ಕಿರುತೆರೆಯ 'ಕ್ರೂರ ಅತ್ತೆ' ಚಂದ್ರಕಲಾ ಮೋಹನ್ ಚಪ್ಪಲಿಯಿಂದ ಹೊಡೆಸಿಕೊಳ್ಳಲು ಮುಂದಾಗಿದ್ದರೇ? ಏನಿದು ಕಥೆ?
ಪರದೆ ಮೇಲೆ ತನ್ನ ಕುತಂತ್ರದಿಂದಲೇ ಮನೆಮಾತಾಗಿದ್ದ ಅತ್ತೆಯೊಬ್ಬಳು, ಅಸಲಿ ಬದುಕಿನಲ್ಲಿ ತನಗೆ ತಾನೇ ಚಪ್ಪಲಿಯಿಂದ ಹೊಡೆಸಿಕೊಳ್ಳುವ ಸನ್ನಿವೇಶ ಸೃಷ್ಟಿಸಿದ್ದು ಅಂದ್ರೆ ನೀವು ನಂಬಲೇಬೇಕು. ಹೌದು, ಇದು ಮಂಡ್ಯದ ಮಣ್ಣಿನ ಹೆಮ್ಮೆ ಚಂದ್ರಕಲಾ ಮೋಹನ್ ಅವರ ಬಣ್ಣದ ಬದುಕಿನ ಅಚ್ಚರಿಯ ಸತ್ಯ.
ಸುಮಾರು 57 ಧಾರಾವಾಹಿ ಹಾಗೂ 45 ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈ ರಂಗಭೂಮಿ ಪ್ರತಿಭೆ, 'ಕೃಷ್ಣ ರುಕ್ಮಿಣಿ'ಯ ತಾಯವ್ವನ ಪಾತ್ರಕ್ಕೆ ಸಿಗುತ್ತಿದ್ದ ಜನರ ಆಕ್ರೋಶ ತಣ್ಣಗಾಗಿಸಲು ಈ ಸಾಹಸ ಮಾಡಿದ್ದರು. ವಿಶೇಷವೆಂದರೆ, ಆ ಸೀನ್ ಬಂದ 15 ದಿನಕ್ಕೆ ಅವರಿಗೆ ರಾಜ್ಯ ಪ್ರಶಸ್ತಿ ಒಲಿದು ಬಂದಿದ್ದು ಇತಿಹಾಸ. ಬಿಗ್ ಬಾಸ್ ಮೂಲಕ ಜನರ ಮನೆಮನ ಗೆದ್ದಿದ್ದ ಇವರು, ಇದೀಗ 'ಸ್ನೇಹದ ಕಡಲಲ್ಲಿ' ಮಾಡರ್ನ್ ಅಜ್ಜಿಯಾಗಿ ಅಬ್ಬರಿಸುತ್ತಿದ್ದಾರೆ. ನಟಿ ಚಂದ್ರಕಲಾ ಮೋಹನ್ ಅವರ ವೃತ್ತಿಜೀವನದ ಇಂತಹ ಮತ್ತಷ್ಟು ರೋಚಕ ಸಂಗತಿಗಳನ್ನು ತಿಳಿಯಲು ಫಿಲ್ಮಿಬೀಟ್ ಕನ್ನಡದ ಈ ವಿಶೇಷ ಸಂದರ್ಶನವನ್ನು ಪೂರ್ತಿಯಾಗಿ ಓದಿ.

ನೀವು ಎಲ್ಲಿಯವರು? ರಂಗಭೂಮಿಯಿಂದ ಕಿರುತೆರೆಗೆ ಬಂದಿದ್ದೇಗೆ?
ಚಂದ್ರಕಲಾ ಮೋಹನ್: ನನ್ನ ಮೂಲ ಊರು ಮಂಡ್ಯ. ನಾನು 10 ವರ್ಷದವಳಿದ್ದಾಗಿನಿಂದಲೇ ರಂಗಭೂಮಿಯಲ್ಲಿ ಸಕ್ರಿಯಳಾಗಿದ್ದೆ. 'ಕೃಷ್ಣ ರುಕ್ಮಿಣಿ' ಧಾರಾವಾಹಿಯ 'ತಾಯವ್ವ'ನ ಪಾತ್ರ ನನಗೆ ಸಿಕ್ಕ ದೊಡ್ಡ ಅವಕಾಶ. ಆ ಪಾತ್ರ ನನ್ನ ವೃತ್ತಿಜೀವನಕ್ಕೆ ಒಂದು ದೊಡ್ಡ ತಿರುವು ನೀಡಿತು.
ಇದೂವರೆಗೆ ನೀವು ಒಟ್ಟು ಎಷ್ಟು ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದೀರಿ?
ಚಂದ್ರಕಲಾ ಮೋಹನ್: ನಾನು ಇದುವರೆಗೆ ಸುಮಾರು 56 ರಿಂದ 57 ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದೇನೆ. ಹಾಗೆಯೇ ಬೆಳ್ಳಿತೆರೆಯಲ್ಲಿ ಸುಮಾರು 45 ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ.
ನಿಮ್ಮ ಆ ನೆಗೆಟಿವ್ ರೋಲ್‌ಗಳಿಗೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು?
ಚಂದ್ರಕಲಾ ಮೋಹನ್: ತಾಯವ್ವನ ಪಾತ್ರವನ್ನು ಜನರು ಎಷ್ಟು ದ್ವೇಷಿಸುತ್ತಿದ್ದರು ಎಂದರೆ, ಹೊರಗಡೆ ಹೋದಾಗ ಜನರು ನನ್ನನ್ನು ಬೈಯುತ್ತಿದ್ದರು. ಒಮ್ಮೆ ಪಾತ್ರದ ಕುಟಿಲತೆ ಹೆಚ್ಚಾದಾಗ, ಜನರಿಗೆ ಸಮಾಧಾನವಾಗಲು ನನ್ನ ಪಾತ್ರಕ್ಕೆ ಚಪ್ಪಲಿಯಿಂದ ಹೊಡೆಯುವ ಸನ್ನಿವೇಶ ಇಡಲು ನಾನೇ ನಿರ್ದೇಶಕರಲ್ಲಿ ಕೇಳಿಕೊಂಡಿದ್ದೆ. ಆ ಎಪಿಸೋಡ್ ಪ್ರಸಾರವಾದ 15 ದಿನಕ್ಕೆ ನನಗೆ ರಾಜ್ಯ ಪ್ರಶಸ್ತಿ ಸಿಕ್ಕಿತು.

7 ಗಂಟೆಯ ಟೈಮ್ ಸ್ಲಾಟ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಬಗ್ಗೆ ಏನು ಹೇಳ್ತೀರಿ?
ಚಂದ್ರಕಲಾ ಮೋಹನ್: ಹೌದು, ಇದು ನನಗೆ ಸಿಕ್ಕ ದೊಡ್ಡ ಯಶಸ್ಸು. 7 ಗಂಟೆಯ ಸ್ಲಾಟ್ನಲ್ಲಿ ಸತತವಾಗಿ ಮೂರು ಬೇರೆ ಬೇರೆ ವಾಹಿನಿಗಳಲ್ಲಿ (ಸುವರ್ಣದಲ್ಲಿ 'ಕೃಷ್ಣ ರುಕ್ಮಿಣಿ', ಈ ಟಿವಿಯಲ್ಲಿ 'ಪುಟ್ಟಗೌರಿ ಮದುವೆ', ಉದಯ ಟಿವಿಯಲ್ಲಿ 'ಮಧುಬಾಲ') ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿದ ತೃಪ್ತಿ ನನಗಿದೆ.
'ಸ್ನೇಹದ ಕಡಲಲ್ಲಿ' ಸೀರಿಯಲ್‌ನ 'ಜಗದಾತ್ರಿ' ಪಾತ್ರದ ಬಗ್ಗೆ ಏನಂತೀರಾ?
ಚಂದ್ರಕಲಾ ಮೋಹನ್: ಈ ಹಿಂದೆ ಮಾಡಿದ ಅಜ್ಜಿ ಪಾತ್ರಗಳಿಗಿಂತ ಜಗದಾತ್ರಿ ಪಾತ್ರ ತುಂಬಾ ಡಿಫರೆಂಟ್. ಇದೊಂದು ಮಾಡರ್ನ್ ಅಜ್ಜಿಯ ಪಾತ್ರ. ಅನ್ಯಾಯಕ್ಕೊಳಗಾದ ಹೆಣ್ಣಿನ ಪರವಾಗಿ ನಿಂತು, ಅವಳಿಗೆ ಬೆಂಬಲ ನೀಡುವ ಶಕ್ತಿಯುತ ಮತ್ತು ಪ್ರಭಾವಶಾಲಿ ಪಾತ್ರವಿದು.
ಅತಿ ಹೆಚ್ಚು ಸಂಚಿಕೆ ಕಂಡ 'ಪುಟ್ಟಗೌರಿ ಮದುವೆ'ಯಲ್ಲಿ ನಟಿಸಿದ ಅನುಭವ ಹೇಗಿತ್ತು?
ಚಂದ್ರಕಲಾ ಮೋಹನ್: ಅದು ಅದ್ಭುತ ಅನುಭವ. ನನ್ನ ವಯಸ್ಸಿಗೆ ಮೀರಿದ ಪಾತ್ರ ಮಾಡುವುದು ಸವಾಲಾಗಿತ್ತು. ಧ್ವನಿಯನ್ನು ಬದಲಾಯಿಸಿಕೊಳ್ಳುವುದು ಮತ್ತು ಪುಟಗಟ್ಟಲೆ ಇರುವ ಹಳೆಗಾಲದ ಕನ್ನಡದ ಸಂಭಾಷಣೆಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟವಿತ್ತು. ಆದರೆ, ಆ ಪಾತ್ರಕ್ಕೆ ಸಿಕ್ಕ ಗೌರವ ಮತ್ತು ಪ್ರೀತಿ ಅಪಾರ.
ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ವೃತ್ತಿ ಬದುಕು ಬದಲಾಯಿತೇ?
ಚಂದ್ರಕಲಾ ಮೋಹನ್: ಬಿಗ್ ಬಾಸ್ ಒಂದು ದೊಡ್ಡ ವೇದಿಕೆ. ಅಲ್ಲಿಂದ ಬಂದ ಮೇಲೆ ಜನರ ಪ್ರೀತಿ ಇನ್ನೂ ಹೆಚ್ಚಾಗಿದೆ. ಜನರು ನನ್ನನ್ನು ಭೇಟಿಯಾದಾಗ "ನೀವು ಇನ್ನೂ ಹೆಚ್ಚು ದಿನ ಬಿಗ್ ಬಾಸ್ ಮನೆಯಲ್ಲಿ ಇರಬೇಕಿತ್ತು" ಎಂದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.
ಕಿರುತೆರೆ ಜೊತೆಗೆ ಸಿನಿಮಾಗಳಲ್ಲೂ ನಟಿಸಿದ್ದೀರಿ ಅನುಭವ ಹೇಳಿ
ಚಂದ್ರಕಲಾ ಮೋಹನ್: ಸಿನಿಮಾ ಒಂದು ಇತಿಹಾಸವಾಗಿ ಉಳಿಯುತ್ತದೆ. ಆದರೆ ಕಿರುತೆರೆ ನಮಗೆ ಪ್ರತಿದಿನ ಅನ್ನ ನೀಡುವ ಮತ್ತು ಜನರ ಮನೆ-ಮನಗಳನ್ನು ತಲುಪುವ ಮಾಧ್ಯಮ. ಕಿರುತೆರೆಯಿಂದಲೇ ನಾನು ಬದುಕನ್ನು ಕಟ್ಟಿಕೊಂಡಿದ್ದು.

ಸೌಮ್ಯ ಅಜ್ಜಿ ಮತ್ತು ಕ್ರೂರ ವಿಲನ್-ಈ ಎರಡರಲ್ಲಿ ನಿಮಗೆ ಯಾವುದು ಇಷ್ಟ?
ಚಂದ್ರಕಲಾ ಮೋಹನ್: ಒಬ್ಬ ಕಲಾವಿದೆಯಾಗಿ ನನಗೆ ಎರಡೂ ತರಹದ ಪಾತ್ರಗಳು ಇಷ್ಟ. ಪ್ರೇಕ್ಷಕರಿಗೆ ಬೋರ್ ಆಗಬಾರದು ಎಂಬ ಕಾರಣಕ್ಕೆ ನಾನು ಯಾವಾಗಲೂ ವಿಭಿನ್ನ ಪಾತ್ರಗಳನ್ನು ಆರಿಸಿಕೊಳ್ಳುತ್ತೇನೆ. ನನ್ನ ಲುಕ್ ಮತ್ತು ಬಾಡಿ ಲ್ಯಾಂಗ್ವೇಜ್ ಬದಲಾಯಿಸುತ್ತಿರುತ್ತೇನೆ.
ನಿಮ್ಮ ಈ ಸಾಧನೆಯ ಹಿಂದೆ ಮನೆಯವರ ಪ್ರೋತ್ಸಾಹ ಎಷ್ಟಿದೆ?
ಚಂದ್ರಕಲಾ ಮೋಹನ್: ಮನೆಯವರ ಪ್ರೋತ್ಸಾಹವಿಲ್ಲದೆ ನಾನು ಏನೂ ಸಾಧಿಸಲು ಸಾಧ್ಯವಿರಲಿಲ್ಲ. ನನ್ನ ಪತಿ, ಮಗ ಮತ್ತು ಸೊಸೆ ಎಲ್ಲರೂ ಅಭಿನಯ ವೃತ್ತಿಯಲ್ಲೇ ಇರುವುದರಿಂದ ನನಗೆ ಕೆಲಸ ಮಾಡಲು ತುಂಬಾ ಅನುಕೂಲವಾಗಿದೆ ಮತ್ತು ಅವರ ಬೆಂಬಲ ದೊಡ್ಡದಿದೆ.
ಸದ್ಯ ಸೀರಿಯಲ್‌ಗಳಲ್ಲಿ ಬ್ಯುಸಿ ಇದ್ದೀರಿ. ಮುಂದಿನ ಪ್ಲಾನ್ ಏನು?
ಚಂದ್ರಕಲಾ ಮೋಹನ್: ಖಂಡಿತಾ ಇದೆ. ಈಗಾಗಲೇ 45 ಸಿನಿಮಾಗಳಲ್ಲಿ ನಟಿಸಿದ್ದರೂ, ಒಂದು ದೊಡ್ಡ ಪ್ರಭಾವಶಾಲಿ ಪಾತ್ರಕ್ಕಾಗಿ ಕಾಯುತ್ತಿದ್ದೇನೆ. ಸದ್ಯಕ್ಕೆ 'ಫಸ್ಟ್ ಲವ್ ಗುರು' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
'ಸ್ನೇಹದ ಕಡಲಲ್ಲಿ' ಧಾರಾವಾಹಿ ಬಗ್ಗೆ ಏನು ಹೇಳ್ತೀರಾ?
ಚಂದ್ರಕಲಾ ಮೋಹನ್: ಧಾರಾವಾಹಿಯಲ್ಲಿರುವ ಒಳ್ಳೆಯ ವಿಷಯಗಳನ್ನು ಮಾತ್ರ ಜೀವನಕ್ಕೆ ಅಳವಡಿಸಿಕೊಳ್ಳಿ, ಕೆಟ್ಟದ್ದನ್ನು ಅಲ್ಲೇ ಬಿಟ್ಟುಬಿಡಿ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಕೇಳಿಕೊಳ್ಳುತ್ತೇನೆ.


Click it and Unblock the Notifications











