Deepika Shetty Interview:ಅಜ್ಜಿ ಲಕ್ಷ್ಮೀದೇವಮ್ಮ ಅವರ ಆ ಒಂದು ಮೌಲ್ಯವೇ ನಟಿ ದೀಪಿಕಾ ಶೆಟ್ಟಿ ಯಶಸ್ಸಿನ ಗುಟ್ಟು
ಸ್ಯಾಂಡಲ್‌ವುಡ್ ಹಿರಿಯ ನಟಿ ಲಕ್ಷ್ಮೀದೇವಮ್ಮ ಅವರ ಮೊಮ್ಮಗಳಾಗಿ, ಬಣ್ಣದ ಲೋಕದಲ್ಲಿ ಕಳೆದ 20 ವರ್ಷಗಳಿಂದ ಸಕ್ರಿಯವಾಗಿರುವ ನಟಿ ದೀಪಿಕಾ ಶೆಟ್ಟಿ ಇಂದು ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಕೇವಲ ನಾಯಕಿಯಾಗಿ ಮಾತ್ರವಲ್ಲದೆ, 'ಗೌರಿ ಕಲ್ಯಾಣ' ಧಾರಾವಾಹಿಯಲ್ಲಿನ ಅದ್ಭುತ ತಾಯಿ ಪಾತ್ರದ ಮೂಲಕ ಜನರ ಮನೆಮಾತಾಗಿರುವ ಅವರು, ತಮ್ಮ ವೃತ್ತಿಜೀವನದ ಅತಿ ದೊಡ್ಡ 'ಬ್ರೇಕ್' ಅನ್ನು ಎಂಜಾಯ್ ಮಾಡುತ್ತಿದ್ದಾರೆ.
ಅಜ್ಜಿಯ ಶಿಸ್ತು, ತಾಯಿಯ ಆಶೀರ್ವಾದ ಹಾಗೂ ಬಲವಾದ ಕೌಟುಂಬಿಕ ಬೆಂಬಲದೊಂದಿಗೆ ಬೆಳೆದು ಬಂದಿರುವ ದೀಪಿಕಾ ಶೆಟ್ಟಿ, ಈ ವಿಶೇಷ ಸಂದರ್ಶನದಲ್ಲಿ ತಮ್ಮ ಎರಡು ದಶಕಗಳ ಸುದೀರ್ಘ ಪಯಣ, ವೈಯಕ್ತಿಕ ಜೀವನದ ಏರಿಳಿತಗಳು ಹಾಗೂ ಬಣ್ಣದ ಲೋಕದ ಮರೆಯಲಾಗದ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ನಿಮ್ಮ ಹುಟ್ಟೂರು ಯಾವುದು? ಮತ್ತು ಇಂಡಸ್ಟ್ರಿಗೆ ನಿಮ್ಮ ಎಂಟ್ರಿ ಹೇಗಾಯ್ತು?
ದೀಪಿಕಾ ಶೆಟ್ಟಿ: ನಾನು ಹುಟ್ಟಿದ್ದು ಚೆನ್ನೈನಲ್ಲಿ. ಆದರೆ ನಮ್ಮ ಮೂಲ ಊರು ಕುಂದಾಪುರದ ಹತ್ತಿರವಿರುವ ಬೇಲೂರು. ಅದು ನಮ್ಮ ಅಮ್ಮನವರ ಹುಟ್ಟೂರು ಕೂಡ ಹೌದು. ಆಮೇಲೆ ಒಂದು ಮೂರು-ನಾಲ್ಕು ವರ್ಷ ಶಿವಮೊಗ್ಗದಲ್ಲಿ ಓದಿದೆ. ನಂತರ ಬೆಂಗಳೂರಿಗೆ ಶಿಫ್ಟ್ ಆದೆವು. ಮೊದಲು ಕನ್ನಡ ಚಿತ್ರರಂಗ ಚೆನ್ನೈನಲ್ಲೇ ಇತ್ತಲ್ಲ, ಹಾಗಾಗಿ ನಾವೆಲ್ಲ ಅಲ್ಲೇ ಇದ್ದೆವು. ಯಾವಾಗ ಚಿತ್ರರಂಗ ಬೆಂಗಳೂರಿಗೆ ಸ್ಥಳಾಂತರಗೊಂಡಿತೋ, ಆಗ ನನ್ನ ಅಜ್ಜಿ ಮತ್ತು ಕುಟುಂಬದವರೆಲ್ಲರೂ ಇಲ್ಲಿಗೆ ಬಂದರು. ಅವರ ಜೊತೆ ನಾನು ಕೂಡ ಬೆಂಗಳೂರಿಗೆ ಬಂದೆ.
ನಾನು ಚಿಕ್ಕವಳಿದ್ದಾಗಿನಿಂದಲೂ ಅಜ್ಜಿಯ ಜೊತೆ ಶೂಟಿಂಗ್ಗೆ ಹೋಗುತ್ತಿದ್ದೆ. ಆದರೆ ನಟಿಯಾಗಬೇಕೆಂಬ ಆಲೋಚನೆ ಆಗಿರಲಿಲ್ಲ. ನಾನು 10ನೇ ತರಗತಿಯಲ್ಲಿದ್ದಾಗ ನಮ್ಮ ಅಜ್ಜಿ ಜೊತೆ ಇಟಿವಿಯ 'ಪ್ರೇಯಸಿ ಪ್ರೇಯಸಿ' ಧಾರಾವಾಹಿಯ ಶೂಟಿಂಗ್ಗೆ ಹೋಗಿದ್ದೆ. ಅಲ್ಲಿ ಅವರು ನಿಮ್ಮ ಮೊಮ್ಮಗಳ ಕೈಲಿ ನಟಿಸಿ ಎಂದು ಕೇಳಿಕೊಂಡಾಗ ಒಂದು ಸಣ್ಣ ಪಾತ್ರ ಮಾಡಿದ್ದೆ. ಆಮೇಲೆ ಕಾಲೇಜು, ಎನ್ಸಿಸಿ ಎಂದು ನಾನು ಆ ಕಡೆಯೇ ಹೋಗುತ್ತೇನೆ ಎಂದುಕೊಂಡಿದ್ದೆ, ಆದರೆ ನನ್ನ ಹಣೆಬರಹ ಚಿತ್ರರಂಗದಲ್ಲೇ ಇತ್ತು.
ಬಣ್ಣದ ಲೋಕದಲ್ಲಿ 20 ವರ್ಷಗಳ ಪಯಣ ಹೇಗಿತ್ತು?
ದೀಪಿಕಾ ಶೆಟ್ಟಿ: ಅದೊಂದು ಅದ್ಭುತವಾದ ಪ್ರಯಾಣ. ನಾನು ಒಬ್ಬ ವ್ಯಕ್ತಿಯಾಗಿ ರೂಪಗೊಳ್ಳಲು ನಾನು ಮಾಡಿದ ಪಾತ್ರಗಳೇ ಕಾರಣ. ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ; ಆರ್ಥಿಕವಾಗಿ ಮತ್ತು ಸಂಬಂಧಗಳ ವಿಷಯದಲ್ಲೂ ಬಹಳಷ್ಟು ಏರಿಳಿತಗಳಾಗಿವೆ. ನನಗೆ ಬಹಳ ಆಪ್ತರಾಗಿದ್ದವರನ್ನು ಕಳೆದುಕೊಂಡಿದ್ದೇನೆ. ಒಂದು ವೇಳೆ ನಾನು ಈ ವೃತ್ತಿಯಲ್ಲಿ ಇಲ್ಲದಿದ್ದರೆ, ಆ ನೋವುಗಳಿಂದ ಹೊರಬಂದು ಮತ್ತೆ ನಗುನಗುತ್ತಾ ಜೀವನ ನಡೆಸಲು ನನಗೆ ಕಷ್ಟವಾಗುತ್ತಿತ್ತು.
ಈ 20 ವರ್ಷಗಳಲ್ಲಿ ನನಗೆ ಯಾವುದೇ ಕೆಟ್ಟ ಅನುಭವಗಳಾಗಿಲ್ಲ. ಶೂಟಿಂಗ್ ಸೆಟ್ಗಳಲ್ಲಿ ಆಗುವ ಸಣ್ಣಪುಟ್ಟ ವಿಚಾರಗಳನ್ನು ಹೊರತುಪಡಿಸಿ, ನನಗೆ ಯಾವುದೇ ದೊಡ್ಡ ಹಿನ್ನಡೆಯಾಗಿಲ್ಲ. ನಾನು ನಟನೆಯನ್ನು ಗಂಭೀರವಾಗಿ ವೃತ್ತಿಯನ್ನಾಗಿ ಸ್ವೀಕರಿಸಿದ ಮೇಲೆ, ನನ್ನ ಮಗು ಹುಟ್ಟಿದಾಗ ಕೇವಲ ಎರಡು ತಿಂಗಳು ಮಾತ್ರ ವಿರಾಮ ತೆಗೆದುಕೊಂಡಿದ್ದೆ. ಅದನ್ನು ಬಿಟ್ಟರೆ ದೇವರು ನನಗೆ ಸದಾ ಸಾಲು ಸಾಲು ಅವಕಾಶಗಳನ್ನು ನೀಡಿದ್ದಾನೆ; ಕೆಲಸವಿಲ್ಲದೆ ನಾನು ಮನೆಯಲ್ಲಿ ಕುಳಿತ ದಿನಗಳೇ ಇಲ್ಲ.
ನಾಯಕಿಯಿಂದ ಈಗ ತಾಯಿ ಪಾತ್ರಕ್ಕೆ ಬಂದಿದ್ದೀರಿ, ಈ ಬದಲಾವಣೆ ಹೇಗೆ ಅನ್ನಿಸುತ್ತಿದೆ?
ದೀಪಿಕಾ ಶೆಟ್ಟಿ: ನಾನು ಮೊದಲ ಬಾರಿಗೆ ಇಷ್ಟು ದೊಡ್ಡ ತಾಯಿ ಪಾತ್ರ ಮಾಡುತ್ತಿರುವುದರಿಂದ ಮಾನಸಿಕವಾಗಿ ಸಿದ್ಧವಾಗಿದ್ದೆ. ಯಾಕೆಂದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನಟಿಸಲು 40 ವರ್ಷ ದಾಟಿದ ನಂತರ ಸ್ಕ್ರಿಪ್ಟ್ಗಳು ಸಿಗುವುದು ಬಹಳ ಕಡಿಮೆ. ಹಾಗಾಗಿ ಅತ್ತೆ ಅಥವಾ ಚಿಕ್ಕಮ್ಮನಂತಹ ಪಾತ್ರಗಳು ಬರಬಹುದು ಎಂದು ನಾನು ಅಂದುಕೊಂಡಿದ್ದೆ, ಆ ಸಮಯದಲ್ಲಿ ಈ ತಾಯಿ ಪಾತ್ರ ಬಂತು. ಮೊದಲು ಒಪ್ಪಿಕೊಳ್ಳಲು ಸ್ವಲ್ಪ ಹಿಂದೇಟು ಹಾಕಿದರೂ, ಕಥೆ ಮತ್ತು ನನಗೆ ಸಿಕ್ಕ ಸ್ಕ್ರೀನ್ ಸ್ಪೇಸ್ ನೋಡಿ ಈ ಪಾತ್ರ ನನಗೆ ತುಂಬಾ ಇಷ್ಟವಾಯಿತು. ಮೊದಲ ದಿನ ಶೂಟಿಂಗ್ ಸೆಟ್ಗೆ ಹೋದಾಗ ಈ ಪಾತ್ರವನ್ನು ನಿಭಾಯಿಸಲು ಸಾಧ್ಯವೇ ಎಂಬ ಭಯ ಮತ್ತು ಟೆನ್ಶನ್ ನನಗಿತ್ತು. ಆದರೆ ಉತ್ತಮವಾದ ಮತ್ತು ಅನುಭವವಿರುವ ತಂಡದ ಜೊತೆ ಈ ಬದಲಾವಣೆಯ ಹಂತ ನನಗೆ ಸುಲಭವಾಯಿತು.

ಇಂದಿನ ಕಾಂಪಿಟೇಷನ್ ನಡುವೆ ನಿಮ್ಮನ್ನು ನೀವು ಹೇಗೆ ಅಪ್ಡೇಟ್ ಮಾಡಿಕೊಳ್ತೀರಿ?
ದೀಪಿಕಾ ಶೆಟ್ಟಿ: ಅಪ್ಡೇಟ್ ಆಗಿರುವುದಕ್ಕೆ ನನ್ನ ಕೆಲಸದ ವೈಖರಿಯೇ ಮುಖ್ಯ ಕಾರಣ ಎಂದು ನಾನು ನಂಬುತ್ತೇನೆ. ನನ್ನ ಪ್ರಕಾರ ನಮ್ಮನ್ನು ಗುರುತಿಸುವುದು ನಾವು ಮಾಡುವ ಕೆಲಸ ಹಾಗೂ ನಮ್ಮ ಐಡೆಂಟಿಟಿಗೆ ಕೆಲಸವೇ ತುಂಬಾ ಮುಖ್ಯ. ಹಾಗಾಗಿ ನಾನು ನನ್ನ ಕೆಲಸಕ್ಕೆ ಶೇ. 100 ರಷ್ಟು ಶ್ರಮ ಮತ್ತು ಪ್ರೀತಿಯನ್ನು ನೀಡುತ್ತೇನೆ.
ಪ್ರತಿದಿನವೂ ನನಗೆ ಒಂದು ಕಲಿಕೆಯ ಪ್ರಕ್ರಿಯೆಯಾಗಿದೆ. ನನ್ನ ಜೊತೆ ಕೆಲಸ ಮಾಡುವ ಹೊಸ ಪ್ರತಿಭೆಗಳನ್ನು ನೋಡಿ ನಾನು ಪ್ರತಿದಿನ ಒಂದಲ್ಲ ಒಂದು ವಿಷಯವನ್ನು ಕಲಿಯುತ್ತೇನೆ. ಅದು ಮೇಕಪ್, ಲಿಪ್ಸ್ಟಿಕ್ ಅಥವಾ ಕಾಸ್ಟ್ಯೂಮ್ಸ್ ಇರಬಹುದು ಇಲ್ಲವೇ ಮಾರುಕಟ್ಟೆಯಲ್ಲಿನ ಹೊಸ ಟ್ರೆಂಡ್ ಇರಬಹುದು, ಪ್ರತಿಯೊಂದೂ ನನಗೆ ಹೊಸಬರ ಜೊತೆ ಇದ್ದಾಗ ಕಲಿಯಲು ತುಂಬಾ ಖುಷಿ ನೀಡುತ್ತದೆ.
ನಿಮ್ಮ ಅಜ್ಜಿ ಲಕ್ಷ್ಮಿ ದೇವಮ್ಮ ಅವರಿಂದ ನೀವು ಕಲಿತ ದೊಡ್ಡ ಪಾಠ ಏನು?
ದೀಪಿಕಾ ಶೆಟ್ಟಿ: ನಮ್ಮ ಅಜ್ಜಿಯೇ ನನಗೆ ದೊಡ್ಡ ಸ್ಪೂರ್ತಿ. ಅವರಿಂದ ನಾನು ಕಲಿತ ದೊಡ್ಡ ಪಾಠ ಅಂದರೆ ಅದು 'ತಾಳ್ಮೆ'. ಅಜ್ಜಿಯ ಜೊತೆ ನಾನು ಶೂಟಿಂಗ್ಗೆ ಹೋಗುತ್ತಿದ್ದಾಗ, ಅವರು ಆಗಲೇ ದೊಡ್ಡ ನಟಿಯಾಗಿದ್ದರು. ಆದರೂ ಬೆಳಿಗ್ಗೆ ಶೂಟಿಂಗ್ಗೆ ಹೋದರೆ ಅವರ ಶಾರ್ಟ್ ಬರುವುದು ಸಂಜೆ. ಅಷ್ಟಾದರೂ ಅವರು ಯಾವತ್ತೂ 'ನನ್ನನ್ನು ಯಾಕೆ ಇಷ್ಟು ಬೇಗ ಕರೆಸಿದ್ದೀರಿ?' ಎಂದು ಯಾರನ್ನೂ ಪ್ರಶ್ನಿಸುತ್ತಿರಲಿಲ್ಲ. ಅವರ ಆ ತಾಳ್ಮೆಯನ್ನು ನೋಡಿ ಜೀವನದಲ್ಲಿ 'ತಾಳಿದವನು ಬಾಳಿಯಾನು' ಎನ್ನುವ ಮೌಲ್ಯವನ್ನು ನಾನು ಕಲಿತೆ.
ಯಾವುದಾದರೂ ವಿಶೇಷ ಘಟನೆಯನ್ನು ಅಜ್ಜಿ ನಿಮ್ಮ ಹತ್ತಿರ ಹೇಳಿದ್ದಾರಾ?
ದೀಪಿಕಾ ಶೆಟ್ಟಿ: ಹೌದು, ಅಜ್ಜಿ ಯಾವಾಗಲೂ ನರಸಿಂಹರಾಜು ಅವರ ಕಾಮಿಡಿ ಸೀನ್ ಹಾಗೂ ಅವರ ಟೈಮಿಂಗ್ ಬಗ್ಗೆ ಹೇಳ್ತಾ ಇರುತ್ತಾರೆ. ಅದರಲ್ಲೂ ಬಾಲಣ್ಣ ಅವರ ಜೊತೆ ಆಕ್ಟ್ ಮಾಡ್ತಾ ಇದ್ದಾಗ ನಡೆದ ಒಂದು ಘಟನೆ ತುಂಬಾ ಫೇಮಸ್. ಬಾಲಣ್ಣ ಅವರಿಗೆ ಕಿವಿ ಸ್ವಲ್ಪ ಕಡಿಮೆ ಕೇಳಿಸ್ತಾ ಇತ್ತಂತೆ. ಹಾಗಾಗಿ ನರಸಿಂಹರಾಜು ಅವರು ತಮ್ಮ ಡೈಲಾಗ್ ಮುಗಿದ ತಕ್ಷಣ ಬಾಲಣ್ಣ ಅವರ ಕೈ ಒತ್ತುತ್ತಿದ್ದರು. ಕೈ ಒತ್ತಿದ ತಕ್ಷಣ ಬಾಲಣ್ಣ ಅವರು ತಮ್ಮ ಡೈಲಾಗ್ ಶುರು ಮಾಡುತ್ತಿದ್ದರು. ಆದರೆ ಇವರಿಬ್ಬರ ಕಾಮಿಡಿ ಎಷ್ಟು ಚೆನ್ನಾಗಿ ವರ್ಕ್ಔಟ್ ಆಗ್ತಾ ಇತ್ತು ಅಂದ್ರೆ, ಈ ವಿಷಯ ಪ್ರೇಕ್ಷಕರಿಗೆ ಯಾವತ್ತೂ ಗೊತ್ತೇ ಆಗ್ತಾ ಇರಲಿಲ್ಲ. ಇನ್ನು ನಾನು ಅಜ್ಜಿಯ ಜೊತೆಯಲ್ಲೇ ಬೆಳೆದವಳು. ಆರು ತಿಂಗಳ ಮಗುವಾಗಿದ್ದಾಗಿನಿಂದಲೂ ಅವರು ನನ್ನನ್ನು ಶೂಟಿಂಗ್ಗೆ ಕರ್ಕೊಂಡು ಹೋಗ್ತಾ ಇದ್ದರು. ಹಾಗಾಗಿ ಅವರಿಂದ ನೋಡಿ ಕಲಿಯೋದು ನನಗೆ ತುಂಬಾ ಹೆಲ್ಪ್ ಆಯ್ತು.
ಅಂತಹ ದಿಗ್ಗಜ ನಟರ ಕುಟುಂಬದಿಂದ ಬಂದ ಮೇಲೆ, ಆ ಹೆಸರನ್ನು ಉಳಿಸಿಕೊಳ್ಳುವ ಒತ್ತಡ ನಿಮ್ಮ ಮೇಲೆ ಇದೆಯೇ?
ದೀಪಿಕಾ ಶೆಟ್ಟಿ: ಖಂಡಿತವಾಗಿಯೂ ಜವಾಬ್ದಾರಿ ಇದೆ, ಆದರೆ ಒತ್ತಡವಿಲ್ಲ. ನಮ್ಮ ಅಜ್ಜಿಯಾಗಲಿ ಅಥವಾ ಮನೆಯವರಾಗಲಿ ನೀನು ಹೀಗೆ ಬದುಕಬೇಕು ಅಥವಾ ಇಂತಹುದೇ ಮಾಡಬೇಕು ಎಂದು ನನಗೆ ಯಾವುದೇ ಮಿತಿಗಳನ್ನು ಹೇರಿಲ್ಲ. ಆದರೆ ಅಂತಹ ದೊಡ್ಡ ಕುಟುಂಬದ ಮೊಮ್ಮಗಳು ಅಂದಾಗ ಸಹಜವಾಗಿಯೇ ಜನರ ನಿರೀಕ್ಷೆ ಹೆಚ್ಚಿರುತ್ತದೆ. ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಅವರ ಮೊಮ್ಮಗಳು ಎಂಬ ವಿಷಯ ಯಾರಿಗೂ ಅಷ್ಟು ಸುಲಭವಾಗಿ ಗೊತ್ತಾಗುತ್ತಿರಲಿಲ್ಲ. ಒಂದೆರಡು ಶಾಟ್ ಮುಗಿಸಿದ ಮೇಲೆ 'ಚೆನ್ನಾಗಿ ಮಾಡಿದ್ದೀಯಲ್ಲ' ಎಂದು ಜನ ಹೇಳುತ್ತಿದ್ದರು, ಆಮೇಲೆ ಅವರಿಗೆ ನಾನು ಲಕ್ಷ್ಮೀದೇವಿ ಅವರ ಮೊಮ್ಮಗಳು ಎಂದು ತಿಳಿಯುತ್ತಿತ್ತು. ನಾನು ಎಲ್ಲೂ ಅವರ ಹೆಸರನ್ನು ಬಳಸಿಕೊಂಡಿಲ್ಲ. ಆದರೆ ಈಗ ಸೋಶಿಯಲ್ ಮೀಡಿಯಾದಿಂದಾಗಿ ನಾನು ಅವರ ಮೊಮ್ಮಗಳು ಎಂಬ ವಿಷಯ ಎಲ್ಲರಿಗೂ ತಿಳಿಯುತ್ತಿದೆ. ಆದರೂ ನಾನು ಯಾವುದೇ ಹೆಜ್ಜೆ ಇಡಬೇಕಾದರೂ ಅಜ್ಜಿಯ ಹೆಸರು ಮತ್ತು ಅವರ ಪರಂಪರೆಯನ್ನು ಕಾಪಾಡಬೇಕು ಎಂದು ಎರಡು ಬಾರಿ ಯೋಚಿಸಿಯೇ ನಿರ್ಧಾರ ತೆಗೆದುಕೊಳ್ಳುತ್ತೇನೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಆ ಜೋಕರ್ ವೇಷದ ಐಡಿಯಾ ಯಾರದ್ದು?
ದೀಪಿಕಾ ಶೆಟ್ಟಿ: ಈ ಐಡಿಯಾ ನಮ್ಮ ಡೈರೆಕ್ಷನ್ ಟೀಮ್, ಪ್ರೊಡಕ್ಷನ್ ಹೌಸ್ ಮತ್ತು ಚಾನೆಲ್ ಅವರದ್ದು. ನಾನು ಸೀರಿಯಲ್ ಒಪ್ಪಿಕೊಂಡಾಗಲೇ ಅವರು ಇಂತಹ ಒಂದು ಸನ್ನಿವೇಶ ಬರುತ್ತದೆ ಎಂದು ಹೇಳಿದ್ದರು. ಒಬ್ಬ ನಟಿಯಾಗಿ ಆ ಕ್ಷಣದಿಂದಲೇ ನನ್ನ ಮೇಲೆ ಒಂದು ಒತ್ತಡವಿತ್ತು, ಯಾಕೆಂದರೆ ಈ ಸನ್ನಿವೇಶದ ಮೇಲೆ ಚಿತ್ರತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಈ ಪಾತ್ರಕ್ಕೆ ಇಷ್ಟು ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ತಾಯಿ ಪಾತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಇಷ್ಟು ಪ್ರಾಮುಖ್ಯತೆ ನೀಡಿರುವುದು ನನಗೆ ತುಂಬಾ ಖುಷಿ ನೀಡಿದೆ. ಆರಂಭದಲ್ಲಿ ತಾಯಿ ಈ ರೀತಿ ವೇಷ ಹಾಕುತ್ತಾಳಾ ಎಂದು ಜನರು ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದರು, ಆದರೆ ಈಗ ಎಲ್ಲರೂ ಅದನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ನಮ್ಮ ಅಮ್ಮ ನಮಗೆ ನೆನಪಾದರು ಎಂದು ಜನರು ಹೇಳಿದಾಗ ನನಗೆ ಸಿಕ್ಕ ದೊಡ್ಡ ಪ್ರಶಸ್ತಿ ಅದೇ ಅನ್ನಿಸುತ್ತದೆ.
ಮಗಳ ಮದುವೆಗೆ ಆ ರೀತಿ ವೇಷ ಹಾಕಿದ ಭಾವುಕ ಸೀನ್ಗೆ ಸಿಗುತ್ತಿರುವ ಪ್ರತಿಕ್ರಿಯೆ ಹೇಗಿದೆ?
ದೀಪಿಕಾ ಶೆಟ್ಟಿ: ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ಧಾರಾವಾಹಿಯ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸುವಾಗ ನಾವೇ ತುಂಬಾ ಭಾವುಕರಾಗಿದ್ದೆವು. ನಾನು ಮತ್ತು ಗೌರಿ ಪಾತ್ರ ಮಾಡುವ ಹುಡುಗಿ ಎಷ್ಟೋ ದೃಶ್ಯಗಳಲ್ಲಿ ನಿಜವಾಗಿಯೇ ಅತ್ತಿದ್ದೇವೆ. ನಮ್ಮ ನಿರ್ದೇಶಕರು ಕೂಡ ನಮಗೆ ಭಾವುಕರಾಗಲು ಸಾಕಷ್ಟು ಸಮಯ ನೀಡುತ್ತಿದ್ದರು. ನಾವು ಅಳುವ ದೃಶ್ಯಗಳಿಗೆ ಗ್ಲಿಸರಿನ್ ಅನ್ನು ಬಹಳ ಕಡಿಮೆ ಬಳಸುತ್ತಿದ್ದೆವು ಅಥವಾ ಬಳಸುತ್ತಲೇ ಇರಲಿಲ್ಲ. ಅದರಲ್ಲೂ ಮದುವೆಯ ನಂತರ ಗೌರಿಯನ್ನು ಕಳುಹಿಸಿಕೊಡುವ ಸನ್ನಿವೇಶವಂತೂ ನಮಗೆ ತುಂಬಾ ಎಮೋಷನಲ್ ಆಗಿತ್ತು.
ನಿಮ್ಮ ಅಜ್ಜಿಯಂತೆ ನಿಮಗೂ ಪೂರ್ಣ ಪ್ರಮಾಣದ ಹಾಸ್ಯ ಪಾತ್ರ ಮಾಡುವ ಆಸೆ ಇದೆಯೇ?
ದೀಪಿಕಾ ಶೆಟ್ಟಿ: ಖಂಡಿತವಾಗಿಯೂ ಮಾಡಿದ್ದೇನೆ. ನನ್ನ ಹಿಂದಿನ ಪ್ರಾಜೆಕ್ಟ್ 'ಗೌರಿಪುರದ ಗಯಾಳಿಗಳು' ಸುಮಾರು 1200 ಎಪಿಸೋಡ್ಗಳನ್ನು ಪೂರೈಸಿತ್ತು. ಮೊದಲು ನಾನೇನು ಹಾಸ್ಯ ಮಾಡುತ್ತೇನಾ ಎಂಬ ಆಶ್ಚರ್ಯ ನನಗಿತ್ತು, ಆದರೆ ಅಲ್ಲಿನ ತಂಡ ಮತ್ತು ಕಲಾವಿದರಿಂದ ಅದು ಸಾಧ್ಯವಾಯಿತು. ಅಲ್ಲಿ ವೀಣಾ ಎಂಬ ಕಲಾವಿದರಿದ್ದರು, ಅವರ ನಟನೆ ತುಂಬಾ ಲೌಡ್ ಆಗಿರುತ್ತಿತ್ತು. ಅವರ ಎಮೋಷನ್ಸ್ ನೋಡಿ ನಾನೂ ಕೂಡ ಲೌಡ್ ಆಗಿ ಎಮೋಟ್ ಮಾಡಲು ಶುರು ಮಾಡಿದೆ, ಅದು ನನ್ನ ಫೇವರೆಟ್ ಪ್ರಾಜೆಕ್ಟ್ಗಳಲ್ಲಿ ಒಂದು. ಹಾಸ್ಯ ಮಾಡುವುದು ಬಹಳ ಕಷ್ಟದ ಕೆಲಸ, ನಾವು ಶೂಟಿಂಗ್ ಸಮಯದಲ್ಲಿ ಎಷ್ಟೋ ನಕ್ಕಿದ್ದೇವೆ ಮತ್ತು ಎಷ್ಟೋ ನೋವುಗಳನ್ನು ಮರೆತಿದ್ದೇವೆ. ಕಲಾವಿದರಿಗೆ ಇದು ಒಂದು ವರ ಮತ್ತು ಶಾಪ ಎರಡೂ ಹೌದು. ವರವೇನೆಂದರೆ ಆ ಕ್ಷಣಕ್ಕೆ ನಾವು ನಮ್ಮೊಳಗಿನ ನೋವನ್ನು ಮರೆತು ಪಾತ್ರಕ್ಕೆ ತಕ್ಕಂತೆ ಬದುಕುತ್ತೇವೆ, ಆದರೆ ಒಳಗಡೆ ಒಂದು ಹೋರಾಟ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
'ಗೌರಿ ಕಲ್ಯಾಣ'ದಲ್ಲಿ ನಿಮ್ಮ ಪಾತ್ರಕ್ಕೆ ಸಿಗುತ್ತಿರುವ ಸ್ಕೋಪ್ ಬಗ್ಗೆ ಏನು ಹೇಳ್ತೀರಿ?
ದೀಪಿಕಾ ಶೆಟ್ಟಿ: ನನಗೆ ತುಂಬಾ ಖುಷಿಯಿದೆ. ಇದು ಯಾವುದೋ ಜನ್ಮದ ಪುಣ್ಯ, ನನ್ನ ಹಿರಿಯರ ಆಶೀರ್ವಾದ ಮತ್ತು ಮುಖ್ಯವಾಗಿ ನನ್ನ ತಾಯಿಯ ಆಶೀರ್ವಾದ ಎಂದು ನಾನು ನಂಬಿದ್ದೇನೆ. ಈ ಹಿಂದೆ ಅನೇಕ ವರ್ಷಗಳಿಂದ ನಾನು ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡಿದ್ದರೂ, ಈಗಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಈ ಪಾತ್ರವು ನನಗೆ ಒಂದು ದೊಡ್ಡ 'ಬ್ರೇಕ್' ನೀಡಿದೆ. ಪಾತ್ರದ ಪ್ರೋಮೋ ಬಿಡುಗಡೆಯಾದಾಗ ಚಿತ್ರರಂಗದ ನನ್ನ ಸ್ನೇಹಿತರು ಮಾತ್ರವಲ್ಲದೆ, ತಾಂತ್ರಿಕ ಜ್ಞಾನವಿರುವ ತಂತ್ರಜ್ಞರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ನನಗೆ ವೃತ್ತಿ ಬದುಕಿನಲ್ಲಿ ಹೆಚ್ಚಿನ ತೃಪ್ತಿಯನ್ನು ನೀಡಿದೆ. ಆದರೆ ಎಲ್ಲೆಡೆ ಸಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತಿದ್ದಂತೆ, ನನಗೆ ಸಂತೋಷಕ್ಕಿಂತ ಹೆಚ್ಚಾಗಿ ಮುಂದಿನ ಸಂಚಿಕೆಗಳಲ್ಲಿ ಇನ್ನು ಚೆನ್ನಾಗಿ ನಟಿಸಬೇಕೆಂಬ ಜವಾಬ್ದಾರಿ ಮತ್ತು ಆತಂಕ ಹೆಚ್ಚಾಯಿತು. ಈ ಪಾತ್ರಕ್ಕೆ ನಾನೇ ಸೂಕ್ತ ಎಂದು ನಿರ್ಧರಿಸಿ ಅವಕಾಶ ನೀಡಿದ ನಿರ್ದೇಶಕ ರಾಮ್ಜಿ ಸರ್ ಮತ್ತು ವಾಹಿನಿಗೆ ನಾನು ಯಾವಾಗಲೂ ಕೃತಜ್ಞಳಾಗಿರುತ್ತೇನೆ.
ಬೆಳ್ಳಿ ಪರದೆಯ ಮೇಲೆ (ಸಿನಿಮಾಗಳಲ್ಲಿ) ನಿಮ್ಮ ಮುಂದಿನ ಪ್ಲಾನ್ ಏನು?
ದೀಪಿಕಾ ಶೆಟ್ಟಿ: ಯಾವುದೇ ಪ್ಲಾನ್ ಇಟ್ಟುಕೊಂಡಿಲ್ಲ. ನಾನು ಯಾವಾಗಲೂ ಒಂದು ವಿಷಯವನ್ನು ಬಲವಾಗಿ ನಂಬುತ್ತೇನೆ; ಅದೇನೆಂದರೆ ನಾವು ಮಾತನಾಡಬಾರದು, ನಮ್ಮ ಕೆಲಸ ಮಾತನಾಡಬೇಕು. ಕೆಲಸದ ಬಗ್ಗೆ ಮಾತನಾಡುವಂತಹ ರೀತಿಯಲ್ಲಿ ನಾನು ಸದಾ ಏನಾದರೂ ಮಾಡುತ್ತಲೇ ಇರಬೇಕು ಅನ್ನೋದು ನನ್ನ ತಲೆಯಲ್ಲಿದೆ.
ಇಂಡಸ್ಟ್ರಿಗೆ ಬರುವ ಹೊಸ ಕಲಾವಿದರಿಗೆ ನೀವು ನೀಡುವ ಸಲಹೆ ಏನು?
ದೀಪಿಕಾ ಶೆಟ್ಟಿ: ಇಂದಿನ ಹೊಸ ಕಲಾವಿದರು ನಮಗಿಂತ ತುಂಬಾ ಇಂಟೆಲಿಜೆಂಟ್ ಇದ್ದಾರೆ, ಹಾಗಾಗಿ ಅವರಿಗೆ ಸಲಹೆ ಕೊಡುವ ಹಾಗಿಲ್ಲ. ಆದರೆ ನಾನು ನಂಬಿರುವ ಒಂದು ತತ್ವದ ಬಗ್ಗೆ ಹೇಳಬಲ್ಲೆ: ನಾವು ನಮ್ಮ ಕೆಲಸಕ್ಕೆ ಎಷ್ಟು ಕೊಡುತ್ತೇವೆಯೋ, ಆ ಕೆಲಸ ನಮಗೆ ಅದರ ಎರಡರಷ್ಟು ಪ್ರತಿಫಲ ನೀಡುತ್ತದೆ. ನಾವು ಕೆಲಸ ಮಾಡುವುದರಿಂದ ನಮಗೆ ಹಣ, ಜನಪ್ರಿಯತೆ, ಮರ್ಯಾದೆ ಸಿಗುತ್ತದೆ ಮತ್ತು ಜನ ನಮ್ಮನ್ನು ಪ್ರೀತಿಸುತ್ತಾರೆ ಹಾಗೂ ಗೌರವಿಸುತ್ತಾರೆ. ನಾವು ನೂರಕ್ಕೆ ನೂರರಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ಆ ಭಗವಂತ ಮತ್ತು ಕಲಾ ಸರಸ್ವತಿ ನಮಗೆ ಇನ್ನೂರು ಪಟ್ಟು ಹೆಚ್ಚಿನ ಫಲವನ್ನು ನೀಡುತ್ತಾರೆ ಅನ್ನೋದು ನನ್ನ ನಂಬಿಕೆ.
ನಿಮ್ಮ ವೃತ್ತಿಜೀವನಕ್ಕೆ ಮನೆಯವರ ಪ್ರೋತ್ಸಾಹ ಹೇಗಿದೆ?
ದೀಪಿಕಾ ಶೆಟ್ಟಿ: ನನ್ನ ಮನೆಯವರು ಯಾವತ್ತೂ ನನಗೆ ಇದನ್ನು ಮಾಡಬೇಡ, ಅದನ್ನು ಮಾಡಬೇಡ ಎಂದು ಹೇಳಲೇ ಇಲ್ಲ. ನನಗೆ ನನ್ನ ತವರು ಮನೆಯಲ್ಲಿ ಎಷ್ಟು ಪ್ರೀತಿ ಸಿಕ್ಕಿದೆಯೋ, ನನ್ನ ಗಂಡನ ಮನೆಯಲ್ಲಿ ಅದಕ್ಕಿಂತಲೂ ಹೆಚ್ಚಿನ ಪ್ರೀತಿ ಮತ್ತು ಪ್ರೋತ್ಸಾಹ ಸಿಕ್ಕಿದೆ. ನಾನು ಬರಿ ಆಕ್ಟಿಂಗ್ ಮಾಡಿಕೊಂಡಿದ್ದೆ, ಆದರೆ ನನ್ನ ಗಂಡನ ಪ್ರೋತ್ಸಾಹದಿಂದ ನಾನು ಸ್ಕ್ರಿಪ್ಟ್ ಮತ್ತು ಸ್ಕ್ರೀನ್ ಪ್ಲೇ ಬರೆಯುವುದನ್ನು ಕೂಡ ಶುರು ಮಾಡಿದೆ. "ನೀನು ಬರಿ ನಟನೆಗೆ ಮಾತ್ರ ಸೀಮಿತವಾಗಬೇಡ" ಎಂದು ಅವರು ಹೇಳಿದ್ದು ನನ್ನ ವೃತ್ತಿ ಬದುಕಿನ ಗಡಿಯನ್ನು ವಿಸ್ತರಿಸಲು ಸಹಾಯ ಮಾಡಿತು. ನನ್ನ ತಾಯಿ ಕೂಡ ಪ್ರತಿಯೊಂದು ವಿಷಯದಲ್ಲೂ ನನಗೆ ದೊಡ್ಡ ಬೆನ್ನೆಲುಬಾಗಿ ನಿಂತಿದ್ದರು. ದುರದೃಷ್ಟವಶಾತ್, ಜುಲೈನಲ್ಲಿ ನಾನು 'ಗೌರಿ ಕಲ್ಯಾಣ' ಧಾರಾವಾಹಿಗೆ ಆಡಿಷನ್ ಕೊಟ್ಟ ನಂತರ ಆಗಸ್ಟ್ನಲ್ಲಿ ನಾನು ಅವರನ್ನು ಕಳೆದುಕೊಂಡೆ. ಇಂದು ಇಷ್ಟು ಜನ ನನ್ನನ್ನು ಮತ್ತು ನನ್ನ ಪಾತ್ರವನ್ನು ಮೆಚ್ಚಿಕೊಳ್ಳುತ್ತಿರುವುದನ್ನು ನೋಡಲು ಅವರು ಇಲ್ಲವಲ್ಲ ಅನ್ನೋ ಕೊರಗು ನನಗೆ ಯಾವಾಗಲೂ ಇರುತ್ತದೆ. ಆದರೆ ಎಲ್ಲೋ ಮೇಲೆ ನಿಂತು ಅವರೇ ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಎಂಬ ನಂಬಿಕೆ ನನಗಿದೆ.
ನಿಮ್ಮ ಅಭಿಮಾನಿಗಳಿಗೆ ನೀವು ಏನು ಹೇಳಲು ಇಷ್ಟಪಡುತ್ತೀರಿ?
ದೀಪಿಕಾ ಶೆಟ್ಟಿ: ಧನ್ಯವಾದ'ಗಳು ಎಂಬುದು ತುಂಬಾ ಚಿಕ್ಕ ಪದವಾಗುತ್ತದೆ, ಅವರ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಸದಾ ಕೃತಜ್ಞಳಾಗಿರುತ್ತೇನೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ನಾನು ಸದಾ ಕೆಲಸ ಮಾಡುತ್ತೇನೆ. ನನ್ನ ಜೀವನದಲ್ಲಿ ನಾನು ತುಂಬಾ ಲೋ (low) ಇದ್ದಾಗ ನನ್ನ ಪಾತ್ರಗಳೇ ನನ್ನ ಕೈಹಿಡಿದು ಮೇಲೆತ್ತಿವೆ, ಹಾಗಾಗಿ ನಾನು ನನ್ನ ಪ್ರತಿಯೊಂದು ಕೆಲಸಕ್ಕೂ ಶೇ. 100ರಷ್ಟು ಪರಿಶ್ರಮ ಹಾಕಲೇಬೇಕು. ನನ್ನ ಕೆಲಸವೇ ನನ್ನನ್ನು ಕಾಪಾಡಿದೆ, ಆದ್ದರಿಂದ ಅಭಿಮಾನಿಗಳನ್ನು ರಂಜಿಸಲು ನಾನು ಯಾವತ್ತೂ ಸೋಲುವುದಿಲ್ಲ; ಅವರ ಪ್ರೀತಿ ಮತ್ತು ಪ್ರೋತ್ಸಾಹ ಹೀಗೆ ಇರಲಿ ಎಂದು ಕೇಳಿಕೊಳ್ಳುತ್ತೇನೆ.


Click it and Unblock the Notifications











