ಆಧ್ಯಾತ್ಮದ ಅನುಭೂತಿ, 7.5 ಗಂಟೆ ಟ್ರೆಕ್ಕಿಂಗ್ ; ಮೇಘನಾ ಗಾಂವ್ಕರ್ ಭೂತಾನ್ ಅನುಭವ, ಮಿಸ್ ಮಾಡಬೇಡಿ ಈ 5 ಹಾಟ್ ಸ್ಪಾಟ್ಸ್
ಒತ್ತಡದ ಬದುಕಿನಲ್ಲಿ ಮನಸು ಹಗುರ ಮಾಡಿಕೊಳ್ಳಲು ಇರುವ ಆಯ್ಕೆಗಳಲ್ಲಿ ಪ್ರವಾಸ ಕೂಡ ಒಂದು. ಬದಲಾದ ಈ ಕಾಲದಲ್ಲಿ ಹಲವರು ಪ್ರವಾಸ ಪ್ರಿಯರಾಗಿದ್ಧಾರೆ. ಕೆಲವರಿಗೆ ಇದು ಹವ್ಯಾಸ ಮತ್ತೂ ಕೆಲವರಿಗೆ ಅಭ್ಯಾಸ. ಇನ್ನು ಪ್ರವಾಸ ಅಂದರೆ ಪ್ರದಕ್ಷಣೆಯೂ ಅಲ್ಲ. ಪ್ರದರ್ಶನವೂ ಅಲ್ಲ. ಪ್ರವಾಸ ಅಂದರೆ ಪ್ರಕೃತಿಯ ಮಡಿಲಲ್ಲಿ ಮೈಮರೆತು ನವಚೈತನ್ಯವನ್ನು ಪಡೆದುಕೊಳ್ಳುವ ಅದ್ಭುತ ಅನುಭವ.
ಇಂತಹ ಅನುಭವವನ್ನು ಚಿತ್ರರಂಗದಲ್ಲಿ ಹಲವರು ಪಡೆಯುತ್ತಾರೆ. ಚೂರು ಸಮಯ ಸಿಕ್ಕರೂ ಸಾಕು ಹೆಸರು, ಕೀರ್ತಿ, ಸೋಕಿಸಿಕೊಂಡ ತಾರೆಯರು ರಿಫ್ರೆಶ್ ಆಗಲು ಫ್ಲೈಟ್ ಹತ್ತುತ್ತಾರೆ. ಅದೆಲ್ಲೋ ದೂರದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಶಾಂತಿ ನೆಮ್ಮದಿಯ ಹುಡುಕಾಟ ನಡೆಸುತ್ತಾರೆ.

ಇನ್ನೂ ಕೆಲವರು ತಾವು ತೆರಳಿರುವ ಜಾಗವನ್ನು ಎಕ್ಸ್‌ಪ್ಲೋರ್ ಮಾಡುತ್ತಲೇ ಅಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯ ಕಲಿಯುವ ವಿದ್ಯಾರ್ಥಿಯಾಗುತ್ತಾರೆ. ಕ್ಯಾಮರಾ ಕಣ್ಣಿನ ಮೂಲಕ ಪ್ರಪಂಚ ನೋಡುವುದಕ್ಕೂ ಮೊದಲು ತಮ್ಮ ಕಣ್ಣಾರೆ ಆ ಸೌಂದರ್ಯವನ್ನು ಆಸ್ವಾದಿಸುತ್ತಾರೆ.
ಆ ನಂತರ ತಪ್ಪದೇ ತಮ್ಮ ಮೊಬೈಲ್‌ನಲ್ಲಿ ಫೋಟೊ ಕ್ಲಿಕಿಸಿಕೊಂಡು ತಮ್ಮ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಉದಾಹರಣೆಗೆ ಮೇಘನಾ ಗಾಂವ್ಕರ್.
ಹೌದು, ಮೇಘನಾ ಗಾಂವ್ಕರ್.. ಕಲಬುರ್ಗಿಯ ಕುಮಾರಿ. ಶ್ರೀ ಶರಣ ಬಸವೇಶ್ವರ ವಸತಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಬೆಂಗಳೂರಿನ ಮಹಾವೀರ್ ಜೈನ್ ಕಾಲೇಜ್‌ನಲ್ಲಿ ವಾಣಿಜ್ಯ ಪದವಿಯನ್ನು ಪಡೆದ ಮೇಘನಾ ಗಾಂವ್ಕರ್ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಕೂಡ ಪಡೆದಿದ್ದಾರೆ. ಮುಂಬೈ ವಿಶ್ವವಿದ್ಯಾಲಯದಲ್ಲಿ ಸಿನಿಮಾ ಮತ್ತು ಸಾಹಿತ್ಯ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಕೂಡ ಪಡೆದಿದ್ದಾರೆ. ಈ ಮೂಲಕ ತಮ್ಮ ತಂದೆಯ ಕನಸನ್ನು ನನಸು ಮಾಡಿದ್ದಾರೆ.
ಆದರ್ಶ ಫಿಲ್ಮ್ ಇನ್ಸ್ ಟ್ಯೂಟ್ ನಲ್ಲಿ ಡಿಪ್ಲೋಮೋ ಇನ್ ಆ್ಯಕ್ಟಿಂಗ್ ಅಂಡ್ ಮೇಕಿಂಗ್ ಕೋರ್ಸ್ ಪೂರೈಸಿ, ಆ ನಂತರ ''ಕುಮುದ'' ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದು ತಮ್ಮಲ್ಲಿನ ಪ್ರತಿಭೆಯಿಂದ ಬೆಳ್ಳಿತೆರೆಗೆ ಕೂಡ ಲಾಂಗ್ ಜಂಪ್ ಮಾಡಿದ ಮೇಘನಾ, ''ನಮ್ ಏರಿಯಾಲ್ಲೊಂದಿನ'', ''ವಿನಾಯಕ ಗೆಳೆಯರ ಬಳಗ'', ''ತುಘಲಕ್'', ''ಸಿಂಪಲ್ಲಾಗೊಂದು ಇನ್ನೊಂದು ಲವ್ ಸ್ಟೋರಿ''..''ಛೂ ಮಂತರ್''.. ''ದಿ ಜಡ್ಜ್‌ಮೆಂಟ್''.. ''ಶಿವಾಜಿ ಸುರತ್ಕಲ್ 2''.. ''ಕಾಳಿದಾಸ ಕನ್ನಡ ಮೇಷ್ಟ್ರು''.. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರ ''ಚಾರ್ ಮಿನಾರ್'' ಮರೆಯೋದುಂಟೆ..?

ಇಂಥಾ ಮೇಘನಾ ಗಾಂವ್ಕರ್ ಗೆ ಪ್ರವಾಸ ಅಂದರೆ ಮೊದಲಿಂದ ಅಚ್ಚು ಮೆಚ್ಚು. ಸಮಯ ಸಿಕ್ಕಾಗೆಲ್ಲಾ ಸಪ್ತಸಾಗರದಾಚೆಯೇ ಕಾಣಿಸುವ ಮೇಘನಾ ಕಳೆದ ತಿಂಗಳು ಮಿಸ್ಟಿಕಲ್ ಕಿಂಗ್‌ಡಮ್ ಎಂದೇ ಕರೆಯಲ್ಪಡುವ 'ಭೂತಾನ್'ಗೆ ಹೋಗಿದ್ದರು.
ನೆನಪಿರಲಿ, ಭೂತಾನ್ ಅಂದರೆ ಕೇವಲ ಪ್ರಕೃತಿಯ ಸೌಂದರ್ಯದ ತಾಣವಲ್ಲ. ಬದಲಿಗೆ ಜನರ 'ಸಂತೋಷ' ಈ ರಾಷ್ಟ್ರದ ಸಂಪತ್ತು. ಹಿಮಾಲಯದ ಹಿಮದ ಶಿಖರಗಳ ನಡುವೆ ನೆಲೆಸಿರುವ ಪ್ರಾಚೀನ ಬೌದ್ಧ ವಿಹಾರಗಳು ಮತ್ತು ಪ್ರಕೃತಿಯ ಮೇಲಿರುವ ಅಪಾರ ಗೌರವ ಇಲ್ಲಿನ ಕಾನೂನಿನಲ್ಲೇ ಹಾಸುಹೊಕ್ಕಂತೆ ಇದೆ.
ತಮ್ಮ ಈ ಸೋಲೋ ಟ್ರಿಪ್ ನ ಅನುಭವವನ್ನು ನಿಮ್ಮ ''ಫಿಲ್ಮಿಬೀಟ್ ಕನ್ನಡ''ದ ವಿಶೇಷ ಸರಣಿ ''ಸೆಲೆಬ್ರಿಟಿ ಟ್ರಾವೆಲ್ ಡೈರಿಸ್''ಗಾಗಿ ಮೇಘನಾ ಗಾಂವ್ಕರ್ ಹಂಚಿಕೊಂಡಿದ್ದಾರೆ. ತಮ್ಮ ಭೂತಾನ್ ಪ್ರವಾಸದ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಥಿಂಪು ನಗರದ ಸುಂದರ ರಸ್ತೆಗಳಿಂದ ಹಿಡಿದು, ಏಳೂವರೆ ಗಂಟೆಗಳ ಕಾಲ ನಡೆಸಿದ ಕಠಿಣ ಪರ್ವತಾರೋಹಣ ಮತ್ತು ತಮ್ಮೊಳಗೆ ಉಂಟಾದ ಆಧ್ಯಾತ್ಮಿಕ ಜಾಗೃತಿಯ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಹಾಗಿದ್ದರೆ ಹೇಗಿತ್ತು ಮೇಘನಾ ಗಾಂವ್ಕರ್ ಭೂತಾನ್ ಪ್ರವಾಸ..? ಅಲ್ಲಿನ ವಿಶೇಷತೆಗಳೇನು..? ವೈಶಿಷ್ಟತೆಗಳೇನು..? ದುಡ್ಡು ತುಂಬಾ ಖರ್ಚಾಗುತ್ತಾ..? ನೋಡಲೇಬೇಕಾದ 5 ಸ್ಥಳಗಳು ಯಾವುವು..? ಇವೆಲ್ಲ ವಿಚಾರಗಳನ್ನು ತಿಳಿಯಲು ಮುಂದೆ ಓದಿ.
ನೀವು ಕಂಡಂತೆ ಹೇಗಿದೆ ಭೂತಾನ್ ?
''ನಿಜ ಹೇಳಬೇಕು ಅಂದರೆ, ಭೂತಾನ್ ಗಡಿಯನ್ನು ಪ್ರವೇಶ ಮಾಡುತ್ತಿದ್ದಂತೆಯೇ ನನ್ನ ಮನದ ಮೂಲೆಯಲ್ಲಿ ಅರಳಿದ್ದೇ ಶಾಂತಿ. ತುಂಬಾನೇ ನೆಮ್ಮದಿ ಮತ್ತು ತೃಪ್ತಿದಾಯಕವಾದ ಅನುಭವ. ಯಾಕೆಂದರೆ ನನ್ನ ಜೀವನದಲ್ಲಿ ನಾನು ಇಲ್ಲಿಯವರೆಗೆ ಹಲವಾರು ದೇಶಕ್ಕೆ ಹೋಗಿದ್ದೇನೆ, ಆದರೆ ನಾವು ಯಾವ ದೇಶಕ್ಕೆ ಹೋದರೂ ಕೂಡ ಟ್ಯಾಕ್ಸಿ ಮಾಡಬೇಕು, ಹೋಟೆಲ್ ತಲುಪಬೇಕೆಂಬ ತರಾತುರಿ ಇರುತ್ತೆ. ಬೇರೆ ಕಡೆ ಹೋದ ತಕ್ಷಣ ಒಂದು ರೀತಿಯ ಗಲಿಬಿಲಿಯ ವಾತಾವರಣ ಇರುತ್ತೆ. ಆದರೆ ಭೂತಾನ್ ಹಾಗಲ್ಲ. ನನ್ನ ಮೈಂಡ್ ತುಂಬಾನೇ ರಿಲ್ಯಾಕ್ಸ್ ಆಗಿತ್ತು. ಅತ್ಯಂತ ನೆಮ್ಮದಿಯಿಂದ ನಾನು ಪ್ರವೇಶ ಮಾಡಿದ ಮೊದಲ ದೇಶ ಭೂತಾನ್. ಅದಕ್ಕೆ ಕಾರಣ ಅಲ್ಲಿನ ಜನ ಮತ್ತು ವಾತಾವರಣ''.

ಭಾರತ ಮತ್ತು ಭೂತಾನ್ ನಾಗರೀಕ ಪ್ರಜ್ಞೆಯ ಬಗ್ಗೆ ಮಾತನಾಡೋದಾದರೆ ..?
''ಅಜಗಜಾಂತರ ವ್ಯತ್ಯಾಸ ಇದೆ.ಸ್ವಚ್ಚತೆಗೆ ಅಲ್ಲಿ ತುಂಬಾ ಆದ್ಯತೆ ಕೊಡ್ತಾರೆ. ಎಲ್ಲರಿಗೂ ಅವರವರ ಜವಾಬ್ದಾರಿಯ ಅರಿವು ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಪ್ರಕೃತಿಯೇ ದೇವರು. ಜಾಗತೀಕರಣದ ಈ ಕಾಲದಲ್ಲಿ ನಮ್ಮಲ್ಲಿ ಕಾಂಕ್ರೀಟ್ ನಾಡು ನಿರ್ಮಾಣವಾಗುತ್ತಿದೆ. ಆದರೆ ಅಲ್ಲಿ ಶೇಕಡಾ 60% ಪ್ರದೇಶ ಅರಣ್ಯಗಳಿಂದ ಆವೃತವಾಗಿದೆ. ಮರ-ಗಿಡ-ಕಾಡು, ಪ್ರಕೃತಿಯ ಯಾವ ವಿಚಾರದಲ್ಲೂ ಅಲ್ಲಿ ಯಾರು ರಾಜಿ ಆಗುವುದಿಲ್ಲ. ಹೀಗಾಗಿ ಪ್ರಕೃತಿ ಅಲ್ಲಿ ನಮಗೆ ಇನ್ನೂ ಸುಂದರವಾಗಿ ಕಾಣಿಸುತ್ತೆ''.
ಟೈಗರ್ ನೆಸ್ಟ್ ಟ್ರೆಕ್ಕಿಂಗ್ ಅನುಭವ ಹೇಗಿತ್ತು..?
''ವರ್ಣಿಸಲು ಅಸಾಧ್ಯ.. ಮರೆಯಲಾಗದ ಅನುಭವ. ನೀವು ನಂಬ್ತೀರಾ ..? ಬಿಡ್ತೀರಾ..? ಎನ್ನುವುದು ನಿಮಗೆ ಬಿಟ್ಟಿದ್ದು. ಆದರೆ 7.5 ಗಂಟೆಯ ಚಾರಣ ಅದು. ತುಂಬಾನೇ ಕಷ್ಟಕರವಾದ ಟ್ರೆಕ್ಕಿಂಗ್ ಅದು. ಹೀಗಾಗಿಯೇ ನಾನು ಉದ್ದೇಶಪೂರ್ವಕವಾಗಿ ಕೊನೆಯ ದಿನ ಟ್ರೆಕ್ಕಿಂಗ್ ಪ್ಲ್ಯಾನ್ ಮಾಡಿದ್ದೆ''.
''ಬೆಳಗ್ಗೆ ಸುಮಾರು 7-30 ಅಥವಾ 8 ಇರಬೇಕು. ಆಗ ಬೆಟ್ಟ ಹತ್ತಲು ಶುರು ಮಾಡಿದ್ದೇ. ಮೇಲೆ ತಲುಪಲು ಹೆಚ್ಚು ಕಡಿಮೆ 7.5ಗಂಟೆ ಬೇಕಾಯ್ತು. ತುಂಬಾನೇ ಸಮಯ, ತಾಳ್ಮೆ ಮತ್ತು ದೈಹಿಕ ಶ್ರಮ ಬೇಡುವ ಟಾಸ್ಕ್ ಇದು. ನಿಜಕ್ಕೂ ಕಠಿಣವಾದ ಹಾದಿ''.
ಮೇಲಕ್ಕೇರಿದಂತೆ ಕೆಲವು ಕಡೆ ಉಸಿರಾಡಲು ಕೂಡ ಕಷ್ಟವಾಗುತ್ತಿತ್ತು ನನಗೆ. ಕಾಲಿನ ಕಥೆಯನ್ನಂತೂ ಕೇಳಲೇಬೇಡಿ. ಆದರೆ ನಿಮ್ಮೆಲ್ಲಾ ಈ ದಣಿವು ನಿಮಗೆ ಅಲ್ಲಿ ಕಾಣಿಸುವ ನೈಸರ್ಗಿಕ ಸೌಂದರ್ಯ ದೂರ ಮಾಡುತ್ತೆ. ತುಂಬಾನೇ ಬ್ಯೂಟಿಫುಲ್ ಎಕ್ಸ್ ಫಿರಿಯೆನ್ಸ್''.
ಟ್ರೆಕ್ಕಿಂಗ್ ಮಾರ್ಗ ಮಧ್ಯದಲ್ಲಿ ಊಟೋಪಚಾರ ಹೇಗೆ ?
''ಹಾಗೇ ನೋಡಿದರೆ ನಾನು ಯಾಮಾರಿದ್ದು ಇಲ್ಲೇ. ಇಡೀ 7.5ಗಂಟೆ ಪ್ರಯಾಣದಲ್ಲಿ ಕೇವಲ ಒಂದೇ ಒಂದು ಕೆಫೆ ಸಿಗುತ್ತೆ. ನನ್ನ ದುರಾದೃಷ್ಟ ಏನೆಂದರೆ ಅದು ಕೂಡ ನಾನ್ ವೆಜ್ ಕೆಫೆ. ನಾನು ಪಕ್ಕಾ ಸಸ್ಯಾಹಾರಿ. ಹೀಗಾಗಿ ಬೇರೆ ದಾರಿ ಇಲ್ಲದೇ ಕಾಫಿ ಮತ್ತು ಬಿಸ್ಕೆಟ್ ಮಾತ್ರ ನನಗೆ ದಕ್ಕಿದ್ದು. ಅದನ್ನೇ ತಿನ್ಕೊಂಡು ಟ್ರೆಕ್ಕಿಂಗ್ ಮಾಡಿದೆ''.
''ಮತ್ತೊಂದು ವಿಪರ್ಯಾಸವೆಂದರೆ ನಾನು ತಂಗಿದ್ದ ಹೋಟೆಲ್ ನವರು ಫುಡ್ ಫ್ಯಾಕ್ ಮಾಡಿ ಕೊಡ್ತೀವಿ ಅಂತ ಹೇಳಿದ್ದರು. ಆದರೆ ನಾನೇ ಬೆಳಗ್ಗೆ ತಿಂಡಿ ಕೂಡ ಮಾಡದೇ ಅಯ್ಯೋ ಅಲ್ಲೇ ತಿಂತೀನಿ ಬಿಡಿ ಬೇಡ ಅಂತೇಳಿ ಕೊನೆಗೆ ಬಂದು ತಗ್ಲಾಕೊಂಡೆ.ಸಸ್ಯಾಹಾರಿಗಳು ತಮ್ಮ ಬ್ಯಾಗ್‌ನಲ್ಲಿ ಎನರ್ಜಿ ಬಾರ್, ಬನಾನ ಇಟ್ಟುಕೊಳ್ಳುವುದು ಒಳ್ಳೆಯದು''.
ಹೋಗಲಿ ಬೆಟ್ಟದ ತುದಿಯಲ್ಲಿ ಏನಿದೆ..? ಅಲ್ಲಿನ ಅನುಭವ..?
''ಆ ಜಾಗಕ್ಕೆ ಟೈಗರ್ ನೆಸ್ಟ್ ಎಂದು ಕರೆಯುತ್ತಾರೆ. 7.5 ಗಂಟೆ ಟ್ರೆಕ್ಕಿಂಗ್ ಮಾಡಿದ ನಂತರ ನಮಗೆ ಸಿಗುವ ಅತ್ಯುತ್ತಮ ತಾಣ ಅದು. ಅಲ್ಲಿನ ಅನುಭವ ವರ್ಣನಾತೀತ. ಈ ಜಾಗದಲ್ಲಿ ಶತಮಾನಗಳ ಹಿಂದೆ ಭಾರತದಿಂದ ಹೋದ 'ಗುರು ರಿಂಪೋಚೆ ಪದ್ಮಸಂಭವ' (ಇವರನ್ನು ಸೆಕೆಂಡ್ ಬುದ್ಧ ಎನ್ನಲಾಗುತ್ತದೆ) ಗುಹೆಯೊಂದರಲ್ಲಿ ಕುಳಿತು ತಪಸ್ಸು ಮಾಡಿದ್ದರು''.
''ಇನ್ನು ನನಗೆ ಆಧ್ಯಾತ್ಮದ ಮೇಲೆ ಮೊದಲಿಂದ ಅಪಾರ ನಂಬಿಕೆಯಿದೆ. ಆ ಗುಹೆಯ ಒಳಗಡೆ ಹೋಗಿ ಅವರು ಧ್ಯಾನ ಮಾಡಿದ ಜಾಗದಲ್ಲಿ ಕೂತಾಗ ನನಗಾದ ಫೀಲಿಂಗ್ ಮಾತ್ರ ಪದಗಳಲ್ಲಿ ಹೇಳಲು ಸಾಧ್ಯ ಇಲ್ಲ. ಅಲ್ಲೊಂದು ರೀತಿಯ ದೈವಿಕ ಶಕ್ತಿ ಇದೆ. ಭೂತಾನ್ ಗೆ ಹೋದವರು ಈ ಟೈಗರ್ ನೆಸ್ಟ್ ಟ್ರೆಕ್ಕಿಂಗ್ ನ ಯಾವುದೇ ಕಾರಣಕ್ಕೂ ಮಿಸ್ ಮಾಡಲೇಬಾರದು. ಮಾಡಿದರೆ ನಿಮ್ಮ ಪ್ರವಾಸ ಅಪೂರ್ಣ''.
ಸೋಲೋ ಟ್ರಿಪ್ ಮಾಡಲು ಇರುವ ಸವಾಲು ಮತ್ತು ಖರ್ಚು ವೆಚ್ಚ
''ನಾನು ಕೂಡ ಒಬ್ಬಳೇ ಹೋಗಿದ್ದೇ. ಆದರೆ ಅಲ್ಲಿ ಸವಾಲುಗಳೇನು ಎದುರಾಗಲಿಲ್ಲ. ಯಾಕೆಂದರೆ ಅಲ್ಲಿನ ನಿಯಮಗಳು ಹಾಗಿವೆ. ಹ್ಞಾಂ.. ಆದರೆ ಜೇಬಲ್ಲಿ ದುಡ್ಡಿರಬೇಕು. ಯಾಕೆಂದರೆ ಅಲ್ಲಿ ನೀವು ಒಬ್ಬರೇ ಎಲ್ಲೆಂದರಲ್ಲಿ ಅಲ್ಲಿ ತಿರುಗಾಡುವಂತೆ ಇಲ್ಲ. ತೀರಾ ಇತ್ತೀಚೆಗೆ ಅಂದರೆ 5-6ವರ್ಷದ ಹಿಂದೆ ಇಂತಹದ್ದೊಂದಯ ನಿಯಮವನ್ನು ಅಲ್ಲಿ ಜಾರಿ ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ''.
''ಅದೇನೆಂದರೆ ಹಿಂದೊಮ್ಮೆ ಅಂದರೆ ಅದೇ ಆರೇಳು ವರ್ಷದ ಹಿಂದೆ ಭಾರತದ ಪ್ರವಾಸಿಯೊಬ್ಬರು ಅಲ್ಲಿನ ಪವಿತ್ರ ಸಾಂಸ್ಕೃತಿಕ 'ಸ್ತೂಪ'ದ ಮೇಲೆ ನಿಂತು ಸೋಶಿಯಲ್ ಮೀಡಿಯಾ ರೀಲ್ಸ್ ಮಾಡಿ ಡ್ಯಾನ್ಸ್ ಮಾಡಿದ್ದರಂತೆ. ನಮ್ಮವನು ಒಬ್ಬರು ಮಾಡಿದ ಈ ಕೆಲಸದಿಂದ ಭೂತಾನ್ ಸರ್ಕಾರ ಮತ್ತು ಅಲ್ಲಿನ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿತ್ತಂತೆ. ಅಂದಿನಿಂದ ಪ್ರತಿಯೊಬ್ಬ ಪ್ರವಾಸಿಗನ ಜೊತೆ ಅಲ್ಲಿನ ಲೋಕಲ್ ಗೈಡ್ ಕಡ್ಡಾಯ ಎಂಬ ನಿಯಮ ಮಾಡಲಾಗಿದೆ''.
''ಈ ನಿಯಮದಡಿ ದಿನವೊಂದಕ್ಕೆ 3000 ಹಣವನ್ನು ನಿಮಗೆ ನಿಯೋಜಿತವಾದ ಗೈಡ್ ಗೆ ನೀವು ನೀಡಲೇಬೇಕು. ಈ ಕಡ್ಡಾಯ ನಿಯಮ ನಿಮ್ಮ ಈ ಪ್ರವಾಸದ ಖರ್ಚನ್ನು ಹೆಚ್ಚಿಸುತ್ತೆ. ಅದೊಂದೇ ಬೇಸರ''.
ಸಂಸ್ಕ್ರತಿ - ಸಂಪ್ರದಾಯ
''ಆಗಲೇ ಹೇಳುದಂತೆ ಅಲ್ಲುನವರಿಗೆ ತಮ್ಮ ಸಂಸ್ಕ್ರತಿ ಮತ್ತು ಸಂಪ್ರದಾಯದ ಮೇಲೆ ಇತಿಹಾಸದ ಮೇಲೆ ಅಪಾರ ಗೌರವ ಮತ್ತು ಹೆಮ್ಮೆಯಿದೆ. ಬೇರೆ ಯಾರೇ ಬಂದು ತಮ್ಮ ಸಂಸ್ಕೃತಿಗೆ ಗೌರವ ಕೊಡದೇ ಇದ್ದರೆ ಅವರು ಅದನ್ನು ಸಹಿಸುವುದಿಲ್ಲ''.
ಸಸ್ಯಾಹಾರಿಯಾದ ನಿಮಗೆ ಅಲ್ಲಿ ಇಷ್ಟವಾದ ಫುಡ್ ಯಾವುದು ?
''ಭೂತಾನ್‌ನ ಸಾಂಪ್ರದಾಯಿಕ ಹಾಗೂ ನ್ಯಾಷನಲ್ ಡಿಶ್ ಆದ 'ಎಮಾದಾತ್ಶಿ' (Ema Datshi) (ಸ್ಥಳೀಯ ಮೆಣಸಿನಕಾಯಿ ಮತ್ತು ಚೀಸ್ ಮಿಕ್ಸ್ ಮಾಡಿ ಅನ್ನದ ಜೊತೆ ತಿನ್ನುವ ಆಹಾರ) ಇಷ್ಟ ಆಯ್ತು. ಬೇರೆ ಆಯ್ಕೆ ಇರಲಿಲ್ಲ (ಹ್ಹ ಹ್ಹ ಹ್ಹ)ನಿಜ ಹೇಳಬೇಕೆಂದರೆ ನನಗೆ ಮೆಣಸಿನಕಾಯಿ ಇಷ್ಟ ಇಲ್ಲ. ಆದರೂ ಪ್ರತಿದಿನ ಅದನ್ನೇ ತಿಂದೆ''.
ಅಂದ್ಹಾಗೇ ಇವೆಲ್ಲದರ ನಡುವೆ, ಭೂತಾನ್‌ನಲ್ಲಿದ್ದಾಗಲೇ ಮೇಘನಾ ಅವರ ಹುಟ್ಟುಹಬ್ಬವೂ ಇತ್ತು. ಒಂಟಿಯಾಗಿ ಬಂದಿದ್ದ ನಟಿಗೆ ಅವರು ತಂಗಿದ್ದ ಹೋಟೆಲ್ ಮಾಲೀಕರು ದೊಡ್ಡ ಸರ್ಪ್ರೈಸ್ ನೀಡಿದರು. ನಿದ್ದೆ ಕಣ್ಣಿನಲ್ಲಿ ಬಂದ ನಟಿಗೆ ಸುಂದರವಾದ ಕೇಕ್ ತರಿಸಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದರು.
ಈ ಕುರಿತು ಕೂಡ ಮಾತನಾಡಿರುವ ಮೇಘನಾ ಅಲ್ಲಿನ ಜನ ತುಂಬಾ ಸ್ವೀಟ್. ಒಬ್ಬರೇ ಬಂದಿದ್ದೀರಾ, ಫ್ಯಾಮಿಲಿ ಇಲ್ಲ ಅಂದ್ರೆ ಏನಂತೆ ನಾವೇ ನಿಮ್ಮ ಫ್ಯಾಮಿಲಿ ಅಂತ ಕೇಕ್ ಕಟ್ ಮಾಡಿಸಿದ್ರು, ಎಂದು ನಿಮ್ಮ " ಫಿಲ್ಮಿಬೀಟ್ ಕನ್ನಡ "ಗೆ ನೀಡಿದ ಸಂದರ್ಶನದಲ್ಲಿ ಭಾವುಕರಾದರು.
ಕೊನೆಯದಾಗಿ ನೀವೇನಾದರೂ ಭೂತಾನ್ ಪ್ರವಾಸ ಪ್ಲಾನ್ ಮಾಡಿದ್ದರೆ, ಮೇಘನಾ ಗಾಂವ್ಕರ್ ನಿಮಗಾಗಿ ಟಾಪ್ 5 ಪ್ರವಾಸಿ ತಾಣಗಳನ್ನು ಶಿಫಾರಸು ಮಾಡಿದ್ದಾರೆ. ಆ ತಾಣಗಳು ಯಾವುವು ಎನ್ನುವ ವಿವರ ಈ ಕೆಳಗಿನಂತೆ ಇದೆ.
ಭೂತಾನ್ ನಲ್ಲಿ ಮೇಘನಾ ಅವರ ಟಾಪ್ 5 ಹಾಟ್ ಸ್ಪಾಟ್
| ಕ್ರ.ಸಂ. | ಪ್ರವಾಸಿ ತಾಣ (ಹಾಟ್ ಸ್ಪಾಟ್) | ವಿವರಣೆ / ವಿಶೇಷತೆ |
|---|---|---|
| 1 | ಟೈಗರ್ಸ್ ನೆಸ್ಟ್ ಮೊನಾಸ್ಟರಿ (ಪಾರೋ) | ಸಾಹಸ ಮತ್ತು ಆಧ್ಯಾತ್ಮ ಇಷ್ಟಪಡುವವರು ಮಿಸ್ ಮಾಡಲೇಬಾರದ ಜಾಗ. |
| 2 | ಬುದ್ಧ ಪಾಯಿಂಟ್ (ಥಿಂಪು) | ರಾಜಧಾನಿ ನಗರದಲ್ಲಿರುವ ಬೃಹತ್ ಬುದ್ಧನ ಪ್ರತಿಮೆ ಮತ್ತು ಸುಂದರ ವ್ಯೂ ಪಾಯಿಂಟ್. |
| 3 | ದುರ್ಗಾ ಟೆಂಪಲ್ (ಥಿಂಪು) | ಮೇಘನಾ ಅವರು ತಮ್ಮ ಹುಟ್ಟುಹಬ್ಬದ ದಿನ ಭೇಟಿ ನೀಡಿ ಆಶೀರ್ವಾದ ಪಡೆದ ಸುಂದರ ದೇವಸ್ಥಾನ. |
| 4 | ಸಿಂಪ್ಲಿ ಭೂತಾನ್ (Simply Bhutan) | ಇದು ಕೇವಲ ವಸ್ತುಗಳನ್ನು ಇಟ್ಟಿರುವ ಮ್ಯೂಸಿಯಂ ಅಲ್ಲ; ಇದೊಂದು 'ಲಿವಿಂಗ್ ಮ್ಯೂಸಿಯಂ'. ಇಲ್ಲಿ ಲೈವ್ ಆಗಿ ಭೂತಾನ್‌ನ ಸಾಂಪ್ರದಾಯಿಕ ನೃತ್ಯ, ಅಡುಗೆ ಶೈಲಿ ಮತ್ತು ಕಲೆಗಳನ್ನು ಕಣ್ಣಾರೆ ಸವಿಯಬಹುದು. |
| 5 | ಪಾರೋ ನಗರದ ಸ್ಥಳೀಯ ಕೆಫೆಗಳು | ಎಲ್ಲಿ ಕುಳಿತರೂ ಪ್ರಕೃತಿಯ ಅದ್ಭುತ ನೋಟ ಸಿಗುವ ಇಲ್ಲಿನ ಕೆಫೆಗಳಲ್ಲಿ ಸಾಂಪ್ರದಾಯಿಕ ಮೊಮೋಸ್ ಸವಿಯುವುದು ಮರೆಯಬೇಡಿ. |
ಇನ್ನೂ ಭಾರತದ ಕರೆನ್ಸಿ ಕಥೆ ಎಲ್ಲರಿಗೆ ಗೊತ್ತಿರುವಂತಹದ್ದೇ. ದಿನದಿಂದ ದಿನಕ್ಕೆ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿಯುತ್ತಲೇ ಇದೆ. ಈ ಹಿನ್ನೆಲೆ ಭೂತಾನ್ ಪ್ರವಾಸಕ್ಕೆ ಹೋದರೆ ಅಲ್ಲಿ ಹಣಕಾಸಿನ ವ್ಯವಹಾರ ಹೇಗೆ..? ಅಲ್ಲಿಯೂ ನಾವು ಹೇಳುವ ಡಿಜಿಟಲ್ ಇಂಡಿಯಾ ಮಂತ್ರದಂತೆ ಡಿಜಿಟಲ್ ಭೂತಾನ್ ಎಂಬ ಮಂತ್ರ ಹೇಳ್ತಾರಾ..? ಎಂಬ ಪ್ರಶ್ನೆಯನ್ನು ಮೇಘನಾ ಅವರಿಗೆ ಕೇಳಲಾಯ್ತು. ಇದಕ್ಕೆ ಅವರು ನೀಡಿದ ಉತ್ತರ ಇಲ್ಲಿದೆ.
ಭಾರತದ ಕರೆನ್ಸಿ VS ಭೂತಾನ್ ಕರೆನ್ಸಿ
ಸಂದರ್ಶನದ ಕೊನೆಯಲ್ಲಿ ಭೂತಾನ್‌ನ ಖರ್ಚು ವೆಚ್ಚಗಳ ಬಗ್ಗೆ ಮಾತನಾಡಿದ ಮೇಘನಾ, ಭಾರತಕ್ಕೆ ಹೋಲಿಸಿದರೆ ಜೀವನ ಶೈಲಿ ಬಹುತೇಕ ಸೇಮ್ ಇದೆ ಎಂದು ಹೇಳಿರುವ ಮೇಘನಾ, ಅತ್ಯಂತ ಖುಷಿಯ ವಿಷಯವೆಂದರೆ ಭೂತಾನ್‌ನಲ್ಲಿ ಭಾರತೀಯ ರೂಪಾಯಿ ಚಲಾವಣೆಯಲ್ಲಿದೆ, ಹಾಗಾಗಿ ಹಣ ಎಕ್ಸ್‌ಚೇಂಜ್ ಮಾಡುವ ಗೋಜಿಲ್ಲ. ಆದರೆ ಅಲ್ಲಿ ಕಾರ್ಡ್ ಬಳಕೆ ಕಡಿಮೆ ಇರುವುದರಿಂದ ಸಾಕಷ್ಟು ಕ್ಯಾಶ್ ಕೈಯಲ್ಲಿಟ್ಟುಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.
ಭೂತಾನ್ ನೋಡಲು ಹೋದರೆ ನಮ್ಮ ಭಾರತದ್ದೇ ಒಂದು ಎಕ್ಸ್‌ಟೆನ್ಷನ್ ತರ ಅನಿಸುತ್ತೆ. ಪಶ್ಚಿಮ ಬಂಗಾಳದ ಕಡೆಯಿಂದ ಲ್ಯಾಂಡ್ ಬಾರ್ಡರ್ ಕ್ರಾಸ್ ಮಾಡಿಯೂ ಹೋಗಬಹುದು ಎಂದು ನಿಮ್ಮ " ಫಿಲ್ಮಿಬೀಟ್ ಕನ್ನಡ"ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೇಘನಾ ಗಾಂವ್ಕರ್ ಹೇಳಿದ್ದಾರೆ.
ಭೂತಾನ್ ಪ್ರವಾಸ ನೀವೇನಾದರೂ ಪ್ಲ್ಯಾನ್ ಮಾಡಿದ್ದರೆ ನಮ್ಮ ಈ ಎಕ್ಸ್ ಕ್ಲೂಸಿವ್ ಸಂದರ್ಶನ ನಿಮಗೆ ಅನುಕೂಲವಾಗುತ್ತೆ, ಸಹಕಾರಿಯಾಗುತ್ತೆ, ಎನ್ನುವುದು ನಮ್ಮ ಭಾವನೆ. ನೀವೇನಂತೀರಾ ? ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.


Click it and Unblock the Notifications