'ರಕ್ಕಸಪುರ'ದ ನಿಜವಾದ ನಟ ರಕ್ಕಸ ಈ ಅನಿರುದ್ಧ್ ಭಟ್; ಹೀರೊ ಆಗಲು ಬಂದು ವಿಲನ್ ಆದ ಕಥೆಯಿದು
ರವಿ ಸಾರಂಗ ನಿರ್ದೇಶನದಲ್ಲಿ ರಾಜ್ ಬಿ ಶೆಟ್ಟಿ ನಟನೆಯ 'ರಕ್ಕಸಪುರದೋಳ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳುವ ಸಿನಿಮಾ ನೋಡುಗರಿಗೆ ಸಖತ್ ಕಿಕ್ ಕೊಡ್ತಿದೆ. ರಾಜ್. ಬಿ ಶೆಟ್ಟಿ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಬಿಟ್ಟರೆ ಬಹುತೇಕ ಹೊಸಬರೇ ಚಿತ್ರದಲ್ಲಿ ನಟಿಸಿದ್ದಾರೆ.
'ರಕ್ಕಸಪುರದೋಳ್' ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಎದುರು ರಕ್ಕಸನಂತೆ ಅಬ್ಬರಿಸಿರುವ ಅನಿರುದ್ಧ್ ಭಟ್ ಎಲ್ಲರ ಗಮನ ಸೆಳೆದಿದ್ದಾರೆ. ನೆಗೆಟಿವ್ ರೋಲ್‌ನಲ್ಲಿ ಅದ್ಭುತವಾಗಿ ನಟಿಸಿ ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆಡಿಷನ್ ಕೊಟ್ಟು ಒಳ್ಳೆ ಪಾತ್ರಗಳನ್ನು ದಕ್ಕಿಸಿಕೊಂಡು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುತ್ತಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಏನು ಎನ್ನುವುದು ಹೇಳುವುದು ಬೇಡ. ಕುತೂಹಲ ಹಾಗೆಯೇ ಇರಲಿ. ಅಷ್ಟಕ್ಕೂ ಆದಿ ಹಾಗೂ ಅರುಣ್ ಆಗಿ ದ್ವಿಪಾತ್ರದಲ್ಲಿ ನಟಿಸಿ ಎಲ್ಲರ ಹುಬ್ಬೇರಿಸಿರುವ ಪ್ರತಿಭೆ ಯಾರು? ಅವರ ಹಿನ್ನೆಲೆ ಏನು? ಈ ಅವಕಾಶ ಸಿಕ್ಕಿದ್ದು ಹೇಗೆ? ಸ್ವತಃ ಅನಿರುದ್ಧ್ ಭಟ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.

ನಿಮ್ಮ ಊರು, ಹಿನ್ನಲೆ?
ಹುಟ್ಟಿದ್ದು ಸುಳ್ಯದಲ್ಲಿ. ಬೆಳೆದಿದ್ದು ಕೊಡಗಿನ ಕುಶಾಲನಗರದಲ್ಲಿ. ಜಿಕೆವಿಕೆಯಲ್ಲಿ ಅಗ್ರಿಕಲ್ಚರ್ ಬಿಎಸ್ಸಿ ಓದಿದ್ದು. 2017ರಲ್ಲಿ ಶಾರ್ಟ್ ಫಿಲ್ಮ್‌ಗಳಲ್ಲಿ ನಟಿಸೋಕೆ ಆರಂಭಿಸಿದೆ. 6 ವರ್ಷಗಳಲ್ಲಿ ಬಳಿಕ 'ಗುರುದೇವ್ ಹೊಯ್ಸಳ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಸದ್ದಿಲ್ಲದೇ ಎನ್ನುವ ಶಾರ್ಟ್ ಫಿಲ್ಮ್ ಮಾಡಿದ್ದೆ. ಅದನ್ನು ನೋಡಿ ಆ ಚಿತ್ರಕ್ಕೆ ಆಡಿಷನ್ ಕೊಡುವಂತೆ ಕೇಳಿದ್ದರು. ಹೀಗೆ ಸಿನಿಮಾ ಅವಕಾಶ ಸಿಕ್ಕಿತು.
'ರಕ್ಕಸಪುರದೋಳ್' ಅವಕಾಶ ಸಿಕ್ಕಿದ್ದು ಹೇಗೆ?
ಸುದೀಪ್ ಸರ್ ನಟನೆಯ 'ಮ್ಯಾಕ್ಸ್' ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದೆ. ಆ ಬಳಿಕ 'ರಕ್ಕಸಪುರದೋಳ್' ಚಿತ್ರದ ಸಹ ನಿರ್ದೇಶಕರೊಬ್ಬರು 'ಗುರುದೇವ್ ಹೊಯ್ಸಳ' ಚಿತ್ರದಲ್ಲಿ ಕೆಲಸ ಮಾಡಿದ್ದರು. ಅವರು ಈ ಪಾತ್ರಕ್ಕೆ ಆಡಿಷನ್ ಕೊಡಲು ಹೇಳಿದ್ರು. ಆಡಿಷನ್ ಕೊಟ್ಟ ಮೇಲೆ ಓಕೆ ಆಯಿತು.
ಸಿನಿಮಾ ಪಾತ್ರಕ್ಕೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ?
ನಾನು ಇದನ್ನೆಲ್ಲಾ ನಿರೀಕ್ಷಿಸಿರಲಿಲ್ಲ. ಒಂದು ಹಂತಕ್ಕೆ ಚೆನ್ನಾಗಿ ಮಾಡಿದ್ದೀನಿ ಅನ್ನಿಸಿತ್ತು. ಆದರೆ ಈಗ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಅಚ್ಚರಿ ಎನಿಸುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಜೊತೆ ಸಿನಿಮಾ ನೋಡಿದಾಗ ಅದರ ಅನುಭವ ಆಗ್ತಿದೆ. ಚಿಕ್ಕ ಮಕ್ಕಳು, ವಯಸ್ಸಾದವರು ನನ್ನನ್ನು ಮಾತನಾಡಿಸುತ್ತಿದ್ದಾರೆ. ವಿಲನ್ ಪಾತ್ರ ಮಾಡಿದವರನ್ನು ಜನ ಇಷ್ಟಪಡುವುದು ಕಮ್ಮಿ. ಆದರೆ ನನ್ನನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಾರೆ. ಹೀರೊ ಆಗಿ ನಟಿಸಿ ಎನ್ನುತ್ತಾರೆ.
ಹೀರೊ ಆಗುವ ಕನಸು?
ಖಂಡಿತ. ನಾನು ಹೀರೊ ಆಗಬೇಕು ಎಂದು ಚಿತ್ರರಂಗಕ್ಕೆ ಬಂದವನು. ಆದರೆ ಸಿಕ್ಕ ಅವಕಾಶಗಳಲ್ಲಿ ನಟಿಸುತ್ತಿದ್ದೀನಿ. ಜನ ಹೀರೊ. ವಿಲನ್ ಎಂದು ನೋಡದೇ ಒಳ್ಳೆ ನಟನೆ ಮಾಡಿದ್ದೀನಿ ಎಂದು ಹೇಳುತ್ತಿದ್ದಾರೆ, ಖುಷಿ ಆಗ್ತಿದೆ. ನನಗೆ ಈಗ 28 ವರ್ಷ ವಯಸ್ಸು. ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆ ಪಾತ್ರಗಳ ನಿರೀಕ್ಷೆಯಲ್ಲಿದ್ದೀನಿ.
ರಂಗಭೂಮಿ ಹಿನ್ನಲೆ ಇದ್ಯಾ?
ಇಲ್ಲ. ಶಾರ್ಟ್ ಫಿಲ್ಮ್‌ಗಳಲ್ಲಿ ನಟಿಸುತ್ತಾ ನಾನು ನಟನೆಯ ಪಟ್ಟುಗಳನ್ನು ಕಲಿತೆ. ರಂಗಭೂಮಿಯಲ್ಲಿ ನಟಿಸುವಂತೆ ಸಾಕಷ್ಟು ಜನ ಸಲಹೆ ನೀಡಿದರು. ಆದರೆ ನಾನು ಹೋಗಲಿಲ್ಲ. ನನ್ನದೇ ಹಾದಿಯಲ್ಲಿ ನಟನೆಯನ್ನು ಮೈಗೂಡಿಸಿಕೊಂಡು ಬರ್ತಿದ್ದೀನಿ. ಯಾವುದೇ ಸಿನಿಮಾ ಅಥವಾ ಪಾತ್ರಗಳಿಂದ ಸ್ಫೂರ್ತಿ ಪಡೆಯಲಿಲ್ಲ. ಈ ಚಿತ್ರದಲ್ಲಿ ಎರಡೂ ಪಾತ್ರಗಳಿಗೆ ನನ್ನದೇ ರೀತಿಯಲ್ಲಿ ತಯಾರಿ ಮಾಡಿಕೊಂಡು ನಟಿಸಿದೆ. ರಾಜ್ ಬಿ. ಶೆಟ್ಟಿ ಸರ್ ಸಾಕಷ್ಟು ಸಲಹೆ ಕೊಟ್ಟರು. ಅದೆಲ್ಲ ಸಹಾಯಕವಾಯಿತು.
'ರಕ್ಕಸಪುರದೋಳ್' ಪಾತ್ರಕ್ಕಾಗಿ ತಯಾರಿ?
ಆಡಿಷನ್ ಬಳಿಕ ಈ ಪಾತ್ರ ಹೇಗಿರುತ್ತದೆ ಎಂದು ನಿರ್ದೇಶಕರು ಹೇಳಿದರು. ಅದಕ್ಕೆ ತಕ್ಕಂತೆ ನಾನು ಸಿದ್ಧನಾದೆ. ಇಂತಹ ಪಾತ್ರಗಳಲ್ಲಿ ಕೊಂಚ ಜಾಸ್ತಿ ಆದರೂ ಓವರ್ ಆಕ್ಟಿಂಗ್ ಎನಿಸಿಬಿಡುತ್ತದೆ. ಆಡಿಷನ್ ಸಮಯದಲ್ಲಿ ಬಹಳ ಭಯವಾಗಿತ್ತು. ನನ್ನ ನಟನೆ ಬಗ್ಗೆ ಪ್ರೇಮ್ ಸರ್, ರಕ್ಷಿತಾ ಪ್ರೇಮ್ ಅವರು ನೋಡಿ ಮೆಚ್ಚುಗೆ ಸೂಚಿಸಿದರು.
ಮುಂದಿನ ಸಿನಿಮಾಗಳು, ಡ್ರೀಲ್ ರೋಲ್?
'ಗುರುದೇವ್ ಹೊಯ್ಸಳ', 'ಮ್ಯಾಕ್ಸ್' ಬಳಿಕ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದೆ. ಇದು ನನ್ನ 4ನೇ ಸಿನಿಮಾ. ಮತ್ತಷ್ಟು ಒಳ್ಳೆ ಅವಕಾಶಗಳ ನಿರೀಕ್ಷೆಯಲ್ಲಿದ್ದೀನಿ. ಡ್ರೀಲ್ ರೋಲ್ ಅಂತ ಯಾವುದು ಇಲ್ಲ. 'ಜೋಕರ್' ರೀತಿಯ ಸಿನಿಮಾಗಳನ್ನು ನೋಡಿದಾಗ ಅಂತಹ ಪಾತ್ರಗಳನ್ನು ಮಾಡುವ ಆಸೆಯಿದೆ. ಸದ್ಯಕ್ಕೆ 'ರಕ್ಕಸಪುರದೋಳ್' ಚಿತ್ರದ ಪಾತ್ರಕ್ಕೆ ತದ್ವಿರುದ್ಧ ಎನ್ನುವಂತಹ ಒಂದು ಸಾಫ್ಟ್ ಆಗಿರುವ ಪಾತ್ರ ಮಾಡುವ ಆಲೋಚನೆಯಲ್ಲಿದ್ದೀನಿ. ಸುದೀಪ್ ಸರ್, ಯಶ್ ಸರ್, ದರ್ಶನ್ ಸರ್ ಎಲ್ಲರ ನಟನೆ ಇಷ್ಟ. ಅವರಂತೆಯೇ ಒಳ್ಳೆ ಪಾತ್ರಗಳನ್ನು ಮಾಡುವ ಆಸೆಯಿದೆ.


Click it and Unblock the Notifications











