಬಾಲ್ಯವಾಗಿತ್ತು. ಹೀಗಾಗಿ ಕ್ರಿಕೆಟ್ ಜೊತೆ ನಮಗೆ ಮೊದಲಿಂದ ಭಾವನಾತ್ಮಕ ಸಂಬಂಧ ಇದೆ. ಅದರಲ್ಲಿಯೂ ಈ ಐಪಿಎಲ್ ಶುರುವಾದಾಗ, ಬೆಂಗಳೂರಿನ ಒಂದು ತಂಡ ಆದಾಗ, ನಮ್ಮತನ ಎನ್ನುವ ಭಾವನೆ ಬರುತ್ತೆ'' ಎಂದು ಕವಿರಾಜ್ ಹೇಳಿದ್ದಾರೆ.
ಭಾವನಾತ್ಮಕವಾದ ಸಂಬಂಧ
''ಎಲ್ಲಕ್ಕಿಂತ ಹೆಚ್ಚಾಗಿ ಈ 18 ವರ್ಷಗಳು ಮೊದಲನೇ ಸೀಸನ್‌ನಿಂದ ಕಪ್ ಗೆಲ್ಲಬೇಕು, ಕಪ್ ಗೆಲ್ಲಬೇಕು ಎಂದು ನಾವೆಲ್ಲ ಅಂದುಕೊಂಡಿದ್ವಿ, ಆದರೆ ವರ್ಷ ವರ್ಷ ನಿರಾಸೆಯೇ ಆದಾಗ ಸಾಮಾನ್ಯವಾಗಿ ಒಲವು ಕಡಿಮೆಯಾಗುತ್ತೆ. ಆದರೆ ಇಲ್ಲಿ ನಾವೆಷ್ಟು ಸೋತರು ಕೂಡ ನಮ್ಮ ಅಭಿಮಾನ ಇನ್ನೂ ಗಟ್ಟಿಯಾಗುತ್ತಲೇ ಹೋಯ್ತು, ಇದು ತುಂಬಾನೇ ವಿಶೇಷವಾದ ವಿದ್ಯಮಾನ. ತಂಡ ಮತ್ತು ಅಭಿಮಾನಿಗಳ ನಡುವೆ ಒಂದು ವಿಶೇಷವಾದ ಬಾಂಡಿಂಗ್ ಬೆಳೆದು ಬಿಡ್ತು'' ಎಂದು ಕವಿರಾಜ್ ಫಿಲ್ಮಿಬೀಟ್ ಕನ್ನಡಗೆ ಪ್ರತಿಕ್ರಿಯೆ ನೀಡಿದ್ಧಾರೆ.
ವಿರಾಟ್ ಕೊಹ್ಲಿ ಅವರಲ್ಲಿ ಎಷ್ಟು ಹಪಾಹಪಿ ಇರಬೇಡ
''ಸಾಮಾನ್ಯವಾಗಿ ಈ ತರಹದ ಎಮೋಷನಲ್ ಬಾಂಡಿಂಗ್ ಬೆಳೆಯುವುದಿಲ್ಲ. ಆದರೆ ಇಲ್ಲಿ ಆ ಬಾಂಡಿಂಗ್ ಬೆಳೆದಿರುವುದರಿಂದ ಅಷ್ಟೇ ಹಪಾಹಪಿ ಎಲ್ಲರಲ್ಲಿಯೂ ಇತ್ತು. ನನ್ನಲ್ಲಿಯೂ ಇತ್ತು. ಹೇಗಾದರೂ ಮಾಡಿ ಇವರೊಂದು ಕಪ್ ಗೆಲ್ಲಬೇಕು ಅನ್ನೋ ಆಸೆ ಇತ್ತು.
ಇನ್ನು ಈ ಸಲ ಕಪ್ ನಮ್ದೇ ಎಂದು ಪ್ರತಿ ಸಲ ನಾವು ಹೇಳ್ಕೊಂಡು ಬಂದಿದ್ದರಿಂದ ಬೇರೆಯವರಿಗೆ ಅದೊಂದು ಜೋಕ್ ಮಾಡುವ ವಸ್ತುವಾಗಿತ್ತು. ಕೊನೆ ಕೊನೆಗೆ ಸೋತಾಗ ಆ ಸಾಲನ್ನು ನಾವೇ ಸಂತೈಸಿಕೊಳ್ಳಲು ಹೇಳಿಕೊಳ್ಳಲು ಶುರು ಮಾಡಿದ್ವಿ, ನಮ್ಮ ಕಾಲನ್ನು ನಾವೇ ಎಳೆದುಕೊಂಡ್ವಿ, ಕೊನೆಗೂ ಆ ಮಾತು 18 ವರ್ಷದ ನಂತರವಾದರು ನಿಜಾ ಆಯ್ತಲ್ಲ ಎನ್ನುವುದೇ ಖುಷಿಯ ವಿಚಾರ ಎಂದು ಹೇಳಿದ್ದಾರೆ'' ಕವಿರಾಜ್.
ಮತ್ತೊಬ್ಬ ವ್ಯಕ್ತಿಯಲ್ಲಿ ನಾವು ನಮ್ಮನ್ನು ಕಾಣಲು ಶುರುಮಾಡುತ್ತೇವೆ
''ನಾವು ಸಾಧಿಸಲು ಸಾಧ್ಯವಾಗದೇ ಇದ್ದಿದ್ದನ್ನು ನಾವು ಇನ್ಯಾರಲ್ಲಿಯೋ ಪರ್ಯಾಯ ವ್ಯಕ್ತಿಯಲ್ಲಿ ಹುಡುಕಲು ಶುರು ಮಾಡುತ್ತೇವೆ. ನಾವು ಸಾಧಿಸದೇ ಇದ್ದಿದ್ದನ್ನು ಬೇರೆ ಯಾರೋ ಸಾಧಿಸಬೇಕು, ಯಾರು ಸಾಧಿಸಬಹುದು ಎಂಬ ಯೋಚನೆ ಮಾಡಿ ಆ ಗುಣಲಕ್ಷಣ ಇರುವ ವ್ಯಕ್ತಿಯನ್ನು ಹುಡುಕಿ ನಾವು ಅವರಿಗೆ ಅಭಿಮಾನಿಯಾಗಿ ಬಿಡುತ್ತೇವೆ. ಅವರನ್ನು ಫಾಲೋ ಮಾಡೋಕೆ ಶುರು ಮಾಡುತ್ತೇವೆ. ನಮಗೆ ಅರಿವು ಇಲ್ಲದೇಯೇ ನಾವೇ ಅವರಾಗಿ ಬಿಡುತ್ತೇವೆ. ಅಂದರೆ ಅವರ ಸೋಲು, ನಿರಾಸೆ, ಅವರ ಹತಾಶೆ ಹೀಗೆ ಎಲ್ಲದಕ್ಕೂ ನಾವು ಅನುಗುಣವಾಗಿ ಸ್ಪಂದಿಸಲು ಶುರು ಮಾಡುತ್ತೇವೆ. ಅವರು ಗೆದ್ದಾಗ ನಮಗೆ ತುಂಬಾ ಖುಷಿಯಾಗುತ್ತೆ. ಅವರು ಸೋತಾಗ ನಮಗೆ ತುಂಬಾ ಬೇಜಾರಾಗುತ್ತೆ. ಹೇಳಬೇಕು ಅಂದರೆ ನಾವೇ ಅವರಾಗಿ ಹೋಗುತ್ತೇವೆ. ವಿರಾಟ್ ಕೊಹ್ಲಿ ಅವರ ವಿಚಾರದಲ್ಲಿ ಕೂಡ ಇದೇ ಆಗಿದೆ.
''ಕೊಹ್ಲಿ ಅವರಲ್ಲಿ ಲಕ್ಷಾಂತರ, ಕೋಟ್ಯಂತರ ಜನ ತಮ್ಮನ್ನು ಕಾಣುತ್ತಿದ್ಧಾರೆ. ಹೀಗಾಗಿ ವಿರಾಟ್ ಕೊಹ್ಲಿ ಎಂಬ ಹೆಸರು ಅಷ್ಟೊಂದು ಶಕ್ತಿಶಾಲಿಯಾಗಿದ್ದು ಅಷ್ಟೊಂದು ಅಭಿಮಾನಿಗಳನ್ನು ಸಂಪಾದಿಸಿದ್ದು ಜೊತೆಯಲ್ಲಿ ಅವರಲ್ಲಿನ ಪ್ರಾಮಾಣಿಕತೆದಿಂದ. ನಾನು ಇಲ್ಲಿ ಆಡಿದೀನಿ, ಜನ ನನಗೆ ಇಷ್ಟೊಂದು ಪ್ರೀತಿ ಕೊಟ್ಟಿದಾರೆ, ಅವರ ಜೊತೆ ನಾನು ಇರಬೇಕು, ಅವರು ಖುಷಿ ಪಡುವ ಸಾಧನೆಯನ್ನು ನಾನು ಮಾಡಬೇಕು, ಅನ್ನುವ ಭಾವನೆ ಅವರಲ್ಲಿ ಇದೆಯಲ್ಲ ಅದು ತುಂಬಾನೇ ದೊಡ್ಡದು.ಅವರ ಈ ಪ್ರಾಮಾಣಿಕತೆ, ನಿಯತ್ತಿನಿಂದಾಗಿ ಅವರು ಕನ್ನಡಿಗರಿಗೆ ತುಂಬಾನೇ ಬೇಗ ಕನೆಕ್ಟ್ ಆದರು'' ಎಂದು ಕವಿರಾಜ್ ಹೇಳಿದ್ಧಾರೆ.
ಮನಸ್ಸು ಮಾಡಿದ್ದರೆ ಬೇರೆ ತಂಡಕ್ಕೆ ಕೊಹ್ಲಿ ಆಡಬಹುದಿತ್ತು
''ಕೊಹ್ಲಿ ಮನಸ್ಸು ಮಾಡಿದ್ದರೆ ಬೇರೆ ಕಡೆ ಹೋಗಿ ಚೆನ್ನಾಗಿ ದುಡ್ಡು ಸಂಪಾದನೆ ಮಾಡಬಹುದಿತ್ತು. ಆದರೆ ಅವರಿಗೆ ದುಡ್ಡು ಮುಖ್ಯವಾಗಲಿಲ್ಲ. ಬದಲಿಗೆ ಪ್ರೀತಿಗೆ ಬೆಲೆ ಕೊಟ್ಟರು. ಈ ಕಾರಣಕ್ಕೆ ವಿರಾಟ್ ಕೊಹ್ಲಿ ತುಂಬಾ ವಿಶೇಷ ವ್ಯಕ್ತಿಯಾಗಿ ಕಾಣ್ತಾರೆ.
ಇನ್ನು ನಾವೆಲ್ಲ ಎಲ್ಲೋ ಕುಂತ್ಕೊಂಡು 18 ವರ್ಷಗಳಿಂದ ಕಾಯ್ತಾ ಇದ್ವಿ ಆದರೆ ಅವರು ಮೈದಾನದಲ್ಲಿದ್ದುಕೊಂಡು ಬೆವರು ಸುರಿಸಿ ವರ್ಷಗಟ್ಟಲೆ, ದಿನಗಟ್ಟಲೆ, ಪರಿಶ್ರಮವನ್ನು ಹಾಕಿ ಗೆಲುವಿಗಾಗಿ ಕಾಯ್ತಿದ್ದರು. ನಮಗೆ ಇಷ್ಟು ಹಪಾಹಪಿ ಇರಬೇಕಾದರೆ ಒಬ್ಬ ಆಟಗಾರ ಅದರಲ್ಲಿಯೂ ಮುಖ್ಯ ಆಟಗಾರನಿಗೆ ಎಷ್ಟು ಹಪಾಹಪಿ ಇರಬಾರದು ?
ಇನ್ನು ಸೋತಾಗ ಅವರು ಕಣ್ಣೀರನ್ನು ತಡೆದುಕೊಂಡಿದ್ದರು. ಸೋತಾಗ ಅವರು ಯಾವತ್ತು ಕಣ್ಣೀರು ಹಾಕಲಿಲ್ಲ. ಆದರೆ ನಿನ್ನೆ ಗೆದ್ದಾಗ ಅವರು ಕಣ್ಣೀರು ಹಾಕಿದರು. ಅವರಿಗೆ ಕಪ್ ಎಷ್ಟು ಮಹತ್ವದ್ದಾಗಿತ್ತು ಎನ್ನುವುದು ಇದರಲ್ಲಿಯೇ ಗೊತ್ತಾಗುತ್ತೆ'' ಎಂದು ಕವಿರಾಜ್ ಫಿಲ್ಮಿಬೀಟ್ ಕನ್ನಡಗೆ ಪ್ರತಿಕ್ರಿಯಿಸಿದ್ಧಾರೆ.
ಸಂಭ್ರಮದಲ್ಲಿ ಗೇಲ್ ಮತ್ತು ಎಬಿಡಿ ಪಾಲು ಇದೆ.
''ಆರ್‌ಸಿಬಿಯಲ್ಲಿ ಇದ್ದವರೆಲ್ಲ ನಮ್ಮವರೇ ಎನ್ನುವ ಭಾವನೆ ಬರುತ್ತೆ. ವೆಸ್ಟ್ ಇಂಡೀಸ್‌ದಿಂದ ಬಂದ ಕ್ರಿಸ್ ಗೇಲ್ ಆಗಿರಬಹುದು ದಕ್ಷಿಣ ಆಫ್ರಿಕಾದಿಂದ ಬಂದ ಎಬಿ ಡಿವಿಲಿಯರ್ಸ್ ಇರಬಹುದು ದೆಹಲಿಯಿಂದ ಬಂದ ಕೊಹ್ಲಿಯೇ ಆಗಿರಬಹುದು. ಎಲ್ಲರೂ ನಮ್ಮವರು ನಮ್ಮವರು ಎಂದು ನಾವು ಅಂದುಕೊಳ್ಳಲು ಶುರುಮಾಡಿದ್ವಿ, ಅಷ್ಟೊಂದು ಅವರನ್ನು ನಾವು ಹಚ್ಚಿಕೊಂಡು ಬಿಟ್ವಿ, ಇನ್ನು ಕೊಹ್ಲಿ ಕಪ್ ಗೆಲ್ಲಬೇಕೆಂದು ಎಷ್ಟು ಪ್ರಯತ್ನ ಮಾಡಿದರೋ ಅಷ್ಟೇ ಪ್ರಯತ್ನವನ್ನು ಗೇಲ್ ಮತ್ತು ಎಬಿಡಿ ಅವರು ಕೂಡ ಮಾಡಿದರು. ಅವರ ಕಾಲದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲವಲ್ಲ ಎನ್ನುವ ನೋವು ಅವರಲ್ಲಿಯೂ ಇತ್ತು. ನಮ್ಮಲ್ಲಿಯೂ ಇತ್ತು. ಈಗ ಸಾಧ್ಯ ಆದಾಗ ಅವರನ್ನು ಮರಿಬಾರದು. ಯಾಕೆಂದರೆ ತಂಡವನ್ನು ಕಟ್ಟಿ ಬೆಳೆಸಿದವರಲ್ಲಿ ಅವರು ಕೂಡ ಇದ್ಧಾರೆ. ತಂಡದ ಈ ಸಂಭ್ರಮದಲ್ಲಿ ಅವರದ್ದು ಪಾಲಿದೆ, ಹೀಗಾಗಿ ನಿನ್ನೆ ಅವರನ್ನು ಕೂಡ ಕರೆಸಿದ್ದು ಖುಷಿಯಾಯ್ತು. ಕೇವಲ ಅಭಿಮಾನಿಗಳು ಮತ್ತು ತಂಡ ಮಾತ್ರವಲ್ಲ ಆರ್‌ಸಿಬಿಯ ಮ್ಯಾನೇಜ್ಮೆಂಟ್ ಗೆ ಕೂಡ ಹೇಗೆ ಎಲ್ಲರ ಜೊತೆ ಎಮೋಷನಲ್ ಬಾಂಡಿಂಗ್ ಇದೆ ಎನ್ನುವುದಕ್ಕೆ ಅವರಿಬ್ಬರನ್ನು ಕರೆಸಿದ್ದೆ ಸಾಕ್ಷಿ'' ಎಂದು ಹೇಳಿದ್ದಾರೆ ಕವಿರಾಜ್


Click it and Unblock the Notifications











