'ಬಂಧನ' ಬಿಡುಗಡೆಯಾದಾಗ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಮೇಲೆ ಹಲ್ಲೆ ಪ್ರಯತ್ನ ನಡೆದಿದ್ದೇಕೆ ?
ಒಂದು ಚಿತ್ರವನ್ನು ನಿರ್ದೇಶನ ಮಾಡಿ ಆ ಚಿತ್ರವನ್ನು ಚಿತ್ರಮಂದಿರಕ್ಕೆ ಕರೆತರುವಷ್ಟರಲ್ಲಿ ಏದುಸಿರು ಬಿಡುವರ ನಡುವೆ, ಕಳೆದ 50 ವರ್ಷಗಳಿಂದ ಹತ್ತು ಹಲವು ಜನಪ್ರಿಯ ಚಿತ್ರಗಳನ್ನು ನೀಡಿದವರು ಎಸ್.ವಿ.ರಾಜೇಂದ್ರ ಸಿಂಗ್ ಬಾಬು. 'ನಾಗಕನ್ಯೆ' .. 'ನಾಗರಹೊಳೆ' .. 'ಕಿಲಾಡಿ ಜೋಡಿ' .. 'ಅಂತ' .. 'ಸಿಂಹದ ಮರಿ ಸೈನ್ಯ' .. 'ಬಂಧನ' .. 'ಬಣ್ಣದ ಗೆಜ್ಜೆ'.. 'ಮುತ್ತಿನ ಹಾರ'.. 'ಮುಂಗಾರಿನ ಮಿಂಚು'..
ಒಂದಾ..ಎರಡಾ.. ಹಲವಾರು ಚಿತ್ರಗಳ ಮೂಲಕ ಕನ್ನಡಿಗರ ಹೃದಯ ಗೆದ್ದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಆ ಕಾಲದಲ್ಲಿಯೇ ಹಿಂದಿ ಚಿತ್ರಗಳನ್ನು ಕೂಡ ನಿರ್ದೇಶಿಸಿದ್ದರು. 'ಮೇರಿ ಅವಾಜ್ ಸುನೋ'.. 'ಶರಾರಾ'.. 'ಮೇರಾ ಪೈಸಲಾ'.. 'ಏಕ್ ಸೇ ಭಲೇ ದೋ'.. ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ಕೂಡ ತಮ್ಮ ಚಾಪು ಮೂಡಿಸಿದ್ದ ಸಿಂಗ್ ಬಾಬು ತೆಲುಗಿನಲ್ಲಿ ನಾಗಾರ್ಜುನಗೆ 'ಬಣ್ಣದ ಗೆಜ್ಜೆ'ಯನ್ನು ಕೂಡ ಮಾಡಿದ್ದರು.

ಇಂಥಾ ರಾಜೇಂದ್ರ ಸಿಂಗ್ ಬಾಬು ಚಿತ್ರರಂಗಕ್ಕೆ ಬಂದು 50 ವಸಂತಗಳಾಗಿವೆ. ಈ ಹಿನ್ನೆಲೆ ನಿಮ್ಮ ''ಫಿಲ್ಮಿಬೀಟ್ ಕನ್ನಡ ವೆಬ್‌ಸೈಟ್ '' ರಾಜೇಂದ್ರ ಸಿಂಗ್ ಬಾಬು ಅವರ ಜೊತೆ ವಿಶೇಷವಾದ ಸಂದರ್ಶನವನ್ನು ನಡೆಸಿದ್ದು, ಈ ಸಂದರ್ಶನದ ಎರಡನೇ ಆಯ್ದ ಭಾಗ ಇಲ್ಲಿದೆ.
ಸಿಂಹದ ಮರಿ ಸೈನ್ಯ ಮಾಡಲು ಕಾರಣವೇನು ?
''ನಾಗರಹೊಳೆ ಚಿತ್ರ ಮಾಡಿದಾಗ ಅದನ್ನು ನೋಡಿದ ಅನೇಕರು ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರನ್ನು ಹಾಕಿಕೊಳ್ಳಬಾರದಿತ್ತು ಎಂದು ಅಪಸ್ವರ ತೆಗೆದರು. ಕೇವಲ ಮಕ್ಕಳ ಚಿತ್ರ ಮಾಡಬೇಕಿತ್ತು ಎಂದು ಹೇಳಿದರು. ಆಗ ಇಬ್ಬರು ಸೂಪರ್ ಸ್ಟಾರ್‌ಗಳಾಗಿರಲಿಲ್ಲ. ಆ ಪಾತ್ರಕ್ಕೆ ಅವರು ಸರಿ ಹೊಂದುತ್ತಾರೆ ಎನ್ನುವ ಕಾರಣಕ್ಕೆ ನಾನು ಆ ಇಬ್ಬರನ್ನು ಹಾಕಿಕೊಂಡಿದ್ದೆ ಹೊರತು ಕಮರ್ಷಿಯಲ್ ಸ್ಪರ್ಶ ಕೊಡಲು ಅವರು ಇಬ್ಬರನ್ನು ನಾನು ಆಯ್ಕೆ ಮಾಡಿರಲಿಲ್ಲ. ಆದರು ಈ ವಿಚಾರ ಪತ್ರಿಕೆಗಳಲ್ಲಿ ಎಲ್ಲ ಬರೆದಿದ್ದರು. ಇದರಿಂದ ಆ ನಂತರ ಯಾಕೆ ಬರೀ ಮಕ್ಕಳ ಚಿತ್ರ ಮಾಡಬಾರದೆನ್ನುವ ಆಲೋಚನೆ ಬಂತು.
ಹೀಗಾಗಿಯೇ ಸಿಂಹದ ಮರಿ ಸೈನ್ಯ ಮಾಡಿದೆ. ಈ ಚಿತ್ರವನ್ನು ಕೇರಳ ಚಿತ್ರೋತ್ಸವದಲ್ಲಿ ಜಯಾ ಬಚ್ಚನ್ ಅವರು ನೋಡಿದರು. ಅವರು ನೀವ್ಯಾಕೇ ಈ ಚಿತ್ರವನ್ನು ಹಿಂದಿಗೆ ಡಬ್ ಮಾಡಬಾರದು ಎಂದು ಹೇಳಿದರು. ಟ್ಯಾಕ್ಸ್ ಫ್ರೀ ಮಾಡಿಸುವ ಭರವಸೆಯನ್ನು ಕೂಡ ನೀಡಿದರು. ಅದ್ರಂತೆ ಹಿಂದಿಗೆ ಡಬ್ ಆಯ್ತು. ಆ ಕಾಲದಲ್ಲಿಯೇ ಕೋಟ್ಯಂತರ ರೂಪಾಯಿ ಹಣವನ್ನು ಕೂಡ ಗಳಿಸಿತು. ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕೂಡ ಕಂಡಿತ್ತು''.
ಅಂತ ಸೆನ್ಸಾರ್ ಆಗಲ್ಲ ಅಂದರು. ಕ್ಲೈಮ್ಯಾಕ್ಸೇ ಇರಲಿಲ್ಲ
''ಸುಧಾ ಪತ್ರಿಕೆಯಲ್ಲಿ ಬರುತ್ತಿದ್ದ ಕಥೆಯನ್ನು ಅಂತ ಎಂದು ಮಾಡಿದಾಗ ಸುಮಾರು ಜನ ಸೆನ್ಸಾರ್ ಆಗಲ್ಲ ಎಂದು ಹೇಳಿದರು. ಅಂಬರೀಶ್ ಒಬ್ಬ ಹೀರೋನಾ ಎಂದೆಲ್ಲ ಮಾತನಾಡಿದರು. ಆದರೂ ಕೂಡ ನಾನು ಮುಂದುವರೆದೆ. ಇನ್ನು ಆ ಚಿತ್ರಕ್ಕೆ ಕ್ಲೈಮ್ಯಾಕ್ಸ್ ಇರಲಿಲ್ಲ. ಕೇವಲ ಸುಶೀಲ್ ಕುಮಾರ್‌ನ ಹೀಗೆ ಕೊಂದರು ಅವರು ಅರೆಸ್ಟ್ ಆದರು ಎನ್ನುವ ವಿಚಾರ ಮಾತ್ರ ಆ ಕಥೆಯಲ್ಲಿತ್ತು. ಆ ಒಂದು ಸಾಲನ್ನು ಕ್ಲೈಮ್ಯಾಕ್ಸ್ ಆಗಿ ಪರಿವರ್ತಿಸುವುದು ಹೇಗೆ ಎನ್ನುವ ಆಲೋಚನೆ ಬಂದು, ಅವರಿಗೆ ಪ್ರೇರಣೆಯಾಗಿದ್ದ ಆ ನೈಜ ಕಥೆಯ ಪೊಲೀಸ್ ಫೈಲ್ಸ್‌ಗಳನ್ನೆಲ್ಲ ಓದಿದೆವು ಅಲ್ಲಿ ಕೆಲ ಪಾಯಿಂಟ್ಸ್ ಸಿಕ್ಕಿದವು ಹೀಗೆ ಆ ನಂತರ ಕ್ಲೈಮ್ಯಾಕ್ಸ್ ಆಯ್ತು. ಎಲ್ಲರ ಲೆಕ್ಕಾಚಾರ ತಲೆ ಕೆಳಗಾಗಿಸಿ ಬ್ಲಾಕ್‌ಬಸ್ಟರ್ ಆಯ್ತು''.
ಬಂಧನ ಮಾಡುವಾಗ ಇದ್ದ ಭಯ
''ಅಲ್ಲಿಯವರೆಗೆ ವಿಷ್ಣುವರ್ಧನ್ ಮಾಸ್ ಹೀರೋ ಅಂತ ಗುರುತಿಸಿಕೊಂಡಿದ್ದರು. ಅವರಲ್ಲಿನ ಕ್ಲಾಸ್ ಆಕ್ಟರ್‌ನ ಯಾರು ನೋಡಿರಲಿಲ್ಲ. ಬಂಧನ ಮಾಡುವಾಗ ಕೂಡ ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವ ಭಯ ವಿಷ್ಣುಗೆ ಇದ್ದೇ ಇತ್ತು.ಆದರೆ ಎಲ್ಲಕ್ಕಿಂತ ಹೆಚ್ಚಾಗಿ ವಿಷ್ಣು ಅದ್ಭುತ ಕಲಾವಿದ. ತುಂಬಾನೇ ಭಾವನಾತ್ಮಕವಾದ ಜೀವಿ. ಅದರಿಂದನೇ ಆ ಚಿತ್ರ ಅಷ್ಟೊಂದು ಎಮೋಷನಲ್ ಆಗಿ ಮೂಡಿ ಬಂತು.

ಇನ್ನು ನೀವು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ ಬಂಧನದ ಸನ್ನಿವೇಶಗಳನ್ನು ಮೂರು ಮೂರು ರೀತಿ ನಾವು ಚಿತ್ರೀಕರಿಸಿದ್ವಿ, ಭಾವನಾತ್ಮಕವಾದ ಸನ್ನಿವೇಶ.. ವಿಷ್ಣು ಮ್ಯಾನರಿಸಂಗೆ ಹೋಲುವಂತಹ ಸನ್ನಿವೇಶ.. ಹೀಗೆ ಮೂರು ರೀತಿ ಚಿತ್ರೀಕರಿಸಿ ಆ ನಂತರ ಬೇಕಾದದ್ದನ್ನು ಬಳಸಿಕೊಂಡ್ವಿ. ಹೀಗೆ ರೆಡಿಯಾದ ಬಂಧನ ಸಿನಿಮಾನ ಡಿಸ್ಟ್ರಿಬ್ಯೂಟ್ ಮಾಡೋಕೆ ಯಾರು ಮುಂದೆ ಬರಲಿಲ್ಲ. ಹೀರೋ ಸತ್ತು ಹೋಗ್ತಾನೆ. ಹೀರೋಯಿನ್ ಸಿಗಲ್ಲ. ಸಿನಿಮಾ ಓಡಲ್ಲ ಅಂತೆಲ್ಲ ಹೇಳಿದರು. ಹೀಗಾಗಿಯೇ ನಾನೇ ಕೊನೆಗೆ ಆ ಚಿತ್ರವನ್ನು ರಿಲೀಸ್ ಮಾಡಿದೆ. ನೂರು ದಿನ ನಡೆದಿದ್ದ ಶೂಟಿಂಗ್‌ಗೆ ಆಗಲೇ 27 ಲಕ್ಷ ಖರ್ಚಾಗಿತ್ತು. ಕೊನೆಗೆ 3 ಲಕ್ಷ ಪಾಲ್ ಎನ್ನುವರ ಬಳಿ ಸಾಲ ಪಡೆದು ನಾನೇ ಬಿಡುಗಡೆ ಮಾಡಿದೆ''.
ಅಪರ್ಣ ಚಿತ್ರಮಂದಿರದಲ್ಲಿ ಹಲ್ಲೆ ಪ್ರಯತ್ನ
''ಹೀಗೆ ಬಿಡುಗಡೆ ಆದ ಬಂಧನ ಚಿತ್ರ ನೋಡಲು ಮರು ದಿನ ಚಿತ್ರಮಂದಿರಕ್ಕೆ ಬಂದರೆ ಅಲ್ಲಿ ಪ್ರೇಕ್ಷಕರು ಗಲಾಟೆ ಮಾಡಲು ಶುರು ಮಾಡಿದ್ದರು. ವಿಷ್ಣುಗೆ ಬಂಧನ ಹಾಡು ನೀಡಿಲ್ಲ ಅನ್ನುವುದು ಅವರ ತಕರಾರಾಗಿತ್ತು. ಅಪರ್ಣಾದಲ್ಲಿ ಕೆಲವರು ಹಲ್ಲೆ ಮಾಡುವ ಪ್ರಯತ್ನ ಮಾಡಿದರು. ಆಗ ನಾನು ಕೂಡ ಮುಂಗೋಪಿ. ಹೀಗಾಗಿ ನಾನು ಕೂಡ ರೇಗಿದೆ. ಇಷ್ಟ ಇದ್ದರೆ ನೋಡಿ ಇಲ್ಲಾ ಅಂದರೆ ಬಿಡಿ ನಾಳೆಯೇ ಪಿಕ್ಚರ್ ತೆಗೆಸಿಬಿಡ್ತೀನಿ ಎಂದೆ. ಫಸ್ಟ್ ಹಾಫ್ ನೋಡಿ ಮಾತನಾಡಬೇಡಿ ಚಿತ್ರದ ಸೆಕೆಂಡ್ ಹಾಫ್ ನೋಡಿ ಎಂದು ಹೇಳಿದೆ. ಕೊನೆಗೆ ಸಿನಿಮಾ ಮುಗಿದ ಮೇಲೆ ಅದೇ ಜನ ಬಂದು ನನ್ನ ಕೊಂಡಾಡೋಕೆ ಶುರು ಮಾಡಿದರು. ಹೀಗೆ ಒಂದೊಂದು ಚಿತ್ರಗಳ ಜೊತೆ ಹಲವಾರು ನೆನಪುಗಳಿವೆ''.
ಸದ್ಯದ ಚಿತ್ರಗಳ ಬಗ್ಗೆ
''ಉಪೇಂದ್ರ ಮತ್ತು ರಮ್ಯಾ ಅಭಿನಯಿಸಿರುವ ಹಳೆಯ ಚಿತ್ರ ರಕ್ತ ಕಾಶ್ಮೀರ ಈಗ ಬಿಡುಗಡೆಗೆ ಸಿದ್ಧವಾಗಿದೆ. ಆ ಚಿತ್ರ ಹೊರತು ಪಡಿಸಿದರೆ ಕಂಬಳದ ಸುತ್ತ ಮುತ್ತ ಒಂದು ಚಿತ್ರ ಮಾಡಿದ್ದೇನೆ. ಕಂಬಳದ ಕಥಾಹಂದರ ಇರುವ ಈ ಚಿತ್ರ ಹಲವಾರು ಮಜಲುಗಳನ್ನು ತೆರೆದಿಡಲಿದೆ. ಕಂಬಳದ ಕುರಿತು ಹಲವಾರು ಪ್ರಶ್ನೆಗಳಿಗೆ ಚಿತ್ರದಲ್ಲಿ ಉತ್ತರ ಸಿಗಲಿದೆ. ಅಲ್ಲಿಯೂ ಕೂಡ ರಾಜಕೀಯ ಇರುತ್ತೆ.. ಸೇಡು ಇರುತ್ತೆ.. ಇದೆಲ್ಲ ನೀವು ನನ್ನ ಕಂಬಳ ಚಿತ್ರದಲ್ಲಿ ನೋಡಬಹುದು''.


Click it and Unblock the Notifications











