"ಬಹಳ ಚಾಲೆಂಜಿಂಗ್ ಪಾತ್ರ, 'ಸೀತಾರಾಮ' ತಂಡವನ್ನು ಬಹಳ ಮಿಸ್ ಮಾಡಿಕೊಳ್ತೀನಿ"; ಪೂಜಾ ಲೋಕೇಶ್ ಸಂದರ್ಶನ
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಸೀತಾರಾಮ' ಕಥೆ ಮುಗಿದಿದೆ. ಕೊನೆಯ ವಾರ ಪ್ರತಿದಿನ ಬೇರೆ ಬೇರೆ ಕಥೆ ಹೇಳಿ ಕುತೂಹಲ ಮೂಡಿಸಲಾಗಿತ್ತು. ಭಾರ್ಗವಿಯ ಆಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ರಾಮ್ ತಂದೆ ಇಂದ್ರ ಹಾಗೂ ತಾಯಿ ವಾಣಿಯ ಕೊಲೆಗೆ ಭಾರ್ಗವಿಯೇ ಕಾರಣ ಎನ್ನುವ ಸತ್ಯ ಗೊತ್ತಾಗಿದೆ. ಅಲ್ಲಿಗೆ ಭಾರ್ಗವಿಯ ಆಟ ಮುಗಿದಿದೆ.
2023ರ ಜುಲೈ 17ರಂದು 'ಸೀತಾರಾಮ' ಧಾರಾವಾಹಿ ಆರಂಭವಾಗಿತ್ತು. 490ಕ್ಕೂ ಅಧಿಕ ಎಪಿಸೋಡ್‌ಗಳಾಗಿ ಕಥೆ ವೀಕ್ಷಕರ ಮುಂದೆ ಬಂದಿದೆ. ಆರಂಭದಿಂದಲೇ ಕಥೆ ವೀಕ್ಷಕರ ಗಮನ ಸೆಳೆದಿತ್ತು. ರಾಮ್ ಹಾಗೂ ಸೀತಾ ಜೋಡಿ ಮೋಡಿ ಮಾಡಿತ್ತು. ಜೊತೆಗೆ ಪುಟಾಣಿ ಸಿಹಿಯ ಮುಗ್ಧ ನಗು, ಮಾತು ಸೆಳೆದಿತ್ತು. ಟಿಆರ್‌ಪಿ ವಿಚಾರದಲ್ಲಿ ಕೂಡ ಧಾರಾವಾಹಿ ಬಹಳ ಸದ್ದು ಮಾಡಿತ್ತು.

ವಠಾರದಲ್ಲೇ ಪ್ರಪಂಚ ಕಟ್ಟಿಕೊಂಡ ಸೀತಾ ಹಾಗೂ ಸಿಹಿ. ಶ್ರೀಮಂತ ದೇಸಾಯಿ ಕಂಪನಿ ಸೇರುವ ಸೀತಾ ಕೊನೆಗೆ ಕಂಪೆನಿ ಒಡೆಯ ಶ್ರೀರಾಮ್ ದೇಸಾಯಿಯನ್ನು ಪ್ರೀತಿಸಿ ಮದುವೆ ಆಗುತ್ತಾಳೆ. ದೇಸಾಯಿ ಸಾಮ್ರಾಜ್ಯವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದು ತುಡಿಯುವ ರಾಮ್ ಚಿಕ್ಕಮ್ಮ ಭಾರ್ಗವಿ. ಅದಕ್ಕಾಗಿ ತನಗೆ ಎದುರಾಗುವವರನ್ನು ಮಟ್ಟ ಹಾಕುತ್ತಿರುತ್ತಾಳೆ. ಸೀತಾ ಅವಳಿಗೆ ಕಂಟಕವಾಗಿ ಪರಿಣಮಿಸುತ್ತಾಳೆ. ಮುಂದೆ ಇಬ್ಬರ ನಡುವೆ ನಾನಾ ನೀನಾ ಪೈಪೋಟಿ ಶುರುವಾಗಿ ಕೊನೆಗೆ ಭಾರ್ಗವಿ ನಿಜಬಣ್ಣ ಬಯಲಾಗಿದೆ. ಹಾಗಾಗಿ ಕಥೆಗೆ ಶುಭಂ ಕಾರ್ಡ್ ಬಿದ್ದಿದೆ.
ಭಾರ್ಗವಿ ದೇಸಾಯಿ ಆಗಿ ಪೂಜಾ ಲೋಕೇಶ್ ಅಬ್ಬರಿಸಿದ್ದರು. ಖ್ಯಾತ ನಟ ಲೋಕೇಶ್ ಪುತ್ರಿ ಪೂಜಾಗೆ ಒಂದೊಳ್ಳೆ ಪಾತ್ರ ಸಿಕ್ಕಿತ್ತು. ತಮಿಳು ಕಿರುತೆರೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದ ಪೂಜಾ 'ಸೀತಾರಾಮ' ಧಾರಾವಾಹಿ ಮೂಲಕ ಕನ್ನಡ ಸಿನಿರಸಿಕರಿಗೆ ಹತ್ತಿರವಾಗಿದ್ದಾರೆ. ತಮಿಳು ಧಾರಾವಾಹಿಗಳಲ್ಲಿ ಕೂಡ ನೆಗೆಟಿವ್ ಪಾತ್ರಗಳಲ್ಲಿ ಹೆಚ್ಚು ನಟಿಸಿದ್ದರು. 'ಸೀತಾರಾಮ' ಧಾರಾವಾಹಿಯ ಭಾರ್ಗವಿ ಪಾತ್ರ, ತಂಡವನ್ನು ಬಹಳ ಮಿಸ್ ಮಾಡಿಕೊಳ್ಳುವುದಾಗಿ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.
ನೆಗೆಟಿವ್ ರೋಲ್‌ನಲ್ಲಿ ಕನ್ನಡಿಗರು ನೋಡಿರ್ಲಿಲ್ಲ
"ಸೀತಾರಾಮ ಧಾರಾವಾಹಿ ಒಂದೊಳ್ಳೆ ಜರ್ನಿ. ನೆಗೆಟಿವ್ ರೋಲ್‌ನಲ್ಲಿ ಕನ್ನಡದವ್ರು ನನ್ನನ್ನು ನೋಡಿರ್ಲಿಲ್ಲ. ಕೆಲವರಿಗೆ ಜೀರ್ಣಿಸಿಕೊಳ್ಳಲು ಆಗಿರಲಿಲ್ಲ. ಕೆಲವ್ರು ವಾಹ್ ಹೀಗೂ ಮಾಡಬಹುದಾ? ಎಂದು ಕೆಟ್ಟ ಕಾಮೆಂಟ್ ಮಾಡುತ್ತಲೇ ನನ್ನ ನಟನೆಯನ್ನು ಮೆಚ್ಚಿದ್ದರು. ದ್ವೇಷಿಸಬಹುದು, ಆದ್ರೆ ಕಡೆಗಣಿಸೋಕೆ ಆಗೊಲ್ಲ ಎನ್ನುವಂತೆ ಈ ಪಾತ್ರ ಇತ್ತು" ಎಂದು ಪೂಜಾ ಲೋಕೇಶ್ ಹೇಳಿದ್ದಾರೆ.
ಪಾತ್ರಕ್ಕಾಗಿ ಹೋಂವರ್ಕ್ ಮಾಡಿದ್ದೆ
ಧಾರಾವಾಹಿಗಳಲ್ಲಿ ನೆಗೆಟಿವ್ ರೋಲ್‌ಗಳಿಗೆ ಬಹಳ ಪ್ರಾಮುಖ್ಯತೆ ಇರುತ್ತದೆ. ಅದರಲ್ಲೂ ಖಳನಾಯಕಿಯರ ಆರ್ಭಟವೇ ಹೆಚ್ಚು. 'ಸೀತಾರಾಮ' ಧಾರಾವಾಹಿಯಲ್ಲಿ ಕೂಡ ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ನಾಯಕ- ನಾಯಕಿಯಾಗಿ ಮಿಂಚಿದ್ದರು. ಇವರಿಬ್ಬರನ್ನು ಬಿಟ್ಟರೆ ಬಹಳ ಪ್ರಮುಖು ಪಾತ್ರ ಪೂಜಾ ಮಾಡಿದ್ದ ಭಾರ್ಗವಿ ದೇಸಾಯಿ ಪಾತ್ರವೇ ಆಗಿತ್ತು. "ಭಾರ್ಗವಿ ಪಾತ್ರಕ್ಕಾಗಿ ಬಹಳ ಹೋಂವರ್ಕ್ ಮಾಡಿದ್ದೆ. ನೆಗೆಟಿವ್ ರೋಲ್ ಆಗಿದ್ದರೂ ಓವರ್ ಆಕ್ಟಿಂಗ್ ಮಾಡಬಾರದು. ಅದನ್ನು ಹೇಗೆ ಸೆಟಲ್ಡ್ ಆಗಿ ಮಾಡಬಹುದು ಎಂದು ಪ್ರಾರಂಭಕ್ಕೂ ಮುನ್ನ ಹೋಂವರ್ಕ್ ಆಗಿತ್ತು. ಇಂಟ್ರಡಕ್ಷನ್ ವೇಳೆ ಒಂದೆರಡು ಎಪಿಸೋಡ್ ರೀ-ಶೂಟ್ ಮಾಡಿದ್ದೆವು. ಆರಂಭದಲ್ಲೇ ಆಕೆಯ ಪಾತ್ರ ಏನು ಎನ್ನುವುದಕ್ಕೆ ಸ್ಪಷ್ಟನೆ ಸಿಕ್ಕಿತ್ತು. ಭಾರ್ಗವಿ ಅಷ್ಟೆಲ್ಲಾ ಯಾಕೆ ಮಾಡುತ್ತಿದ್ದಾಳೆ ಎನ್ನುವುದು ಗೊತ್ತಾಗಿತ್ತು. ನಿಜಕ್ಕೂ ಚಾಲೆಂಜಿಂಗ್ ರೋಲ್.
ದಿಢೀರ್ ಧಾರಾವಾಹಿ ಮುಗಿಸಿದ್ದು ಚಾನಲ್ ನಿರ್ಧಾರ. ನಾವು ಕಲಾವಿದರು ಮಾತ್ರ. ಜನ ಎಲ್ಲಿಯವರೆಗೂ ಸ್ವೀಕರಿಸುತ್ತಾರೋ ಅಲ್ಲಿಯವರೆಗೂ ಮುಂದುವರೆಸಬೇಕು ಎಂದುಕೊಂಡಿದ್ದೆವು. ಖಂಡಿತ ಬೇಸರವಾಗುತ್ತದೆ. ಜೀ ಕನ್ನಡ ವಾಹಿನಿ ನಿರ್ಮಿಸಿದ ಮೊದಲ ಪ್ರಾಜೆಕ್ಟ್ ಇದು. ಬಹಳ ವೇಗವಾಗಿ ಹೋಗುತ್ತಿದ್ದದ್ದು ದಿಢೀರ್ ಮುಗಿಸುತ್ತಿದ್ದಾರೆ ಎಂದು ಎಲ್ಲ ಕಲಾವಿದರಿಗೂ ಬೇಸರವಾಗುತ್ತದೆ. ಇದೇ ಜೀವನ ಅಲ್ಲವೇ. ಇದನ್ನು ಮುಗಿಸಿ ಹೊಸ ಅಧ್ಯಾಯ ಆರಂಭಿಸಬೇಕು ಎಂದು ಪೂಜಾ ತಿಳಿಸಿದ್ದಾರೆ.
ಕೆಲಸ ವಿಚಾರದಲ್ಲಿ ಜಗಳ ಆಡಿದ್ದು ಉಂಟು
ಒಂದು ವರ್ಷ ಅಲ್ಲ, ಎರಡೂವರೆ ವರ್ಷ ಈ ತಂಡದ ಜೊತೆಗೆ ಜರ್ನಿ ಇದು. ಧಾರಾವಾಹಿ ಆರಂಭಕ್ಕೂ 6 ತಿಂಗಳು ಮುನ್ನ ಲುಕ್ ಟೆಸ್ಟ್ ಎಲ್ಲಾ ನಡೀತಿತ್ತು. ತಯಾರಿ ಶುರುವಾಗಿತ್ತು. ಆಗಿನಿಂದಲೇ ಎಲ್ಲರೂ ಹತ್ತಿರವಾಗಿದ್ದೆವು. ಎಲ್ಲಾ ಪಾತ್ರಗಳ ಬಗ್ಗೆ ಚರ್ಚೆ ನಡೀತಿತ್ತು. ಕೊನೆ ಸೀನ್‌ವರೆಗೂ ನಾನು ಜಗಳ ಮಾಡಿದ್ದು ಉಂಟು. ಹೀಗೆ ಮಾಡಿದ್ದರೆ ಚೆಂದ, ಹಾಗೆ ಮಾಡಿದರೆ ಚೆಂದ ಎಂದು ಜಗಳ ಮಾಡಿದ್ದು ಮನಸ್ತಾಪ ಆಗಿದ್ದು ಉಂಟು. ಒಂದು ತಂಡ, ಫ್ಯಾಮಿಲಿ ಅಂದಮೇಲೆ ಇದೆಲ್ಲಾ ಸಹಜ ಎಂದು ಪೂಜಾ ನೆನಪಿಸಿಕೊಂಡಿದ್ದಾರೆ.
ಈ ಧಾರಾವಾಹಿಯಿಂದ ಒಳ್ಳೆ ಸ್ನೇಹಿತರು ಸಿಕ್ಕಿದ್ದಾರೆ. ವೈಷ್ಣವಿ, ಮೇಘನಾ, ಸಿಂಧೂ, ಪೂರ್ಣ, ಜೈದೇವ್, ಚಂದ್ರು ಅಂಕಲ್, ಗಗನ್, ಸಿಹಿ, ನನ್ನ ಮಗನಾಗಿ ಮಾಡಿದ್ದ ಅನಿ, ಅಶೋಕ್ ಹೀಗೆ ಎಲ್ಲರೂ ಒಳ್ಳೆ ಸ್ನೇಹಿತರಾಗಿದ್ದೆವು. ಫ್ಯಾಮಿಲಿ ರೀತಿ ಇದ್ದೆವು. ಒಟ್ಟಿಗೆ ಕೂತು ಊಟ ಮಾಡುವುದು, ವಾಟ್ಸಪ್ ಗ್ರೂಪ್ ಮಾಡಿಕೊಂಡು ಚರ್ಚಿಸುತ್ತಿದ್ದೆವು. ಮುಂದೆ ಕೂಡ ನಮ್ಮ ಗೆಳೆತನ ಹೀಗೆ ಮುಂದುವರೆಯಲಿದೆ ಎಂದಿದ್ದಾರೆ.
ಮುಂದಿನ ಪ್ರಾಜೆಕ್ಟ್‌ಗಳು
ನನ್ನ ಪ್ರಕಾರ ಎಷ್ಟು ಪ್ರಾಜೆಕ್ಟ್ ಮಾಡ್ತೀನಿ ಎನ್ನುವುದಕ್ಕಿಂತ ಎಂತಹ ಪ್ರಾಜೆಕ್ಟ್ ಮಾಡ್ತೀನಿ ಎನ್ನುವುದು ಮುಖ್ಯ. ಎಷ್ಟು ಸಿನಿಮಾ, ಧಾರಾವಾಹಿ ಮಾಡ್ತೀನಿ ಅಂತ ಅಲ್ಲ, ಕಡಿಮೆ ಮಾಡಿದರೂ ಎಲ್ಲರೂ ಮಾತನಾಡುವಂತದ್ದು ಮಾಡಬೇಕು. ನಮ್ಮ ತಂದೆ ಕೂಡ ಇದನ್ನೇ ಹೇಳಿಕೊಟ್ಟಿರುವುದು. 10 ನಿಮಿಷ ಬಂದು ಹೋಗುವ ಪಾತ್ರ ಆಗಿದ್ದರೂ ಎಷ್ಟು ಪರಿಣಾಮ ಬೀರುತ್ತದೆ ಎನ್ನುವುದು ಮುಖ್ಯ. ಸಾಕಷ್ಟು ಧಾರಾವಾಹಿ ಅವಕಾಶಗಳು ಬರ್ತಿದೆ.
ನೆಗೆಟಿವ್ ಪಾತ್ರಗಳೇ ಹೆಚ್ಚು ಬಂತು
ಸೀತಾರಾಮ ಧಾರಾವಾಹಿ ಮಾಡುವಾಗಲೇ ಎರಡೂವರೆ ವರ್ಷದಲ್ಲಿ ಏಳೆಂಟು ಪ್ರಾಜೆಕ್ಟ್ ಅವಕಾಶ ಬಂದಿತ್ತು. ಸಮಯದ ಅಭಾವದಿಂದ ಸಾಧ್ಯವಾಗಲಿಲ್ಲ. ನೆಗೆಟಿವ್ ರೋಲ್ ಮಾಡಿರುವ ಕಾರಣ ಬರೀ ಅಂತಹ ಪಾತ್ರಗಳೇ ಬರ್ತಾವೆ. ಅದೃಷ್ಟ ಎಂದರೆ ನಾಲ್ಕೈದು ಒಳ್ಳೆ ಪಾಸಿಟಿವ್ ಪಾತ್ರಗಳು ಬಂದಿತ್ತು. ಆದರೆ ಸಮಯ ಸಿಗದ ಕಾರಣ ಒಪ್ಪಿಕೊಳ್ಳಲಿಲ್ಲ. ನೋಡೋಣ ಮುಂದೆ ನನ್ನ ಬುಟ್ಟಿಯಲ್ಲಿ ಎಂತಹ ಪಾತ್ರಗಳು ಸೇರುತ್ತದೆ" ಎಂದು ಪೂಜಾ ಲೋಕೇಶ್ ವಿವರಿಸಿದ್ದಾರೆ.
90ರ ದಶಕದಲ್ಲೇ ಪೂಜಾ ಲೋಕೇಶ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. 'ಹುಲಿಯಾ', 'ಉಲ್ಟಾ ಪಲ್ಟಾ', 'ಯುದ್ಧ', 'ಮ್ಯಾಜಿಕ್ ಅಜ್ಜಿ' ರೀತಿಯ ಸಿನಿಮಾಗಳಲ್ಲಿ ಮಿಂಚಿದ್ದರು. 'ಟೈಗರ್ ಗಲ್ಲಿ' ಇತ್ತೀಚಿನ ವರ್ಷಗಳಲ್ಲಿ ಅವರು ನಟಿಸಿದ ಸಿನಿಮಾಗಳಲ್ಲಿ ಒಂದು.
22 ವರ್ಷಗಳ ಹಿಂದೆಯೇ ಪೂಜಾ ತಮಿಳು ಕಿರುತೆರೆ ಪ್ರವೇಶಿಸಿದ್ದರು. ಬಳಿಕ ಸಾಲು ಸಾಲು ತಮಿಳು ಧಾರಾವಾಹಿಗಳಲ್ಲಿ ನಟಿಸುತ್ತಾ ಬಂದಿದ್ದರು. ಅಲ್ಲಿ ಕೂಡ ಹೆಚ್ಚು ನೆಗೆಟಿವ್ ಪಾತ್ರಗಳೇ ಸಿಕ್ಕಿತ್ತು. 'ಸೀತಾರಾಮ' ಧಾರಾವಾಹಿ ಮೂಲಕ ಕನ್ನಡ ಸಿನಿರಸಿಕರಿಗೆ ಹತ್ತಿರವಾಗಿದ್ದಾರೆ.
ತಮಿಳಿನ 'ಜೋಡಿ ನಂಬರ್-1' ಹಾಗೂ ಕಿಚನ್ 'ಸೂಪರ್ ಸ್ಟಾರ್' ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಪೂಜಾ ಲೋಕೇಶ್ ಗೆದ್ದಿದ್ದರು. ಜೀ ಕುಟುಂಬ ಅವಾರ್ಡ್ಸ್ ನಲ್ಲಿ ನೆಚ್ಚಿನ ಖಳನಟಿ ಪ್ರಶಸ್ತಿ ಕೂಡ ಪೂಜಾಗೆ ಸಿಕ್ಕಿತ್ತು. ಭಾರ್ಗವಿ ಪಾತ್ರ ಪೂಜಾ ನಟನೆ ಹೇಗಿತ್ತು ಎನ್ನುವುದಕ್ಕೆ ಇದು ಸಾಕ್ಷಿ. ಮಧುಸೂಧನ್ ಎಂಬುವವರು ಈ ಧಾರಾವಾಹಿಗೆ ಆಕ್ಷನ್ ಕಟ್ ಹೇಳಿದ್ದರು. ಇದೀಗ 'ಸೀತಾರಾಮ' ಧಾರಾವಾಹಿ ಮುಗಿದಿದ್ದು ಶೀಘ್ರದಲ್ಲೇ ಆ ಸ್ಲಾಟ್‌ಗೆ ಹೊಸ ಕಥೆ ಬರಲಿದೆ.


Click it and Unblock the Notifications











