For Quick Alerts
  ALLOW NOTIFICATIONS  
  For Daily Alerts

  ಮಯೂರಿಗೆ ಅವಮಾನ ಮಾಡಿದ್ದ ಆ ಜನರೇ ಕರೆದು ಸನ್ಮಾನ ಮಾಡಿದರು

  By Naveen
  |

  'ಮೊದಲು ಅವಮಾನ.. ನಂತರ ಅನುಮಾನ.. ಕೊನೆಗೆ ಸನ್ಮಾನ..' ಸಾಧನೆಯ ಹಾದಿಯಲ್ಲಿ ಹೊರಟವರಿಗೆ ಸಿಗುವ ಮೂರು ಹಂತಗಳು. ಅದೇ ರೀತಿ ಈ ಮೂರು ಹಂತಗಳನ್ನು ದಾಟಿ ಮಯೂರಿ ಇಂದು ಒಬ್ಬ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಬೆಳೆದು ನಿಂತ್ತಿದ್ದಾರೆ.

  'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ನಟಿಸಿದ್ದ ಮಯೂರಿ 'ಕೃಷ್ಣಲೀಲಾ' ಸಿನಿಮಾದ ಮೂಲಕ ಸಿನಿಮಾ ನಾಯಕಿ ಆಗಿದ್ದು ಎಲ್ಲರಿಗೂ ತಿಳಿದ ವಿಷಯ. ಆದರೆ 'ಕೃಷ್ಣಲೀಲಾ' ಚಿತ್ರದ ಹಿಂದಿನ ಅನೇಕ ಗೊತ್ತಿಲ್ಲದ ವಿಚಾರವನ್ನು ಮಯೂರಿ ಇಲ್ಲಿ ಹಂಚಿಕೊಂಡಿದ್ದಾರೆ.

  ಮೊದಲ ಚಿತ್ರಕ್ಕೆ ಅವಕಾಶ ಸಿಕ್ಕಿದ್ದು, ನಿರ್ದೇಶಕರ ಬಳಿ ಬೈಸಿಕೊಂಡಿದ್ದು, ರಿಲೀಸ್ ಆದ ಮೇಲೆ ಕದ್ದು ಮುಚ್ಚಿ ಸಿನಿಮಾ ನೋಡಿದ್ದು, ಎಲ್ಲ ಕಷ್ಟವನ್ನು ಎದುರಿಸಿ ಸಿನಿಮಾ ನೂರು ದಿನ ಪೂರೈಸಿದ್ದು ಹೀಗೆ ತಮ್ಮ ಎಲ್ಲ ಖುಷಿ ಮತ್ತು ದುಖಃದ ಘಟನೆಗಳ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಇಲ್ಲಿಂದ ನೀವುಂಟು.... ಅವರುಂಟು....

  ಸಂದರ್ಶನ : ನವೀನ.ಎಂ.ಎಸ್

  'ಕೃಷ್ಣಲೀಲಾ' ಮೊದಲು 'ಕೃಷ್ಣನ್ ಲವ್ ಸ್ಟೋರಿ 2' ಆಗಿತ್ತು..

  'ಕೃಷ್ಣಲೀಲಾ' ಮೊದಲು 'ಕೃಷ್ಣನ್ ಲವ್ ಸ್ಟೋರಿ 2' ಆಗಿತ್ತು..

  ''ಅಶ್ವಿನಿ ನಕ್ಷತ್ರ ಸೀರಿಯಲ್ ಮಾಡುವಾಗ ಸಿನಿಮಾಗಳ ಅವಕಾಶ ಬಂದವು. ಆದರೆ ನಾನು ನನ್ನ ಕೆಲಸಗಳಲ್ಲಿ ತೊಡಗಿದ್ದೆ. ಧಾರಾವಾಹಿ ಶುರು ಆದ 6 ತಿಂಗಳಿಗೆನೇ ಶಶಾಂತ್ ಸರ್ ಫೋನ್ ಮಾಡಿದರು. ಆಗ ಆ ಚಿತ್ರಕ್ಕೆ 'ಕೃಷ್ಣನ್ ಲವ್ ಸ್ಟೋರಿ 2' ಎಂಬ ಹೆಸರು ಇತ್ತು. ಆ ರೀತಿ ಅವರು ಹೇಳಿದಾಗ ಟೈಟಲ್ ಕೇಳಿಯೇ ನಾನು ಇಂಪ್ರೆಸ್ ಆದೆ. 'ಕೃಷ್ಣನ್ ಲವ್ ಸ್ಟೋರಿ' ಒಂದು ಒಳ್ಳೆಯ ಸಿನಿಮಾ ಅಲ್ಲದೆ ಅದು ಸೂಪರ್ ಹಿಟ್ ಆಗಿತ್ತು. ಸೋ, ಮೊದಲು ನಾನು ಕಥೆ ಕೇಳಿದೆ... ನನ್ನ ಪಾತ್ರ ತುಂಬ ಖುಷಿ ಆಯ್ತು. ನಾನು ಓಕೆ ಅಂದೆ.. ಅವರಿಗೆ ಕೂಡ ಇಷ್ಟ ಆಯ್ತು. ನನ್ನ ಮತ್ತು ಅಜಯ್ ಸರ್ ಜೋಡಿ ಕೂಡ ಚೆನ್ನಾಗಿ ಇತ್ತು. ಆಮೇಲೆ ಚಿತ್ರದ ಹೆಸರನ್ನು 'ಕೃಷ್ಣಲೀಲಾ' ಅಂತ ಬದಲಾಯಿಸಿದರು. ಆಗ ನನಗೆ ಚಿತ್ರದ ಟೈಟಲ್ ನಲ್ಲಿ ನನ್ನ ಪಾತ್ರದ ಹೆಸರು ಇದೆ ಎಂದು ಇನ್ನೂ ಜಾಸ್ತಿ ಖುಷಿ ಆಯ್ತು.''

  ಉತ್ಸಾಹ.. ಭಯ.. ಎರಡು ಇತ್ತು

  ಉತ್ಸಾಹ.. ಭಯ.. ಎರಡು ಇತ್ತು

  ''ಆ ವೇಳೆ ನನಗೆ ತುಂಬ ಭಯ ಇತ್ತು. ಅದೇ ರೀತಿ ತುಂಬ ಉತ್ಸಾಹ ಇತ್ತು. ಚಿತ್ರದಲ್ಲಿ ಹೀರೋ ಹೀರೋಯಿನ್ ಇಬ್ಬರು ಫೋನ್ ನಲ್ಲಿಯೇ ಲವ್ ಮಾಡುತ್ತಾರೆ.. ನಾನು ಕುಡಿದು ಮಾತನಾಡುವ ಸೀನ್ ಇದೆ.. ಇದೆಲ್ಲ ಕೇಳುವಾಗ ನಾನು ಬೇರೆ ಆಲೋಚನೆಯಲ್ಲಿ ಇದ್ದೇ. ಆದರೆ ಶೂಟಿಂಗ್, ಡಬ್ಬಿಂಗ್ ಮುಗಿದು ಸಿನಿಮಾ ನೂರು ದಿನ ಆದ ಮೇಲೆ ಮೈಸೂರಿನಲ್ಲಿ ಟಿಕೆಟ್ ಹಂಚಿದನ್ನು ನಾನು ಎಂದಿಗೂ ಮರೆಯುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಒಂದು ಸಿನಿಮಾ 100 ದಿನ ಓಡುವುದು ಬಹಳ ಕಷ್ಟ. ಆದರೆ ನನ್ನ ಮೊದಲ ಸಿನಿಮಾನೇ ನೂರು ದಿನ ಆಯ್ತು. ನನ್ನ ಪಾತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತು. ಇಡೀ ಚಿತ್ರತಂಡಕ್ಕೆ ನಾನು ಚಿರಋಣಿ.''

  ಸಿನಿಮಾ ಹೇಗೆ ಶೂಟ್ ಮಾಡುತ್ತಾರೆ ಎನ್ನುವ ಪ್ರಶ್ನೆ ಇತ್ತು..

  ಸಿನಿಮಾ ಹೇಗೆ ಶೂಟ್ ಮಾಡುತ್ತಾರೆ ಎನ್ನುವ ಪ್ರಶ್ನೆ ಇತ್ತು..

  ''ಶಶಾಂಕ್ ಸರ್ ಆ ಸಿನಿಮಾದ ಪ್ರಮೋಷನ್ ಕೂಡ ತುಂಬ ಬೇರೆ ರೀತಿಯೇ ಮಾಡಿದ್ದರು. ಚಿತ್ರೀಕರಣಕ್ಕೂ ಮುಂಚೆ ತುಂಬ ಅಭ್ಯಾಸ ಮಾಡಿದ್ವಿ. ಸೀರಿಯಲ್ ನಿಂದ ಬಂದಿದ್ದರಿಂದ ಸಿನಿಮಾದಲ್ಲಿ ಹೇಗೆ ಶೂಟ್ ಮಾಡುತ್ತಾರೆ ಎನ್ನುವ ಪ್ರಶ್ನೆ ಇರುತ್ತದೆ. ಅದಕ್ಕೆ ರಿಹರ್ಸಲ್ ಸಹಾಯ ಮಾಡಿತು. ನಾನು ಮುಂದೆ ಎಷ್ಟು ಸಿನಿಮಾ ಮಾಡ್ತಿನಿ.. ಬಿಡ್ತಿನಿ.. ಗೊತ್ತಿಲ್ಲ. ಆದರೆ ಮೊದಲನೇ ಸಿನಿಮಾ ಯಾವತ್ತು ನೆನಪಿನಲ್ಲಿ ಇರುತ್ತದೆ. ಆ ಚಿತ್ರದ ಬಗ್ಗೆ ಹೆಮ್ಮೆ ಪಡುತ್ತೇನೆ.''

  ನನ್ನ ಮೇಲೆ ಶಶಾಂಕ್ ಸರ್ ರೇಗಿದ್ದು ಇದೆ..

  ನನ್ನ ಮೇಲೆ ಶಶಾಂಕ್ ಸರ್ ರೇಗಿದ್ದು ಇದೆ..

  ''ಶಶಾಂಕ್ ಸರ್ ಎರಡು ಬಾರಿ ನನ್ನ ಮೇಲೆ ರೇಗಿದ್ದರು. ಅದು ಕಲಿಯುವ ದೃಷ್ಟಿಯಿಂದ ಹೇಳಿರುತ್ತಾರೆ. ಸಿನಿಮಾದ ಶೂಟಿಂಗ್ ಕೊನೆಯ ದಿನ 'ಮಯೂರಿಗೆ ಈವಾಗಲೇ ಎಷ್ಟಾಗತ್ತೊ ಅಷ್ಟು ಬೈದು ಬಿಡಬೇಕು.. ಮುಂದೆ ದೊಡ್ಡ ಹೀರೋಯಿನ್ ಆದ ಮೇಲೆ ಬೈಯೋಕ್ಕೆ ಆಗುತ್ತೊ ಇಲ್ವೋ..' ಅಂತ ನನಗೆ ಸ್ವಲ್ಪ ಬಿಲ್ಡಪ್ ಕೊಟ್ಟಿದ್ದರು. ನಾನು ಈಗ ದೊಡ್ಡ.. ಸಣ್ಣ... ಹೀರೋಯಿನ್ ಗಿಂತ ಒಳ್ಳೆಯ ಕಲಾವಿದೆ ಆಗಿದ್ದೇನೆ. ಈಗಲೂ ಅವರ ಆ ಮಾತು ನೆನಪಿಸಿಕೊಂಡು ನಗುತ್ತಿರುತ್ತೇನೆ.''

  ರವಿಚಂದ್ರನ್ ಸರ್, ಪುನೀತ್ ಸರ್ ಹೊಗಳಿದರು..

  ರವಿಚಂದ್ರನ್ ಸರ್, ಪುನೀತ್ ಸರ್ ಹೊಗಳಿದರು..

  ''ನಾನು ಆ ಸೀರಿಯಲ್ ಮಾಡುವಾಗಲೇ ಸಿನಿಮಾದ ರೀತಿ ಜನಪ್ರಿಯತೆ ಬಂದು ಬಿಟ್ಟಿತ್ತು. ಆದರೆ ನನಗೆ ಸಿನಿಮಾದವರ ಹೊಗಳಿಕೆ ಗೊತ್ತಿರಲಿಲ್ಲ. ಸಿನಿಮಾ ರಿಲೀಸ್ ಆದ ಮೇಲೆ ಚಿತ್ರರಂಗದಿಂದ ಹೊಗಳಿಕೆಗೆ ನೋಡಿ ತುಂಬ ಖುಷಿ ಆಯ್ತು. ಅದರಲ್ಲಿಯೂ ರವಿಚಂದ್ರನ್ ಸರ್ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ನೋಡಿ ಅಳು ಬಂತು ಅಂತ ಹೇಳಿದರು. ಪುನೀತ್ ಸರ್ ಇಂತಹ ಒಳ್ಳೆಯ ಚಿತ್ರಕ್ಕೆ ನಾನು ಹಾಡು ಹಾಡಿದ್ದೇನೆ ಅಂತ ಹೆಮ್ಮೆ ಪಟ್ಟರು. ಇಲ್ಲಿ ಸಿನಿಮಾದ ಜೊತೆಗೆ ಪಾತ್ರಗಳ ಹೊಗಳಿಕೆ ಜಾಸ್ತಿ ಬಂತು. ನನಗೆ ಇರುವ ಬೇರೆ ಇಂಡಸ್ಟ್ರಿಯ ಸ್ನೇಹಿತರೂ ಕೂಡ 'ಕೃಷ್ಣಲೀಲಾ' ಚಿತ್ರದ ಬಗ್ಗೆ ಮಾತನಾಡುತ್ತಾರೆ. 'ಕೃಷ್ಣಲೀಲಾ' ಬೇರೆ ಭಾಷೆಗೂ ತುಂಬ ಚೆನ್ನಾಗಿ ರಿಚ್ ಆಗಿದೆ.''

  ಅವಮಾನ ಮಾಡಿದ ಅದೇ ಜನ ನಂತರ ಸನ್ಮಾನ ಮಾಡಿದರು..

  ಅವಮಾನ ಮಾಡಿದ ಅದೇ ಜನ ನಂತರ ಸನ್ಮಾನ ಮಾಡಿದರು..

  ''ತುಂಬ ಕಷ್ಟವನ್ನು ಸಹಿಸಿಕೊಂಡು ಬಂದಿರುವ ಹುಬ್ಬಳ್ಳಿ ಹೆಣ್ಣು ಇದು. ಯಾವುದಕ್ಕೂ ಸೋಲದಿರುವ ಮಣ್ಣಿನಿಂದ ಬಂದಿರುವವಳು ನಾನು. ತುಂಬ ಚಿಕ್ಕವಯಸ್ಸಿನಿಂದ ಬಹಳಷ್ಟು ಅವಮಾನಗಳನ್ನು ನೋಡಿದ್ದೇನೆ. ನಾನು ನಿರೂಪಣೆ ಮಾಡುವಾಗ ಅವಮಾನ ಮಾಡಿದ ಅದೇ ಜನ ನಂತರ ಕರೆದು ಸನ್ಮಾನ ಮಾಡಿದರು. ಬೇರೆಯವರನ್ನು ಬಿಟ್ಟು ಬಿಡಿ ಕೆಲವು ಬಾರಿ ಸಂಬಂಧಿಕರಿಂದನೇ ನಮಗೆ ಅವಮಾನ ಆಗುತ್ತಿರುತ್ತದೆ. ಶಶಾಂಕ್ ಸರ್ ಕೂಡ ಅವಮಾನನೇ ಸನ್ಮಾನ ಅಂತ ಹೇಳಿದ್ದರು. ಅದು ಇದ್ದರೇನೆ ಚಂದ.. ನಾಲ್ಕು ಜನ ನಿಮ್ಮನ್ನು ಹಿಂದೆ ತಳ್ಳುವವರು ಇದ್ದರೇನೆ ನೀವು ಜೋರಾಗಿ ಓಡುವ ಪ್ರಯತ್ನ ಮಾಡುವುದು. ಆ ರೀತಿಯ ಜನ ಇವತ್ತು ಇದ್ದಾರೆ... ನಾಳೆಯೂ ಇರುತ್ತಾರೆ.''

  ನನ್ನ ಮೊದಲ ಸಿನಿಮಾವನ್ನು ನಾನೇ ಸರಿಯಾಗಿ ನೋಡೋಕ್ಕೆ ಆಗಲಿಲ್ಲ..

  ನನ್ನ ಮೊದಲ ಸಿನಿಮಾವನ್ನು ನಾನೇ ಸರಿಯಾಗಿ ನೋಡೋಕ್ಕೆ ಆಗಲಿಲ್ಲ..

  ''ನನ್ನ ಮೊದಲ ಸಿನಿಮಾವನ್ನು ನಾನೇ ಸರಿಯಾಗಿ ನೋಡೋಕ್ಕೆ ಆಗಲಿಲ್ಲ. ನನ್ನ ಜೀವನದಲ್ಲಿಯೇ ನಾನು ಸಿಂಗಲ್ ಸ್ಕ್ರೀನ್ ನಲ್ಲಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ್ದೇ ಇಲ್ಲ. 'ಕೃಷ್ಣಲೀಲಾ' ನೋಡುವಾಗ ಪ್ರತಿಕ್ಷಣಕ್ಕೂ ಜನ ಕಿರುಚುತ್ತಿದ್ದರು. ನಾನು ಜನ ಹಿಂಗೂ ಇರುತ್ತಾರ ಅಂದುಕೊಂಡೆ. ಮೊದಲ ದಿನ ಕಪಾಲಿ ಥಿಯೇಟರ್ ಫುಲ್ ಆಗಿತ್ತು. ಫಸ್ಟ್ ಶೋ ಹೋದಾಗ ಚಿತ್ರಮಂದಿರದ ಹತ್ತಿರ ಇರುವ ಗಣೇಶನ ದೇವಸ್ಥಾನಕ್ಕೆ ಹೋಗಿ ಕಾಯಿ ಒಡೆಸಿ ಸಿನಿಮಾ ನೋಡಿದೆ. ಆಮೇಲೆ ಮೂರು ದಿನದ ನಂತರ ನನ್ನ ಬಗ್ಗೆ ರಿವ್ಯೂ ಬರುವುದಕ್ಕೆ ಶುರುವಾಯ್ತು''

  ನಿಜವಾಗಿಯೂ ಖುಷಿ ಪಟ್ಟಿದ್ದು ನನ್ನ ಕುಟುಂಬ ಮಾತ್ರ..

  ನಿಜವಾಗಿಯೂ ಖುಷಿ ಪಟ್ಟಿದ್ದು ನನ್ನ ಕುಟುಂಬ ಮಾತ್ರ..

  ''ಕೃಷ್ಣಲೀಲಾ ಸಿನಿಮಾ ಬಂದಾಗ ನಿಜವಾಗಿಯೂ ಖುಷಿ ಪಟ್ಟಿದ್ದು ನಾನು, ನನ್ನ ತಂದೆ, ತಾಯಿ, ನನ್ನ ಅಕ್ಕ. ನಮ್ಮ ಗೆಲುವನ್ನು ನಿಜಕ್ಕೂ ಸಂಭ್ರಮ ಪಡುವುದು ನಮ್ಮ ಕುಟುಂಬ ಮಾತ್ರ. ಇವತ್ತಿನವರೆಗೂ ಆ ಗೆಲುವನ್ನು ನಾವು ಸಂಭ್ರಮ ಪಡುತ್ತೇವೆ. ನಮ್ಮದು ಪುಟ್ಟ ಮತ್ತು ಸಾಧಾರಣ ಕುಟುಂಬ. ಆಚರಣೆ ಜೋರಾಗಿ ಇರಲಿಲ್ಲ ಆದರೆ ಎಲ್ಲ ಕಡೆ ಪ್ರೀತಿ ಇತ್ತು.'' (...ಹೀಗೆ ಮಾತನಾಡುವಾಗ ಈ ಟೈಂ ನಲ್ಲಿ ಮಯೂರಿ ಮೊಬೈಲ್ ರಿಂಗ್ ಆಯ್ತು. ಆ ಕಡೆಯಿಂದ ಮಾತನಾಡಿದವರಿಗೆ ನಾನು ಆಮೇಲೆ ಫೋನ್ ಮಾಡ್ತಿನಿ ಅಂತ ಹೇಳಿ ಮಯೂರಿ ಮತ್ತೆ ನಮ್ಮ ಜೊತೆ ಮಾತು ಮುಂದುವರೆಸಿದರು)

  ಇಲ್ಲಿ ಯಾರನ್ನು ಮೆಚ್ಚಿಸುವುದಕ್ಕೆ ಸಾಧ್ಯ ಇಲ್ಲ..

  ಇಲ್ಲಿ ಯಾರನ್ನು ಮೆಚ್ಚಿಸುವುದಕ್ಕೆ ಸಾಧ್ಯ ಇಲ್ಲ..

  ''ಬೆಳೆಯುವ ಮುಂಚೆ ಎಲ್ಲರೂ 'ಬೇಡ' ಎಂದು ಅಡ್ವೈಸ್ ಕೊಡುತ್ತಾರೆ. ನನ್ನ ಜೀವನದಲ್ಲಿ 90% ಜನ ಚಿತ್ರರಂಗಕ್ಕೆ ಬರುವಾಗ ಏನೇನೋ ಹೇಳಿ ಹೆದರಿಸಿ ಬಿಟ್ಟಿದ್ದರು. ಆದರೆ ಈಗ ಅದೇ ಜನ ಬಂದು 'ನೀನು ನಮ್ಮ ಅಂಗಡಿಯಲ್ಲಿ ಬಟ್ಟೆ ತಗೊಂಡೆ ಅದಕ್ಕೆ ಸ್ಟಾರ್ ಆದೆ...', 'ನಿನ್ನ ಮುಖದಲ್ಲಿ ಮಚ್ಚೆ ಇದೆ ಅದಕ್ಕೆ ಅದೃಷ್ಟ ಬಂತು...', 'ಅವತ್ತು ನಮ್ಮ ಆಟೋದಲ್ಲಿ ನೀನು ಬಂದೆ ಅದಕ್ಕೆ ಹೀರೋಯಿನ್ ಆದೆ..' ಅಂತ್ತಾರೆ. ಒಬ್ಬ ವ್ಯಕ್ತಿ ಗೆದ್ದಾಗ ಎಲ್ಲರೂ ಅದರ ಕಾರಣ ತೆಗೆದುಕೊಳ್ಳುತ್ತಾರೆ. ಆದರೆ ಸೋತ್ತರೆ 'ನಾನು ಎಷ್ಟು ಹೇಳಿದೆ ಬೇಡ ಅಂತ..' ಎಂದು ಹೇಳುತ್ತಾರೆ. ಇಲ್ಲಿ ಯಾರನ್ನು ಮೆಚ್ಚಿಸುವುದಕ್ಕೆ ಸಾಧ್ಯ ಇಲ್ಲ.''

  ಮೊದಲ ಪ್ರೆಸ್ ಮಿಟ್ ನಲ್ಲಿ ಸಿಕ್ಕಾಪಟ್ಟೆ ಮಾತಾಡಿ ಬಿಟ್ಟೆ..

  ಮೊದಲ ಪ್ರೆಸ್ ಮಿಟ್ ನಲ್ಲಿ ಸಿಕ್ಕಾಪಟ್ಟೆ ಮಾತಾಡಿ ಬಿಟ್ಟೆ..

  ''ಪ್ರೆಸ್ ಮೀಟ್ ನಲ್ಲಿ ಹೇಗೆ ಮಾತನಾಡಬೇಕು ಅಂತ ಗೊತ್ತಿರಲಿಲ್ಲ. ನನ್ನ ಮೊದಲ ಪತ್ರಿಕಾಗೋಷ್ಟಿಯಲ್ಲಿ ಸಿಕ್ಕಾಪಟ್ಟೆ ಮಾತನಾಡಿದೆ. ಎಲ್ಲರೂ ತುಂಬ ನಗುತ್ತ ಕೇಳುತ್ತಿದ್ದರು. ನನ್ನ ಮಾತು ಮುಗಿದ ಮೇಲೆ ನಾನು ತುಂಬ ಮಾತಾಡಿ ಬಿಟ್ಟೆ ಅಲ್ವಾ..? ಅಂತ ಕೇಳಿದೆ. ಅದಕ್ಕೆ ಎಲ್ಲರೂ ಹೌದು.. ಮುಂದಿನ ಪ್ರೆಸ್ ಮೀಟ್ ನಲ್ಲಿ ಕಡಿಮೆ ಮಾತಾಡಿ ಅಂತ ಹೇಳಿದರು. ಮೊದಲು ಫೋಟೋಗಳನ್ನು ತೆಗೆಸಿಕೊಳ್ಳುವಾಗ ಸ್ವಲ್ಪ ಮುಜುಗರ ಆಯ್ತು.''

  ಯಾರಿಗೂ ಗೊತ್ತಿಲ್ಲದೆ ಕದ್ದು ಮುಚ್ಚಿ ಸಿನಿಮಾ ನೋಡುವುದೇ ಮಜಾ..

  ಯಾರಿಗೂ ಗೊತ್ತಿಲ್ಲದೆ ಕದ್ದು ಮುಚ್ಚಿ ಸಿನಿಮಾ ನೋಡುವುದೇ ಮಜಾ..

  ''ನಾನು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಎಲ್ಲ ಸಿಂಗಲ್ ಸ್ಕ್ರೀನ್ ನಲ್ಲಿ ನಮ್ಮ ಸಿನಿಮಾ ನೋಡಿದ್ದೇನೆ. ಜನ ರಿಯಲ್ ಆಗಿ ಹೇಗೆ ಏಂಜಾಯ್ ಮಾಡುತ್ತಾರೆ ಅಂತ ಹಾಗೆ ಮಾಡುತ್ತೇನೆ. ನನ್ನ ಎಲ್ಲ ಸಿನಿಮಾಗಳಿಗೂ ಅದೇ ರೀತಿ ನಾನು ಮಾಡುತ್ತೇನೆ. ಸಿನಿಮಾ ಹೇಗಿದೆ ಅಂದರೆ ನಮ್ಮ ಬಳಿ ಎಲ್ಲರೂ ಚೆನ್ನಾಗಿದೆ ಅಂತ್ತಾರೆ. ಯಾರಿಗೂ ಗೊತ್ತಿಲ್ಲದೆ ಕದ್ದು ಮುಚ್ಚಿ ಸಿನಿಮಾ ನೋಡುವುದು ಮಜಾವಾಗಿ ಇರುತ್ತದೆ. ಅದೇ ರೀತಿ ಒಮ್ಮೆ ಸಿನಿಮಾ ನೋಡಿ ಬರುವಾಗ ಲಿಫ್ಟ್ ನಲ್ಲಿ 'ಏನ್ ಚೆನ್ನಾಗಿ ಮಾಡಿದ್ದಾರೆ ಮಗ ಸಿನಿಮಾ..' ಅಂತ ಯಾರೋ ಮಾತನಾಡಿಕೊಳ್ಳುತ್ತಿದ್ದರು. ನಾನು ಟೈಂ ಸಿಕ್ಕಾಗೆಲ್ಲ PVR, INOX ನಲ್ಲಿ ಬುಕ್ ಮಾಡಿ ಸಿನಿಮಾ ನೋಡುತ್ತಿದೆ. ಸೋ, 'ಕೃಷ್ಣಲೀಲಾ' ನಿರ್ಮಾಪಕರಿಗೆ ನನ್ನ ಕೊಡುಗೆ ಕೂಡ ತುಂಬ ಇದೆ.''

  ಒಳಗೆ ಸಿನಿಮಾ ಓಡುತ್ತಿದ್ದರೆ... ಅದರ ಸಿಡಿ ಹೊರಗೆ ಮಾರುತ್ತಿದ್ದರು..

  ಒಳಗೆ ಸಿನಿಮಾ ಓಡುತ್ತಿದ್ದರೆ... ಅದರ ಸಿಡಿ ಹೊರಗೆ ಮಾರುತ್ತಿದ್ದರು..

  ''ಒಮ್ಮೆ ಆ ರೀತಿ ಸಿನಿಮಾ ನೋಡೊಕ್ಕೆ ಹೋದಾಗ ಒಂದು ಸಿಂಗಲ್ ಸ್ಕ್ರೀನ್ ಥಿಯೇಟರ್ ಮುಂದೆಯೇ ನಮ್ಮ ಸಿನಿಮಾದ ಪೈರಸಿ ಸಿಡಿ ಮಾರುತ್ತಿದ್ದರು. ಒಳಗೆ ಸಿನಿಮಾ ಓಡುತ್ತಿದೆ... ಅದರ ಸಿಡಿ ಹೊರಗೆ ಮಾರುತ್ತಿದ್ದಾರೆ.. ನಾನು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರಿಂದ ಹೋಗಿ 'ಅಣ್ಣ ಒಂದು ಸಿಡಿ ಎಷ್ಟು, ನೋಡೋಕ್ಕೆ ಕ್ಲಿಯರ್ ಇರುತ್ತಾ..' ಅಂತ ಕೇಳಿದೆ. 'ತುಂಬ ಚೆನ್ನಾಗಿ ಬರುತ್ತದೆ 100 ರೂಪಾಯಿ ಅಷ್ಟೆ ತಗೊಂಡು ಹೋಗಿ ಮೇಡಂ.. ಎಂದು ಹೇಳಿದ. ಆಗ ಮುಖಕ್ಕೆ ಹಾಕಿದ ಬಟ್ಟೆ ತೆಗೆದೆ ಅವನಿಗೆ ಫುಲ್ ಭಯ ಆಗಿ ಹೋಯ್ತು. ಯಾಕೆ ರೀತಿ ಮಾಡಿದೆ ಅಂತ ಕೇಳಿದ್ದಕ್ಕೆ, ನನಗೆ ಗೊತ್ತಿಲ್ಲ.. ನಮ್ಮ ಓನರ್ ಇಟ್ಟಿದ್ದಾರೆ ಅಂತ ಹೇಳಿದ. ಆಮೇಲೆ ಪೊಲೀಸ್ ಕಂಪ್ಲೇಟ್ ಕೊಟ್ಟು ಅಜಯ್ ಸರ್ ಪೈರಸಿ ಸಮಸ್ಯೆಯನ್ನು ಸರಿ ಮಾಡಿದರು. ಯಾರು ಯಾವ ಸಿನಿಮಾಗೂ ಈ ರೀತಿ ಪೈರಸಿ ಮಾಡಬಾರದು.''

  ಪವನ್ ಒಡೆಯರ್ ನಿರ್ದೇಶಕರಾಗಿದ್ದರ ಹಿಂದಿನ ಒಂದು ಕುತೂಹಲಕಾರಿ ಕಥೆಪವನ್ ಒಡೆಯರ್ ನಿರ್ದೇಶಕರಾಗಿದ್ದರ ಹಿಂದಿನ ಒಂದು ಕುತೂಹಲಕಾರಿ ಕಥೆ

  ನಿಮ್ಮ ಮೊದಲ ಸಿನಿಮಾ ನಿಮಗೆ ಏನು..?

  ನಿಮ್ಮ ಮೊದಲ ಸಿನಿಮಾ ನಿಮಗೆ ಏನು..?

  ''ಕೃಷ್ಣಲೀಲಾ ನನಗೆ ಆಕರ್ಷಣೆ ಆಗುವ ಒಂದು ನೆನಪು. ಅದನ್ನು ಯಾವ ರೀತಿಯಲ್ಲಿಯೂ ಬದಲಿಸುವುದಕ್ಕೆ ಸಾಧ್ಯ ಇಲ್ಲ. ಅದಕ್ಕೆ ಬೇರೆಯದೇ ಗೂಡು ಕಟ್ಟಿ ನನ್ನ ಹೃದಯದಲ್ಲಿ ಇಟ್ಟುಕೊಂಡಿದೇನೆ. ಆಗಾಗ ಮನಸಿನಲ್ಲಿ ಇರುವ ಕೃಷ್ಣಲೀಲಾ ಪುಸ್ತಕನ ತೆಗದು ಓದಿ ಮತ್ತೆ ಬಚ್ಚಿಟ್ಟುಕೊಳ್ಳುತ್ತೇನೆ. ಅದು ನನ್ನ ಜೀವನಕ್ಕೆ ಬಂದಿರುವ ಅದ್ಬುತ ಗಿಫ್ಟ್''

  English summary
  Nanna Modala Cinema Series: Kannada actress Mayuri spoke about her first movie 'Krishnaleela' in an Exclusive interview with FilmiBeat Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X