ಸಕ್ಸಸ್ ಅನ್ನೋದು ಟೀಂ ವರ್ಕ್, ಜನ ಮೆಚ್ಚಿದ್ರೆ ಹಾಡು ಹಿಟ್ ಆಗುತ್ತೆ; ಚರಣ್ ರಾಜ್ ಸಂದರ್ಶನ
ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕ ಚರಣ್ ರಾಜ್. ತಮ್ಮ ವಿಭಿನ್ನ ಶೈಲಿಯ ಸಂಗೀತದಿಂದ ಸಂಗೀತ ಪ್ರೇಮಿಗಳನ್ನು ಅವರು ರಂಜಿಸುತ್ತಿದ್ದಾರೆ. ಸದ್ಯ 'ಎಕ್ಕ' ಚಿತ್ರದ ಆಲ್ಬಮ್‌ನಿಂದ ಟಾಕ್ ಆಫ್ ದ ಟೌನ್ ಆಗಿದ್ದಾರೆ. ಚಿತ್ರದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸದ್ದು ಮಾಡ್ತಿದೆ.
ರಾಜ್ಯಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಚರಣ್ ರಾಜ್ ಇದೀಗ ಕನ್ನಡ ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ದುನಿಯಾ ಸೂರಿ, ದುನಿಯಾ ವಿಜಯ್, ಹೇಮಂತ್ ರಾವ್ ನಿರ್ದೇಶನದ ಸಿನಿಮಾಗಳಲ್ಲಿ ಚರಣ್ ಸಂಗೀತ ಕೂಡ ಸೌಂಡ್ ಮಾಡ್ತಾ ಬರ್ತಿದೆ. ಸದ್ಯ ಮೂರ್ನಾಲ್ಕು ಸಿನಿಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ತಮ್ಮ ಸಂಗೀತದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟುವಂತೆ ಮಾಡಿದ್ದು ಅದನ್ನು ತಲುಪಲು ಬಹಳ ಶ್ರಮಿಸುತ್ತಿದ್ದಾರೆ. ಹಗಳಿರುವ ಕೆಲಸ ಮಾಡುತ್ತಿದ್ದಾರೆ.

ಟಪ್ಪಾಂಗುಚಿ, ಮೆಲೋಡಿ, ಮಾಸ್, ಪ್ಯಾಥೋ ಹೀಗೆ ಎಲ್ಲಾ ತರಹದ ಸಾಂಗ್‌ಗಳಿಗೆ ಮ್ಯೂಸಿಕ್ ಮಾಡಿ ಚರಣ್ ಗೆದ್ದಿದ್ದಾರೆ. ರೀರೆಕಾರ್ಡಿಂಗ್ ವಿಚಾರದಲ್ಲಿ ಕೂಡ ಅವರ ಹೆಸರು ಚಿತ್ರರಂಗದಲ್ಲಿ ಹೆಚ್ಚು ಕೇಳಿಬರ್ತಿದೆ. ಸ್ಟಾರ್ ನಟರ ಸಿನಿಮಾಗಳು ಘೋಷಣೆ ಆದಾಗ ಚರಣ್ ರಾಜ್ ಸಂಗೀತ ಇದ್ದರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಬಯಸುವಂತಾಗಿದೆ. ಇಷ್ಟೆಲ್ಲಾ ಸುದ್ದಿಯಲ್ಲಿರುವ ಚರಣ್ ರಾಜ್ ತಮ್ಮ ಸದ್ಯ ಜರ್ನಿ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.
'ಎಕ್ಕ' ಹಾಡುಗಳಿಗೆ ಸಿಗುತ್ತಿರುವ ರೆಸ್ಪಾನ್ಸ್ ಬಗ್ಗೆ ಏನಂತೀರಾ?
ಎಲ್ಲರಿಂದ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ. ಬಹಳ ಖುಷಿಯಾಗುತ್ತಿದೆ. ತಂಡದ ಎಲ್ಲರ ಪರಿಶ್ರಮ ಇದು. ಹಾಗಾಗಿ ಎಲ್ಲರಿಗೂ ಕ್ರೆಡಿಟ್ ಸಿಗಬೇಕು. ಎಲ್ಲವೂ ಕೂಡಿ ಬಂದಾಗ ಮ್ಯಾಜಿಕ್ ಆಗುತ್ತದೆ. ನಿರ್ದೇಶಕರಾದ ರೋಹಿತ್ ಪದಕಿ ಹಾಗೂ ನಾಗಾರ್ಜುನ ಶರ್ಮಾ ಅವರ ಸಾಹಿತ್ಯ ಎಲ್ಲವೂ ಸೇರಿ ಸಾಂಗ್ಸ್ ಸದ್ದು ಮಾಡ್ತಿದೆ.
ನಿಮ್ಮ ಸಂಗೀತದಲ್ಲಿ ಹಾಡುಗಳೆಲ್ಲಾ ಹಿಟ್ ಆಗುತ್ತಿರುವುದರ ಸೀಕ್ರೆಟ್ ಏನು?
ನಮಗೆ ಖುಷಿ ಅನ್ನಿಸಿದ್ದನ್ನು ಮಾಡಿ ಅದು ಜನರಿಗೂ ಖುಷಿ ಕೊಟ್ಟರೆ ಅದು ಮತ್ತಷ್ಟು ಖುಷಿ ಕೊಡುತ್ತೆ. ನಮ್ಮ ಲೆಕ್ಕಾಚಾರ ಸರಿಯಾಗಿದೆ ಅನ್ನಿಸುತ್ತೆ. ಇದು ಆಶೀರ್ವಾದ. ಹೇಗಾಗುತ್ತೆ ಅಂತ ಹೇಳುವುದಕ್ಕೆ ಕಷ್ಟ. ನಮ್ಮ ಬೆಸ್ಟ್ ನಾವು ಟ್ರೈ ಮಾಡ್ತೀವಿ. ಜನರಿಗೆ ಇಷ್ಟವಾದರೆ ಖುಷಿಯಾಗುತ್ತೆ. ಇಲ್ಲದಿದ್ದರೆ ಅವ್ರೇ ತಿದ್ದಿ ಹೇಳುತ್ತಾರೆ. ಆಗ ಮತ್ತಷ್ಟು ಚೆನ್ನಾಗಿ ಮಾಡಬೇಕು ಎನ್ನುವ ಜವಾಬ್ದಾರಿ ಬರುತ್ತದೆ. ಯಾಕಂದರೆ ಜನರು ಹೇಳಿದ್ದು ಸರಿಯಾಗಿರುತ್ತದೆ.
ನಿಮ್ಮ ಸಂಗೀತದ ಬಗ್ಗೆ ಸಿನಿರಸಿಕರು ಹೆಚ್ಚು ಭರವಸೆ ಇಡುತ್ತಿರುವುಕ್ಕೆ ಕಾರಣ?
ಇದಕ್ಕೆಲ್ಲಾ ಮುಖ್ಯ ಕಾರಣ ನಿರ್ದೇಶಕರು. ನಾವು ಏನೇ ಮ್ಯೂಸಿಕ್ ಮಾಡಿದರೂ ಅದನ್ನು ಆಯ್ಕೆ ಮಾಡುವುದು ನಿರ್ದೇಶಕರು. ಅವರ ಟೇಸ್ಟ್ ಬಹಳ ಮುಖ್ಯ. ಸೂರಿ ಸರ್, ವಿಜಿ ಸರ್ ಹೇಮಂತ್ ಹಾಗೂ ರೋಹಿತ್ ಎಲ್ಲರಿಗೂ ಒಳ್ಳೆ ಮ್ಯೂಸಿಕ್ ಟೇಸ್ಟ್ ಇದೆ. ನಾವು ಮಾಡಿದ್ದರಲ್ಲಿ ಬೆಸ್ಟ್ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದು ಸಕ್ಸಸ್ ಆಗುತ್ತದೆ.
ಸದ್ಯ ಕೈಯಲ್ಲಿರುವ ಪ್ರಾಜೆಕ್ಟ್‌ಗಳು ಯಾವುವು?
'ಎಕ್ಕ' ಮುಗೀತಾ ಬಂತು. 'ಮ್ಯಾಂಗೊ ಪಚ್ಚ' ಹಾಗೂ 'ಮಾರ್ನಮಿ' ಚಿತ್ರಗಳ ರೀ-ರೆಕಾರ್ಡಿಂಗ್ ಶುರುವಾಗುತ್ತಿದೆ. ದುನಿಯಾ ಸೂರಿ ಹಾಗೂ ಹೇಮಂತ್ ರಾವ್ ಅವರದ್ದು ಹೊಸದಾಗಿ ಸಿನಿಮಾ ಕೆಲಸಗಳು ಆರಂಭವಾಗುತ್ತಿದೆ. ಜೊತೆಗೆ ದುನಿಯಾ ವಿಜಿ ಸರ್ 'ಸಿಟಿಲೈಟ್ಸ್' ಸಿನಿಮಾ ಸಂಗೀತ ಹಾಗೂ ರೀ-ರೆಕಾರ್ಡಿಂಗ್ ಇದೆ. 'ಎಕ್ಕ' ಚಿತ್ರದ ಎರಡು ಹಾಡು ಕೇಳಿದ್ದೀರಾ, ಇನ್ನು ಮೂರು ಹಾಡುಗಳು ಬರುವುದು ಬಾಕಿಯಿದೆ.
ನಿಮ್ಮ ಹಾಗೂ ನಾಗಾರ್ಜುನ ಶರ್ಮಾ ಕಾಂಬೋ ಮ್ಯಾಜಿಕ್ ಮಾಡ್ತಿದೆ ಅಲ್ವಾ?
ನಾವಿಬ್ಬರು ಬಹಳ ಕಂಫರ್ಟ್ ಆಗಿ ಕೂತು ಕೆಲಸ ಮಾಡುತ್ತೇವೆ. ಅವ್ರು ಯಾವುದೇ ವಿಚಾರದಲ್ಲಿ ರಾಜಿ ಆಗಲ್ಲ, ಅಂದುಕೊಂಡ ಸಾಲು ಸಿಗುವವರೆಗೂ ಬಿಡಲ್ಲ. ಬಹಳ ದೊಡ್ಡ ವಿಚಾರವನ್ನು ಬಹಳ ಸುಲಭವಾಗಿ ಹೇಳುತ್ತಾರೆ. ಅದು ಅವ್ರ ಬಲ. ಮಾಸ್, ಕ್ಲಾಸ್ ಎಲ್ಲಾ ಬರೆಯುತ್ತಾರೆ. ಯೋಗರಾಜ್ ಭಟ್ ಅವ್ರ ರೀತಿಯಲ್ಲಿ ಮುಂದೆ ದೊಡ್ಡದಾಗಿ ಹೆಸರು ಮಾಡುವ ಅವಕಾಶ ಅವರಿಗಿದೆ. ಅವ್ರು ಸಿನಿಮಾ ಬರಹಗಾರರು ಆಗಿರುವುದರಿಂದ ಬಂದು ಹಾಡು ಅಂತ ನೋಡಲ್ಲ, ಒಂದು ಕಥೆ ಅಂತ ನೋಡುತ್ತಾರೆ. ಅದೇ ಅವ್ರ ಸಾಹಿತ್ಯದ ಪ್ಲಸ್ ಪಾಯಿಂಟ್.
ನಿಮಗೂ ಸಿನಿಮಾ ನಿರ್ದೇಶಕರಾಗುವ ಆಸೆ ಇದ್ಯಾ?
ನನಗೆ ಸಂಗೀತ ಬಿಟ್ಟು ಬೇರೆ ಸ್ಕಿಲ್ಸ್ ಇಲ್ಲ. ಹಾಗಾಗಿ ಸಿನಿಮಾ ನಿರ್ದೇಶನವನ್ನು ನೋಡಿ ಎಂಜಾಯ್ ಮಾಡ್ತೀನಿ. ಹರಿಕೃಷ್ಣ ಸರ್ ಹಾಗೂ ಅರ್ಜುನ್ ಜನ್ಯಾ ಸರ್‌ಗೆ ನಿರ್ದೇಶನದ ಅನುಭವ ಇದೆ. ಚಿಕ್ಕಂದಿನಿಂದಲೂ ಆ ಬಗ್ಗೆ ಆಸಕ್ತಿ ಇದ್ದಿರಬಹುದು. ನನಗೆ ಮೊದಲಿನಿಂದಲೂ ಅಂತಹ ಆಸಕ್ತಿ ಇಲ್ಲ.
ನಿಮ್ಮ ಹಾಡುಗಳಲ್ಲಿ ಕೆಲ ಕ್ಯಾಚಿ ಪದಗಳು ಕ್ಲಿಕ್ ಆಗುತ್ತದೆ, ಅದು ಯಾರ ಐಡಿಯಾ?
ಅದು ಹಾಡು ಮಾಡ್ತಾ ಮಾಡ್ತಾ ಸೇರಿಕೊಳ್ಳುವಂಥದ್ದು. ಕೆಲವೊಮ್ಮೆ ನಿರ್ದೇಶಕರು ಅಂತಹ ಪದಗಳನ್ನು ಕೊಡ್ತಾರೆ. ಮ್ಯೂಸಿಕ್ ಮಾಡ್ತಾ ಮಾಡ್ತಾ ನನಗೂ ಹೊಳೆಯುತ್ತದೆ. ಸಾಹಿತ್ಯ ಬರೆಯುವವರೂ ಹೇಳ್ತಾರೆ. ಕೆಲವೊಮ್ಮೆ ಗಾಯಕರು ಹಾಡ್ತಾ ಹಾಡ್ತಾ ಯಾವುದೋ ಪದ ಕೊಡ್ತಾರೆ. ಅಂತಿಮವಾಗಿ ಅದು ಒಂದು ರೂಪ ಪಡೆದುಕೊಂಡು ಹಾಡಿನಲ್ಲಿ ಚೆನ್ನಾಗಿ ಸಿಂಕ್ ಆಗಿಬಿಟ್ಟರೆ ಮಜಾ ಕೊಡುತ್ತದೆ. ಹಿಟ್ ಆಗುತ್ತದೆ.
ಕೆಲ ಹಾಡುಗಳನ್ನು ನೀವೇ ಹಾಡಬೇಕು ಅನಿಸೋದು ಯಾಕೆ?
ನನಗೆ ಬೇರೆಯವರಿಂದ ಹಾಡಿಸುವುದೇ ಬಹಳ ಇಷ್ಟ. ಆದರೆ ಕೆಲವೊಮ್ಮೆ ಟ್ರ್ಯಾಕ್ ಹಾಡಿದಾಗ ಅದು ಎಲ್ಲರಿಗೂ ಇಷ್ಟವಾಗಿಬಿಡುತ್ತದೆ. ಬೇರೆಯವರಿಂದ ಹಾಡಿಸಿದರೂ ಆ ಮಜಾ ಸಿಗಲ್ಲ. ಹಾಗಾಗಿ ನನ್ನದೇ ಉಳಿಸಿಕೊಳ್ಳುತ್ತೇವೆ. ಹಿನ್ನೆಲೆ ಗಾಯನ ಎನ್ನುವುದು ಒಂದು ಕಲೆ. ಅದಕ್ಕೆ ಅದರದ್ದೇ ಆದ ತಪಸ್ಸು, ಅಭ್ಯಾಸ ಬೇಕು. ನಾನು ಶಾಸ್ತ್ರೀಯವಾಗಿ ಸಂಗೀತ ಕಲಿತಿದ್ದೀನಿ. ಹಾಡ್ತೀನಿ.


Click it and Unblock the Notifications











