"ಮಗ ರೋಹಿತ್-ದೃಷ್ಟಿಹೀನ ಪೋಷಕರನ್ನೇ ನನ್ನ ಶಕ್ತಿ"- 'ಗೌರಿಶಂಕರ' ವಿಲನ್ ವಿಂಧ್ಯಾ

ಮೂಲತಃ ತಿಪಟೂರಿನವರಾದ ನಟಿ ವಿಂಧ್ಯಾ, 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾದವರು. ಬಾಲ್ಯದಲ್ಲೇ 'ಕೇರ್ ಆಫ್ ಫುಟ್ಪಾತ್' ಚಿತ್ರದಲ್ಲಿ ನಟಿಸಿದ್ದ ಇವರು, ಸದ್ಯ 'ಗೌರಿಶಂಕರ' ಧಾರಾವಾಹಿಯ 'ಗಂಗಾ' ಎಂಬ ಪವರ್‌ಫುಲ್ ನೆಗೆಟಿವ್ ಪಾತ್ರದ ಮೂಲಕ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ.

ಮಗ ರೋಹಿತ್ ಹಾಗೂ ದೃಷ್ಟಿಹೀನರಾದ ಪೋಷಕರನ್ನೇ ತಮ್ಮ ಶಕ್ತಿ ಎಂದು ನಂಬಿರುವ ಇವರು. ತೆರೆಯ ಮೇಲೆ ಕಟ್ಟುನಿಟ್ಟಿನ ವಿಲನ್ ಆಗಿ ಕಂಡರೂ ನಿಜ ಜೀವನದಲ್ಲಿ ಅತ್ಯಂತ ಸರಳ ಹಾಗೂ ಮೃದು ಸ್ವಭಾವದ ವ್ಯಕ್ತಿಯಾಗಿದ್ದಾರೆ. ನಟನೆಗೆ ಹೆಚ್ಚಿನ ಅವಕಾಶವಿರುವ ಗಟ್ಟಿ ಪಾತ್ರಗಳ ಮೂಲಕ ಬೆಳ್ಳಿತೆರೆಯ ಮೇಲೆ ಮಿಂಚುವ ಕನಸನ್ನು ಇವರು ಹೊಂದಿದ್ದಾರೆ. ಸದ್ಯಾ ಸ್ಟಾರ್ ಸುವರ್ಣದಲ್ಲಿ 'ಗೌರಿಶಂಕರ' ಎನ್ನುವ ಧಾರಾವಾಹಿಯಲ್ಲಿ ಗಂಗಾ ಪಾತ್ರದ ಮೂಲಕ ನೆಗೆಟಿವ್ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಟಿ ಫಿಲ್ಮಿಬೀಟ್ ಕನ್ನಡಕ್ಕೆ ಸಂದರ್ಶನ ನೀಡಿದ್ದು, ತಮ್ಮ ಜರ್ನಿಯ ಮೆಲುಕು ಹಾಕಿದ್ದಾರೆ.

My Parents and Son are my strength says Gowrishankara serial actress Vindhya

ನೀವು ಮೂಲತಃ ಎಲ್ಲಿಯವರು? ನಟನೆಗೆ ಬಂದಿದ್ದೇಗೆ?

ವಿಂಧ್ಯಾ: ನಾನು ಮೂಲತಃ ತಿಪಟೂರಿನವಳು. ನಮ್ಮ ತಂದೆ ರಂಗಭೂಮಿ ಕಲಾವಿದರಾಗಿದ್ದವರು, ಹಾಗಾಗಿ ಬಾಲ್ಯದಿಂದಲೂ ಮನೆಯಲ್ಲಿ ಕಲೆ ಮತ್ತು ನಟನೆಯ ವಾತಾವರಣವಿತ್ತು. ನಾನು 6ನೇ ಅಥವಾ 7ನೇ ಕ್ಲಾಸಿನಲ್ಲಿದ್ದಾಗ 'ಕೇರ್ ಆಫ್ ಫುಟ್ಪಾತ್' ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದೆ. ಆ ಶೂಟಿಂಗ್ ಸಮಯದಲ್ಲಿ ನಟಿ ರಮ್ಯಾ ಮ್ಯಾಮ್ ಅವರನ್ನು ಹತ್ತಿರದಿಂದ ನೋಡಿದಾಗ ನನಗೂ ಇವರಂತೆಯೇ ನಟಿಯಾಗಬೇಕು ಎಂಬ ಆಸೆ ಮೊಳಕೆಯೊಡೆಯಿತು. ಅಲ್ಲಿಂದ ಶುರುವಾದ ಆಸಕ್ತಿ ನನ್ನನ್ನು ಇಲ್ಲಿಯವರೆಗೂ ಕರೆತಂದಿದೆ.

'ಗೌರಿಶಂಕರ'ದ 'ಗಂಗಾ' ಪಾತ್ರಕ್ಕೆ ಪ್ರತಿಕ್ರಿಯೆ ಹೇಗಿದೆ?

ವಿಂಧ್ಯಾ: ನಿಜ ಹೇಳಬೇಕೆಂದರೆ ಪ್ರತಿಕ್ರಿಯೆ ತುಂಬಾ ಅದ್ಭುತವಾಗಿದೆ. ಮೊದಮೊದಲು ನೆಗೆಟಿವ್ ರೋಲ್ ಅಂದಾಗ ಜನರು ಹೇಗೆ ಸ್ವೀಕರಿಸುತ್ತಾರೋ ಎಂಬ ಆತಂಕವಿತ್ತು. ಆದರೆ ಈಗ ಜನರು ನನ್ನನ್ನು ನೋಡಿದಾಗ 'ಗಂಗಾ' ಎಂದೇ ಗುರುತಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಮೆಸೇಜ್ ಮಾಡಿ ನಿಮ್ಮ ನಟನೆ ಮತ್ತು ನಿಮ್ಮ ಆಟಿಟ್ಯೂಡ್ ತುಂಬಾ ಚೆನ್ನಾಗಿದೆ ಎಂದು ಪ್ರೋತ್ಸಾಹಿಸುತ್ತಾರೆ. ಒಬ್ಬ ನಟಿಗೆ ತಾನು ಮಾಡುತ್ತಿರುವ ಪಾತ್ರ ಜನರಿಗೆ ತಲುಪಿದೆ ಎನ್ನುವುದಕ್ಕಿಂತ ದೊಡ್ಡ ಸಂತೋಷ ಬೇರೊಂದಿಲ್ಲ.

Also Read
ಬೈಕ್ ರೇಸರ್ ಆಗ್ಬೇಕಿದ್ದ 'ಗಿಣಿರಾಮ' ಧಾರಾವಾಹಿಯ ಈ ನಟ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ
ಬೈಕ್ ರೇಸರ್ ಆಗ್ಬೇಕಿದ್ದ 'ಗಿಣಿರಾಮ' ಧಾರಾವಾಹಿಯ ಈ ನಟ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ಮತ್ತೊಬ್ಬ ನಟಿಯ ಪಾತ್ರದಲ್ಲಿ ನಟಿಸೋದು ಸವಾಲು ಎನ್ನಿಸಲಿಲ್ಲವೇ?

ವಿಂಧ್ಯಾ: ಖಂಡಿತವಾಗಿಯೂ ಅದು ದೊಡ್ಡ ಸವಾಲೇ ಆಗಿತ್ತು. ಯಾಕಂದರೆ, ಆ ಪಾತ್ರವನ್ನು ಈಗಾಗಲೇ ಒಬ್ಬರು ನಟಿ ಒಂದು ಹಂತಕ್ಕೆ ಕೊಂಡೊಯ್ದಿರುತ್ತಾರೆ ಮತ್ತು ವೀಕ್ಷಕರು ಅವರನ್ನೇ ಆ ಪಾತ್ರದಲ್ಲಿ ನೋಡಿ ರೂಢಿಯಾಗಿರುತ್ತಾರೆ. ನಾನು ಆ ಜಾಗಕ್ಕೆ ಹೋದಾಗ ಸಹಜವಾಗಿಯೇ ಹೋಲಿಕೆಗಳು ಶುರುವಾಗುತ್ತವೆ. 'ಇವರು ಅವರ ಹಾಗೆ ಮಾಡ್ತಾರಾ?' ಅನ್ನೋ ಪ್ರಶ್ನೆ ಇರುತ್ತೆ. ಆದರೆ ನಾನು ಯಾರನ್ನೂ ಕಾಪಿ ಮಾಡಲು ಹೋಗಲಿಲ್ಲ, ನನ್ನದೇ ಆದ ಶೈಲಿಯಲ್ಲಿ ಗಂಗಾ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದೆ. ಆ ಸವಾಲನ್ನು ಎದುರಿಸಲು ತಂಡದವರು ಕೊಟ್ಟ ಧೈರ್ಯ ಬಹಳ ದೊಡ್ಡದು.

My Parents and Son are my strength says Gowrishankara serial actress Vindhya

ವೀಕ್ಷಕರು ನಿಮ್ಮನ್ನು ಸ್ವೀಕರಿಸಲು ಎಷ್ಟು ಸಮಯ ತೆಗೆದುಕೊಂಡರು?

ವಿಂಧ್ಯಾ: ಇದು ನನಗೆ ಬಹಳ ಅಚ್ಚರಿ ತಂದ ವಿಷಯ. ಸಾಮಾನ್ಯವಾಗಿ ಒಂದು ಮುಖ್ಯ ಪಾತ್ರ ಬದಲಾದಾಗ ಪ್ರೇಕ್ಷಕರು ಹೊಂದಿಕೊಳ್ಳಲು ವಾರಗಳು ಅಥವಾ ತಿಂಗಳುಗಳೇ ಬೇಕಾಗುತ್ತವೆ. ಆದರೆ, 'ಗೌರಿಶಂಕರ' ವಿಷಯದಲ್ಲಿ ಜನ ಕೇವಲ ಎರಡೇ ದಿನಗಳಲ್ಲಿ ನನ್ನನ್ನು ಗಂಗಾ ಪಾತ್ರಧಾರಿ ಎಂದು ಒಪ್ಪಿಕೊಂಡರು. ಆ ಬದಲಾವಣೆಯನ್ನು ಪ್ರೇಕ್ಷಕರು ಅಷ್ಟು ಸಹಜವಾಗಿ ಸ್ವೀಕರಿಸಿದ್ದು ನೋಡಿ ನನಗೂ ಆಶ್ಚರ್ಯವಾಯಿತು. ಆ ಪ್ರೀತಿ ಮತ್ತು ಸ್ವೀಕಾರ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿತು.

ಗಂಗಾ ಪಾತ್ರಕ್ಕೆ ನಿಮ್ಮ ತಯಾರಿ ಹೇಗಿತ್ತು?

ವಿಂಧ್ಯಾ: ಗಂಗಾ ಪಾತ್ರಕ್ಕೆ ಒಂದು ರೀತಿಯ ಗಾಂಭೀರ್ಯ ಮತ್ತು ಸ್ಟೈಲ್ ಇದೆ. ನಾನು ಸೆಟ್‌ಗೆ ಹೋದಾಗ ನಿರ್ದೇಶಕರಾದ ಅಂಬರೀಶ್ ಸರ್ ಅವರು ಪಾತ್ರದ ಮೂಡ್ ಬಗ್ಗೆ ವಿವರಿಸುತ್ತಾರೆ. ಅವರು ಹೇಳಿಕೊಡುವ ಸಣ್ಣ ಸಣ್ಣ ಮ್ಯಾನರಿಸಂಗಳು ಪಾತ್ರವನ್ನು ಚೆನ್ನಾಗಿ ತೋರಿಸಲು ಸಹಾಯ ಮಾಡುತ್ತವೆ. ನೆಗೆಟಿವ್ ಪಾತ್ರ ಅಂದ ತಕ್ಷಣ ಬರೀ ಕಿರುಚಾಡುವುದಲ್ಲ, ಕಣ್ಣಿನ ನೋಟ ಮತ್ತು ಮಾತುಗಳಲ್ಲೇ ಆ ಖದರ್ ಇರಬೇಕು ಎಂದು ನಾನು ನಂಬುತ್ತೇನೆ. ಹಾಗಾಗಿ ಪಾತ್ರದ ಆ ಗಾಂಭೀರ್ಯವನ್ನು ಕಾಯ್ದುಕೊಳ್ಳಲು ಹೆಚ್ಚು ಗಮನ ಕೊಡುತ್ತೇನೆ.

ಗೌರಿಶಂಕರ ತಂಡದ ಜೊತೆಗಿನ ಅನುಭವ ಹೇಗಿದೆ?

ವಿಂಧ್ಯಾ: ಸ್ಟಾರ್ ಸುವರ್ಣ ವಾಹಿನಿ ಕಲಾವಿದರನ್ನು ಬಹಳ ಗೌರವದಿಂದ ನಡೆಸಿಕೊಳ್ಳುತ್ತದೆ. ಇನ್ನು ಗೌರಿಶಂಕರ ತಂಡದ ಬಗ್ಗೆ ಹೇಳುವುದಾದರೆ, ಅಲ್ಲಿ ಕೆಲಸದ ಒತ್ತಡದ ನಡುವೆಯೂ ಒಂದು ಫ್ಯಾಮಿಲಿ ವಾತಾವರಣ ಇರುತ್ತದೆ. ಎಲ್ಲರೂ ಬಹಳ ಸಪೋರ್ಟಿವ್ ಆಗಿದ್ದಾರೆ. ನಿರ್ದೇಶಕರಿಂದ ಹಿಡಿದು ಸಹ-ಕಲಾವಿದರವರೆಗೆ ಎಲ್ಲರೂ ಉತ್ತಮ ಕೆಲಸ ಮಾಡಲು ಪರಸ್ಪರ ಸಹಕರಿಸುತ್ತಾರೆ. ಅಂತಹ ಒಳ್ಳೆ ಟೀಮ್ ಸಿಕ್ಕಿರುವುದು ನನ್ನ ಪುಣ್ಯ.

My Parents and Son are my strength says Gowrishankara serial actress Vindhya

'ಬೃಂದಾವನ', 'ರಾಮಾಚಾರಿ' ಅಂತಹ ಸೀರಿಯಲ್‌ಗಳ ಬಗ್ಗೆ ಏನಂತೀರಿ?

ವಿಂಧ್ಯಾ: ರಾಮ್‌ಜಿ ಸರ್ ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದು ಯಾವುದೇ ಒಬ್ಬ ಕಲಾವಿದನಿಗೆ ಒಂದು ದೊಡ್ಡ ಪಾಠ ಶಾಲೆ ಇದ್ದಂತೆ. ಅವರ ಗರಡಿಯಲ್ಲಿ ನಾನು ನಾಗಕನ್ನಿಕೆ, ಗೀತಾ ಮತ್ತು ಬೃಂದಾವನ ಸೇರಿದಂತೆ ನಾಲ್ಕು ಪ್ರಮುಖ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರತಿ ಬಾರಿಯೂ ಹೊಸದೇನನ್ನೋ ಕಲಿಯಲು ಅಲ್ಲಿ ಅವಕಾಶ ಇರುತ್ತದೆ. ಇನ್ನು ರಾಮಾಚಾರಿ ಧಾರಾವಾಹಿಯ ತಂಡದ ಜೊತೆ ಕಳೆದ ಸಮಯ ಕೂಡ ನನಗೆ ಬಹಳಷ್ಟು ನೆನಪುಗಳನ್ನು ಮತ್ತು ನಟನೆಯ ಅನುಭವವನ್ನು ನೀಡಿದೆ.

'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಹೇಗಿತ್ತು?

ವಿಂಧ್ಯಾ: ನನ್ನಮ್ಮ ಸೂಪರ್ ಸ್ಟಾರ್ ನನ್ನ ಜೀವನದ ಟರ್ನಿಂಗ್ ಪಾಯಿಂಟ್. ಅಲ್ಲಿಯವರೆಗೂ ನಾನು ಯಾರು ಎಂದು ಜನರಿಗೆ ಅಷ್ಟಾಗಿ ತಿಳಿದಿರಲಿಲ್ಲ. ಆದರೆ ಆ ಶೋ ಮೂಲಕ ನಾನು ಮತ್ತು ನನ್ನ ಮಗ ರೋಹಿತ್ ಕರ್ನಾಟಕದ ಪ್ರತಿಯೊಂದು ಮನೆಗೂ ತಲುಪಿದೆವು. ಜನರು ನಮ್ಮನ್ನು ವೈಯಕ್ತಿಕವಾಗಿ ಇಷ್ಟಪಡಲು ಶುರು ಮಾಡಿದರು. ನನಗೆ ಸಿಗುತ್ತಿರುವ ಇಂದಿನ ಎಲ್ಲಾ ಅವಕಾಶಗಳಿಗೂ ಆ ರಿಯಾಲಿಟಿ ಶೋ ಹಾಕಿಕೊಟ್ಟ ಭದ್ರವಾದ ಬುನಾದಿಯೇ ಕಾರಣ.

ತೆರೆಯ ಮೇಲೆ ವಿಲನ್.. ನಿಜ ಜೀವನದಲ್ಲಿ?

ವಿಂಧ್ಯಾ: ತೆರೆಯ ಮೇಲೆ ನಾನು ತುಂಬಾ ಕೋಪಿಷ್ಠೆ ಅಥವಾ ಗಂಭೀರವಾಗಿ ಕಂಡರೂ, ನಿಜ ಜೀವನದಲ್ಲಿ ನಾನು ಅದಕ್ಕೆ ತದ್ವಿರುದ್ಧ. ನಾನು ಬಹಳ ಶಾಂತ ಸ್ವಭಾವದವಳು, ಎಲ್ಲರ ಜೊತೆ ನಗುನಗುತ್ತಾ ಬೆರೆಯಲು ಇಷ್ಟಪಡುತ್ತೇನೆ. ಹೊರಗಡೆ ಜನರು ಸಿಕ್ಕಾಗ 'ಧಾರಾವಾಹಿಯಲ್ಲಿ ಅಷ್ಟು ಜೋರಾಗಿ ಇರ್ತೀರಾ, ಆದರೆ ಇಲ್ಲಿ ಇಷ್ಟು ಮೃದುವಾಗಿ ಮಾತಾಡ್ತೀರಲ್ಲ' ಎಂದು ಆಶ್ಚರ್ಯ ಪಡುತ್ತಾರೆ. ಅದು ಒಬ್ಬ ಕಲಾವಿದೆಯಾಗಿ ನನಗೆ ಸಿಗುವ ದೊಡ್ಡ ಕಾಂಪ್ಲಿಮೆಂಟ್ ಎಂದು ನಾನು ಭಾವಿಸುತ್ತೇನೆ.

ಮುಂದಿನ ದಿನಗಳಲ್ಲಿ ಸಿನೆಮಾಗಳಲ್ಲಿ ನಟಿಸುವ ಪ್ಲಾನ್ ಇದೆಯೇ?

ವಿಂಧ್ಯಾ: ಸಿನಿಮಾದಲ್ಲಿ ನಟಿಸುವ ಆಸೆ ಖಂಡಿತವಾಗಿಯೂ ಇದೆ. ಆದರೆ ನನಗೆ ಪಾತ್ರದ ಲೆಂತ್ಗಿಂತ ಅದರ ಡೆಪ್ತ್ ಮುಖ್ಯ. ನಾನು ಮಾಡುವ ಪಾತ್ರ ಇಡೀ ಸಿನಿಮಾದ ಮೇಲೆ ಅಥವಾ ಕಥೆಯ ಮೇಲೆ ಒಂದು ಪರಿಣಾಮ ಬೀರಬೇಕು. ಅದು ನಾಯಕಿಯಾಗಿರಲಿ ಅಥವಾ ಪವರ್ಫುಲ್ ಪೋಷಕ ಪಾತ್ರವಾಗಿರಲಿ, ನಟನೆಗೆ ಅಲ್ಲಿ ಸ್ಕೋಪ್ ಇರಬೇಕು. ಉತ್ತಮ ಸ್ಕ್ರಿಪ್ಟ್ ಮತ್ತು ಗಟ್ಟಿ ಪಾತ್ರ ಸಿಕ್ಕರೆ ಖಂಡಿತವಾಗಿಯೂ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುತ್ತೇನೆ.

ಕೊನೆಯದಾಗಿ, ನಿಮ್ಮ ಅಭಿಮಾನಿಗಳಿಗೆ ಏನಂತೀರಾ?

ವಿಂಧ್ಯಾ: ಇವತ್ತು ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣ ನನ್ನ ತಂದೆ-ತಾಯಿ ಮತ್ತು ಮಗ ರೋಹಿತ್. ನನ್ನ ತಂದೆ-ತಾಯಿ ಇಬ್ಬರಿಗೂ ದೃಷ್ಟಿ ದೋಷವಿದ್ದರೂ, ನನ್ನ ತಾಯಿ ನನ್ನನ್ನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಲು ಪಟ್ಟ ಶ್ರಮ ಬಹಳ ದೊಡ್ಡದು. ಇನ್ನು ಅಭಿಮಾನಿಗಳ ಪ್ರೀತಿ ಬೆಲೆಕಟ್ಟಲಾಗದ್ದು. ನೀವು ತೋರುತ್ತಿರುವ ಈ ಪ್ರೀತಿ, ಹಾರೈಕೆ ಸದಾ ಹೀಗೆಯೇ ಇರಲಿ. ನಿಮ್ಮ ಬೆಂಬಲವಿದ್ದರೆ ನಾನು ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.

More from Filmibeat

English summary
My Parents and Son are my strength; Actress Vindhya’s heartfelt story;
Read more about: actress serial tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X