Maryadhe Ramanna: ಮತ್ತೆ ರೀಲ್‌ನಲ್ಲಿ ರಿಯಲ್ ಲೈಫ್ ದಂಪತಿ; 'ಮರ್ಯಾದೆ ರಾಮಣ್ಣ' ಬಗ್ಗೆ ಸುಂದರ್ ಮಾತು

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಚೇತನ್ ಚಂದ್ರ ಮತ್ತು ಜೀವಿತಾ ವಸಿಷ್ಠ ನಟನೆಯ 'ಮರ್ಯಾದೆ ರಾಮಣ್ಣ' ಧಾರಾವಾಹಿ ವೀಕ್ಷಕರ ಮನಗೆದ್ದಿದೆ. ಮಲ್ಲಿಗೆಪುರದ ಪೈಲ್ವಾನ್ ರಾಮಣ್ಣ ಹಾಗೂ ಪ್ಯಾಟೆ ಹುಡುಗಿ ಐಶ್ವರ್ಯ ನಡುವಿನ ಪ್ರೇಮಕಥೆ ಇಲ್ಲಿದೆ. ಇನ್ನು ರಾಮಣ್ಣನಾಗಿ ಚೇತನ್ ಚಂದ್ರ ನಟಿಸಿದ್ದು ಅವರ ತಂದೆ-ತಾಯಿ ಪಾತ್ರಗಳಲ್ಲಿ ವೀಣಾ- ಸುಂದರ್ ದಂಪತಿ ಬಣ್ಣ ಹಚ್ಚಿದ್ದಾರೆ.

'ಮರ್ಯಾದೆ ರಾಮಣ್ಣ' ಧಾರಾವಾಹಿ ಎಲ್ಲಾ ಪಾತ್ರಗಳು ವೀಕ್ಷಕರ ಗಮನ ಸೆಳೆದಿದೆ. ರಾಮಣ್ಣನಿಗೆ ತಾಯಿ ಜಯಮ್ಮ ಪಾತ್ರದಲ್ಲಿ ವೀಣಾ ಸುಂದರ್ ಕಾಣಿಸಿಕೊಂಡಿದ್ದಾರೆ. ನಿಜಜೀವನದಲ್ಲಿ ವೀಣಾ ಅವರ ಪತಿ ಸುಂದರ್ ಧಾರಾವಾಹಿಯಲ್ಲಿ ಕೂಡ ಜಯಮ್ಮನ ಪತಿ ಜಗನ್ನಾಥನ ಪಾತ್ರದಲ್ಲಿ ಬಣ್ಣಹಚ್ಚಿರುವುದು ವಿಶೇಷ. ಈ ಹಿಂದೆ ಕೂಡ ಸುಂದರ್ ಹಾಗೂ ವೀಣಾ ದಂಪತಿ ಸಾಕಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಕ್ಯಾಮರಾ ಮುಂದೆ ಕೂಡ ಸತಿ-ಪತಿಯಾಗಿ ಕಾಣಿಸಿಕೊಂಡಿದ್ದಾರೆ.

Veena Sundar and Husband Sundar Play On-Screen Couple in Maryadhe Ramanna Sundar shares experience

ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ಬಗ್ಗೆ ನಟ ಸುಂದರ್ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. ತಮ್ಮ ಪಾತ್ರ, ಧಾರಾವಾಹಿ ಕಥೆ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ರೀಮೆಕ್ ಆಗಿದ್ದರೂ ಸಾಕಷ್ಟು ಬದಲಾವಣೆ ಮಾಡಿಕೊಂಡು ಕಥೆಯನ್ನು ಕಟ್ಟಿಕೊಡಲಾಗುತ್ತಿದೆ. ಹೊಸ ಬಗೆಯ ಕನ್ನಡ ಭಾಷೆಯನ್ನು ನಾನು ಕಲಿತು ನಟಿಸಿದ್ದೀನಿ. ಅದು ಬಹಳ ಚಾಲೆಂಜಿಂಗ್ ಆಗಿತ್ತು ಎಂದು ತಿಳಿಸಿದ್ದಾರೆ.

ಮತ್ತೆ ವೀಣಾ ಮೇಡಂ ಕಾಂಬಿನೇಷನ್‌ನಲ್ಲಿ ನಟನೆ

ಹೌದು. ಈ ಹಿಂದೆ ಕೂಡ ಸಿನಿಮಾ, ಧಾರಾವಾಹಿಯಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದೀವಿ. ಆಗ ಮಕ್ಕಳು ಚಿಕ್ಕವರಾಗಿದ್ದರು. ಹಾಗಾಗಿ ಒಬ್ಬರಲ್ಲ ಒಬ್ಬರು ಮನೆಯಲ್ಲಿ ಇರಬೇಕಿತ್ತು. ಈಗ ಮಕ್ಕಳು ದೊಡ್ಡವರಾಗಿದ್ದಾರೆ. ಹಾಗಾಗಿ ಒಟ್ಟಿಗೆ ಒಪ್ಪಿಕೊಂಡು ಮಾಡ್ತಿದ್ದೀವಿ. ಇದು ಬಹಳ ಬೇರೆಯದ್ದೇ ತರಹದ ಪಾತ್ರಗಳು. ಹಳ್ಳಿ ಹಿನ್ನೆಲೆ ಇರುವ ಕಥೆ. ಅಮ್ಮ, ಮಗನ ಬಾಂಧವ್ಯದ ಸುತ್ತಾ ಸುತ್ತುತ್ತೆ. ಅದರ ಮಧ್ಯೆ ಇಬ್ಬರ ನಡುವೆ ಸಿಕ್ಕಿಕೊಂಡ ಅಪ್ಪನ ಪಾತ್ರ ನನ್ನದು.

ಪಾತ್ರ ಎಷ್ಟು ಚಾಲೆಂಜಿಂಗ್ ಅನ್ನಿಸುತ್ತೆ?

ಹಳ್ಳಿ ಸೊಗಡಿನ ಕಥೆ ಆಗಿರುವುದರಿಂದ ಭಾಷೆ ಕಲಿಯುವುದು ಮುಖ್ಯವಾಗಿತ್ತು. ಕೊಳ್ಳೆಗಾಲದ ಭಾಷೆ. ನಾನು ನಾಟಕದ ಮೇಷ್ಟ್ರು ಪಾತ್ರ ಮಾಡಿದ್ದೀನಿ. ಅದು ನನಗೆ ಕನೆಕ್ಟ್ ಆಗುತ್ತೆ. ಕಾರಣ ನಾನು ರಂಗಭೂಮಿಯವನು. ಆದ್ರೆ ನಾನು ಪೌರಾಣಿಕ ಅಥವಾ ಹಳ್ಳಿಯಲ್ಲಿ ಮಾಡಿಸುವಂತಹ ನಾಟಕ ಮಾಡಿರಲಿಲ್ಲ. ಅದು ಹೊಸದು ನನಗೆ. ಎಲ್ಲಾ ಹೊಸತನಗಳ ನಡುವೆ ಈ ಪಾತ್ರ ಮಾಡುತ್ತಿರುವುದು ಚೆನ್ನಾಗಿದೆ.

ಇತರೆ ಪಾತ್ರಗಳ ಬಗ್ಗೆ ಹೇಳಿ

ಚೇತನ್ ಚಂದ್ರ ಬಹಳ ಡೆಡಿಕೇಟೆಡ್ ಆಕ್ಟರ್.. ಪೈಲ್ವಾನ್ ಪಾತ್ರ ಮಾಡ್ತಿದ್ದಾರೆ. ಅದಕ್ಕಾಗಿ 6 ತಿಂಗಳು ಕುಸ್ತಿ ಅಖಾಡಕ್ಕೆ ಹೋಗಿ ಕುಸ್ತಿ ಕಲಿತು ಪಕ್ಕಾ ಪೈಲ್ವಾನ್ ಆಗಿಬಿಟ್ಟಿದ್ದಾರೆ. ಶೀಘ್ರದಲ್ಲೇ ಕುಸ್ತಿ ಪಂದ್ಯಗಳಲ್ಲಿ ಹೋಗಿ ಭಾಗವಹಿಸುವಷ್ಟು ಕಲಿತುಬಿಟ್ಟಿದ್ದಾರೆ. ಅಷ್ಟರಮಟ್ಟಿಗೆ ಆತನ ಡೆಡಿಕೇಷನ್ ಇದೆ. ಅದೇ ರೀತಿ ಜೀವಿತಾ, ವೀಣಾ ಎಲ್ಲರೂ ಸೊಗಸಾಗಿ ನಟಿಸ್ತಿದ್ದಾರೆ.

ಗೊತ್ತಿರುವ ಕಥೆಯನ್ನೇ ಹೇಗೆ ಹೇಳ್ತಿದ್ದಾರೆ?

ಇತ್ತೀಚೆಗೆ ಬಹರಗಾರರಿಗೆ ಹೆಚ್ಚಿನ ಸ್ವಾತಂತ್ರ್ಯ ಇಲ್ಲ. ತಮಿಳು, ತೆಲುಗಿನಲ್ಲಿ ಬಂದಿರುವ ಕಥೆ ಇದು. ಆದ್ರೂ ಸಾಕಷ್ಟು ಬದಲಾವಣೆ ಮಾಡಿಕೊಂಡು ನಮ್ಮ ನೇಟಿವಿಟಿಗೆ ತಕ್ಕಂತೆ ಬದಲಿಸಿಕೊಂಡು ಕಥೆ ಕಟ್ಟಿಕೊಡುತ್ತಿದ್ದಾರೆ. ಚಾನಲ್ ಅದರ ಜವಾಬ್ದಾರಿ ವಹಿಸಿಕೊಂಡಿದೆ. ನನ್ನ ಪಾತ್ರ ನಾಟಕದ ಮೇಷ್ಟ್ರು ಎನ್ನುವುದನ್ನು ಇವರೇ ಡೆವಲಪ್ ಮಾಡಿಕೊಂಡಿರುವುದು. ಕೊಳ್ಳೆಗಾಲ ಸುತ್ತಮುತ್ತ ಭಾಷೆ, ಪರಿಸರವನ್ನು ಸೊಗಸಾಗಿ ತರುತ್ತಿದ್ದಾರೆ. ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿರುವುದು ಬಹಳ ಖುಷಿಯಿದೆ.

ಮೆಗಾ ಸೀರಿಯಲ್‌ಗಳ ಬದಲಾವಣೆ ಬಗ್ಗೆ ಏನು ಅನ್ನಿಸುತ್ತೆ?

ಸಾಕಷ್ಟು ಬದಲಾವಣೆ ಆಗಿದೆ. ಜನರ ನೋಡುವ ದೃಷ್ಟಿಕೋನ ಕೂಡ ಮೊದಲಿನಂತೆ ಇಲ್ಲ. ಒಳ್ಳೆಯದ್ದು, ಕೆಟ್ಟದು ಎರಡೂ ಇದೆ. ಧಾರಾವಾಹಿ ಮೇಕಿಂಗ್ ಅನ್ನು ಬಹಳ ಗಂಭೀರವಾಗಿ ಈಗ ಪರಿಗಣಿಸಿದ್ದಾರೆ. ಮೊದಲಿಗೆ ಸೀರಿಯಲ್ ತಾನೇ ಎನ್ನುವ ಅಸಡ್ಡೆ ಇತ್ತು. ಈಗ ಆ ರೀತಿ ಇಲ್ಲ. ನಾವು ಮೆಗಾ ಸೀರಿಯಲ್ ಶುರುವಾದ ಸಮಯದಿಂದ ಕೆಲಸ ಮಾಡ್ತಿದ್ದೀವಿ. 4 ಗೋಡೆ ಮಧ್ಯೆ ಮಾತನಾಡಿದ್ರೆ ಸಾಕು ಎನ್ನುವಂತಿಲ್ಲ. ಈಗ ಇದು ಒಂದು ಉದ್ಯಮವಾಗಿ ಬೆಳೆದಿದೆ. ಮೊದಲೆಲ್ಲಾ ಹಿಂದಿನ ದಿನ ಫೋನ್ ಮಾಡಿ ನಟಿಸೋಕೆ ಕರೆಯುತ್ತಿದ್ರು. ಆದ್ರೆ ಈಗ ಕಾಂಟ್ರಾಕ್ಟ್, ಲುಕ್ ಟೆಸ್ಟ್, ಪ್ರೆಸ್‌ಮೀಟ್, ಪ್ರಮೋಷನ್ ಎಲ್ಲವೂ ನಡೆಯುತ್ತಿದೆ.

ಧಾರಾವಾಹಿಗಳ ಕಂಟೆಂಟ್ ಬಗ್ಗೆ ಏನ್ ಹೇಳ್ತೀರಾ?

ಮೊದಲೆಲ್ಲಾ ಕಾಮಿಡಿ, ಡಿಟೆಕ್ಟಿವ್, ಕ್ಯಾಂಪಸ್ ಡ್ರಾಮಾ, ಫ್ಯಾಮಿಲಿ ಡ್ರಾಮಾ ಹೀಗೆ ವೈವಿಧ್ಯಮಯ ಕಥೆಗಳು ಬರ್ತಿತ್ತು.. ಆದ್ರೆ ಈಗ ಎಲ್ಲವೂ ಬದಲಾಗಿದೆ. ಎಲ್ಲಾ ಪಾತ್ರಗಳು, ಕಥೆಗಳು ಒಂದೇ ತರ ಇರುತ್ತೆ. ಅದು ಬೇಸರ ತರಿಸುವಂಥದ್ದು. ಎಲ್ಲಾ ಧಾರಾವಾಹಿಯಲ್ಲಿ ಮದುವೆ ವಿಚಾರದ ಸುತ್ತಾ ಗಿರಿಕಿ ಹೊಡೆಯುತ್ತಿವೆ. ಇಷ್ಟವಿಲ್ಲದ ಮದುವೆ ಆಗಿ ಬಳಿಕ ಹೇಗೆ ಒಂದಾಗುತ್ತಾರೆ, ಗಂಡ- ಹೆಂಡತಿ ಮತ್ತೊಬ್ಬಳು ಹೀಗೆ ಒಂದೇ ತೆರನಾದ ಕಥೆಗಳು ಬರುತ್ತಿರುವುದು. ವೀಕ್ಷಕರು ಕೂಡ ಅದೇ ಬಯಸುತ್ತಾರಾ ಎನ್ನುವಂತಾಗಿಬಿಟ್ಟಿದೆ.

Read more about: tv serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X