ಹಣೆಗೆ 'ಸಿಂದೂರ' ಇಟ್ಟುಕೊಂಡು ಕಾನ್ ಚಿತ್ರೋತ್ಸವದಲ್ಲಿ ಕಂಗೊಳಿಸಿದ ಐಶ್ವರ್ಯ ರೈ ..!
ಜಗತ್ತಿನ ಪ್ರಮುಖ ಚಿತ್ರೋತ್ಸವಗಳಲ್ಲಿ ಕಾನ್ ಚಿತ್ರೋತ್ಸವವು ಕೂಡ ಒಂದು. ಫ್ರಾನ್ಸ್ ನಲ್ಲಿ ಪ್ರತಿ ವರ್ಷ ನಡೆಯುವ ಈ ಚಿತ್ರೋತ್ಸವಕ್ಕೆ ಪ್ರಪಂಚದ ಹಲವಾರು ಸಿನಿ ಪ್ರೇಮಿಗಳು ಪಾಲ್ಗೊಳ್ಳುತ್ತಾರೆ. ಈಗಾಗಲೇ 78ನೇ ಕಾನ್ ಫಿಲ್ಮ್ ಫೆಸ್ಟಿವಲ್ ಪ್ರಾರಂಭವಾಗಿದ್ದು, ಈ ಫೆಸ್ಟಿವಲ್ ನಲ್ಲಿ ನಾಯಕಿಯರ ಬೆಕ್ಕಿನ ನಡಿಗೆಯನ್ನ ನೋಡಲು ಜಗತ್ತು ಕಾದು ಕುಂತಿರುತ್ತೆ.ಅದಕ್ಕೆ ಕಾರಣ ನಾಯಕಿಯರು ಹಾಕಿಕೊಳ್ಳುವ ಉಡುಗೆ ತೊಡುಗೆ.
ಪ್ರತಿ ವರ್ಷ ಚಿತ್ರ - ವಿಚಿತ್ರ ಕಾಸ್ಟೂಮ್ ಗಳಲ್ಲಿ ಹಾಲಿವುಡ್ ಅಷ್ಟೇ ಅಲ್ಲ ಬಾಲಿವುಡ್ ನಾಯಕಿಯರು ಕೂಡ ಇಲ್ಲಿ ಪ್ರತ್ಯಕ್ಷರಾಗ್ತಾರೆ. ಆ ಪೈಕಿ ಐಶ್ವರ್ಯ ರೈ ಕೂಡ ಒಬ್ಬರು.

ಒಂದಲ್ಲ.. ಎರಡಲ್ಲ.. ಕಳೆದ 22 ವರ್ಷಗಳಿಂದ ಐಶ್ವರ್ಯ ರೈ ಈ ಕಾನ್ ಚಿತ್ರೋತ್ಸವದ ಭಾಗವಾಗಿದ್ದಾರೆ. ಪ್ರತಿ ಬಾರಿ ತಮ್ಮ ಲುಕ್‌ಗಳಿಂದ ಕಿಕ್ಕೇರಿಸಿದ್ದಾರೆ. ಕೆಲ ಒಮ್ಮೆ ಟ್ರೋಲ್ ಕೂಡ ಆಗಿದ್ದಾರೆ.
ಆದರೆ ಈ ಬಾರಿ ಐಶ್ವರ್ಯ ರೈ ಎಲ್ಲರ ಗಮನ ಸೆಳೆದಿದ್ದಾರೆ. ಅದಕ್ಕೆ ಕಾರಣವಾಗಿದ್ದು ಸಿಂಧೂರ. ಹೌದು. ಪಾಕಿಸ್ತಾನದ ಮೇಲೆ ಭಾರತ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಗೆ ಅನೇಕ ತಾರೆಯರು ತಲೆ ಬಾಗಿದ್ದರು. ಸೇನೆಗೆ ಸೆಲ್ಯೂಟ್ ಹೊಡೆದಿದ್ದರು.
ಈ ಆಪರೇಷನ್ ಸಿಂಧೂರ್ ಬೆಂಬಲವಾಗಿ ಐಶ್ವರ್ಯ ರೈ ತಮ್ಮ ಹಣೆಗೆ ಸಿಂಧೂರ ಧರಿಸಿ ಈ ಬಾರಿಯ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದಾರೆ ಎನ್ನುವುದು ಸದ್ಯಕ್ಕೆ ವ್ಯಕ್ತವಾಗುತ್ತಿರುವ ಸಾರ್ವತ್ರಿಕ ಅಭಿಪ್ರಾಯ.
ಇನ್ನು ಕಳೆದ ಹಲವು ದಿನಗಳಿಂದ ಐಶ್ವರ್ಯ ರೈ ವ್ಯೆಯಕ್ತಿಕ ಜೀವನ ಚರ್ಚೆಯಲ್ಲಿದೆ. ಅಭಿಷೇಕ್ ಬಚ್ಚನ್ ಅವರಿಂದ ಐಶ್ವರ್ಯ ರೈ ದೂರವಾಗಲಿದ್ಧಾರೆ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ. ಹಣೆಗೆ ಸಿಂದೂರ ಇಟ್ಟುಕೊಂಡು ಕಾನ್‌ನಲ್ಲಿ ಭಾಗವಹಿಸುವ ಮೂಲಕ ತಮ್ಮ ಡಿವೋರ್ಸ್ ವದಂತಿಗಳಿಗೆ ಕೂಡ ಐಶ್ವರ್ಯ ರೈ ಉತ್ತರವನ್ನು ನೀಡಿದ್ದಾರೆ ಎನ್ನುವ ಮಾತು ಕೂಡ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಐಶ್ವರ್ಯ ರೈ ಅವರ ಈ ಕಾನ್ ಲುಕ್ ಕುರಿತು ಚರ್ಚೆ ಶುರುವಾಗಿದೆ.
ಅಂದ್ಹಾಗೇ ಐಶ್ವರ್ಯ ರೈ ಅವರ ಈ ಕಾಸ್ಟೂಮ್‌ನ ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ್ಧಾರೆ. ಐಶ್ವರ್ಯ ಸೀರೆಗೆ ರಾಯಲ್ ಲುಕ್ ನೀಡಲು ಉದ್ದನೆಯ ನೆಟ್ ದುಪ್ಪಟ್ಟಾವನ್ನು ಕೂಡ ಇಲ್ಲಿ ಸೇರಿಸಲಾಗಿದೆ. ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿರುವ ಈ ಆಫ್ ವೈಟ್ ಮತ್ತು ಗೋಲ್ಡನ್ ಸೀರೆಯನ್ನು ಧರಿಸಿ ಐಶ್ವರ್ಯ ರೈ ಕಾನ್ ಚಿತ್ರೋತ್ಸವದಲ್ಲಿ ಈ ಬಾರಿ ಮಿಂಚಿದ್ದಾರೆ. ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ ರಾಣಿಯಂತೆ ಕಂಗೊಳಿಸಿದ್ದಾರೆ.
ಇನ್ನುಳಿದಂತೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಐಶ್ವರ್ಯ ರೈ ಅವರ ಜೊತೆ ಅವರ ಮಗಳು ಆರಾಧ್ಯ ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ತೆರಳಿದ್ದಾರೆ. ಇನ್ನು ಫ್ರಾನ್ಸ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಎಂದು ಮೊದಲು ಗುರುತಿಸಿಕೊಂಡಿದ್ದ ಈ ಕಾನ್ ಚಿತ್ರೋತ್ಸವ ಪ್ರತಿ ವರ್ಷ ಮೇನಲ್ಲಿ ನಡೆಯುತ್ತೆ.
ವಾರಗಳ ಕಾಲ ನಡೆಯುವ ಈ ಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಕನಸನ್ನು ಹಲವರು ಕಾಣುತ್ತಾರೆ. ಆದರೆ. ಎಲ್ಲರಿಗೆ ಇಲ್ಲಿ ಅವಕಾಶ ಸಿಗುವುದಿಲ್ಲ. ಕಂಡ ಕಂಡವರಿಗೆಲ್ಲ ಆಹ್ವಾನ ನೀಡಲಾಗುವುದಿಲ್ಲ. ಅಳೆದು ತೂಗಿ ಕೆಲವೇ ಕೆಲವರಿಗೆ ಮಾತ್ರ ಆಹ್ವಾನವನ್ನು ನೀಡಲಾಗುತ್ತೆ. ಆ ಕೆಲವರಲ್ಲಿ ಐಶ್ವರ್ಯ ರೈ ಕೂಡ ಒಬ್ಬರು. 2002ರಿಂದ ಕಾನ್‌ನಲ್ಲಿ ಐಶ್ವರ್ಯ ರೈ ಭಾಗವಹಿಸುತ್ತಿದ್ದಾರೆ. ಸದ್ಯ ಐಶ್ವರ್ಯ ರೈ ಅವರ ಈ ಬಾರಿಯ ಕಾನ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.


Click it and Unblock the Notifications











