For Quick Alerts
  ALLOW NOTIFICATIONS  
  For Daily Alerts

  ನನಗಿರುವುದು ಒಂದೇ ಕನಸು - ನಿರ್ದೇಶಕ ಎಸ್ ಕೆ ಭಗವಾನ್ ಸಂದರ್ಶನ

  |

  'ಎರಡು ಕನಸು' ಚಿತ್ರದ ಮೂಲಕ ಸಿನಿಮಾ ಪ್ರೇಕ್ಷಕರಿಗೆ ಪ್ರೇಮದ ಕನಸುಗಳ ಬಗ್ಗೆ ಹೇಳಿಕೊಟ್ಟ ನಿರ್ದೇಶಕರಿಗೆ ಇಂದಿಗೂ ಒಂದು ಕನಸಿದೆ. ಇತ್ತೀಚೆಗಷ್ಟೇ ತಮ್ಮ 87ನೇ ಜನ್ಮದಿನವನ್ನು ಆಚರಿಸಿಕೊಂಡ ನಿರ್ದೇಶಕ ಭಗವಾನ್ ಅವರು ತಮ್ಮ ಆ ಕನಸೇನು ಎನ್ನುವುದನ್ನು ಫಿಲ್ಮೀಬೀಟ್ ಜತೆಗೆ ಹಂಚಿಕೊಂಡಿದ್ದಾರೆ.

  ನಿರ್ದೇಶಕ ದೊರೆ ಜತೆಗೆ ಸೇರಿಕೊಂಡು. 24 ಕಾದಂಬರಿಗಳನ್ನು ಸಿನಿಮಾ ಮಾಡಿದವರು, ರಾಜ್ ಕುಮಾರ್ ಅವರ 32 ಚಿತ್ರಗಳನ್ನು ನಿರ್ದೇಶಿಸಿದವರು ಭಗವಾನ್. ಕಳೆದ ವರ್ಷ ಅವರ ನಿರ್ದೇಶನದ 'ಆಡುವ ಗೊಂಬೆ' ತೆರೆ ಕಂಡಿತ್ತು. ಚಿತ್ರದಲ್ಲಿ ಸಂಚಾರಿ ವಿಜಯ್ ನಾಯಕರಾಗಿದ್ದರು. ಹೀಗೆ ಜೀವಂತ ದಂತಕತೆಯಾಗಿರುವ ಭಗವಾನ್ ಜತೆಗಿನ ವಿಶೇಷ ಮಾತುಕತೆ ಇಲ್ಲಿದೆ.

  ಇಷ್ಟೊಂದು ದೀರ್ಘಕಾಲದ ಚಿತ್ರ ಬದುಕಿನ ಅನುಭವ ನಿಮಗೆ ಮುಖ್ಯವಾಗಿ ನೀಡಿದ್ದೇನು?

  ಇಷ್ಟೊಂದು ದೀರ್ಘಕಾಲದ ಚಿತ್ರ ಬದುಕಿನ ಅನುಭವ ನಿಮಗೆ ಮುಖ್ಯವಾಗಿ ನೀಡಿದ್ದೇನು?

  ಖುಷಿ. ಬಹುಶಃ ಒಬ್ಬ ವ್ಯಕ್ತಿಗೆ ಈ ವಯಸ್ಸಿನಲ್ಲಿ ತನ್ನ ವೃತ್ತಿಯಿಂದಾಗಿ ಸಂತೃಪ್ತಿ ಅನುಭವಿಸಲು ಸಾಧ್ಯವಾದರೆ ಅದರಷ್ಟು ಖುಷಿ ಇನ್ನೇನಿದೆ ಹೇಳಿ? ಕನ್ನಡ ಚಿತ್ರರಂಗದಲ್ಲಂತೂ 65 ವರ್ಷಗಳನ್ನು ಕಳೆದು ಸಕ್ರಿಯವಾಗಿರುವವನು ಬಹುಶಃ ನಾನೊಬ್ಬನೇ. ಚಿತ್ರರಂಗ ಪ್ರವೇಶಿಸುವಾಗ ನಾನು ಇಪ್ಪತ್ತು ವರ್ಷದ ಯುವಕನಾಗಿದ್ದೆ. 'ಭಾಗ್ಯದೇವತೆ' ನನ್ನ ಮೊದಲ ಚಿತ್ರವಾಗಿತ್ತು.

  ಬಾಂಡ್ ಚಿತ್ರಗಳ ವಿಚಾರಕ್ಕೆ ಬಂದರೆ, ದೇಶದಲ್ಲೇ ಆ ಟ್ರೆಂಡ್ ಹುಟ್ಟು ಹಾಕಿದವರು ನೀವು. ಅದು ಹೇಗೆ ಸಾಧ್ಯವಾಯಿತು?

  ಬಾಂಡ್ ಚಿತ್ರಗಳ ವಿಚಾರಕ್ಕೆ ಬಂದರೆ, ದೇಶದಲ್ಲೇ ಆ ಟ್ರೆಂಡ್ ಹುಟ್ಟು ಹಾಕಿದವರು ನೀವು. ಅದು ಹೇಗೆ ಸಾಧ್ಯವಾಯಿತು?

  ಆ ದಿನಗಳಲ್ಲಿ ನಾವು ಮದರಾಸಲ್ಲಿದ್ದೆವು. ನಾನು, ದೊರೆ, ರಾಜಕುಮಾರ್ ಮತ್ತು ಅವರ ತಮ್ಮ ಸೇರಿಕೊಂಡು ಬಿಡುವು ಸಿಕ್ಕಾಗೆಲ್ಲ ಥಿಯೇಟರ್ ಗೆ ಹೋಗುತ್ತಿದ್ದೆವು. ಆಗ ನಾನೇ ಡ್ರೈವ್ ಮಾಡುತ್ತಿದ್ದೆ. ಹಾಗೆ ನೋಡಿದ ಚಿತ್ರಗಳಲ್ಲಿ ಹಾಲಿವುಡ್ ನ ಪ್ರಥಮ ಬಾಂಡ್ ಸಿನಿಮಾ ಡಾ. ನೊ ನೋಡಿದೆವು. ಅದನ್ನು ಕನ್ನಡದಲ್ಲಿ ಮಾಡಬೇಕು ಎಂಬ ಯೋಚನೆ ನಾವು ಮಾಡಿದಾಗ, ಖಂಡಿತವಾಗಿ ತಾವೇ ನಾಯಕರಾಗುವುದಾಗಿ ಹೇಳಿ ಬೆಂಬಲಿಸಿದವರು ಡಾ.ರಾಜ್.

  ಆಂಗ್ಲ ಚಿತ್ರಗಳ ಸ್ಫೂರ್ತಿ ಆ ಕಾಲದಲ್ಲೇ ಪಡೆಯುತ್ತಿದ್ದಿರಿ, ಎನ್ನಿ?

  ಆಂಗ್ಲ ಚಿತ್ರಗಳ ಸ್ಫೂರ್ತಿ ಆ ಕಾಲದಲ್ಲೇ ಪಡೆಯುತ್ತಿದ್ದಿರಿ, ಎನ್ನಿ?

  ಹೌದು. ಆದರೆ ಸ್ಫೂರ್ತಿ ಪಡೆಯೋದು ಎಂದರೆ ಯಾವ ಪ್ರಮಾಣಕ್ಕೆ ಸೀಮಿತವಾಗಿರುತ್ತದೆ ಎನ್ನುವುದಕ್ಕೆ ಅವುಗಳನ್ನು ಉದಾಹರಣೆಯಾಗಿಯೂ ಹೇಳಬಹುದು. 'ಗುಡ್ ಬ್ಯಾಡ್ ಅಗ್ಲಿ' ಚಿತ್ರ ನೋಡಿ 'ಪ್ರತಿಧ್ವನಿ' ಮಾಡಿದೆವು. ಆಲ್ ಫ್ರೆಡ್ ಹಿಚ್ ಕಾಕ್ ಸಿನಿಮಾ ನೋಡಿ 'ಯಾರಿವನು' ಮಾಡಿದೆ. ಇರಾನ್ ಸಿನಿಮಾವೊಂದರ ಸ್ಫೂರ್ತಿಯಿಂದ 'ವಸಂತಗೀತ' ಮಾಡಿದ್ದೆವು.

  ರಾಜಕುಮಾರ್ ಅವರು ಬಾಂಡ್ ಪಾತ್ರಗಳ ಸ್ಫೂರ್ತಿಯಿಂದಲೇ ಮೀಸೆ ಬಿಡದಿರಲು ನಿರ್ಧರಿಸಿರಬಹುದೇ?

  ರಾಜಕುಮಾರ್ ಅವರು ಬಾಂಡ್ ಪಾತ್ರಗಳ ಸ್ಫೂರ್ತಿಯಿಂದಲೇ ಮೀಸೆ ಬಿಡದಿರಲು ನಿರ್ಧರಿಸಿರಬಹುದೇ?

  ಇಲ್ಲ. ಅವರು ರಂಗಭೂಮಿಯಿಂದ ಬಂದ ಕಾರಣ ಮೀಸೆ ತೆಗೆದು ನಟಿಸುವ ರೂಢಿ ಅಲ್ಲಿಂದಲೇ ಹುಟ್ಟಿಕೊಂಡಿತ್ತು. ಆದರೆ ಅವರ ತಂದೆ ಮೀಸೆ, ದಾಡಿ ಎರಡನ್ನೂ ಬಿಟ್ಟಿದ್ದರು. ಯಾಕೆಂದರೆ ಅವರು ಮಾಡುತ್ತಿದ್ದುದೇ ಯಮ, ಹಿರಣ್ಯನಂಥ ಪಾತ್ರಗಳನ್ನು! ಆದರೆ ರಾಮ, ಕೃಷ್ಣನಂಥ ಪೌರಾಣಿಕ ಪಾತ್ರಗಳನ್ನು ಮಾಡುತ್ತಿದ್ದ ರಾಜ್ ಅವರಿಗೆ ಮೀಸೆಯ ಅಗತ್ಯವಿರಲಿಲ್ಲ. ಈಗ ಗಡ್ಡ ಮೀಸೆ ಬಿಟ್ಟರೇನೇ ನಾಯಕ ಎಂಬಂತಾಗಿದೆ. ಆದರೆ ಕಲಾವಿದರ ಭಾವಗಳೇ ಕಾಣಿಸುವುದಿಲ್ಲ ಎನ್ನುವುದು ಸತ್ಯ.

  ಬಾಂಡ್, ಫ್ಯಾಮಿಲಿ ಸೆಂಟಿಮೆಂಟ್ ಹೀಗೆ ನೀವು ಎಲ್ಲ ಜಾನರ್ ಸಿನಿಮಾಗಳಲ್ಲಿ ಯಶಸ್ವಿಯಾಗಿರುವುದರ ಗುಟ್ಟೇನು?

  ಬಾಂಡ್, ಫ್ಯಾಮಿಲಿ ಸೆಂಟಿಮೆಂಟ್ ಹೀಗೆ ನೀವು ಎಲ್ಲ ಜಾನರ್ ಸಿನಿಮಾಗಳಲ್ಲಿ ಯಶಸ್ವಿಯಾಗಿರುವುದರ ಗುಟ್ಟೇನು?

  ನಿಮಗೆ ಉತ್ತರ ನೀಡುವ ಮೊದಲು ನಿಮ್ಮ ಪ್ರಶ್ನೆ ಸ್ವಲ್ಪ ತಿದ್ದಲು ಬಯಸುತ್ತೇನೆ. ಈ ಮಾಧ್ಯಮಗಳಲ್ಲಿ ಜಾನರ್ ಎಂದು ಯಾಕೆ ಬಳಸ್ತಾರೋ ಗೊತ್ತಿಲ್ಲ! ಯಾಕೆಂದರೆ ಅದು 'ಜನರ್' ಎಂದಾಗಿರಬೇಕಿತ್ತು. ಇನ್ನು ಪ್ರಶ್ನೆಗೆ ಉತ್ತರಿಸುವುದಾದರೆ ಮಂತ್ರಾಲಯ ಮಹಾತ್ಮೆ, ಕಸ್ತೂರಿ ನಿವಾಸ, ರಾಜದುರ್ಗದ ರಹಸ್ಯ, ಸೇರಿದಂತೆ ಎಲ್ಲ ವರ್ಗದ ಚಿತ್ರಗಳನ್ನು ಕೂಡ ಮಾಡಿದ್ದೇವೆ. ರಾಜ್ ಕುಮಾರ್ ನಟರಾಗಿ ಹೇಗೆ ಎಲ್ಲ ರೀತಿಯ ಪಾತ್ರಗಳನ್ನು ಮಾಡಿದರೋ ಅದೇ ರೀತಿ ನಿರ್ದೇಶಕರಾಗಿ ವರ್ಸಟೈಲ್ ನಿರ್ದೇಶಕರಾಗಿದ್ದಿದ್ದು ನನ್ನ ಮತ್ತು ದೊರೆ ಜೋಡಿ ಎಂದೇ ಹೇಳಬಹುದು.

  ಆದರೆ ಇಷ್ಟೆಲ್ಲ ವೈವಿಧ್ಯತೆ ಗೊತ್ತಿದ್ದರೂ, ಇತ್ತೀಚೆಗೆ ನೀವು ಆಕ್ಷನ್ ಬದಲು ಸಾಂಸಾರಿಕ ಸಬ್ಜೆಕ್ಟ್ ಆಯ್ದುಕೊಂಡಿದ್ದೇಕೆ?

  ಆದರೆ ಇಷ್ಟೆಲ್ಲ ವೈವಿಧ್ಯತೆ ಗೊತ್ತಿದ್ದರೂ, ಇತ್ತೀಚೆಗೆ ನೀವು ಆಕ್ಷನ್ ಬದಲು ಸಾಂಸಾರಿಕ ಸಬ್ಜೆಕ್ಟ್ ಆಯ್ದುಕೊಂಡಿದ್ದೇಕೆ?

  ಹೌದು. ಈಗ ಆಕ್ಷನ್ ಟ್ರೆಂಡ್ ಇದ್ದರೂ, ಜನ ಆಕ್ಷನ್ ಚಿತ್ರಗಳನ್ನು ನೋಡಿ ಬೇಸರಗೊಂಡಿರುತ್ತಾರೆ, ಅದರ ನಡುವೆ ನಾನು ಒಂದೊಳ್ಳೆಯ ಸಾಂಸಾರಿಕ ಚಿತ್ರ ನೀಡಿದರೆ ಜನ ಖಂಡಿತವಾಗಿ ಮತ್ತೆ ಚಿತ್ರಮಂದಿರಕ್ಕೆ ಬರುತ್ತಾರೆ ಎಂದುಕೊಂಡಿದ್ದೆ. ಹಾಗಾಗಿ 'ಆಡುವ ಗೊಂಬೆ' ಸಿನಿಮಾ ಮಾಡಿದೆ. ನೋಡಿದ ಎಲ್ಲರೂ ಕತೆ, ಚಿತ್ರಕತೆಯ ಬಗ್ಗೆ ಮೆಚ್ಚುಗೆ ನೀಡಿದವರೇ. ಆದರೆ ಚಿತ್ರ ಜನರಿಗೆ ರೀಚ್ ಆಗುವ ಮೊದಲೇ ಥಿಯೇಟರ್ ನಿಂದ ಎತ್ತಂಗಡಿಯಾಯಿತು. ಅದಕ್ಕೆ ಮುಖ್ಯ ಕಾರಣ, ನಮ್ಮ ನಿರ್ದೇಶಕರು ಪತ್ರಿಕೆ, ವಾಹಿನಿಗಳಲ್ಲಿನ ಪ್ರಚಾರಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣಗಳನ್ನು ಮೆಚ್ಚಿಕೊಂಡಿದ್ದೇ ಕಾರಣ ಎಂದು ನನ್ನ ಅನಿಸಿಕೆ. ಶಿವರಾಜ್ ಕುಮಾರ್, ಪುನೀತ್, ರಾಘವೇಂದ್ರ ರಾಜ್ ಕುಮಾರ್ ಮತ್ತು ವಿಜಯರಾಘವೇಂದ್ರ ಹಾಡಿರುವಂಥ ಅಪರೂಪದ ಗೀತೆಗಳು ಚಿತ್ರದಲ್ಲಿದ್ದವು. ಯಾವುದಕ್ಕೂ ಸರಿಯಾದ ಪ್ರಚಾರ ಮಾಡಲೇ ಇಲ್ಲ ಎನ್ನುವ ಒಂದು ನೋವು ಇಂದಿಗೂ ಅದರ ನಿರ್ಮಾಪಕರ ಮೇಲಿದೆ. ಒಳ್ಳೆಯ ನಿರ್ಮಾಪಕರು ಸಿಕ್ಕರೆ ಮುಂದೆ ಆಕ್ಷನ್ ಚಿತ್ರ ಮಾಡುವ ಯೋಜನೆ ಇದೆ.

  ನಿಮಗೆ ತುಂಬ ಇಷ್ಟವಾದ ನಿಮ್ಮದಲ್ಲದ ಚಿತ್ರಗಳ ಹೆಸರು ಹೇಳಿ

  ನಿಮಗೆ ತುಂಬ ಇಷ್ಟವಾದ ನಿಮ್ಮದಲ್ಲದ ಚಿತ್ರಗಳ ಹೆಸರು ಹೇಳಿ

  ಹಿಂದಿಯಲ್ಲಿ ಜೂಲಿ, ಶೋಲೆ, ದಿಲ್ವಾಲೆ ದುಲ್ಹೇನಿಯ ಲೇಜಾಯೇಂಗೆ, ತಮಿಳಲ್ಲಿ ಏಕ್ ದುಜೇ ಕೇಲಿಯೆ, ಬಾಂಬೆ , ತೆಲುಗಲ್ಲಿ ಶಂಕರಾಭರಣಂ, ಸೀತಾರಾಮಯ್ಯಗಾರಿ ಮನವರಾಲು, ಮರಾಠಿಯಲ್ಲಿ ಶಾಮ್ ಚಾಯಿ ಮತ್ತು ಕನ್ನಡದಲ್ಲಿ ಬಂಗಾರದ ಮನುಷ್ಯ, ಬೂತಯ್ಯನ ಮಗ ಅಯ್ಯು ಚಿತ್ರಗಳು ನನಗೆ ಇಷ್ಟವಾದ ಸಿನಿಮಾಗಳು. ಹಿಂದಿಯಲ್ಲಿ ವಿ ಶಾಂತಾರಾಂ, ರಾಜ್ ಕಪೂರ್ ಮೊದಲಾದವರ ಚಿತ್ರಗಳನ್ನು ಮರೆಯಲಾಗದು.

  ಸಿನಿಮಾರಂಗದಲ್ಲಿ ನೀವು ಕಂಡಿರುವ ಪ್ರಮುಖ ಬದಲಾವಣೆಗಳೇನು?

  ಸಿನಿಮಾರಂಗದಲ್ಲಿ ನೀವು ಕಂಡಿರುವ ಪ್ರಮುಖ ಬದಲಾವಣೆಗಳೇನು?

  ಮೊದಲು ಸಂಸಾರ ಸಮೇತ ಕುಳಿತು ನೋಡುವಂಥ ಚಿತ್ರಗಳೇ ಹೆಚ್ಚು ಬರುತ್ತಿದ್ದವು. ಆದರೆ ಈಗ ತೆರೆಕಾಣುತ್ತಿರುವ ಚಿತ್ರಗಳಲ್ಲಿ ಹೆಚ್ಚಿನವು ಹುಡುಗ ಹುಡುಗಿಯ ಲವ್ವು. ಲವ್ ಫೆಯಿಲ್ಯೂರಾಗಿ ಬಾರಲ್ಲಿ ಒಂದು ಹಾಡು, ಅಲ್ಲಿಂದ ರೌಡಿಸಂ.. ಇಷ್ಟೇ ಎನ್ನುವಂತಾಗಿದೆ. ಗಾಂಧಿನಗರದಲ್ಲಿ ಈಗ ಗಡ್ಡ ಬಿಟ್ಟೋನೆ ಹೀರೋ ಎಂಬಂತಾಗಿದೆ. ಬಟ್ಟೆ ಬಿಚ್ಚೋಳು ಹೀರೋಯಿನ್ ಎಂಬ ಗಾದೆಯೇ ಹುಟ್ಕೊಂಡಿದೆ.

  ಈ ವಯಸ್ಸಿನಲ್ಲಿ ಕೂಡ ನೀವು ಇಷ್ಟೊಂದು ಸಕ್ರಿಯರಾಗಿರಲು ಯೋಗವೇ ಕಾರಣವೇ?

  ಈ ವಯಸ್ಸಿನಲ್ಲಿ ಕೂಡ ನೀವು ಇಷ್ಟೊಂದು ಸಕ್ರಿಯರಾಗಿರಲು ಯೋಗವೇ ಕಾರಣವೇ?

  ಈ ಪ್ರಶ್ನೆ ರಾಜ್ ಕುಮಾರ್ ಇರುವಾಗಲೇ ನನ್ನಲ್ಲಿ ಹಲವರು ಕೇಳೋರು. ಅದಕ್ಕೆ ಅವರೇ ಉತ್ತರಿಸುತ್ತಿದ್ದರು, "ಅವರು ಕರ್ಮಯೋಗಿ, 24 ಗಂಟೆ ಕೆಲಸ ಮಾಡ್ತಾರೆ" ಅಂತಾ ಇದ್ರು. ಈಗಲೂ ಅಷ್ಟೇ ರಾತ್ರಿ ಮಲಗುವಾಗ 11.30 ಆಗುತ್ತೆ. ಬೆಳಿಗ್ಗೆ 7.30ರ ಒಳಗೆ ಏಳುತ್ತೇನೆ. ವಾಕ್ ಕೂಡ ಮಾಡಲ್ಲ. ಆದರೆ ನನ್ನ ಕಾರನ್ನು ನಾನೇ ಡ್ರೈವ್ ಮಾಡುತ್ತೇನೆ. ಯಾವುದೇ ದುರಭ್ಯಾಸಗಳಿಲ್ಲ. ಹೆಂಡ, ಲಿಕ್ಕರ್ ನಾಲಿಗೆಗೆ ಸೋಕಿಸಿಲ್ಲ. ಸಿಗರೇಟ್ ಸೇದಿಲ್ಲ.‌ ಮಾಂಸಾಹಾರ ಕೂಡ ಮಾಡಿಲ್ಲ. ಎಲೆ ಅಡಿಕೆ ಹಾಕಲ್ಲ. ಸೋಮಾರಿತನಕ್ಕೆ ಅವಕಾಶ ಕೊಡಲ್ಲ. ಸದಾ ಏನಾ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ಏನಿಲ್ಲ ಅಂದರೆ ಮನೆಯಲ್ಲಿ ಕುಳಿತು ಕತೆ ಪುಸ್ತಕ ಓದ್ತಾ ಇರುತ್ತೇನೆ.

  ಈ ಬಾರಿ ಜನ್ಮದಿನಾಚರಣೆ ಹೇಗೆ ಮಾಡಿದಿರಿ?

  ಈ ಬಾರಿ ಜನ್ಮದಿನಾಚರಣೆ ಹೇಗೆ ಮಾಡಿದಿರಿ?

  ವರ್ಷ 87 ಆಗಿರುವಾಗ ಏನು ಆಚರಣೆ ಹೇಳಿ? ಅಂದಹಾಗೆ ವಿಕಿಪೀಡಿಯದಲ್ಲಿ ಇರುವಂತೆ ನನ್ನ ಜನ್ಮದಿನ ಜುಲೈ ಮೂರಕ್ಕೆ ಅಲ್ಲ, ಐದಕ್ಕೆ. ಪ್ರತಿ ವರ್ಷ ದೇವಸ್ಥಾನಕ್ಕೆ ಹೋಗುತ್ತೇನೆ. ಯಾರಾದರೂ ‌ಶಿಷ್ಯಂದಿರು ಕೇಕ್ ತಂದು ಕತ್ತರಿಸುತ್ತಾರೆ.

  ಪ್ರಸ್ತುತ ನಿಮ್ಮ ಮನೆಯಲ್ಲಿ ಯಾರೆಲ್ಲ ಇದ್ದೀರ?

  ಪ್ರಸ್ತುತ ನಿಮ್ಮ ಮನೆಯಲ್ಲಿ ಯಾರೆಲ್ಲ ಇದ್ದೀರ?

  ಮನೆಯಲ್ಲಿ ನಾನು ನನ್ನ ಮಗ ಮತ್ತು ಸೊಸೆ ಅಷ್ಟೇ ಇರೋದು. ಮಗ ಜ್ಯೋತೀಂದರ್ ಬಿಸ್ನೆಸ್ ಮಾಡುತ್ತಾನೆ. ಸೊಸೆ ಗೃಹಿಣಿ. ಉಳಿದ ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬ ಚೆನ್ನೈನಲ್ಲಿ, ಇನ್ನೊಬ್ಬ ಆಸ್ಟ್ರೇಲಿಯಾದಲ್ಲಿದ್ದಾರೆ. ಮಗಳು ದುಬೈನಲ್ಲಿದ್ದಾಳೆ. ಮೊಮ್ಮಕ್ಕಳು ಕೂಡ ಆಸ್ಟ್ರೇಲಿಯಾದಲ್ಲಿದ್ದಾರೆ. ಮನೇಲಿರೋ ಮಗನ ಮಗಳು ಕೂಡ ಮದುವೆಯಾಗಿ ವಿದೇಶದಲ್ಲಿದ್ದಾರೆ. ಸಹಜವಾಗಿ ನನಗೆ ಈಗ ಮರಿಮಕ್ಕಳೂ ಇದ್ದಾರೆ.

  ನಿಮಗೆ ಇಂದಿಗೂ ಉಳಿದುಕೊಂಡಿರುವ ಕನಸು ಏನಾದರೂ ಇದೆಯೇ?

  ನಿಮಗೆ ಇಂದಿಗೂ ಉಳಿದುಕೊಂಡಿರುವ ಕನಸು ಏನಾದರೂ ಇದೆಯೇ?

  ನನಗೆ ಒಂದು ಒಳ್ಳೆಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಸಿಕ್ಕಿದ್ದರೆ ಚೆನ್ನಾಗಿತ್ತು ಎಂದು ಅನಿಸುತ್ತದೆ. ಆದರೆ ಅದೇ ವೇಳೆ ಡಾ.ರಾಜ್ ಹೇಳಿದಂಥ ಒಂದು ವಿಷಯ ನೆನಪಾಗುತ್ತದೆ. ಅದು ಅವರಿಗೆ ಪದ್ಮಭೂಷಣ ಬಂದ ಸಂದರ್ಭ. ನಾನು ಅವರೊಂದಿಗೆ ದೆಹಲಿಗೆ ಹೋಗಿದ್ದೆ. ಅವರಲ್ಲಿ ಪ್ರಶಸ್ತಿ ಬಂದ ಬಗ್ಗೆ ಮಾತನಾಡಿಸಿದವರಲ್ಲಿ "ಪ್ರಶಸ್ತಿಗಳು ನಮ್ಮನ್ನು ಹುಡುಕಿಕೊಂಡು ಬರಬೇಕು ಹೊರತು ನಾವು ಪ್ರಶಸ್ತಿಗಳ ಹಿಂದೆ ಹೋಗಬಾರದು" ಎಂದಿದ್ದರು. ಅದೇ ಸರಿ ಎಂದು ಸುಮ್ಮನಾಗುತ್ತೇನೆ.

  English summary
  Kannada senior director S K Bhagwan interview with Filmibeat Kannada about his 87th birthday

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X