Cannes 2025 ; ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ಕನ್ನಡತಿ, ಅಮ್ಮನ ಸೀರೆಯನ್ನೇ ಗೌನ್ ಮಾಡಿಕೊಂಡ ದಿಶಾ ಮದನ್..!
ಜಗತ್ತಿನ ಪ್ರಮುಖ ಸಿನಿಮೋತ್ಸವಗಳಲ್ಲಿ ಕಾನ್ ಚಿತ್ರೋತ್ಸವವು ಒಂದು. ಫ್ರಾನ್ಸ್ ನಲ್ಲಿ ಪ್ರತಿ ವರ್ಷ ನಡೆಯುವ ಈ ಚಿತ್ರೋತ್ಸವಕ್ಕೆ ಪ್ರಪಂಚದ ಹಲವಾರು ಸಿನಿ ಪ್ರೇಮಿಗಳು ಪಾಲ್ಗೊಳ್ಳುತ್ತಾರೆ.ಈಗಾಗಲೇ 78ನೇ ಕಾನ್ ಫಿಲ್ಮ್ ಫೆಸ್ಟಿವಲ್ ಪ್ರಾರಂಭವಾಗಿದ್ದು, ಈ ಫೆಸ್ಟಿವಲ್ ನಲ್ಲಿ ನಾಯಕಿಯರ ಬೆಕ್ಕಿನ ನಡಿಗೆಯನ್ನ ನೋಡಲು ಜಗತ್ತು ಕಾದು ಕುಂತಿರುತ್ತೆ. ಅದಕ್ಕೆ ಕಾರಣ ನಾಯಕಿಯರು ಹಾಕಿಕೊಳ್ಳುವ ಉಡುಗೆ ತೊಡುಗೆ.
ಪ್ರತಿ ವರ್ಷ ಚಿತ್ರ - ವಿಚಿತ್ರ ಕಾಸ್ಟೂಮ್ ಗಳಲ್ಲಿ ಹಾಲಿವುಡ್ ಅಷ್ಟೇ ಅಲ್ಲ ಬಾಲಿವುಡ್ ನಾಯಕಿಯರು ಕೂಡ ಇಲ್ಲಿ ಪ್ರತ್ಯಕ್ಷರಾಗ್ತಾರೆ. ಇಂತಹ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಬಾರಿ ಕನ್ನಡತಿ ದಿಶಾ ಮದನ್ ಭಾಗಿಯಾಗಿದ್ದಾರೆ. ಈ ಮೂಲಕ ಸಪ್ತಸಾಗರದಾಚೆ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ವಿಶೇಷ ಅಂದರೆ ತಮ್ಮ ಅಮ್ಮನ ಸೀರೆಯನ್ನೇ ಗೌನ್ ಮಾಡಿಕೊಂಡು ದಿಶಾ ಮದನ್ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಂಗೊಳಿಸಿದ್ದಾರೆ.

ಅಮ್ಮನ ಸೀರೆಗೆ ಹೊಸ ರೂಪ ನೀಡಿ ಸ್ಪೈಲಿಶ್ ಆದ ಗೌನ್ ಮಾಡಿಸಿಕೊಂಡಿರುವ ದಿಶಾ ಮದನ್ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಾನು ನನ್ನ ತಾಯಿಯ ಪ್ರೀತಿ ನನ್ನ ಕುಟುಂಬದ ಪರಂಪರೆ ಮತ್ತು ತಲೆಮಾರುಗಳ ಶಕ್ತಿಯ ಪ್ರತೀಕದಂತಿರುವ ಈ ಆರು ಗಜದ ಸೀರೆಯನ್ನು ಧರಿಸಿ ಕಾಲಿಡುತ್ತಿದ್ದೇನೆ ಎಂದು ಹೇಳಿದ್ದಾರೆ. ನನ್ನ ತಾಯಿಯ ದಶಕದಷ್ಟು ಹಳೆಯದಾದ ಶುದ್ಧ ರೇಷ್ಮೆ ಜರಿ ಕಾಂಜೀವರಂಗೆ ಹೊಸ ಸ್ಫರ್ಶವನ್ನು ನೀಡಲಾಗಿದ್ದು ಪ್ರತಿಯೊಂದು ನೆನಪುಗಳು ನನ್ನ ಜೊತೆಗಿವೆ ಎಂದು ಹೇಳಿದ್ದಾರೆ.
ಇನ್ನು ತಾಯಿಯ ಸೀರೆಯನ್ನು ಗೌನ್ ಮಾಡಿಸಿ ಧರಿಸಿರುವ ದಿಶಾ ಮದನ್ ತಮ್ಮ ಅಜ್ಜಿ ಧರಿಸಿದ್ದ ಆಭರಣಗಳನ್ನು ಕೂಡ ಧರಿಸಿ ಕಾನ್‌ನಲ್ಲಿ ಮಿಂಚಿದ್ದಾರೆ. 30 ವರ್ಷ ಹಳೆಯದಾದ ಲಕ್ಷ್ಮಿ ಪೆಂಡೆಂಟ್‌ನ್ನು ಕೂಡ ಧರಿಸಿದ್ದಾರೆ. ಮುಂದುವರೆದು ಇದು ಕೇವಲ ಫ್ಯಾಷನ್ ಅಲ್ಲ ನಾನು ಎಲ್ಲಿಂದ ಬಂದಿದ್ದೇನೆ ಎನ್ನುವುದರ ಬಗ್ಗೆ, ನನ್ನನ್ನು ರೂಪಿಸಿದ ಮಹಿಳೆಯರ ಬಗ್ಗೆ ಎಂದು ಹೇಳಿರುವ ದಿಶಾ #FromKarnatakaToCannes ಎಂಬ ಹ್ಯಾಶ್ ಟ್ಯಾಗ್‌ನ್ನು ಬಳಸಿದ್ದಾರೆ. ಈ ಮೂಲಕ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಕೇವಲ ಇದು ಮಾತ್ರವಲ್ಲ 2017ರಲ್ಲಿ ತಮ್ಮ ಮದುವೆಯಲ್ಲಿ ಹಾಕಿಕೊಂಡಿದ್ದ ಸೀರೆಗೆ ಕೂಡ ಹೊಸ ಸ್ಫರ್ಶವನ್ನು ದಿಶಾ ನೀಡಿದ್ದಾರೆ. ಈ ಸೀರೆ ಮತ್ತು ಬ್ಲೌಸ್ ಎರಡೂ ನನ್ನ ಪಾಲಿಗೆ ತುಂಬಾ ವಿಶೇಷ. Hand-Embroidered ಈ ಸೀರೆ ಮತ್ತು ಬ್ಲೌಸ್ ಇದು ಎಂದು ದಿಶಾ ಮದನ್ ಬರೆದುಕೊಂಡಿದ್ದಾರೆ.
ಕಾನ್ ಫಿಲ್ಮ್ ಫೆಸ್ಟಿವಲ್ ಅಂಗಳದಲ್ಲಿ ಮಿಂಚಿದ್ದಾರೆ.
ಅಂದ್ಹಾಗೇ ಪ್ರತಿ ವರ್ಷ ಮೇನಲ್ಲಿ ನಡೆಯುವ ಈ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಂಡ ಕಂಡವರಿಗೆಲ್ಲ ಆಹ್ವಾನ ನೀಡಲಾಗುವುದಿಲ್ಲ. ಅಳೆದು ತೂಗಿ ಕೆಲವೇ ಕೆಲವರಿಗೆ ಮಾತ್ರ ಆಹ್ವಾನವನ್ನು ನೀಡಲಾಗುತ್ತೆ. ಆ ಕೆಲವರಲ್ಲಿ ಬಹುತೇಕರು ಬಾಲಿವುಡ್‌ನವರೇ ಆಗಿರುತ್ತಾರೆ. ಹೀಗಿರುವಾಗ ದಿಶಾ ಮದನ್ ಕಾನ್ ವೇದಿಕೆಯವರೆಗೆ ತಲುಪಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.
ಇನ್ನುಳಿದಂತೆ ಈ ವರ್ಷ ಮೇ 13ರಂದು ಶುರುವಾದ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 24ರವರೆಗೆ ನಡೆಯಲಿದೆ. ದಿಶಾ ಮದನ್ ಅವರ ಈ ಕಾನ್ ಫಿಲ್ಮ್ ಫೆಸ್ಟಿವಲ್ ಲುಕ್‌ಗಳನ್ನು ನಿಧಿ ಸುಬ್ಬಯ್ಯ, ಸಂಯುಕ್ತಾ ಹೆಗ್ಡೆ, ಮೇಘನಾ ರಾಜ್ ಸೇರಿ ಕನ್ನಡ ಚಿತ್ರರಂಗದ ಮತ್ತು ಕಿರುತೆರೆಯ ಅನೇಕ ಕಲಾವಿದರು ಮೆಚ್ಚಿಕೊಂಡಿದ್ದಾರೆ. ಸದ್ಯ 'ಲಕ್ಷ್ಮಿ ನಿವಾಸ' ಸೀರಿಯಲ್‌ನಲ್ಲಿ ಭಾವನಾ ಪಾತ್ರದಲ್ಲಿ ದಿಶಾ ಮದನ್ ಅಭಿನಯಿಸುತ್ತಿದ್ದು ತಮ್ಮ ಅಭಿನಯದಿಂದ ಅನೇಕರ ಹೃದಯವನ್ನು ಗೆದ್ದಿದ್ದಾರೆ.


Click it and Unblock the Notifications











