ಕನ್ನಡ ಚಿತ್ರರಂಗದಲ್ಲೂ ಬ್ಯುಸಿ, ಪರಭಾಷೆಯತ್ತ ಸಂಜನಾ ಆನಂದ್ ಫೋಕಸ್
ಕನ್ನಡ ನಟಿಯರು ಒಬ್ಬೊಬ್ಬರಾಗಿ ಪರಭಾಷಾ ಚಿತ್ರರಂಗಗಳತ್ತ ಮುಖ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ಶ್ರೀಲೀಲಾ, ನೇಹಾ ಶೆಟ್ಟಿ, ನಭಾ ನಟೇಶ್, ಸಪ್ತಮಿ ಗೌಡ, ಆಶಿಕಾ ರಂಗನಾಥ್ ಹೀಗೆ ಹಲವರು ತೆಲುಗು, ತಮಿಳು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ಸಂಜನಾ ಆನಂದ್ ಸರದಿ.
'ಕೆಮೆಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ಮೂಲಕ ಸಂಜನಾ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ಬಳಿಕ 'ಸಲಗ' ಚಿತ್ರದಲ್ಲಿ ದುನಿಯಾ ವಿಜಯ್ ಜೋಡಿಯಾಗಿ ಸಕ್ಸಸ್ ಕಂಡಿದ್ದರು. 'ಶೋಕಿವಾಲ', 'ವಿಂಡೋ ಸೀಟ್' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ಇದೇ ವರ್ಷ ಬಂದಿದ್ದ 'ರಾಯಲ್' ಚಿತ್ರದಲ್ಲಿ ವಿರಾಟ್ ಜೋಡಿಯಾಗಿದ್ದರು. 'ನೇನು ಮೀಕು ಬಾಗ ಕಾವಲ್ಸಿನವಾಡಿನಿ' ಎಂಬ ತೆಲುಗು ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. ಇದೀಗ 'ಫುಲ್ ಬಾಟಲ್' ಎನ್ನುವ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ.

'ಹನಿಮೂನ್' ಎಂಬ ವೆಬ್ ಸೀರಿಸ್‌ನಲ್ಲಿ ನಾಗಭೂಷಣ್ ಜೋಡಿಯಾಗಿ ಸಂಜನಾ ಮಿಂಚಿದ್ದರು. ಇಂಜಿನಿಯರಿಂದ ಮುಗಿಸಿ ಸಾಫ್ಟ್‌ವೇರ್ ಕಂಪನಿಯಲ್ಲಿ ಸಂಜನಾ ಕೆಲಸಕ್ಕೆ ಸೇರಿದ್ದರು. ಸ್ನೇಹಿತರು ನಿರ್ಮಿಸಿದ ಶಾರ್ಟ್ ಫಿಲ್ಮ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅದನ್ನು ನೋಡಿ 'ಕೆಮೆಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ಆಡಿಷನ್‌ಗೆ ಕರೆದಿದ್ದರು. ಆಯ್ಕೆ ಕೂಡ ಆಗಿದ್ದರು. ಹೀಗೆ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಸಂಜನಾ ಎಂಟ್ರಿ ಕೊಟ್ಟಿದ್ದರು.
ಯಾವುದೇ ಆಕ್ಟಿಂಗ್ ಸ್ಕೂಲ್‌ನಲ್ಲಿ ಸಂಜನಾ ನಟನೆಯ ಅಆಇಈ ಕಲಿಯಲಿಲ್ಲ. ಮೊದಲ ಸಿನಿಮಾ ಮಾಡುವಾಗ ವರ್ಕ್‌ಶಾಪ್ ಮಾಡಲಾಗಿತ್ತು. ಅದು ಕ್ಯಾಮರಾ ಎದುರಿಸಲು ಸಹಾಯ ಮಾಡಿತ್ತು. ಇನ್ನು ಡ್ಯಾನ್ಸ್ ಎಂದರೆ ಬಹಳ ಇಷ್ಟ. ಇದು ನಟಿಸೋಕೆ ಪ್ಲಸ್ ಆಗಿತ್ತು. ಬಳಿಕ ಒಳ್ಳೆ ಒಳ್ಳೆ ಅವಕಾಶಗಳು ಹುಡುಕಿ ಬಂದಿದ್ದವು.
ಸದ್ಯ ಕನ್ನಡ ಸಿನಿಮಾಗಳಲ್ಲಿ ಕೂಡ ಸಂಜಾನಾ ಬ್ಯುಸಿಯಾಗಿದ್ದಾರೆ. ಯುವರಾಜ್‌ಕುಮಾರ್ ಜೋಡಿಯಾಗಿ 'ಎಕ್ಕ' ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಇಬ್ಬರೂ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ. 'ಹಯಗ್ರೀವ' ಹಾಗೂ 'ಮುಧೋಳ' ಚಿತ್ರದಲ್ಲಿ ಕೂಡ ಸಂಜನಾ ಮಿಂಚಿದ್ದಾರೆ. ಈ ಮೂರು ಸಿನಿಮಾಗಳು ಇದೇ ವರ್ಷ ತೆರೆಗೆ ಬರಲಿದೆ. ಕನ್ನಡದಲ್ಲಿ ಮತ್ತಷ್ಟು ಕತೆಗಳನ್ನು ಕೇಳುತ್ತಿದ್ದಾರೆ. ಆದಷ್ಟು ಬೇಗ ಮುಂದಿನ ಸಿನಿಮಾ ಘೋಷಣೆ ಮಾಡಲಿದ್ದಾರೆ.
'ಎಕ್ಕ' ಸಿನಿಮಾ ಮುಗಿಸಿದೆ
ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಬಗ್ಗೆ ಸಂಜನಾ ಆನಂದ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. "ರಾಯಲ್ ಚಿತ್ರದಲ್ಲಿ ಕೊನೆಯದಾಗಿ ನಾಯಕಿಯಾಗಿ ನಟಿಸಿದ್ದೆ. 'ಸೂತ್ರಧಾರ' ಚಿತ್ರದ ಹಾಡೊಂದರಲ್ಲಿ ಮಾತ್ರ ಕಾಣಿಸಿಕೊಂಡಿದ್ದೆ. ಬಹಳ ಖುಷಿಯಾಗುತ್ತಿದೆ. ಜೂನ್ 18ಕ್ಕೆ 'ಎಕ್ಕ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದರ ಪ್ರಚಾರಕ್ಕೆ ಸಿದ್ಧತೆ ನಡೀತಿದೆ. ನಿನ್ನೆ ನನ್ನ ಭಾಗದ ಚಿತ್ರೀಕರಣ ಮುಗೀತು. ಎರಡ್ಮೂರು ದಿನಗಳಲ್ಲಿ ಸಿನಿಮಾ ಕಂಪ್ಲೀಟ್ ಆಗುತ್ತದೆ" ಎಂದು ಸಂಜನಾ ಹೇಳಿದ್ದಾರೆ.
'ಎಕ್ಕ' ಚಿತ್ರದ ಪಾತ್ರ
ಯುವರಾಜ್‌ಕುಮಾರ್ ಅವರ ಜೊತೆ ನಟಿಸುತ್ತಿರವ 'ಎಕ್ಕ' ಚಿತ್ರದಲ್ಲಿ ಒಳ್ಳೆ ಪಾತ್ರ ಸಿಕ್ಕಿದೆ. ಇಬ್ಬರೂ ನಾಯಕಿಯರಲ್ಲಿ ನಾನು ಒಬ್ಬಳು, ಇಬ್ಬರಿಗೂ ಸಮನಾದ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಯಾರ ಪಾತ್ರ ಹೆಚ್ಚು ಕಮ್ಮಿ ಎಂದು ಹೇಳಲು ಸಾಧ್ಯವಿಲ್ಲ, ನನ್ನ ಪಾತ್ರ ಏನು ಎನ್ನುವುದನ್ನು ತೆರೆಮೇಲೆಯೇ ನೋಡಬೇಕು. ಪಿಆರ್‌ಕೆ ಬ್ಯಾನರ್‌ನಲ್ಲಿ ಕೆಲಸ ಮಾಡಿದ ಖುಷಿಯಿದೆ. ಅಪ್ಪು ಸರ್ ಜೊತೆ ಕೆಲಸ ಮಾಡುವ ಆಸೆ ಇತ್ತು. ಆದರೆ ಪಿಆರ್‌ಕೆ ಸಂಸ್ಥೆಯಲ್ಲಿ ಮಾಡುವಂತಾಗಿದೆ. 'ರಾಯಲ್' ಬಳಿಕ ನಂಬಿಕೆ ಇಟ್ಟು ಜಯಣ್ಣ ಬ್ಯಾನರ್‌ನಲ್ಲಿ ಅವಕಾಶ ಕೊಟ್ಟಿದ್ದಾರೆ. ಕೆಆರ್‌ಜಿ ಟಾಪ್ ಬ್ಯಾನರ್. ಹೀಗೆ 3 ಬ್ಯಾನರ್‌ಗಳು ಒಟ್ಟಾಗಿರುವ ಚಿತ್ರದಲ್ಲಿ ನಟಿಸುತ್ತಿರುವ ಖುಷಿಯಿದೆ. ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇನೆ" ಎಂದಿದ್ದಾರೆ.
ಮತ್ತೆರಡು ಸಿನಿಮಾಗಳ ಬಗ್ಗೆ ಮಾತುಕತೆ
'ಹಯಗ್ರೀವ' ಸಿನಿಮಾ ಕೂಡ ಇದೇ ವರ್ಷ ಬಿಡುಗಡೆ ಆಗಬಹುದು ಎನ್ನುತ್ತಿದ್ದಾರೆ. 'ಮುಧೋಳ್' ಸಿನಿಮಾ ಶೂಟಿಂಗ್ ಇನ್ನೆರಡು ದಿನ ಬಾಕಿಯಿದೆ. ವರ್ಷಾಂತ್ಯಕ್ಕೆ ಆ ಸಿನಿಮಾ ಬರಬಹುದು. ಇನ್ನು ಎರಡೂ ಸಿನಿಮಾಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಫೈನಲ್ ಆಗಬೇಕು. ಕೊನೆ ಹಂತದ ಮಾತುಕತೆಯಲ್ಲಿದ್ದೀನಿ ನೋಡಬೇಕು ಎಂದು ಮಾಹಿತಿ ನೀಡಿದ್ದಾರೆ.
ತೆಲುಗು ಚಿತ್ರದಲ್ಲಿ ನಟಿಸ್ತಿದ್ದೇನೆ
ಈಗ ಸದ್ಯ ತೆಲುಗು ತೆಲುಗು ಚಿತ್ರದಲ್ಲಿ ನಟಿಸ್ತಿದ್ದೀನಿ. ಹೊಸಬರ ತಂಡ. ಇನ್ನು 10 ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ತಮಿಳಿನಿಂದ ಕೂಡ ಅವಕಾಶಗಳು ಬರುತ್ತಿವೆ. ಕತೆಗಳನ್ನು ಕೇಳುತ್ತಿದ್ದೇನೆ. ಮುಂದೆ ಅಳೆದು ತೂಗಿ ಪಾತ್ರಗಳನ್ನು ಒಪ್ಪಿಕೊಳ್ಳಬೇಕು ಎಂದುಕೊಂಡಿದ್ದೇನೆ ಅಂತ ಸಂಜನಾ ಆನಂದ್ ಮಾಹಿತಿ ನೀಡಿದ್ದಾರೆ.


Click it and Unblock the Notifications











