ಫೈಟ್ ಮಾಸ್ಟರ್ 'ಡಿಫ್ರೆಂಟ್ ಡ್ಯಾನಿ' ಸಾವಿನಿಂದ ಪಾರಾಗಿದ್ದೇ ಪವಾಡ!
ಚಿತ್ರರಂಗ ಮೇಲಿನಿಂದನ ನೋಡಲು ತುಂಬಾನೆ ಕಲರ್ ಫುಲ್. ಆದರೆ ಒಳಗೆ ಸಾಕಷ್ಟು ಸವಾಲುಗಳು ಇರುತ್ತವೆ. ಅದರಲ್ಲೂ ಸಾಹಸ ಕಲಾವಿದರು ನಿತ್ಯವೂ ಸವಾಲುಗಳನ್ನು ಎದುರಿಸಬೇಕು. ಪ್ರತಿ ದೃಶ್ಯವೂ ಅವರಿಗೆ ಸವಾಲೇ. ಚಿತ್ರೀಕರಣ ಎನ್ನುವುದು ಸಹಾಸ ಕಲಾವಿದರಿಗೆ ಸದಾ ಅಗ್ನಿ ಪರೀಕ್ಷೆ.
ನೂರಾರು ಚಿತ್ರಗಳಲ್ಲಿ ಫೈಟರ್ ಆಗಿ, ಫೈಟ್ ಮಾಸ್ಟರ್ ಆಗಿ ಗುರುತಿಸಿಕೊಂಡಿರುವ ಕನ್ನಡದ ಹೆಸರಾಂತ ಫೈಟ್ ಮಾಸ್ಟರ್‌ಗಳಲ್ಲಿ ಡಿಫ್ರೆಂಟ್ ಡ್ಯಾನ್ ಕೂಡ ಒಬ್ಬರು. ಮಾಸ್ಟರ್ ಡಿಫ್ರೆಂಟ್ ಡ್ಯಾನಿ ನೂರಾರು ಸಾಹಸ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ಸಾವಿನ ದವಡೆಯಿಂದ ಕ್ಷಣಾರ್ಧದಲ್ಲೇ ಪಾರಾಗಿರುವು ಮಾತ್ರ ಪವಾಡ.
'ಎಕ್ಸ್‌ಕ್ಯೂಸ್ ಮಿ' ಚಿತ್ರದ ಮೂಲಕ ಸ್ಟಂಟ್ ಮಾಸ್ಟರ್ ಆಗಿ ಕನ್ನಡಕ್ಕೆ ಎಂಟ್ರಿ ಕೊಟ್ಟರು ಮಾಸ್ಟರ್ ಡ್ಯಾನಿ. 'ದುನಿಯಾ' ಚಿತ್ರಕ್ಕೆ ಮಾಸ್ಟರ್ ಡ್ಯಾನಿ ಸಂಯೋಜಿಸಿದ ಸಾಹಸ ಸನ್ನಿವೇಶಗಳು ಡಿಫರೆಂಟ್ ಆಗಿದ್ದ ಕಾರಣ ಅವರ ಹೆಸರು ಅಲ್ಲಿಂದ ಡಿಫರೆಂಟ್ ಡ್ಯಾನಿ ಎಂದು ಬದಲಾಯಿತು. ಡ್ಯಾನಿ ಮಾಸ್ಟರ್ ಎದುರಿಸಿದ ಹಲವು ರೋಚಕ ಸನ್ನಿವೇಷಗಳನ್ನು ಫಿಲ್ಮೀ ಬೀಟ್ ಜೊತೆಗೆ ಹಂಚಿಕೊಂಡಿದ್ದು ಹೀಗೆ.

ವಿಷ್ಣುವರ್ಧನ್ ಡೂಪ್ ಮಾಡಿ ನೀರುಪಾಲಾಗಿದ್ದೆ: ಮಾಸ್ಟರ್ ಡ್ಯಾನಿ!
" ನಾನು 'ಹಿಮಪಾತ' ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಡೂಪ್ ಹಾಕಿದ್ದೆ. ಮೇಕೆದಾಟುನಲ್ಲಿ ಶೂಟಿಂಗ್ ಇತ್ತು. ಮೇಲಿಂದ ಜಂಪ್ ಮಾಡಿದೆ. ಅಲ್ಲೇ ಅಂದೇ ನಾನು ಸತ್ತು ಹೋಗಬೇಕಿತ್ತು. ಅದಕ್ಕೂ ಮುನ್ನ ಅಲ್ಲಿ 103 ಜನ ಸತ್ತು ಹೋಗಿದ್ದರು. ಅಲ್ಲಿ ತುಂಬಾ ಸುಳಿಗಳು ಇವೆ. ನಾನು ಬಿದ್ದು 10 ನಿಮಿಷ ಸುಳಿಯಲ್ಲಿ ತೇಲಿಕೊಂಡು ನೀರಿನ ಒಳಗೆ ಒಂದೂವರೆ ಕಿಲೋಮೀಟರ್ ಕೊಚ್ಚಿ ಹೋಗಿದ್ದೆ. ಆಮೇಲೆ ಹೇಗೋ ಸುಧಾರಿಸಿಕೊಂಡು ಅಲ್ಲಿಂದ ಮೇಲೆ ಬಂದೆ."

ಹಾಯ್ ಬೆಂಗಳೂರಲ್ಲಿ ಸೊಂಟ ಮುರಿತು!
"ಹಾಯ್ ಬೆಂಗಳೂರು ಚಿತ್ರದ ಶೂಟಿಂಗ್‌ನಲ್ಲಿ ದೊಡ್ಡ ಅವಘಡ ಸಂಭವಿಸಿತ್ತು. ಈಗಲೂ ನನ್ನ ಸೊಂಟ ಕೊಂಚ ಬಾಗಿದೆ. ಅದಕ್ಕೆ ಈ ಘಟನೆ ಕಾರಣ. ನಾನು ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದೆ. ಗಾಡಿಗಳನ್ನು ನಿಲ್ಲಿಸಬೇಕಿತ್ತು, ಆಗ ಜೀಪು ಬಂದು ಗುದ್ದಿಬಿಟ್ಟಿತ್ತು. ಜೀಪ್ ಬಲಕ್ಕೆ ಚಲಿಸಬೇಕಿತ್ತು, ನಾನು ಎಡಕ್ಕೆ ಹಾರಬೇಕಿತ್ತು, ಆದರೆ ಜೀಪ್ ಎಡಕ್ಕೆ ಬಂದು ನೇರವಾಗಿ ಗುದ್ದಿಬಿಟ್ಟ ಇದರಿಂದ ಎರಡು ವರ್ಷ ಮನೆಯಲ್ಲಿ ನಾನು ರೆಸ್ಟ್ ಮಾಡಬೇಕಾಗಿತ್ತು."

ಲಾಕಪ್ ಡೆತ್, ಯುದ್ಧ ಚಿತ್ರದಲ್ಲಿ ಅಪಘಾತ!
"ಯುದ್ಧ ಸಿನಿಮಾದಲ್ಲೂ ಕೂಡ ದೊಡ್ಡದೊಂದು ಅವಘಡ ನಡೆದಿತ್ತು. ಶೂಟಿಂಗ್ ಮಾಡುವ ವೇಳೆ ಅಂಬಾಸಿಡರ್ ಕಾರಿನ ಹಿಂದಿನ ಗ್ಲಾಸ್ ತಲೆಯಿಂದ ಹೊಡೆಯಬೇಕಿತ್ತು. ತಲೆಯಿಂದ ಹೊಡೆದೆ ಆದರೆ ಅಲ್ಲೇ ಮುಖಕ್ಕೆ ಗಾಯ ಆಯ್ತು 7 ಒಲಿಗೆ ಹಾಕಿಸಿದ್ದೆ. ಹಾಗೆ 'ಲಾಕಪ್ ಡೆತ್' ಚಿತ್ರದ ಚೇಸಿಂಗ್ ದೃಶ್ಯದಲ್ಲಿ, ಟಿಟಿ ಹೊಡ್ಕೊಂಡು ಹೋಗುತ್ತೆ. ನಾನು ಐಸ್‌ಕ್ರೀಮ್ ಪಾರ್ಲರ್ ನಲ್ಲಿ ನಿಂತಿರುತ್ತೇನೆ ಆಗ ಅಲ್ಲಿಂದ ಜಂಪ್ ಮಾಡೋಕೆ ಹೋಗಿ ತುಂಬಾ ಏಟಾಗಿತ್ತು.

ಗೋಣಿ ಸುತ್ತಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡೆ!
"ಮೊದಲೆಲ್ಲಾ ಸಿನಿಮಾಗಳಲ್ಲಿ ಅಭಿನಯಿಸಬೇಕಾದರೆ ಹೆಚ್ಚಿನ ಸೇಫ್ಟಿ ಇರುತ್ತಿರಲಿಲ್ಲ. ಮೈಗೆ ಬೆಂಕಿಹಚ್ಚಿ ಕೊಳ್ಳಬೇಕಾದ ದೃಶ್ಯ ತುಂಬಾ ಸವಾಲು ಆಗಿರುತ್ತಿತ್ತು. ಆಗ ಫೈರ್ ಜಾಕೆಟ್ ಇರಲಿಲ್ಲ ಮೈಗೆ ಗೋಣಿ ಚೀಲ ಸುತ್ತಿಕೊಂಡೇ ಹಲವು ಚಿತ್ರಗಳಲ್ಲಿ ಮೈ ಗೆ ಬೆಂಕಿ ಹಚ್ಚಿ ಕೊಂಡಿದ್ದೇನೆ. ಇದು ಕೂಡ ತುಂಬಾ ರಿಸ್ಕ್ ಇರುವಂತಹದ್ದು.
"ಹಾಗೆ ಹಾಲುಂಡ ತವರು ಸಿನಿಮಾದಲ್ಲಿ 40 ಅಡಿಯಿಂದ, ಮನೆಯ ಹೆಂಚಿನ ಮೇಲೆ ಜಂಪ್ ಮಾಡಿದ್ದೆ. ಆಗಲೂ ಗಾಯಗಳಾಗಿದ್ದವು. ಇಂತಹ ಸಾಕಷ್ಟು ಚಿತ್ರಗಳ ಸಾಕಷ್ಟು ದೃಶ್ಯಗಳಲ್ಲಿ ಅಭಿನಯಿಸಿದ್ದೇನೆ."

ನಮಗೆ ಇಲ್ಲಿ ಬೆಲೆ ಇಲ್ಲ, ಬೇರೆಯವರಿಗೆ ಬೇಡಿಕೆ ಹೆಚ್ಚು!
ಇಲ್ಲಿ ನಾವು ಎಷ್ಟೇ ಕೆಲಸ ಮಾಡಿದರೂ, ಎಷ್ಟೇ ಗುರುತಿಸಿಕೊಂಡರು ಪ್ರಯೋಜನವಿಲ್ಲ. ಅದೇ ಹೊರಗಡೆ ಹೀಗಿಲ್ಲ ಪೀಟರ್ ಹೈನ್ಸ್ ನನ್ನ ಜೊತೆಗೆ ಚಿತ್ರರಂಗಕ್ಕೆ ಬಂದ ಇವತ್ತು ಎಲ್ಲೋ ಇದ್ದಾನೆ. ನಮ್ಮಲ್ಲಿ ಹೊರಗಿನವರಿಗೆ ಬೆಲೆ ಜಾಸ್ತಿ. ಬೇರೆ ಕಡೆಯಿಂದ ಫೈಟ್ ಮಾಸ್ಟರ್ ಬಂದರೆ ಅವರಿಗೆ 20 ರಿಂದ 25 ದಿನ ಡೇಟ್ ಕೊಡುತ್ತಾರೆ. ನಾವೇ ಶೂಟ್ ಮಾಡಿದರೆ ಎರಡು ಅಥವಾ ಮೂರು ದಿನ ಮಾತ್ರ ಕೊಡುತ್ತಾರೆ. ಇಲ್ಲಿ ನಾವು ಏನೆ ಮಾಡಿದರು ಗುರುತಿಸುವುದಿಲ್ಲ, ಸರಿಯಾಗಿ ಬಳಸಿ ಕೊಳ್ಳುವುದಿಲ್ಲ."
ಮಾಸ್ಟರ್ ಡಿಫ್ರೆಂಟ್ ಡ್ಯಾನಿ ತಮ್ಮ ಸಿನಿಮಾ ಬದುಕಿನ ರೋಚಕ ಕಥೆಗಳನ್ನು ಹೀಗೆ ತೆರೆದಿಟ್ಟಿದ್ದಾರೆ. ಇಲ್ಲಿ ತನಕ ಫೈಟರ್ ಆಗಿ 326 ಚಿತ್ರಗಳಲ್ಲಿ ಅಭಿನಯಿಸಿದ್ದು, 680 ಚಿತ್ರಗಳಿಗೆ ಮಾಸ್ಟರ್ ಆಗಿ ಕೆಲಸ ಮಾಡಿದ್ದಾರೆ.


Click it and Unblock the Notifications











