"ಇಂತಹ ಪತಿ ಸಿಕ್ಕಿರುವುದು ನನ್ನ ಪುಣ್ಯ"; ನಿಶಾ ವಿನೋದ್ ಪ್ರಭಾಕರ್ ಸಂದರ್ಶನ
ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ 'ಮಾದೇವ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಕೆಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ವರ್ಷ ಕನ್ನಡದ ಸಿನಿಮಾಗಳು ಸದ್ದು ಮಾಡ್ತಿಲ್ಲ ಎನ್ನುವ ಬೇಸರದ ನಡುವೆ ಚಿತ್ರಮಂದಿರಗಳಲ್ಲಿ 'ಮಾದೇವ'ನ ದರ್ಬಾರ್ ಸಮಾಧಾನ ತಂದಿದೆ.
ಹ್ಯಾಂಗ್‌ಮ್ಯಾನ್ ಪಾತ್ರದಲ್ಲಿ ವಿನೋದ್ ಪ್ರಭಾಕರ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಣ್ಣಪುಟ್ಟ ತಪ್ಪುಗಳ ಹೊರತಾಗಿಯೂ 'ಮಾದೇವ' ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಆಕ್ಷನ್ ಕಮ್ಮಿ ಮಾಡಿ ತಮ್ಮ ಭಾವನಾತ್ಮಕ ನಟನೆಯಿಂದ ವಿನೋದ್ ಹೆಚ್ಚು ಗಮನ ಸೆಳೆದಿದ್ದಾರೆ. ಕಳೆದ ವಾರ ಸಿನಿಮಾ ಒಳ್ಳೆ ಓಪನಿಂಗ್ ಪಡೆದುಕೊಂಡಿತ್ತು. ಅಭಿಮಾನಿಗಳ ಜೊತೆ ಪತ್ನಿ ಸಮೇತವಾಗಿ ವಿನೋದ್ ಸಿನಿಮಾ ನೋಡಿದ್ದರು.

ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಚಿತ್ರಮಂದಿರದ ಮುಂದೆ ನಿಶಾ ವಿನೋದ್ ಪ್ರಭಾಕರ್ ಬಿಂದಾಸ್ ಸ್ಟೆಪ್ಸ್ ಹಾಕಿದ್ದರು. ನಾಲ್ಕೈದು ಬಾರಿ ಅವ್ರು 'ಮಾದೇವ' ಸಿನಿಮಾ ನೋಡಿದ್ದಾರೆ. ಇನ್ನು ಪತಿಯ ಚಿತ್ರಕ್ಕೆ ಸಿಕ್ಕಿರುವ ಸಕ್ಸಸ್ ಬಗ್ಗೆ ನಿಶಾ ವಿನೋದ್ ಪ್ರಭಾಕರ್ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ. ಸಂದರ್ಶನ ಇಲ್ಲಿದೆ ಮುಂದೆ ಓದಿ.
'ಮಾದೇವ' ಸಕ್ಸಸ್ ಸಂಭ್ರಮ ಹೇಗಿದೆ?
ಬಹಳ ಖುಷಿ ಆಗುತ್ತಿದೆ. ಇಷ್ಟು ವರ್ಷ ಕಷ್ಟಪಟ್ಟಿರುವುದಕ್ಕೆ ಒಂದೊಳ್ಳೆ ಸಿನಿಮಾ ಕೊಟ್ಟಿದ್ದಾರೆ. ಅದು ಖುಷಿ ಇದೆ. ಫ್ಯಾಮಿಲಿ ಸಮೇತ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿರುವುದು ವಿಶೇಷ. ಬಹಳ ದಿನಗಳ ನಂತರ ಮಹಿಳಾ ಪ್ರೇಕ್ಷಕರು ಸಿನಿಮಾ ಹೋಗುತ್ತಿದ್ದಾರೆ. ಯಾವುದೇ ಮುಜುಗರ ಇಲ್ಲದೇ ಕಂಪ್ಲೀಟ್ ಫ್ಯಾಮಿಲಿ ಸಿನಿಮಾ ಎಂಜಾಯ್ ಮಾಡುವಂತಿದೆ. ಅದು ಸಂತಸ ತಂದಿದೆ.
ಸಿನಿಮಾ ನೋಡುವಾಗ ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಅನಿಸಿದ್ದೇನು?
ಜನ ಸಿನಿಮಾ ನೋಡುತ್ತಾ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅದನ್ನೆಲ್ಲಾ ನೋಡಿದರೆ ಆನಂದಬಾಷ್ಪ ಬರ್ತಿದೆ. ಈ ಪ್ರತಿಕ್ರಿಯೆಗಾಗಿ ವಿನೋದ್ ಬಹಳ ಕಷ್ಟಪಟ್ಟಿದ್ದರು. ಈ ಹಿಂದಿನ ಸಿನಿಮಾಗಳಿಗೂ ಇಷ್ಟೇ ಶ್ರಮ ಹಾಕಿದ್ರು. ಆದರೆ ಈ ಸಬ್ಜೆಕ್ಟ್, ಪಾತ್ರ ಬಹಳ ವಿಶೇಷ. 'ಮಾದೇವ' ಸಿನಿಮಾ ಮಾಡುವಾಗ ಮನೆಗೆ ಬಂದಾಗಲೂ ಆ ಪಾತ್ರದಲ್ಲೇ ಇರುತ್ತಿದ್ದರು. ಬಹಳ ಸೈಲೆಂಟ್ ಆಗಿ ಇರುತ್ತಿದ್ದದ್ದು ನನಗೆ ಭಯವಾಗುತ್ತಿತ್ತು. ಆಗ ಹೇಳಿದರು. ಸ್ವಲ್ಪ ದಿನ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡು. ಒಳ್ಳೆ ಪಾತ್ರ ಸಿಕ್ಕಿದೆ. ನನ್ನನ್ನು ನಾನು ಸಾಬೀತು ಮಾಡಿಕೊಳ್ಳಬೇಕು, ಪ್ರೇಕ್ಷಕರನ್ನು ರಂಜಿಸಬೇಕು. ಸಾಕಷ್ಟು ತ್ಯಾಗ ಮಾಡಿದ್ದಾರೆ. ಅದಕ್ಕೆ ತಕ್ಕ ಪ್ರತಿಫಲ ಈಗ ಸಿಕ್ಕಿದೆ.
ಒಳ್ಳೆ ಸಿನಿಮಾ ಮಾಡಿದರೆ ಜನ ಬರ್ತಾರೆ ಎನ್ನುವುದು ಮತ್ತೆ ಸಾಬೀತಾಗಿದೆ ಅಲ್ವಾ?
ಖಂಡಿತ. ಒಳ್ಳೆ ಸಿನಿಮಾ ಮಾಡಿದರೆ ಜನ ಚಿತ್ರಮಂದಿರಗಳಿಗೆ ಬರ್ತಾರೆ. ದೊಡ್ಡ ಸಿನಿಮಾಗಳನ್ನೇ ಮಾಡಬೇಕು ಅಂತೇನಿಲ್ಲ. 'ಮಾದೇವ' ಅದಕ್ಕೆ ಒಳ್ಳೆ ಉದಾಹರಣೆ. ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಖುಷಿಯಾಗುತ್ತಿದೆ.
ನೀವು, ವಿನೋದ್ ಅವರಿಗೆ ದೃಷ್ಟಿ ತೆಗೆಯುವ ವೀಡಿಯೋ ವೈರಲ್ ಆಗ್ತಿದೆ. ನೀವು ನೋಡಿದ್ರಾ?
ಹಹ್ಹಹ. ಹೌದು. ಸಿನಿಮಾದಲ್ಲಿ ನಾಯಕಿ ನಾಯಕನಿಗೆ ಮುದ್ದು ಮಾಡುವುದು, ದೃಷ್ಟಿ ತೆಗೆಯುವುದು ಇದೆ. ಅದನ್ನೇ ನಾನು ಮಾಡಿದ್ದೆ ಅಷ್ಟೇ. ನಿಜಕ್ಕೂ ಸಿನಿಮಾ ನೋಡಿದಾಗ ಅವರಿಗೆ ಅಷ್ಟು ದೃಷ್ಟಿ ಆಗಿರುತ್ತದೆ. ಅದಕ್ಕೆ ದೃಷ್ಟಿ ತೆಗೆದೆ.
ನಿಮ್ಮ ನಿರ್ಮಾಣದಲ್ಲಿ ಮುಂದಿನ ಸಿನಿಮಾ ಬಗ್ಗೆ ಹೇಳಿ
ಮುಂದೆ ಇನ್ನೆರಡು ತಿಂಗಳಲ್ಲಿ ನಮ್ಮ ಹೋಂ ಪ್ರೊಡಕ್ಷನ್ 'ಲಂಕಾಸುರ' ಸಿನಿಮಾ ಬರ್ತಿದೆ. ಚಿತ್ರೀಕರಣ ಎಲ್ಲಾ ಮುಗಿಸಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆ ಚಿತ್ರದಲ್ಲಿ ಕೂಡ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. 'ಮಾದೇವ' ಸಬ್ಜೆಕ್ಟ್ ಚೆನ್ನಾಗಿದೆ, ಅದನ್ನು ಮುಗಿಸೋಣ ಎಂದು ವಿನೋದ್ ಅದರ ಕಡೆ ಹೆಚ್ಚು ಗಮನ ಹರಿಸಿದ್ದರು. ಆ ಚಿತ್ರದಲ್ಲಿ ಕೂಡ ಒಳ್ಳೆ ಪಾತ್ರ ಸಿಕ್ಕಿದೆ. ಅದ್ಭುತ ಪ್ರದರ್ಶನ ನೀಡಿದ್ದಾರೆ. 'ಮಾದೇವ' ಚಿತ್ರಕ್ಕೆ ಸಿಕ್ಕಂತೆ ಆ ಚಿತ್ರಕ್ಕೂ ಸಿಗುವ ನಂಬಿಕೆ ಇದೆ.
ಮನೆ ಕೆಲಸಗಳಲ್ಲಿ ವಿನೋದ್ ಅವರು ನಿಮಗೆ ಸಹಾಯ ಮಾಡುತ್ತಾರಂತೆ
ಇವತ್ತು ಬೆಳಗ್ಗೆ ಕೂಡ ವಾಷಿಂಗ್ ಮಿಷನ್‌ಗೆ ಬಟ್ಟೆ ಅವ್ರೇ ಹಾಕಿದ್ದು. ಶೂಟಿಂಗ್ ಇದ್ದಾಗಲೂ ಮನೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ನೀನು ಬೇರೆ ಕೆಲಸ ಮಾಡ್ತಿರ್ತೀಯಾ, ಎಲ್ಲಾ ನೀನೇ ಯಾಕೆ ಮಾಡಬೇಕು, ನಾನು ಸಹಾಯ ಮಾಡ್ತೀನಿ ಅಂತಾರೆ. ಎಲ್ಲರೂ ಅದೇ ರೀತಿ ಮನೆಯಲ್ಲಿ ಮಡದಿಗೆ ಸಹಾಯ ಮಾಡಬೇಕು, ನನಗೆ ಅವ್ರು ಪತಿಯಾಗಿ ಸಿಕ್ಕಿರುವುದು ನನ್ನ ಪುಣ್ಯ.


Click it and Unblock the Notifications











