ಮಲಯಾಳಂ ಕಾಮಕಾಂಡ ;''ಭಾರತದಲ್ಲಿ ಅತ್ಯಾಚಾರ ಈಗ ಪಿಕ್ ಪಾಕೆಟ್‌ನಷ್ಟೇ ಸುಲಭ''-ಸಂಜನಾ ಗಲ್ರಾನಿ...!
ಬಣ್ಣದ ಪ್ರಪಂಚದಲ್ಲಿ ಅನೇಕರು ಮುಖವಾಡದ ಬದುಕನ್ನ ಬದುಕುತ್ತಾರೆ. ಇನ್ನೂ ಕೆಲವರು ಪ್ರಚಾರದ ಹುಚ್ಚಿಗೆ ಬಂದರೆ, ಬಹುತೇಕರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಪಾತ್ರಕ್ಕಾಗಿ ಪಲ್ಲಂಗ ಹತ್ತಬೇಕು ಎನ್ನುವ ಅಲಿಖಿತ ನಿಯಮ ಮಲಯಾಳಂ ಚಿತ್ರರಂಗದಲ್ಲಿದೆ ಅನ್ನುವುದು ಹೇಮಾ ಆಯೋಗದ ವರದಿಯ ಮೂಲಕ ಸಾಬೀತಾಗಿದೆ. ವರದಿ ಬಂದ ಬೆನ್ನಲ್ಲಿಯೇ ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲ .. ಕಲ್ಲೋಲ .. ಸೃಷ್ಟಿಯಾಗಿದೆ. ದಿನಕ್ಕೊಂದು ಪ್ರಕರಣ ಬಯಲಿಗೆ ಬರುತ್ತಿವೆ. ಯಾರದು ಸರಿ ಯಾರದು ತಪ್ಪು ಎನ್ನುವ ಚರ್ಚೆ ನಡೆಯುತ್ತಿದೆ.
ಇನ್ನೂ.. ಶಕೀಲಾ ಮತ್ತು ಊವರ್ಶಿ ಅವರಂತಹ ಹಿರಿಯ ನಾಯಕಿಯರು ಕೂಡ ಇದು ಕೇವಲ ಮಲಯಾಳಂ ಚಿತ್ರರಂಗದ ಸಮಸ್ಯೆ ಅಲ್ಲ ಎಲ್ಲ ಭಾಷೆಯ ಚಿತ್ರರಂಗದಲ್ಲಿ ಕೂಡ ಈ ತರಹದ ಕೊಳಕು ಮನಸ್ಥಿತಿಗಳಿವೆ ಎನ್ನುವುದನ್ನು ಹೇಳಿದ್ದಾರೆ. ಎಲ್ಲ ಭಾಷೆಯಲ್ಲಿ ಕೂಡ ಇಲ್ಲಿ ಹೇಮಾ ಆಯೋಗವನ್ನು ರಚನೆ ಮಾಡಿದಂತೆ ಸಮಿತಿಯೊಂದನ್ನು ರಚನೆ ಮಾಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ನಾಯಕಿ ಮತ್ತು ಕನ್ನಡ ಸೇರಿ ಮಲಯಾಳಂ ಸಮೇತ ಬೇರೆ ಭಾಷೆಯಲ್ಲಿ ಕೂಡ ದೊಡ್ಡ ದೊಡ್ಡ ತಾರೆಯರ ಜೊತೆ ತೆರೆ ಹಂಚಿಕೊಂಡಿರುವ ಸಂಜನಾ ಗಲ್ರಾನಿ ಸದ್ಯ ಮಲಯಾಳಂ ಚಿತ್ರರಂಗದಲ್ಲಿ ಕುರಿತು ನಿಮ್ಮ ಫಿಲ್ಮಿ ಬೀಟ್ ಕನ್ನಡ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸಂಜನಾ ಗಲ್ರಾನಿ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.

ಮಲಯಾಳಂ ಚಿತ್ರರಂಗದಲ್ಲಿನ ಈ ಕಾಮಕಾಂಡದಿಂದ ಮುಂದೆ ಪ್ರಯೋಜನವಾಗುತ್ತಾ.?
ಖಂಡಿತ ಇಲ್ಲ. ಯಾಕೆಂದರೆ ಇದು ತಾತ್ಕಾಲಿಕವಾದ ಅಲೆ. ಸದ್ಯ ಕಾಮಕಾಂಡ ಎಂಬ ಚಂಡುಮಾರುತ ಮಲಯಾಳಂ ಚಿತ್ರರಂಗಕ್ಕೆ ಅಪ್ಪಳಿಸಿದ ಕಾರಣ ಈ ಅಲೆ ಎದ್ದಿದೆ. ಹಾಗಂಥ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆಲ್ಲ ನ್ಯಾಯ ಸಿಗುತ್ತೆ ಎಂದು ಹೇಳಲು ಸಾಧ್ಯ ಇಲ್ಲ. ಯಾಕೆಂದರೆ ಚಿತ್ರರಂಗದಲ್ಲಿ ಈ ತರಹದ ಆರೋಪಕ್ಕೆ ಗುರಿಯಾದವರ ಹೆಸರು ಯಾವತ್ತೂ ಹಾಳಾಗುವುದಿಲ್ಲ. ಬದಲಿಗೆ ನನ್ನ ಮೇಲೆ ದೌರ್ಜನ್ಯವಾಗಿದೆ, ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪ ಮಾಡಿದವರ ಹೆಸರು ಹಾಳಾಗುತ್ತೆ. ಅವರ ಮನೆಯ ನೆಮ್ಮದಿ ಹಾಳಾಗುತ್ತೆ. ನಮ್ಮ ಸಮಾಜದಲ್ಲಿ ಅನ್ಯಾಯ ಎಸಗಿದವರ ಬಗ್ಗೆ ಯಾರು ಕೆಟ್ಟದಾಗಿ ಮಾತನಾಡುವುದಿಲ್ಲ. ಪ್ರಭಾವಶಾಲಿ ವ್ಯಕ್ತಿಗಳಿಂದ ಅನ್ಯಾಯಕ್ಕೊಳಗಾದವರ ಕುರಿತು ಜನ ಹೆಚ್ಚು ಮಾತನಾಡುತ್ತಾರೆ. ಅವರನ್ನು ಅಡಿಗಡಿಗೂ ಅವಮಾನವನ್ನೂ ಮಾಡುತ್ತಾರೆ.
ಪಾತ್ರಕ್ಕಾಗಿ ಪಲ್ಲಂಗ ಸಂಸ್ಕ್ರತಿ ಕೇವಲ ಮಲಯಾಳಂ ಚಿತ್ರರಂಗದಲ್ಲಿ ಮಾತ್ರ ಇದೆಯಾ..?
ಇದು ಕೇವಲ ಮಲಯಾಳಂ ಚಿತ್ರರಂಗದ ಸಮಸ್ಯೆಯಲ್ಲ. ಇಡೀ ಭಾರತೀಯ ಚಿತ್ರರಂಗದ ಸಮಸ್ಯೆ. ಕೇವಲ ಚಿತ್ರರಂಗ ಮಾತ್ರ ಅಲ್ಲ ಕೆಲಸ ಮಾಡುವ ಯಾವುದೇ ಸ್ಥಳ ಇರಬಹುದು, ಶಾಲೆ-ಕಾಲೇಜ್ ಇರಬಹುದು, ಬಸ್‌ನಲ್ಲಿರಬಹುದು, ರೇಲ್ವೆಯಲ್ಲಿರಬಹುದು, ಎಲ್ಲೆಡೆ ಮಹಿಳೆಯರು ಶೋಷಣೆಗೆ ಒಳಗಾಗುತ್ತಾನೇ ಇದ್ದಾರೆ. ಬದಲಾದ ಈ ಕಾಲದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು ಮಹಾಪಾಪ ಎಂಬ ಭಾವನೆ ಬಹುತೇಕರಲ್ಲಿ ಇಲ್ಲವೇ ಇಲ್ಲ. ಈಗೀಗ ಅತ್ಯಾಚಾರ-ಕಿರುಕುಳ ಸಾಮಾನ್ಯವಾದಂತೆ ಆಗಿದೆ. ಇದಕ್ಕೆ ಉದಾಹರಣೆಯಾಗಿ ಕೋಲ್ಕತ್ತಾದ ವೈದ್ಯೆಯ ಮೇಲಾದ ಅತ್ಯಾಚಾರ ಪ್ರಕರಣ ಕಣ್ಮುಂದೆಯೇ ಇದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ತುಂಬಾ ಹಾಳಾಗುತ್ತಿದೆ ಅಷ್ಟೇ ಹೊರತು ಸುಧಾರಣೆಯಾಗುತ್ತಿಲ್ಲ. ಒಮ್ಮೊಮ್ಮೆ ಅತ್ಯಾಚಾರವು ಭಾರತದಲ್ಲಿ ಮಹಿಳೆಯರ ಮೇಲಿನ ನಾಲ್ಕನೇ ಅತಿ ಸಾಮಾನ್ಯ ಅಪರಾಧವೆನ್ನುವ ವಿಚಾರ ಅರಿವು ಆದಾಗ ನಮ್ಮ ದೇಶ ಅತ್ಯಾಚಾರಿಗಳಿಗೆ ಸ್ವರ್ಗವಾಗುತ್ತಿದೆಯಾ ಎನ್ನುವ ಅನುಮಾನ ನನಗೆ ಕಾಡುತ್ತೆ. ಹಾಗಂಥ ನನಗೆ ದೇಶಾಭಿಮಾನ ಇಲ್ಲವೆಂದಲ್ಲ. ನಾನೊಬ್ಬಳು ಭಾರತೀಯಳು ಎಂದು ಹೇಳಿಕೊಳ್ಳಲು ಹೆಮ್ಮೆ ಮತ್ತು ಗರ್ವ ಖಂಡಿತ ನನಗೆ ಇದೆ. ಆದರೆ ನಮ್ಮ ಸುತ್ತ ಮುತ್ತ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದಾಗ ನನ್ನ ಕಣ್ಣಲ್ಲಿ ರಕ್ತ ಬಂದ ಅನುಭವ ಆಗುತ್ತೆ.

ಮಲಯಾಳಂ ಚಿತ್ರರಂಗದಲ್ಲಿ ನೀವು ಬಣ್ಣ ಹಚ್ಚಿದ್ದೀರಾ, ಅಲ್ಲಿ ನಿಮಗೆ ಕಟ್ಟ ಅನುಭವ ಆಗಿದೆಯಾ..?
ಖಂಡಿತ ಇಲ್ಲ. ಯಾಕೆಂದರೆ ನಾನು ಯಾವ ಭಾಷೆಯಲ್ಲಾದರೂ ಹೆಚ್ಚು ಯಾರ ಜೊತೆ ಬೆರೆಯುವುದಿಲ್ಲ. ಮೊದಲಿಂದ ನಾನಾಯಿತು, ನನ್ನ ಕೆಲಸವಾಯಿತು ಎಂದು ಇರುವಳು ನಾನು. ಚಿತ್ರೀಕರಣದ ಸಮಯದಲ್ಲಿ ಮಾತ್ರ ನಾನು ಸ್ಥಳದಲ್ಲಿರುತ್ತಿದ್ದೆ. ಮಿಕ್ಕಂತೆ ಬಹುತೇಕ ಸಮಯದಲ್ಲಿ ನಾನು ನನ್ನ ಕ್ಯಾರಾವ್ಯಾನ್‌ನಲ್ಲಿಯೇ ಕಾಲ ಕಳೆಯುತ್ತಿದೆ. ಮಾತನಾಡಬೇಕು ಎಂದು ನನಗೆ ಅನಸಿದಾಗ ನಾನು ನನ್ನ ಮನೆಯವರಿಗೆ ನನ್ನ ಹೆತ್ತವರಿಗೆ ಕರೆ ಮಾಡುತ್ತಿದ್ದೆ. ಅನವಶ್ಯಕ ಮಾತು ಮಾತನಾಡಿದರೆ ತಾನೇ ನಮ್ಮನ್ನು ಅವರು ಅನುಮಾನದ ದೃಷ್ಟಿಯಿಂದ ನೋಡುವುದು. ಹಾಗಂಥ, ಮಲಯಾಳಂನಲ್ಲಿ ಕೇಳಿ ಬಂದ ಆರೋಪ ಸುಳ್ಳು ಎಂದು ಕೂಡ ನಾನು ಹೇಳುವುದಿಲ್ಲ.
ವ್ಯವಸ್ಥೆ ಬದಲಾದರೆ ಮಾತ್ರ ಈ ಅತ್ಯಾಚಾರಕ್ಕೆ ಕಡಿವಾಣ ಹಾಕಬಹುದು ಅಂತ ನಿಮಗೆ ಅನ್ಸುತ್ತಾ..?
ನಾನು ನಿಮಗೆ ಆಗಲೇ ಹೇಳಿದಂತೆ ಇವತ್ತು ಅತ್ಯಾಚಾರ ಮಾಡುವುದು, ಲೈಂಗಿಕ ಕಿರುಕುಳ ನೀಡುವುದು ಪಿಕ್ ಪಾಕೆಟ್ ಮಾಡಿದಂತೆ ಆಗಿದೆ. ನಾನೇ ನೇರವಂತಿಕೆ ಹೆಸರಾದವಳು. ನಾನು ತಪ್ಪು ಮಾಡದೇ ಇದ್ದರೆ ನಾನು ಯಾರಿಗೂ ಹೆದರುವುದಿಲ್ಲ. ಆದರೆ, ನನ್ನಂತ ನನಗೆ ರಾತ್ರಿ ಹನ್ನೆರಡು ಘಂಟೆಯ ಮೇಲೆ ಮನೆಯಾಚೆ ಹೋಗಲು ಈಗ ಹೆದರಿಕೆ ಆಗುತ್ತಿದೆ. ನನಗೊಬ್ಬ ಮಗ ಇದ್ದಾನೆ. ಅವನನ್ನು ಅಷ್ಟೇ ನಾನು ತಡರಾತ್ರಿ ಎಲ್ಲಿಯೂ ಕರೆದುಕೊಂಡು ಹೋಗಲ್ಲ. ಅಷ್ಟೊಂದು ಭಯ ನಮ್ಮನ್ನು ಆವರಿಸಿಕೊಂಡಿದೆ. ಇನ್ನೂ ಕಡಿವಾಣದ ವಿಚಾರಕ್ಕೆ ಬಂದರೆ, ಸೌದಿ ಅರೇಬಿಯಾದಲ್ಲಿರುವ ಕಾನೂನು ಇಲ್ಲಿಯೂ ಬರಬೇಕು. 20 ವರ್ಷದ ಜೈಲು ಶಿಕ್ಷೆ ಕೊಡಿಸಲು ನಮ್ಮಲ್ಲಿ 15 ವರ್ಷ ಹೋರಾಡಬೇಕು ಮೊದಲು ಅದು ಬದಲಾಗಬೇಕು. ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಒಂದು ವಾರದಲ್ಲಿ ಪ್ರಕರಣದ ತನಿಖೆ ನಡೆದು ತಪ್ಪಿತಸ್ಥವಾದಲ್ಲಿ ಸಾರ್ವಜನಿಕವಾಗಿ ಅಪರಾಧಿಯನ್ನು ಗಲ್ಲಿಗೇರಿಸಬೇಕು. ಆಗ ವ್ಯವಸ್ಥೆಯಲ್ಲಿ ಬದಲಾವಣೆ ಆಗಬಹುದು. ಅತ್ಯಾಚಾರ ಮಾಡುವರ ಎದೆಯಲ್ಲಿ ನಡುಕ ಶುರುವಾಗಬಹುದು
ಮಲಯಾಳಂನಂತೆ ಕನ್ನಡ ಚಿತ್ರರಂಗದಲ್ಲಿ ಕೂಡ ಸಮಿತಿ ರಚನೆಯಾಗಬೇಕಾ..?
ಖಂಡಿತ ಆಗಬೇಕು. ಯಾಕೆಂದರೆ ನಾನು ಆಗಲೇ ಹೇಳಿದಂತೆ ಇದು ಮಲಯಾಳಂ ಚಿತ್ರರಂಗದ ಸಮಸ್ಯೆ ಮಾತ್ರ ಅಲ್ಲ. ಭಾರತೀಯ ಚಿತ್ರರಂಗದ ಸಮಸ್ಯೆ. ಎಲ್ಲ ಭಾಷೆಯಲ್ಲಿಯೂ ಕಾಮುಕರು ಇದ್ದೇ ಇದ್ದಾರೆ. ನನಗಾದ ಅನುಭವ ನಿಮಗೆ ಗೊತ್ತು. ಆ ಕುರಿತು ನಾನು ಮಾತನಾಡಲು ಇಷ್ಟ ಪಡುವುದಿಲ್ಲ. ಆದರೆ ಖಂಡಿತ ಇಲ್ಲಿ ಕೂಡ ಹೇಮಾ ಆಯೋಗದಂತೆ ಒಂದು ಆಯೋಗ ರಚನೆಯಾಗಬೇಕು. ಕ್ರೈಮ್ ಆದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಮೊದಲು ಎಚ್ಚೆತ್ತುಕೊಳ್ಳಬೇಕು. ಇನ್ನು ಇದು ಕಲಿಯುಗ. ಈ ಯುಗದಲ್ಲಿ ಯಾರಾದರೂ ಹೆಣ್ಣು ನನಗೆ ಅನ್ಯಾಯವಾಗಿದೆ, ನನ್ನ ಮೇಲೆ ದೌರ್ಜನ್ಯವಾಗಿದೆ ಎಂದರೆ ಜನ ಪಾಪಾ ಛೇ ಆಕೆಯ ಜೊತೆಯ ಹೀಗಾಗಬಾರದಿತ್ತು, ತಪ್ಪು ಎಂದು ಹೇಳುವುದಿಲ್ಲ ಬದಲಿಗೆ ಹೆಣ್ಣನ್ನೇ ಥೂ ಎಂದು ಮುಂದಕ್ಕೆ ಹೋಗುತ್ತಾರೆ. ಹೀಗಾಗಿ ಸತ್ಯ ಗೊತ್ತಾಗಬೇಕು ಅಂದರೆ ಹೇಮಾ ಆಯೋಗದಂತೆ ಒಂದು ಆಯೋಗ ಇಲ್ಲಿ ಮಾತ್ರ ಅಲ್ಲ ಎಲ್ಲ ಭಾಷೆಯಲ್ಲಿ ಕೂಡ ಈಗ ತುರ್ತಾಗಿ ರಚನೆಯಾಗಬೇಕಿದೆ.


Click it and Unblock the Notifications











