ವೈಫ್ ಒಂದು ಮಾತು ಹೇಳ್ತಿದ್ಲು, ನನ್ನ ಪೊಲೀಸ್ ಪಾತ್ರಗಳನ್ನು ನೋಡಿದ್ರೆ ಖುಷಿಪಡ್ತಿದ್ಲು- ವಿಜಯ್ ರಾಘವೇಂದ್ರ
ವಿಜಯ್ ರಾಘವೇಂದ್ರ ಅಭಿಮಾನಿಗಳಿಗೆ ಈ ವಾರ ಡಬಲ್ ಧಮಾಕ. ಒಂದೇ ದಿನ ವಿಜಿ ನಟನೆಯ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾ ಹಾಗೂ 'ರಾಕ್ಷಸ' ಎಂಬ ವೆಬ್ ಸೀರಿಸ್ ಬಿಡುಗಡೆ ಆಗ್ತಿದೆ. ಕ್ರೈಂ ಥ್ರಿಲ್ಲರ್ 'ಸೀತಾರಾಮ್ ಬಿನೋಯ್' ಒಂದ್ಕಡೆ ಮತ್ತೊಂದು ಕಡೆ ಜೀ5 ಓಟಿಟಿಲ್ಲಿ ಥ್ರಿಲ್ಲರ್ ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗ್ತಿದೆ. ವಿಶೇಷ ಅಂದ್ರೆ ಎರಡರಲ್ಲೂ ವಿಜಿ ಖಾಕಿ ಖದರ್ ತೋರಿಸಿದ್ದಾರೆ.
5 ವರ್ಷಗಳ ಹಿಂದೆ ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ 'ಸೀತಾರಾಮ್ ಬಿನೋಯ್' ಸಿನಿಮಾ ಬಂದು ಗೆದ್ದಿತ್ತು. ಇದೀದ ಅದೇ ತಂಡ ಮತ್ತೊಂದು ಕೇಸ್ ಕಥೆ ಹೇಳಲು ಬರ್ತಿದೆ. ಮತ್ತಷ್ಟು ಮಾಗಿದ ಪೊಲೀಸ್ ಅಧಿಕಾರಿಯಾಗಿ ವಿಜಯ್ ಕಾಣಿಸಿಕೊಂಡಿದ್ದಾರೆ. ಕೇವಲ ಒಂದು ರೂಪಾಯಿಗೆ ಟಿಕೆಟ್ ಖರೀದಿಸಿ ಜನ ಚಿತ್ರ ಪ್ರೀಮಿಯರ್ ಶೋ ನೋಡುವ ಅವಕಾಶ ಕಲ್ಪಿಸಲಾಗಿತ್ತು. ತರುಣ್ ಸುಧೀರ್ ನಿರ್ಮಾಣದಲ್ಲಿ ಉತ್ತರ ಕರ್ನಾಟಕ ಭಾಷೆ, ಶೈಲಿ ಮತ್ತು ಕಲಾವಿದರನ್ನು ಒಳಗೊಂಡ 'ರಾಕ್ಷಸ' ವೆಬ್ ಸೀರಿಸ್ ಕೂಡ ಕುತೂಹಲ ಮೂಡಿಸಿದೆ. ಮಲಪ್ರಭಾ ನದಿ ತೀರದ ನಿಗೂಢ ಮೊಸಳೆ ದಾಳಿಗಳ ಸುತ್ತ ಕಥೆ ಹೆಣೆಯಲಾಗಿದೆ.

ಹೀಗೆ ಒಂದೇ ದಿನ ಇತ್ತ ಸಿನಿಮಾ ಪ್ರೇಕ್ಷಕರಿಗೆ ಅತ್ತ ಓಟಿಟಿ ವೀಕ್ಷಕರಿಗೆ ಸರ್‌ಪ್ರೈಸ್ ಕೊಡಲು ವಿಜಯ್ ರಾಘವೇಂದ್ರ ಬರ್ತಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. 'ಸೀತಾರಾಮ್ ಬಿನೋಯ್' ಸಿನಿಮಾ ಹಾಗೂ 'ರಾಕ್ಷಸ' ವೆಬ್ ಸೀರಿಸ್ ಬಗ್ಗೆ ಬಹಳ ಕಾತರದಿಂದ ಕಾಯುತ್ತಿದ್ದಾರೆ.
ಒಂದೇ ದಿನ ಡಬಲ್ ಸರ್‌ಪ್ರೈಸ್, ಹೇಗನಿಸುತ್ತಿದೆ?
ಬಹಳ ಒಳ್ಳೆ ಕೆಲಸ ಮಾಡಿದ್ದೀವಿ. ಸಿನಿಮಾ, ವೆಬ್ ಸೀರಿಸ್ ಎರಡೂ ಬಿಡುಗಡೆ ಆಗ್ತಿದೆ. ನೋಡುಗರ ರಿಯಾಕ್ಷನ್ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಇದೆ. ಅದಕ್ಕಾಗಿ ಕಾಯ್ತಿದ್ದೀನಿ.

ವೆಬ್ ಸೀರಿಸ್‌ನಲ್ಲಿ ನಟಿಸಿದ ಅನುಭವ ಹೇಗಿತ್ತು?
ಕನ್ನಡದಲ್ಲಿ ವೆಬ್ ಸೀರಿಸ್‌ಗಳ ಅವಶ್ಯಕತೆ ಹೆಚ್ಚಾಗಿ ಇತ್ತು. ಬಹಳ ಜನ ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಇದ್ದಾರೆ. ಸಿನಿಮಾ ಇದ್ದೇ ಇರುತ್ತೆ. ಜನ ವೆಬ್ ಸೀರಿಸ್ ಕಡೆ ಮುಖ ಮಾಡ್ತಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಕಥೆಗಳನ್ನು ಹೇಳಲು ಮೇಕರ್ಸ್ ಸಿದ್ಧ ಇದ್ದಾರೆ. ಅದಕ್ಕೆ ವೇದಿಕೆ ಬೇಕಿತ್ತು. ಜೀ-5 ವೇದಿಕೆ ಮಾಡಿಕೊಡ್ತಿದೆ. ತರುಣ್ ಜೊತೆ ವೆಬ್ ಸರಣಿಗೆ ಕೆಲಸ ಮಾಡಿದ್ದು ಖುಷಿಯಿದೆ. ಅವರ ಪ್ರೊಡಕ್ಷನ್‌ನಲ್ಲಿ ಧೈರ್ಯವಾಗಿ ನಟಿಸಬಹುದು.
ಕನ್ನಡದಲ್ಲಿ ವೆಬ್ ಸೀರಿಸ್ ಅಗತ್ಯತೆ ಎಷ್ಟಿದೆ?
ಖಂಡಿತ ವೆಬ್ ಸೀರಿಸ್ ಕನ್ನಡದಲ್ಲಿ ಹೆಚ್ಚಾಗಿ ನಿರ್ಮಾಣವಾಗಬೇಕು. ಆ ಮೂಲಕ ಕನ್ನಡದ ಕಂಟೆಂಟ್ ಅನ್ನು ಬೇರೆ ಬೇರೆ ಕಡೆಗೆ ತೆಗೆದುಕೊಂಡು ಹೋಗಬೇಕು. ಇಡೀ ಇಂಡಸ್ಟ್ರಿಗೆ ಇದು ಬಹಳ ಅವಶ್ಯಕ.
ಸಿನಿಮಾ ಹಾಗೂ ವೆಬ್ ಸೀರಿಸ್‌ನಲ್ಲಿ ನಟಿಸುವುದಕ್ಕೆ ವ್ಯತ್ಯಾಸ ಅನ್ನಿಸ್ತಾ?
ಪ್ರೊಡಕ್ಷನ್ ವಿಚಾರದಲ್ಲಿ ಸಿನಿಮಾ ಹಾಗೂ ವೆಬ್ ಸೀರಿಸ್ ಪ್ರಕ್ರಿಯೆ ಬೇರೆ ಬೇರೆ ಇರುತ್ತೆ. ಮೇಕಿಂಗ್ ವಿಚಾರದಲ್ಲಿ ಅಂತಹ ವ್ಯತ್ಯಾಸ ಏನು ಇಲ್ಲ. ಸಿನಿಮಾಗಿಂತ ಚೆನ್ನಾಗಿ ವೆಬ್ ಸೀರಿಸ್ ಕ್ಯಾನ್ವಾಸ್ ಇರಬಹುದು. ಎಷ್ಟರಮಟ್ಟಿಗೆ ರೀಚ್ ಆಗುತ್ತದೆ ಎನ್ನುವುದು ಮುಖ್ಯವಾಗುತ್ತದೆ.
'ಸೀತಾರಾಮ್ ಬಿನೋಯ್' ಸಿನಿಮಾ ಬಗ್ಗೆ ಹೇಳಿ
'ಸೀತಾರಾಮ್ ಬಿನೋಯ್' ಸಿನಿಮಾ ಮಾಡಿದ್ದು ನನ್ನ ವೃತ್ತಿಜೀವನಕ್ಕೆ ತಿರುವು ಕೊಟ್ಟ ಸಿನಿಮಾ. ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿದ್ದು ನನ್ನ ಪುಣ್ಯ. ಜನ ಸಿನಿಮಾ ನೋಡಿ ಬಹಳ ಇಷ್ಟಪಟ್ಟಿದ್ದರು. ಈಗಾಗಲೇ ಅದಕ್ಕೆ ಪ್ರೇಕ್ಷಕರ ವರ್ಗ ಇದೆ. ಈ ಸಿನಿಮಾ ಮೂಲಕ ಮತ್ತಷ್ಟು ಹೆಚ್ಚಾಗಬೇಕು. 1 ರೂಪಾಯಿಗೆ ಪ್ರೀಮಿಯರ್ ಶೋ ಮಾಡುವ ಹಿಂದಿನ ಉದ್ದೇಶ ನಿಮ್ಮ 1 ರೂಪಾಯಿಗೂ ಕೂಡ ಸಿನಿಮಾ ಮೋಸ ಮಾಡಲ್ಲ ಅನ್ನೋದನ್ನು ಹೇಳಬೇಕಿತ್ತು. ಸಿನಿಮಾ ಬಗ್ಗೆ ಬಹಳ ಖುಷಿ, ಕಾತರ ಇದೆ.
ಆ ಚಿತ್ರಕ್ಕೂ ಈ ಚಿತ್ರಕ್ಕೂ ನಟನೆಯಲ್ಲಿ ಏನಾದರೂ ಸವಾಲು ಇತ್ತಾ?
ಅದೇ ಪಾತ್ರವನ್ನೇ ಇಲ್ಲಿ ಮುಂದುವರೆಸಿದ್ದೀನಿ. ಪಾತ್ರಕ್ಕೆ ಇರುವ ವ್ಯಕ್ತಿತ್ವದಲ್ಲಿ ಸಣ್ಣ ಬದಲಾವಣೆ. ಅದನ್ನು ಬದಲಾವಣೆ ಎನ್ನುವುದಕ್ಕಿಂತ ಪ್ರೋಗ್ರೆಸ್ ಎನ್ನಬಹುದು. ಅದರೊಟ್ಟಿಗೆ ಒಳ್ಳೆ ಚಿತ್ರಕಥೆಯಿದೆ. ಬಹಳ ಸ್ಪೀಡ್ ಇದೆ, ಇಂಟೆನ್ಸ್ ಈ ಚಿತ್ರದಲ್ಲಿದೆ.
ಖಾಕಿ ಖದರ್ ತೋರಿಸುವ ಪಾತ್ರದ ಬಗ್ಗೆ ಏನಂತೀರಾ?
ನನಗೆ ಬಹಳ ಹೆಮ್ಮೆ ಅನಿಸುತ್ತದೆ. ಪೊಲೀಸರನ್ನು ಯಾವ ರೀತಿ ತೋರಿಸಬೇಕು. ಪೊಲೀಸ್ ಗತ್ತು ಅಂದ್ರೆ, ಕೆಲವರು ಸೊಕ್ಕಿನಲ್ಲಿ ಇರುವುದು ಅಂದುಕೊಳ್ತಾರೆ. ಅಲ್ಲ, ಆ ಯೂನಿಫಾರ್ಮ್‌ಗೆ ಘನತೆ, ಗೌರವ ಇದೆ. ಅದನ್ನು ಅದೇ ರೀತಿ ತೋರಿಸ್ಬೇಕು. ಇತ್ತೀಚಿನ ದಿನಗಳಲ್ಲಿ ಅದು ಆಗ್ತಿದೆ. ಅಂತಹ ಪಾತ್ರ ಮಾಡುವುದಕ್ಕೆ ಖುಷಿಯಿದೆ. ನನಗೆ ಸ್ಫೂರ್ತಿ, ನಮ್ಮ ಮಾವ. ನೀವು ಏನೇ ಮಾಡಿದ್ರು ನಮ್ಮಪ್ಪನ ತರ ಕಾಣ್ಸಲ್ಲ ಅಂತ ನಮ್ಮ ವೈಫ್ ಹೇಳ್ತಿದ್ಲು. ಈ ಪಾತ್ರಗಳನ್ನು ನೋಡಿದ್ರೆ, ಅವಳಿಗೆ ಬಹಳ ಖುಷಿ ಆಗ್ತಿತ್ತು. ಪೊಲೀಸ್ ಇಲಾಖೆಗೆ ಇದು ನಾನು ಕೊಡುವ ಗೌರವ, ವಿಶೇಷವಾಗಿ ನಮ್ಮ ಮಾವನಿಗೆ ಗೌರವ ಅನ್ನಿಸುತ್ತೆ.


Click it and Unblock the Notifications











