'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಕಿಶನ್ ಪಾತ್ರ ಯಾಕೆ ಬಂತು ಅಂದ್ರೆ?; ಧ್ರುವ ರಾಜೇಶ್ ಸಂದರ್ಶನ
ಧಾರಾವಾಹಿಗಳನ್ನು ಪ್ರತಿದಿನ ವೀಕ್ಷಕರು ನೋಡುವಂತೆ ಹಿಡಿದಿಟ್ಟುಕೊಳ್ಳುವುದು ಸವಾಲಿನ ಕೆಲಸ. ಇದೇ ಕಾರಣಕ್ಕೆ ಆರಂಭದಲ್ಲಿ ಕ್ಲಿಕ್ ಆಗುವ ಧಾರಾವಾಹಿಗಳು ಬಳಿಕ ಡಲ್ ಆಗಿ ಬಿಡುತ್ತವೆ. ಟಿಆರ್‌ಪಿಯಲ್ಲಿ ಕೂಡ ಹಿಂದೆ ಬೀಳುತ್ತವೆ. ಇದೇ ಕಾರಣಕ್ಕೆ ಕುತೂಹಲ ಉಳಿಸಿಕೊಳ್ಳಲು ತಂಡಗಳು ಮಾಡುವ ಕಸರತ್ತು ಅಷ್ಟಿಷ್ಟಲ್ಲ.
ಕಲರ್ ಕನ್ನಡ ವಾಹಿನಿಯ 'ಭಾಗ್ಯಲಕ್ಷ್ಮಿ' ಧಾರಾವಾಹಿ ಮತ್ತೆ ವೀಕ್ಷಕರ ಗಮನ ಸೆಳೆದಿದೆ. ತಾಂಡವ್ ಮನೆ ಬಿಟ್ಟು ಶ್ರೇಷ್ಠಾ ಜೊತೆ ಬದುಕಲು ಶುರು ಮಾಡಿದ ಮೇಲೆ ಅಷ್ಟೇನು ಮಜಾ ಎನಿಸುತ್ತಿರಲಿಲ್ಲ. ಅತ್ತ ಭಾಗ್ಯ ಸಾಧನೆಯ ಕಥೆ ಇತ್ತ ಕೌಟುಂಬಿಕ ಕಲಹದ ಸುತ್ತಾ ಕಥೆ ಗಿರಿಕಿ ಹೊಡೆಯುತ್ತಿತ್ತು. ಅದೇ ಐದಾರು ಪಾತ್ರಗಳ ಸುತ್ತಾ ಧಾರಾವಾಹಿ ನೋಡುಗರಿಗೆ ಬೇಸರ ಮೂಡಿಸಿತ್ತು. ಇಂತಹ ಸಮಯದಲ್ಲೇ ಭಾಗ್ಯ ಸಹೋದರಿ ಪೂಜಾ ಮದುವೆ ಟಾಪಿಕ್ ಹೈಲೆಟ್ ಮಾಡಲಾಯಿತು.

ಪೂಜಾ ಹಾಗೂ ಕಿಶನ್ ಲವ್ ಸ್ಟೋರಿ ಈಗ ವೀಕ್ಷಕರಿಗೆ ಹೊಸ ಅನುಭೂತಿ ನೀಡುತ್ತಿದೆ. ತಾಂಡವ್, ಭಾಗ್ಯ, ಶ್ರೇಷ್ಠಾ, ಕುಸುಮಾ ಬಿಟ್ಟು ಇದೀಗ ಕಿಶನ್ ಫ್ಯಾಮಿಲಿ ಕಥೆ ಮುನ್ನಲೆಗೆ ಬಂದಿದೆ. ಭಾಗ್ಯಳ ತಂಗಿಯನ್ನು ಮನೆಯ ಸೊಸೆ ಮಾಡಿಕೊಳ್ಳಬೇಕು ಎನ್ನುವುದು ಕಿಶನ್ ತಂದೆ ಆಸೆ. ಕಿಶನ್ ಕೂಡ ಪೂಜಾ ಪ್ರೀತಿಲಿ ಬಿದ್ದಿದ್ದಾನೆ. ಆದರೆ ಕಿಶನ್ ಸಹೋದರ ಹಾಗೂ ಸಹೋದರಿಗೆ ಇದು ಇಷ್ಟವಿಲ್ಲ. ಭಾಗ್ಯ ನಮ್ಮ ಆಸ್ತಿ ಅಂತಸ್ತು ನೋಡಿ ತಂಗಿಯ ದಾಳವಾಗಿ ಬಳಸಿಕೊಂಡು ಏನೋ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನುವುದು ಅವರಿಬ್ಬರ ಲೆಕ್ಕಾಚಾರ. ಹೇಗಾದರೂ ಮಾಡಿ ಮದುವೆ ತಡೆಯಬೇಕು ಎಂದು ಇಬ್ಬರೂ ಕರಸತ್ತು ಆರಂಭಿಸಿದ್ದಾರೆ.
ಕಿಶನ್ ಪಾತ್ರದಲ್ಲಿ ರಾಜೇಶ್ ಧ್ರುವ ನಟಿಸುತ್ತಿದ್ದಾರೆ. ಆತನ ಸಹೋದರಿ ಕನ್ನಿಕಾ ಪಾತ್ರದಲ್ಲಿ ಸುಕೃತಾ ನಾಗ್ ಅಬ್ಬರಿಸುತ್ತಿದ್ದಾರೆ. ಇನ್ನು ಕಿಶನ್ ಸಹೋದರನಾಗಿ ಹರೀಶ್ ರಾಜ್ ಬಣ್ಣ ಹಚ್ಚಿದ್ದಾರೆ. ಇನ್ನು ಕಿಶನ್ ತಂದೆ ರಮನಾಥ್ ಕಾರಂತ್ ಆಗಿ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ನಟಿಸುತ್ತಿದ್ದಾರೆ. ಈ ಹಿಂದೆ 'ಅಕ್ಷಿಸಾಕ್ಷಿ' ಧಾರಾವಾಹಿಯಲ್ಲಿ ಕೂಡ ಧ್ರುವ, ಸುಕೃತಾ ಇಬ್ಬರ ತಂದೆ ಪಾತ್ರದಲ್ಲಿ ಮುಖ್ಯಮಂತ್ರಿ ಚಂದ್ರು ಕಾಣಿಸಿಕೊಂಡಿದ್ದರು. ಇನ್ನು ದಿಢೀರನೆ 'ಭಾಗ್ಯಲಕ್ಷ್ಮಿ' ತಂಡ ಸೇರಿರುವ ರಾಜೇಶ್ ಧ್ರುವ ತಮ್ಮ ಪಾತ್ರದ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.
ಕಿಶನ್ ಪಾತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಬಗ್ಗೆ ಹೇಳಿ
'ಶ್ರೀಗೌರಿ' ಎಂಬ ಧಾರಾವಾಹಿಯಲ್ಲಿ ಇದಕ್ಕೂ ಮುನ್ನ ನಟಿಸಿದ್ದೆ. ಆ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೂಡ ಇದು ಒಳ್ಳೆ ಟಾಕ್ ಕ್ರಿಯೇಟ್ ಮಾಡಿತ್ತು. ರಾಜೇಶ್‌ಗೆ ಒಳ್ಳೆ ಪಾತ್ರ ಕೊಟ್ಟರೆ ಚೆನ್ನಾಗಿ ಮಾಡ್ತಾನೆ ಎಂಬ ನಂಬಿಕೆ ಬಂದಿತ್ತು. 'ಭಾಗ್ಯಲಕ್ಷ್ಮಿ' ಧಾರಾವಾಹಿ ಪಾತ್ರಕ್ಕೆ ಆಯ್ಕೆ ಆಗಲು ಅದೇ ಕಾರಣ ಎನಿಸುತ್ತಿದೆ. ಕಾಮಿಡಿ, ಜೋವಿಯಲ್, ಲವರ್ ಬಾಯ್ ಪಾತ್ರ ಇದು, ಚೆನ್ನಾಗಿದೆ.
'ಭಾಗ್ಯಲಕ್ಷ್ಮಿ' ಕಥೆಗೆ ಕಿಶನ್ ಟಾಪಿಕ್ ಹೊಸ ಮೆರುಗು ತಂದಿದೆ ಅಲ್ಲವೇ?
ಹೌದು. ಕೆಲವೇ ಪಾತ್ರಗಳ ಸುತ್ತಾ 800 ಎಪಿಸೋಡ್‌ಗಳನ್ನು ಕಟ್ಟಿಕೊಟ್ಟಿದ್ದರು. ವೀಕ್ಷಕರು ಕೂಡ ಈ ಬಗ್ಗೆ ಕಾಮೆಂಟ್ ಮಾಡುತ್ತಿದ್ದರು. ಇದು ವಾಹಿನಿ ಗಮನಕ್ಕೂ ಬಂದಿತ್ತು. ಏನಾದರೂ ಬದಲಾವಣೆ ತರಬೇಕು ಎಂದಾಗ ಭಾಗ್ಯಳ ತಂಗಿ ಪೂಜಾ ಮದುವೆ ಎನ್ನುವುದು ಹೊಸ ಆಯಾಮ ಅಲ್ಲವೇ. ಅದಕ್ಕೆ ಒಬ್ಬ ಹುಡುಗ, ಅವನ ಫ್ಯಾಮಿಲಿ ಬರಬೇಕಿತ್ತು. ಅದನ್ನು ತಂದಿದ್ದಾರೆ. ಧಾರಾವಾಹಿಯಲ್ಲಿ ಹೊಸ ಪಾತ್ರಗಳು ಬಂದಾಗ ವೀಕ್ಷಕರಿಗೂ ಖುಷಿ ಆಗುತ್ತದೆ. ನಾನು, ಸುಕೃತಾ, ಚಂದ್ರು ಸರ್ ಒಟ್ಟಿಗೆ ಕಾಣಿಸಿಕೊಂಡಿರುವುದು 'ಅಗ್ನಿಸಾಕ್ಷಿ' ಧಾರಾವಾಹಿಯನ್ನು ನೆನಪಿಸುತ್ತಿದೆ. ಅದು ವೀಕ್ಷಕರಿಗೂ ಖುಷಿ ತಂದಿದೆ.

ಚಂದ್ರು ಸರ್, ಸುಕೃತಾ ಜೊತೆ ಮತ್ತೆ ನಟಿಸುತ್ತಿರುವ ಅನುಭವ?
ಬಹಳ ಖುಷಿಯಿದೆ. ಕೊನೆಯಾಗಿ 2019ರಲ್ಲಿ ನಾವು ಒಟ್ಟಿಗೆ ನಟಿಸಿದ್ದೆವು. 6 ವರ್ಷಗಳ ಬಳಿಕ ಮತ್ತೆ ಜೊತೆಯಾಗಿದ್ದೇವೆ. ಚಂದ್ರು ಸರ್ ಜೊತೆ ನಟಿಸುವುದು ನಿಜಕ್ಕೂ ಅದ್ಭುತ. ಅವರು ಸಹಕಲಾವಿದರನ್ನು ಸದಾ ಹುರಿದುಂಬಿಸುತ್ತಾರೆ. ಹೊಸ ಕಲಾವಿದರಂತೆ ನಮ್ಮೊಟ್ಟಿಗೆ ಬೆರೆಯುತ್ತಾರೆ. ಅವರಿಗೆ ನಾನು ಹೇಳ್ತಿರ್ತೀನಿ, ನೀವು ನಿನ್ನೆ ಮೊನ್ನೆ ಬಂದವರಂತೆ ಬಹಳ ಖುಷಿಯಾಗಿ ನಮ್ಮೊಟ್ಟಿಗೆ ನಟಿಸುತ್ತೀರಾ. ಹಿರಿಯ ಕಲಾವಿದ ಎನ್ನುವ ಯಾವುದೇ ವ್ಯತ್ಯಾಸ ಬಾರದಂತೆ ನೋಡಿಕೊಳ್ತೀರಾ ಎನ್ನುತ್ತೇನೆ.
ಕಥೆ ಮುಗೀತು ಎನ್ನುವ ಹೊತ್ತಿಗೆ ಕಿಶನ್ ಎಂಟ್ರಿ ಆಯ್ತಾ?
'ಲಕ್ಷ್ಮಿಬಾರಮ್ಮ' ಮುಗಿದಾಗಲೇ 'ಭಾಗ್ಯಲಕ್ಷ್ಮಿ' ಕೂಡ ಮುಗಿಯುತ್ತದೆ ಎಂದು ಕೆಲವರು ಅಂದುಕೊಂಡಿದ್ದರು. ಹೊಸ ಸೆಗ್ಮೆಂಟ್ ಬಂದಾಗ ವೀಕ್ಷಕರಿಗೂ ಹೊಸತು ಅನ್ನಿಸುತ್ತದೆ. ನನಗೂ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿ ಅಯ್ಯೋ ಧಾರಾವಾಹಿ ನೋಡುವುದು ಬಿಟ್ಟುಬಿಟ್ಟಿದ್ದೆವು. ನಿನ್ನ ಪಾತ್ರ ಎಂಟ್ರಿಯಾದ ಬಳಿಕ ಮತ್ತೆ ನೋಡಬೇಕು ಎನಿಸುತ್ತಿದೆ. ಚೆನ್ನಾಗಿ ಬರ್ತಿದೆ, ನೋಡ್ತಿದ್ದೇವೆ ಎನ್ನುತ್ತಾರೆ. ಕಥೆಯಲ್ಲಿ ಬದಲಾವಣೆ ಮುಖ್ಯ, ಅದನ್ನು ಒಳ್ಳೆ ರೀತಿಯಲ್ಲಿ ಮಾಡಿರುವುದಕ್ಕೆ ವಾಹಿನಿಯವರನ್ನು ಮೆಚ್ಚಲೇಬೇಕು.
ನಿಮ್ಮ ಮುಂದಿನ ಪ್ರಾಜೆಕ್ಟ್‌ಗಳು?
'ನಾತಿಚರಾಮಿ' ನಡೀತಿದೆ. 200 ಎಪಿಸೋಡ್ ಆಯ್ತು. ಎರಡನ್ನು ನೋಡುವ ವೀಕ್ಷಕರು ಇದ್ದಾರೆ. ಖುಷಿಯಿದೆ. 'ಪೀಟರ್' ಸಿನಿಮಾ ಆದಷ್ಟು ಬೇಗ ಬರಲಿದೆ. ತೆಲುಗಿನಲ್ಲಿ ಒಂದು ಸಿನಿಮಾ ನಿರ್ದೇಶನ ಮಾಡಿ ನಟಿಸಿದ್ದೇನೆ. ಇತ್ತೀಚೆಗೆ ಆ ಸಿನಿಮಾ ಚಿತ್ರೀಕರಣ ಮುಗೀತು. ಆದಷ್ಟು ಬೇಗ ಆ ಸಿನಿಮಾ ಕೂಡ ತೆರೆಗೆ ಬರಲಿದೆ.


Click it and Unblock the Notifications











