ದುಬೈನಲ್ಲಿ 13 ಸಾವಿರ ಅಡಿ ಎತ್ತರದಿಂದ ಜಿಗಿದ ಭೂಮಿಕಾ ; ರೋಮಾಂಚನಕಾರಿ ಅನುಭವ ಹಂಚಿಕೊಂಡ ನಟಿ
ಪ್ರಯಾಣ ಎಂದರೆ , ಸ್ವಾತಂತ್ರ್ಯ, ನೆಮ್ಮದಿ ಸಂತೋಷಕ್ಕೆ ಇರುವ ದಾರಿ ಎನ್ನುವುದು ಅನೇಕರ ಅಭಿಪ್ರಾಯ. ಹಾಗೇ ನೋಡಿದರೆ ಇದು ನಿಜವೂ ಹೌದು. ಒತ್ತಡದ ಬದುಕಿಂದ ಕೆಲ ಕಾಲ ದೂರ ಸರಿದು ಮನಸ್ಸನ್ನು ಹಗುರವಾಗಿಸಿಕೊಳ್ಳಲು ಪ್ರವಾಸಕ್ಕಿಂತ ಮತ್ತೊಂದು ಮದ್ದಿಲ್ಲ.
ಇನ್ನು ಎಷ್ಟೋ ಮಹಿಳೆಯರಿಗೆ ಪ್ರವಾಸ ಕೇವಲ ಒಂದು ವಿರಾಮವಲ್ಲ, ಅದು ಮಹಿಳೆ ತನ್ನ ಏಕಾಂತದ ಬಿಡುವನ್ನು, ಅಸ್ಮಿತೆಯನ್ನು ಜತೆಗೆ ಮಾನಸಿಕ ನೆಮ್ಮದಿಯನ್ನು ಮರುಪಡೆಯುವ ಸಂಗತಿ. ಇದಕ್ಕೆ ಕೈಗನ್ನಡಿ ಎಂಬಂತೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಸೋಲೋ ಟ್ರಿಪ್ ಸಾಕಷ್ಟು ಸದ್ದು ಮಾಡುತ್ತಿದೆ. ಒಮ್ಮೆ ಭಯವೆನಿಸುತ್ತಿದ್ದ ಸಂಗತಿ ಇಂದು ಭರವಸೆ ಹಾಗೂ ಸ್ವತಂತ್ರದ ಸಂಕೇತವೂ ಆಗಿದೆ. ನಮ್ಮ ಈ ಮಾತುಗಳಿಗೆ ಉದಾಹರಣೆಯಂತೆ ಇರುವ ಭೂಮಿಕಾ ಬಾನೆತ್ತರದಿಂದ ಹಾರಿದ್ದಾರೆ. ಅದು ದೂರದ ದುಬೈನಲ್ಲಿ.

ಹೌದು, ಭೂಮಿಕಾ.. ಕನ್ನಡ ಚಿತ್ರರಂಗದ ಚೆಲುವೆ. ''ಅತಂತ್ರ''.. ''ಹಲೋ ಮಾಮ'' ಸೇರಿ ಕನ್ನಡದಲ್ಲಿ 15ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಭೂಮಿಕಾ ಕನ್ನಡದ ಮೆಗಾ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದಾದ ಡಾ.ವಿಷ್ಣುವರ್ಧನ್ ಅಭಿನಯದ ''ಆಪ್ತಮಿತ್ರ'' ಚಿತ್ರದಲ್ಲಿಯೂ ಕೂಡ ಕಾಣಿಸಿಕೊಂಡಿದ್ದರು.
ಇನ್ನು ಕರುನಾಡಿನಲ್ಲಿ ಇವರು ಜನಜನಿತರಾಗಲು ಇನ್ನೊಂದು ಪ್ರಮುಖ ಕಾರಣ ''ಟಿಕ್ ಟಾಕ್''. ಬಿಡುವಿನ ಸಮಯದಲ್ಲಿ ''ಟಿಕ್ ಟಾಕ್''ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಗಮನ ಸೆಳೆದ ಭೂಮಿಕಾ, ಸದ್ಯದ ಸೋಶಿಯಲ್ ಮೀಡಿಯಾದ ಸಕ್ರಿಯ ಸದಸ್ಯರು ಕೂಡ ಹೌದು.
ಇಂಥಾ ಭೂಮಿಕಾ ತೀರಾ ಇತ್ತೀಚೆಗೆ ದುಬೈ ಸುತ್ತಿಕೊಂಡು ಬಂದಿದ್ದಾರೆ. ಒಂದು ವಾರ ಕಾಲ ಕಳೆದು ಸುಮಧುರ ನೆನಪುಗಳೊಂದಿಗೆ ಮರಳಿದ್ದಾರೆ. ಸದ್ಯ ತಮ್ಮ ಈ ಟ್ರಿಪ್‌ನ ಅನುಭವವನ್ನು ನಿಮ್ಮ ''ಫಿಲ್ಮಿಬೀಟ್ ಕನ್ನಡ''ದ ವಿಶೇಷ ಸರಣಿ ''ಸೆಲೆಬ್ರಿಟಿ ಟ್ರಾವೆಲ್ ಡೈರಿಸ್''ಗಾಗಿ ಭೂಮಿಕಾ ಹಂಚಿಕೊಂಡಿದ್ದಾರೆ. ತಮ್ಮ ದುಬೈ ಪ್ರವಾಸದ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.
ಹಾಗಿದ್ದರೆ ಹೇಗಿತ್ತು ಭೂಮಿಕಾ ಅವರ ದುಬೈ ಪ್ರವಾಸ..? ಅಲ್ಲಿನ ವಿಶೇಷತೆಗಳೇನು..? ವೈಶಿಷ್ಟತೆಗಳೇನು..? ಅಲ್ಲಿನ ಕಾನೂನು ಹೇಗಿದೆ..? ದೂಬೈಗೆ ಅಷ್ಟಕ್ಕೂ ಭೂಮಿಕಾ ಹೋಗಿದ್ದು ಯಾಕೆ..? ಅಲ್ಲಿ ನೋಡಲೇಬೇಕಾದ 5 ಸ್ಥಳಗಳು ಯಾವುವು..? ಇವೆಲ್ಲ ವಿಚಾರಗಳನ್ನು ತಿಳಿಯಲು ಮುಂದೆ ಓದಿ.

ಹೆಂಗಿದೆ ದುಬೈ..? ಹೇಗಿತ್ತು ನಿಮ್ಮ ಅನುಭವ ..?
ದುಬೈ ಎಂದಿನಂತೆ ಚೆನ್ನಾಗಿತ್ತು. ನಾನು ಆಗಾಗ ಅಲ್ಲಿ ಹೋಗಿ ಬರ್ತಾ ಇರ್ತಿನಿ. ಯಾಕೆಂದರೆ, ನನ್ನ ಫ್ಯಾಮಿಲಿ ಇರುವುದು ಎಲ್ಲ ಅಲ್ಲೇ. ಮುಖ್ಯವಾಗಿ ನನ್ನ ಅಕ್ಕ. ದುಬೈನಲ್ಲಿಯೇ ಅವರು ನೆಲೆ ಕಂಡುಕೊಂಡಿದ್ದಾರೆ. ಬದುಕು ರೂಪಿಸಿಕೊಂಡಿದ್ದಾರೆ. ಅವರನ್ನು ಭೇಟಿಯಾಗಲು ನಾನು ಹೋಗಿ ಬರ್ತಾ ಇರ್ತಿನಿ. ಸೋ ದುಬೈ ನನಗೆ ಹೊಸದಲ್ಲ. ಆದರೆ ಈ ಬಾರಿ ಇದು ಕೇವಲ ಫ್ಯಾಮಿಲಿ ಟ್ರಿಪ್ ಆಗಿರಲಿಲ್ಲ. ಬದಲಿಗೆ ನನ್ನ ಬ್ಯುಸಿನೆಸ್‌ಗೆ ಸಂಬಂಧಿಸಿದ ಕೆಲಸವೂ ಇತ್ತು. ಹೀಗಾಗಿ ಒಂದು ರೀತಿ ವಿಶೇಷವಾಗಿತ್ತು ಈ ಬಾರಿಯ ಪ್ರವಾಸ
ದುಬೈನಲ್ಲಿ ನಿಮ್ಮ ಸಿಸ್ಟರ್ ಇರುವುದು ಯಾವ ಪ್ರದೇಶದಲ್ಲಿ..? ಅಲ್ಲಿನ ವಿಶೇಷತೆಗಳೇನು..?
ಅವರು ವಾಸ ಮಾಡುವುದು ಶಾರ್ಜಾದಲ್ಲಿ. ನಿಜ ಹೇಳಬೇಕು ಅಂದರೆ ಅಲ್ಲಿ ಅಂತಹ ವಿಶೇಷತೆಗಳೇನು ಇಲ್ಲ. ಆದರೆ ಶಾರ್ಜಾ ಮತ್ತು ದುಬೈನ ನಡುವೆ ಹೆಚ್ಚು ಕಡಿಮೆ 30-35 ಕಿಲೋಮೀಟರ್ ಅಂತರ ಇದೆ. ಅಲ್ಲಿ ಹೋದರೆ ಅಲ್ಲಿನ ಅನುಭವವೇ ಬೇರೆ.
ಈ ಬಾರಿ ದುಬೈ ಪ್ರವಾಸದಲ್ಲೇನಾದರೂ ಸಾಹಸ ಮಾಡಿದೀರಾ..?
ಹೂಂ, ಹೌದು. ಪ್ರತಿ ಬಾರಿ ಹೋದಾಗ ಸ್ಕೈ ಡೈವ್ ಮಾಡಬೇಕೆಂದುಕೊಳ್ಳುತ್ತಿದ್ದೆ. ಆದರೆ, ಸಮಯ ಕೂಡಿ ಬರುತ್ತಿರಲಿಲ್ಲ. ಮೊದಲಿಂದ ನನ್ನ ಬಕೆಟ್ ಲಿಸ್ಟ್‌ನಲ್ಲಿ ಸ್ಕೈ ಡೈವಿಂಗ್ ಮಾಡಬೇಕು ಎನ್ನುವುದಿತ್ತು. ಕಳೆದ ಬಾರಿ ಹೋದಾಗ ಕಾಲ ಕೂಡಿ ಬಂತು. ವಂಡರ್ ಫುಲ್ ಅನುಭವ ಅದು. ಪದಗಳಲ್ಲಿ ವರ್ಣಿಸಲು ಸಾಧ್ಯ ಇಲ್ಲ. ಲೈಫ್ ಟೈಮ್ ಮೆಮೊರಿ ಅದು.
ಭಯ ಆಗಲಿಲ್ವಾ..? ಎಷ್ಟು ಎತ್ತರಿಂದ ಹಾರಿದ್ದು ನೀವು ?
ನೀವು ನಂಬಲ್ಲ. ಸ್ಕೈ ಡೈವ್ ಮಾಡುವಾಗ ಭಯ ಅಂತೇನೂ ನನಗೆ ಆಗಲಿಲ್ಲ. ಯಾಕೆಂದರೆ ಆಗಿದ್ದಾಗಲಿ ಎಂದು ನಾನು ಮೊದಲೇ ಮಾನಸಿಕವಾಗಿ ಸಿದ್ದಳಾಗಿಯೇ ಹೋಗಿದ್ದೆ. ಇನ್ನು ಎತ್ತರದ ವಿಚಾರಕ್ಕೆ ಬಂದರೆ 13,000 ಅಡಿ ಎತ್ತರದಿಂದ ನಾನು ಜಿಗಿದಿದ್ದು. ಸಖತ್ ಮಜಾ ಇತ್ತು. ಅಲ್ಲಿ ಮರೀನಾ ಡ್ರೈವ್ ಅಂತಿದೆ. ನಾನು ಸ್ಕೈ ಡೈವಿಂಗ್‌ಗೆ ಅಲ್ಲೇ ಹೋಗಿದ್ದು.
ಅಲ್ಲಿ ಸ್ಕೈ ಡೈವ್ ಮಾಡಬೇಕು ಅಂದರೆ ಜೇಬಲ್ಲಿ ದುಡ್ಡು ಎಷ್ಟಿರಬೇಕು..?
ಅಷ್ಟು ಇಷ್ಟು ಅಂತ ನಾನು ಹೇಳಲ್ಲ. ಆದರೆ ಖಂಡಿತವಾಗಿಯೂ ದುಬಾರಿಯಂತೂ ಹೌದು. ಬಟ್ ಏನು ಗೊತ್ತಾ. ನೀವು ಹಂಗೆ ನೋಡೋಕೆ ಹೋದರೆ ನಾವು ಇಲ್ಲಿ ಗೋವಾಗೆ ಹೋಗಿ ಪ್ಯಾರಾಗ್ಲೈಡಿಂಗ್ ಅದು ಇದು ಎಲ್ಲಾ ಮಾಡ್ತೀವಿ. ಆಗ ನಮ್ಮತ್ರ ಏನಿಲ್ಲಾ ಅಂದ್ರೂ ಮೂರರಿಂದ ನಾಲ್ಕು ಸಾವಿರ ರೂಪಾಯಿ ಕಿತ್ಕೊಳ್ತಾರೆ. ಸೋ ಹಂಗ್ ನೋಡ್ದಾಗ ಸ್ಕೈ ಡೈವಿಂಗ್ ಅಂದ್ರೆ ಏನು ಕಮ್ಮಿ ಅಲ್ಲ ಅಲ್ವಾ? ಆ.. ಸ್ವಲ್ಪ ದುಬಾರಿನೇ, ಬಟ್ ದುಬಾರಿ ಆದ್ರೂನೂ ನಮ್ಮ ಬಕೆಟ್ ಲಿಸ್ಟ್ ಅಲ್ಲಿ ಇದ್ದಾಗ ಅವೆಲ್ಲ ಕಂಪ್ಲೀಟ್ ಮಾಡಿ ಬಿಡಬೇಕು. ನಾನು ಕೂಡ ಅದನ್ನೇ ಮಾಡಿದೆ.


Click it and Unblock the Notifications