ಸಂದರ್ಶನ: ಸರಿಗಮಪ ತಮಿಳು- 5 ಫಿನಾಲೆಗೆ ಹೋಗಿದ್ದೆ ಖುಷಿ, ನಟಿಸುವ ಆಸೆಯಿದೆ- ಶಿವಾನಿ
ಸರಿಗಮಪ ತಮಿಳು ವೇದಿಕೆಯಲ್ಲಿ ಕನ್ನಡದ ಹುಡುಗಿ ಶಿವಾನಿ ನವೀನ್ ತಮ್ಮ ಗಾಯನದ ಮೂಲಕ ಮೋಡಿ ಮಾಡಿದ್ದು ಗೊತ್ತೇಯಿದೆ. ಕನ್ನಡದ 'ಸೋಜುಗದ ಸೂಜಿಮಲ್ಲಿಗೆ' ಹಾಡನ್ನು ಅಲ್ಲಿ ಹಾಡಿ ಗಮನ ಸೆಳೆದಿದ್ದರು. ಆಕೆಯ ಪ್ರತಿಭೆಗೆ ತಮಿಳು ಸಂಗೀತ ಪ್ರೇಮಿಗಳು ಫಿದಾ ಆಗಿದ್ದಾರೆ. ಫಿನಾಲೆವರೆಗೂ ಹೋಗಿ ಅಪರೂಪದ ಸಾಧನೆ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಫಿನಾಲೆಯಲ್ಲಿ ಕೂಡ ತಮ್ಮ ಗಾಯನದಿಂದ ಶಿವಾನಿ ಮ್ಯಾಜಿಕ್ ಮಾಡಿದ್ದರು. ಆದರೆ ಗೆಲುವು ಮಾತ್ರ ಸಿಗಲಿಲ್ಲ. ಇದು ಆಕೆಯ ಅಭಿಮಾನಿಗಳಿಗೆ ಬೇಸರ ತಂದಿತ್ತು. ಗಾಯಕಿ ಸುಸಂತಿಕಾ ಜಯಚಂದ್ರನ್ ಅವರಿಗೆ ವಿಜಯಮಾಲೆ ಲಭಿಸಿತ್ತು. ಗಾಯಕ ಸಪೇಸನ್ ಮೊದಲ ರನ್ನರ್ ಅಪ್ ಹಾಗೂ ಮತ್ತೊಬ್ಬ ಗಾಯಕ ಚಿನ್ನು ಸೆಂಥಮಿಲನ್ ಸೆಕೆಂಡ್ ರನ್ನರ್ ಅಪ್ ಆಗಿ ಸಂಭ್ರಮಿಸಿದ್ದರು. ನಾನು ಫಿನಾಲೆವರೆಗೂ ಹೋಗಿದ್ದೆ ಅಮೋಘ ಸಾಧನೆ, ಇದಕ್ಕಿಂತ ಏನು ಬೇಕು ಎಂದು ಶಿವಾನಿ ಹೇಳಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪದ ಹುಡುಗಿ ಶಿವಾನಿ ನವೀನ್ ಸರಿಗಮಪ ತಮಿಳು ಸೀಸನ್- 5 ವೇದಿಕೆ ಏರಿದ್ದು ಕನ್ನಡಿಗರಿಗೂ ಖುಷಿ ತಂದಿತ್ತು. ಗ್ರ್ಯಾಂಡ್ ಆಡಿಷನ್ ವೇಳೆ 'ಸೋಜುಗದ ಸೂಜಿಮಲ್ಲಿಗೆ' ಹಾಡಿ ಆಯ್ಕೆ ಆಗಿದ್ದರು. ಅಂತಿಮವಾಗಿ ಫಿನಾಲೆ ವೇದಿಕೆಯಲ್ಲಿ 'ಓಂ ಶಿವೋಹಂ' ಹಾಡು ಮಾಡಿ ಸಂಗೀತಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿದ್ದರು. ಈಗಾಗಲೇ ತಮಿಳಿನಿಂದ ಸಾಕಷ್ಟು ಅವಕಾಶಗಳು ಆಕೆಯನ್ನು ಹುಡುಕಿ ಬರ್ತಿವೆ. ನಟ, ನಿರ್ದೇಶಕ, ಗಾಯಕ ಧನುಷ್, ಹಾಗೂ ನಟಿ, ಗಾಯಕಿ ಆಂಡ್ರಿಯಾ ಕೂಡ ಶಿವಾನಿಗೆ ಗಾಯನದ ಅವಕಾಶ ಕೊಡುವುದಾಗಿ ಹೇಳಿದ್ದಾರೆ.
ಶಿವಾನಿ ಜೀ ಕನ್ನಡದ ಸರಿಗಮಪ ಲಿಟ್ಲ್ ಚಾಂಪ್ಸ್-19ರ ರನ್ನರ್ ಅಪ್ ಆಗಿದ್ದರು. ಚಿಕ್ಕಮಗಳೂರಿನ ಕೊಪ್ಪದಲ್ಲಿ ಹುಟ್ಟಿದ ಆಕೆ ಉಡುಪಿಯಲ್ಲಿ ಓದಿ ಬೆಳೆದವರು. ತಂದೆ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾರೆ. ಹಾಗಾಗಿ ಮಗಳು ಚಿಕ್ಕಂದಿನಿಂದ ಸಂಗೀತ ಅಭ್ಯಾಸ ಆರಂಭಿಸಿದ್ದರು. ಸರಿಗಮಪ ತಮಿಳು ಸೀಸನ್- 5 ಜರ್ನಿ ಹಾಗೂ ತಮ್ಮ ಮುಂದಿನ ಕನಸುಗಳ ಬಗ್ಗೆ ಶಿವಾನಿ ಮಾತನಾಡಿದ್ದಾರೆ.

ಸರಿಗಮಪ ತಮಿಳು ಸೀಸನ್- 5 ಪಯಣ ಹೇಗಿತ್ತು?
ಸಖತ್ತಾಗಿ ಇತ್ತು. ಇಲ್ಲಿ ಎಲ್ಲರೂ ನನ್ನನ್ನು ಗುರ್ತಿಸುವಂತಾಯಿತು. ನಾನು ಇದನ್ನೆಲ್ಲಾ ನಿರೀಕ್ಷಿಸಿರಲಿಲ್ಲ. ಎಲ್ಲೇ ಹೋದರೂ ನನ್ನನ್ನು ಗುರ್ತಿಸುತ್ತಾರೆ. ಸರಿಗಮಪ ಶಿವಾನಿ ಅಲ್ವಾ? ಎಂದು ಕೇಳುತ್ತಾರೆ. ಕರ್ನಾಟಕದಲ್ಲಿ ಪ್ರೀತಿ ಸಿಕ್ಕಂತೆ ಇಲ್ಲಿ ಸಿಗುತ್ತಿದೆ. ಅದೇ ಖುಷಿ.
ಟೈಟಲ್ ಗೆಲ್ಲಲು ಸಾಧ್ಯವಾಗಲಿಲ್ಲ, ಬೇಸರ ಇದ್ಯಾ?
ಯಾವುದೇ ಬೇಸರ ಇಲ್ಲ, ಇಲ್ಲಿಯವರೆಗೆ ಬಂದಿದ್ದೇ ಬಹಳ ಖುಷಿಯಿದೆ. ಅಷ್ಟು ದೊಡ್ಡ ವೇದಿಕೆಯಲ್ಲಿ ಅಷ್ಟು ಜನರ ನಡುವೆ ಹಾಡಿದ್ದೀನಿ. ಅದಕ್ಕಿಂತ ಏನು ಬೇಕು. ಅಷ್ಟು ಜನರ ಪ್ರೀತಿ ಸಿಕ್ಕಿರುವುದು ಖುಷಿಯಿದೆ. ಟೈಟಲ್ ಗೆಲ್ಲಲೇಬೇಕು ಎನ್ನುವುದೆಲ್ಲಾ ನನ್ನ ತಲೆಯಲ್ಲಿ ಇರಲಿಲ್ಲ. ನನ್ನ ಮೆಂಟರ್ ಬಹಳ ಒಳ್ಳೆಯವರು. ಪ್ರತಿ ಹಾಡನ್ನು ಚೆನ್ನಾಗಿ ಹೇಳಿಕೊಡ್ತಿದ್ರು. ನಾನು ಹಾಡುವಾಗ ನನಗಿಂತ ಅವ್ರಿಗೆ ಆತಂಕ ಇರುತ್ತಿತ್ತು. ಚೆನ್ನಾಗಿ ಹಾಡಬೇಕು ಅಂತ. ಅಷ್ಟು ಪ್ರೀತಿ ಬೆಂಬಲ ಸಿಕ್ಕಿದೆ.
ಸರಿಗಮಪ ಸ್ಪರ್ಧಿಗಳೊಂದಿಗೆ ವಿದೇಶದಲ್ಲಿ ಸಂಗೀತ ಸಂಜೆ ಟೂರ್‌ಗೆ ನೀವು ಹೋಗ್ತಿದ್ದೀರಾ?
ಹೌದು.. 6 ಮಂದಿ ಫೈನಲಿಸ್ಟ್‌ಗಳು ಹೋಗ್ತಿದ್ದೀವಿ. ಅದಕ್ಕಾಗಿ ಸಿದ್ಧತೆ ನಡೀತಿದೆ. ಮಲೇಷಿಯಾ, ಶ್ರೀಲಂಕಾ, ನಾರ್ವೆ, ಕೆನಡಾ, ಯುಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಇದು ಒಳ್ಳೆಯ ಅವಕಾಶ. ಅದಕ್ಕಾಗಿ ಎದುರು ನೋಡ್ತಿದ್ದೀನಿ.
ತಮಿಳು ವೇದಿಕೆಯಲ್ಲಿ ಕನ್ನಡ ಹಾಡು ಹಾಡಿ ಗೆದ್ದಿದ್ದು ಹೇಗೆ?
ಎಲ್ಲಾ ಹಾಡುಗಳು ಕಷ್ಟ, ಎಲ್ಲಾ ಹಾಡುಗಳು ಕಲಿತು ಹಾಡಿದರೆ ಸುಲಭ. ಮೆಗಾ ಆಡಿಷನ್ ವೇಳೆ ನಾನು 'ಸೋಜುಗದ ಸೂಜುಮಲ್ಲಿಗೆ' ಹಾಡು ಹಾಡಿ ಆಯ್ಕೆ ಆಗಿದ್ದು ವಿಶೇಷ. ಕೊನೆಗೆ ಫಿನಾಲೆಯಲ್ಲಿ ಕೂಡ ಶಿವನ ಹಾಡು ಹಾಡಿದ್ದೆ. ಒಂದರ್ಥದಲ್ಲಿ ಒಂದು ಸರ್ಕಲ್ ಸುತ್ತಿ ಬಂದಂತೆ ಆಯಿತು.
ಶಿವಾನಿ ಹೈ ಪಿಚ್ ಹಾಡು ಚೆನ್ನಾಗಿ ಹಾಡ್ತಾರೆ, ಮೆಲೋಡಿ ಕಷ್ಟ ಎಂದು ಕೆಲವರು ಕಾಮೆಂಟ್ ಮಾಡಿದ್ರಲ್ಲ
ನಾನು ಎಲ್ಲಾ ತರಹದ ಹಾಡು ಹಾಡಿದ್ದೀನಿ. ಸಾಕಷ್ಟು ಮೆಲೋಡಿ, ಫೋಕ್, ವೆಸ್ಟರ್ನ್ ಹಾಡುಗಳನ್ನು ಹಾಡಿದ್ದೆ. ಫೋಕ್ ಸಾಂಗ್ ನೆನಪಿಟ್ಟುಕೊಂಡು ಹಾಡುವುದು ಕಷ್ಟವಾಗಿತ್ತು. ನನ್ನ ಕಂಫರ್ಟ್ ಜೋನ್ ಬಿಟ್ಟು ಎಲ್ಲಾ ತರಹದ ಹಾಡುಗಳನ್ನು ಟ್ರೈ ಮಾಡಿದ್ದೀನಿ. ಬಹಳ ಖುಷಿಯಿದೆ.
ತಮಿಳು ಹಾಡುಗಳನ್ನು ಅಷ್ಟು ಸುಲಭವಾಗಿ ಹೇಗೆ ಹಾಡಿದ್ರಿ?
ನಾನು ತಮಿಳು ಸಿನಿಮಾಗಳನ್ನು ನೋಡಿ ಭಾಷೆ ಕಲಿತಿದ್ದು. ಬೇರೆ ಬೇರೆ ಭಾಷೆಗಳನ್ನು ಕಲಿಯುವುದು ಇಷ್ಟ. ಹಿಂದಿ, ಮಲಯಾಳಂ ಕೂಡ ಮಾತನಾಡ್ತೀನಿ. ತಮಿಳು ಹಾಡುಗಳನ್ನು ಕೇಳಿ ಕೇಳಿ ಬರೆದು ಬಾಯಿಪಾಠ ಮಾಡಿ ಹಾಡುವುದು. ಹಾಗಾಗಿ ಸುಲಭವಾಯಿತು.
ಸರಿಗಮಪ ತಮಿಳು-5 ಟೈಟಲ್ ಗೆದ್ದ ಗಾಯಕಿ ಸುಸಂತಿಕಾ ಬಗ್ಗೆ ಹೇಳಿ
ಆಕೆ ನನಗೆ ಒಳ್ಳೆ ಸ್ನೇಹಿತೆ. ನಾವಿಬ್ಬರು ಒಂದೇ ರೂಮ್‌ನಲ್ಲಿ ಉಳಿದುಕೊಳ್ಳುತ್ತಿದ್ದೆವು. ಸುಸಂತಿಕಾ ಅದ್ಭುತ ಗಾಯಕಿ. ನನಗೆ ಹಾಡು ಹಾಡಲು ಬಹಳ ಸಹಾಯ ಮಾಡಿದ್ದಾಳೆ. ಆಕೆ ಗೆದ್ದಿದ್ದು ಗೊತ್ತಾದಾಗ ನನಗೆ ಬಹಳ ಖುಷಿಯಾಯಿತು. ಇಬ್ಬರೂ ತಬ್ಬಿ ಸಂಭ್ರಮಿಸಿದೆವು. ಇನ್ನು ನನ್ನ ಪೋಷಕರ ಬೆಂಬಲ ಕೂಡ ನನಗಿದೆ. ನಾನು ಏನಾದರೂ ಸಾಧಿಸಿದ್ದರೆ ಅದು ಅವರಿಂದಲೇ ಸಾಧ್ಯವಾಗಿದ್ದು.
ಮುಂದಿನ ಯೋಜನೆಗಳ ಬಗ್ಗೆ ಹೇಳಿ
ಹೆಚ್ಚು ಹೆಚ್ಚು ಹಾಡುಗಳನ್ನು ಹಾಡಬೇಕು. ಸಿನಿಮಾಗಳಿಗೆ ಹಾಡುವ ಆಸಕ್ತಿಯಿದೆ. ನಟನೆಯ ಬಗ್ಗೆ ಹೆಚ್ಚು ಒಲವಿದೆ. ನೋಡಬೇಕು. ಸಾಕಷ್ಟು ಅವಕಾಶಗಳು ಹುಡುಕಿ ಬರ್ತಿದೆ. ಒಳ್ಳೆ ಅವಕಾಶಗಳನ್ನು ಬಳಸಿಕೊಳ್ಳುತ್ತೇನೆ.


Click it and Unblock the Notifications











