ಸಂದರ್ಶನ: ಮಕ್ಕಳಿಗೆ ಪಾಠ ಮಾಡ್ತಿದ್ದ ಜೀವಿತಾ ಕಿರುತೆರೆಯಲ್ಲಿ 'ರಾಮಣ್ಣ'ನಿಗೆ ಬುದ್ಧಿ ಕಲಿಸುವ ಐಸೂ ಆಗಿದ್ದೇಗೆ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಮರ್ಯಾದೆ ರಾಮಣ್ಣ' ವೀಕ್ಷಕರ ಗಮನ ಸೆಳೆದಿದೆ. ಮನು ನಿರ್ದೇಶನದಲ್ಲಿ ಚೇತನ್ ಚಂದ್ರ ಹಾಗೂ ಜೀವಿತಾ ವಸಿಷ್ಠ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಜೀವನಪೂರ್ತಿ ಬ್ರಹ್ಮಚಾರಿ ಆಗಿ ಇರ್ತೀನಿ ಎಂದು ಚಿಕ್ಕಂದಿನಲ್ಲಿ ತಾಯಿಗೆ ಮಾತು ಕೊಟ್ಟ ರಾಮಣ್ಣ. ಮಾತು ತಪ್ಪದ ರಾಮನ ಬದುಕಿಗೆ ಮಾತೇ ಕೇಳದ ಐಶ್ವರ್ಯ ಬಂದ ಮೇಲೆ ಏನೆಲ್ಲಾ ಆಗುತ್ತದೆ ಎನ್ನುವುದು ಕಥೆ.
ಒಳ್ಳೆ ಡ್ಯಾನ್ಸರ್ ಆಗಿರುವ ಜೀವಿತಾ ವಸಿಷ್ಠ ಮುಂದೆ ಗಗನಸಖಿ ಆಗುವ ಕನಸು ಕಂಡವರು. ಎಂಬಿಎ ಮುಗಿಸಿ ಬಳಿಕ ಶಾಲೆಯಲ್ಲಿ 4 ವರ್ಷ ದಿನ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. ಬಳಿಕ ಆಡಿಷನ್ ಕೊಟ್ಟು ಚಿತ್ರವೊಂದಕ್ಕೆ ಆಯ್ಕೆ ಆಗಿದ್ದರು. ಬಳಿಕ ನಿಧಾನವಾಗಿ ಒಂದೊಂದೇ ಅವಕಾಶಗಳು ಸಿಗಲು ಆರಂಭವಾಗಿತ್ತು. ಇದೀಗ 'ಮರ್ಯಾದೆ ರಾಮಣ್ಣ' ಧಾರಾವಾಹಿಯಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ.

ಮಲ್ಲಿಗೆಪುರದ ಪೈಲ್ವಾನ್ ರಾಮಣ್ಣ. ಪ್ಯಾಟೆ ಹುಡುಗಿ ಐಶ್ವರ್ಯ. ಅಮ್ಮನ ಮಾತು ಮೀರದ ಮಗ. ಹಠಮಾರಿ ಪ್ಯಾಟೆ ಹುಡುಗಿ. ಇವರಿಬ್ಬರು ಒಂದಾದ್ರೆ ಹೇಗಿರುತ್ತೆ? ಇಬ್ಬರ ನಡುವಿನ ಕಿರಿಕ್, ಪಜೀತಿ, ಜಗಳ ಮುಂದೆ ಯಾವ ಯಾವ ದಿಕ್ಕಿಗೆ ಸಾಗುತ್ತದೆ ಎನ್ನುವುದನ್ನು ಇಂಟ್ರೆಸ್ಟಿಂಗ್ ಆಗಿ ತೋರಿಸುವ ಪ್ರಯತ್ನ ಮಾಡಲಾಗ್ತಿದೆ. 'ಮರ್ಯಾದೆ ರಾಮಣ್ಣ' ಧಾರಾವಾಹಿಯಲ್ಲಿ ನಟಿಸುತ್ತಿರುವ ಬಗ್ಗೆ ಜೀವಿತಾ ಸಂತಸ ವ್ಯಕ್ತಪಡಿಸಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆ ಈ ಬಗ್ಗೆ ಮಾತನಾಡಿದ್ದಾರೆ.
ಹೊಸ ಕಥೆಯಲ್ಲಿ ನಟಿಸುತ್ತಿರುವ ಸಂಭ್ರಮ ಹೇಗಿದೆ?
ಬಹಳ ಖುಷಿಯಿದೆ. ಇದಕ್ಕೂ ಮುನ್ನ 'ಶ್ರೀದೇವಿ ಮಹಾತ್ಮೆ' ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದೆ. ಅಲ್ಲಿ ದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಅದಕ್ಕಿಂತ ಬಹಳ ವಿಭಿನ್ನವಾದ ಪಾತ್ರ ಇದು. ಅಷ್ಟು ಸುಲಭವಾಗಿ ಇಂತಹ ಅವಕಾಶ ಸಿಗಲ್ಲ. ಆದರೆ ಆ ಧಾರಾವಾಹಿ ಮುಗಿಯೋಕು ಮುನ್ನ ಈ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಬಹಳ ಸೌಮ್ಯವಾದ ದೇವಿ ಪಾತ್ರದಿಂದ ಇಷ್ಟು ರಗಡ್ ಆಗಿರುವ ಐಶ್ವರ್ಯ ಪಾತ್ರ ಸಿಕ್ಕಿದೆ. ಬಹಳ ಖುಷಿಯಿದೆ.
'ಮರ್ಯಾದೆ ರಾಮಣ್ಣ' ತಂಡದ ಬಗ್ಗೆ ಹೇಳಿ
ಚೇತನ್ ಸರ್ ಬಹಳ ಡೆಡಿಕೇಟೆಡ್. ಅವರನ್ನು ನೋಡಿದ್ರೆ ಆಶ್ಚರ್ಯ ಆಗುತ್ತೆ. ಅವರನ್ನು ನೋಡಿದ್ರೆ, ನಾನು ಸುಮ್ಮನೆ ಕೂತಿದ್ದೀನಿ ಎನಿಸಿಬಿಡುತ್ತೆ. ಚಿತ್ರೀಕರಣದಿಂದ ಬಿಡುವು ಸಿಕ್ಕ ಕೂಡಲೇ ಮೈಸೂರಿಗೆ ಹೋಗಿ ಗರಡಿಯಲ್ಲಿ ತರಬೇತಿ ಪಡೆದು ಬರ್ತಾರೆ. ಬಹಳ ಒಳ್ಳೆ ನಟ, ಒಳ್ಳೆ ವ್ಯಕ್ತಿ. ಡೈರೆಕ್ಟರ್ ಮನು ಸರ್ ಬಹಳ ಸಾಫ್ಟ್. ಹೇಳಿದನ್ನು ಮಾಡಿಬಿಟ್ರೆ ಸಾಕು. ಬೇರೆ ಏನು ಕೇಳಲ್ಲ. ಸೆಟ್‌ನಲ್ಲಿ ಬಹಳ ಜಾಲಿಯಾಗಿ ಇರ್ತಾರೆ. ನಾವು ಹೇಳಿದ್ದನ್ನು ಕೇಳ್ತಾರೆ. ಏನಾದರೂ ಬದಲಾವಣೆ ಮಾಡಿಕೊಂಡು ನಟಿಸ್ತೀವಿ ಅಂದಾಗ ಅದನ್ನು ಒಪ್ಪಿಕೊಳ್ತಾರೆ. ಒಟ್ಟಾರೆ ಇಡೀ ತಂಡ ಫ್ಯಾಮಿಲಿ ರೀತಿಯಿದೆ.
ಜೀವಿತಾ ವಸಿಷ್ಠ ಹಿನ್ನೆಲೆ, ನಟನೆ ಆರಂಭಿಸಿದ್ದು
ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಮೂಲತಃ ಪುತ್ತೂರಿನವರು. ವರ್ಷಕ್ಕೆ ಒಮ್ಮೆ ಆದ್ರು ಅಲ್ಲಿಗೆ ಹೋಗಿಬರ್ತೀವಿ. ಗಗನ ಸಖಿ ಆಗುವ ಆಸೆಯಿತ್ತು. ಆದ್ರೆ ಎಂಬಿಎ ಮುಗಿಸಿ, ಶಾಲೆಯೊಂದರಲ್ಲಿ ಟೀಚರ್ ಆಗಿ 4 ವರ್ಷ ಕೆಲಸ ಮಾಡ್ತಿದ್ದೆ. ಕೋವಿಡ್ ಸಮಯದಲ್ಲಿ ಸ್ನೇಹಿತರೊಬ್ಬರ ಸಲಹೆ ಮೇರೆಗೆ 'ವಾಸಂತಿ ನಲಿದಾಗ' ಚಿತ್ರಕ್ಕೆ ಆಡಿಷನ್ ಕೊಟ್ಟು ಬಂದಿದ್ದೆ. ನಟಿಸುವ ಅವಕಾಶ ಸಿಕ್ಕಿತ್ತು. ಬಳಿಕ 'ಅಪ್ಪ ಐಲವ್ ಯೂ' ಹಾಗೂ 'ಫಸ್ಟ್‌ಡೇ ಫಸ್ಟ್ ಶೋ' ಸಿನಿಮಾಗಳಲ್ಲಿ ಕೂಡ ಬಣ್ಣಹಚ್ಚಿದ್ದೆ. ಅದೇ ಸಮಯದಲ್ಲಿ ಧಾರಾವಾಹಿ ಅವಕಾಶ ಸಿಕ್ಕಿತ್ತು.
ಕಿರುತೆರೆ ಪಯಣ ಶುರುವಾಗಿದ್ದು
'ಶ್ರೀದೇವಿ ಮಹಾತ್ಮೆ' ಧಾರಾವಾಹಿಗೆ ಸಾಕಷ್ಟು ಜನ ಆಡಿಷನ್‌ಗೆ ಬಂದಿದ್ರು. ಮೊದಲು ಆಡಿಷನ್ ಕೊಟ್ಟಿದ್ದು ನಾನೇ. ಅದೃಷ್ಟಕ್ಕೆ ನಾನೇ ಆಯ್ಕೆ ಆಗಿಬಿಟ್ಟೆ. ನಾನು ಚಿಕ್ಕಂದಿನಿಂದ ಡ್ಯಾನ್ಸರ್. ಹಾಗಾಗಿ ಸುಲಭವಾಯಿತು. ಚಿಕ್ಕಂದಿನಲ್ಲೇ 'ಚೆಲುವೆಯೇ ನಿನ್ನ ನೋಡಲು' ಸಿನಿಮಾದಲ್ಲಿ ಶಿವಣ್ಣನ ಜೊತೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿತ್ತು. ಅದನ್ನು ಮರೆಯೋಕೆ ಸಾಧ್ಯವಿಲ್ಲ. ಮತ್ತೊಂದು ಸಿನಿಮಾ ಚರ್ಚೆ ನಡೀತಿದೆ. ಸದ್ಯಕ್ಕೆ 'ಮರ್ಯಾದೆ ರಾಮಣ್ಣ' ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದೀನಿ.


Click it and Unblock the Notifications