ಮ್ಯಾನಿಫೆಸ್ಟ್ ಮಾಡಿದ್ದೆ, ನನ್ನ ಕನಸು ನನಸಾಗಿದೆ; 'ಅಗ್ನಿಸಾಕ್ಷಿ' ವರ್ಷಿಣಿ ಗೌಡ ಮನದಾಳ
ಕಿರುತೆರೆಗೆ ಮತ್ತೆ 'ಅಗ್ನಿಸಾಕ್ಷಿ' ಧಾರಾವಾಹಿ ಬರ್ತಿದೆ. ಅರೇ ಸಿದ್ದಾರ್ಥ್ ಹಾಗೂ ಸನ್ನಿಧಿ ಕಥೆ ಮತ್ತೆ ಮನೆ ಮನೆಗೆ ಬರುತ್ತಾ ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಸೂಪರ್ ಹಿಟ್ 'ಅಗ್ನಿಸಾಕ್ಷಿ' ಟೈಟಲ್‌ನಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಕಥೆ ಬರ್ತಿದೆ. ಈ ಬಾರಿ ಶಮಂತ್ ಹಾಗೂ ವರ್ಷಿಣಿ ಗೌಡ ನಾಯಕ- ನಾಯಕಿಯಾಗಿ ವೀಕ್ಷಕರನ್ನು ರಂಜಿಸಲು ಬರ್ತಿದ್ದಾರೆ.
ಅವನು ಅಹಂಕಾರದ ಅಗ್ನಿಪರ್ವತ.. ಅವಳು ಸ್ವಾಭಿಮಾನದ ಚಂಡಮಾರುತ.. ಇವರಿಬ್ಬರ ಮುಖಾಮುಖಿಯೇ ಒಂದು 'ಸಮರ' ಪ್ರೇಮಕತೆ ಎಂದು ಕಲರ್ಸ್ ಕನ್ನಡ ಹೊಸ ಧಾರಾವಾಹಿಗೆ ಮುನ್ನುಡಿ ಬರೆದಿದೆ. 'ಹಠ ಇಬ್ರನ್ನೂ ಹತ್ರ ಆಗೋಕೆ ಬಿಡ್ತಿಲ್ಲ , ಆದ್ರೆ ಮನಸ್ಸು ದೂರ ಆಗೋಕೆ ಒಪ್ತಿಲ್ಲ' ಎಂದು ಹೇಳಿ ಮತ್ತೊಂದು ಪ್ರೋಮೊ ರಿಲೀಸ್ ಮಾಡಿದ್ದಾರೆ.

ಈಗಾಗಲೇ ಕನ್ನಡದ 'ಬೃಂದಾವನ ಹಾಗೂ ತೆಲುಗಿನ 'ಜಯಂ' ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದಿದ್ದ ವರ್ಷಿಣಿ ನಾಯಕಿ ಸಾಕ್ಷಿ ಪಾತ್ರಕ್ಕೆ ಜೀವ ತುಂಬಿದ್ದಾರೆ. 2 ಪ್ರೋಮೊಗಳು ಬಿಡುಗಡೆಯಾಗಿ 'ಅಗ್ನಿಸಾಕ್ಷಿ' ಧಾರಾವಾಹಿ ಬಗ್ಗೆ ಕುತೂಹಲ ಮೂಡಿಸಿದೆ. ಶೀಘ್ರದಲ್ಲೇ ಹೊಸ ಕಥೆ ಟಿವಿ ಪರದೆ ಮೇಲೆ ಮೂಡಲಿದೆ. ಆದರೆ ದಿನಾಂಕ ಇನ್ನು ಘೋಷಣೆ ಆಗಿಲ್ಲ. ಒಂದೆರಡು ಮೇಕಿಂಗ್ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಬಗ್ಗೆ ವರ್ಷಿಣಿ ಗೌಡ ಬಹಳ ಖುಷಿಯಾಗಿದ್ದಾರೆ. ಫಿಲ್ಮಿಬೀಟ್ ಕನ್ನಡ ವೆಬ್ ಸೈಟ್ ಜೊತೆ ತಮ್ಮ ಮನದಾಳದ ಮಾತುಗಳನ್ನು ತೆರೆದಿಟ್ಟಿದ್ದಾರೆ.
'ಅಗ್ನಿಸಾಕ್ಷಿ' ಧಾರಾವಾಹಿಗೆ ಆಯ್ಕೆ ಆಗಿದ್ದೇಗೆ?
ನಾನು ಕಲರ್ಸ್ ಕನ್ನಡ ವಾಹಿನಿಯ 'ಬೃಂದಾವನ' ಧಾರಾವಾಹಿಯಲ್ಲಿ ನಟಿಸಿದ್ದೆ. ನಾಯಕನ ತಂಗಿ ಪಾತ್ರ ಮಾಡಿದ್ದೆ. 'ಅಗ್ನಿಸಾಕ್ಷಿ' ಧಾರಾವಾಹಿ ನಿರ್ದೇಶಕ ಪ್ರಶಾಂತ್ ಸರ್ ಅದಕ್ಕೂ ಆಕ್ಷನ್ ಕಟ್ ಹೇಳಿದ್ರು. ಹಾಗಾಗಿ ಆಡಿಯನ್ ಕೊಡೊಕೆ ಹೇಳಿದ್ರು. ನನ್ನ ನಟನೆ ಮೆಚ್ಚಿ ಸಾಕ್ಷಿ ಪಾತ್ರಕ್ಕೆ ಆಯ್ಕೆ ಮಾಡಿದ್ದರು.
ಸಾಕ್ಷಿ ಪಾತ್ರದ ಬಗ್ಗೆ ಹೇಳಿ
'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸುತ್ತಿರುವುದು ಬಹಳ ಖುಷಿಯಿದೆ. ಈ ಹಿಂದೆ ಬಂದಿದ್ದ 'ಅಗ್ನಿಸಾಕ್ಷಿ' ಧಾರಾವಾಹಿ ನೋಡಿ ಬೆಳೆದವಳು ನಾನು. ಮುಂದೊಂದು ದಿನ ನಾನು ಇದೇ ಟೈಟಲ್ ಧಾರಾವಾಹಿಯ ನಾಯಕಿ ಪಾತ್ರದಲ್ಲಿ ನಟಿಸುತ್ತೇನೆ ಎಂದು ಊಹಿಸಿರಲಿಲ್ಲ.
ನಟನೆ ಶುರುವಾಗಿದ್ದು ಹೇಗೆ?
ಬಣ್ಣದಲೋಕಕ್ಕೆ ಬರುವ ಆಸಕ್ತಿ ಚಿಕ್ಕಂದಿನಿಂದ ಇತ್ತು. ಅದಕ್ಕಾಗಿ ಮಾಡೆಲಿಂಗ್ ಆರಂಭಿಸಿದೆ. ಆ ಮೂಲಕ ಕಿರುತೆರೆ, ಹಿರಿತೆರೆಗೆ ಬರಬಹುದು ಎಂದುಕೊಂಡಿದ್ದೆ. ಆದರೆ ಸಾಧ್ಯವಾಗಲಿಲ್ಲ. ಇಂಡಸ್ಟ್ರಿ ಪರಿಚಯ ಇರಲಿಲ್ಲ. ಆದರೆ ಅಪ್ಪನಿಗೆ ನನ್ನನ್ನು ನಟಿ ಮಾಡುವ ಆಸೆ ಇತ್ತು. ಅವರು ಪ್ರೋತ್ಸಾಹಿಸುತ್ತಿದ್ದರು. 'ಬೃಂದಾವನ' ಧಾರಾವಾಹಿಗೂ ಆಡಿಷನ್ ಕೊಟ್ಟು ಆಯ್ಕೆ ಆಗಿದ್ದೆ. ಬಳಿಕ 2 ವರ್ಷ ಖಾಲಿ ಕೂತಿದ್ದೆ. ಅದೇ ಸಮಯದಲ್ಲಿ ಜೀ ತೆಲುಗು 'ಜಯಂ' ಧಾರಾವಾಹಿ ಅವಕಾಶ ಸಿಕ್ಕಿತ್ತು. ಸದ್ಯ ಈ ಎರಡು ಧಾರಾವಾಹಿಗಳಲ್ಲಿ ನಟಿಸ್ತಿದ್ದೀನಿ.
ವರ್ಷಿಣಿ ಗೌಡ ಹಿನ್ನೆಲೆ
ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲೇ. ಬಿಕಾಂ ಮುಗಿಸಿದ್ದೀನಿ. ಅಪ್ಪ, ಅಮ್ಮ ಹಾಗೂ ನನಗೆ ಒಬ್ಬ ತಮ್ಮ ಇದ್ದಾನೆ. ಚಿಕ್ಕಂದಿನಲ್ಲಿ ಟಿವಿ ನೋಡಿ ಡ್ಯಾನ್ಸ್ ಮಾಡ್ತಿದ್ದೆ ಅಂತ ಅಮ್ಮ ಹೇಳ್ತಾರೆ. ಟಿಕ್ ಟಾಕ್ ಮಾಡ್ತಿದ್ದೆ, ಅದು ಬ್ಯಾನ್ ಆದ್ಮೇಲೆ ರೀಲ್ಸ್ ಮಾಡಲು ಆರಂಭಿಸಿದೆ. ನನಗೆ ಸೋಶಿಯಲ್ ಮೀಡಿಯಾದಿಂದ ಯಾವುದೇ ಅವಕಾಶ ಸಿಗಲಿಲ್ಲ. 3 ಧಾರಾವಾಹಿಗೆ ಆಡಿಷನ್ ಕೊಟ್ಟು ಆಯ್ಕೆ ಆಗಿದ್ದೀನಿ.
'ಅಗ್ನಿಸಾಕ್ಷಿ' ಧಾರಾವಾಹಿ ನಟನೆ ಅನುಭವ
ಇದು ನನ್ನ ಕನಸು. ಕಲರ್ಸ್ ಕನ್ನಡ ವಾಹಿನಿ ಧಾರಾವಾಹಿಗೆ ನಾಯಕಿಯಾಗಬೇಕು ಎಂದು ಮ್ಯಾನಿಫೆಸ್ಟ್ ಮಾಡ್ತಿದ್ದೆ. ಅದೊಂದು ಹುಚ್ಚು ಆಸೆ ಇತ್ತು. ಕೊನೆಗೂ ಅದು ನಿಜವಾಗಿದೆ. ಬಹಳ ಖುಷಿಯಿದೆ.


Click it and Unblock the Notifications