For Quick Alerts
  ALLOW NOTIFICATIONS  
  For Daily Alerts

  ತೆಲುಗಿನ 'ಸಿನಿಮಾ ಬಂಡಿ'ಯಲ್ಲಿ ಕನ್ನಡಿಗ ವಿಕಾಸ್ ವಸಿಷ್ಠ ಪಯಣ

  |

  ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿರುವ ತೆಲುಗಿನ 'ಸಿನಿಮಾ ಬಂಡಿ' ಸಿನಿಪ್ರೇಮಿಗಳನ್ನು ಬಹುವಾಗಿ ಸೆಳೆದಿದೆ. ಸಣ್ಣ ಬಜೆಟ್‌ನಲ್ಲಿ ಸುಂದರವಾಗಿ ಹೇಳಲ್ಪಟ್ಟಿರುವ ಕತೆ ಎಲ್ಲ ವರ್ಗದವರಿಗೂ ಮುದ ನೀಡುತ್ತಿದೆ. ನಟಿ ಸಮಂತಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದಾರೆ.

  ಸಣ್ಣ ಸಿನಿಮಾಗಳ ಶಕ್ತಿಯನ್ನು ಮತ್ತೊಮ್ಮೆ ಸಾಬೀತು ಮಾಡಿರುವ 'ಸಿನಿಮಾ ಬಂಡಿ'ಯಲ್ಲಿ ವೀರಬಾಬು ಹೆಸರಿನ ಪಾತ್ರದಲ್ಲಿ ನಟಿಸಿರುವುದು ಕನ್ನಡದ ನಟ ವಿಕಾಸ್ ವಸಿಷ್ಠ ಎಂಬುದು ವಿಶೇಷ.

  ವಿಕಾಸ್ ವಸಿಷ್ಠಗೆ ನ ಟನೆ ಹೊಸದೇನೂ ಅಲ್ಲ. ಕನ್ನಡದಲ್ಲಿ ಈಗಾಗಲೇ ಮೂರು ಸಿನಿಮಾ ಹಾಗೂ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ವಸಿಷ್ಠ ಅಚಾನಕ್ಕಾಗಿ ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಾಚಿಕೊಂಡಿದ್ದಾರೆ. ವಿಕಾಸ್ ತಾವೊಬ್ಬ ಒಳ್ಳೆಯ ನಟ ಎಂಬುದನ್ನು 'ಸಿನಿಮಾ ಬಂಡಿ' ಮೂಲಕ ಸಾರಿ ಹೇಳಿದ್ದಾರೆ. 'ಫಿಲ್ಮೀಬೀಟ್' ಜೊತೆಗೆ ವಿಕಾಸ್ ವಸಿಷ್ಠ ನಡೆಸಿದ ಸಂಭಾಷಣೆ ಇಲ್ಲಿದೆ.

  ನನ್ನದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಹಳ್ಳಿ: ವಿಕಾಸ್

  ನನ್ನದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಹಳ್ಳಿ: ವಿಕಾಸ್

  ''ನನ್ನ ಹುಟ್ಟೂರು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಸಣ್ಣ ಗ್ರಾಮ. ಸಾಫ್ಟ್‌ವೇರ್‌ ಕಂಪೆನಿಯಲ್ಲಿ ವೃತ್ತಿಯಲ್ಲಿದ್ದೆ. ಆದರೆ ಎಲ್ಲರೂ ಸವೆಸಿದ ಹಾದಿಯಲ್ಲಿ ಹೋಗುವುದು ನನಗೆ ಇಷ್ಟವಿರಲಿಲ್ಲ. ಸವಾಲೆನಿಸುವ, ಪ್ರತಿಭೆಯಿಂದ ವೈಯಕ್ತಿಕ ಗುರುತು ಪಡೆದುಕೊಳ್ಳುವ ತುಡಿತ ಕಾಡುತ್ತಿತ್ತು. ನನಗೆ ಎಳವೆಯಿಂದಲೇ ಇದ್ದ ಸಿನಿಮಾ ಮೋಹ ನಟನೆಯತ್ತ ಎಳೆದು ತಂದಿತು. ಒಂಬತ್ತು ವರ್ಷಗಳಾಯಿತು ನಟನೆಯನ್ನು ವೃತ್ತಿಯಾಗಿಸಿಕೊಂಡು. ಕನ್ನಡದ 'ಕರಾಲಿ', 'ರಾಂಧವ', 'ಆರನೇ ಮೈಲಿ' ಸಿನಿಮಾಗಳಲ್ಲಿ ನಟಿಸಿದ್ದೇನೆ. 'ಪಂಚರಂಗಿ ಪೌಂ-ಪೌಂ', 'ಅಮ್ಮ', 'ಅವಳು', 'ಪ್ರೀತಿಯಿಂದ', 'ಚಕ್ರವ್ಯೂಹ', ಈಗ 'ಮನಸಾರೆ' ಎಂಬ ಧಾರಾವಾಹಿ ನಟಿಸುತ್ತಿದ್ದೀನಿ''.

  'ನಾನು, ನಿರ್ದೇಶಕ ಪ್ರವೀಣ್ ಜಾಹೀರಾತೊಂದರಲ್ಲಿ ಕೆಲಸ ಮಾಡಿದ್ದೆವು'

  'ನಾನು, ನಿರ್ದೇಶಕ ಪ್ರವೀಣ್ ಜಾಹೀರಾತೊಂದರಲ್ಲಿ ಕೆಲಸ ಮಾಡಿದ್ದೆವು'

  ''ಸಿನಿಮಾ ಬಂಡಿ' ಚಿತ್ರವನ್ನು ನಿರ್ದೇಶಿಸಿರುವ ಪ್ರವೀಣ್ ಕಂದ್ರೆಗುಲ ಜೊತೆಗೆ 2014 ರಲ್ಲಿ ತಮಿಳಿನ ಒಂದು ಜಾಹೀರಾತಿನಲ್ಲಿ ನಟಿಸಿದ್ದೆ. ಪ್ರವೀಣ್ ಒಮ್ಮೆ ಮೆಸೆಜ್ ಮಾಡಿ 'ತೆಲುಗು ಮಾತನಾಡಬಲ್ಲ ನಟ ಬೇಕಾಗಿದ್ದಾನೆ' ಎಂದರು. ನಾನು ಕೋಲಾರ ಭಾಗದವನಾದ್ದರಿಂದ ತೆಲುಗು ನನಗೆ ಚೆನ್ನಾಗಿಯೇ ಬರುತ್ತಿತ್ತು. ನನಗೆ ತೆಲುಗು ಬರುತ್ತದೆಯೆಂದು ಪ್ರವೀಣ್‌ಗೆ ಹೇಳಿದಾಗ ಮಾತು ಮುಂದುವರೆದು ಪ್ರವೀಣ್ ಹಾಗೂ 'ಸಿನಿಮಾ ಬಂಡಿ' ಕತೆ ಬರೆದಿರುವ ವಸಂತ್ ಭೇಟಿಯಾಗಿ ಕತೆಯನ್ನು ಸ್ಥೂಲವಾಗಿ ಹೇಳಿದರು. ಈ ಮೊದಲೇ ನನ್ನ ಪ್ರತಿಭೆ ಬಗ್ಗೆ ಪ್ರವೀಣ್‌ಗೆ ಅರಿವಿದ್ದರಿಂದ ನಾನು ವೀರಬಾಬು ಪಾತ್ರಕ್ಕೆ ಆಯ್ಕೆಯಾದೆ. ಕತೆ ಕೇಳಿದಾಗ ಸರಳವಾದ ಆದರೆ ಸುಂದರವಾದ ಕತೆ ಎಂಬುದು ಅರಿತುಕೊಂಡೆ. ಅದಾಗಲೇ ಹಲವು ಪ್ರಯತ್ನಗಳನ್ನು ಮಾಡಿದ್ದ ನಾನು ಇದೊಂದು ಹೊಸ ಪ್ರಯತ್ನವೆಂದು ಮುಂದುವರೆದೆ. ಸಿನಿಮಾ ಒಪ್ಪಿಕೊಳ್ಳುವ ಸಮಯದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಜನರ ಪ್ರೀತಿ ಸಿನಿಮಾಕ್ಕೆ ದೊರೆಯುತ್ತದೆ ಎಂದುಕೊಂಡಿರಲಿಲ್ಲ''.

  'ಯಾವುದೇ ಸವಲತ್ತು ಬಯಸದೆ ಕಷ್ಟಪಟ್ಟು ಕೆಲಸ ಮಾಡಿದೆವು'

  'ಯಾವುದೇ ಸವಲತ್ತು ಬಯಸದೆ ಕಷ್ಟಪಟ್ಟು ಕೆಲಸ ಮಾಡಿದೆವು'

  'ಸಿನಿಮಾಕ್ಕೆ ನಿರ್ದೇಶಕ ಪ್ರವೀಣ್ ಬಹಳ ಚೆನ್ನಾಗಿ ತಯಾರಿ ಮಾಡಿಕೊಂಡಿದ್ದರು. ಅವರು ಕತೆಯನ್ನು ನನಗೆ ವಿವರಿಸಿದ ರೀತಿಯೇ ಅದ್ಭುತವಾಗಿತ್ತು. ಸಿನಿಮಾದ ಬಗ್ಗೆ ಅವರಿಗೆ ಸ್ಪಷ್ಟತೆ ಇತ್ತು. 2018 ರಲ್ಲಿ ಚಿತ್ರೀಕರಣ ಪ್ರಾರಂಭವಾದಾಗ ಕತೆಯ ಮೇಲೆ ನಂಬಿಕೆ, ಸಿನಿಮಾ ಮಾಡಬೇಕೆಂಬ ಅದಮ್ಯ ಉತ್ಸಾಹವಷ್ಟೆ ನಮ್ಮಲ್ಲಿತ್ತು. ಬಹುತೇಕ ಹೊಸ ನಟರು, ಹೊಸ ತಂತ್ರಜ್ಞರಿಂದಲೇ ತುಂಬಿತ್ತು ನಮ್ಮ ತಂಡ. ಕಷ್ಟಕರ ಸನ್ನಿವೇಶಗಳನ್ನು ಎದುರಿಸಿ, ಯಾವುದೇ ಸವಲತ್ತುಗಳನ್ನು ಬಯಸದೆ ಉತ್ಸಾವನ್ನಷ್ಟೆ ಇಟ್ಟುಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆವು. ನಾವೊಂದು ಒಳ್ಳೆಯ ಸಿನಿಮಾ ಮಾಡುತ್ತಿದ್ದೇವೆ ಎಂಬುದು ಚಿತ್ರೀಕರಣ ಸಮಯದಲ್ಲಿಯೇ ನಮಗೆ ಮನದಟ್ಟಾಗಿತ್ತು. ನಮ್ಮ ಶ್ರಮಕ್ಕೆ ದೊಡ್ಡ ಫಲವೇ ಈಗ ದೊರೆತಿದೆ''.

  ಪಾತ್ರದ ವ್ಯಕ್ತಿತ್ವವನ್ನು ಅರಿತು ಅದರಂತೆ ನಟಿಸಿದೆ: ವಿಕಾಸ್

  ಪಾತ್ರದ ವ್ಯಕ್ತಿತ್ವವನ್ನು ಅರಿತು ಅದರಂತೆ ನಟಿಸಿದೆ: ವಿಕಾಸ್

  'ಸಿನಿಮಾದ ವೀರಬಾಬು ಪಾತ್ರಕ್ಕಾಗಿ ವಿಶೇಷ ತಾಲೀಮನ್ನೇನು ನಾನು ನಡೆಸಲಿಲ್ಲ. ಆ ಪಾತ್ರಕ್ಕೆ ಒಂದು ವ್ಯಕ್ತಿತ್ವವಿದೆ. ಆ ವ್ಯಕ್ತಿತ್ವವನ್ನು ನಾನು ಆವಾಹಿಸಿಕೊಂಡೆ ಅಷ್ಟೆ. ಪಾತ್ರ ಏನು ಕೇಳಿತ್ತೊ ಅದನ್ನು ಕೊಡುವ ಪೂರ್ಣ ಪ್ರಯತ್ನ ನಾನು ಮಾಡಿದೆ. ನಿರ್ದೇಶಕರೂ ಸಹ ಪಾತ್ರ ಹಾಗೂ ಅದರ ವ್ಯಕ್ತಿತ್ವ ವಿವರಿಸುತ್ತಿದ್ದರೇ ವಿನಃ ನಟನೆ ಹೀಗೆಯೇ ಇರಬೇಕೆಂಬ ನಿಯಮ ಹೇರಲಿಲ್ಲ. ಹಾಗಾಗಿಯೇ ನಟನೆ ಸುಲಭವಾಯಿತು. ಸಿನಿಮಾದಲ್ಲಿ ನನ್ನೊಂದಿಗೆ ನಟಿಸಿರುವ ಫೊಟೊಗ್ರಾಫರ್ ಪಾತ್ರಧಾರಿಗೆ ಇದು ಮೊದಲ ಸಿನಿಮಾ, ಇನ್ನು ಮರಿಡೇಶ್ ಬಾಬು ಹಾಗೂ ಮಂಗ ಪಾತ್ರಧಾರಿಗಳು ಕೆಲವು ಶಾರ್ಟ್‌ ಫಿಲಂಗಳಲ್ಲಿ ನಟಿಸಿದ್ದಾರೆ. ಅವರಿಗೂ ಇದು ಮೊದಲ ಫೀಚರ್ ಫಿಲಂ. ಆದರೆ ಸಿನಿಮಾಕ್ಕಾಗಿ ಎಲ್ಲರೂ ತಮ್ಮ 100% ನೀಡಿದ್ದಾರೆ.

  'ಚಿತ್ರಕತೆ ಬರೆದಾಗ ಸಂಭಾಷಣೆ ಸಾಮಾನ್ಯ ತೆಲುಗು ಭಾಷೆಯಲ್ಲಿತ್ತು'

  'ಚಿತ್ರಕತೆ ಬರೆದಾಗ ಸಂಭಾಷಣೆ ಸಾಮಾನ್ಯ ತೆಲುಗು ಭಾಷೆಯಲ್ಲಿತ್ತು'

  ಸಿನಿಮಾದಲ್ಲಿ ಬಳಸಲಾಗಿರುವ ಭಾಷೆ ಹಲವರನ್ನು ಸೆಳೆದಿದೆ. ಸಿನಿಮಾದ ಚಿತ್ರಕತೆ ಬರೆದಾಗ ಸಾಮಾನ್ಯ ತೆಲುಗಿನಲ್ಲಿಯೇ ಸಂಭಾಷಣೆಗಳು ಇದ್ದುವು. ಆದರೆ ನಮಗೆ ಗ್ರಾಮ್ಯ ತೆಲುಗಿನ ಅವಶ್ಯಕತೆ ಇತ್ತು. ಹಲವು ಬಗೆಯ ತೆಲುಗು ಆಡು ಭಾಷೆಗಳನ್ನು ಈಗಾಗಲೇ ಸಿನಿಮಾಗಳಲ್ಲಿ ಬಳಸಿಯಾಗಿಬಿಟ್ಟಿದೆ. ಆದರೆ ಕೋಲಾರ ಭಾಗದ ಭಾಷೆಯ ಬಳಕೆ ಅಷ್ಟಾಗಿ ಇರಲಿಲ್ಲ. ನಾನು ಪ್ರವೀಣ್ ಮುಂದೆ ಕೋಲಾರದ ಕನ್ನಡ ಮಿಶ್ರಿತ ತೆಲುಗು ಮಾತನಾಡಿದೆ ಅದು ಅವರಿಗೂ ಇಷ್ಟವಾಯಿತು. ಸಿನಿಮಾದ ಚಿತ್ರೀಕರಣ ಸಹ ಕೋಲಾರ ಗಡಿಯಲ್ಲಿಯೇ ಆಗಿರುವ ಕಾರಣ ಕೋಲಾರ ಭಾಗದ ತೆಲುಗನ್ನೇ ಸಿನಿಮಾದಲ್ಲಿ ಅಳವಡಿಸಿಕೊಂಡೆವು''.

  ಹಲವು ರಾಜ್ಯಗಳಿಂದ ನಮಗೆ ಸಂದೇಶಗಳು ಬರುತ್ತಿವೆ: ವಿಕಾಸ್

  ಹಲವು ರಾಜ್ಯಗಳಿಂದ ನಮಗೆ ಸಂದೇಶಗಳು ಬರುತ್ತಿವೆ: ವಿಕಾಸ್

  ''ಸಿನಿಮಾದ ಯಶಸ್ಸು ನಿಜವಾಗಿಯೂ ಬಹಳ ಖುಷಿ ತಂದಿದೆ. ಇಷ್ಟು ದೊಡ್ಡ ಮಟ್ಟದ ಯಶಸ್ಸು ದೊರಕುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಹಲವಾರು ಸಿನಿಮಾ ತಾರೆಯರು ನಮ್ಮ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ತೆಲುಗು ಮಾತ್ರವಲ್ಲದೆ, ಕರ್ನಾಟಕ, ತಮಿಳುನಾಡು, ಮುಂಬೈನಲ್ಲಿಯೂ ಸಿನಿಮಾವನ್ನು ಮೆಚ್ಚಿ ನಮಗೆ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಪಂಜಾಬ್‌ನಿಂದಲೂ ನಮಗೆ ಸಂದೇಶಗಳು ಬಂದಿವೆ. ಕಲೆಗೆ ಗಡಿಗಳಿಲ್ಲ ಎಂಬುದು ನಿಜಕ್ಕೂ ಸತ್ಯ. ಈ ಖುಷಿಯನ್ನು ನಾವು ನಿಜಕ್ಕೂ ಎಂಜಾಯ್ ಮಾಡುತ್ತಿದ್ದೇವೆ. ನನ್ನ ಪಾಲಿಗೆ ಇದೊಂದು ಅಪರೂಪದ ಕ್ಷಣ''.

  ಕೆಲವಾರು ಅವಕಾಶ ಅರಸಿ ಬಂದಿವೆ: ವಿಕಾಸ್

  ಕೆಲವಾರು ಅವಕಾಶ ಅರಸಿ ಬಂದಿವೆ: ವಿಕಾಸ್

  ''ಸಿನಿಮಾ ಬಂಡಿ' ನಂತರ ಜವಾಬ್ದಾರಿ ಹೆಚ್ಚಾದಂತೆ ಅನಿಸುತ್ತಿದೆ. ಸಿನಿಮಾದ ನಂತರ ಕೆಲವು ಅವಕಾಶಗಳು ಬಂದಿವೆ. ಕೆಲವರೊಟ್ಟಿಗೆ ಮಾತುಕತೆ ಸಹ ಆಗಿದೆ. ಆದರೆ ಲಾಕ್‌ಡೌನ್ ಇರುವ ಕಾರಣ ಯಾವುದೂ ಇನ್ನೂ ಅಂತಿಮಗೊಂಡಿಲ್ಲ. ಬಂದವುಗಳಲ್ಲಿ ಬಹುತೇಕ ತೆಲುಗು ಸಿನಿಮಾದ ಅವಕಾಶಗಳೇ ಆಗಿವೆ. ಕನ್ನಡದಿಂದಲೂ ಅವಕಾಶ ಬರುವ ನಿರೀಕ್ಷೆ ಇದೆ. ಪ್ರಸ್ತುತ 'ಸಿನಿಮಾ ಬಂಡಿ'ಯ ಯಶಸ್ಸಿನ ಖುಷಿಯ ಕ್ಷಣವನ್ನು ಅನುಭವಿಸುತ್ತಿದ್ದೇನೆ''.

  English summary
  Telugu movie 'Cinema Bandi' hero Vikas Vasishta's interview. He acted in three Kannada movie and some Kannada serials.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X