ಯಡಿಯೂರು ಸಿದ್ದಲಿಂಗೇಶ್ವರ ಪಾತ್ರ ಮಾಡುತ್ತಿರೋದು ಇವರೇ.. ವಲ್ಲಭ ರಿಯಲ್ ಲೈಫ್ ಬಗ್ಗೆ ನಿಮಗೆಷ್ಟು ಗೊತ್ತು..?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪೌರಾಣಿಕ ಧಾರಾವಾಹಿಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ. ಅದರಲ್ಲೂ ಈಗ 'ಶ್ರೀ ಎಡೆಯೂರು ಸಿದ್ದಲಿಂಗೇಶ್ವರ' ಧಾರಾವಾಹಿಯಂತೂ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದೆ. ಟಿಆರ್‌ಪಿಯಲ್ಲೂ ನಂಬರ್ ಸ್ಥಾನದಲ್ಲಿ ಇರುತ್ತದೆ. ಸದ್ಯಕ್ಕೀಗ ಧಾರವಾಹಿಯಲ್ಲಿ ಸಿದ್ದಲಿಂಗ ವಿನಾಯಕನನ್ನು ಭೇಟಿಯಾಗಿದ್ದಾನೆ.
ಈಶ್ವರನನ್ನು ಪೂಜಿಸುವ ಸಿದ್ದಲಿಂಗ ನನ್ನ ಸರ್ವಸ್ವವೂ ನೀನೆ ಎನ್ನುತ್ತಿದ್ದ. ಈಗ ಗಣಪತಿಗೂ ಅದನ್ನೇ ಹೇಳುತ್ತಿದ್ದಾನೆ. ಅದಕ್ಕೆಂದೆ ಗಣಪ ತನ್ನ ಭಕ್ತನಿಗೆ ಮೊದಲು ಮಾಡಬೇಕಾದ ಕಾಯಕವನ್ನು ನೆನಪಿಸುತ್ತಿದ್ದಾನೆ. ಭೂಲೋಕದಲ್ಲಿ ವಿಧವೆಯನ್ನು ಮದುವೆಯಾಗಲು ಹೊರಟವನನ್ನು ಕೊಲ್ಲಲು ಹೊರಟಿದ್ದಾರೆ. ಈಗ ಸಿದ್ದಲಿಂಗ ಅಲ್ಲಿಗೆ ಹೋಗಲೇಬೇಕಾಗಿದೆ. ಈ ಎಲ್ಲಾ ಪಾತ್ರವನ್ನು ನಿಭಾಯಿಸುತ್ತಿರುವ ವಲ್ಲಭ ತನ್ನ ಜರ್ನಿಯನ್ನು ಫೀಲ್ಮಿ ಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ.

ದೇವರ ಪಾತ್ರದ ಅನುಭವ ಹೊರ ಜಗತ್ತಿಗೆ ಹೇಗಿದೆ..?
"ನನ್ನನ್ನು ನಿಜವಾದ ದೇವರು ಎಂದೇ ಟ್ರೀಟ್ ಮಾಡುತ್ತಾರೆ. ಯಡಿಯೂರಿಗೆ ಹೋದಾಗ, ಉತ್ತರ ಕರ್ನಾಟಕಕ್ಕೆ ಹೋದಾಗೆಲ್ಲಾ ನನ್ನ ಕಾಲಿಗೆ ನಮಸ್ಕಾರ ಮಾಡ್ತಾರೆ. ವರ ಕೊಡಿ ಅಂತ ಕೇಳುತ್ತಾರೆ. ಆಗ ನಾನು ಅವರಿಗೆಲ್ಲಾ ಹೇಳಿದ್ದೀನಿ. ನಾನು ದೇವರಲ್ಲ. ಅಲ್ಲಿ ಹೋಗಿ ಕೇಳಿ ಅಂತೀನಿ. ಸೆಟ್‌ಗೆ ಕೂಡ ಒಂದಷ್ಟು ಜನ ಬರ್ತಾರೆ. ಮಕ್ಕಳನ್ನು ಕರೆದುಕೊಂಡು ಬಂದು ಕಾಲಿಗೆ ನಮಸ್ಕಾರ ಮಾಡಿಸ್ತಾರೆ. ಅವರ ಮನಸ್ಸಿಗೆ ನಾನು ದೇವರು ಎಂಬ ಭಾವನೆ ಬಂದು ಬಿಟ್ಟಿದೆ. ಒಂದು ಹಂತದಲ್ಲಿ ಖುಷಿಯಾಗುತ್ತೆ. ಮತ್ತೊಂದು ಕಡೆ ಭಯ ಆಗುತ್ತೆ. ನನ್ನಿಂದ ದೇವರಿಗೆ ಅಪಚಾರವಾಗಿ ಬಿಡುತ್ತೇನೋ ಎಂದು. ಕಾರ್ತಿಕ ದೀಪೋತ್ಸವದ ವೇಳೆ ನಾವೂ ಯಡಿಯೂರಿಗೆ ಹೋಗಿದ್ವಿ. ಅಲ್ಲಿ ಹೊಸದುರ್ಗದಿಂದ ಯುವಕರು ಪಾದಯಾತ್ರೆ ಮಾಡಿಕೊಂಡು ಬಂದಿದ್ರು. ಅಲ್ಲಿ ನನ್ನ ಗುರುತು ಹಿಡಿದು, ಕಾಲಿಗೆ ನಮಸ್ಕಾರ ಮಾಡಿ, ಎತ್ತಿಕೊಂಡು ಎಲ್ಲಾ ಕೊಂಡಾಡಿದ್ರು. ನೀವು ದೇವರು ಸಿಕ್ಕಿದಂತೆ ಸಿಕ್ಕಿದ್ದೀರಿ ಎಂದು ಕೊಂಡಾಡಿದರು. ಧಾರಾವಾಹಿಯನ್ನು ವಯಸ್ಸಾದವರು ನೋಡುತ್ತಾರೆ ಎಂದುಕೊಂಡಿದ್ದೆ, ಆದ್ರೆ, ಯುವಕರು ನೋಡ್ತಾರೆ ಎಂದಾಗ ಖುಷಿ ಆಯ್ತು"
ಸಿದ್ದಲಿಂಗೇಶ್ವರ ಧಾರಾವಾಹಿ ಒಪ್ಪಿಕೊಳ್ಳಲು ಕಾರಣ..?
"ನನಗೆ ಇದು ಮೂರನೇ ಮೈಥಾಲಜಿ ಸೀರಿಯಲ್. ಎರಡು ದೊಡ್ಡ ಸೀರಿಯಲ್ ಮಾಡಿದ ಮೇಲೆ ಮತ್ತೆ ಮೈಥೋ ಸೀರಿಯಲ್ ಮಾಡೋದು ಬೇಡ ಅಂದುಕೊಂಡಿದ್ದೆ. ಎಲ್ಲೋ ಒಂದು ಕಡೆ ಬ್ರಾಂಡ್ ಮಾಡಿ ಬಿಡುತ್ತಾರೆ ಅಂತ ಒಪ್ಪಿಕೊಂಡಿರಲಿಲ್ಲ. ಆದ್ರೆ ಈ ಧಾರಾವಾಹಿ ಬಂದಾಗ, ನನಗೆ ಆಗಲೂ ದ್ವಂದ್ವದಲ್ಲಿಯೇ ಇದ್ದೆ. ನವೀನ್ ಕೃಷ್ಣ ಸರ್ ಡೈರೆಕ್ಷನ್ ಮಾಡ್ತಾರೆ ಎಂದಾಗ ಖುಷಿ ಆಯ್ತು. ಯಾಕಂದ್ರೆ, ಅವರ ಹತ್ತಿರ ಕಲಿಯೋದು ಬಹಳ ಇದೆ. ಒಬ್ಬ ನಟನಾಗಿ ಕಲಿಯುವುದು ಬಹಳಷ್ಟಿದೆ ಎಂದು ಈ ಧಾರವಾಹಿಯನ್ನು ಒಪ್ಪಿಕೊಂಡೆ".
11 ವರ್ಷದ ಜರ್ನಿ ಬಗ್ಗೆ ಹೇಳಿ
"ನನ್ನ ಜೀವನದಲ್ಲಿ 11 ವರ್ಷದ ಜರ್ನಿ ಏನಿತ್ತು. ಈ ಎರಡು ವರ್ಷದಲ್ಲಿ ಆ ಒಂದು ಸೀರಿಯಲ್ ನನ್ನ ಜೀವನವನ್ನು ಬದಲಾಯಿಸಿದೆ ಎಂದು ಹೇಳಬಹುದು. ಬಹಳ ಖುಷಿಕೊಟ್ಟಿದೆ. ದೇವರ ಬಗ್ಗೆ ನಂಗೆ ಮೊದಲು ಅಷ್ಟೊಂದು ಗೊತ್ತಿರಲಿಲ್ಲ. ಆದ್ರೆ ಈ ಧಾರಾವಾಹಿ ಮಾಡ್ತೀನಿ ಎಂದಾಗ ಅದಕ್ಕೆ ಸಂಬಂಧಿಸಿದ ಸಿನಿಮಾ ನೋಡಿದೆ. ಪುಸ್ತಕ ಓದಿದೆ. ಎಂಥಾ ಅದ್ಭುತ ವ್ಯಕ್ತಿ ಈ ನೆಲದಲ್ಲಿ ಇದ್ರಲ್ಲ ಅಂತ ಖುಷಿ ಆಯ್ತು. ದೇವ್ರು ಅಂದ್ರೇನೆ ನಂಬಿಕೆ. ಆ ನಂಬಿಕೆಯೇ ನನ್ನನ್ನು ಒಂದೊಳ್ಳೆ ದಾರಿಗೆ ಕರೆದುಕೊಂಡು ಬಂತು".

ಸಿದ್ಧಲಿಂಗೇಶ್ವರ ಪಾತ್ರದ ಅನುಭವ ಏನು?
"ನನಗೆ ಬಹಳಷ್ಟು ಸಮಸ್ಯೆಗಳಿತ್ತು. ಧಾರಾವಾಹಿಯಲ್ಲಿ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಹೇಳ್ತಾ ಹೇಳ್ತಾ ಆ ಸಮಸ್ಯೆಗೆ ರಿಯಲ್ ಆಗಿ ನನಗೆ ಪರಿಹಾರ ಸಿಗುತ್ತಾ ಹೋಯ್ತು. ದೇವರ ಬಗ್ಗೆ ಅಷ್ಟೊಂದು ನಂಬಿಕೆ ಇರಲಿಲ್ಲ. ಆದರೆ, ಈ ಧಾರಾವಾಹಿ ಮಾಡುತ್ತಾ ಮಾಡುತ್ತಾ ನಂಬಿಕೆ ಹುಟ್ಟಿದೆ. ದೇವರು ಎಂದಾಕ್ಷಣಾ ಯಾರೋ ಬಂದು ಮ್ಯಾಜಿಕ್ ಮಾಡ್ತಾರೆ. ಯಾರೋ ಬಂದು ಕೆಲಸ ಕೊಡುತ್ತಾರೆ ಎಂದುಕೊಳ್ತೀವಿ. ಆದ್ರೆ, ಇದರಲ್ಲಿ ಮೇಜರ್ ಆಗಿ ಕಲಿತಿದ್ದು, ನಮ್ಮನ್ನು ನಾವೂ ನಂಬಿದ್ರೆ ಅದೇ ಪವಾಡವಾಗುತ್ತೆ. ಅದನ್ನೇ ನಂಬಿಕೊಂಡು ಹೋಗ್ತಾ ಇದ್ದೀನಿ".
ಈ ಧಾರಾವಾಹಿ ಬಳಿಕ ಏನು ಮಾಡ್ತೀರಿ..?
"ಈ ಧಾರಾವಾಹಿ ಆದ್ಮೇಲೆ ಬೇರೆ ಭಾಷೆಯಲ್ಲೂ ಆಫರ್‌ಗಳು ಬಂದಿವೆ. ಬರೀ ಇದೇ ಪಾತ್ರ ಅಂತ ಅಲ್ಲ ಬೇರೆ ಬೇರೆ ರೀತಿಯಾದ ಪಾತ್ರಗಳಿಗೂ ಆಫರ್ ಗಳು ಬಂದಿದೆ. ಕಾರಣಾಂತರದಿಂದ ಒಪ್ಪಿಕೊಳ್ಳುವುದಕ್ಕೆ ಆಗಿಲ್ಲ. ನನ್ನನ್ನು ಬೇರೆ ಪಾತ್ರದಲ್ಲಿ ನೋಡುವುದಕ್ಕೆ ಇಷ್ಟಪಡುತ್ತಾರಲ್ಲ ಅದು ಖುಷಿಯಾಗಿದೆ. ನಮ್ಮದೆ ಪ್ರೊಡಕ್ಷನ್ ಕಂಪನಿ ಆರಂಭ ಮಾಡಬೇಕು ಎಂದುಕೊಂಡಿದ್ದೇನೆ" ಎಂದಿದ್ದಾರೆ.


Click it and Unblock the Notifications











