ಪುನೀತ್ ಸರಳತೆ ಹೇಗಿತ್ತು ಗೊತ್ತಾ? ಗಣೇಶ್ ಕಾಸರಗೋಡು ಮನದಾಳದ ಮಾತು

ಈಗಾಗಲೇ ಪುನೀತ್ ಒಡನಾಟದ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಬಿಚ್ಚಿಟ್ಟ ಒಂದಷ್ಟು ಸನ್ನಿವೇಶಗಳನ್ನು ಫಿಲ್ಮಿಬೀಟ್‌ನಲ್ಲಿ ಪ್ರಕಟ ಮಾಡಲಾಗಿದೆ. ಇದನ್ನು ಹೊರತು ಪಡಿಸಿ ಫಿಲ್ಮಿಬೀಟ್ ಕಡೆಯಿಂದ ಗಣೇಶ್ ಕಾಸರಗೋಡು ಅವರಿಗೆ ಒಂದಷ್ಟು ಪ್ರಶ್ನೆಯನ್ನು ಕೇಳಲಾಯ್ತು. ಇದಕ್ಕೂ ಕೂಡ ಉತ್ತರಿಸಿರುವ ಗಣೇಶ್ ಕಾಸರಗೋಡು ಈ ಸಂದರ್ಭದಲ್ಲೂ ಪುನೀತ್ ಅವರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದೇನು ಅಂತ ಮುಂದೆ ಓದಿ

ಪುನೀತ್ ಅವರ ಸಾವಿನ ಸುದ್ದಿ ನಿಮಗೆ ಹೇಗೆ ತಿಳಿಯಿತು?

ಪುನೀತ್ ಸಾವಿನ ಬಗ್ಗೆ ತಿಳಿದದ್ದು ವಾಟ್ಸ್ಆಪ್ ಗ್ರೂಪ್ ಮೂಲಕ. ಮೊದಲಿಗೆ ಪತ್ರಕರ್ತರ ವಾಟ್ಸ್ಆಪ್ ಗ್ರೂಪ್‌ನಲ್ಲಿ ಪುನೀತ್ ಇನ್ನಿಲ್ಲ ಅಂತ ಮೇಸೆಜ್‌ಗಳು ಬರುತ್ತಿತ್ತು. ನಾನು ಅದನ್ನು ನೋಡಿ ಯಾವ ಪುನೀತ್ ಎಂದು ಆಲೋಚಿಸಿದೆ. ತಕ್ಷಣ ಟಿವಿ ಹಾಕಿದೆ. ಅಲ್ಲಿ ಪುನೀತ್ ರಾಜ್‌ಕುಮಾರ್‌ಗೆ ತೀವ್ರ ಅನಾರೋಗ್ಯ ಅಂತ ಬರುತ್ತಿತ್ತು. ಸ್ವಲ್ಪಹೊತ್ತಿನ ನಂತರ ಆಸ್ಪತ್ರೆಗೆ ಯಾವಾಗ ಸಿ.ಎಂ ಬೊಮ್ಮಾಯಿ ಹೋದ್ರು ಆಗ ಗೊತ್ತಾಯಿತು ರಾಜ್‌ ಕುಟುಂಬದ ಕಿರಿ ಮಗ ಪುನೀತ್ ಇನ್ನಿಲ್ಲ ಅಂತ. ಅದನ್ನು ಅರಗಿಸಿಕೊಳ್ಳಲು ನನ್ನಿಂದ ಸಾಧ್ಯವಾಗಿಲ್ಲ. ನನ್ನ ಮತ್ತು ಪುನೀತ್ ಒಡನಾಟ ಹಾಗೇ ಇತ್ತು. ಮಗನಂತೆ ಇದ್ದ ಕಲಾವಿದನನ್ನು ಇವತ್ತು ನಾವು ಕಳೆದುಕೊಂಡಿದ್ದೇವೆ.

ಪುನೀತ್ ಅವರನ್ನು ನೀವು ಮೊದಲು ಭೇಟಿ ಮಾಡಿದ್ದು ಎಲ್ಲಿ ಮತ್ತು ಯಾಕೆ?

1980-81ರ ಸುಮಾರಿಗೆ ವೃತ್ತಿಬದುಕಿಗಾಗಿ ಬೆಂಗಳೂರು ಸೇರಿಕೊಂಡಾಗ ನನಗಿದ್ದ ಎರಡೇ ಎರಡು ಕೌತುಕವೆಂದರೆ : 1.ವಿಧಾನಸೌಧ 2.ರಾಜಕುಮಾರ್. ವಿಧಾನಸೌಧ ನೋಡಿದ್ದಾಯಿತು, ಇನ್ನು ರಾಜಕುಮಾರ್ ಅವರನ್ನು ನೋಡುವುದು ಹೇಗೆ? ಒಂದೇ ಒಂದು ಆಯ್ಕೆಯೆಂದರೆ ಕುಂಬಳಗೋಡಿನ ಫಾರ್ಮ್ ಹೌಸ್. ರಾಜಕುಮಾರ್ ಅಲ್ಲಿರುತ್ತಾರೆ ಎಂದು ಯಾರೋ ಹೇಳಿರುವ ಮಾತು ಕೇಳಿ ಸೈಕಲ್ ಹತ್ತಿ ಹೊರಟೇ ಬಿಟ್ಟೆ ಕುಂಬಳಗೋಡಿಗೆ. ಅಲ್ಲಿತ್ತು 'ಲೋಹಿತ್ ಫಾರಂ'. ರಸ್ತೆಗೆ ಅಭಿಮುಖವಾಗಿ ಹಾಕಿಸಿರುವ ಬೋರ್ಡನ್ನು ಕಂಡು ಸಾಕ್ಷಾತ್ ರಾಜಕುಮಾರ್ ಅವರನ್ನೇ ಕಂಡಷ್ಟು ಖುಷಿಯಾಯಿತು. ಆದರೆ ಆ ರಾಕ್ಷಸ ಗೇಟು ದಾಟಿ ಒಳ ಹೋಗುವುದು ಹೇಗೆ? ಸೈಕಲ್ಲನ್ನು ಗೋಡೆಗೊರಗಿಸಿ ಗೇಟು ಹಾರಲು ಪ್ರಯತ್ನಿಸಿದೆ. ಯಾರೋ ಗದರಿದಂತಾಯಿತು. ಗೇಟಿನ ಕಬ್ಬಿಣದ ರಾಡ್ ಬಿಟ್ಟು ಜರ್ರನೆ ಇಳಿದು ಬಿಟ್ಟೆ. ಅಲ್ಲಿಗೆ ರಾಜಕುಮಾರ್ ಅವರನ್ನು ಭೇಟಿ ಮಾಡುವ ಪ್ರೋಗ್ರಾಮನ್ನು ಕ್ಯಾನ್ಸಲ್ ಮಾಡಿ ನಾನು ತಂದಿದ್ದ ಕ್ಲಿಕ್-3 ಕ್ಯಾಮೆರಾದಲ್ಲಿ 'ಲೋಹಿತ್ ಫಾರಂ' ಬೋರ್ಡಿನ ಫೋಟೋ ಕ್ಲಿಕ್ಕಿಸಿಕೊಂಡೆ ಅದು ನನ್ನ ಮತ್ತು ಲೋಹಿತನ ಮೊಟ್ಟ ಮೊದಲ ಭೇಟಿ.

Senior Cinema journalist Ganesh kasaragod shared interesting things about Puneeth Rajkumar

ಲೋಹಿತ್ ಹೆಸರು ಪುನೀತ್ ಎಂದು ಬದಲಾಗಿದ್ದರ ಬಗ್ಗೆ ಏನಾದರು ಮಾಹಿತಿ ಇದೆಯೇ?

ಇದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. 40 ವರ್ಷಗಳ ಹಿಂದೆ ರಾಜಕುಮಾರ್ ಕೊನೇ ಪುತ್ರನಿಗೆ ಲೋಹಿತ್ ಎಂಬ ಹೆಸರಿತ್ತು. ಆಗ ಆತನ ವಯಸ್ಸು 6 ವರ್ಷ. ಆಮೇಲೆ ಸಂಖ್ಯಾಶಾಸ್ತ್ರದ ಪ್ರಕಾರ ಪುನೀತ್ ರಾಜಕುಮಾರ್ ಎಂಬ ಹೆಸರನ್ನಿಡಲಾಯಿತು. ಈ ಘಟನೆಯ ವಿವರವನ್ನು ಒಮ್ಮೆ ಮಾತನಾಡುತ್ತಾ ಪುನೀತ್ ಬಳಿ ಹೇಳಿಕೊಂಡಾಗ ಜೋರಾಗಿ ನಕ್ಕು, ಭಕ್ತಿಯಿಂದ ಪಾದ ಮುಟ್ಟಿ ನಮಸ್ಕರಿಸಿದ್ದ ಪುನೀತ್. ಇತ್ತೀಚೆಗೆ ಚಿನ್ನೇಗೌಡ್ರು ಹೇಳುತ್ತಿದ್ದಿದ್ದು ನೆನಪಿಗೆ ಬಂತು. ಮಾತನಾಡುತ್ತಿದ್ದ ಸಂದರ್ಭ ಆಗಲೇ ರಾಜ್ ಕುಟುಂಬ ನಂಬುತ್ತಿದ್ದ ಜೋತಿಷಿ ಒಬ್ಬರು ಲೋಹಿತ್‌ಗೆ ಆಯಸ್ಸು ಕಮ್ಮಿ ಎಂದು ಹೇಳಿದ್ದರೆಂದು ಹೀಗಾಗಿ ಹೆಸರು ಬದಲಾಯಿಸಿದ್ದಾರೆ ಎಂದಷ್ಟೆ ನನಗೆ ಗೊತ್ತು.

ಪುನೀತ್ ಅವರನ್ನು ಕೊನೆಯಭಾರಿ ಭೇಟಿ ಮಾಡಿದ್ದು ಯಾವಾಗ?

ಒಂದೇ ಒಂದು ದಿನ, ನವೆಂಬರ್ 1. ಕನ್ನಡ ರಾಜ್ಯೋತ್ಸವ. ಮೂರು ವರ್ಷಗಳ ಹಿಂದೆ ನಾನು ಸದಾಶಿವನಗರದ ಪುನೀತ್ ಮನೆಯಲ್ಲಿದ್ದೆ. ಅಂದು ಅವರಿಗೊಂದು ಗಿಫ್ಟ್ ಕೊಡುವುದಿತ್ತು. ಸಿವಿಲ್ ಎಂಜಿನಿಯರ್ ಆಗಿರುವ ನನ್ನ ಕಿರಿಯ ಮಗ ಅಲೋಕ್ ಚಿತ್ರಕಲಾವಿದನೂ ಹೌದು. ಅದರಲ್ಲೂ ಡ್ಯುಡಲ್ ಕಲೆಯಲ್ಲಿ ಪಳಗಿದ್ದಾನೆ. ರಾಜ್ಯೋತ್ಸವ ದಿನದ ವಿಶೇಷವಾಗಿ 'ಕನ್ನಡ' ಅಕ್ಷರವನ್ನು ಪೋಣಿಸಿದ ಡ್ಯುಡಲ್ ಕೃತಿಯನ್ನು ತಯಾರು ಮಾಡಿಕೊಂಡಿದ್ದ ಅಲೋಕ್. ಅದನ್ನು ಅಪ್ಪುವಿಗೆ ಗಿಫ್ಟಾಗಿ ಕೊಡುವುದು ಉದ್ದೇಶ. ಇದೊಂದು ಅನಿರೀಕ್ಷಿತ ಭೇಟಿ. ಫ್ರೇಮ್ ಹಾಕಿಸಿದ್ದ ಆಕರ್ಷಕ ಡ್ಯುಡಲ್ ಕೃತಿಯನ್ನು ಅಪ್ಪು ಕೈಗಿಟ್ಟಾಗ ಕುತೂಹಲದಿಂದ ವೀಕ್ಷಿಸಿದರು. ನನ್ನ ಮಗಳೂ ಡ್ಯುಡಲ್ ಆರ್ಟ್ ನಲ್ಲಿ ಪಳಗಿದ್ದಾಳೆ ಎಂದು ಹೇಳುತ್ತಾ ಅಶ್ವಿನೀ ಅಂತ ಹೆಂಡತಿಯನ್ನು ಕರೆದು ಅಲೋಕನನ್ನು ಪರಿಚಯಿಸಿದರು. ನಂತರ ತಮ್ಮ ಒಡೆತನದ PRK ಸಂಸ್ಥೆಯ ಡ್ಯುಡಲ್ ಲೋಗೋ ಮಾಡಿಕೊಡುವಂತೆ ಆರ್ಡರ್ ಕೊಡಿಸಿದರು .ಕೆಲಸದಲ್ಲಿ ಅವರ ನಿಷ್ಠೆ ಹೇಗಿತ್ತು ಎಂದರೇ ನಾವು ಮನೆ ತಲುಪುವಷ್ಟರಲ್ಲಿ ಆ ಡ್ಯುಡಲ್ ಲೋಗೋದ ಪೇಮೆಂಟ್ ಅಕೌಂಟ್ ಬಂದು ಸೇರಿತ್ತು.

Senior Cinema journalist Ganesh kasaragod shared interesting things about Puneeth Rajkumar

ನಿಮ್ಮ ಮತ್ತು ದೊಡ್ಮನೆ ಸಂಬಂಧ ಹೇಗಿತ್ತು?

ನಾನು ಅವರ ಕುಟುಂಬದಲ್ಲಿ ಒಬ್ಬನಂತೆ ಇದ್ದವನು. ಡಾ ರಾಜ್‌ಕುಮಾರ್ ಆಗಲಿ ಪಾರ್ವತಮ್ಮ ಆಗಲಿ ಯಾವತ್ತು ಒಬ್ಬರ ಮನಸ್ಸಿಗೆ ನೋವು ಮಾಡಿದವರಲ್ಲ. ಶಿವರಾಜ್‌ಕುಮಾರ್, ರಾಘವೇಂದ್ರರಾಜ್‌ಕುಮಾರ್, ಪುನೀತ್ ಯಾರು ಕೂಡ ತಾನೊಬ್ಬ ದೊಡ್ಡ ನಟ ಅಂತ ಮೆರೆದವರಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದವರು. ಇದು ಡಾ ರಾಜ್‌ ಮಕ್ಕಳಿಗೆ ಹೇಳಿಕೊಟ್ಟಿರುವ ಸಂಸ್ಕಾರವಾಗುತ್ತು. ರಾಜ್ ಕುಟುಂಬವನ್ನು ಎಲ್ಲರೂ ಇಷ್ಟ ಪಡುತ್ತಿರೋದು ಇದೇ ಕಾರಣಕ್ಕೆ. ಮುಂದೆಯೂ ಇದೇ ಪ್ರೀತಿ ರಾಜ್ ಕುಟುಂಬದ ಮೇಲಿರುತ್ತೆ.

ಮಾಧ್ಯಮ ಮತ್ತು ಪುನೀತ್ ಸಂಬಂಧ ನೀವು ಕಂಡಂತೆ ಹೇಗಿತ್ತು?

ತುಂಬಾ ಚೆನ್ನಾಗಿತ್ತು. ಪುನೀತ್‌ನನ್ನು ಬೇರೆ ಬೇರೆಯವರು ಕಲಿಯೋದು ತುಂಬಾ ಇದೆ. ಪುನೀತ್ ಯಾವತ್ತೂ ಚಾನೆಲ್, ಪತ್ರಿಕೆ ಎಂದು ನೋಡುತ್ತಿರಲಿಲ್ಲ. ವ್ಯಕ್ತಿಗೆ ಬೆಲೆ ಕೊಡುತ್ತಿದ್ದರು. ನೀವು ಯಾವುದೇ ಯೂಟ್ಯೂಬ್ ಚಾನೆಲ್ ಇಂದನೇ ಬಂದಿರಿ, ಕೇಳಿದ ಎಲ್ಲರಿಗೂ ಸಂದರ್ಶನ ನೀಡುತ್ತಿದ್ದರು. ಲೋಕಲ್ ಚಾನೆಲ್, ಟಿಆರ್‌ಪಿ ಇಲ್ಲದೇ ಇರೋ ಚಾನೆಲ್ ಅಂತೆಲ್ಲ ನೋಡುತ್ತಲೇ ಇರಲಿಲ್ಲ. ಅಂತಹ ಸ್ವಭಾವ ಪುನೀತ್ ಅವರದ್ದು.

Senior Cinema journalist Ganesh kasaragod shared interesting things about Puneeth Rajkumar

ಪುನೀತ್ ಸರಳತೆ ಬಗ್ಗೆ ಏನು ಹೇಳುತ್ತೀರಾ?

ಪುನೀತ್ ಸರಳರಲ್ಲಿ ಸರಳ. ತಾನೊಬ್ಬ ಮೇರು ನಟನ ಮಗ. ನಾನು ಸ್ಟಾರ್ ಹೀರೋ ಅಂತೆಲ್ಲ ಅಂದುಕೊಂಡೆ ಇಲ್ಲ. ನಟನೆಯನ್ನಷ್ಟೇ ಆರಾಧಿಸುತ್ತಿದ್ದರು. ಹಾಗೇ ಹಿರಿಯ ಪತ್ರಕರ್ತರು ಅಥವಾ ಯಾರೇ ಹಿರಿಯರು ಅವರ ಮುಂದೆ ಬಂದರು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದರು. ಇದು ರಾಜ್ ಕುಟುಂಬದ ಮಕ್ಕಳ ಸಂಸ್ಕಾರ. ಡಾ ರಾಜ್‌ ಕೂಡ ಮಕ್ಕಳಿಗೆ ಇದನ್ನೇ ಹೇಳಿ ಕೊಟ್ಟಿದ್ದರು.

ಅಭಿಮಾನಿಗಳು ನೆಚ್ಚಿನ ನಟನನ್ನು ಕಳೆದುಕೊಂಡಿರೋ ನೋವಿನಲ್ಲಿದ್ದಾರೆ ಏನು ಹೇಳುತ್ತೀರಾ?

ಇದು ಅಬಿಮಾನಿಗಳಿಗೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಪುನೀತ್ ನಿಧನ ನೋವು ತಂದಿದೆ. ಸಾಕಷ್ಟು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಮಾಡುತ್ತಿರುವುದು ತಪ್ಪು. ಅವರವರ ಜೀವನವನ್ನು ಪುನೀತ್ ಆದರ್ಶ ಇಟ್ಟುಕೊಂಡು ಮುನ್ನಡೆಸಬೇಕು. ಅದನ್ನು ಬಿಟ್ಟು ಹೀಗೆ ತಮ್ಮವರನ್ನೆಲ್ಲ ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಜೀವ ಕೊಡೊದು ,ಅದನ್ನು ತೆಗೆದುಕೊಳ್ಳೊದು ದೇವರಕೈನಲ್ಲಷ್ಟೆ ಇದೆ.

More from Filmibeat

English summary
Senior film journalist Ganesh kasaragod sharied some interesting things about Puneeth Rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X