twitter
    For Quick Alerts
    ALLOW NOTIFICATIONS  
    For Daily Alerts

    ವಿ ಮನೋಹರ್ ವಿವರಿಸಿದ ಹಂಸಲೇಖ ಜೊತೆಗಿನ ಅನುಬಂಧ

    |

    "ಕಾಫಿ, ಖಾರಾಬಾತ್ ಜತೆಗೆ ಗಿಟಾರ್ ಕೈಯ್ಯಲ್ಲಿದ್ದರೆ ಕಣ್ಣಿಗೆ ಕಾಣುವುದೆಲ್ಲವೂ ಕಾವ್ಯವೇ..'' ಈ ವರ್ಣನೆ ನಡೆದಿದ್ದು ನಾದಬ್ರಹ್ಮ ಹಂಸಲೇಖಾ ಅವರ ಬಗ್ಗೆ. ಬರೆದಿದ್ದು ಅವರ ಶಿಷ್ಯವೃಂದದಲ್ಲಿರುವ ಒಬ್ಬ ಹುಡುಗ. ಆ ಕವನ ಅಷ್ಟಕ್ಕೇ ಮುಗಿಯುವುದಿಲ್ಲ. ಅವರ ವಿಶೇಷತೆಗಳ ಪಟ್ಟಿ ಸೇರಿಸಿ ದೊಡ್ಡದೊಂದು ಕವನವನ್ನೇ ಬರೆದಿದ್ದಾನೆ ಹುಡುಗ.

    ಅದು ಇಂದು 68ನೇ ವರ್ಷಕ್ಕೆ ಕಾಲಿಡುತ್ತಿರುವ ಹಂಸಲೇಖಾ ಅವರಿಗೆ ಆತ ನೀಡಲಿರುವ ಕೊಡುಗೆ. ಅವಕಾಶ ಸಿಕ್ಕರೆ ಕನ್ನಡದ ಪ್ರತಿಯೊಬ್ಬ ಸಿನಿ ಪ್ರಿಯರು ಕೂಡ ಹಂಸಲೇಖಾ ಮುಂದೆ ನಿಂತು ಉಡುಗೊರೆಗಳ ಸುರಿಮಳೆ ನೀಡಲು ತಯಾರಿದ್ದಾರೆ. ಆದರೆ, ಅವೆಲ್ಲವನ್ನು ಪಡೆದಿಟ್ಟುಕೊಳ್ಳುವ ಮನೋಭಾವ ಅವರದ್ದಲ್ಲ. ಯಾಕೆಂದರೆ, ಹಂಸಲೇಖಾ ಕನ್ನಡದ ಮಣ್ಣಿನಿಂದ ಪಡೆದಿರುವುದಕ್ಕಿಂತ ಹೆಚ್ಚು ನೀಡಿದ್ದಾರೆ ಎಂದು ಧೈರ್ಯದಿಂದ ಹೇಳಬಹುದು. ಅದಕ್ಕೆ ತಲೆಮಾರು ದಾಟಿ ಮುಂದುವರಿದಿರುವ ಅವರ ಹಾಡುಗಳು ಮಾತ್ರವಲ್ಲ, ಶಿಷ್ಯವೃಂದವೂ ಉದಾಹರಣೆ.

     ಹಂಸಲೇಖ ಹುಟ್ಟುಹಬ್ಬಕ್ಕೆ ದೊಡ್ಡ ಸರ್ಪ್ರೈಸ್ ನೀಡಿದ ಸರಿಗಮಪ ತಂಡ ಹಂಸಲೇಖ ಹುಟ್ಟುಹಬ್ಬಕ್ಕೆ ದೊಡ್ಡ ಸರ್ಪ್ರೈಸ್ ನೀಡಿದ ಸರಿಗಮಪ ತಂಡ

    'ಜನುಮದ ಜೋಡಿ'ಯಂಥ ಅದ್ಭುತ ಯಶಸ್ಸಿನ ಹಾಡುಗಳನ್ನು ನೀಡಿರುವ ಸಂಗೀತ ನಿರ್ದೇಶಕ ವಿ ಮನೋಹರ್ ಅವರು ಹಂಸಲೇಖಾ ಅವರ ಶಿಷ್ಯ ಎನ್ನುವುದು ಸಿನಿಪ್ರಿಯರಿಗೆಲ್ಲ ತಿಳಿದಿರುವ ವಿಚಾರ. ಆದರೆ, ಅವರು ತಮ್ಮನ್ನು ಶಿಷ್ಯನಾಗಿ ಸ್ವೀಕರಿಸಿದ ದಿನ ಮತ್ತು ಮುಂದಿನ ಒಂದಷ್ಟು ವಿಚಾರಗಳನ್ನು ಎಕ್ಸ್ ಕ್ಲೂಸಿವ್ ಆಗಿ ಫಿಲ್ಮಿಬೀಟ್ ಜತೆಗೆ ಹಂಚಿಕೊಂಡಿದ್ದು ಹೀಗೆ.

    ಸಂಗೀತ ಗುರುಗಳ ಪ್ರಥಮ ಭೇಟಿ

    ಸಂಗೀತ ಗುರುಗಳ ಪ್ರಥಮ ಭೇಟಿ

    "ಅದು ‘ಅವಳೇ ನನ್ನ ಹೆಂಡ್ತಿ' ಚಿತ್ರ ಆರಂಭವಾದ ದಿನಗಳು. ನಾನು, ಉಪೇಂದ್ರ ಮೊದಲಾದವರೆಲ್ಲ ಆಗ ನಮ್ಮ ಗುರುಗಳಾದ ಕಾಶೀನಾಥ್ ಅವರ ಮನೆಯಲ್ಲೇ ವಾಸವಾಗಿದ್ದೆವು. ಆ ಚಿತ್ರಕ್ಕೆ ಚಿತ್ರಕತೆ, ಸಂಭಾಷಣೆ, ಹಾಡುಗಳು ಎಲ್ಲವನ್ನು ಅವರೇ ನಿಭಾಯಿಸಿದ್ದರು. ಉಮೇಶ್ ಪ್ರಭಾಕರ್ ಅವರ ಕತೆಯಲ್ಲಿ ಹಂಸಲೇಖ ಅವರು ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದು, ಅದರ ನರೇಶನ್ ಗೆ ಕಾಶೀನಾಥ್ ಅವರ ಮನೆಗೆ ಬರುತ್ತಿದದರು. ಹಾಗೆ ನನ್ನ ಸಂಗೀತ ಗುರುಗಳ ಪ್ರಥಮ ಭೇಟಿ ಅಲ್ಲೇ ಆಯಿತು. ಆದರೆ, ನಮ್ಮ ಸಂಬಂಧ ಶುರುವಾಗಿದ್ದು `ಅನಂತನ ಅವಾಂತರ' ಚಿತ್ರದ ವೇಳೆ. ಅದರ ಮ್ಯೂಸಿಕ್ ಕಂಪೋಸಿಷನ್ ಟೈಮಲ್ಲಿ ಕಾಶೀನಾಥ್ ಸರ್ ನನ್ನನ್ನು ಕೂಡ ಕರೆಸಿಕೊಂಡಿದ್ದರು.

    ಅಮ್ಮನೇ ಮಹಾಗುರು ಎನ್ನುತ್ತಾರೆ ನಾದಬ್ರಹ್ಮ ಹಂಸಲೇಖ ಅಮ್ಮನೇ ಮಹಾಗುರು ಎನ್ನುತ್ತಾರೆ ನಾದಬ್ರಹ್ಮ ಹಂಸಲೇಖ

    ಹಂಸಲೇಖ ಸರ್ ಜೊತೆಗೆ ಕೆಲಸ ಶುರು ಆಗಿದ್ದು

    ಹಂಸಲೇಖ ಸರ್ ಜೊತೆಗೆ ಕೆಲಸ ಶುರು ಆಗಿದ್ದು

    ಹಂಸಲೇಖ ಅವರು ನನ್ನ ಬಗ್ಗೆ ವಿಚಾರಿಸಿದಾಗ ‘ಹೋದೆಯ ದೂರ..' ಸೇರಿದಂತೆ ಒಂದಷ್ಟು ಹಾಡುಗಳನ್ನು ಬರೆದಿರುವ ಬಗ್ಗೆ ಹೇಳಿದೆ. ಸರಿ ಎಂದು ಹೇಳಿ ನನಗೆ, ಉಪೇಂದ್ರ ಅವರಿಗೆ ಒಂದೆರಡು ಟ್ಯೂನ್ ಕೊಟ್ಟು ಬರೆಯಲು ಹೇಳಿದರು. ಹಾಗೆ ಅವರಿಗಾಗಿ ನಾನು ಬರೆದ ಮೊದಲ ಹಾಡೇ "ಚಳಿಗಾಲವು ಬಂತು ನೋಡು ಪ್ರಿಯಕರ..'' ಎನ್ನುವುದಾಗಿತ್ತು. ಅದೇ ವೇಳೆ ಉಪೇಂದ್ರ ಅವ್ರು "ಕಮಾನ್ ಕಾಮಾನ್ ಕಾಮಣ್ಣ.'' ಎನ್ನುವ ಗೀತೆ ಬರೆದಿದ್ದರು. ಬಳಿಕ "ನನಗೆ ಸ್ಟುಡಿಯೋಗಳಲ್ಲಿ ತುಂಬ ರೆಕಾರ್ಡಿಂಗ್ಸ್ ಇರುತ್ತದೆ. ಹಾಗಾಗಿ ಸ್ಟುಡಿಯೋಗೇನೇ ಬಂದು ಬಿಡು, ಹಾಡು ಬರೆಯೋಕೆ ಕೊಡ್ತೀನಿ'' ಎಂದರು. ಕಾಶಿ ಸರ್ ಕೂಡ "ಹೋಗಿ ಮನೋಹರ್'' ಎಂದು ಬೆಂಬಲಿಸಿದಾಗ ನಾನು ಹೊರಟೆ. ಹಾಗೆ ಆ ದಿನಗಳಲ್ಲಿ ಕಾಶಿ ಸರ್ ಮನೆಯಲ್ಲಿ ಹಾಲ್ಟ್ ಆಗಿದ್ದುಕೊಂಡು ಹಂಸಲೇಖ ಅವರ ಸ್ಟುಡಿಯೋದಲ್ಲಿ ಕೆಲಸ ಶುರು ಮಾಡಿದೆ.

     ಕೆಲಸ ಇರದಿದ್ದರೂ ನಿತ್ಯ ನೂರು ರೂಪಾಯಿ ಕೊಡುತ್ತಿದ್ದರು..!

    ಕೆಲಸ ಇರದಿದ್ದರೂ ನಿತ್ಯ ನೂರು ರೂಪಾಯಿ ಕೊಡುತ್ತಿದ್ದರು..!

    ಅವರ ಆರ್ಕೆಸ್ಟ್ರಾ ನೋಡುವುದು ಅಂದರೆ ನನಗೆ ಬಹಳ ಖುಷಿ. ಆದರೆ ಅವರು ನೋಡಿ ಕಲಿಯಲು ಪ್ರೋತ್ಸಾಹಿಸುತ್ತಿದ್ದರೇ ಹೊರತು ನನ್ನಿಂದ ಕೆಲಸ ತೆಗೆಸುತ್ತಿರಲಿಲ್ಲ. ಬೆಳಿಗ್ಗೆ ಬಂದು ಸ್ಯಾಕ್ಸ್ ರಾಜಾ ಅವರಿಗೆ ನೊಟೇಶನ್ ಕೊಡೋರು. ಬಳಿಕ ಸಂಗೀತಜ್ಞರ ಜತೆಗೆ ಹಾಡಿನ ರಿಹರ್ಸಲ್ ನಡೆಯುತ್ತಿತ್ತು. ಆದರೆ ಏನೂ ಕೆಲಸ ಇರದಿದ್ದರೂ ನನಗೆ ನಿತ್ಯ ಮಧ್ಯಾಹ್ನ ಪ್ರೊಡಕ್ಷನ್ ಕಡೆಯಿಂದ ಊಟ ಸಿಗುತ್ತಿತ್ತು. ನಾನು ಆ ಹೊತ್ತಿಗೆ ತಪ್ಪಿಸಿಕೊಳ್ಳಲು ನೋಡುತ್ತಿದ್ದೆ. ಅದಕ್ಕೆ ಅವರು "ಏಯ್ ಹಾಗೆಲ್ಲ ಮಾಡಬೇಡ.. ನೀನು ನನ್ನ ಶಿಷ್ಯ, ಇದು ನನ್ನ ಪ್ರೊಡಕ್ಷನ್. ನೀನು ಇಲ್ಲೇ ಊಟ ಮಾಡಬೇಕು'' ಎಂದು ಧೈರ್ಯ ತುಂಬಿದ್ದನ್ನು ಮರೆಯಲಾರೆ. ಮಾತ್ರವಲ್ಲ ರಾತ್ರಿ ಮನೆಗೆ ಹೊರಡಬೇಕಾದರೆ "ಈ ಹೊತ್ತಿಗೆ ಬಸ್ಸೆಲ್ಲ ಸಿಗಲ್ಲ ನಿನಗೆ, ಆಟೋದಲ್ಲೇ ಹೋಗು" ಎಂದು ಪ್ರತಿ ದಿನ ದುಡ್ಡು ಕೊಟ್ಟು ಕಳಿಸಿಕೊಡುತ್ತಿದ್ದರು.

     ನನ್ನನ್ನು ಗೀತರಚನೆಕಾರನಾಗಿಸುವಲ್ಲಿ ಅವರ ಪಾತ್ರ ಹಿರಿದು

    ನನ್ನನ್ನು ಗೀತರಚನೆಕಾರನಾಗಿಸುವಲ್ಲಿ ಅವರ ಪಾತ್ರ ಹಿರಿದು

    ಹಾಗೆ ಎಸ್ ಪಿ ಸಾಂಗ್ಲಿಯಾನದಲ್ಲಿ "ರಾಜಾ ನನ್ನ ರಾಜಾ.. ಚೆಲುವ ಚೆನ್ನಿಗ..'' ಹಾಡು ನಾನೇ ಬರೆದಿದ್ದೆ. ನಾನು ಬರೆದೆ ಎನ್ನುವುದಕ್ಕಿಂತ ನನ್ನ ಹಾಡು ಬಳಸಿಕೊಂಡರು ಎಂದೇ ಹೇಳಬಹುದು. ಯಾಕೆಂದರೆ ಅವರಿಗೆ ಅಷ್ಟು ಇಷ್ಟವಾದರೆ ಮಾತ್ರ ಬಳಸಿಕೊಳ್ಳುತ್ತಿದ್ದರು. ಉದಾಹರಣೆಗೆ ‘ಅಂಜದ ಗಂಡು' ಚಿತ್ರದಲ್ಲಿ ಆಕಾರದಲ್ಲಿ ಗುಲಾಬಿ ರಂಗಿದೆ ಎನ್ನುವ ಹಾಡು ಕೇಳಿರಬಹುದು. ಆ ಹಾಡು ನಾನು ಬರೆದಾಗ "ಆಕಾಶದಲ್ಲಿ ಗುಲಾಬಿ ರಂಗಿದೆ.. ಈ ಸಂಜೆಯಲ್ಲಿ ಶರಾಬು ಗುಂಗಿದೆ'' ಎಂದಿತ್ತು. ಆದರೆ ಅವರು ಪಲ್ಲವಿಯ ಒಂದೊಂದು ಅಕ್ಷರ ಬದಲಿಸಿ ಆಕರ್ಷಕವಾಗಿಸಿದ್ದರು! ಮುಂದೆ ಬೆಳ್ಳಿ ಕಾಲುಂಗುರ, ಮಾತೃದೇವೋಭವ.. ಹೀಗೆ ತುಂಬ ಚಿತ್ರಗಳಲ್ಲಿ ಬರೆಯಲು ಅವಕಾಶ ಕೊಟ್ಟರು. ಸಾಮಾನ್ಯವಾಗಿ ಅವರ ಸಂಗೀತದ ಹಾಡುಗಳಲ್ಲಿ ಅವರದೇ ಸಾಹಿತ್ಯ ಇರುತ್ತದೆ. ಅಥವಾ ಅಪರೂಪಕ್ಕೆ ಬೇರೆ ಕವಿಗಳ ಸಾಹಿತ್ಯವನ್ನು ಬಳಸಿಕೊಂಡದ್ದಿದೆ. ಆದರೆ ಅವರ ಟ್ಯೂನ್ ಗಳಲ್ಲಿ ಅತಿ ಹೆಚ್ಚು ಹಾಡುಗಳನ್ನು ರಚಿಸಿದ ಕೀರ್ತಿ ನನ್ನದು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ.

     ಹಂಸಲೇಖ ಅಂದರೆ ಉತ್ಸಾಹದ ಚಿಲುಮೆ

    ಹಂಸಲೇಖ ಅಂದರೆ ಉತ್ಸಾಹದ ಚಿಲುಮೆ

    ಅವರು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಸ್ಟುಡಿಯೋಗೆ ಬರುತ್ತಿದ್ದರು. ಹಾಗೆ ಬಂದವರು ಮನೆಗೆ ಮರಳುತ್ತಿದ್ದುದು ಕೆಲವೊಮ್ಮೆ ರಾತ್ರಿ ಎರಡು ಗಂಟೆ ಕೂಡ ಆಗುತ್ತಿತ್ತು. ಆ ದಿನಗಳಲ್ಲಿ ಅವರು ಎಷ್ಟು ಬ್ಯುಸಿ ಎಂದರೆ, ಮೂರು ಮೂರು ಸ್ಟುಡಿಯೋಗಳಿಗೆ ಹೋಗುತ್ತಿದ್ದರು. ಬೆಳಿಗ್ಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿದ್ದರೆ, ಮಧ್ಯಾಹ್ನದ ಹೊತ್ತಿಗೆ ಸಂಕೇತ್ ಸ್ಟುಡಿಯೋದಲ್ಲಿ ಇರೋರು, ಆಮೇಲೆ ಮಧ್ಯರಾತ್ರಿ ತನಕ ಪ್ರಸಾದ್ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದರು. ವಿಶೇಷ ಏನೆಂದರೆ, ಮತ್ತೆ ಮಾರನೇ ದಿನ ಬೆಳಿಗ್ಗೆ ಆರು ಗಂಟೆಗೆ ಸ್ಟುಡಿಯೋಗೆ ಹಾಜರಾಗುತ್ತಿದ್ದರು! ವೃತ್ತಿಯಲ್ಲಿ ಅಷ್ಟೆಲ್ಲ ಬ್ಯುಸಿಯಾಗಿದ್ದರೂ ಯಾವತ್ತಿಗೂ ತಮ್ಮ ಹಾಸ್ಯ ಪ್ರವೃತ್ತಿಯನ್ನು ದೂರ ಮಾಡಿಕೊಂಡವರಲ್ಲ. ಅದರಲ್ಲೂ ವಿಶೇಷ ಏನೆಂದರೆ ಮುಂಜಾನೆ ಅವರಲ್ಲಿ ಇರುತ್ತಿದ್ದಂಥ ಉತ್ಸಾಹವೇ ಮಧ್ಯರಾತ್ರಿ ಮರಳುವಾಗಲೂ ಅವರಲ್ಲಿ ತುಂಬಿಕೊಂಡಿರುತ್ತಿತ್ತು! ಅವರು ಎನರ್ಜೆಟಿಕ್ ಆಗಿರುವುದು ಮಾತ್ರವಲ್ಲ, ನಾವು ಕೂಡ ಚುರುಕಾಗಿರುವಂತೆ ನೋಡಿಕೊಳ್ಳುತ್ತಿದ್ದಂಥ ಮಹಾನ್ ಶಕ್ತಿ ಅವರು. ಇಂದಿಗೂ ಅವರ ಉತ್ಸಾಹ, ಪಂಚ್ ಡೈಲಾಗ್ ಗಳಿಗೆ ಕೊರತೆಯೇ ಇಲ್ಲ. ಅದು ಅವರ ಸ್ಪೆಷಾಲಿಟಿ ಎಂದೇ ಹೇಳಬಹುದು.

     ‘ತರ್ಲೆ ನನ್ಮಗ’ ಚಿತ್ರದ ಸಮಯ

    ‘ತರ್ಲೆ ನನ್ಮಗ’ ಚಿತ್ರದ ಸಮಯ

    ಸಾಮಾನ್ಯವಾಗಿ ಗುರುಗಳು ಅಂದರೆ ಶಿಷ್ಯನಾಗಿದ್ದಾಗ ಮಾತ್ರ ಜತೆಗಿರುವವರು ಎನ್ನುವ ಕಲ್ಪನೆ ಇರುತ್ತದೆ. ಆದರೆ ನಾನು ಸ್ವತಃ ಸಂಗೀತ ನಿರ್ದೇಶಕನಾಗುವಾಗಲೂ ನನಗೆ ಪೂರ್ತಿ ಬೆಂಬಲವಾಗಿ ನಿಂತ ಸ್ಫೂರ್ತಿಯ ಚಿಲುಮೆ ಅವರು. ಉಪೇಂದ್ರ ತಾವು ‘ತರ್ಲೆ ನನ್ಮಗ' ಚಿತ್ರಕ್ಕೆ ನಿರ್ದೇಶಕರಾದಾಗ ಆ ಚಿತ್ರಕ್ಕೆ ಸಂಗೀತ ನೀಡುವಂತೆ ಮೊದಲ ಬಾರಿಗೆ ನನಗೆ ಅವಕಾಶ ಮಾಡಿಕೊಟ್ಟರು. ನಾನು ಈ ವಿಚಾರವನ್ನು ಹಂಸಲೇಖ ಅವರಿಗೆ ತಿಳಿಸಿದೆ. ಆ ಮೊದಲು ನಾಲ್ಕೈದು ಬಾರಿ ಹೊಸ ಪ್ರೊಡ್ಯೂಸರ್ ಗಳು ಯಾರೋ ನಿರ್ಮಿಸುತ್ತಿದ್ದ ಚಿತ್ರಕ್ಕೆ ಸಂಗೀತ ನೀಡಲು ಆಹ್ವಾನ ಬಂದಿದೆ ಎಂದು ಹೇಳಿದಾಗ ಒಪ್ಕೋಬೇಡ ಎಂದಿದ್ದರು. ಬಹುಶಃ ಅವರಿಗೆ ನನ್ನ ಮೊದಲ ಚಿತ್ರಕ್ಕೆ ನಂಬಿಕಸ್ಥ ನಿರ್ಮಾಪಕರೇ ದೊರಕಿ, ಚಿತ್ರ ಯಶಸ್ಸಾಗಬೇಕು ಎನ್ನುವ ಕನಸಿತ್ತು ಎಂದು ಕಾಣುತ್ತದೆ. ಈ ಬಾರಿಯೂ ನಿರ್ಮಾಪಕರು ಯಾರು ಎಂದು ವಿಚಾರಿಸಿದರು. ಆರ್ ಎಸ್ ಗೌಡ್ರು ಮತ್ತು ಬಾಬು ಸೇರಿ ನಿರ್ಮಿಸುತ್ತಿದ್ದಾರೆ ಎಂದು ತಿಳಿದಾಗ ತಕ್ಷಣ ಒಪ್ಪಿಗೆ ನೀಡಿದರು. ಬಹುಶಃ ಅವರಿಬ್ಬರು ಅದಾಗಲೇ ಒಂದೆರಡು ಚಿತ್ರಗಳನ್ನು ನಿರ್ಮಿಸಿದ್ದರು ಎನ್ನುವುದು ಅವರ ನಂಬಿಕೆಗೆ ಕಾರಣವಾಗಿರಬಹುದು.

    ನನ್ನ ಮೊದಲ ಪ್ರಾಜೆಕ್ಟ್ ನ ರೆಕಾರ್ಡಿಂಗ್

    ನನ್ನ ಮೊದಲ ಪ್ರಾಜೆಕ್ಟ್ ನ ರೆಕಾರ್ಡಿಂಗ್

    ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅವರಿಗೆ ಸಂಗೀತ ನೀಡುತ್ತಿದ್ದ ಚೆನ್ನೈನ ಸಂಗೀತಜ್ಞರನ್ನೆಲ್ಲ ಕರೆದರು. ಅವರೆಲ್ಲರಿಗೂ ನಾನು ಹಂಸಲೇಖ ಸಹಾಯಕ ಎಂದು ಪರಿಚಯವಿತ್ತು. ಆದರೆ, ಈತನೇ ಮ್ಯೂಸಿಕ್ ಡೈರೆಕ್ಟರ್ ಎಂದು ಪರಿಚಯ ಮಾಡಿಕೊಟ್ಟು, ಈತನಿಗೆ ಎಲ್ಲರೂ ಸಹಕರಿಸಿ ಎಂದು ಹೇಳುತ್ತಾ ರೆಕಾರ್ಡಿಂಗ್ ಡೇಟ್ ಕೂಡ ಹೊಂದಾಣಿಕೆ ಮಾಡಿಕೊಟ್ಟರು. ಅಂದು 1991ರ ಡಿಸೆಂಬರ್ 12. ನನ್ನ ಮೊದಲ ಪ್ರಾಜೆಕ್ಟ್ ನ ರೆಕಾರ್ಡಿಂಗ್. ವಿಪರ್ಯಾಸ ಎಂದರೆ ಆ ದಿನ ಬೆಳಿಗ್ಗೆ ನಾನು ಅನಿವಾರ್ಯ ಕಾರಣದಿಂದ ತಡವಾಗಿ ಆಗಮಿಸಿದ್ದೆ. ಆದರೆ ಬೆಳಿಗ್ಗೆ ಆರು ಗಂಟೆಗೆಲ್ಲ ಸ್ಟುಡಿಯೋಗೆ ಬಂದಿದ್ದರು ಹಂಸಲೇಖ. ಅವರಂಥ ಮತ್ತೊಬ್ಬ ಗುರುವನ್ನು ನನಗೆ ಕಲ್ಪಿಸಲು ಕೂಡ ಸಾಧ್ಯವಿಲ್ಲ. ಇಂದಿಗೂ ಅವರ ಜತೆ ಕೆಲಸ ಮಾಡುವ ಅವಕಾಶ ಸಿಗುತ್ತಿರುವುದು ನನಗೆ ಹೆಮ್ಮೆ.

     ವಿ ಮನೋಹರ್ ಸಂಗೀತದಲ್ಲಿ ಲತಾ ಹಂಸಲೇಖ ಗಾಯನ

    ವಿ ಮನೋಹರ್ ಸಂಗೀತದಲ್ಲಿ ಲತಾ ಹಂಸಲೇಖ ಗಾಯನ

    ಬಹುಶಃ ಎಷ್ಟು ಮಂದಿ ಇಂಥ ಅವಕಾಶ ನೀಡುತ್ತಾರೋ ಗೊತ್ತಿಲ್ಲ. ಇದೀಗ ಹಂಸಲೇಖ ಅವರು ವಿಡಿಯೋ ಆಲ್ಬಮ್ ಒಂದನ್ನು ಚಿತ್ರೀಕರಿಸುತ್ತಿದ್ದಾರೆ. ಅದರಲ್ಲಿ ಎಂಟು ಹಾಡುಗಳಿದ್ದು, ಎಂಟನ್ನು ಕೂಡ ಅವರ ಪತ್ನಿ ಲತಾ ಹಂಸಲೇಖ ಆಲಾಪಿಸುತ್ತಿದ್ದಾರೆ. ಆ ಎಂಟು ಹಾಡುಗಳಿಗೆ ಸಂಗೀತ, ಸಾಹಿತ್ಯ ನೀಡುವಂತೆ ಮನೋಹರ್ ಅವರಿಗೆ ಹೇಳಿದ್ದಾರೆ ಹಂಸಲೇಖ. ಅಂದಹಾಗೆ ಇಂದು ಜನ್ಮದಿನದ ಪ್ರಯುಕ್ತ ಅವರು ಅದೇ ಹಾಡಿನ ವಿಡಿಯೋ ಚಿತ್ರೀಕರಣ ನಡೆಸಲಾಗುತ್ತಿದೆ. ಅಲ್ಲಿ ಮನೋಹರ್ ಕೂಡ ಇರುತ್ತಾರೆ. ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮನಸ್ಥಿತಿಯ ಮಂದಿಗೆ ಬುದ್ಧಿವಾದ ಹೇಳುವಂಥ ಸಂದೇಶ ಹೊಂದಿರುವ ಹಾಡಿನ ಚಿತ್ರೀಕರಣ ಇಂದು ನಡೆಯಲಿದೆ. ಅಂದಹಾಗೆ ಈ ಆಲ್ಬಮ್ ಗೀತೆಗಳಿಗೆ ಏನು ಹೆಸರಿಡಲಿದ್ದಾರೆ ಮತ್ತು ಯಾವಾಗ ಬಿಡುಗಡೆ ಮಾಡಲಿದ್ದಾರೆ ಎನ್ನುವುದನ್ನೆಲ್ಲ ಸ್ವತಃ ಹಂಸಲೇಖ ಮುಂದಿನ ದಿನಗಳಲ್ಲಿ ವಿವರಿಸಬಹುದು.

     ಒಂದು ಸಾವಿರ ಮಂದಿಯಿಂದ ಗಾನ ಶುಭಾಶಯ

    ಒಂದು ಸಾವಿರ ಮಂದಿಯಿಂದ ಗಾನ ಶುಭಾಶಯ

    ಇಂದು ಸಂಜೆ ಹಂಸಲೇಖಾ ಅವರ ದೇಸಿ ದೇಸಿ ಸಂಸ್ಥೆಯ ಮುಂಭಾಗದಲ್ಲಿರುವ ವಿವೇಕಾನಂದ ಆಟದ ಮೈದಾನದಲ್ಲಿ ಗಾನ ಸಮಾರಾಧನೆಯೇ ನಡೆಯಲಿದೆ ಎಂದು ಸಂಗೀತ ನಿರ್ದೇಶಕ ಇಂದ್ರ ಹೇಳಿದ್ದಾರೆ. ಸಾವಿರ ಮಂದಿ ಸಂಗೀತಾಸಕ್ತರು ಸೇರಿಕೊಂಡು ಹಂಸಲೇಖ ಮನೆಯ ಮುಂದೆ ಹಾಡಲಿದ್ದಾರೆ. ಆ ಹಾಡು ಬೇರೆ ಯಾವುದೋ ಅಲ್ಲ, ಸ್ವತಃ ಹಂಸಲೇಖ ಸಂಗೀತ ಸಂಯೋಜಿಸಿ ಡಾ.ರಾಜ್ ಕುಮಾರ್ ಹಾಡಿದಂಥ "ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು..'' ಎನ್ನುವ ಗೀತೆ. ಫಿಲ್ಮೀಬೀಟ್ ಕಡೆಯಿಂದಲೂ ನಾದಬ್ರಹ್ಮನ ಜನ್ಮದಿನಾಚರಣೆಗೆ ಶುಭಾಶಯಗಳು.

    English summary
    V Manohar spoke about his guru Hamsalekha in Filmibeat kannada interview.
    Sunday, June 23, 2019, 12:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X